Thursday, 12th December 2024

ಹಿಂದೂ ಅವಹೇಳನ: ಬೌದ್ದಿಕ ದಾರಿದ್ರ‍್ಯವಲ್ಲವೆ ?

ದಾಸ್ ಕ್ಯಾಪಿಟಲ್‌

dascapital1205@gmail.com

ಜೀವನದಲ್ಲಿ ವಸ್ತುಗಳು ಸತ್ಯವೋ ಅಲ್ಲವೋ? ಎಂಬ ಪ್ರಶ್ನೆಗೆ ಉಪನಿಷತ್ತು ಹೇಳುತ್ತದೆ, ‘ಮಣ್ಣು ಎಂಬ ಮೂಲದ್ರವ್ಯ ವಸ್ತುಗಳ
ನಾನಾ ಆಕಾರ, ರೂಪ, ಬಳಕೆಯ ಹೆಸರುಗಳಿಗೆ ಆಧಾರವಾದ ಏಕತಾ ಸತ್ಯ. ಗಡಿಗೆ, ಹೂಜಿ, ಕುಡಿಕೆ, ಹಂಡೆ, ಮಡಕೆ, ಶ್ರಾವೆ
ಎಂಬ ನಾನಾ ಆಕಾರ-ವಿಕಾರಗಳು. ಮಣ್ಣೊಂದೇ ಶಾಶ್ವತವಾಗಿ ಉಳಿಯುವ ಸತ್ಯ.

ಆಕಾರಗಳು ಆಶಾಶ್ವತ. ಆಕಾರಗಳು ಭ್ರಾಂತಿಯಲ್ಲ; ಸತ್ಯ. ಏಕತ್ತ್ವವೆಂಬುದು ಮಾತ್ರ ಸೂತ್ರ. ಬಹುತ್ತ್ವವೊಂದೇ ಸತ್ಯ. ಆ ಬಹುತ್ತ್ವ ರೂಪಿಯೇ ಹಿಂದೂ ಧರ್ಮ’. ಮರ ಎಂದರೇನು? ಎಲೆ, ಕಾಯಿ, ಟೊಂಗೆ, ಬೇರು, ತೊಗಟೆ, ಹೂವು, ಗರಿಗಳು ಕಾಣಿಸುತ್ತವೆ. ಆದರೆ ಮರವೆಂಬುದೇ ಕಾಣುವುದಿಲ್ಲ. ಸಮಷ್ಟಿ ಸತ್ಯ ಎಂಬುದೇ ಭ್ರಾಂತಿ. ಇದು ಆತ್ಯಂತಿಕ ಸತ್ಯವಲ್ಲ. ಕ್ಷಣಿಕವಿದು ಎಂದರೆ ಅದು ಬೌದ್ಧ ಮೂಲಗ್ರಹಿಕೆಯಾದ ಆರ್ಯಸತ್ಯ- ಅನಾತ್ಮ, ಕ್ಷಣಿಕ. ಹೀಗೆಯೇ ಬ್ರಾಹ್ಮಣ, ಶೂದ್ರ, ಕ್ಷತ್ರಿಯ, ವೈಷ್ಣವ, ಶೈವ, ಜೈನ, ಸಿಖ್, ವೀರಶೈವ, ಬೌದ್ಧ, ಗಾಣಪತ್ಯ ಮುಂತಾದವುಗಳಿವೆ.

ಆದರೆ ಹಿಂದೂ ಎಂಬುದು ಎಲ್ಲಿದೆ? ಇದೆಂಥಾ ಮೂರ್ಖತನದ ಪ್ರಶ್ನೆ? ವಿಚಿತ್ರ ತರ್ಕತಾಂಡವ. ಎಡಪಂಥೀಯ ಮತ್ತು ಪ್ರಗತಿಪರರೆಂಬ ಅಪಸೊಲ್ಲಿನ ಪರಾಕಾಷ್ಠೆ ಯಿದು! ಈ ದೇಶದಿಂದ ಬೌದ್ಧವು ಕಾಲ್ಕೀಳಲು ಈ ಋಣಾತ್ಮಕ ಚಿಂತನೆಯೇ ಹೇತುವಾದುದು. ಶಂಕರ, ಮಧ್ವ, ರಾಮಾನುಜರು ಸಮತೋಲವನ್ನು ಕಾಪಾಡಿ ವೈಚಾರಿಕ ಕ್ರಾಂತಿ ಮಾಡದಿದ್ದರೆ ಗಾಂಧಾರ, ಕಾಂಬೋಡಿಯಾ, ಕೊರಿಯಾಗಳು, ಜಪಾನ್, ವಿಯೆಟ್ನಾಂ ಸ್ಥಿತಿ ನಮಗೂ ಬಂದು ಸ್ವಂತಿಕೆಯನ್ನು ಕಳೆದುಕೊಳ್ಳುತ್ತಿದ್ದೆವು!

ನೆಗೆಟಿವ್ ಚಿಂತನೆ ಯಾರನ್ನೂ ಯಾವ ದೇಶವನ್ನೂ ಎಲ್ಲೂ ಯಾವಾಗಲೂ ಕಾಪಾಡಿಲ್ಲ. ರಥ ಎಂಬುದಿದೆಯೇ ಎಂದರೆ ಉತ್ತರಿಸೋದು ಹೇಗೆ? ಚಕ್ರ, ಮೂಕಿ, ನೊಗ, ಧ್ವಜದಂಡ, ಆಸನ, ಮಿಣಿ ಎಲ್ಲಾ ಇವೆ. ರಥವೆಲ್ಲಿ ಎಂಬ ಪ್ರಶ್ನೆಯೇ ವಿವೇಕರಹಿತ ವಾದದ್ದು. ರಥ ಎಂಬುದು ಭ್ರಾಂತಿಯೆಂದರೆ ಬುದ್ಧಿ ಕೆಟ್ಟಿದೆಯೆಂದೇ ಅರ್ಥ. ಹಿಂದೂ ಎಂಬುದು ಇಲ್ಲವಾದರೆ ಭಾರತ ಎಂಬುದೂ ಇಲ್ಲವಾಗುತ್ತೆ. ಹೇಗೆಂದರೆ ಕರ್ನಾಟಕ, ಮಹಾರಾಷ್ಟ್ರ, ಕೇರಳ, ಕಾಶ್ಮೀರ, ದೆಹಲಿ ಮುಂತಾದ ರಾಜ್ಯಗಳಿವೆ.

ಆದರೆ, ಭಾರತವೆಲ್ಲಿದೆ? ಇದ್ದರೂ ಯಾರಿವನು ಭರತ? ದುಷ್ಯಂತನ ಮಗನೋ? ರಾಮನ ತಮ್ಮನೋ? ಆದಿ ವೃಷಭನಾಥನ ಮಗನೋ? ಮುಸ್ಲಿಮರು, ಕ್ರೈಸ್ತರು ಭಾರತೀಯರಲ್ಲವೋ? ಭಾರತೀಯರಲ್ಲರೆಂದರೆ ಏನರ್ಥ? ದುಷ್ಯಂತನ ಮಗ ಭರತನ ಒಂಬತ್ತು ಮಕ್ಕಳು ಅಯೋಗ್ಯರಿದ್ದು ರಾಜ್ಯಭಾರ ನಡೆಸಲು ಅನರ್ಹರಿದ್ದಾಗ, ಭರತ ಏನು ಮಾಡಿದ? ಎಲ್ಲರನ್ನೂ ಕೊಲ್ಲಿಸಿ, ಪತ್ನಿಯರಲ್ಲಿ ಭರದ್ವಾಜರ ನಿಯೋಗದಿಂದ ಜನಿಸಿದ ಪುತ್ರರಿಗೆ ರಾಜ್ಯಕೊಟ್ಟ.

ಈ ತ್ಯಾಗವನ್ನು ಇಂದಿನ, ಅಂದಿನ ಯಾವ ಪ್ರಧಾನಿ, ಮುಖ್ಯಮಂತ್ರಿ ಮಾಡಿದ್ದಾನೆ? ಭರತನ ಆಡಳಿತ ಹೇಗಿತ್ತು? ಯಾವನೋ ದಂಡಯಾತ್ರಾಕೋರ ಡೇರಿಯಸ್ಸನೋ, ಮಿನಾಂಡರನೋ, ಅಲೆಗ್ಸಾಂಡರನೋ, ಬಾಬರನೋ, ಇನ್ಯಾರೋ, ಸಿಂಧೂ ನದಿಯ ಆಚೆಗಿನ ವಿಸ್ತಾರವಾದ ಭೂಖಂಡದ ಜನರ ಏಕೀಕೃತ ಸಂಸ್ಕೃತಿಯ ಕುರುಹನ್ನು ಕಂಡು ಇವರನ್ನು ಸಿಂಧೂ ಸಂಸ್ಕೃತಿಯವರು,
ಸೈಂಧವರು ಎಂಬರ್ಥದಲ್ಲಿ ‘ಸಿಂಧು= ಹಿಂದು’ ಎಂದು ಕರೆದ. ವ್ಯವಹಾರದಲ್ಲಿ ಇದೇ ಉಳಿದುಬಿಟ್ಟಿತು. ಹೆಸರು ಯಾರೇ ಇಡಲಿ? ಮೂಲ ಹೆಗ್ಗುರುತು ಗೊತ್ತಾಯಿತಲ್ಲ? ಇದನ್ನೇ ಕರೆಯಲು ಏನು ಅಡ್ಡಿ? ವೀರಶೈವರಿರಲಿ, ಜೈನರಿರಲಿ, ಯಾರೇ ಇರಲಿ ಕುಂಕುಮ ಧರಿಸುತ್ತಾರೆ. ಸೀರೆಯುಡುವ ರೀತಿಯೊಂದೇ.

ಸತ್ಯ, ಧರ್ಮ, ಶೀಲ, ತ್ಯಾಗ ಒಪ್ಪದವರು ಯಾರಿzರೆ? ಓಂಕಾರ ನಾದವನ್ನು ಒಪ್ಪುತ್ತಾರೆ. ವಿಗ್ರಹ, ಲಿಂಗ, ನಾನಾ ಚಿಹ್ನೆಯಿಟ್ಟು
ಪೂಜಿಸುತ್ತಾರೆ. ಪೂಜಾಸ್ಥಾನಕ್ಕೆ ಬಸದೀ, ಚೈತ್ಯ, ಮಠ, ಮಂದಿರ, ಗರ್ಭಗುಡಿ, ವಿಹಾರ, ಸ್ತೂಪ ಎಂದೂ ಕರೆದರೂ ಪೂಜಾಸ್ಥಳವೆಂಬ ಅರ್ಥವೇ ಬರುವುದು. ಪದ್ಧತಿ, ಸಂಪ್ರದಾಯ, ಆಚರಣೆಗಳು ಬೇರಿರಬಹುದು. ಶಿವ, ರುದ್ರ, ಗಣಪತಿ, ವಿಷ್ಣು- ಎಲ್ಲವೂ ವೇದೋಕ್ತವಲ್ಲವೆ? ವಚನಗಳು ಬೋಧಿಸುವ ನೀತಿಧರ್ಮಗಳಿಗೂ ಆಧಾರ, ಮೂಲ, ಪರಂಪರೆಯಿಲ್ಲವೆ? ಶೈವ, ವೈಷ್ಣವ, ಜೈನ, ಬೌದ್ಧಗಳು ಅರೇಬಿಯಾ, ಜೆರುಸಲೇಂ ಇಂದ ಬಂದವುಗಳೇ? ಸ್ಥಳೀಯವೇ? ಭಾರತೀಯವೇ? ಸೋದರಮತಗಳ ಜೊತೆ ಬದುಕಬೇಕು.

ಬಾಳು ಸಮಷ್ಟಿಯ ಬಹುಮುಖೀಯಲ್ಲವೆ? ಹಿಂದೂ ಎಂದರೆ ಗಂಟೇನು ಹೋಗುತ್ತದೆ? ಹಿಂದೂ ಮೂಲ ಚಿಂತನೆಯ ಬೇರೆಬೇರೆ ರೂಪವನ್ನು ಪಡೆದು ಮತಗಳಾಗಿ ಆವಿರ್ಭವಿಸಿದ ಇವುಗಳು ಸಾಹೋದರ್ಯ ಭಾವವನ್ನು ಹುಟ್ಟಿಸುವುದಿಲ್ಲವೆಂದಾದರೆ ನಮಗೇನಾಗಿದೆ? ಕೇವಲ ರಾಜಕೀಯ ಸೌಲಭ್ಯಕ್ಕಾಗಿ ಕಣ್ಣು, ಕಿವಿ, ನಾಲಗೆ, ಮೊದಲಾದ ಇಂದ್ರಿಯಗಳನ್ನು ಕಳೆದುಕೊಳ್ಳಲು ಸಾಧ್ಯವೇ? ಔರಂಗಝೇಬನ ಕಾಲದಲ್ಲಿ ಅರಮನೆಯ ಚಾಕರಿ ಗಳಿಸಲು, ಗಂಡುಮಕ್ಕಳಿಗೆ ಹಿಜಡಾ ಮಾಡುತ್ತಿದ್ದ ಸತ್ಯವನ್ನು
ಭೈರಪ್ಪನವರು ಆವರಣದಲ್ಲಿ ಅನಾವರಣಗೊಳಿಸಿದ್ದಾರೆ.

ಈಗ ನಾವು ಹಿಂದೂಗಳಲ್ಲವೆಂಬುದೂ ಇದೇ ದಾರಿಯಲ್ಲಿಲ್ಲವೇ? ಹಿಂದೆ ಮಾಸ್ತಿಯವರು ಒಂದು ಸೂತ್ರ ಹೇಳಿದ್ದರು. ಮುಸ್ಲಿಂ, ಕ್ರೈಸ್ತಾದಿಗಳೂ ತಮ್ಮನ್ನು ಹಾಗೆ ಕರೆದುಕೊಳ್ಳುವಾಗ ಹಿಂದೂ ಮುಸ್ಲಿಂ, ಹಿಂದೂ ಕ್ರೈಸ್ತ, ಹಿಂದೂ ಬೌದ್ಧ, ಹಿಂದೂ ಜೈನ ಇತ್ಯಾದಿ ಏಕತ್ವ ಬಿಡದ ಸ್ವಂತಿಕೆಯನ್ನು ಮೆರೆಯಲಿ ಎಂದು. ಈ ದೇಶವೇ ಸಾಂಸ್ಕೃತಿಕ ಬಹುತ್ತ್ವವುಳ್ಳದ್ದು. ಇಲ್ಲಿ ಸಾಮುದಾಯಿಕ ಕಲ್ಪನೆ, ಆವಿಷ್ಕಾರ ಗುರುತು ಬೇಕಾಗುತ್ತದೆ. ತಂದೆ, ತಾಯಿ, ಮಗ, ಮಗಳು ಎಲ್ಲಾ ಇದ್ದಾರೆ, ಕುಟುಂಬವೆಲ್ಲಿ ಅಂದರೆ? ಮಂಗಳೂರು, ಮಂಡ್ಯ, ಹುಬ್ಬಳ್ಳಿ, ರಾಯಚೂರು, ಕಲಬುರ್ಗಿ, ಮಡಿಕೇರಿಯಿದೆ, ಕೋಲಾರವಿದೆ, ಕರ್ನಾಟಕವೆಲ್ಲಿ ಅಂತ ಅವಿವೇಕಿಯೊಬ್ಬ
ಕೇಳಿದರೆ? ಏನು ಉತ್ತರ? ಗತಿಯೇನು? ಅಸಂಬದ್ಧವಾಗಿ ಮಾತಾಡುವುದನ್ನು ನಾವು ಬೇಗ ಕಲಿಯುತ್ತೇವೆ.

ಅಂಥದ್ದರ ಕಡೆಗೇ ನಮ್ಮ ಆಸಕ್ತಿ, ಆಕರ್ಷಣೆ ಹೆಚ್ಚು. ಮನು ಬೇಡ, ಮಾನವತೆಯಿರಲಿ, ವೇದ ಬೇಡ ವೇದಿಕೆಯಿರಲಿ, ಹಿಂದೂ
ಬೇಡ ಅಹಿಂದೂ ಇರಲಿ ಎಂದರೆ ಏನರ್ಥ? ಅಕ್ಷರ, ಪದ, ವಾಕ್ಯ, ವಾಕ್ಯವೃಂದ, ವ್ಯಾಕರಣವಿದೆ, ಕನ್ನಡವೆಲ್ಲಿ ಎಂದರೆ
ಏನು ಹೇಳುವುದು? ಅವಿವೇಕದ ಮೂರ್ಖತನದ ಪರಮಾವಽಯಲ್ಲವೆ ಇದು? ಕನ್ನಡ ಮಾತೆ ಯಾರು? ಭಾರತ ಮಾತೆ ಯಾರು? ಎಲ್ಲಿದ್ದಾಳೆ? ಅವಳ ಜನನ ಹೇಗಾಯಿತು? ತಂದೆತಾಯಿ ಯಾರು? ನಾವು ಹೇಗೆ ಅವಳ ಮಕ್ಕಳು? ಎಂದೆ ಪ್ರಶ್ನೆಗಳಿಗೆ ಯಾವ ಭೂಪ ಉತ್ತರ ಕೊಡುವುದಕ್ಕೆ ಮುಂದಾದಾನು? ಒಬ್ಬ ಕೇಳುತ್ತಾನೆ: ಪುಟಪುಟಗಳಲ್ಲಿ ಶಬ್ದ ತುಂಬಿ ಬರೆಯುತ್ತಾರೆ, ಓದುತ್ತಾರೆ; ಅರ್ಥವೆಂಬುದೆಲ್ಲಿ? ಇದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಸೃಷ್ಟಿಸಿದ ಭೂತ!

ವಿಟ್ ಗನ್ ಸ್ಟೀನಿನ ಭಾಷಾ ಕುರಿತ ಸಿದ್ಧಾಂತವಿದು-ಅರ್ಥವೆಂಬುದು ಭ್ರಾಂತಿ; ಬರೀ ವ್ಯಾವಹಾರಿಕ, ಪ್ರಾಗ್ಮಾಟಿಕ್ ಟ್ರೂಥ್.
ದೇವರು ಶಬ್ದ ನೋಡಿ. ಹಾಗೊಂದು ವಸ್ತುವಿಲ್ಲ. ಶಬ್ದವಿದೆ. ಅದರ ಬಳಕೆಯಿಂದ ಹಲವರಿಗೆ ತೃಪ್ತಿ ಸಿಕ್ಕರೆ ಸಿಗಲಿ, ಆಕ್ಷೇಪವಿಲ್ಲ. ಆದರೆ ಆ ವಸ್ತು ಇದೆಯೆಂಬ ಮೋಸಕ್ಕೆ ಬಲಿಯಾಗಬಾರದು. ಏಕೆಂದರೆ ಇಂದ್ರಿಯಾನುಭವದಲ್ಲಿ ದೇವರು ಬರುವುದಿಲ್ಲ. ಭಕ್ತಿಯೆಂದಾಗ ಕೆಲವರಿಗೆ ಮಾನಸಿಕ ವಿಕಾರ ಆಗುತ್ತದೆ. ಶರೀರದ ಪರಿಣಾಮ. ಈ ಮಾನಸಿಕ ಸ್ಥಿತಿಯಲ್ಲಿ ಭ್ರಾಂತಿಲೋಕ ಸೃಷ್ಟಿಯಾಗುತ್ತದೆ. ಅದು ಸತ್ಯ.

ಒಬ್ಬ ಕೇಳಿದನಂತೆ: ಮರಗಳಿವೆ, ಕಾಡೆಲ್ಲಿ? ಇದನ್ನೇ ‘ಮಿಸ್ಸಿಂಗ್‌ದ ವುಡ್ ಫಾರ್ ದ ಟ್ರೀಸ್‘ ಎಂಬ ಗಾದೆ ವಿಡಂಬಿಸುತ್ತದೆ. ಏಷಿಯಾ ಎಲ್ಲಿ, ಯುರೋಪ್ ಎಲ್ಲಿ, ಆಫ್ರಿಕಾ ಎಲ್ಲಿ ಎಂದಂತೆ, ಷಿಯಾ ಇದೆ, ಸುನ್ನಿಯಿದೆ, ಇಸ್ಲಾಂ ಎಲ್ಲಿ? ಎಂದು ಕೇಳಿದರೆ? ಕತ್ತಿಯಿದೆ, ರಕ್ತ ಚೆಲ್ಲಿದೆ, ಕೊಲೆಗಾರನಿzನೆ, ಅಪರಾಧವೆಲ್ಲಿ? ಎಂದರೆ ಸಮಾಜ ಉಳಿಯುತ್ತದೆಯೇ?- ಹೀಗೆ ಪ್ರಶ್ನೆಮಾಡ
ಬಾರದ್ದನ್ನು ಪ್ರಶ್ನೆ ಮಾಡುತ್ತಾ ಹೋದರೆ ಬದುಕು ಬಾಳಾಗುತ್ತದೆಯೇ? ಹಾಗೆ ಪ್ರಶ್ನಿಸುವವರನ್ನು ಹುಚ್ಚರೆನ್ನಬಾರದೆ? ಬುದ್ಧಿ
ಭಾವಗಳ ಸಮತೋಲನ ತಪ್ಪಿದಾಗಲೇ ಹುಚ್ಚು ಹಿಡಿಯುವುದು. ಏಕಂ ಸತ್ ವಿಪ್ರಾ ಬಹುಧಾ ಭವಂತಿ- ಎಂದಿತ್ತು ವೇದ.

ನನ್ನ ದೇವರೇ ದೇವರು. ನಿನ್ನ ದೇವರು ದೇವರಲ್ಲ. ಒಪ್ಪದವರನ್ನು ಕೊಲ್ಲು ಎಂದು ಹಿಂದೂ ಧರ್ಮ ಹೇಳುವುದಿಲ್ಲ. ಯಾವ ಹಿಂದೂ ಗುರುಗಳು ಕರೆ ಕೊಟ್ಟ ಕೊಟ್ಟಿಲ್ಲ. ಕೊಡುವುದೂ ಇಲ್ಲ. ವಿಶಾಲ ಸಮಭಾವವೇ ಹಿಂದುತ್ತ್ವ. ಹಿಂದುತ್ತ್ವದ ಶ್ರದ್ಧೆಗಳಲ್ಲಿ ಸಹನೆ, ಎಲ್ಲವನ್ನೂ ಅಪ್ಪಿಕೊಳ್ಳುವ ಉದಾರ ಬಾಹುತ್ತ್ವ, ಜೀರ್ಣಿಸಿಕೊಳ್ಳುವ ಆತ್ಯಂತಿಕ ಶಕ್ತಿ. ಎಲ್ಲದಕ್ಕೂ ಮೂಲಬೇರೇ ಹಿಂದುತ್ತ್ವ. ಅದಿಲ್ಲದೆ ಯಾವ ಟೊಂಗೆಗಳು ಇರಲು ಸಾಧ್ಯವಿಲ್ಲ. ಹಿಂದುತ್ತ್ವವೆಂದರೆ ಶಾಂತಿ ಪ್ರಿಯತ್ವ.

ಸ್ವರಕ್ಷಣೆಗೆ, ಸ್ವಾಭಿಮಾನ ರಕ್ಷಣೆಗೆ ಧಕ್ಕೆ ಬಾರದಂಥ ಶಾಂತಿಪ್ರಿಯತ್ವ. ಸ್ವರಕ್ಷಣೆಯೆಂದರೆ ಭಯೋತ್ಪಾದಕರ, ಜೆರುಸಲೇಮಿನ ಆಕ್ರಮಣಕಾರಿ, ಇತರರನ್ನು ನಿರ್ನಾಮ ಮಾಡುವ ಆಸುರೀ ಪ್ರವೃತ್ತಿಯಲ್ಲ. ಹಾಗಂತ ಇತರರು ತುಳಿದರೂ ತುಳಿಸಿಕೊಳ್ಳುವ ತುಳಿತಕ್ಕೇ ಒಗ್ಗಿಕೊಳ್ಳುವ ಹೇಡಿಯ ಮನೋಭಾವದ ನಪುಂಸಕತ್ವವಲ್ಲ. ಭಾರತೀಯ ಸಂಸ್ಕೃತಿಯ ಮೂಲ ವಿಚಾರಗಳು, ಮೌಲ್ಯಗಳು, ಮಹಾಪುರುಷರು, ಅವರ ತ್ಯಾಗ, ಶೌರ್ಯ, ಔದಾರ್ಯ, ವೀರ್ಯ, ಪರಾಕ್ರಮಗಳು, ಸಾಧನೆಗಳನ್ನು ಕೆಡಗಣಿಸು ವವರು ಹಿಂದೂಗಳಾಗಲಾರರು. ಶ್ರೀರಾಮ-ಕೃಷ್ಣರಂಥ ಅವತಾರೀ ಪುರುಷರ ಹಿನ್ನೆಲೆಯನ್ನೇ ಮೆರತೋ ಅಥವಾ ಆ ಬಗೆಗಿನ ಅಜ್ಞಾನ ದಿಂದಲೋ ಅವರನ್ನು ವಿದೇಶೀ ಆಕ್ರಮಣಕಾರರೊಡನೆ ಸಮೀಕರಿಸಿ ಸಹಬಾಳ್ವೆಯನ್ನೊಪ್ಪದವರನ್ನು ಸೋದರ ರೆಂದೋ ಒಪ್ಪುವ ಅಜ್ಞಾನ ಹಿಂದುತ್ತ್ವವಾಗಲಾರದು.

ಜಗತ್ತೇ ಹಿಂದೂ ಸಂಸ್ಕೃತಿ, ಪರಂಪರೆ, ಆಚರಣೆ, ಸಂಪ್ರದಾಯಗಳಲ್ಲಿ ಆಸಕ್ತಿ, ಒಲವು, ಅಭಿರುಚಿಯನ್ನು ವ್ಯಕ್ತಪಡಿಸುತ್ತಿದೆ. ವೇದ- ವೇದಾಂತ, ರಾಮಾಯಣ- ಮಹಾಭಾರತ ಗೀತೆ ಗಾಯತ್ರೀ ವಿಷ್ಣುಸಹಸ್ರನಾಮ ಯಾಗ ಯಜ್ಞ ಯೋಗ ಪಂಚಭೂತಗಳ
ವಂದನೆಯಲ್ಲಿ ತೊಡಗಿಕೊಳ್ಳುತ್ತಿದೆ. ನಾವು ಹಿಂದೂ, ಹಿಂದುತ್ತ್ವವನ್ನು ಚಾರ್ವಾಕರ ಸಂತಾನದವರಂತೆ ಪ್ರಶ್ನಿಸುತ್ತಾ ಬಾಯಿಗೆ ಬಂದಂತೆ ಚರಿತ್ರೆಯ ಮಹಾಪುರುಷರ ಬಗ್ಗೆ ಅವಹೇಳನ ಮಾಡುತ್ತಾ ಬೌದ್ಧಿಕ ದಾರಿದ್ರ್ಯವನ್ನು ಪ್ರದರ್ಶಿಸುತ್ತಿದ್ದೇವೆ!