ವಿಚಾರ ಮಂಟಪ
ಟಿ.ದೇವಿದಾಸ್
ಹೀಗೊಂದು ಚರ್ಚೆ ರಾಜ್ಯಾದ್ಯಂತ ರಾಜಕೀಯೇತರ ವಲಯದಲ್ಲೂ ಜೋರಾಗಿಯೇ ಇದೆ. ಟಿಕೆಟ್ ನಿರಾಕರಣೆಯ ವಿಚಾರದಲ್ಲಿ ಪ್ರತಾಪಸಿಂಹರ ಪರವೂ ದನಿಯಿದೆ, ವಿರೋಧದ ದನಿಯೂ ಇದೆ. ಪರದ ದನಿಯಲ್ಲಿ ಪ್ರತಾಪಸಿಂಹರ ಕಾರ್ಯಸಾಧನೆಗಳನ್ನು (ಮಾಧ್ಯಮದೆದುರು ತಮ್ಮ ಸಾಧನೆಗಳನ್ನು ಸಂಸದರೇ ವಿವರವಾಗಿ ಹೇಳಿಕೊಂಡದ್ದೂ ಇದೆ) ಹೊಗಳಿ ಮೆಚ್ಚುತ್ತಲೇ ಅವರಿಗೆ ಟಿಕೆಟ್ ನಿರಾಕರಣೆಯ ಬಗ್ಗೆ ಪ್ರತಿರೋಧವಿದೆ.
ವಿರೋಧದ ದನಿಯಲ್ಲಿ ಅವರ ನಿಷ್ಠುರತೆ, ಮೈಸೂರಿಗೆ ತಾವೇ ಎಲ್ಲವನ್ನೂ ಮಾಡಿದ್ದು ಎಂಬ ಅಹಂಕಾರದ ವರ್ತನೆ, ಸ್ಥಳೀಯವಾಗಿ ಪಕ್ಷದೊಳಗೆ ಅಷ್ಟು ಚೆನ್ನಾಗಿ ಸೌಹಾರ್ದವನ್ನು ಇಟ್ಟುಕೊಳ್ಳಲಿಲ್ಲ ಎಂಬ ಮಾತೂ ಇದೆ. ಇವೆಲ್ಲ ಏನಿದ್ದರೂ ಒಳಗೊಳಗೇ ಇದೆಯೇ ಹೊರತು ಬಹಿರಂಗವಾಗಿ ಎಲ್ಲೂ ವ್ಯಕ್ತಗೊಂಡಂತಿಲ್ಲ. ಆ-ಕೋರ್ಸ್, ವ್ಯಕ್ತವಾಗುವುದೂ ಇಲ್ಲ. ಒಳಪೆಟ್ಟಿನ ರಾಜಕೀಯ ಅಂತಾರಲ್ಲ, ಆ ಪೆಟ್ಟಿನೊಳಗೆ ಅಡಗಿರುವ ಮಾತುಗಳಿವು. ಆದರೆ ಈ ವಿಚಾರದಲ್ಲಿ ಜನಸಾಮಾನ್ಯರಿಗೆ ಅನ್ನಿಸುವುದು ಬೇರೆಯೇ ಇದೆ. ಅದೆಂದರೆ, ಸಂಸತ್ತಿನೊಳಗೆ ಪಾಸು ಕೊಟ್ಟ ವಿಚಾರದಿಂದ ಆದ ಅಧ್ವಾನ ಗಳು, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸೋತಿದ್ದಕ್ಕೆ ಹಿರಿಯರ ಅಡ್ಜಸ್ಟ್ ಮೆಂಟ್ ರಾಜಕೀಯವೇ ಕಾರಣ ಎಂಬಂಥ ಮಾತುಗಳನ್ನು ಪ್ರತಾಪಸಿಂಹರು ಆಡಿದ್ದು ಈಗ ಮುಳುವಾಯಿತೇನೋ ಎಂಬುದು. ಆದರೆ ಇವೆಲ್ಲ ಕೇವಲ ಊಹೆಯಷ್ಟೇ. ಹಾಗಂತ ಕೇವಲ ಊಹೆಯಷ್ಟೇ ಅಲ್ಲ ಎಂಬುದೊಂದು ಕೂಡ ಊಹೆಯೇ!
ಅಂತೂ, ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿಯ ಟಿಕೆಟ್ಟು ಒಡೆಯರ್ ಮನೆತನದ ಕುಡಿಗೆ ದೊರಕಿದೆ. ಪ್ರತಾಪಸಿಂಹ ಅದನ್ನು ಸ್ವಾಗತಿ ಸಿಯೂ ಆಗಿದೆ. ಪ್ರತಿ-ಲವಾಗಿ ಪ್ರತಾಪಸಿಂಹ ಏನು ಮಾಡುತ್ತಾರೆ ಎಂಬುದರ ಬಗ್ಗೆಯೂ ತಲೆಗೊಂದರಂತೆ ಮಾತುಗಳು ಕೇಳಿಬರುತ್ತಿವೆ. ಆದರೆ, ಯದುವೀರರು ರಣಾಂಗಣಕ್ಕೆ ಇಳಿದಾಗಿದೆ. ಮೋದಿಯನ್ನೇ ಬೆಂಬಲಿಸುವವರಿಗೆ ಅನ್ಯ ವಿಚಾರಗಳು ಮುಖ್ಯವಲ್ಲ. ಬಿಜೆಪಿಯನ್ನು ಬೆಂಬಲಿಸುವವರಿಗೆ ಅಭ್ಯರ್ಥಿ ಮುಖ್ಯವಲ್ಲ. ಒಡೆಯರನ್ನು ಬೆಂಬಲಿಸುವವರಿಗೆ ಬೇರೆ ಆಯ್ಕೆಗಳಿಲ್ಲ. ಹಾಗಾದರೆ ಪ್ರತಾಪಸಿಂಹರಿಗೆ ಟಿಕೆಟ್ ನಿರಾಕರಣೆಯಿಂದ ಯಾವ ಸಮಸ್ಯೆಯೂ ಬಿಜೆಪಿಗಿಲ್ಲವೆಂದು ತೀರ್ಮಾನಿಸಲು ಸಾಧ್ಯವೆ? ಸಾಧ್ಯವಿಲ್ಲವಾದರೆ ಸಮಸ್ಯೆ ಇರುವುದೆಲ್ಲಿ? ಜಾತಿಯನ್ನು ಬೆಂಬಲಿಸಿ ವೋಟನ್ನು ಹಾಕುವವರಲ್ಲಿ ಒಕ್ಕಲಿಗರ ಸದ್ಯದ ನಿಲುವೇನು? ಮತ್ತು ಪ್ರತಾಪಸಿಂಹರ ಪರ ದನಿಯೆತ್ತಿದವರ ನಿಲುವೇನು? ಗೆಲುವಿಗೆ ಕಾರಣಗಳಾಗಿ ಯಾವೆಲ್ಲ ಮಾನದಂಡಗಳು ಮುಖ್ಯವೆನಿಸುತ್ತವೋ ಸೋಲಿಗೂ ಅವುಗಳೇ ಮುಖ್ಯವೆನಿಸುತ್ತವೆ.
ಮೋದಿಗಾಗಿ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆಂದು ಪ್ರತಾಪಸಿಂಹ ಈಗಾಗಲೇ ಬಹಿರಂಗವಾಗಿ ಹೇಳಿಕೆಯನ್ನು ಕೊಟ್ಟಿದ್ದಾರೆ. ಅಲ್ಲಿಗೆ ಯದುವೀರರ ಗೆಲುವು ಕಷ್ಟವೇನಲ್ಲ ಎಂಬುದು ಹೊರನೋಟಕ್ಕೆ ಸುಸ್ಪಷ್ಟ. ಹಾಗಾದರೆ ಟಿಕೆಟ್ ನಿರಾಕರಣೆಯಿಂದ ಯದುವೀರರ ಗೆಲುವಿಗೆ ಒಕ್ಕಲಿಗ
ವೋಟುಗಳು ಸವಾಲಾದೀತೆ? ಒಕ್ಕಲಿಗರ ವೋಟು ಕಾಂಗ್ರೆಸ್ಸಿಗೂ ಹೋಗುತ್ತದೆ. ಪಕ್ಷೇತರ ಅಭ್ಯರ್ಥಿಗೂ (ಇದ್ದರೆ) ಒಂದಷ್ಟು ಹೋದೀತು. ಕಳೆದು ಕೂಡಿಸಿ ಗುಣಿಸಿ ಭಾಗಿಸಿ ಎಲ್ಲ ಬಗೆಯಿಂದ ಲೆಕ್ಕಾಚಾರ ಹಾಕಿದರೂ ಯದುವೀರರ ಗೆಲುವಿಗೆ ಕಷ್ಟವೇನಿಲ್ಲ ಎಂದೇ ಈ ಹೊತ್ತಿಗೂ ಅನಿಸುವುದು!
ಆದರೆ, ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿಗೆ ಒಕ್ಕಲಿಗರ ವೋಟು ದೊಡ್ಡ ಪ್ರಮಾಣದಲ್ಲಿ ವಿಭಜನೆಗೊಂಡರೆ, ಇತರ ದೊಡ್ಡ ಮತ್ತು ಸಣ್ಣ ಸಮುದಾಯಗಳ ವೋಟು ಕೂಡ ವಿಭಜನೆಯಾದರೆ ಯದುವೀರರಿಗೆ ಲಾಭವಾದೀತು ಎಂಬ ಲೆಕ್ಕಾಚಾರದಿಂದಲೂ ಗೆಲುವು ತೀರಾ ಸುಲಭಸಾಧ್ಯವೇನಲ್ಲ ಎಂಬುದು ಅಂದುಕೊಳ್ಳುವಂಥ ವಾಸ್ತವವಲ್ಲ! ಯಾಕೆಂದರೆ, ಇದು ರಾಜಕೀಯ. ಇಲ್ಲಿ ಮನುಷ್ಯಸಹಜ ರಾಗದ್ವೇಷಗಳು ಸ್ಥಾಯಿಯಾಗೇನೂ ಇರುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಯದುವೀರರ ಗೆಲುವು ಎಲ್ಲ ಕ್ಷೇತ್ರಗಳಂತೆ ಮೋದಿಯನ್ನೇ ಸದ್ಯ ಮತ್ತು ಶಾಶ್ವತದ ನೆಲೆಯಲ್ಲಿ ಈ ಹಿಂದಿನಂತೆಯೇ
ಅವಲಂಬಿಸಿದೆ.
ಹಾಗಾದರೆ, ಬಿಜೆಪಿ ಎಡವಿಲ್ಲ ಎನ್ನಲಾದೀತೆ? ಯಾವುದೇ ಕಾರಣವಿಲ್ಲದೆ ಒಬ್ಬ ಕ್ರಿಯಾಶೀಲ ವ್ಯಕ್ತಿಗೆ ಟಿಕೆಟ್ಟು ನಿರಾಕರಿಸಿದ್ದರ ಪರಿಣಾಮವು ಯಾವ ಗಾತ್ರದಲ್ಲಿದ್ದರೂ ಅದನ್ನು ಎದುರಿಸುವ ಶಕ್ತಿಯನ್ನು ಹೊಂದಿಯೇ ಅಥವಾ ಹೊಂದುವ ಗುರಿಯನ್ನು ಇಟ್ಟುಕೊಂಡೇ ಬಿಜೆಪಿ ಹೈಕಮಾಂಡ್ ಟಿಕೆಟ್ ನಿರಾಕರಿಸಿತೆ? ಆ ಯಡಿಯೂರು ಸಿದ್ಧಲಿಂಗೇಶ್ವರನೇ ಬಲ್ಲ! ವೋಟನ್ನು ಯಾರು ಯಾರಿಗೆ ಯಾವ ಪಕ್ಷಕ್ಕೆ ಹಾಕುತ್ತಾರೆ ಎಂಬುದನ್ನು ಬದಿಗಿರಿಸಿ ನೋಡಿದರೂ ಪ್ರತಾಪಸಿಂಹರಿಗೆ ಟಿಕೆಟ್ ನಿರಾಕರಣೆಗೆ ಯಾವುದೇ ಸಮರ್ಥನೆಯನ್ನು ಕಾರಣವಾಗಿ ಕೊಡಲು ಬಿಜೆಪಿಗೆ ಸಾಧ್ಯವಿಲ್ಲವೇನೋ ಎಂಬುದು ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲೂ ಕೇಳಿಬರುತ್ತಿರುವ ಮಾತು.
ಯಾಕೆಂದರೆ, ತನ್ನ ಗೆಲುವಿನ ಅಥವಾ ಎಂಪಿಯಾಗಿ ತನ್ನ ಅಸ್ಮಿತೆಯನ್ನು ಮೋದಿಯಲ್ಲೇ ಕಾಣುವ ಪ್ರತಾಪಸಿಂಹರ ರಾಷ್ಟ್ರೀಯತೆಯ ಪ್ರe, ರಾಷ್ಟ್ರನಿಷ್ಠೆ
ಮತ್ತು ಬದ್ಧತೆಯನ್ನು ಪ್ರಶ್ನಿಸಲಾಗದು. ಅನುಮಾನಿಸಲೂ ಆಗದು. ಈ ಬಗೆಯ ಅಸ್ತಿತ್ವದ ಅಭಿವ್ಯಕ್ತಿಯು ಬಿಜೆಪಿಗೆ ಸಾರ್ವಕಾಲಿಕವಾಗಿ ಅಗತ್ಯ ವಾದುದು. ಅಂಥ ಅಸ್ತಿತ್ವಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿಯಲ್ಲಿ ಬಿಜೆಪಿ ಎಡವಿತೆ? ಖಂಡಿತವಾಗಿಯೂ ಇಲ್ಲವೆನ್ನಲು ಸಾಧ್ಯವಿಲ್ಲ.
ಪ್ರತಾಪಸಿಂಹ ಅವರಿಗೆ ಟಿಕೆಟ್ ನಿರಾಕರಿಸುವ ಮೂಲಕ ತಮ್ಮ ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ಬಿಜೆಪಿಯ ಹೈಕಮಾಂಡ್ ಯಾವ ಸಂದೇಶ ವನ್ನು ರವಾನಿಸಿತು ಎಂಬುದು ಅರ್ಥವಾಗುವುದಿಲ್ಲ.
ರಾಜಮನೆತನದವರಿಗೆ ಟಿಕೆಟ್ ಕೊಡುವುದರ ಮೂಲಕ ದೇಶದಲ್ಲಿರುವ ರಾಜಮನೆತನಗಳನ್ನು ಮುಖ್ಯವಾಹಿನಿಗೆ ತರುವ ದೂರದೃಷ್ಟಿಯನ್ನು ತೋರಿತೇ? ಗೊತ್ತಾಗುತ್ತಿಲ್ಲ. ಯಾರೇನೇ ಅಂದರೂ ಒಂದು ವಿರೋಧದ ಪ್ರಜ್ಞೆಯಂತೂ ಇಂಥ ವಿದ್ಯಮಾನಗಳಿಂದ ಹುಟ್ಟುವುದು ಗ್ಯಾರಂಟಿ. ಬಿಜೆಪಿ ಗಂತಲ್ಲ, ಎಲ್ಲ ಪಕ್ಷಗಳಲ್ಲೂ ಇಂಥದ್ದು ಸಾಮಾನ್ಯ. ಈಶ್ವರಪ್ಪನವರು ಈಗಾಗಲೇ ಯಡಿಯೂರಪ್ಪನವರಿಗೆ ಬಹಿರಂಗ ಸವಾಲನ್ನು ಹಾಕಿದ್ದಾರೆ. ಈ ಸವಾಲು ಜಾತಿಯ ಲೆಕ್ಕಾಚಾರದಿಂದ ಹೊಡೆತವನ್ನು ಕೊಟ್ಟೇ ಕೊಡುತ್ತದೆ ಎಂಬುದು ಯಡಿಯೂರಪ್ಪನವರಿಗೂ ಅರ್ಥವಾಗದ ವಿಷಯವೇನಲ್ಲ.
ಅಂತೆಯೇ ಬಿಜೆಪಿಯ ಹೈಕಮಾಂಡಿಗೂ ಇದು ಅರಿವಾಗದ ಸಂಗತಿಯೇನಲ್ಲ! ಆದರೂ ಟಿಕೆಟ್ ನಿರಾಕರಣೆಯ ಗುರಿಯೊಂದೇ ಅಜೆಂಡಾವಾದುದೇಕೆ?
ನಿರಾಕರಣೆಯ ನೋವು, ಅಸಹನೆ ಮತ್ತು ಅದರಿಂದ ಹುಟ್ಟಿದ ಕ್ರೋಧ ಹೊರಮುಖಕ್ಕೆ ಗೊತ್ತಾಗದಂತೆ ಕಂಡರೂ ಒಳಗೊಳಗೆ ಬೇಗುದಿಯಾಗಿ ರಾಜಕೀಯದ ಸೇಡಾಗಿ ಕಾಡುತ್ತಿರುತ್ತದೆ. ಈ ಸೇಡು ದಿನಗಳೆದಂತೆ ದ್ವೇಷವಾಗುವ ಸಾಧ್ಯತೆಯೇ ಅಧಿಕಾರ ರಾಜಕೀಯದಲ್ಲಿ ಹೆಚ್ಚು. ಬಂಡಾಯ, ಪ್ರತಿಭಟನೆ, ವೈಚಾರಿಕ ಸಂಘರ್ಷ, ಮಸಲತ್ತು, ಹಣಹೂಡಿಕೆ, ರಾಜಕೀಯ ಹೊಂದಾಣಿಕೆ, ತಟಸ್ಥನೀತಿ, ಹುನ್ನಾರ, ಅನ್ಯ ಪ್ರಭಾವ ಇವೆಲ್ಲ ಹುಟ್ಟುವುದು ಈ ಬಗೆಯ ನಿರಾಕರಣೆಯ ಪರಿಣಾಮದಿಂದಲೇ! ಇದು ಹೈಕಮಾಂಡಿಗೆ ಗೊತ್ತಿಲ್ಲದ ವಿಚಾರವೇ? ನೋ ಚಾನ್ಸ್.
ಅರ್ಧಿಕಾರ ರಾಜಕೀಯದ ಮೇಲಾಟದಲ್ಲಿ ನಿಜವಾದ ನಿಯತ್ತು ಮತ್ತು ಬದ್ಧತೆಯು ಹಿಂಸೆಯನ್ನು ಹೊರ ಒತ್ತಡದಿಂದ ಅನುಭವಿಸಬೇಕಾದ ಸಂದರ್ಭ ಗಳು ಒದಗುತ್ತದೆ. ಪ್ರತಾಪಸಿಂಹರಿಗೆ ಟಿಕೆಟ್ ನಿರಾಕರಣೆಯ ಮೂಲಕ ಪ್ರತಿ ಸ್ಪರ್ಧೆಗೆ ಸನ್ನಿವೇಶವನ್ನು ನಿರ್ಮಿಸಿಕೊಳ್ಳುವಂತೆ ವಾತಾವರಣವೊಂದು ಹುಟ್ಟುವಂತೆ ಹೈಕಮಾಂಡ್ ಆಸ್ಪದ ನೀಡುವುದು ಶಾಶ್ವತ ನೆಲೆಯಲ್ಲಿ ಅಲ್ಲದಿದ್ದರೂ ಸದ್ಯದ ಮಟ್ಟಿಗೆ ಪಕ್ಷಕ್ಕೆ ಹಿತವಲ್ಲ. ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ ಎಂಬುದು ರಾಜಕೀಯದಲ್ಲೇ ಹುಟ್ಟಿದ, ರಾಜಕಾರಣಿಗಳೇ ಸಾಬೀತುಮಾಡಿದ ಮಾತು. ಬಹುಕಾಲ ಕಾಂಗ್ರೆಸ್ಸಲ್ಲಿದ್ದು ಎಲ್ಲ ಬಗೆಯ ಗೌರವ, ಸ್ಥಾನಮಾನವನ್ನು ಹೊಂದಿದ ಎಸ್.ಎಂ. ಕೃಷ್ಣ, ಜ್ಯೋತಿರಾದಿತ್ಯ ಸಿಂಧ್ಯಾ ಇವರುಗಳ ಬಿಜೆಪಿ ಪಯಣ ವನ್ನು ಹೇಗೆ ಅರ್ಥೈಸೋದು? ಅಂಥದೊಂದು ಪಯಣಕ್ಕೆ ನಾಂದಿ ಹಾಡಬಹುದಾದ ಸಾಧ್ಯತೆಯನ್ನು ಅದಕ್ಕೆ ಬೇಕಾದ ಬೆಂಬಲವನ್ನು ಪ್ರತಾಪಸಿಂಹರ ವಿಚಾರದಲ್ಲಿ ಬಿಜೆಪಿ ನೀಡಿಬಿಟ್ಟಿತೆ? ಖಂಡಿತ ಇಲ್ಲ.
ಪ್ರತಾಪಸಿಂಹರ ವಿಚಾರದಲ್ಲಿ ಅಂಥದೊಂದು ಪಯಣ ವನ್ನು ಕನಸಲ್ಲೂ ಎಣಿಸಲಾಗದು! ಹಾಗಂತ ತನ್ನ ಜಾತಿಯನ್ನು ಎತ್ತಿಕಟ್ಟಿ ಪಕ್ಷಕ್ಕೆ ಮುಜುಗರ ವಾಗಿಸಬಹುದಾದ ಸಾಧ್ಯತೆ ಯನ್ನು ಸದ್ಯದ ಮಟ್ಟಿಗೆ ಮೋದಿಯ ಮೇಲಿನ ಗಾಢನಿಷ್ಠೆಯಿಂದ ಪ್ರತಾಪಸಿಂಹರು ಮಾಡಲಾರರು. ನಂತರವೂ ಬಿಜೆಪಿಗೆ ಪ್ರತಾಪಸಿಂಹರಿಂದ ಯಾವ ಬಗೆ ಯಲ್ಲೂ ಹೊಕ್ಕಿರಿಯುವ ವೈಚಾರಿಕ ತೆವಲು ಅಭಿವ್ಯಕ್ತಿ ಆಗಬಹುದು ಎಂಬುದೂ ಅಪ್ಪಟ ಹುಸಿಯಾದ ಸತ್ಯ!
(ಲೇಖಕರು ಹಿರಿಯ ಪತ್ರಕರ್ತರು)