Thursday, 12th December 2024

ಅಂದು ಅವರಲ್ಲಿದ್ದುದು 25 ರೂಪಾಯಿ ಮಾತ್ರ !

ವಿದೇಶವಾಸಿ

dhyapaa@gmail.com

ಐತಿಹಾಸಿಕ ಸ್ಥಳಗಳನ್ನು, ಅರಮನೆಯನ್ನು ಹೋಟೆಲ್ ಆಗಿ ಪರಿವರ್ತಿಸಿದ ಶ್ರೇಯ ಏನಿದ್ದರೂ ಮೋಹನ್ ಸಿಂಗ್‌ಗೆ ಸಲ್ಲಬೇಕು. ಹತ್ತು ವರ್ಷದಿಂದ ಖಾಲಿ ಬಿದ್ದಿದ್ದ
ಮಹಾರಾಜ ಹರಿಸಿಂಗ್ ಅವರ ಅರಮನೆಯನ್ನು ಕರಾರಿನ ಮೇಲೆ ಪಡೆದ, ಖ್ಯಾತನಾಮರ ನಿವಾಸಗಳನ್ನು ಹೋಟೆಲ್ ಆಗಿ ಪರಿವರ್ತಿಸಿದ ಹೆಗ್ಗಳಿಕೆ ಅವರದ್ದು.

‘You could call Rai Bahadur the country’s only exclusive hotelier’, ‘ರಾಯ್ ಬಹಾದುರ್ ಅವರನ್ನು ಭಾರತದ ಏಕೈಕ ವಿಶೇಷ ಹೋಟೆಲ್ ಉದ್ಯಮಿ ಎಂದು ಕರೆಯಬಹುದು’ ಈ ಮಾತನ್ನು ಹೇಳಿದ್ದು ಮತ್ಯಾರೂ ಅಲ್ಲ, ಸ್ವತಃ ಜೆ.ಆರ್.ಡಿ. ಟಾಟಾ. ‘ರಾಯ್ ಬಹಾದುರ್’ ಅಂದರೆ ಬಹಳಷ್ಟು ಜನರಿಗೆ ಅರ್ಥ ವಾಗದೇ ಇದ್ದೀತು, ಆದರೆ ‘ಒಬೆರಾಯ್’ ಹೆಸರು ಕೇಳದ ಭಾರತೀಯರು ಕಡಿಮೆ.

ರಾಯ್ ಬಹಾದುರ್ ಅಂದರೆ ಅದೇ ಒಬೆರಾಯ್. ಇಂದು ಭಾರತದ ಹೋಟೆಲ್ ಉದ್ಯಮಗಳಲ್ಲೇ ಎರಡನೆಯ ಸ್ಥಾನದಲ್ಲಿರುವ ಒಬೆರಾಯ್ ಹೋಟೆಲ್‌ನ ಸಂಸ್ಥಾಪಕರೂ, ಅದರ ಹಿಂದಿರುವ ವ್ಯಕ್ತಿ ಅಥವಾ ಶಕ್ತಿ, ಇದೇ ರಾಯ್ ಬಹಾದುರ್ ಯಾನೆ ಮೋಹನ್ ಸಿಂಗ್ ಒಬೆರಾಯ್. ಮೋಹನ್ ಸಿಂಗ್ ಒಬೆರಾಯ್ ಅವರನ್ನು ಭಾರತದ ಹೋಟೆಲ್ ಉದ್ಯಮದ ಪಿತಾಮಹ ಎಂದು ಕರೆದರೆ ಅತಿಶಯೋಕ್ತಿ ಏನೂ ಇಲ್ಲ. ಅವರ ಜೀವನದ ಸಾಧನಾಗಾಥೆಯೇ ಹಾಗಿದೆ. ಒಂದು ಕಾಲದಲ್ಲಿ ತಲೆಯ ಮೇಲೆ ಸ್ವಂತ ಸೂರಿಲ್ಲದ ವ್ಯಕ್ತಿ ಇಂದು ಲಕ್ಷಾಂತರ ಜನರಿಗೆ ಉಳಿಯಲು ಐಷಾರಾಮಿ ಕೊಠಡಿಯ ವ್ಯವಸ್ಥೆ ಒದಗಿಸಿಕೊಡುತ್ತಿದ್ದಾರೆ.

ವಿಶ್ವದ ಅತಿದೊಡ್ಡ ಹೋಟೆಲ್‌ಗಳ ಪಟ್ಟಿಯಲ್ಲಿ ಇಂದು ಭುಜಕ್ಕೆ ಭುಜ ತಾಗಿಸಿ ನಿಲ್ಲುವ ಭಾರತದ ‘ದಿ ಒಬೆರಾಯ್’ ಹೋಟೆಲ್ ಮತ್ತು ರೆಸಾರ್ಟ್ ಸಂಸ್ಥೆ ಆರಂಭವಾದದ್ದು ಕೇವಲ ೨೫ ರುಪಾಯಿಯಿಂದ ಎನ್ನುವುದು ಆಚ್ಚರಿಯಾದರೂ ಸತ್ಯ! ಮೋಹನ್ ಸಿಂಗ್ ಹುಟ್ಟಿದ್ದು ಇಂದಿನ ಪಾಕಿಸ್ತಾನದ ಝೇಲಂ ಜಿಲ್ಲೆಯ ಬೌನ್ ಗ್ರಾಮದಲ್ಲಿ. ಅವರದ್ದು ತೀರಾ ಬಡವರ ಕುಟುಂಬ. ಹೇಳಲಿಕ್ಕೆ ಅಗಸ್ಟ್ ೧೫ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ. ಆದರೆ ಇವರು ಹುಟ್ಟಿದ್ದು ೧೯೪೭ಕ್ಕೂ ಮೊದಲು, ೧೮೯೮ರಲ್ಲಿ. ಆ ದಿನದಂದು ಹುಟ್ಟಿದರೂ ಬೇಕಾದಷ್ಟು ತಿನ್ನಲು, ವಾಸಿಸಲು, ಕಲಿಯಲು ಸ್ವಾತಂತ್ರ್ಯ ಇರಲಿಲ್ಲ.

ಕಾರಣ, ಬಡತನ; ಅದು ಮಾತ್ರ ತುಂಬಿ ತುಳುಕು ವಷ್ಟಿತ್ತು. ಸಾಲದು ಎಂಬಂತೆ ಮೋಹನ್ ಸಿಂಗ್ ಹುಟ್ಟಿ ಆರು ತಿಂಗಳಾಗುವುದರ ಒಳಗೆ ತಂದೆಯನ್ನು
ಕಳೆದುಕೊಂಡಿದ್ದರು. ಸಂಸಾರದ ಸಂಪೂರ್ಣ ಜವಾಬ್ದಾರಿ ತಾಯಿಯ ಹೆಗಲೇರಿತ್ತು. ಎಲ್ಲೋ ಕೆಲಸ ಮಾಡಿಕೊಂಡು, ಬಂದ ಸಂಘರ್ಷಗಳನ್ನೆಲ್ಲ ಎದುರಿಸಿ ಹೇಗೋ ಮೋಹನ್ ಸಿಂಗ್‌ರನ್ನು ರಾವಲ್ಪಿಂಡಿಯ ಶಾಲೆಗೆ ಸೇರಿಸಿದ್ದಳು ಆ ತಾಯಿ. ಪ್ರಾಥಮಿಕ ಶಿಕ್ಷಣ ಮುಗಿಸಿ ಮೋಹನ್ ಸಿಂಗ್ ಕಾಲೇಜು ಶಿಕ್ಷಣಕ್ಕೆ ಲಾಹೋರ್‌ಗೆ ಹೋದರು.

ಕಾಲೇಜಿನಲ್ಲಿ ಓದುವಾಗ ಹಣದ ಅಭಾವ ಇರುತ್ತಿದ್ದುದರಿಂದ ಪಾರ್ಟ್‌ಟೈಮ್ ಕೆಲಸಕ್ಕಾಗಿ ಹುಡುಕಾಡಿದರು. ಅವರ ದುರದೃಷ್ಟಕ್ಕೆ ಎಲ್ಲೂ ಅವರಿಗೆ ಅರೆಕಾಲಿಕ ಕೆಲಸವೂ ಸಿಗಲಿಲ್ಲ. ಹೋಗಲಿ, ಕಾಲೇಜು ಮುಗಿಸಿದ ಮೇಲಾದರೂ ಕೆಲಸ ಸಿಕ್ಕಿತೇ ಎಂದರೆ ಅದೂ ಇಲ್ಲ. ಮಿತ್ರರೊಬ್ಬರ ಸಲಹೆಯ ಮೇರೆಗೆ ಮೋಹನ್ ಸಿಂಗ್ ಟೈಪಿಂಗ್ ಮತ್ತು ಸ್ಟೆನೋಗ್ರಫಿ ಕಲಿಯಲು ಈಗಿನ ಭಾರತದ ಪಂಜಾಬ್‌ನಲ್ಲಿರುವ ಅಮೃತ್‌ಸರಕ್ಕೆ ಹೋದರು. ಅದರಿಂದ ಏನೂ ಪ್ರಯೋಜನವಿಲ್ಲ ಎಂದೆನಿಸಿ ದ್ದಕ್ಕೋ, ನೌಕರಿ ಸಿಗದೆ ಹತಾಶರಾಗಿದ್ದಕ್ಕೋ ಅಥವಾ ಊಟಕ್ಕೂ ಅವರ ಬಳಿ ಹಣ ಇಲ್ಲದ್ದಕ್ಕೋ ಏನೋ ತಮ್ಮ ಊರಿಗೆ ಹಿಂದಿರುಗಿದರು ಮೋಹನ್ ಸಿಂಗ್.

ಊರಿನಲ್ಲಿಯೂ ಅವರಿಗೆ ಮಾಡಲು ಏನೂ ಕೆಲಸವಿರಲಿಲ್ಲ. ಚಿಕ್ಕಪ್ಪನ ಸಲಹೆಯ ಮೇರೆಗೆ ಹತ್ತಿರದ ಪಾದರಕ್ಷೆ ತಯಾರಿಸುವ ಕಾರ್ಖಾನೆಗೆ ಒಲ್ಲದ ಮನಸ್ಸಿ ನಿಂದಲೇ ಸೇರಿಕೊಂಡರು. ಸರಿ, ಹೊಟ್ಟೆ ತುಂಬಿಸಿಕೊಳ್ಳಲು ಒಂದಷ್ಟು ಹಣವಾದರೂ ಸಿಗುತ್ತಿದೆ ಎನ್ನುವಾಗಲೇ ಅವರಿಗೆ ಇನ್ನೊಂದು ಆಘಾತ ಕಾದಿತ್ತು. ‘ಪಾಪಿ ಸಮುದ್ರ ಹಾರಲು ಹೋದರೂ ಮೊಣಕಾಲುದ್ದ ನೀರು’ ಎಂದಂತೆ, ಇವರು ಕೆಲಸಕ್ಕೆ ಹೋಗುತ್ತಿದ್ದ ಕಾರ್ಖಾನೆಯೇ ಮುಚ್ಚಿಹೋಯಿತು. ಹೇಗೆಂದರೂ ಮಗ ಮನೆ ಯಲ್ಲಿ ಖಾಲಿ ಕುಳಿತಿದ್ದಾನೆಂದು ತಾಯಿ ಮತ್ತು ಚಿಕ್ಕಪ್ಪ ಮೋಹನ್ ಸಿಂಗ್‌ಗೆ ಮದುವೆಯಾಗುವಂತೆ ಒತ್ತಾಯಿಸಿದರು. ಕಲ್ಕತ್ತಾ ಮೂಲದ ೧೫ ವರ್ಷದ
ಇಶ್ರನ್ ದೇವಿಯೊಂದಿಗೆ ೨೨ ವರ್ಷದ ನಿರುದ್ಯೋಗಿಯ ಮದುವೆಯೂ ಆಯಿತು.

ಮದುವೆಯ ನಂತರ ಕೆಲವು ತಿಂಗಳು ಅವರು ರಗೊಂಡಾದಲ್ಲಿರುವ ಮಾವನ ಮನೆಯಲ್ಲಿ ಕಳೆದು, ಊರಿಗೆ ಹಿಂದಿರುಗಿ ಬಂದರು. ಆ ಸಮಯದಲ್ಲಿ ಅವರ ಊರಿನಲ್ಲಿ ಪ್ಲೇಗ್ ರೋಗ ಹರಡಿದ್ದ ರಿಂದ ತಮ್ಮ ತಾಯಿಯ ಜತೆ ಇರಬೇಕೆಂದು ನಿರ್ಧರಿಸಿದ್ದರು. ಆದರೆ ಆ ಮಹಾಮಾರಿಯಿಂದ ಸಾಕಷ್ಟು ಜನ ಆಗಲೇ ಜೀವ ಕಳೆದುಕೊಂಡಿದ್ದರಿಂದ, ತಾಯಿ ಅವರನ್ನು ಹಿಂದಕ್ಕೆ ಕಳಿಸಿದರು. ತಾಯಿಯ ಆದೇಶ ಪಾಲಿಸಲು ಮನಸ್ಸಿಲ್ಲದಿದ್ದರೂ ಮಗ ಊರು ಬಿಟ್ಟು ಹೋಗಬೇಕಾಯಿತು. ಅಂದು ಊರು ಬಿಡುವಾಗ ಮೋಹನ್ ಸಿಂಗ್ ಕೈಯಲ್ಲಿ ತಾಯಿ ೨೫ ರುಪಾಯಿ ಹಿಡಿಸಿದ್ದಳು. ಅದೇ ೨೫ ರೂಪಾಯಿ ಮುಂದೊಂದು ದಿನ ಸುಮಾರು ೧೦,೦೦೦ ಕೋಟಿ ರುಪಾಯಿಯ ಸಾಮ್ರಾಜ್ಯಕ್ಕೆ ಬುನಾದಿಯಾಗಿತ್ತದೆ ಎಂದು ಆ ಕ್ಷಣದಲ್ಲಿ ಯಾರೂ ಎಣಿಸಿರಲಿಕ್ಕಿಲ್ಲ.

ಅಮ್ಮ ಕೊಟ್ಟ ೨೫ ರುಪಾಯಿ ಹಿಡಿದು, ಮೋಹನ್ ಸಿಂಗ್ ಸಿಮ್ಲಾ ತಲುಪಿದರು. ಆ ಕಾಲದಲ್ಲಿ ಸಿಮ್ಲಾದಲ್ಲಿ ಸಾಕಷ್ಟು ಸರಕಾರಿ ಕಚೇರಿಗಳಿದ್ದವು. ಮೋಹನ್ ಸಿಂಗ್ ಜ್ಯೂನಿಯರ್ ಕ್ಲಾರ್ಕ್ ಹುದ್ದೆ ಸೇರಲು ಪರೀಕ್ಷೆ ಬರೆದರು, ಫೇಲ್ ಆದರು. ಆ ಕಾಲದಲ್ಲಿ ಪ್ರತಿಷ್ಠಿತ ಹೋಟೆಲ್ ಎಂದು ಕರೆಸಿಕೊಳ್ಳುತ್ತಿದ್ದ ಸಿಸೆಲ್ ಹೋಟೆಲ್‌ನ ವ್ಯವಸ್ಥಾಪಕರನ್ನು ಭೇಟಿ ಯಾದರು. ಅವರ ಕೃಪೆಯಿಂದ ಅಂತೂ ತಿಂಗಳಿಗೆ ೪೦ ರುಪಾಯಿ ಸಂಬಳದ ಕೆಲಸ ದೊರಕಿತು. ಇಪ್ಪತ್ನಾಲ್ಕು ವರ್ಷದ ಮೋಹನ್ ಸಿಂಗ್ ಆ ಹೋಟೆಲಿನ ಬಿಲ್ಲಿಂಗ್ ಕ್ಲಾರ್ಕ್ ಜತೆ ಸಹಾಯಕರಾಗಿ ಕೆಲಸ ಆರಂಭಿಸಿದರು. ಕೆಲವು ದಿನಗಳ ನಂತರ ಇವರು ಕಲಿತ ಸ್ಟೆನೋಗ್ರಫಿ ಉಪಯೋಗಕ್ಕೆ ಬಂತು. ಅವರನ್ನು ಬಿಲ್ಲಿಂಗ್ ಕ್ಲಾರ್ಕ್ ಮತ್ತು ಸ್ಟೆನೋಗ್ರಾಫರ್ ಎಂದು ಭಡ್ತಿ ನೀಡಿ ಸಂಬಳವನ್ನು ೫೦ ರುಪಾಯಿಗೆ ಏರಿಸಲಾಯಿತು. ತಮ್ಮ ಪ್ರಾಮಾಣಿಕ ಮತ್ತು
ಅವಿಶ್ರಾಂತ ಕೆಲಸದಿಂದ ಮೋಹನ್ ಸಿಂಗ್, ಹೋಟೆಲಿನ ಮ್ಯಾನೇಜರ್ ಆಗಿದ್ದ ಬ್ರಿಟಿಷ್ ಪ್ರಜೆ ಎರ್ನೆಸ್ ಕ್ಲಾರ್ಕ್‌ರ ಮನ ಗೆದ್ದಿದ್ದರು. ಒಂದೆರಡು ವರ್ಷದ ನಂತರ ಕ್ಲಾರ್ಕ್ ಸಿಮ್ಲಾದಲ್ಲಿ ಸಣ್ಣ ಹೋಟೆಲ್ ಖರೀದಿಸಿದರು.

ಅದಕ್ಕೆ ಮೋಹನ್ ಸಿಂಗ್ ಅವರನ್ನು ಸಹಾಯಕರನ್ನಾಗಿ ನೇಮಿಸಿ ಕೊಂಡರು. ಅಲ್ಲಿಯೂ ಶ್ರದ್ಧೆಯಿಂದ ಕೆಲಸ ಮಾಡಲಾರಂಭಿಸಿದರು ಮೋಹನ್ ಸಿಂಗ್.
ಕೆಲವು ದಿನಗಳ ನಂತರ ಕ್ಲಾರ್ಕ್ ಆರು ತಿಂಗಳ ರಜೆ ಯಲ್ಲಿ ಇಂಗ್ಲೆಂಡಿಗೆ ಹೋದರು. ಹೋಗುವಾಗ ಹೋಟೆಲಿನ ಎಲ್ಲ ಜವಾಬ್ದಾರಿಯನ್ನು ಮೋಹನ್ ಸಿಂಗ್‌ಗೆ ವಹಿಸಿದ್ದರು. ಹಿಂದಿರುಗಿ ಬಂದ ಕ್ಲಾರ್ಕ್, ಹೋಟೆಲಿನ ಆದಾಯ ದ್ವಿಗುಣವಾಗಿದ್ದನ್ನು ಕಂಡರು. ಅದರ ಹಿಂದೆ ಮೋಹನ್ ಸಿಂಗ್ ಶ್ರಮ ಇದೆ ಎಂದು ತಿಳಿಯಿತು. ಅಂದಿನಿಂದ ಕ್ಲಾರ್ಕ್ ಅವರ ಮೆಚ್ಚಿನ ಶಿಷ್ಯರಾದರು ಮೋಹನ್ ಸಿಂಗ್. ಕೆಲವು ವರ್ಷಗಳ ನಂತರ ಕ್ಲಾರ್ಕ್ ದಂಪತಿ ಭಾರತ ಬಿಟ್ಟು, ಶಾಶ್ವತವಾಗಿ ಇಂಗ್ಲೆಂಡಿಗೆ ಹೋಗಿ ನೆಲೆಸಲು ನಿರ್ಧರಿಸಿದರು. ತಮ್ಮ ಹೋಟೆಲನ್ನು ೨೫,೦೦೦ ರುಪಾಯಿ ಕೊಟ್ಟು ಕೊಳ್ಳುವಂತೆ ಮೋಹನ್ ಸಿಂಗ್ ಮುಂದೆ ಪ್ರಸ್ತಾಪಿಸಿದರು. ಒಪ್ಪಿದ ಮೋಹನ್ ಸಿಂಗ್, ಸ್ವಲ್ಪ ಸಮಯಾವಕಾಶ ಪಡೆದು, ಹಣ ಸಂಗ್ರಹಿಸಲು ಊರಿಗೆ ಹೋದರು.

ಅಲ್ಲಿದ್ದವರನ್ನೆಲ್ಲ ಕೇಳಿ, ಹೆಂಡತಿಯ ಬಳಿ ಇದ್ದ ಒಡವೆಯನ್ನೆಲ್ಲ ಮಾರಿದರೂ ಅವರಿಗೆ ಬೇಕಾದ ೨೫ ಸಾವಿರ ಸಿಗುತ್ತಿರಲಿಲ್ಲ. ಹತಾಶರಾದ ಮೋಹನ್ ಸಿಂಗ್ ಹಿಂದಿರುಗಿ ಬಂದು, ತಮ್ಮ ಬಳಿ ಹಣ ಹೊಂದಿಸಲು ಸಾಧ್ಯವಿಲ್ಲವೆಂದೂ, ಹೋಟೆಲನ್ನು ಬೇರೆಯವರಿಗೆ ಮಾರುವಂತೆಯೂ ಕ್ಲಾರ್ಕ್ ಅವರಲ್ಲಿ ಹೇಳಿದರು.
ಕ್ಲಾರ್ಕ್ ದಂಪತಿಗೆ ಬೇರೆಯವರಿಗೆ ಮಾರಲು ಇಷ್ಟವಿರಲಿಲ್ಲ. ಅವರು ಮೋಹನ್ ಸಿಂಗ್ ಅವರ ಶ್ರದ್ಧೆ, ಪ್ರಾಮಾಣಿಕತೆ, ಕಾರ್ಯವೈಖರಿಯನ್ನು ಕಂಡಿದ್ದರು. ತಾವು ಹುಟ್ಟುಹಾಕಿದ ಶಿಶುವನ್ನು ಬೆಳೆಸಿದ್ದು ಮೋಹನ್ ಸಿಂಗ್ ಎಂದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಮೋಹನ್ ಸಿಂಗ್ ಅವರಿಗೇ ಮಾರುವುದೆಂದು ದಂಪತಿ ನಿರ್ಧರಿಸಿದ್ದರು.

ಮೋಹನ್ ಸಿಂಗ್ ಅವರ ಕೈಯಲ್ಲಿದ್ದಷ್ಟು ಹಣ ಪಡೆದು, ಉಳಿದ ಹಣಕ್ಕೆ ಸ್ವಲ್ಪ ಸಮಯಾವಕಾಶ ನೀಡುವುದಾಗಿ ಹೇಳಿದರು. ಅದಕ್ಕೆ ಮೋಹನ್ ಸಿಂಗ್
ಒಪ್ಪಿದರು. ಐದು ವರ್ಷದ ಅವಧಿಯಲ್ಲಿ ಕ್ಲಾರ್ಕ್‌ಗೆ ಕೊಡಬೇಕಾಗಿದ್ದ ಒಟ್ಟೂ ಮೊತ್ತವನ್ನು ನೀಡಿದರು. ತಮ್ಮ ಗುರುವಿನ ಗೌರವಾರ್ಥವಾಗಿ ಮೋಹನ್ ಸಿಂಗ್ ತಾವು ಖರೀದಿಸಿದ ಹೋಟೆಲಿಗೆ ‘ದಿ ಕ್ಲಾರ್ಕ್ಸ್ ಹೋಟೆಲ್’ ಎಂದು ಹೆಸರಿಟ್ಟರು. ಆಗ ಮೋಹನ್ ಸಿಂಗ್‌ಗೆ ಮೂವತ್ತಾರು ವರ್ಷ ವಯಸ್ಸು! ಕೆಲವು ಸಮಯದ ನಂತರ ಮೋಹನ್ ಸಿಂಗ್ ತಾವು ಮೊದಲು ಕೆಲಸಕ್ಕೆ ಸೇರಿಕೊಂಡಿದ್ದ ಸಿಸೆಲ್ ಹೋಟೆಲನ್ನೂ ಖರೀದಿಸಿದರು. ನಂತರ ಐದು ನೂರು ಕೊಠಡಿಯಿರುವ ಕಲ್ಕತ್ತಾದ ಗ್ರ್ಯಾಂಡ್ ಹೋಟೆಲನ್ನು ಕರಾರಿನ ಮೇಲೆ ನಡೆಸಲು ಪಡೆದರು.

ಅಲ್ಲಿಂದ ಅವರು ಹಿಂದಿರುಗಿ ನೋಡಲೇ ಇಲ್ಲ. ಸ್ವಾತಂತ್ರ್ಯದ ನಂತರ ಮೋಹನ್ ಸಿಂಗ್ ಈಸ್ಟ್ ಇಂಡಿಯಾ ಹೋಟೆಲ್ಸ್ ಲಿಮಿಟೆಡ್ ಸ್ಥಾಪಿಸಿ, ತಮ್ಮ ಎಲ್ಲ ಹೋಟೆಲ್‌ಗಳನ್ನು ಅದರಲ್ಲಿ ವಿಲೀನ ಗೊಳಿಸಿದರು. ೧೯೪೩ರಲ್ಲಿ ಬ್ರಿಟಿಷ್ ಸರಕಾರ ಮೋಹನ್ ಸಿಂಗ್ ಅವರಿಗೆ ‘ರಾಯ್ ಬಹಾದುರ್’ ಬಿರುದು ನೀಡಿ ಸನ್ಮಾನಿಸಿತು. ಐತಿಹಾಸಿಕ ಸ್ಥಳಗಳನ್ನು, ಅರಮನೆಯನ್ನು ಹೋಟೆಲ್ ಆಗಿ ಪರಿವರ್ತಿಸಿದ ಶ್ರೇಯ ಏನಿದ್ದರೂ ಮೋಹನ್ ಸಿಂಗ್‌ಗೆ ಸಲ್ಲಬೇಕು. ಹತ್ತು ವರ್ಷದಿಂದ ಖಾಲಿ ಬಿದ್ದಿದ್ದ ಮಹಾರಾಜ ಹರಿಸಿಂಗ್ ಅವರ ಅರಮನೆಯನ್ನು ಇಪ್ಪತ್ತು ವರ್ಷದ ಕರಾರಿನ ಮೇಲೆ ಪಡೆಯುವುದರಿಂದ ಆರಂಭಿಸಿ, ಒಂದು ಕಾಲದಲ್ಲಿ ಲಾರ್ಡ್ ಕರ್ಝನ್ ವಾಸವಾಗಿದ್ದ ಮನೆ (ಸ್ವಿಸ್ ಹೋಟೆಲ್) ಯನ್ನು ಖರೀದಿಸಿದ, ಈಜಿಪ್ಟ್‌ನ ಕೈರೋದಲ್ಲಿರುವ ಐತಿಹಾಸಿಕ ಮೀನಾ ಹೌಸ್, ಆಸ್ಟ್ರೇಲಿಯಾದ ವಿಂಡ್ಸರ್ ಇತ್ಯಾದಿಯನ್ನು ಹೋಟೆಲ್ ಆಗಿ ಪರಿವರ್ತಿಸಿದ ಹೆಗ್ಗಳಿಕೆ ಅವರದ್ದು.

ತಮ್ಮ ಹೋಟೆಲ್‌ಗಳಿಗೆ ‘ದಿ ಒಬೆರಾಯ್’ ಹೆಸರು ನೀಡಿದರು. ಕ್ರಮೇಣ ‘ಟ್ರೈಡೆಂಟ್’ ಹೆಸರಿನಲ್ಲೂ ಪಂಚತಾರಾ ಹೋಟೆಲ್ ಆರಂಭಿಸಿದರು. ಈಗ ಟ್ರೈಡೆಂಟ್ ಹೆಸರಿನಲ್ಲೂ ವಿಶ್ವದಾದ್ಯಂತ ಇವರ ಹತ್ತು ಹೋಟೆಲುಗಳಿವೆ. ಮೋಹನ್ ಸಿಂಗ್ ಒಬೆರಾಯ್ ಇಂದು ನಮ್ಮೊಂದಿಗಿಲ್ಲ. ಆದರೆ ಒಂದು ಕಾಲದಲ್ಲಿ ಉದ್ಯೊಗವಿಲ್ಲದೇ ಅಲೆದಾಡಿ, ತಮ್ಮ ಪರಿಶ್ರಮ ದಿಂದ ಕಟ್ಟಿದ ಇವರ ಹೋಟೆಲ್ ಇಂದು ಸಾವಿರದ ಇನ್ನೂರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ಒಂದು ಹೊತ್ತಿನ ಊಟಕ್ಕೆ ಚಡಪಡಿಸುತ್ತಿದ್ದ ಮೋಹನ್ ಸಿಂಗ್ ಇಂದು ಲಕ್ಷಾಂತರ ಜನರಿಗೆ ಮೂರು ಹೊತ್ತು ಮೃಷ್ಟಾನ್ನವನ್ನೇ ಬೇಕಾದರೂ ಉಣ್ಣುವ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ಒಬೆರಾಯ್ ಸಮೂಹದ ‘ಒಬೆರಾಯ್ ಹೋಟೆಲ್ ಆಂಡ್ ರೆಸಾರ್ಟ್’ ಮತ್ತು ‘ಟ್ರೈಡೆಂಟ್ ಗ್ರೂಪ್’ ಇಂದು ಮಾರಿಷಿಯಸ್, ಮೊರಕ್ಕೊ, ಈಜಿಪ್ಟ್, ಇಂಡೋನೇಷಿಯಾ, ಸೌದಿ ಅರೇಬಿಯಾ ಸೇರಿದಂತೆ ಏಳು ದೇಶಗಳಲ್ಲಿ ಮೂವತ್ತೆರಡು ಐಷಾರಾಮಿ ಹೋಟೆಲ್ ಮತ್ತು ಎರಡು ರಿವರ್ ಕ್ರೂಸ್ (ನದಿ ವಿಹಾರಿ ನೌಕೆ) ಒದಗಿಸಿಕೊಡುತ್ತಿದೆ. ಜತೆಗೆ, ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್ ಶಿಕ್ಷಣ ನೀಡುವ ‘ದಿ ಒಬೆರಾಯ್ ಸೆಂಟರ್ ಫಾರ್ ಲನಿಂಗ್ ಆಂಡ್ ಡೆವಲಪ್‌ಮೆಂಟ್’, ಏಷ್ಯಾದ ಉನ್ನತ ಶ್ರೇಣಿಯ ಶಿಕ್ಷಣ ಸಂಸ್ಥೆಯ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಮೋಹನ್ ಸಿಂಗ್ ಒಬೆರಾಯ್ ಕುರಿತು ಮತ್ತಿನ್ನೇನೂ ಹೇಳಬೇಕಿಲ್ಲ. ಕಷ್ಟವನ್ನು ಕಾಲಡಿಯಲ್ಲಿ ಇಟ್ಟವರು ಮಾತ್ರ ಯಶಸ್ವಿಯಾಗುತ್ತಾರೆ!