ವೀಕೆಂಡ್ ವಿತ್ ಮೋಹನ್
camohanbn@gmail.com
ಬ್ರಿಟಿಷರು ಜಾತಿಗಳ ಆಧಾರದ ಮೇಲೆ ಹಿಂದೂ ಸಮಾಜವನ್ನು ಒಡೆದು ಅಳುವ ನೀತಿಯನ್ನು ಅಚ್ಚುಕಟ್ಟಾಗಿ ಅನುಸರಿಸಿದ್ದರು. ಅಲ್ಪಸಂಖ್ಯಾತರಾಗಿದ್ದ ಮುಸಲ್ಮಾನರನ್ನು ಜಾತಿಗಳ ಆಧಾರದ ಮೇಲೆ ಒಡೆಯಲು ಸಾಧ್ಯವಿಲ್ಲವೆಂಬ ಸತ್ಯ ಅವರಿಗೆ ತಿಳಿದಿತ್ತು. ಹಿಂದೂಗಳನ್ನು ಜಾತಿಗಳ ಆಧಾರದ ಮೇಲೆ ವರ್ಗೀಕರಿಸಿ, ಒಬ್ಬರ ಮೇಲೊಬ್ಬರನ್ನು ಎತ್ತಿಕಟ್ಟಿದರೆ ಭಾರತವನ್ನು ಅಳುವುದು ಸುಲಭವೆಂಬ ಸಾಮಾನ್ಯ ಜ್ಞಾನ ಅವರಲ್ಲಿತ್ತು.
ಹಿಂದೂ ಸಮಾಜದಲ್ಲಿ ಶೋಷಣೆಗೊಳಗಾದವರನ್ನು ಕ್ರಿಶ್ಚಿಯನ್ ಧರ್ಮದೆಡೆಗೆ ಮತಾಂತರದ ಮೂಲಕ ಸೆಳೆದು, ಪಾಶ್ಚಿಮಾತ್ಯ ರಾಷ್ಟ್ರಗಳ ಮೂಲ ಉದ್ದೇಶ ವನ್ನು ಭಾರತದಲ್ಲಿ ತಕ್ಕಮಟ್ಟಿಗೆ ಈಡೇರಿಸುವಲ್ಲಿ ಯಶಸ್ವಿಯಾಗಿದ್ದರು. ಬ್ರಿಟಿಷರ ಕುತಂತ್ರಕ್ಕೆ ಹೆಚ್ಚು ಹಾನಿಗೊಳಗಾದ ರಾಜ್ಯ ತಮಿಳುನಾಡು. ಸುಮಾರು ನೂರು ವರ್ಷಗಳ ಕಾಲ ಅಲ್ಲಿನ ಹಿಂದೂ ಸಮಾಜದಲ್ಲಿದ್ದಂಥ ಅಸಮಾನತೆಗಳನ್ನು ಬಳಸಿಕೊಂಡು ಕ್ರಿಶ್ಚಿಯನ್ ಮಿಷನರಿಗಳು ಮತಾಂತರದ ಪರ್ವವನ್ನೇ ನಡೆಸಿದ್ದರು.
ಚೋಳರು, ಪಾಂಡ್ಯರು ಕಟ್ಟಿಸಿದ್ದ ಬೃಹತ್ ಹಿಂದೂ ದೇವಾಲಯಗಳಿಗೆ ಸ್ಥಳೀಯರು ಕಾಲಿಡದಂತೆ ಮಾಡಿಬಿಟ್ಟರು. ಕ್ರಿಶ್ಚಿಯನ್ನರ ಆಕ್ರಮಣದ ಮುಂದುವರಿದ ಭಾಗವಾಗಿ ಪೆರಿಯಾರ್ ಅವರು ದ್ರಾವಿಡ ಚಳವಳಿಯ ಮೂಲಕ ಹಿಂದೂ ಧರ್ಮಕ್ಕೆ ಮತ್ತಷ್ಟು ಹಾನಿ ಮಾಡಿಬಿಟ್ಟರು. ಬ್ರಿಟಿಷರು ಭಾರತವನ್ನು ಉತ್ತರ ಮತ್ತು ದಕ್ಷಿಣವೆಂದು ಒಡೆಯಲು ಹುಟ್ಟುಹಾಕಿದ್ದ ಸುಳ್ಳು ದ್ರಾವಿಡ ಸಿದ್ಧಾಂತವನ್ನೇ ಬಳಸಿಕೊಂಡ ಪೆರಿಯಾರ್, ಆರ್ಯ ಮತ್ತು ದ್ರಾವಿಡರೆಂಬ ಸುಳ್ಳು ವಾದಕ್ಕೆ ಮತ್ತಷ್ಟು
ಪುಷ್ಟಿ ನೀಡಿದರು. ಪೆರಿಯಾರ್ ನಡೆಸಿದ ಚಳವಳಿಯ ಮೂಲಕ ಮುನ್ನೆಲೆಗೆ ಬಂದ ದ್ರಾವಿಡ ರಾಜಕೀಯ ಪಕ್ಷಗಳು ಇಂದಿಗೂ ತಮಿಳುನಾಡಿನಲ್ಲಿ ಉತ್ತರ ಮತ್ತು ದಕ್ಷಿಣವೆಂಬ, ಭಾರತವನ್ನು ಒಡೆಯುವ ಸಿದ್ಧಾಂತವನ್ನೇ ಮುನ್ನೆಲೆಗೆ ತಂದು ಚುನಾವಣೆಗೆ ಸಜ್ಜಾಗುತ್ತವೆ.
ಉದಯನಿಧಿ ಸ್ಟಾಲಿನ್ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಸ್ಥಾನ ಉಳಿಸಿಕೊಳ್ಳಲು ಹಿಂದೂ ಧರ್ಮವನ್ನು ರೋಗಕ್ಕೆ ಹೋಲಿಸಿದ್ದ. ಆತ ಹೇಳಿ
ದ್ದನ್ನು ಸಮರ್ಥಿಸಿಕೊಳ್ಳಲು ಡಿಎಂಕೆ ಪಕ್ಷದ ನಾಯಕರು ಬೀದಿಗಿಳಿದಿದ್ದರು. ತಮಿಳುನಾಡಿನ ದ್ರಾವಿಡ ಪಕ್ಷಗಳು ಒಂದೆಡೆ ಹಿಂದೂ ಧರ್ಮವನ್ನು ಅವಹೇಳನ ಮಾಡಿ ರಾಜಕೀಯ ಮಾಡಿದರೆ, ಮತ್ತೊಂದೆಡೆ ಹಿಂದಿ ಹೇರಿಕೆಯ ವಿಷಯ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತವೆ. ಕರುಣಾನಿಧಿ ಮಗಳು ಕನಿಮೋಳಿ ಸಣ್ಣ ಸಣ್ಣ ವಿಷಯವನ್ನೂ ಹಿಂದಿ ಹೇರಿಕೆಯ ರಾಜಕೀಯಕ್ಕೆ ಲಿಂಕ್ ಮಾಡುತ್ತಾರೆ.
ತಮಿಳುನಾಡಿನಲ್ಲಿ ಚುನಾವಣೆಯ ಸಂದರ್ಭದಲ್ಲಿ ಅಭಿವೃದ್ಧಿಯ ಚರ್ಚೆಗಳು ಮುನ್ನೆಲೆಗೆ ಬರುವುದೇ ಇಲ್ಲ. ೨೦೨೪ರ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಹಿಂದೂಗಳ ಅವಹೇಳನ ಮತ್ತು ಹಿಂದಿ ರಾಜಕೀಯ ಮತ್ತೊಮ್ಮೆ ಮುನ್ನೆಲೆಗೆ ಬರುತ್ತವೆ. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ
ಹಿಂದಿ ಹೇರಿಕೆ ಕಾಣುವ ದ್ರಾವಿಡ ಪಕ್ಷಗಳಿಗೆ, ಸ್ವತಃ ಮಹಾತ್ಮ ಗಾಂಧಿಯವರೇ ದೇಶದಲ್ಲಿ ಹಿಂದಿಯನ್ನು ಪ್ರಚಾರಗೊಳಿಸಲು ನಡೆಸಿದ್ದಂಥ ಪ್ರಯತ್ನಗಳು ಕಾಣುವುದಿಲ್ಲ.
ಬ್ರಿಟಿಷರು ನಡೆಸುತ್ತಿದ್ದ ‘ನೇಮಕಾತಿ ಅಭಿಯಾನ’ದ ಬಗ್ಗೆ ಗಾಂಧಿಯವರು ಮಾತನಾಡುವ ಸಂದರ್ಭದಲ್ಲಿ, ಯುದ್ಧದ ವೇಳೆ ಭಾರತೀಯರನ್ನು ಬ್ರಿಟಿಷ್ ಸೈನ್ಯಕ್ಕೆ ಸೇರಿಸಿಕೊಳ್ಳುವ ನಿರ್ಣಯವೊಂದರ ಬಗ್ಗೆ ಚರ್ಚೆಯಾಗುತ್ತದೆ. ಸಭೆಯನ್ನುದ್ದೇಶಿಸಿ ಗಾಂಧಿಯವರು ಹಿಂದಿಯಲ್ಲಿ ಮಾತನಾಡುತ್ತಾರೆ. ಅಲ್ಲಿ ನೆರೆದಿದ್ದವರು ಮೊಟ್ಟಮೊದಲ ಬಾರಿಗೆ ಬ್ರಿಟಿಷರ ಅಧಿಕೃತ ಸಭೆಯೊಂದರಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ಗಾಂಧಿಯವರನ್ನು ಅಭಿನಂದಿಸುತ್ತಾರೆ. ಭಾರತದ ಭಾಯನ್ನು ಬ್ರಿಟಿಷರ ಸಭೆಯೊಂದರಲ್ಲಿ ಮೊದಲ ಬಾರಿಗೆ ಮಾತನಾಡಲು ಇಷ್ಟು ವರ್ಷಗಳು ಬೇಕಾಯಿತಲ್ಲವೆಂದು ಗಾಂಧಿಯವರಿಗೆ ನೋವಾಗುತ್ತದೆ. ಅವರು ತಮ್ಮ ಆತ್ಮಕಥನದ ೩೬ನೆಯ ಅಧ್ಯಾಯವಾದ ‘ಗೋವುಗಳ ಸಂರಕ್ಷಣೆಯ ವಿರುದ್ಧ ಖಿಲಾಫತ್’ನಲ್ಲಿ, ತಾವು ಮುಸಲ್ಮಾನರ ಸಭೆಯೊಂದ ರಲ್ಲಿ ಭಾಷಣ ಮಾಡಿದ ಘಟನೆಯ ಬಗ್ಗೆ ಹೇಳಿದ್ದಾರೆ.
ಹಾಗೆ ಮಾತನಾಡುವಾಗ ಹಿಂದಿ ಭಾಷೆಯ ಸಂಪೂರ್ಣ ಅರಿವಿಲ್ಲದೆ ಅರ್ಧಂಬರ್ಧ ಹಿಂದಿಯಲ್ಲಿ ಮಾತನಾಡಿದ್ದರ ಬಗ್ಗೆ, ಆದರೂ ಸಭೆಯನ್ನು ಸಂಪೂರ್ಣ ಹತೋ ಟಿಗೆ ತೆಗೆದುಕೊಂಡಿದ್ದರ ಬಗ್ಗೆ ಉಲ್ಲೇಖಿಸಿದ್ದಾರೆ. ತಾವು ಇಂಗ್ಲಿಷ್ನಲ್ಲಿ ಮಾತನಾಡಿದ್ದರೆ ಸಭೆಯಲ್ಲಿ ಚರ್ಚೆಯಾದ ವಿಷಯಗಳು ದೊಡ್ಡ ಮಟ್ಟದಲ್ಲಿ ನೆರೆದಿದ್ದವರಿಗೆ ತಲುಪುತ್ತಿರಲಿಲ್ಲವೆಂದು ಗಾಂಧಿ ಹೇಳಿದ್ದಾರೆ. ತಾವು ಸಭೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ್ದು ಎಷ್ಟರ ಮಟ್ಟಿಗೆ ಉಪಯೋಗಕ್ಕೆ ಬಂದಿತೆಂಬು ದನ್ನು ಹಾಗೂ ಸಭೆಯ ನಂತರ ಹಿಂದಿ ಮಾತ್ರವೇ ರಾಷ್ಟ್ರೀಯ ಭಾಷೆಯಾಗಬಲ್ಲುದೆಂಬ ಸುಸ್ಪಷ್ಟ ಚಿತ್ರಣ ತಮಗೆ ಸಿಕ್ಕಿತೆಂಬುದನ್ನು ಹೇಳಿದ್ದಾರೆ.
ಗಾಂಧಿಯವರೇ ಇಷ್ಟೊಂದು ಕರಾರುವಾಕ್ಕಾಗಿ ಹೇಳಿರುವಾಗ, ಅವರ ಹೆಸರಿನಲ್ಲಿ ರಾಜಕೀಯ ಮಾಡುವ ದ್ರಾವಿಡ ಪಕ್ಷಗಳು ಮಾತ್ರ ಹಿಂದಿ ಹೇರಿಕೆಯೆಂಬ ನಾಟಕವನ್ನಾಡುತ್ತಿರುತ್ತವೆ. ಹಿಂದಿ ಭಾಷೆಯನ್ನು ದಕ್ಷಿಣ ಭಾರತದಲ್ಲಿ ಪ್ರಚುರ ಪಡಿಸಲು ೧೯೧೮ರಲ್ಲಿ ಗಾಂಧಿಯವರು ಹಿಂದಿ ಕಲಿಕಾ ಸಂಸ್ಥೆಯೊಂದನ್ನು ಸ್ಥಾಪಿಸುವತ್ತ ಆಲೋಚಿಸಿದ್ದರು. ಮಧ್ಯಪ್ರದೇಶದ ಇಂದೋರಿನಲ್ಲಿ ನಡೆದ ಹಿಂದಿ ಸಾಹಿತ್ಯ ಸಮ್ಮೇಳನದಲ್ಲಿ ಗಾಂಧಿಯವರಿಗೆ ಇದು ಹೊಳೆದಿತ್ತು. ಸಮ್ಮೇಳನ ನಡೆದ ಕೆಲವೇ ತಿಂಗಳಲ್ಲಿ ಮದ್ರಾಸಿನಲ್ಲಿ ’ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ’ ಆರಂಭವಾಯಿತು. ೧೯೧೮ರಿಂದ ೧೯೪೮ರ ವರೆಗೆ ಗಾಂಧಿಯವರು ಇದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಗಾಂಧಿಯವರು ದಕ್ಷಿಣದ ರಾಜ್ಯಗಳಲ್ಲಿನ ಸ್ವಯಂ ಸೇವಕರನ್ನು ಗುರುತಿಸಿ ಹಿಂದಿ ಕಲಿಕೆಗಾಗಿ ವಾರಾಣಸಿಗೆ ಕಳುಹಿಸಿದ್ದರು. ತಮ್ಮ ಮಗ ದೇವದಾಸ್ನನ್ನು ಮದ್ರಾಸಿಗೆ ಕರೆಸಿ ಹಿಂದಿ ಪ್ರಚಾರ ಸಭಾದ ಮೊದಲ ಪ್ರಚಾರಕನ್ನಾಗಿಸಿದ್ದರು.
ಮಾತುಮಾತಿಗೂ ‘ಗಾಂಽ ತತ್ತ್ವ’ವೆಂದು ರಾಜಕೀಯ ಮಾಡುವ ದ್ರಾವಿಡ ಪಕ್ಷಗಳು ಗಾಂಧಿಯವರು ತಮ್ಮ ಮಗನನ್ನೇ ಹಿಂದಿ ಭಾಷೆಯ ಪ್ರಚಾರಕನನ್ನಾಗಿಸಿ ದಕ್ಷಿಣ ಭಾರತಕ್ಕೆ ಕಳುಹಿಸಿದ್ದರ ಬಗ್ಗೆ ಜಾಣಮೌನ ಪ್ರದರ್ಶಿಸುತ್ತವೆ. ಹಾಗಾದರೆ ಗಾಂಧಿಯವರೂ ಹಿಂದಿ ಭಾಷೆಯನ್ನು ಹೇರಿಕೆ ಮಾಡಿದ್ದಾರೆಂದಾಗುತ್ತದೆ ಯಲ್ಲವೇ? ೧೯೩೬ರಲ್ಲಿ ಗಾಂಧಿಯವರು ‘ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ’ದ ೪ ನೂತನ ಶಾಖೆಗಳನ್ನು ಕನ್ನಡ, ಮಲಯಾಳಂ, ತೆಲುಗು ಹಾಗು ತಮಿಳು ಭಾಷಿಕ ಸ್ಥಳಗಳಲ್ಲಿ ಸ್ಥಾಪಿಸಿದರು. ದಕ್ಷಿಣ ಭಾರತದ ಪ್ರತಿಯೊಂದು ರಾಜ್ಯದಲ್ಲೂ ಹಿಂದಿ ಭಾಷೆಯನ್ನು ಪ್ರಚುರ ಪಡಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು. ಈ ಸಭಾದಲ್ಲಿ ಪ್ರಸ್ತುತ ೮೩,೭೯೫ ಜನ ಪ್ರಚಾರಕರಾಗಿ ದಕ್ಷಿಣ ಭಾರತ ದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕುತೂಹಲಕಾರಿ ಅಂಶವೆಂದರೆ ತಮಿಳುನಾಡಿನಿಂದಲೇ ೪೩,೦೦೦ಕ್ಕೂ ಅಧಿಕ ಮಂದಿ ಪ್ರಚಾರಕರಾಗಿ ಸೇವೆ ನಿರ್ವಹಿಸುತ್ತಿದ್ದಾರೆ. ಮಾತುಮಾತಿಗೂ ಹಿಂದಿಯನ್ನು ಅಡ್ಡ ತಂದು ಮೋದಿಯವರ ವಿರುದ್ಧ ರಾಜಕೀಯ ಮಾಡುವ ತಮಿಳುನಾಡಿನ ರಾಜಕೀಯ ನಾಯ ಕರು ತಮ್ಮ ರಾಜ್ಯದಲ್ಲಿರುವ ಹಿಂದಿ ಪ್ರಚಾರಕ ರನ್ನೊಮ್ಮೆ ಭೇಟಿ ಮಾಡಿದರೆ ತಲೆ ನೆಟ್ಟಗಾಗಬಹುದು. ಹಿಂದಿ ಭಾಷೆ ಯೆಡೆಗಿನ ಗಾಂಧಿಯವರ ಆಲೋಚನೆಗಳಿಗೆ ಮಸಿ ಬಳಿ ಯುವ ಕೆಲಸವನ್ನು ತಮಿಳು ನಾಡಿನ ನಾಯಕರು ಮಾಡುತ್ತಲೇ ಬಂದಿದ್ದಾರೆ.
ಗಾಂಧಿಯವರು ೧೯೩೫ರಲ್ಲಿ ಮಧ್ಯಪ್ರದೇಶದ ಇಂದೋರಿನಲ್ಲಿ ನಡೆದ ಹಿಂದಿ ಸಾಹಿತ್ಯ ಸಮ್ಮೇಳನದಲ್ಲಿ ‘ಭಾರತದ ಪ್ರತಿಯೊಬ್ಬರೂ ಹಿಂದಿಯನ್ನು ಕಲಿತರೆ ಪ್ರಾಂತ್ಯಗಳ ನಡುವಣ ಸಂವಹನ ಸುಲಭವಾಗುತ್ತದೆ. ಹಿಂದಿಯನ್ನು ನಾವು ರಾಷ್ಟ್ರಭಾಷೆಯನ್ನಾಗಿಸುವ ನಿಟ್ಟಿನಲ್ಲಿ ಯೋಚಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಹಿಂದಿಯು, ಇಂಗ್ಲಿಷ್ ಭಾಷೆಯ ಸ್ಥಾನವನ್ನು ಬದಲಾಯಿಸಿದರೆ ಉತ್ತಮ’ ಎಂದು ಹೇಳಿದ್ದರು. ಇಂಗ್ಲಿಷ್ ಭಾಷೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಶ್ಚಿ ಮಾತ್ಯರೊಂದಿಗಿನ ಸಂವಹನ ಪ್ರಕ್ರಿಯೆಯಲ್ಲಿ ಬಹಳಷ್ಟು ಉಪಯೋಗಕ್ಕೆ ಬರುವುದು ನಿಜ.
ಹಾಗಂತ ವಿದೇಶಿ ಭಾಷೆಯೊಂದು ಭಾರತದ ಸಂಪೂರ್ಣ ಸಂವಹನ ಭಾಷೆಯಾಗುವುದು ಗಾಂಧಿಯವರಿಗೆ ಇಷ್ಟವಿರಲಿಲ್ಲ. ಅವರು ತಮ್ಮ ‘ಹರಿಜನ್’ ಪತ್ರಿಕೆ ಯಲ್ಲೂ ಈ ವಿಷಯವನ್ನು ಆಗಾಗ ಹೇಳುತ್ತಿದ್ದರು. ೧೦.೦೯.೧೯೩೮ರಲ್ಲಿ ‘ಹರಿಜನ್’ನಲ್ಲಿ ಪ್ರಕಟವಾದ ಲೇಖನದಲ್ಲಿ ಗಾಂಧಿಯವರು ಹಿಂದಿ ಭಾಷಾ ಕಲಿಕೆ ಯನ್ನು ಕಡ್ಡಾಯ ಮಾಡಿದರೆ ತಪ್ಪಿಲ್ಲವೆಂದು ಹೇಳಿದ್ದರು. ‘ನಾವೆಲ್ಲರೂ ಪ್ರಾಂತೀಯ ಚಿತ್ತಸ್ಥಿತಿಯಿಂದ ಹೊರ ಬಂದು ಒಂದು ದೇಶವೆಂಬ ಕಲ್ಪನೆಯನ್ನು ಅನುಷ್ಠಾನ ಗೊಳಿಸಬೇಕಾದರೆ ಪೋಷಕರು ಪ್ರತಿನಿತ್ಯ ತಮ್ಮ ಮಕ್ಕಳಿಗೆ ಒಂದು ಗಂಟೆ ಕಾಲ ಹಿಂದಿ ಭಾಷೆಯನ್ನು ಕಲಿಸುವುದರೆಡೆಗೆ ವ್ಯಯಿಸಿದರೆ ತಪ್ಪಿಲ್ಲ. ಹಿಂದಿ ಕಲಿಕೆಯ ವಿರುದ್ಧ ಮಾತನಾಡುವವರು ತಮ್ಮ ಮಾತೃಭಾಷೆ ಅಪಾಯದಲ್ಲಿದೆಯೆಂದರೆ ಅವರಿಗೆ ಜ್ಞಾನದ ಅವಶ್ಯಕತೆ ಇದೆ ಅಥವಾ ಬೂಟಾಟಿಕೆಯಿಂದಾಗಿ ಹೇಳುತ್ತಿರ ಬಹುದಷ್ಟೆ’ ಎಂಬ ಮಾತನ್ನು ಗಾಂಧಿ ಹೇಳಿದ್ದರು.
ಕಾಂಗ್ರೆಸ್ ಪಕ್ಷದ ಜತೆ ಕೈಜೋಡಿಸಿ ಹಿಂದಿ ಹೇರಿಕೆಯೆಂಬ ರಾಜಕೀಯ ನಡೆಸುತ್ತಿವೆ ದ್ರಾವಿಡ ಪಕ್ಷಗಳು. ಇವು ಬೆಂಬಲ ನೀಡುತ್ತಾ ಬಂದಿರುವ ಕಾಂಗ್ರೆಸ್ನ ಅಧಿಕಾರಾವಧಿಯಲ್ಲಿ ನಮ್ಮ ಮುತ್ತಾತ, ತಾತ, ಅಪ್ಪ ಮತ್ತು ನಾವುಗಳು ತ್ರಿಭಾಷಾ ಸೂತ್ರದಡಿಯಲ್ಲಿ ಹಿಂದಿಯನ್ನು ಕಲಿತಿದ್ದೆವು. ೧೯೪೮-೪೯ರಲ್ಲಿ ಶಿಕ್ಷಣ ಆಯೋಗವು ಮೂರು-ಭಾಷಾ ನೀತಿಗೆ ಮೊದಲ ಶಿಫಾರಸು ಮಾಡಿತು. ಇದು ಮೂರು ಭಾಷೆಗಳನ್ನು ಅಧ್ಯಯನ ಮಾಡುವ ಅಗತ್ಯವನ್ನು ಹೇಳಿತ್ತು. ಹಿಂದಿ ಸ್ವತಃ
ಅಲ್ಪಸಂಖ್ಯಾತ ಭಾಷೆಯಾಗಿದ್ದು, ಕನ್ನಡ, ತೆಲುಗು, ತಮಿಳು, ಮರಾಠಿ, ಬಂಗಾಳಿ, ಪಂಜಾಬಿ, ಮಲಯಾಳಂ, ಅಸ್ಸಾಮಿ ಮತ್ತು ಗುಜರಾತಿ ಭಾಷೆಗಳು ಸುದೀರ್ಘ ಇತಿಹಾಸ ಮತ್ತು ಹೆಚ್ಚಿನ ಸಾಹಿತ್ಯವನ್ನು ಹೊಂದಿದ್ದವು. ಪ್ರತಿ ಭಾರತೀಯ ರಾಜ್ಯವು ಒಕ್ಕೂಟ ವ್ಯವಸ್ಥೆಯ ಕಾರ್ಯಗಳಲ್ಲಿ ಭಾಗವಹಿಸುವ ವಿಧಾನವಾಗಿ ಅಂತಿಮವಾಗಿ ಆಯೋಗವು ಇಂಗ್ಲಿಷ್ ಬದಲಿಗೆ ಹಿಂದಿಯನ್ನು ಸಂವಹನ ಭಾಷೆಯನ್ನಾಗಿ ಸೂಚಿಸಿತ್ತು.
೧೯೬೪-೧೯೬೬ರ ಶಿಕ್ಷಣ ಆಯೋಗವು ಮಾರ್ಪಡಿಸಿದ ಮೂರು ಭಾಷಾ ಸೂತ್ರವನ್ನು ಶಿಫಾರಸು ಮಾಡಿತು. ಕೆಲವು ಚರ್ಚೆಯ ನಂತರ, ಮೂಲ ತ್ರಿಭಾಷಾ ಸೂತ್ರವನ್ನು ೧೯೬೮ ರಲ್ಲಿ ಕಾಂಗ್ರೆಸ್ ನೇತೃತ್ವದ ಭಾರತದ ಸಂಸತ್ತು ಅಂಗೀಕರಿಸಿತ್ತು. ಹಿಂದಿ ಭಾಷಿಕ ರಾಜ್ಯಗಳಲ್ಲಿ ಹಿಂದಿ, ಇಂಗ್ಲಿಷ್ ಮತ್ತು ಆಧುನಿಕ ಭಾರತೀಯ ಭಾಷೆ ಮತ್ತು ಹಿಂದಿಯೇತರ ಭಾಷಿಕ ರಾಜ್ಯಗಳಲ್ಲಿ ಹಿಂದಿ, ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಯ ಅಧ್ಯಯನಕ್ಕೆ ಸೂಚಿಸಲಾಗಿತ್ತು. ಕರ್ನಾಟಕ ಮತ್ತು ತಮಿಳು ನಾಡಿನಂಥ ದಕ್ಷಿಣದ ಹಿಂದಿಯೇತರ ರಾಜ್ಯಗಳ ಬೇಡಿಕೆಗಳಿಗೆ ಪ್ರತಿಕ್ರಿಯೆಯಾಗಿ ಈ ಸೂತ್ರವನ್ನು ರೂಪಿಸಲಾಗಿತ್ತು. ನಂತರ ಬಂದ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ ೧೯೮೬ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿಯೂ ೧೯೬೮ರ ಸೂತ್ರ ವನ್ನೇ ಪುನರುಚ್ಚರಿಸಿತು.
ಬ್ರಿಟಿಷರು ಭಾರತದಿಂದ ನಿರ್ಗಮಿಸಿದ ೭ ದಶಕಗಳ ನಂತರವೂ, ಅವರ ‘ಒಡೆದು ಅಳುವ ನೀತಿ’ಯನ್ನು ಕೆಲವು ಲಜ್ಜೆಗೆಟ್ಟ ರಾಜಕೀಯ ಪಕ್ಷಗಳು ಸ್ವಾರ್ಥದ ಸಲುವಾಗಿ ಇಂದಿಗೂ ಅನುಸರಿಸುತ್ತಲೇ ಬರುತ್ತಿರುವುದು ದುರದೃಷ್ಟಕರ ಸಂಗತಿ. ೨ಜಿ ತರಂಗಾಂತರಗಳ ಹರಾಜಿನಲ್ಲಿ ಜನರ ಸಾವಿರಾರು ಕೋಟಿ ರು. ತೆರಿಗೆ ಹಣವನ್ನು ಲೂಟಿ ಮಾಡಿರುವ ಕನಿಮೋಳಿ, ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗಳಿಗೆ ಬೇಕಂತಲೇ ತಮಿಳಿನಲ್ಲಿ ಉತ್ತರಿಸಿ ಜನರ ಅನುಕಂಪ ಗಿಟ್ಟಿಸುತ್ತಾರೆ. ಸ್ವತಃ
ಮಹಾತ್ಮ ಗಾಂಧಿಯವರೇ ದಕ್ಷಿಣ ಭಾರತದಲ್ಲಿ ಹಿಂದಿಯನ್ನು ಪ್ರಚುರ ಪಡಿಸುವ ಸಲುವಾಗಿ ಅನೇಕ ಕ್ರಮಗಳನ್ನು ಕೈಗೊಂಡಿದ್ದರು.
ಅವರ ಹೆಸರಿನಲ್ಲಿ ರಾಜಕೀಯ ಮಾಡುವ ನಕಲಿ ಗಾಂಧಿಗಳು ಮತ್ತು ದ್ರಾವಿಡ ಪಕ್ಷಗಳು ದಕ್ಷಿಣ ಭಾರತದಲ್ಲಿ ಹಿಂದಿ ಹೇರಿಕೆಯೆಂಬ ವಿಷಯವಿಟ್ಟುಕೊಂಡು
ರಾಜಕೀಯ ಮಾಡುತ್ತವೆ. ಹಿಂದಿ ಹೇರಿಕೆ ಮತ್ತು ನಕಲಿ ದ್ರಾವಿಡ ಸಿದ್ಧಾಂತದ ಮೂಲಕ, ಉತ್ತರ ಮತ್ತು ದಕ್ಷಿಣ ಭಾರತವನ್ನು ಬೇರ್ಪಡಿಸುವ ನಿರೂಪಣೆಯ ಮೂಲಕ ಬ್ರಿಟಿಷರ ಮಾದರಿಯಲ್ಲಿ ಭಾರತವನ್ನು ಒಡೆಯುವ ನೀತಿಗೆ ದ್ರಾವಿಡ ಪಕ್ಷಗಳು ನಿರಂತರವಾಗಿ ಜೋತುಬಿದ್ದಿವೆ. ೨೦೨೪ರ ಚುನಾವಣೆ ಹತ್ತಿರವಾಗು ತ್ತಿದ್ದಂತೆ ದ್ರಾವಿಡ ಪಕ್ಷಗಳ ಹಿಂದಿ ಹೇರಿಕೆಯೆಂಬ ನಿರೂಪಣೆಗೆ ಮತ್ತೊಮ್ಮೆ ವೇದಿಕೆ ಸಿದ್ಧವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.