Saturday, 14th December 2024

ಹೆನ್ರಿ ಕಿಸಿಂಜರ‍್: ಜಾಗತಿಕ ರಾಜಕಾರಣದ ಅಸಾಧಾರಣ ಚಾಣಾಕ್ಷ

ಅಕ್ಬರ್‌ ನಾಮಾ

ಎಂ.ಜೆ.ಅಕ್ಬರ್‌

ಜಾಗತಿಕ ರಾಜಕಾರಣದಲ್ಲಿ ಹೆನ್ರಿ ಕಿಸಿಂಜರ್ ಎಷ್ಟು ಸೋಲುಗಳನ್ನು ಕಂಡಿದ್ದಾರೋ ಅಷ್ಟೇ ಗೆಲುವುಗಳನ್ನೂ ಸಾಧಿಸಿದ್ದಾರೆ. ೨೧ನೇ ಶತಮಾನದಲ್ಲಿ ಅವರಂತಹ ಇನ್ನೊಬ್ಬರನ್ನು ನಾವು ನೋಡುವುದಿಲ್ಲ.

ಹೇನ್ಜ್ ಆಲ್ರೆಡ್ ಕಿಸಿಂಜರ್ ೧೯೩೮ರಲ್ಲಿ ಜರ್ಮನ್ ಬವೇರಿಯಾದಿಂದ ಹಿಟ್ಲರನ ನರಮೇಧವನ್ನು ತಪ್ಪಿಸಿಕೊಂಡು ಅಮೆರಿಕಕ್ಕೆ ಪಲಾಯನ ಮಾಡಿದಾಗ ಆತನಿಗೆ ೧೫ ವರ್ಷ. ಅಮೆರಿಕದ ನಿರಾಶ್ರಿತರ ಶಿಬಿರ ತಲುಪಿದ ಹೆನ್ರಿ, ಮುಂದೆ ೧೯೪೩ರಲ್ಲಿ ಅಮೆರಿಕದ ಸೇನೆಗೆ ಯೋಧನಾಗಿ ಸೇರುತ್ತಾನೆ. ಅಲ್ಲಿ ಕೆಚ್ಚೆದೆ ಪ್ರದರ್ಶಿಸಿ ಬಹಳ ಬೇಗ ದೊಡ್ಡ ಹೀರೋ ಆಗುತ್ತಾನೆ.

ನಂತರ ಮಿಲಿಟರಿ ಗುಪ್ತಚರ ದಳದ ಸಾರ್ಜೆಂಟ್ ಹುದ್ದೆಗೇರಿ ಬರ್ಲಿನ್‌ನಲ್ಲಿ ಸೇವೆಗೆ ನಿಯೋಜಿತನಾಗುತ್ತಾನೆ. ೧೯೫೦ರ ಹೊತ್ತಿಗೆ ಹಾರ್ವರ್ಡ್‌ನಲ್ಲಿ ಉನ್ನತ
ಶಿಕ್ಷಣ ಪಡೆದು ಸಾಧನೆ ಮಾಡುತ್ತಾನೆ. ೧೯೬೦ರ ವೇಳೆಗೆ ಅಮೆರಿಕದ ರಾಜಕಾರಣ ಮತ್ತು ಸರಕಾರದಲ್ಲಿ ತನಗೊಂದು ಜಾಗ ಹುಡುಕತೊಡಗುತ್ತಾನೆ. ೧೯೬೯ರಲ್ಲಿ ಅವನ ಹಣೆಬರಹವೇ ಬದಲಾಗುತ್ತದೆ. ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ರಾಷ್ಟ್ರೀಯ ಭದ್ರತಾ ಸಲಹೆಗಾರನನ್ನಾಗಿ ಹೆನ್ರಿಯನ್ನು ನೇಮಿಸುತ್ತಾರೆ.
ಹೆನ್ರಿ ಕಿಸಿಂಜರ್ ಮತ್ತು ಪ್ರಸಿದ್ಧಿ ಒಂದಕ್ಕೊಂದು ಹೇಳಿಮಾಡಿಸಿದ ಪದಗಳು. ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರನಾಗಿ ನೇಮಕಗೊಂಡ ಕೇವಲ
ಐದು ವರ್ಷದಲ್ಲಿ ಎಲ್ಲರ ನಿರೀಕ್ಷೆ ಮೀರಿ ಜಾಗತಿಕ ಸಂಬಂಧಗಳಿಗೆ ಹೊಸ ವ್ಯಾಖ್ಯಾನವನ್ನೇ ಅವರು ಬರೆಯುತ್ತಾರೆ.

ಅವರು ನೀಡಿದ ಅದ್ಭುತ ಹಾಗೂ ಚಾಣಾಕ್ಷ ಐಡಿಯಾಗಳನ್ನು ಅಮೆರಿಕ ಸರಕಾರ ಜಾರಿಗೊಳಿಸಿ ಜಾಗತಿಕ ಸಮೀಕರಣವನ್ನೇ ಬದಲಿಸುತ್ತದೆ. ಹೆನ್ರಿ ಕಿಸಿಂಜರ್ ಅವರ ಮೊದಲ ದೊಡ್ಡ ಯಶಸ್ಸು ಜಾಗತಿಕ ಇತಿಹಾಸದಲ್ಲೊಂದು ಸ್ವತಂತ್ರ ಅಧ್ಯಾಯವೇ ಆಗಿದೆ. ಹಾಗೆಯೇ ಅದು ಕಿಸಿಂಜರ್ ಅವರ ಅತಿದೊಡ್ಡ ಸೋಲಿಗೆ ಮೂಲ ಕಾರಣವೂ ಆಗಿದೆ! ೧೯೬೯ರ ಮಾರ್ಚ್ ೨ಕ್ಕೆ ಕಿಸಿಂಜರ್ ಅಮೆರಿಕದ ಭದ್ರತಾ ಸಲಹೆಗಾರನಾಗಿ ನೇಮಕಗೊಂಡು ಕೇವಲ ಎರಡು ತಿಂಗಳು ಕಳೆದಿತ್ತು. ಅಷ್ಟರಲ್ಲಿ ಉಸ್ಸುರಿ ನದಿಯ ಗಡಿಯಲ್ಲಿ ಸೋವಿಯತ್ ಸೇನೆಯ ಮೇಲೆ ಚೀನಾ ದಾಳಿ ನಡೆಸಿತು. ಎರಡು ಪ್ರಬಲ ಕಮ್ಯುನಿಸ್ಟ್ ದೇಶಗಳ ನಡುವಿನ ಗುಂಡಿನ ಚಕಮಕಿ ಆರು ತಿಂಗಳ ಕಾಲ ನಡೆಯಿತು. ಆ ದಾಳಿಯ ಅರ್ಥವನ್ನು ಕಿಸಿಂಜರ್ ಕರಾರುವಾಕ್ಕಾಗಿ ಓದಿಕೊಂಡರು.

‘ಕಮ್ಯುನಿಸ್ಟ್ ಸಿದ್ಧಾಂತದ ಆಕರ್ಷಣೆಗೆ ರಾಷ್ಟ್ರೀಯ ಹಿತಾಸಕ್ತಿಯ ಬೇಡಿಕೆಗಳ ಜತೆಗೆ ಸ್ಪರ್ಧಿಸಲು ಸಾಧ್ಯವಿಲ್ಲ. ನಾವು ಇಷ್ಟು ದೂರದಲ್ಲಿ ಕುಳಿತು ಶೀತಲ ಸಮರದ
ಸಂಕೀರ್ಣ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಚೀನಾ ಮತ್ತು ರಷ್ಯಾ ದೇಶಗಳು ಪರಸ್ಪರ ರನ್ನು ದುಷ್ಟರೆಂದು ಬಹಳ ಪ್ರಾಮಾಣಿಕವಾಗಿ ಮತ್ತು
ಬಲವಾಗಿ ನಂಬಿದ್ದವು. ದುಷ್ಟರ ಜತೆ ಕುಳಿತು ಊಟ ಮಾಡಲು ಇಬ್ಬರೂ ಸಿದ್ಧರಿರಲಿಲ್ಲ. ಹೀಗಾಗಿ ಕಿಸಿಂಜರ್ ಅವರ ತಲೆ ಶರವೇಗದಲ್ಲಿ ನಾನಾ ಲೆಕ್ಕಾಚಾರ ಗಳನ್ನು ಹಾಕಿತು. ಈ ಹಂತದಲ್ಲಿ ವಾಷಿಂಗ್ಟನ್ ಮತ್ತು ಬೀಜಿಂಗ್ ಸ್ನೇಹಿತರಾದರೆ ಬೈಪೋಲಾರ್ ವ್ಯವಸ್ಥೆ ಕುಸಿದುಬೀಳುತ್ತದೆ. ಆಗ ಎರಡು ಕಡೆಯಿಂದ ರಷ್ಯನ್ ಸೇನೆಯನ್ನು ಕಟ್ಟಿಹಾಕಬಹುದು. ಅದರಿಂದಾಗಿ ಜಾಗತಿಕ ರಾಜಕೀಯ ವ್ಯವಸ್ಥೆಯಲ್ಲಿರುವ ಕಮ್ಯುನಿಸ್ಟ್ ಒಗ್ಗಟ್ಟನ್ನು ಒಡೆಯಬಹುದು ಎಂದು ಕಿಸಿಂಜರ್ ಊಹಿಸಿ ದರು.

ಅದಕ್ಕೆ ಸರಿಯಾಗಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರು ತಮ್ಮ ತಲೆಯನ್ನು ಕಿಸಿಂಜರ್‌ಗೆ ಒಪ್ಪಿಸಿಬಿಟ್ಟರು! ಅದರಲ್ಲಿ ಅಪಾಯ ತುಂಬಾ ಇತ್ತು. ಅಮೆರಿಕದ  ವಿದೇ ಶಾಂಗ ಇಲಾಖೆಯ ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು. ಏನು ನಡೆಯುತ್ತಿದೆ ಎಂಬುದೇ ವಿದೇಶಾಂಗ ಮಂತ್ರಿಗೆ ತಿಳಿದಿರಲಿಲ್ಲ. ನಂತರ ವಿಷಯ ಏನೆಂಬುದು ತಿಳಿದಾಗ ವಿದೇಶಾಂಗ ಸಚಿವಾಲಯ ಕೆಂಡಾಮಂಡಲವಾಗಿತ್ತು. ಸರಳವಾಗಿ ಹೇಳುವುದಾದರೆ, ಮಾವೋ ಜೆಡಾಂಗ್ ಮತ್ತು ನಿಕ್ಸನ್ ಅವರು ಪಿಂಗ್‌ಪಾಂಗ್ ಆಟ ಮುಗಿಸಿ, ತೈವಾನ್ ದೇಶವನ್ನು ಯಃಕಶ್ಚಿತ್ ಬೆಲೆಗೆ ವ್ಯಾಪಾರ ಮಾಡಿಕೊಂಡು, ಬೀಜಿಂಗ್‌ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸ್ಥಾನ ನೀಡಬೇಕೆಂದು ನಿರ್ಧರಿಸಿ ಕೈಕುಲುಕಿ ಮೇಲಕ್ಕೆದ್ದಾಗ ಇಡೀ ರಣರಂಗದಲ್ಲಿ ಏಕೈಕ ಹೀರೋ ಆಗಿ ಹೊರಹೊಮ್ಮಿದವರು ಹೆನ್ರಿ ಕಿಸಿಂಜರ್.

ಮಾಧ್ಯಮದವರಂತೂ ನಿಕ್ಸನ್‌ಗಿಂತ ಕಿಸಿಂಜರ್‌ಗೇ ಹೆಚ್ಚು ಮಹತ್ವ ನೀಡತೊಡಗಿದ್ದವು. ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಜನರಲ್ ಯಾಹ್ಯಾಖಾನ್‌ಗೆ ಕಿಸಿಂಜರ್ ಕೊನೆಯವರೆಗೂ ಕೃತಜ್ಞರಾಗಿ ದ್ದರು. ಮೊದಲ ಬಾರಿ ಬೀಜಿಂಗ್‌ನೊಳಗೆ ರಹಸ್ಯವಾಗಿ ಪ್ರವೇಶಿಸಲು ಕಿಸಿಂಜರ್‌ಗೆ ದಾರಿ ತೋರಿಸಿದ್ದೇ ಯಾಹ್ಯಾ ಖಾನ್. ಆ ವಿಷಯವೇನಾದರೂ ಹೊರಬಿದ್ದಿದ್ದರೆ ಅಥವಾ ಯೋಜನೆ ವಿಫಲವಾಗಿದ್ದಿದ್ದರೆ ಅಮೆರಿಕದ ರಾಜಕೀಯ ನಾಯಕರು ಕಿಸಿಂಜರ್‌ರನ್ನು ನಿರ್ದಾಕ್ಷಿಣ್ಯವಾಗಿ ಮೂಲೆಗೆ ತಳ್ಳುತ್ತಿದ್ದರು. ಆದರೆ ಬೀಜಿಂಗ್‌ನ ಬಿದಿರು ಪರದೆಗಳು ಹಾಗೂ ಇಸ್ಲಾಮಾಬಾದ್‌ನಲ್ಲಿನ ಸೇನೆಯ ಕವಚಗಳು ಈ ರಹಸ್ಯವನ್ನು ತುಂಬಾ ಜತನದಿಂದ ಕಾಪಾಡಿ ಕೊಂಡವು.

ನಂತರ ಕಿಸಿಂಜರ್ ಆಟವಾಡಿದ್ದು ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ. ಅದು ಅವರ ವೃತ್ತಿಬದು ಕಿನ ಇನ್ನೊಂದು ದೊಡ್ಡ ಸವಾಲು. ಆ ಹೊತ್ತಿಗೆ ಯಾಹ್ಯಾ ಖಾನ್ ಹಾಗೂ ಕಿಸಿಂಜರ್ ಸ್ನೇಹಿತರಾಗಿ ದ್ದರು. ಕಿಸಿಂಜರ್ ಚೆನ್ನಾಗಿ ಯೋಚಿಸಿ ಅಡಿಯಿಟ್ಟಿದ್ದರೆ ತನ್ನ ಸ್ನೇಹಿತನಿಗೆ ಇನ್ನೂ ಹೆಚ್ಚಿನ ಸಹಾಯ ಮಾಡಬಹು ದಿತ್ತು. ಆರ್ಥಿಕ ನವ-ವಸಾಹತುಶಾಹೀಕರಣ ಹಾಗೂ ಅದರ ಬೆನ್ನಲ್ಲೇ ಪಾಕಿಸ್ತಾನದ ಸೇನೆ ೧೯೭೧ರ ಮಾಚ್ ನಲ್ಲಿ ನಡೆಸಿದ ಭಯಾನಕ ಮಾರಣಹೋಮದಿಂದಾಗಿ
ಬಾಂಗ್ಲಾದಲ್ಲಿ ಪಾಕಿಸ್ತಾನದ ವಿರುದ್ಧ ಸಾಮೂಹಿಕವಾಗಿ ದಂಗೆ ಶುರುವಾಗಿತ್ತು. ಲಕ್ಷಾಂತರ ಜನರು ಅದರ ಬಿಸಿ ತಾಳಲಾಗದೆ ಭಾರತಕ್ಕೆ ಪಲಾಯನ ಮಾಡಿ ನಿರಾಶ್ರಿತರಾಗಿದ್ದರು. ಈ ಸಮಸ್ಯೆಯನ್ನು ವಸ್ತುನಿಷ್ಠವಾಗಿ ಅರ್ಥ ಮಾಡಿಕೊಳ್ಳುವುದರ ಬದಲು ಕಿಸಿಂಜರ್ ಇದನ್ನೊಂದು ವ್ಯಕ್ತಿಗತ ಸಮಸ್ಯೆಯನ್ನಾಗಿ ಮಾಡಿಬಿಟ್ಟರು.

ತನ್ಮೂಲಕ ಪಾಕಿಸ್ತಾನದ ಒಗ್ಗಟ್ಟನ್ನು ಉಳಿಸುವಲ್ಲಿ ಅಮೆರಿಕಕ್ಕೆ ಉಂಟಾದ ವೈಫಲ್ಯಕ್ಕೆ ಭಾರತದ ಆಗಿನ ಪ್ರಧಾನಿ ಇಂದಿರಾ ಗಾಂಧಿ ಕಾರಣ ಎಂದು ಗೂಬೆ
ಕೂರಿಸಲು ಯತ್ನಿಸಿದರು. ಅದಕ್ಕೆ ಸಹಜವಾಗಿಯೇ ಇಂದಿರಾ ಗಾಂಽ ತೀಕ್ಷ್ಣ ಪ್ರತಿರೋಧ ತೋರಿದರು. ರಿಚರ್ಡ್ ನಿಕ್ಸನ್ ಮಧ್ಯಪ್ರವೇಶ ಮಾಡುವ ಬೆದರಿಕೆ
ಯೊಡ್ಡಿದರೂ ಕ್ಯಾರೇ ಎನ್ನದೆ ಬಾಂಗ್ಲಾದೇಶಿಗರಿಗೆ ಮೋಸ ಮಾಡುವ ಅಥವಾ ಭಾರತದ ಹಿತಾಸಕ್ತಿಗಳ ಜೊತೆಗೆ ರಾಜಿ ಮಾಡಿಕೊಳ್ಳುವ ಕೆಲಸವನ್ನು ಸುತರಾಂ
ಇಂದಿರಾ ಗಾಂಽ ಮಾಡಲಿಲ್ಲ. ಇಂದಿರಾ ಗಾಂಧಿಯನ್ನು ಕಂಡರೆ ನಿಕ್ಸನ್ ಮತ್ತು ಕಿಸಿಂಜರ್ ಉರಿದುರಿದು ಬೀಳುತ್ತಿದ್ದರು. ಖಾಸಗಿ ಸಂಭಾಷಣೆಯಲ್ಲಿ ಅವರಿಬ್ಬರೂ ಇಂದಿರಾ ಬಗ್ಗೆ ಆಡಿದ ಮಾತೇ ಅದಕ್ಕೆ ಸಾಕ್ಷಿ. ಶ್ವೇತಭವನದಲ್ಲಿದ್ದ ರಹಸ್ಯ ಆಂತರಿಕ ಧ್ವನಿಮುದ್ರಣ ವ್ಯವಸ್ಥೆಯನ್ನು ಮರೆತು ಅವರಿಬ್ಬರೂ ಒಮ್ಮೆ ಇಂದಿರಾ ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡಿಕೊಂಡಿದ್ದರು.

೨೦೦೫ರಲ್ಲಿ ರಹಸ್ಯ ಕಡತದ ಹಣೆಪಟ್ಟಿ ಕಳಚಿಕೊಂಡು ಬಿಡುಗಡೆಯಾದ ಆ ಟೇಪ್ ಗಳು ಕಿಸಿಂಜರ್ ಅವರ ಅಭಿಮಾನಿಗಳಿಗೆ ಆಘಾತ ವನ್ನೂ, ಟೀಕಾಕಾರರಿಗೆ ಸಂತಸವನ್ನೂ ಉಂಟುಮಾಡಿದ್ದವು. ೧೯೭೧ರಲ್ಲಿ ಸಿಟ್ಟಿನಿಂದ ಉರಿಯುತ್ತಿದ್ದ ನಿಕ್ಸನ್ ಅವರು ಇಂದಿರಾ ಗಾಂಽಯನ್ನು ‘ಮುದಿ ಮಾಟಗಾತಿ (ಓಲ್ಡ್ ವಿಚ್) ಎಂದು ಕರೆದಿದ್ದರು. ಕಿಸಿಂಜರ್ ಬಳಸಿದ ಶಬ್ದವನ್ನು ಇಲ್ಲಿ ಬರೆಯುವಂತಿಲ್ಲ ಬಿಡಿ. ತೀಕ್ಷ್ಣ ಬುದ್ಧಿಮತ್ತೆಯ ಜೊತೆಗೆ ಹರಿತ ನಾಲಿ ಗೆಯೂ ಇದ್ದರೆ ಅಂತಹವರನ್ನು ಹಿಡಿದು ನಿಲ್ಲಿಸಲು

ಸಾಧ್ಯವಿಲ್ಲ. ಆದರೆ ಕಿಸಿಂಜರ್ ತನ್ನ ನಾಲಿಗೆ ಹರಿಬಿಟ್ಟಾಗ ಏನಾದರೊಂದು ಎಡವಟ್ಟಾಗುತ್ತಿತ್ತು. ಹೀಗಾಗಿಯೇ ಇವತ್ತಿಗೂ ಢಾಕಾದಲ್ಲಿ ಕಿಸಿಂಜರ್ ಬಗ್ಗೆ ನಯಾಪೈಸೆ ಕರುಣೆ ಇರುವವರು ಯಾರೂ ಸಿಗುವುದಿಲ್ಲ. ಬಾಂಗ್ಲಾ ದೇಶವೆಂದರೆ ‘ಬಾಸ್ಕೆಟ್ ಕೇಸ್ (ಕೆಲಸಕ್ಕೆ ಬಾರದ್ದು, ಡಬ್ಬಾ) ಎಂದು ಕಿಸಿಂಜರ್ ಬೈದಿದ್ದರು. ಬೇರೆಯವರ ಬಗ್ಗೆ ಕೀಳಾಗಿ ಮಾತಾಡಲು ಸದಾ ತುದಿಗಾಲಿನಲ್ಲಿ ನಿಂತಿ ರುತ್ತಿದ್ದ ಅವರು ಭಾರತೀಯರಿಗಂತೂ ಬಾಯ್ತುಂಬಾ ಬೈಯುತ್ತಿದ್ದರು. “Indians are bastards anyway” as well as “most sexless” and “pathetic” ಎಂಬ ಕಿಸಿಂಜರ್ ಅವರ ಪ್ರಸಿದ್ಧ ಹಾಗೂ ಕೊಳಕು ಹೇಳಿಕೆ ಇತಿಹಾಸದಲ್ಲಿ ದಾಖಲಾಗಿದೆ.

ಅವರ ಎಲ್ಲಾ ಬೈಗುಳಗಳ ಪೈಕಿ ‘ಸೆಕ್ಸ್‌ಲೆಸ್ ಎಂಬುದು ನನಗೆ ಬಹಳ ಮಜವಾಗಿ ಕಾಣಿಸಿದೆ. ಕಿಸಿಂಜರ್ ಯಾವಾಗಲೂ ‘ಸೆಕ್ಸ್ ಫುಲ್ ಆಗಿರುತ್ತಿದ್ದರು ಎಂಬ
ಕಾರಣಕ್ಕಲ್ಲ. ಒಬ್ಬಂಟಿಯಾಗಿದ್ದಾಗ ಅವರು ವಾಷಿಂ ಗ್ಟನ್‌ನಲ್ಲಿ ಹಾಲಿವುಡ್ ನಟಿಯರ ಜೊತೆ ಡೇಟಿಂಗ್ ಮಾಡುತ್ತಿದ್ದರು. ಅದು ಎಲ್ಲರೂ ಹುಬ್ಬೇರಿಸುವಂತೆ
ಮಾಡಿತ್ತು. ಹೀಗಾಗಿ ಬೇಡ ಅಂದರೂ ಅವರ ಜೀವನ ಶೈಲಿಯು ಕೆಟ್ಟ ಪನ್‌ಗಳಿಗೆ ಅವಕಾಶ ಮಾಡಿಕೊಡುತ್ತಿತ್ತು. ಕಿಸಿಂಜರ್‌ರನ್ನು ನೋಡಿ ಹೊಟ್ಟೆ ಉರಿದು
ಕೊಳ್ಳುತ್ತಿದ್ದ ಕೆಲವರು ಅವರನ್ನು ‘ಕಿಸ್ಸಿಂಗ್‌ಹರ್ ಎಂದು ಕರೆಯುತ್ತಿದ್ದರು!

ಕಿಸಿಂಜರ್ ನಿಧಾನವಾಗಿ, ಅಷ್ಟೇ ನಿರ್ದಯವಾಗಿ, ಪ್ರಜಾಪ್ರಭುತ್ವವನ್ನು ಮೂಲೆಗೆ ತಳ್ಳಿದ್ದರು. ೧೯೭೩ರಲ್ಲಿ ಜನರಲ್ ಅಗಸ್ಟಿನೋ ಪಿನೋಚೆ ಕ್ಷಿಪ್ರಕ್ರಾಂತಿ ನಡೆಸಿ
ಚಿಲಿಯ ಚುನಾಯಿತ ನಾಯಕ ಸಾಲ್ವಡಾರ್ ಅಲೆಂಡೆ ಯನ್ನು ಹತ್ಯೆಗೈದಿದ್ದಕ್ಕಿಂತ ಒಳ್ಳೆಯ ಉದಾಹರಣೆ ಬೇಕಿಲ್ಲ. ಇಂದಿರಾ ಗಾಂಧಿಯೂ ಸೇರಿದಂತೆ ಬೇರೆ
ನಾಯಕರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಏನಾ ದರೂ ಕುತಂತ್ರಗಳನ್ನು ಹೆಣೆದರೆ ಅವರ ಮುಖದಲ್ಲಿ ಆತಂಕದ ಗೆರೆ ಎದ್ದು ಕಾಣುತ್ತಿತ್ತು. ಆದರೆ ಕಿಸಿಂಜರ್
ಹಾಗಿರಲಿಲ್ಲ. ಅವರು ಉನ್ನತ ವರ್ಗದ ಗಾಸಿಪ್‌ಗಳನ್ನು ಇಷ್ಟಪಡುತ್ತಿದ್ದರು.

ಬೌದ್ಧಿಕವಾಗಿ ಎತ್ತರದ ಸ್ಥಾನದಲ್ಲಿರುವವರಿಗೆ ಇಂತಹ ಗಾಸಿಪ್‌ಗಳನ್ನು ಅನುಭವಿಸಿ ಖುಷಿಪಡುವುದು ಆಜನ್ಮಸಿದ್ಧ ಹಕ್ಕು ಎಂದು ಅವರು ಭಾವಿಸಿದ್ದರು. ತನಗೆ
ಅನುಕೂಲವಾಗುವಂತಹ ಕಟ್ಟುಕತೆಗಳನ್ನು ಅವರೇ ಖುದ್ದಾಗಿ ಹೆಣೆದು ಹೊರಗೆ ಬಿಡುತ್ತಿದ್ದರು. ಅಂತಹ ಒಂದು ದಂತಕತೆಗಳಲ್ಲಿ ಕಿಸಿಂಜರ್ ಹಾಗೂ ಚೀನಾದ
ಅಧ್ಯಕ್ಷ ಮಾವೋ ಜೆಡಾಂಗ್ (ಅಥವಾ ಪ್ರಧಾನಿ ಜೌ ಎನ್‌ಲಾಯ್?) ನಡುವೆ ನಡೆದಿದ್ದು ಎನ್ನಲಾದ ಈ ಮಾತುಕತೆಯೂ ಒಂದು. ಒಮ್ಮೆ ಕಿಸಿಂಜರ್ ಅವರು
ಜೌ ಅಥವಾ ಮಾವೋ ಬಳಿ ಫ್ರೆಂಚ್ ಕ್ರಾಂತಿಯ ಬಗ್ಗೆ ಕೇಳಿದ್ದರಂತೆ. ಅದಕ್ಕೆ ಅವರು ನೀಡಿದ್ದ ಉತ್ತರ: ಈಗಲೇ ಹೇಳುವುದು ಕಷ್ಟ.

ನಾನೊಮ್ಮೆ ಕಿಸಿಂಜರ್ ಜೊತೆ ಅವರಿಗೆ ಬಹಳ ಇಷ್ಟ ವಾದ ನ್ಯೂಯಾರ್ಕ್ ಕ್ಲಬ್‌ನಲ್ಲಿ ಊಟಕ್ಕೆ ಹೋಗಿದ್ದೆ. ಬುದ್ಧಿಜೀವಿಗಳಿಗಿಂತ ಹೆಚ್ಚಾಗಿ ರಸಿಕರಿಗೆ ಹೊಂದುವ ಕ್ಲಬ್ ಅದು. ಆಗ ಈ ಚೀನಾ ಕತೆಯ ಬಗ್ಗೆ ಅವರ ಬಳಿಯೇ ಕೇಳಿದ್ದೆ. ಜೋರಾಗಿ ನಕ್ಕಿದ್ದರು. ಅವರ ಕಣ್ಣುಗಳು ಹೊಳೆಯುತ್ತಿದ್ದವು. ನಿಜ ವಾದರೂ ಇರಲಿ, ಕಟ್ಟುಕತೆ
ಯಾದರೂ ಇರಲಿ, ಈ ದಂತಕತೆ ಎಷ್ಟು ಅದ್ಭುತವಾಗಿದೆಯಲ್ಲವೇ? ಕಿಸಿಂಜರ್‌ಗೆ ನನ್ನ ಬಗ್ಗೆ ತಿಳಿದಿತ್ತು.

ನನ್ನ ಪುಸ್ತಕ ‘ದಿ ಶೇಡ್ ಆಫ್ ಸ್ವೋರ್ಡ್ಸ್: ಜಿಹಾದ್ ಅಂಡ್ ದಿ ಕಾನ್‌ಫ್ಲಿಕ್ಟ್ ಬಿಟ್ವೀನ್ ಇಸ್ಲಾಮ್ ಅಂಡ್ ಕ್ರಿಶ್ಚಿಯಾನಿಟಿ ಮೂಲಕ ನಾನವರಿಗೆ ಪರಿಚಿತ. ನಾವು ಭೇಟಿಯಾದಾಗ ‘ಮದೀನಾ ಪ್ರಶ್ನೆಗೆ ಉತ್ತರ ಏನು ಎಂದು ಕೇಳಿದ್ದರು. ಕ್ರಿಸ್ತಶಕ ೭೩೦ರ ಸಮಯದಲ್ಲಿ ಆವರೆಗೆ ಯಾರಿಗೂ ಅಷ್ಟಾಗಿ ಗೊತ್ತಿಲ್ಲದಿದ್ದ ಬೆಡೋಯಿನ್ ಬುಡಕಟ್ಟಿನ ಒಂದಷ್ಟು ಜನರು ಗುಂಪು ಕಟ್ಟಿಕೊಂಡು ಹೇಗೆ ಒಂದೇ ದಶಕದಲ್ಲಿ ಜಾಗತಿಕ ಇತಿಹಾಸದ ಅತಿದೊಡ್ಡ ಶಕ್ತಿಗಳಲ್ಲಿ ಒಂದಾಗಿ ಹೊರಹೊಮ್ಮಿದರು ಎಂಬುದೇ ‘ಮದೀನಾ ಪ್ರಶ್ನೆ.

ನಾನದಕ್ಕೆ ಇಬ್ನ್ ಖಲ್ದುನ್ ಅವರ ವಿವರಣೆ ನೀಡಿದ್ದೆ: ‘ಯಾವುದೇ ಬುಡಕಟ್ಟು ಅಥವಾ ಜನಾಂಗ ದಲ್ಲಿ ಒಂದು ಸಾಮೂಹಿಕ ಪ್ರeಯಿರುತ್ತದೆ ಅಂತಃ ಸ್ರೋತವಾಗಿ ಹರಿಯುತ್ತಿರುತ್ತದೆ. ಅದನ್ನು ಅಸಾಬಿಯಾ ಎಂದು ಕರೆಯುತ್ತಾರೆ. ಆ ಪ್ರಜ್ಞೆಯು ಸಮುದಾಯದೊಳಗಿರುವ ಸಣ್ಣಪುಟ್ಟ ಭಿನ್ನಮತಗಳನ್ನೆಲ್ಲ ಬದಿಗಿರಿಸಿ ದೊಡ್ಡ ಹಾಗೂ ಉದಾತ್ತ ಉದ್ದೇಶವೊಂದನ್ನು ಈಡೇರಿಸಿಕೊಳ್ಳಲು ಸದಾ ಪ್ರೇರೇಪಿಸುತ್ತದೆ. ಇದರ ಬಗ್ಗೆ ಇನ್ನಷ್ಟು ಮಾತಾಡಬೇಕು ಎಂಬ ಭರವಸೆಯೊಂದಿಗೆ ಆವತ್ತಿನ ಮಾತುಕತೆ ಮುಗಿದಿತ್ತು. ನಂತರ ನಾನು ನನ್ನ ಕುಟುಂಬದ ಬಗ್ಗೆ ಬರೆದ ‘ಬ್ಲಡ್ ಬ್ರದರ್ಸ್ ಪುಸ್ತಕಕ್ಕೆ ಸುಂದರವಾದ ಬ್ಲರ್ಬ್ ಬರೆದು ಕೊಡುವಷ್ಟು ಔದಾರ್ಯವನ್ನು ಕಿಸಿಂಜರ್ ತೋರಿದ್ದರು. ಸಹಜ ವಾಗಿಯೇ ನಂತರದ ಆವೃತ್ತಿಗಳಲ್ಲಿ ಅದನ್ನು ಮುಖ ಪುಟದಲ್ಲಿ ಬಳಸಿಕೊಂಡಿದ್ದೆವು.

ಆದರೆ ಮುಂದಿನ ಪುಸ್ತಕ ‘ಟಿಂಡರ್‌ಬಾಕ್ಸ್: ದಿ ಪಾಸ್ಟ್ ಅಂಡ್ ಫ್ಯೂಚರ್ ಆಫ್ ಪಾಕಿಸ್ತಾನ್ ಬಗ್ಗೆ ಏನಾದರೂ ಬರೆದುಕೊಡುವುದಕ್ಕೆ ಅವರು ಸಾರಾಸಗಟಾಗಿ ನಿರಾಕರಿಸಿದ್ದರು. ಬಹುಶಃ ಅದೊಂದು ಕೆಟ್ಟ ಪುಸ್ತಕ ಎಂದು ಅವರಿಗೆ ಅನ್ನಿಸಿರಬಹುದು. ಅಥವಾ ಪಾಕಿಸ್ತಾನದ ಬಗ್ಗೆ ಏಕಪಕ್ಷೀಯ ದೃಷ್ಟಿಕೋನದಿಂದ ಬರೆದ ಪುಸ್ತಕವೊಂದಕ್ಕೆ ತಾನು ಏನಾದರೂ ಬರೆದರೆ ಅದರಲ್ಲಿರುವ ವಿಷಯಗಳನ್ನು ಒಪ್ಪಿ ಕೊಂಡಂತಾಗುತ್ತದೆ ಎಂದು ಭಾವಿಸಿದ್ದರೋ ಏನೋ. ಇಂಡಿಯಾ ಟುಡೇ ಶೃಂಗದಲ್ಲಿ ನನ್ನ ಜೊತೆ ಡಾ. ಕಿಸಿಂಜರ್ ವೇದಿಕೆ ಹಂಚಿಕೊಂಡಾಗ ಅವರಿಗೆ ಹೆಚ್ಚು ಕಮ್ಮಿ ೯೦ ವರ್ಷವಾಗಿತ್ತು. ಬಹುಶಃ ಅರುಣ್ ಪುರಿಯವರ ಚೆಕ್‌ಬುಕ್
ನೋಡಿ ಆ ಕಾರ್ಯಕ್ರಮಕ್ಕೆ ಅವರು ಬಂದಿದ್ದರು. ವೇದಿಕೆಯಿಂದ ಅವರೇನೋ ಆಸಕ್ತಿಕರವಾದದ್ದನ್ನು ಹೇಳುತ್ತಿದ್ದಾರೆಂದು ಪ್ರೇಕ್ಷಕರಿಗೆ ತಿಳಿಯುತ್ತಿದ್ದರೂ ಆಳವಾದ ವೃದ್ಧ ಧ್ವನಿಯಲ್ಲಿ ಶಬ್ದಗಳು ಕಳೆದುಹೋಗಿ ಏನು ಹೇಳಿದ್ದಾರೆಂಬುದು ಸರಿಯಾಗಿ ಅರ್ಥವಾಗಿದ್ದು ಕೆಲವೇ ಕೆಲವರಿಗೆ ಮಾತ್ರ.

ಕಿಸಿಂಜರ್ ಅವರ ಬಹುದೊಡ್ಡ ಎರಡು ಸಾಧನೆ ಗಳೆಂದರೆ ೧೯೭೦ರಲ್ಲಿ ಅಮೆರಿಕ ಹಾಗೂ ಚೀನಾ ನಡುವಿನ ವೈಷಮ್ಯವನ್ನು ಕಡಿಮೆ ಮಾಡಿದ್ದು ಹಾಗೂ ೧೯೭೩ರಲ್ಲಿ ಯೋಮ್ ಕಿಪ್ಪರ್ ಯುದ್ಧವನ್ನು ಕೊನೆಗಾಣಿಸಲು ಒಪ್ಪಂದವೊಂದನ್ನು ರೂಪಿಸಿ ಅದು ಜಾರಿಗೆ ಬರುವಂತೆ ನೋಡಿಕೊಂಡಿದ್ದು. ಐದು ದಶಕಗಳ ಸಂಘರ್ಷವನ್ನು ಈ ಎರಡು ಸಾಧನೆಗಳು ತಣ್ಣಗಾಗಿಸಿದ್ದವು. ಇನ್ನು, ವಿಯೆಟ್ನಾಮ್‌ನ ಲಿ ಡುಕ್ ದೋ ಜೊತೆ ಪ್ಯಾರಿಸ್‌ನಲ್ಲಿ ನಡೆಸಿದ ಶಾಂತಿ ಮಾತುಕತೆಗಾಗಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಿರುವುದು ಯೋಗ್ಯವೇ? ಗೊತ್ತಿಲ್ಲ. ಆ ಮಾತುಕತೆಗೆ ತಕ್ಕಂತೆ ತಾಳ ಹಾಕಲು ದೋನಿರಾಕರಿಸಿದ್ದರು. ಕಿಸಿಂಜರ್‌ಗೆ ಪ್ರಶಸ್ತಿ ಹಾಗೂ ಅದರ ಜೊತೆಗೆ ಬಂದ ಹಣ ಬಹಳ ಖುಷಿ ಕೊಟ್ಟಿತ್ತು. ಆದರೆ ಬಾಂಬ್ ದಾಳಿ ನಿಲ್ಲಲಿಲ್ಲ.

ವಿಯೆಟ್ನಾಂನಲ್ಲಿ ಸತ್ತ ಅಮೆರಿಕನ್ ಯೋಧರ ಪೈಕಿ ಅರ್ಧಕ್ಕಿಂತ ಹೆಚ್ಚು ಮಂದಿ ಸತ್ತಿದ್ದು ವಾಷಿಂಗ್ಟನ್‌ನಲ್ಲಿ ಕಿಸಿಂಜರ್ ಅಧಿಕಾರದಲ್ಲಿದ್ದಾಗ. ಕ್ರಮೇಣ ಅಮೆರಿಕವು ವಿಯೆಟ್ನಾಂ ಬಿಟ್ಟು ಓಡಿಹೋಯಿತು. ಕೆಲವು ಉಪದ್ವ್ಯಾಪಿಗಳು ಹಾಗೂ ದಕ್ಷಿಣ ವಿಯೆಟ್ನಾಂನಲ್ಲಿ ಅಮೆರಿಕ ಸುರಿದು ಹೋದ ಮದ್ದುಗುಂಡುಗಳು ಯುದ್ಧ ಮುಂದುವ
ರೆಸಿದವು. ಶತ್ರುಗಳಾಗಿದ್ದ ವಿಯೆಟ್ನಾಂ ಮತ್ತು ಅಮೆರಿಕ ಕ್ರಮೇಣ ಸ್ನೇಹಿತರಾಗಿ ಬದಲಾ ಗಿದ್ದನ್ನು ನೋಡಲು ಕಿಸಿಂಜರ್ ಬದುಕಿದ್ದರು. ಜಾಗತಿಕ ರಾಜಕಾರಣ ದಲ್ಲಿ ಹೆನ್ರಿ ಕಿಸಿಂಜರ್ ಎಷ್ಟು ಸೋಲುಗಳನ್ನುಕಂಡಿದ್ದಾರೋ ಅಷ್ಟೇ ಗೆಲುವುಗಳನ್ನೂ ಸಾಧಿಸಿದ್ದಾರೆ.

(ಲೇಖಕರು ಹಿರಿಯ ಪತ್ರಕರ್ತರು)