Thursday, 12th December 2024

ಗದ್ದುಗೆ ಏರಿದ್ದು, ಹಿಂದೂ ಕಾರ್ಯಕರ್ತರ ಸಮಾಧಿ ಮೇಲೆ

ಚಕ್ರವರ್ತಿ ಸೂಲಿಬೆಲೆ, ಸಂಸ್ಥಾಪಕ, ಯುವ ಬ್ರಿಗೇಡ್

ಸಂದರ್ಶನ: ರಂಜಿತ್ ಎಚ್.ಅಶ್ವತ್ಥ

ಹಿಂದೂ ಕಾರ್ಯಕರ್ತರ ಸಮಾಧಿಯ ಮೇಲೆ ಬಂದ ಬಿಜೆಪಿ ಸರಕಾರ, ಈಗ ಮಾಡುತ್ತಿರುವುದೇನು? ಇಂದು ಹರ್ಷ ನಾಳೆ ಚಕ್ರವರ್ತಿ ಸೂಲಿಬೆಲೆ ಸತ್ತರೆ ಮನೆಗೆ ಐದು ಲಕ್ಷ ಕೊಡಬಹುದು. ಅದಕ್ಕಿಂತ ಹೆಚ್ಚು ಏನು ಮಾಡುತ್ತೀರಾ? ಹೆಚ್ಚೆಂದರೆ ನನ್ನ ಹೆಣವನ್ನು ಇಟ್ಟು ಕೊಂಡು ಊರು ತುಂಬ ಮರವಣಿಗೆ ನಡೆಸಿ ವೋಟ್ ಪಡೆಯುತ್ತೀರಾ. ಇದೇ ತಾನೇ ನೀವು ಅಂತಿಮವಾಗಿ ಮಾಡುವುದು…. ಇದು ವಾಗ್ಮಿ, ಹಿಂದೂಪರ ಚಿಂತಕ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರ ಖಡಕ್ ಮಾತು. ಹರ್ಷ ಕೊಲೆ ಪ್ರಕರಣ ಸೇರಿದಂತೆ ರಾಜ್ಯದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಗೆ ಸಂಬಂಽಸಿದಂತೆ ‘ವಿಶ್ವವಾಣಿ’ಯೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರಕಾರ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಬಿಜೆಪಿಯದ್ದೇ ಸರಕಾರವಿದ್ದರೂ ಗುಪ್ತಚರ ಇಲಾಖೆ ಏನು ಮಾಡುತ್ತಿದೆ? ನಿರ್ಲಜ್ಜ ರೀತಿಯಲ್ಲಿ ಕೆಲಸ ಮಾಡುವುದನ್ನು ಬಿಟ್ಟು, ಹಿಂದುತ್ವದ ಮೇಲಾಗುತ್ತಿರುವ ದಾಳಿ ತಡೆಯಲು ಇನ್ನಾದರೂ ಕೆಲಸ ಮಾಡಲಿ ಎಂದು ಗುಡುಗಿದ್ದಾರೆ.

ಬಿಜೆಪಿ ಹೇಳಿಕೆ ಹಿಂದೂ ಮತಕ್ಕೆ ಮಾತ್ರ ಸೀಮಿತವಾಯಿತೇ? 
ನಿಜ ಹೇಳಬೇಕೆಂದರೆ ಈ ರೀತಿ ಆಗಬಾರದು. ಆದರೆ, ಹಿಂದುತ್ವದ ಆಧಾರದಲ್ಲಿ ಅಧಿಕಾರಕ್ಕೆ ಬಂದ ಸರಕಾರ ಯಾವುದೇ ಕೆಲಸವನ್ನು ಮಾಡದೇ ಹೋದರೆ ಈ ರೀತಿ ಆಗುತ್ತದೆ. ಸಾಲುಸಾಲು ಹಿಂದೂಗಳ ಹತ್ಯೆಗಳ ಮೇಲೆ ಅಧಿಕಾರಕ್ಕೆ ಬಂದು ಬಿಜೆಪಿ ಕೂತಿದೆ. ಆದರೆ, ಆ ಹತ್ಯೆಗಳಿಗೆ ಕಾರಣವೇನು? ಅದನ್ನು ಮಾಡಿಸುತ್ತಿರುವ ಶಕ್ತಿಗಳು ಯಾವುದು? ಎಂದು ಸೂಕ್ತ ತನಿಖೆ ಮಾಡದೇ, ಕೇವಲ ಹೇಳಿಕೆ ನೀಡುವುದರಿಂದ ಈ ರೀತಿ ಅನಿಸುತ್ತಿದೆ. ಹೇಳಿಕೆಗಳು ಕೇವಲ ಬೂಟಾಡಿಕೆಯಂತೆ ಕಾಣುತ್ತವೆ. ವೇದಿಕೆ ಮೇಲೆ ಒಂದು ಮಾತು, ಕೆಳಗೆ ಬಂದಾದ ಮೇಲೆ ಇನ್ನೊಂದು ರೀತಿಯ ನಡೆ ಎಂದಾಗ ಕಷ್ಟವಾಗುತ್ತದೆ.

ಚಕ್ರವರ್ತಿ ಸೂಲಿಬೆಲೆ ಸತ್ತರೆ ಅವರ ಮನೆಗೆ ಐದು ಲಕ್ಷ ಕೊಡಬಹುದು. ಅದಕ್ಕಿಂತ ಹೆಚ್ಚು ಏನು ಮಾಡುತ್ತೀರಾ?
ಹೆಚ್ಚೆಂದರೆ ನನ್ನ ಹೆಣ ಇಟ್ಟುಕೊಂಡು ಊರು ತುಂಬ ಮರವಣಿಗೆ ನಡೆಸಿ ವೋಟ್ ಪಡೆಯುತ್ತೀರಾ. ಇದೇ ತಾನೇ ನೀವು ಅಂತಿಮವಾಗಿ ಮಾಡುವುದು. ಆದ್ದರಿಂದ ಜನರಲ್ಲಿ ವಿಶ್ವಾಸ ಹೋಗಿದೆ. ಆ ವಿಶ್ವಾಸ ಮರಳಿ ಪಡೆಯಬೇಕಾದರೆ ಹರ್ಷನ ಕೊಲೆ ಮುಂದಿಟ್ಟುಕೊಂಡು, ಈ ಹಿಂದೆ ನಡೆದಿರುವ ಎಲ್ಲ ಹತ್ಯೆಗಳ ಹಿಂದಿನ ಶಕ್ತಿಯನ್ನು ಬಯಲಿಗೆ ಎಳೆಯಬೇಕಿದೆ.

ಹಿಜಾಬ್, ಹರ್ಷ ಹತ್ಯೆ ಪ್ರಕರಣದಲ್ಲಿ ಸರಕಾರ ಎಡವಿದ್ದು ಎಲ್ಲಿ?

ರಾಜ್ಯದಲ್ಲಿರುವ ಸರಕಾರ ಎಲ್ಲವೂ ಶಾಂತವಾಗಿದ್ದರೆ ಸಾಕು ಎನ್ನುವ ಮನಸ್ಥಿತಿಯಲ್ಲಿ ಇರುವುದರಿಂದ, ತೇಪೆ ಹಚ್ಚುವ ಕೆಲಸ ಮಾಡು ತ್ತಿದೆ. ಆದರೆ, ಅಧಿಕಾರದಲ್ಲಿದ್ದಾಗ ಗುಪ್ತಚರ ಇಲಾಖೆ ಸೇರಿದಂತೆ ಇಡೀ ಪೊಲೀಸ್ ವ್ಯವಸ್ಥೆ ಅವರ ಬಳಿಯೇ ಇರುವುದರಿಂದ, ರಾಜ್ಯದಲ್ಲಿ ಏನಾಗುತ್ತಿದೆ ಎನ್ನುವ ಬಗ್ಗೆ ಗಮನಹರಿಸಬೇಕು. ಸೂಕ್ಷ್ಮವಾಗಿರುವ ಪ್ರದೇಶ ಯಾವುದು? ಅಲ್ಲಿರುವ ಪರಿಸ್ಥಿತಿಗಳೇನು? ಎಂಬಿತ್ಯಾದಿ ಆಗುಹೋಗುಗಳ ಬಗ್ಗೆ ಮಾಹಿತಿ ಪಡೆಯಬೇಕು. ಗುಪ್ತಚರ ಇಲಾಖೆ ಬಳಸಿಕೊಂಡು ಸರಕಾರ ನಿರಂತರವಾಗಿ ಈ ಕೆಲಸ ಮಾಡಬೇಕು. ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ಪರಿಹಾರ ಹುಡುಕಬೇಕು.

ರಾಜ್ಯದಲ್ಲಿ ಹಿಂದೂ ಪರ ಸರಕಾರಗಳು ಬಂದಾಗ ಈ ರೀತಿಯ ಪರಿಹಾರ ಹುಡುಕುವ ಕೆಲಸವಾಗಬೇಕಿತ್ತು. ದುರದೃಷ್ಟ ಎಂದರೆ ಈ ಸರಕಾರ ಬಂದಾಗಿನಿಂದಲೂ ಆ ನಿಟ್ಟಿನಲ್ಲಿ ಯಾವುದೇ ಕೆಲಸವಾಗಿಲ್ಲ. ಈಗ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ಗೃಹ ಸಚಿವರಾಗಿದ್ದಾಗ ಪ್ರಯತ್ನ ಆಗಲಿಲ್ಲ. ಇನ್ನು ಈಗಿರುವ ಗೃಹ ಸಚಿವರು ಇಂತಹ ಪ್ರಯತ್ನ ಮಾಡಬೇಕು ಎನ್ನುವ
ಯೋಚನೆಯನ್ನೂ ಮಾಡುತ್ತಿಲ್ಲ. ಗುಪ್ತಚರ ಇಲಾಖೆಯನ್ನು ಯಾವ ರೀತಿ ಇಟ್ಟುಕೊಂಡಿದ್ದೇವೆ ಎಂದರೆ, ತಮಗೆ ಬೇಕಾದ ಮಾಹಿತಿ ನೀಡಲಷ್ಟೇ ಸೀಮಿತಗೊಳಿಸಿದ್ದೇವೆ. ಅದರಾಚೆ ಏನೂ ಆಗುತ್ತಿಲ್ಲ.

ಎನ್‌ಐಎಗೆ ವಹಿಸಬೇಕು ಎನ್ನುವ ಆಗ್ರಹ ಬರುತ್ತಿರುವುದಾದರೂ ಏಕೆ? 
ರಾಜ್ಯದಲ್ಲಿರುವ ಬಿಜೆಪಿ ಸರಕಾರ ತಮ್ಮ ಪೊಲೀಸ್ ಶಕ್ತಿ ಬಳಸಿಕೊಂಡು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಇಲ್ಲಿಯವರೆಗೆ ತನಿಖೆ ನಡೆಸಿಲ್ಲ. ಗುಪ್ತಚರ ಇಲಾಖೆಯಿಂದ, ಮಾಹಿತಿಯನ್ನು ಸಂಗ್ರಹಿಸುವಲ್ಲಿ ವಿಫಲವಾಗಿದೆ. ಆದ್ದರಿಂದ ಅನೇಕರು ಹರ್ಷ ಕೊಲೆ ಪ್ರಕರಣವನ್ನು ಎನ್‌ಐಎಗೆ ವಹಿಸಲು ಆಗ್ರಹಿಸಿದ್ದಾರೆ. ಹಾಗಾದರೆ, ನಮ್ಮಲ್ಲಿ ಶಕ್ತ ಅಧಿಕಾರಿಗಳೇ ಇಲ್ಲವೇ? 20 ವರ್ಷದ ಯುವಕನೊಬ್ಬ ಕೊಲೆ ಮಾಡಬಹುದು ಎಂದರೆ, ಆತನ ತಲೆ ಕಡೆಸಿದವರು ಯಾರು ಎನ್ನುವುದನ್ನು ಪತ್ತೆ ಹಚ್ಚಬೇಕು. ಈ ಎಲ್ಲ ವಿಷಯಗಳ ಬಗ್ಗೆ ಸಮಗ್ರವಾದ ತನಿಖೆ ಅಗತ್ಯವಿದೆ. ಮುಂದಿನ ಆರು ತಿಂಗಳಲ್ಲಿ ವರದಿ ನೀಡಬೇಕು ಎನ್ನುವುದು ನಮ್ಮ ಆಗ್ರಹ. ಈ ಕೆಲಸವಾಗದಿದ್ದರೆ, ೧೫ ದಿನದಲ್ಲಿ ಈ
ಘಟನೆ ಸಂಪೂರ್ಣವಾಗಿ ಮರೆತು ಹೋಗುತ್ತದೆ.

ಪಿಎಫ್ಐ, ಎಸ್‌ಡಿಪಿಐ ನಿಷೇಧ ಆಗುವುದಿಲ್ಲವೇ?
ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ನಡೆದಾಗಲೆಲ್ಲ ಪಿಎಫ್ಐ, ಎಸ್‌ಡಿಪಿಐ ಸಂಘಟನೆಗಳ ನಿಷೇಧಕ್ಕೆ ಆಗ್ರಹ ಸಾಮಾನ್ಯ. ಈ ನಡೆಯನ್ನು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನಿರೀಕ್ಷೆ ಮಾಡಲು ಸಾಧ್ಯವೇ ಇರಲಿಲ್ಲ. ಏಕೆಂದರೆ, ಕಾಂಗ್ರೆಸ್ ಮುಸ್ಲಿಂ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಯಾವ ಹಂತ್ಕಕೆ ಬೇಕಾದರೂ ಹೊಗುತ್ತದೆ. ಇದೇ ಕಾರಣಕ್ಕೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಎಸ್‌ಡಿಪಿಯ ಹಲವರನ್ನು ಬಿಡುಗಡೆ ಮಾಡಿರಲಿಲ್ಲವೇ? ಆದರೆ ಇದನ್ನು ವಿರೋಧಿಸಿಕೊಂಡೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅಽಕಾರ ನಡೆಸುವಾಗಲೂ, ಅದೇ ಮಾತನ್ನು ಪುನರುಚ್ಛರಿಸುತ್ತಾರೆ ಎಂದರೆ ನಾಚಿಕೆ ಗೇಡಿನ ಸಂಗತಿ.

ಯಾವುದೇ ಸಂಘಟನೆಯನ್ನು ನಿಷೇಧ ಮಾಡುವುದಕ್ಕೆ ಬೇಕಾಗಿರುವುದು ಅದರ ವಿರುದ್ಧದ ಪುರಾವೆಗಳು. ಬಿಜೆಪಿ ಅಧಿಕಾರಕ್ಕೆ ಬಂದಾ ಬಳಿಕ ಈ ಸಂಘಟನೆಗಳ ನಿಷೇಧಕ್ಕೆ ಅಗತ್ಯ ಪುರಾವೆ ಸಂಗ್ರಹಿಸುವುದಕ್ಕೆ ಎಲ್ಲ ಅವಕಾಶ ಇದ್ದರೂ ಅದನ್ನು ಮಾಡದೇ ಇರುವುದು ದೊಡ್ಡ ಲೋಪ. ಆದ್ದರಿಂದ ಇನ್ನಾದರೂ ಅಧಿಕಾರದಲ್ಲಿರುವವರು ತಮ್ಮ ನಡೆ ಸರಿಪಡಿಸಿಕೊಂಡು, ಅಗತ್ಯ ಪುರಾವೆ ಸಂಗ್ರಹಿಸಿ ಸಮರ್ಥವಾಗಿ
ಕಾರ್ಯ ನಿರ್ವಹಿಸಬೇಕು. ಈ ಮೂಲಕ ಪುನಃ ಮತದಾರರ ವಿಶ್ವಾಸಗಳಿಸಿಕೊಳ್ಳಬೇಕು. ಏಕೆಂದರೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿರುವುದು ಹಿಂದೂ ಕಾರ್ಯಕರ್ತರ ಸಮಾಧಿಯ ಮೇಲೆ. ಆ ಸಮಾಧಿಗೆ ಗೌರವ ಕೊಡುವ ಗುಣ ಬೆಳೆಸಿಕೊಳ್ಳ ದಿದ್ದರೆ ಮತದಾ
ರರ ವಿಶ್ವಾಸ ಗಳಿಸಿಕೊಳ್ಳಲು ಸಾಧ್ಯವೇ ಇಲ್ಲ.

ಜೀವ ಬೆದರಿಕೆ ವಿಷಯದಲ್ಲಿ ಸರಕಾರ ಮೌನವಾಗಿದೆ ಎನಿಸುವುದಿಲ್ಲವೇ?
ಹಿಂದೂ ಕಾರ್ಯಕರ್ತರಿಗೆ ಜೀವ ಬೆದರಿಕೆ ಇರುವ ವಿಷಯದಲ್ಲಿ ನಾನು ವೈಯಕ್ತಿಕ ಪ್ರಕರಣದ ಬಗ್ಗೆ ಮಾತ್ರ ನೋಡಲು ಬಯಸುವುದಿಲ್ಲ. ಚಕ್ರವರ್ತಿ ಸೂಲಿಬೆಲೆ, ಅಜಿತ್ ಹನುಮಕ್ಕನವರ್, ಪ್ರತಾಪ್ ಸಿಂಹ ಸೇರಿದಂತೆ ಕೆಲವರಿಗೆ ಪೊಲೀಸ್ ರಕ್ಷಣೆ ನೀಡುವುದರಿಂದ ಸಮಸ್ಯೆ
ಇರ್ತರ್ಥ್ಯವಾಗುವುದಿಲ್ಲ. ಇವರನ್ನು ರಕ್ಷಿಸಬಹುದು. ಆದರೆ, ಸಾಮಾನ್ಯ ಕಾರ್ಯಕರ್ತನಿಗೆ ಯಾವ ರಕ್ಷಣೆ ಇದೆ? ನನಗೆ ಬೇಕಿರುವುದು, ಒಬ್ಬರ ರಕ್ಷಣೆಯಲ್ಲ. ಬದಲಿಗೆ ಸಮಾಜವನ್ನು ಹಾಳುಮಾಡುತ್ತಿರುವ ವ್ಯವಸ್ಥೆಯ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವುದು.

ಆದರೆ, ಅಧಿಕಾರಕ್ಕೆ ಬಂದು ಮೂರೂವರೆ ವರ್ಷ ಪೂರೈಸಿದರೂ ಇಂತಹ ಸಮಾಜ ಘಾತುಕ ಶಕ್ತಿಗಳನ್ನು ಮಣಿಸಲು ತಗೆದುಕೊಂಡಿರುವ
ಕ್ರಮವಾದರೂ ಏನು? ಎನ್ನುವುದು ನನ್ನ ಪ್ರಶ್ನೆ. ಕರ್ನಾಟಕದಲ್ಲಿ ವಾಹಾಬ್ ಇಸಂ ವ್ಯಾಪಕವಾಗಿ ಬೆಳೆಯುತ್ತಿದೆ. ಈ ಹಿಂದೆ ಶೇ2ರಷ್ಟಿದ್ದ ವಹಾಬ್ ಇಸಂ ಈಗ ಶೇ.35 ರಷ್ಟು ದಾಟಿದೆ. ಅವರನ್ನು ದ್ವೇಷಿಸುವ ಇತರ ಮುಸ್ಲಿಮರಿಗೆ ಸರಕಾರ ಯಾವ ವೇದಿಕೆ ಕೊಟ್ಟಿದ್ದಾರೆ? ಮೌನವಾಗಿರುವ ಮುಸ್ಲಿಮರ ಮೂಲಕ ವಹಾಬ್ ಮಟ್ಟ ಹಾಕುವುದಕ್ಕೆ ಏನು ಮಾಡಿದ್ದಾರೆ? ವಹಾಬಿಗಳ ವಿರುದ್ಧ ಪುರಾವೆ ಸಂಗ್ರಹಿಸಿ ಅವರನ್ನು ಒಳಗೆ ಹಾಕಲು ಸಾಧ್ಯವಾಗಿದೆಯೇ ಎಂದು ಕೇಳಿದರೆ, ನಿಮ್ಮ ಬಳಿ ಇರುವುದು ‘ಶೂನ್ಯ’ ಉತ್ತರವಷ್ಟೆ.

ಹಿಜಾಬ್ ವಿವಾದವನ್ನು ಸರಕಾರ ನಿರ್ಲಕ್ಷ್ಯ ಮಾಡಿತೇ?
ಉಡುಪಿಯಲ್ಲಿ ಶುರುವಾದ ಹಿಜಾಬ್ ವಿವಾದವನ್ನು ಅಲ್ಲಿಯೇ ಮೊಟಕುಗೊಳಿಸಬಹುದಿತ್ತು. ಆದರೆ ಪಿಎಫ್ಐ, ಸಿಎಫ್ಐಗೆ ಅದು ರಾಜ್ಯಕ್ಕೆ ವಿಸ್ತರಣೆಯಾಗಬೇಕಿತ್ತು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಬೇಕಿತ್ತು. ಅದನ್ನು ಮೊಟಕುಗೊಳಿಸಲು ಸರಕಾರದ ಬಳಿ ಇದ್ದ ಏಕೈಕ ದಾರಿ ಎಂದರೆ ಹಿಜಾಬ್‌ಗೆ ಅವಕಾಶ ನೀಡುವುದು. ಒಂದು ವೇಳೆ ಈ ರೀತಿ ಮಾಡಿದ್ದರೆ ಸಮವಸ ಹಾಗೂ ಸರ್ವಭೌಮತ್ವಕ್ಕೆ
ಧಕ್ಕೆಯಾಗುತ್ತಿತ್ತು. ಆದ್ದರಿಂದ ಸರಕಾರ ಆ ವಿಷಯದಲ್ಲಿ ಮಾಡಬೇಕಿದ್ದು, ಈಗ ಮಾಡಿರುವಷ್ಟೇ ಎನಿಸುತ್ತದೆ.

ಧ್ವಜ ವಿಚಾರದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕ ಸರಿಯೇ?
ದೇಶದಲ್ಲಿ ತ್ರಿವರ್ಣ ಧ್ವಜ ಅಸ್ಥಿತ್ವಕ್ಕೆ ಬರಲು ಹಲವು ಸುತ್ತಿನ ಚರ್ಚೆಗಳು ನಡೆದಿವೆ. ಈಶ್ವರಪ್ಪ ಅವರು ರಾಷ್ಟ್ರಧ್ವಜದ ಬಗ್ಗೆ ತಮಗಿರುವ ಗೌರವವನ್ನು ಹೇಳಿಕೊಂಡಿದ್ದಾರೆ. ಆದರೆ, ಒಂದು ಕಡೆಯವರು ನಿರಂತರವಾಗಿ ಪ್ರತ್ಯೇಕತಾವಾದದ ಬಾವುಟ ಹಾರಿಸುತ್ತಲೇ ಇದ್ದರೆ, ಮುಂದಿನ 100, 500, 1000 ವರ್ಷದಲ್ಲಿ ಯಾವಾಗಲಾದರೂ ಭಗವಾ ಧ್ವಜ ಹಾರಾಟ ಆಗಬಹುದು ಎನ್ನುವ ಧಾಟಿಯಲ್ಲಿ ಹೇಳಿದ್ದಾರೆ. ಅದನ್ನು ವಿವಾದ ಮಾಡುವ ಅಗತ್ಯವಿರಲಿಲ್ಲ. ಕಾಂಗ್ರೆಸ್ ತನಗೆ ಬೇಕಾದಂತೆ ಹೇಳಿಕೆಗಳನ್ನು ತಿರುಚಿಕೊಳ್ಳುತ್ತದೆ. ಬೇಕಿದ್ದಾಗ ಸಂವಿಧಾನ, ಬೇಡದಿದ್ದರೆ ಸಂವಿಧಾನವನ್ನು ಪಕ್ಕಕ್ಕೆ ಇಡುತ್ತದೆ.

ಸಂವಿಧಾನವನ್ನು ಧ್ವಜದ ಹೆಸರಲ್ಲಿ ತಂದಿರುವ ಕಾಂಗ್ರೆಸ್, ಹರ್ಷ ಹತ್ಯೆಯಾದಾಗ ಅವನೂ ಕೂಡ ರೌಡಿ ಶೀಟರ್ ಎಂದಿದೆ. ರೌಡಿ ಶೀಟರ್ ಹತ್ಯೆ ಮಾಡುವುದು ಮುಸ್ಲಿಮರೇ? ಅವರಿಗೆ ಈ ಅಧಿಕಾರ ಕೊಟ್ಟಿದ್ದು ಯಾರು? ಇದನ್ನು ವಿವಿಧ ರೀತಿಯಲ್ಲಿ ನೋಡುವುದು ಕಾಂಗ್ರೆಸ್‌ ನವರ ಚಾಳಿ.

ಮುಸ್ಲಿಂ ಗೂಂಡಾಗಳು ಎನ್ನುವ ಈಶ್ವರಪ್ಪ ಹೇಳಿಕೆ ಸರಿಯೇ?
ಕೆಲವೊಮ್ಮೆ ಈಶ್ವರಪ್ಪ ಅವರ ಹೇಳಿಕೆಯನ್ನು ತಿರುಚಿ ಹೇಳುವ ಪ್ರಯತ್ನವಾಗುತ್ತದೆ. ಹರ್ಷ ಹತ್ಯೆ ಪ್ರಕರಣದಲ್ಲಿ ಮುಸ್ಲಿಂ ಗೂಂಡಾಗಳು ಈ ಹತ್ಯೆ ಮಾಡಿದ್ದಾರೆ ಎಂದಿದ್ದಾರೆ. ಆದರೆ, ಅವರು ಎಲ್ಲಿಯೂ ಮುಸ್ಲಿಮರು ಮಾಡಿದ್ದಾರೆ ಎಂದಿಲ್ಲ. ಬದಲಿಗೆ ಮುಸ್ಲಿಂ ಗೂಂಡಾಗಳು ಎಂದಿದ್ದಾರೆ. ಇದರಿಂದಾಗಿ ಮುಸ್ಲಿಮರಿಗೂ ನೆಮ್ಮದಿ. ಏಕೆಂದರೆ, ಇಡೀ ಸಮುದಾಯ ಈ ತಪ್ಪಿನಲ್ಲಿ ಭಾಗಿಯಾಗಿಲ್ಲ. ಬದಲಿಗೆ ಆ ಸಮಾಜದ ಕೆಲ ಗೂಂಡಾಗಳು ಭಾಗಿಯಾಗಿದ್ದಾರೆ ಎಂದಿದ್ದಾರೆ. ಇದರಲ್ಲಿ ತಪ್ಪೇನಿದೆ?

***

ಕೆಲವರಿಗೆ ಗನ್‌ಮ್ಯಾನ್ ಕೊಡುವುದಲ್ಲ, ಹಿಂದುತ್ವ ರಕ್ಷಿಸುವ ಕೆಲಸ ಆಗಬೇಕು.

ಪಿಎಫ್ಐ, ಎಸ್‌ಡಿಪಿಐ ನಿಷೇಧಕ್ಕೆ ಒತ್ತಾಯಿಸಿ ಅಧಿಕಾರಕ್ಕೆ ಬಂದ ಬಳಿಕವೂ, ಅದೇ ಮಾತನ್ನು ಪುನರುಚ್ಛರಿಸುವುದು ನಾಚಿಕೆಗೇಡು

ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಪ್ರಕರಣವನ್ನು ಎನ್ಐಎಗೆ ಕೊಟ್ಟಿದ್ದು ಸರಕಾರವಲ್ಲ. ಅದು ಹೈಕೋರ್ಟ್ ಆದೇಶ

ಹರ್ಷನನ್ನು ಮುಸ್ಲಿಂ ಗೂಂಡಾಗಳು ಹತ್ಯೆ ಮಾಡಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ ಹೊರತು, ಮುಸ್ಲಿಂ ಸಮುದಾಯ ಎಂದಲ್ಲ.

ಗುಪ್ತಚರ ಇಲಾಖೆಯನ್ನು ಸಮರ್ಥವಾಗಿ ಈಗಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದಾಗ ಪ್ರಯತ್ನ
ಮಾಡಲಿಲ್ಲ. ಈಗಿರುವ ಗೃಹ ಸಚಿವರು ಇಂತಹ ಪ್ರಯತ್ನ ಮಾಡಬೇಕು ಎನ್ನುವ ಯೋಚನೆಯನ್ನೂ ಮಾಡುತ್ತಿಲ್ಲ