Sunday, 15th December 2024

ಹಲೋ ದೃಶ್ಯಮಾಧ್ಯಮಗಳೇ, ಇನ್ನಾದರೂ ಉತ್ತರಕನ್ನಡದತ್ತ ಗಮನಹರಿಸಿ

ಅಭಿಮತ

ಪ್ರಿಯದರ್ಶಿನಿ ಹಲಸಿನಹಳ್ಳಿ

priyahalasi@gmail.com

ಅವರಲ್ಲಿ ಹೆಚ್ಚಿನವರ‍್ಯಾರೂ ಮೂಲನಿವಾಸಿಗಳಲ್ಲ, ಕಾಳಿ ನದಿಯ ತಟದಲ್ಲಿ ತಲೆತಲಾಂತರದಿಂದ ಬದುಕು ಕಟ್ಟಿಕೊಂಡಿದ್ದ ಅವರನ್ನೆಲ್ಲ, ಅಂದರೆ ಬರಬಳ್ಳಿ, ಕೊಡಸಳ್ಳಿ, ಕಟ್ಟಿ, ವಡ್ಡಿ, ಬೀರಕೋಲು ಮುಂತಾದ ಗ್ರಾಮಸ್ಥರನ್ನೆಲ್ಲ ಜಲವಿದ್ಯುತ್ ಯೋಜನೆಯ ಹೆಸರಲ್ಲಿ ಒಕ್ಕಲೆಬ್ಬಿಸಿ, ತೊಂಬತ್ತರ ದಶಕದಲ್ಲಿ ಗಂಗಾವಳಿ ತಟದಲ್ಲಿ ತಂದು ಕೂರಿಸಲಾಯ್ತು.

ಅವರೆಲ್ಲ ಹೆಗ್ಗಾರ, ಕಲ್ಲೇಶ್ವರ, ಕಮ್ಮಾಣಿ, ಹಲವಳ್ಳಿ, ಶೆವ್ಕಾರು, ಕೋನಾಳ ಇತ್ಯಾದಿ ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತಿಗೆ ಸೇರಿದ ಹಳ್ಳಿ ಗಳಲ್ಲಿ ಪುನರ್ವಸತಿ ಕಂಡುಕೊಂಡರು. ತೋಟ, ಗದ್ದೆಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇದೀಗ ಗಂಗಾವಳಿಯೂ ಅವರಿಗೆ ಶಾಪವಾಗಿ ಕಾಡಲಾ ರಂಭಿಸಿದೆ. 2019ರಲ್ಲಿ ಬಂದ ಭಾರಿ ನೆರೆಗೆ ಇರುವ ತೂಗು ಸೇತುವೆಗಳು ಕೊಚ್ಚಿಕೊಂಡು ಹೋಗಿ, ಗುಳ್ಳಾಪುರವನ್ನು ಸೇರಿಸುವ ಗಂಗಾವಳಿಗೆ ಕಟ್ಟಿದ ಸೇತುವೆಯೊಂದೇ ಜನರ ಓಡಾಟಕ್ಕೆ ಆಶ್ರಯವಾಗಿತ್ತು.

2 ವರ್ಷಗಳ ಮೊದಲು ಆದ ಹಾನಿಯಿಂದ ಚೇತರಿಸಿಕೊಳ್ಳುತ್ತಿದ್ದ ಜನರ ಬದುಕನ್ನು ಕಳೆದ ವಾರ ಸುರಿದ ಮಹಾಮಳೆ ಮೂರಾಬಟ್ಟೆಯಾಗಿಸಿದೆ. ಇರುವ ಒಂದೇ ಒಂದು ಸೇತುವೆಯೂ ಕೊಚ್ಚಿ ಕೊಂಡು ಹೋಗಿದೆ. ಸರಿ ಸುಮಾರು 4000 ಜನರ ಏಕಮಾತ್ರ ಸಂಪರ್ಕಕೊಂಡಿ ಕಳಚಿದೆ. ಮನೆ-ತೋಟ ಗಳೆಲ್ಲ ಕೆಸರು-ನೀರಿ ನಿಂದ ಆವೃತವಾಗಿವೆ. ಭಾಗಶಃ ದ್ವೀಪವಾಗಿರುವ ಈ ಹಳ್ಳಿಗಳು ಕನಿಷ್ಠ ಅವಶ್ಯಕತೆ ಗಳಿಗಾಗಿಯೂ ಒಂದೋ ಜೀವವನ್ನು ಅಂಗೈಲಿ ಹಿಡಿದು ದೋಣಿಯನ್ನವ ಲಂಬಿಸಬೇಕು ಅಥವಾ ದಾರಿ ಸರಿಯಿಲ್ಲದ ಕಡಿದಾದ ನೂರಾರು ಕಿಮೀ ಬಳಸು ದಾರಿಯಲ್ಲಿ ಸುತ್ತಬೇಕು.

ನಾಡಿಗೆ ಬೆಳಕು ನೀಡಬೇಕೆಂದು ತಮ್ಮದೆಲ್ಲವ ತ್ಯಜಿಸಿದ ಆ ತ್ಯಾಗಜೀವಿ ಗಳಿಗೆ ನೆಮ್ಮದಿಯಾಗಿ ಬದುಕುವ ಹಕ್ಕೂ ಇಲ್ಲವೇ? ಕಾಳಿನದಿಯ ಕೊಡಸಳ್ಳಿ ಡ್ಯಾಮ್‌ಗೆ ಅಂಟಿದಂತಿರುವ ಅದೊಂದು ಕುಗ್ರಾಮ. ಹೆಸರು ಕಳಚೆ. ಗುಡ್ಡದ ತುದಿ-ಬುಡಗಳೇ ಆವರಿಸಿರುವ ಈ ಗ್ರಾಮದಲ್ಲಿ ಹೆಚ್ಚೂಕಡಿಮೆ ಸಮತಟ್ಟು ಪ್ರದೇಶವೆಂಬುದೇ ಇಲ್ಲ. ಆದಾಗ್ಯೂ ಶ್ರಮಜೀಗಳಾದ ಇಲ್ಲಿನ ಜನ, ಅಲ್ಲಿಯೇ ವ್ಯವಸಾಯ ಮಾಡಿಕೊಂಡು ಇರುವುದರಲ್ಲಿಯೇ ತೃಪ್ತಿ ಕಂಡುಕೊಂಡಿದ್ದರು.

ಬಹುಪಾಲು ತಾವೇ ಕಷ್ಟಪಟ್ಟು ಮನೆ-ಮನೆಗೆ ರಸ್ತೆ ಮಾಡಿಕೊಂಡಿದ್ದರು. ಮತ್ತದೇ ಕಳೆದ ವಾರ ಸುರಿದ ಮಹಾಮಳೆಯಿಂದ ಗುಡ್ಡಕುಸಿದು ಹಲವು ಮನೆಗಳನ್ನು ಸೇರಿದಂತೆ, ಕೆಲ ಜೀವಹಾನಿಯನ್ನೂ ಮಾಡಿದೆ. ಜತೆಯಲ್ಲಿ ಈ ಗ್ರಾಮವನ್ನು ಯಲ್ಲಾಪುರಕ್ಕೆ ಸೇರಿಸುವ ಏಕೈಕ ರಸ್ತೆ ಸಾವಿರಾರು ಅಡಿಗಳಷ್ಟು ಕುಸಿದಿದ್ದು, ರಿಪೇರಿ ಯಾಗಲು ಏನಿಲ್ಲವೆಂದರೂ ಮೂರ್ನಾಲ್ಕು ತಿಂಗಳುಗಳಾದರೂ ಬೇಕು. ಇದೀಗ ಅಲ್ಲಿರುವ ಎರಡು ನೂರಕ್ಕೂ ಅಧಿಕ ಜನರಿಗೆ ಕಾಡಿನ ಮೂಲಕ ಹತ್ತಾರು ಕಿಮೀ ಕಾಲುದಾರಿಯಲ್ಲಿ ನಡೆದರೆ ಮಾತ್ರ ಹೊರಪ್ರಪಂಚಕ್ಕೆ ಕಾಲಿಡಬಹುದು, ಜೀವನಾವಶ್ಯಕ ವಸ್ತುಗಳು ಸಿಗುವದು.

ಇದೇ ಕಾಳಿನದಿಯ ಕಟ್ಟಕಡೆಯ ಡ್ಯಾಮ್, ಕದ್ರಾದ ತಳಭಾಗದಲ್ಲಿರುವ ಮಲ್ಲಾಪುರದ ಜನರದ್ದು ಇನ್ನೊಂದು ಗೋಳು. ಅಲ್ಲಿನ ಬಹುಪಾಲು ಸ್ಥಳೀಯರು ಅಂದಿ ನಂದಿನ ದುಡಿಮೆಯನ್ನು ನೆಚ್ಚಿಕೊಂಡವರು. ಅದ್ಯಾವ ಪೂರ್ವಸೂಚನೆಯನ್ನೂ ನೀಡದೆಯೇ 2019ರಲ್ಲಿ ಡ್ಯಾಮ್‌ನಿಂದ ಲಕ್ಷಾಂತರ ಕ್ಯೂಸೆಕ್ ನೀರು ಬಿಟ್ಟಾಗ, ವರ್ಷಗಳಿಂದ ಕಟ್ಟಿಕೊಂಡಿದ್ದ ಬದುಕು ಮುಳುಗಿಹೋಗಿತ್ತು. ಆಕ್ರೋಶಗೊಂಡ ಜನ ಈ ರೀತಿ ಮಾಡಬಾರದೆಂದು ಅಧಿಕಾರಿಗಳಿಗೆ ಮನವಿ, ದೂರು ಎಲ್ಲ ಸಲ್ಲಿಸಿ ದ್ದರು, ಮತ್ತೊಮ್ಮೆ ಹೀಗಾಗಬಾರದೆಂದು. ಆದರೆ ಈ ಮಹಾಮಳೆಯು ಅದನ್ನು ಮತ್ತೆ ಸುಳ್ಳಾಗಿಸಿ, ಅಚಾನಕ್‌ಎಲ್ಲ ಗೇಟ್ ತೆರೆಯುವಂತೆ ಮಾಡಿದೆ. ಪರಿಣಾಮ ಇಲ್ಲಿನವರ ಎಲ್ಲವೂ ಸರ್ವನಾಶವಾಗಿ, ಬದುಕು ಮತ್ತೆ ಬೀದಿಗೆ ಬಂದಿದೆ.

ಈ ಸಲ ಆಕ್ರೋಶಗೊಳ್ಳುವುದು ಒತ್ತಟ್ಟಿಗಿರಲಿ, ಅಳುವದಕ್ಕೂ ಆಗದಂತಹ ದುಸ್ಥಿತಿ ಇವರದ್ದು. ಇವು ಮೂರೇ ಅಲ್ಲ, ಹುಡುಕಿ ಹೊರಟರೆ ಕಳೆದ ವಾರ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಕುಂಭದ್ರೋಣ ಮಳೆಯು ಸೃಷ್ಟಿಸಿದ ಅವಾಂತರಗಳನ್ನು ಹಳ್ಳಿ-ಹಳ್ಳಿಗಳೂ, ಪೇಟೆ-ಪಟ್ಟಣಗಳು ಹೇಳುತ್ತವೆ. ಆ ಮಳೆಯಿಂದಾಗಿ ಝರಿ ಗಳು ಹಳ್ಳಗಳಾದವು, ಹಳ್ಳಗಳು ನದಿಗಳಾದವು, ನದಿಗಳು ಎಲ್ಲವನ್ನೂ ಆಹುತಿ ತೆಗೆದು ಕೊಳ್ಳುವ ಮಾರಿಗಳಾಗಿಬಿಟ್ಟವು. ಘಟ್ಟದಲ್ಲಿ ಹುಟ್ಟಿ ಅರಬ್ಬಿ ಸಮುದ್ರ ವನ್ನು ಸೇರುವ ಜಿಲ್ಲೆಯ ಜೀವನದಿಗಳಾದ ಕಾಳಿ, ಗಂಗಾವಳಿ ಹಾಗೂ ಅಘನಾಶಿನಿ ನದಿಗಳು ಇಲ್ಲಿಯವರೆಗಿನ ತಮ್ಮೆಲ್ಲ ದಾಖಲೆಗಳನ್ನು ಮೀರುವಂತೆ ರೌದ್ರಾವ ತಾರ ತಾಳಿ ಅಬ್ಬರಿಸಿದವು.

ಮಲೆನಾಡು- ಕರಾವಳಿಯೆರಡನ್ನೂ ಒಳಗೊಂಡಿರುವ ಜಿಲ್ಲೆಯಲ್ಲಿ ಘಟ್ಟದ ಮೇಲೆ ಎಲ್ಲೆಡೆ ಕುಸಿಯುವ ಭಯವಾದರೆ, ಘಟ್ಟದ ಕೆಳಗೆ ಮುಳುಗಿ ಬಳಿದು ಹೋಗುವ ಆತಂಕ. ಹದಿನೈದು ಸಾವಿರಕ್ಕೂ ಹೆಚ್ಚು ಜನನಿರ್ವಸತಿಗರಾಗಿ ಗಂಜಿಕೇಂದ್ರಕ್ಕೆ ಸೇರುವಂತಾದರು. ಸಾವಿರಾರು ಮನೆಗಳು ಮುಳುಗಿದವು, ಹಲವು ಬಿದ್ದೂ ಹೋದವು. ಅಳಿದುಳಿದವುಗಳಲೆಲ್ಲ ಕೆಸರು ಮಣ್ಣರಾಶಿ ತುಂಬಿ ಬಳಕೆಗೆ ಅಯೋಗ್ಯವಾದಂತಾದವು. ಹೆದ್ದಾರಿಗಳನ್ನೂ ಹಿಡಿದು ರಸ್ತೆಗಳೆಲ್ಲ ಕುಸಿದು, ಮುಳುಗಿ ಹೆಚ್ಚು ಕಡಿಮೆ ಜಿಲ್ಲೆಯ ಹನ್ನೊಂದು ತಾಲೂಕುಗಳೂ ಪ್ರತ್ಯೇಕ ದ್ವೀಪಗಳಂತಾಗಿ, ಅವುಗಳೊಳಗೆ ಪ್ರತಿ ಗ್ರಾಮಗಳೂ ಪುಟ್ಟ ದ್ವೀಪಗಳಾಗಿ ಹೋದವು.

ಸ್ಥಳೀಯ ಮುಖಂಡರು, ಸಂಘಟನೆಗಳು ಸರ್ವಸಾಮರ್ಥ್ಯ ಬಳಸಿ ಸ್ಥಿತಿ ಸುಧಾರಣೆಗಾಗಿ ಬಡಿದಾಡುತ್ತಿದ್ದರೂ ರಾಜಧಾನಿಯಲ್ಲಿನ ಆಳರಸರಿಗೆ ಇವೆಲ್ಲ ಸುದ್ದಿ ಮುಟ್ಟಿಸಬೇಕಲ್ಲ, ಅಲ್ಲಿಂದ ನೆರವು ಲಭಿಸಿದರೆ ಎಲ್ಲ ಸುಗಮವಾಗುವುದು ಸುಲಭ ಸಾಧ್ಯ. ಆ ಕಾರ್ಯವನ್ನು ಸಂಧಾನದ ನಾಲ್ಕನೇ ಅಂಗವಾದ ಮಾಧ್ಯಮಗಳು ಮಾಡಬೇಕಲ್ಲ. ಪತ್ರಿಕಾ ಮಾಧ್ಯಮ ಗಳು ಯಥಾನುಶಕ್ತಿ ಆ ಕೆಲಸ ಮಾಡುತ್ತಿವೆ. ಆದರೆ ದೃಶ್ಯಮಾಧ್ಯಮಗಳಿಗೆ ಅದೇಕೋ ಉತ್ತರಕನ್ನಡ ಜಿಲ್ಲೆಯೆಂದರೆ
ಆಳರಸರಂತೆಯೇ ಅಲರ್ಜಿ. ಇಲ್ಲಿ ಅವಾಂತರಗಳ ಸರಮಾಲೆಯೇ ನಡೆಯುತ್ತಿದ್ದರೆ ನ್ಯೂಸ್ ಚಾನಲ್ ಗಳಿಗೆ ಇವೆಲ್ಲವನ್ನೂ ಬಿಟ್ಟು ಬೇರೆ ಏನು ಬೇಕಾದರೂ
ಸ್ಟೋರಿ ಮಾಡುವ ಉತ್ಸಾಹ. ಇಲ್ಲಿನ ಸುದ್ದಿಗಳು ಕೆಳಗಡೆ ಸ್ಕ್ರೋಲ್ ನ್ಯೂಸ್‌ಗಳಾಗಿರುತ್ತವೆ.

ಹೆಚ್ಚೆಂದರೆ ಅಲ್ಲೊ, ಇಲ್ಲೂ 2-3ನಿಮಿಷಗಳ ವರದಿಗಳಾಗಬಲ್ಲವು. ಅಷ್ಟೇ.. ಈ 3-4 ದಿನಗಳ ಮಹಾಮಳೆಯ ಕಾಲದಲ್ಲಿ ಮುಖ್ಯಮಂತ್ರಿಗಳ ಬದಲಾಯಿಸುವ ಕಸರತ್ತು ನಡೆಯುತ್ತಿತ್ತಲ್ಲ, ಕೇಳಬೇಕೆ? ಚಾನಲ್‌ಗಳಿಗೆ ಅದಕ್ಕಿಂತ ಪ್ರಮುಖವಾದ ಸುದ್ದಿಯಿರಲು ಸಾಧ್ಯವೇ? ಉತ್ತರಕನ್ನಡವು ಕೊಚ್ಚಿ ಹೋದರೇನು, ನಮ್ಮ ಟಿಆರ್‌ಪಿ ಹೆಚ್ಚಿದರೆ ಸಾಕು ಎಂದಿರಬೇಕು ಅವರಿಗೆಲ್ಲ. ಹಾಗಾಗಿ ಆ ರಾಜಕಾರಣಿಗಳು ಹೀಗೆಂದರು, ಹಾಗೆ ಮಾಡಿದರು, ನಿಂತರು, ಕುಂತರು, ಮಲಗಿದರು ಇತ್ಯಾದಿಗಳೆಲ್ಲ ಪ್ರೈಮ್ ನ್ಯೂಸ್‌ಗಳಾದವು, ಡಿಸ್ಕಶನ್ ಟಾಪಿಕ್‌ಗಳಾದವು.

ಉತ್ತರಕನ್ನಡದೊಂದಿಗೆ ರಾಜ್ಯದ ೧೨ ಜಿಲ್ಲೆಗಳಲ್ಲಿ ಆಗ ಭೀಕರ ಮಳೆ ಸುರಿದಿದ್ದರಿಂದ ಮಾಧ್ಯಮಗಳ ಮುಖ್ಯಾಂಶದಲ್ಲಿ ಒಮ್ಮೆ ಕಾಣಿಸಿಕೊಳ್ಳುವ ಭಾಗ್ಯ ನಮ್ಮ ಜಿಲ್ಲೆಯದಾಯ್ತು. ಯಡಿಯೂರಪ್ಪನವರು ಉತ್ತರ ಕನ್ನಡಕ್ಕೆ ನೆರೆ ಸಮೀಕ್ಷೆಗೆಂದು ಬಂದಿದ್ದರೆ ಚಾನಲ್‌ಗಳ ಕೃಪಾದೃಷ್ಟಿ ಇತ್ತ ಬೀಳುತ್ತಿತ್ತೇನೋ, ಅವರು ಗಾದಿ ಯಿಳಿದದ್ದರಿಂದ ಅದೂ ಇಲ್ಲವಾಗಿ ಹೋಯ್ತು.

ಅಷ್ಟಕ್ಕೂ ದೃಶ್ಯಮಾಧ್ಯಮಗಳ ಅಸಡ್ಡೆಗೆ ಉತ್ತರ ಕನ್ನಡವು ತುತ್ತಾಗುತ್ತಿರುವದು ಇದೇ ಮೊದಲಲ್ಲ ಬಿಡಿ, 2019ರಲ್ಲಿ, ಕಾರವಾರದ ಸಮುದ್ರ ದ್ವೀಪ ಕೂರ್ಮ ಗಡದ ಜಾತ್ರೆಯಲ್ಲಿ ದೋಣಿಯೊಂದು ಮುಳುಗಿ, ಹತ್ತೊಂಬತ್ತು ಜೀವಗಳು ಪ್ರಾಣ ಕಳೆದು ಕೊಂಡವು. ಅದೇ ದಿನ ಮಂಡ್ಯದ ಕಾಲುವೆಯೊಂದಕ್ಕೆ ಬಸ್ ಉರುಳಿ 12 ಜನ ಮೃತರಾದರು. ಆಗ ಇಡೀ ದಿನ ಎಲ್ಲ ನ್ಯೂಸ್ ಚಾನಲ್‌ಗಳು ಮಂಡ್ಯದ ಇಂಚಿಂಚು ಮಾಹಿತಿಯನ್ನೂ ಕವರ್ ಮಾಡಿದವೇ ಹೊರತು, ಇಲ್ಲಿನದಲ್ಲ. ದೋಣಿದುರಂತವು ಒಂದು ಸಾಮಾನ್ಯ ಸುದ್ದಿಯೆಂಬಂತೆ ಒಂದೆರಡು ಸಲ ಫ್ಲಾಶ್ ನ್ಯೂಸ್ ಆಗಿ ಮೂಡಿಬಂತಷ್ಟೆ.

ಬೆಂಗಳೂರಿನಂತಹ ಮಹಾನಗರಿ ಯಲ್ಲಿ ಸುರಿದ ಅರ್ಧಘಂಟೆಯ ಮಳೆಯನ್ನು ಪ್ರಳಯವಾಯ್ತೇನೋ ಎಂಬಂತೆ ಬಿಂಬಿಸುವ, ಚಿತ್ರತಾರೆಯರ-ಕ್ರಿಕೆಟಿಗರ ಕ್ಷುಲ್ಲಕ
ಕಿತ್ತಾಟಗಳನ್ನು, ಅವರ ನಾಯಿ ಊಟ ಮಾಡಿಲ್ಲವೆಂಬುದನ್ನು ಮಹಾ ದುರಂತವೆಂಬಂತೆ ಚಿತ್ರಿಸುವ ನ್ಯೂಸ್ ಚಾನಲ್‌ಗಳಿಗೆ 2009ರ ಮಹಾಮಳೆಯ ಸಮಯ ದಲ್ಲಿ ಹಾಗೂ ಹೆದ್ದಾರಿ ನಿರ್ಮಾಣದ ಅವೈಜ್ಞಾನಿಕ ಕಾರ್ಯದಿಂದಾಗಿ ಕಾರವಾರ, ತಂಡ್ರಕುಳಿಗಳಲ್ಲಾದ ಭೂಕುಸಿತದ ಜೀವಂತ ಸಮಾಧಿಗಳು, ಬರ್ಗಿಯಲ್ಲಿ ಇಡಿಯ ಕುಟುಂಬವನ್ನೇ ಸುಟ್ಟು ಬಲಿ ತೆಗೆದುಕೊಂಡ ಗ್ಯಾಸ್ ಟ್ಯಾಂಕರ್ ದುರಂತ ಇತ್ಯಾದಿಗಳೆಲ್ಲ ಹೇಗೆ ಮುಖ್ಯ ವಾಗಲು ಸಾಧ್ಯ? ಚುನಾವಣಾ ಸಂದರ್ಭ ಗಳಲ್ಲಿಯೂ ಅಷ್ಟೇ, ಉತ್ತರಕನ್ನಡ ಜಿಲ್ಲೆಯ ಫಲಿತಾಂಶವನ್ನು ಕೊನೆಯಲ್ಲಿ ತೋರಿಸಲಾಗುತ್ತದೆ.

ಅದೇ, ರಾಜ್ಯದ ಯಾವುದೇ ಮೂಲೆಯಲ್ಲಾದರೂ ಭಯೋತ್ಪಾದಕ ನೊಬ್ಬ ಸೆರೆ ಸಿಕ್ಕರೆ, ಆತನ ಭಟ್ಕಳದ ನಂಟನ್ನು ಭೇದಿಸಿ, ’ಕರ್ನಾಟಕದ ಪಾಕಿಸ್ತಾನ’ದೆಂದು
ಪ್ರಚುರಪಡಿಸುವ ಮೂಲಕ ಇಲ್ಲಿನ ಕೋಮುಸೌಹಾರ್ದಕ್ಕೆ ಬೆಂಕಿ ಹಚ್ಚುವ ಕಾರ್ಯವನ್ನು ಮಾತ್ರ ನಿಷ್ಠೆಯಿಂದ ಮಾಡುತ್ತವೆ, ಪಾಪ!! ಇಲ್ಲಿರುವ ಪ್ರಶ್ನೆಯೆಂದರೆ ನಮ್ಮ ಜಿಲ್ಲೆಯನ್ನು ಚಾನಲ್‌ಗಳು ಕಡೆಗಣಿಸಲು ಕಾರಣವೇನೆಂಬುದು. ಆಳುವವರು ಯಾರಿದ್ದರೂ ಕಡೆಗಣಿಸುತ್ತಾರೆಯೆಂದೇ? ತಂಟೆ-ತಕರಾರುಗಳನ್ನು ತೆಗೆಯದ ಇಲ್ಲಿನ ಜನರು ಏನು ಮಾಡಿದರೂ ಸಹಿಸುತ್ತಾರೆಂದೇ? ನಿಜ, ತಕರಾರು ತೆಗೆಯುವವರಾಗಿದ್ದರೆ, ಕೇವಲ ವಿದ್ಯುತ್ ಉತ್ಪಾದನೆಗೆಂದೇ ಅನಾಮತ್ತು
ಆರು ಜಲಾಶಯಗಳಡಿ ಭೂಮಿ-ಕಾಣಿಕೆಗಳನ್ನು ಒಪ್ಪಿಸಿ ನಿರಾಶ್ರಿತರಾದಾಗ ಸುಮ್ಮನಿರುತ್ತಿರಲಿಲ್ಲ.

ದೇಶಕ್ಕೆ ಉಪಕಾರಿ, ಜಿಲ್ಲೆಯ ಪಾಲಿಗೆ ಎಂದೆಂದೂ ಮಡಿಲ ಕೆಂಡವಾಗಿರುವ ಕೈಗಾ ಅಣುಸ್ಥಾವರದ ಸ್ಥಾಪನೆಗೇ ಬಿಡುತ್ತಿರಲಿಲ್ಲ. ಅಂಕೋಲಾ-ಕಾರವಾರದಲ್ಲಿ ನೌಕಾನೆಲೆಯನ್ನು ನಿರ್ಮಿಸಿ ಕ್ರಮೇಣ ಒಂದೊಂದೇ ಸಮುದ್ರತೀರವನ್ನು ಆಪೋಶನ ತೆಗೆದುಕೊಳ್ಳುವ ಮೂಲಕ ಇಲ್ಲಿ ಮೀನುಗಾರರ ಅನ್ನ ಕಸಿಯುವ ಯೋಜನೆ ಯನ್ನು ನೋಡಿಯೂ ಮೌನವಾಗಿರುತ್ತಿರಲಿಲ್ಲ. ಅಕ್ಕ-ಪಕ್ಕದ ಜಿಲ್ಲೆಗಳ ಪ್ರತಿ ಸ್ಟೇಶನ್‌ಗಳಲ್ಲಿ ನಿಲುಗಡೆಯಿದ್ದಾಗ್ಯೂ ಕೊಂಕಣ ರೈಲ್ವೆಯ ಹೆಚ್ಚಿನ ರೈಲುಗಳಿಗೆ ಜಿಲ್ಲೆಯ ಒಂದು, ತಪ್ಪಿದರೆ ಎರಡು ನಿಲ್ದಾಣಗಳಲ್ಲಿ ಮಾತ್ರ ನಿಲ್ಲಿಸುವುದನ್ನು ವಿರೋಧಿಸದೇ ಬಿಡುತ್ತಿರಲಿಲ್ಲ.

ಇಷ್ಟೆಲ್ಲ, ಸಂಪನ್ಮೂಲಗಳಿದ್ದಾಗ್ಯೂ, ರಾಜ್ಯದ ಅರಣ್ಯೋತ್ಪನ್ನದ ಸಿಂಹಪಾಲು ನಮ್ಮದಾಗಿದ್ದರೂ ಒಂದೇ ಒಂದು ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಇಲ್ಲದಿರುವುದನ್ನು ಪ್ರಶ್ನಿಸದಿರುತ್ತಿರಲಿಲ್ಲ. ಜಿಲ್ಲೆಯ ಹಲವೆಡೆ ಮೂಲಭೂತ ಸೌಕರ್ಯಗಳ ಕೊರತೆಯಿರುವುದನ್ನೂ ಪ್ರತಿಭಟಿಸದಿರುತ್ತಿರಲಿಲ್ಲ.. ಇನ್ನು, ಟಿಆರ್‌ಪಿ ವಿಚಾರಕ್ಕಾಗಿ ನಿರ್ಲಕ್ಷಿಸುತ್ತಿದ್ದಾರೆಂದುಕೊಳ್ಳಲು, ನಿಜಕ್ಕೂ ಕರ್ನಾಟಕದ ಮಹಾಜನತೆ ಇವರ ಚರ್ವತಚರ್ವಣ ಸುದ್ದಿಗಳನ್ನು ಕ್ಷೀಣಿಸಲು ಕಾಯುತ್ತಿದೆಯೇ? ಖಂಡಿತವಾಗಿಯೂ ಇಲ್ಲ.

ಪ್ರಜ್ಞಾವಂತರೆಲ್ಲ ಇತ್ತೀಚೆಗೆ ನ್ಯೂಸ್ ಚಾನಲ್‌ಗಳನ್ನು ವೀಕ್ಷಿಸುವುದನ್ನು ಕಡಿಮೆ ಮಾಡಿರುವುದು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯ
ಗಳನ್ನು ಹಂಚಿಕೊಳ್ಳಲಾರಂಭಿಸಿರುವುದೇ ಇದಕ್ಕೆ ಸಾಕ್ಷಿ. ಬೋರು ಹೊಡೆಸುವ ಧಾರವಾಹಿ-ರಿಯಾಲಿಟಿ ಶೋಗಳನ್ನು ನೋಡಿ ಬೇಸತ್ತು ವಿಽಯಿಲ್ಲದೆಯೇ
ಇಲ್ಲೇನು ಬೃಹನ್ನಾಟಕ ತೋರಿಸುತ್ತಿದ್ದಾರಪ್ಪಾ ಎಂದು ನ್ಯೂಸ್ ಚಾನಲ್‌ಗಳನ್ನು ಇಣುಕುವವರ ಸಂಖ್ಯೆಯೇ ಅಧಿಕ. ಹೀಗಿರುವಾಗ ಸಾಮಾಜಿಕ ಕಳಕಳಿಯುಳ್ಳ
ವರದಿಗಳನ್ನು ಬಿತ್ತರಿಸಿದರೆ ಜನರು ಖಂಡಿತವಾಗಿಯೂ ತಿರಸ್ಕರಿಸಲಾರರು.

ಯಾವುದಾದರೂ ಒಂದು ಚಾನಲ್ ಧೈರ್ಯವಹಿಸಿ ಇದೀಗ ಆಗಿರುವ ಹಾನಿಯ ಸ್ಟೋರಿ ಮಾಡಲಿ, ಅದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಬರದಿದ್ದರೆ ಕೇಳಿ. ಅದೇ ಒಂದು ಟ್ರೆಂಡ್ ಆಗುವುದಂತೂ ನಿಶ್ಚಿತ. ಉಳಿದಂತೆ, ಅದ್ಯಾರೋ ರಾಜಕಾರಣಿ-ಪ್ರಭಾವಿಗಳ ಹಿಡಿತಕ್ಕೋ, ಕೃಪಾಕಟಾಕ್ಷಕ್ಕೂ ಸಿಲುಕಿರುವ ಕೆಲ ನ್ಯೂಸ್ ಚಾನಲ್
ಗಳ ಕಥೆಯನ್ನಂತೂ ಹೇಳುವುದೇ ಬೇಡವೇನೋ.. ಇಷ್ಟೆಲ್ಲ ಹೇಳುತ್ತಿರುವುದು ನಮ್ಮ ಉತ್ತರಕನ್ನಡ ಜಿಲ್ಲೆಯು ದೃಶ್ಯಮಾಧ್ಯಮಗಳಲ್ಲಿ ಕಾಣಿಸಿಕೊಂಡು ಮೆರೆಯಲಿ ಎಂಬ ತೆವಲಿನಿಂದಲ್ಲ.

ನ್ಯೂಸ್ ಚಾನಲ್ ಗಳಲ್ಲಿ ಕಾಣಿಸಿಕೊಂಡಾದರೂ ಆಳುವವರಿಗೆ ಇಲ್ಲಿನ ಸ್ಥಿತಿ-ಗತಿಗಳ ಅರಿವಾಗಲಿ. ಆಮೂಲಕವಾದರೂ ಸಮಸ್ಯೆಗಳು ಪರಿಹಾರ ಕಾಣಲಿ ಎಂಬ ಸದಾಶಯದಿಂದ. ಅಲ್ಲೆಲ್ಲೊ ದೂರದ ಉತ್ತರಾಖಂಡದ ನೆರೆಗೆ ಸ್ಪಂದಿಸುವ ನಮ್ಮ ನಾಡು, ಇಲ್ಲಿನದೇ ಜನರ ಕಣ್ಣೀರನ್ನು ಒರೆಸುವ ಕಾರ್ಯ ಮಾಡುವುದಲ್ಲದೇ?
ಒಟ್ಟಿನಲ್ಲಿ ‘ನಾಡಿನ ಶ್ರೇಯಸ್ಸಿಗೆ ಅತಿಹೆಚ್ಚು ಕೊಡುಗೆಗಳನ್ನು ನೀಡಿರುವ ಉತ್ತರಕನ್ನಡ ಜಿಲ್ಲೆಯನ್ನು ಇನ್ನಾದರೂ ಕಡೆಗಣಿಸದಿರಿ. ಆ ಮೂಲಕ ಕತ್ತಲಲ್ಲಿರುವ ಜಿಲ್ಲೆಯಲ್ಲಿ ಇನ್ನಾದರೂ ಅಭಿವೃದ್ಧಿಯ ಹೊಂಗಿರಣಗಳು ಮೂಡಿಬರಲಿ’ ಎಂಬುದೇ ದೃಶ್ಯಮಾಧ್ಯಮಗಳ ಮುಂದಿಡುತ್ತಿರುವ ಕೋರಿಕೆ.