Wednesday, 11th December 2024

ಹಿಂದೂಸ್ತಾನಿ ಸಂಗೀತದ ಮೇರುಪರ್ವತ

ಭಾವಯಾನ

ಡಾ.ಅಮ್ಮಸಂದ್ರ ಸುರೇಶ್

ದೇಶ-ವಿದೇಶಗಳಲ್ಲಿ ಕರ್ನಾಟಕದ ಮತ್ತು ಹಿಂದೂಸ್ತಾನಿ ಸಂಗೀತದ ಕೀರ್ತಿಪತಾಕೆಯನ್ನು ಹಾರಿಸಿದ ಗಂಗೂಬಾಯಿಯವರು ಮಾನವೀ ಯತೆಯ ಸೆಲೆಯೇ ಆಗಿದ್ದರು. ಮರಣಾನಂತರ ತಮ್ಮ ಕಣ್ಣುಗಳನ್ನು ದಾನಮಾಡುವ ವಾಗ್ದಾನವನ್ನು ಅವರು ಮಾಡಿದ್ದು ಇದಕ್ಕೊಂದು ಪುಟ್ಟ ಸಾಕ್ಷಿ.

ವಿಶಿಷ್ಟವಾದ ಸುಶ್ರಾವ್ಯ ಧ್ವನಿಯ ಮೂಲಕ ಐದು ದಶಕಗಳಿಗೂ ಹೆಚ್ಚು ಕಾಲ ಹಿಂದೂಸ್ತಾನಿ ಸಂಗೀತಪ್ರಿಯರ ಮನಸೂರೆಗೊಂಡಿದ್ದವರು ಡಾ.
ಗಂಗೂಬಾಯಿ ಹಾನಗಲ್. ಕಿರಾನಾ ಘರಾನಾದ ಈ ಮೇರುಕಲಾವಿದೆ ಹುಟ್ಟಿದ್ದು ೧೯೧೫ರ ಮಾರ್ಚ್ ೫ರಂದು. ತಂದೆ ಚಿಕ್ಕೂರಾವ್ ನಾಡಗೀರ್, ತಾಯಿ ಅಂಬಾಬಾಯಿ. ಗಂಗೂಬಾಯಿಯವರ ಪ್ರಾಥಮಿಕ ಶಿಕ್ಷಣವು ಧಾರವಾಡದಲ್ಲಿ ಆಲೂರು ವೆಂಕಟರಾಯರು ಸ್ಥಾಪಿಸಿದ್ದ ರಾಷ್ಟ್ರೀಯ ಶಾಲೆಯಲ್ಲಿ ನಡೆಯಿತು.

ತಾಯಿ ಅಂಬಾಬಾಯಿ ಕರ್ನಾಟಕ ಸಂಗೀತದ ಅತ್ಯುತ್ತಮ ಗಾಯಕಿಯಾಗಿದ್ದರೂ ಹಿಂದೂಸ್ತಾನಿ ಹಾಡುಗಾರಿಕೆಯ ಮೇಲೆ ಅವರಿಗೆ ಇಚ್ಛೆ ಇದ್ದುದರಿಂದ, ಮಗಳಿಗೆ ಉತ್ತಮವಾದ ಸಂಗೀತ ಶಿಕ್ಷಣ ಕೊಡಿಸುವ ಉದ್ದೇಶದಿಂದ ತಮ್ಮ ಕುಟುಂಬದ ವಾಸ್ತವ್ಯವನ್ನು ಹಾನಗಲ್ಲಿನಿಂದ ಧಾರವಾಡಕ್ಕೆ ಸ್ಥಳಾಂತರಿಸಿ ದರು. ಹಿಂದೂಸ್ತಾನಿ ಸಂಗೀತದ ಖ್ಯಾತ ಗಾಯಕರಾದ ಅಬ್ದುಲ್ ಕರೀಮ್ ಖಾನ್, ಹೀರಾಬಾಯಿ ಬಡೋದೆಕರ ಅವರು ಧಾರವಾಡ ಮತ್ತು ಹುಬ್ಬಳ್ಳಿಗೆ ಬಂದಾಗ ಅಂಬಾಬಾಯಿ ಯವರ ಸಂಗೀತ ಕೇಳಲಿಕ್ಕೆಂದೇ ಅವರ ಮನೆಗೆ ಬರುತ್ತಿದ್ದರಂತೆ.

ಇಂಥ ಸಂದರ್ಭದಲ್ಲಿ ಪುಟ್ಟ ಹುಡುಗಿ ಗಂಗೂಬಾಯಿಯ ಮುದ್ದುಮುದ್ದಾದ ಹಾಡುಗಾರಿಕೆಯನ್ನು ಕೇಳಿ ಅಪಾರವಾಗಿ ಮೆಚ್ಚಿಕೊಂಡು, ‘ಈಕೆಗೆ ಶಾಸ್ತ್ರೀಯವಾಗಿ  ಸಂಗೀತ ಕಲಿಸಿದರೆ ಉಜ್ವಲ ಭವಿಷ್ಯವಿದೆ’ ಎಂದು ಹೇಳಿದರಂತೆ. ಹೀಗಾಗಿ, ಬಾಲಕಿ ಗಂಗೂಬಾಯಿಗೆ ಆರಂಭದಲ್ಲಿ ದತ್ತೋಪಂಥ ದೇಸಾಯಿ ಮತ್ತು ಕೃಷ್ಣಾಚಾರ್ಯ ಹುಲಗೂರರ ಬಳಿ ಸಂಗೀತ ಶಿಕ್ಷಣಕ್ಕೆ ಸೇರಿಸಿದರು ಹೆತ್ತವರು.

ಬಳಿಕ, ಕಿರಾನಾ ಘರಾನಾದ ಸುಪ್ರಸಿದ್ಧ ಗಾಯಕರಾದ ಸವಾಯಿ ಗಂಧರ್ವ ಅರ್ಥಾತ್ ರಾಮಭಾವು ಕುಂದಗೋಳಕರ ಅವರ ಶಿಷ್ಯೆಯಾದ ಗಂಗೂ ಬಾಯಿ, ಶ್ರದ್ಧಾಭಕ್ತಿಗಳಿಂದ ಅಭ್ಯಾಸ ಮಾಡಿ ಹಿಂದೂಸ್ತಾನಿ ಸಂಗೀತದಲ್ಲಿ ಪಟುವಾಗಿ ಹೊರಹೊಮ್ಮಿದರು. ಹುಬ್ಬಳ್ಳಿಯಲ್ಲಿ ವಕೀಲ ವೃತ್ತಿ ಮಾಡುತ್ತಿದ್ದ ಗುರುನಾಥ ಕೌಲಗಿ ಎಂಬುವವರನ್ನು ೧೯೨೯ರಲ್ಲಿ ವರಿಸಿದ ಗಂಗೂಬಾಯಿಯವರು, ಪುರುಷರ ಪ್ರಾಬಲ್ಯವಿದ್ದ ಹಿಂದೂಸ್ತಾನಿ ಸಂಗೀತದ ಕೋಟೆ ಯನ್ನು ಪ್ರವೇಶಿಸಿದ ಕರ್ನಾಟಕದ ಮೊದಲ ಗಾಯಕಿ ಎನಿಸಿಕೊಂಡರು. ಕುಲೀನ ಮನೆತನದ ಸ್ತ್ರೀಯರಿಗೆ ಸಂಗೀತ ಕಲಿಯಲು ಅವಕಾವಿಲ್ಲದಿದ್ದ ಕಾಲದಲ್ಲಿ ದಿಟ್ಟಹೆಜ್ಜೆಯಿಟ್ಟು ಸಂಗೀತ ಕ್ಷೇತ್ರವನ್ನು ಪ್ರವೇಶಿಸಿ, ಅದನ್ನು ತಮ್ಮ ಜೀವನದ ದಾರಿಯಾಗಿಸಿಕೊಂಡವರು ಗಂಗೂಬಾಯಿ. ಸಂಗೀತಾಭ್ಯಾಸ
ಮುಗಿಸಿ ವಿಶಿಷ್ಟ ಮಾಧುರ್ಯದ ತಮ್ಮ ಕಂಠದಂದ ಸುಪ್ರಸಿದ್ಧರಾಗುತ್ತಿದ್ದಂತೆ ಧಾರವಾಡದ ಆಕಾಶವಾಣಿ ಅವರನ್ನು ಕೈಬೀಸಿ ಕರೆಯಿತು.

ಆಕಾಶವಾಣಿಯ ಮೂಲಕ ಅವರ ಖ್ಯಾತಿ ಎಲ್ಲೆಡೆ ಹಬ್ಬಲಾರಂಬಿಸಿತು. ಅಂದಿನ ಕಾಲಕ್ಕೆ ಪ್ರಸಿದ್ಧ ಗ್ರಾಮಾಪೋನ್ ಕಂಪನಿ ಎನಿಸಿ ಕೊಂಡಿದ್ದ ‘ಎಚ್‌ಎಂವಿ’, ಗಂಗೂಬಾಯಿಯವರನ್ನು ಮುಂಬೈಗೆ ಕರೆಸಿಕೊಂಡು ಕಛೇರಿಗೆ ಅವಕಾಶಗಳನ್ನು ನೀಡಿತು. ಮುಂಬೈ ಆಕಾಶವಾಣಿಯಲ್ಲೂ ಗಂಗೂಬಾಯಿ ಹಾಡತೊಡಗಿದರು; ಹೀಗಾಗಿ ಅವರ ಸಂಗೀತ ದಿಗ್ವಿಜಯ ಶುರುವಾಯಿತು ಎನ್ನಬೇಕು. ಇವರನ್ನು ಹುಬ್ಬಳ್ಳಿಯಿಂದ ಕರೆಸಿಕೊಂಡಿದ್ದ ರಿಂದಾಗಿ ಎಚ್‌ಎಂವಿ ಕಂಪನಿಯವರು ತಮ್ಮ ಗಾನಮುದ್ರಿಕೆಯಲ್ಲಿ ‘ಗಂಗೂಬಾಯಿ ಹುಬ್ಬಳೀಕರ್’ ಎಂದೇ ಇವರ ಹೆಸರನ್ನು ಅಚ್ಚು ಹಾಕಿಸಿದ್ದರು. ಆದರೆ ತಮ್ಮ ಪೂರ್ವಜರ ಊರಾದ ಹಾನಗಲ್ಲಿನ ಹೆಸರನ್ನೇ ಖ್ಯಾತ ಗೊಳಿಸುವ ಉದ್ದೇಶದಿಂದ ಹಾಗೂ ತಮ್ಮ ಸೋದರ ಮಾವನವರ ಇಚ್ಛೆಯನ್ನು ಪೂರೈಸಲಿಕ್ಕಾಗಿ, ತಮ್ಮ ಹೆಸರಿನ ಜತೆಗೆ ‘ಹುಬ್ಬಳೀಕರ’ ಬದಲಿಗೆ ‘ಹಾನಗಲ್’ ಎಂದು ಮುದ್ರಿಸಬೇಕೆಂಬ ಅಭಿಲಾಷೆಯನ್ನು ಗಂಗೂಬಾಯಿ ವ್ಯಕ್ತ
ಪಡಿಸಿದರು. ಎಚ್‌ಎಂವಿ ಕಂಪನಿಯವರೂ ಅಂತೆಯೇ ನಡೆದುಕೊಂಡರು. ಈ ಹೆಸರು ಅವರ ಜೀವನದುದ್ದಕ್ಕೂ ಕಾಯಂ ಆಗಿದ್ದಲ್ಲದೆ, ಭಾರತಕ್ಕೆ ವಿಶ್ವಮಾನ್ಯತೆಯನ್ನೂ ತಂದು ಕೊಟ್ಟಿತು.

ತಮ್ಮ ಮಗಳು, ಖ್ಯಾತ ಸಂಗೀತ ವಿದುಷಿ ಕೃಷ್ಣಾ ಹಾನಗಲ್ ಮತ್ತು ಸೋದರ, ಖ್ಯಾತ ತಬಲಾ ವಾದಕ ಶೇಷಗಿರಿ ಹಾನಗಲ್ ಅವರ ಜತೆಗೂಡಿ  ಗಂಗೂ ಬಾಯಿ ಹಾನಗಲ್ ಅವರು ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ಸಂಗೀತ ಕಛೇರಿಗಳನ್ನು ನೀಡಿದರು. ಆಹ್ವಾನದ ಮೇರೆಗೆ ತಮ್ಮ ಸಂಗೀತ ಕಛೇರಿಗಳನ್ನು ಭಾರತದಾದ್ಯಂತವಲ್ಲದೆ ಅನ್ಯರಾಷ್ಟ್ರಗಳಾದ ನೇಪಾಳ, ಪಾಕಿಸ್ತಾನ, ಫ್ರಾನ್ಸ್, ಜರ್ಮನಿ, ಅಮೆರಿಕ, ಕೆನಡಾ ಗಳಲ್ಲೂ ನೀಡಿ ಸಂಗೀತಾಸಕ್ತರಿಗೆ ಸಂಗೀತದ ಸವಿಯನ್ನು ಉಣಬಡಿಸಿದ ಹೆಗ್ಗಳಿಕೆ ಗಂಗೂಬಾಯಿ ಅವರದ್ದು. ಹೀಗೆ ದೇಶ-ವಿದೇಶಗಳಲ್ಲಿ ಕರ್ನಾಟಕದ ಮತ್ತು ಹಿಂದೂಸ್ತಾನಿ ಸಂಗೀತದ ಕೀರ್ತಿ ಪತಾಕೆಯನ್ನು ಹಾರಿಸಿದ ಗಂಗೂಬಾಯಿಯವರು ಮಾನವೀಯತೆಯ ಸೆಲೆಯೇ ಆಗಿದ್ದರು.

ಮರಣಾನಂತರ ತಮ್ಮ ಕಣ್ಣುಗಳನ್ನು ದಾನಮಾಡುವ ವಾಗ್ದಾನವನ್ನು ಅವರು ಮಾಡಿದ್ದು ಇದಕ್ಕೊಂದು ಪುಟ್ಟ ಸಾಕ್ಷಿ. ತಮ್ಮ ಗುರುಗಳಾದ ಸವಾಯಿ ಗಂಧರ್ವರ ಹೆಸರಿನಲ್ಲಿ ಕುಂದಗೋಳದಲ್ಲಿ ಪ್ರತಿವರ್ಷ ಸಂಗೀತೋತ್ಸವ ನಡೆಸುತ್ತಿದ್ದ ಗಂಗೂಬಾಯಿ ಅವರು, ಪ್ರಾಥಮಿಕ ಶಿಕ್ಷಣದ ಹಂತದಲ್ಲೇ
ಶಾಸ್ತ್ರೀಯ ಸಂಗೀತವನ್ನು ಪಠ್ಯಕ್ರಮದಲ್ಲಿ ಅಳವಡಿಸಿ, ಸಂಗೀತ ಪರಂಪರೆಯನ್ನು ಸಮರ್ಥವಾಗಿ ಮುಂದುವರಿಸುವ ಉದ್ದೇಶವನ್ನು ಹೊಂದಿದ್ದರು. ಅವರು ವಿಧಾನ ಪರಿಷತ್ ಸದಸ್ಯರಾಗಿ ನಾಮಕರಣಗೊಂಡ ನಂತರ, ಈ ವಿಷಯದಲ್ಲಿ ಸರಕಾರ ಮತ್ತು ಅಧಿಕಾರಿಗಳ ಮೇಲೆ ಒತ್ತಡವನ್ನೂ ಹಾಕಿದರು. ಇದರಿಂದಾಗಿ ಉಣಕಲ್ ಸಮೀಪಕ ಗುರುಕುಲ ಮಾದರಿಯ ಸಂಗೀತ ವಿದ್ಯಾಲಯವನ್ನು ಸರಕಾರ ನಿರ್ಮಿಸಿತು.

ಗಂಗೂಬಾಯಿ ಹಾನಗಲ್ ಅವರ ಅಭಿಲಾಷೆಯನ್ನು ಈಡೇರಿಸುವ ಮತ್ತೊಂದು ಪ್ರಯತ್ನವಾಗಿ, ಮೈಸೂರಿನಲ್ಲಿ ಅವರ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ವನ್ನೂ ಆರಂಭಿಸಲಾಗಿದೆ. ಇದರಿಂದಾಗಿ ಸಂಗೀತದ ಮಾಧುರ್ಯ ಎಲ್ಲಾ ಕಡೆ ಪಸರಿಸುವಂತೆ ಮತ್ತು ಎಲ್ಲರಿಗೂ ಸಿಗುವಂತೆ ಆಗಿದೆ. ಮಾತ್ರವಲ್ಲ, ಗಂಗೂಬಾಯಿಯವರು ಶಾಸೀಯ ಸಂಗೀತದ ಭವಿಷ್ಯದ ಕುರಿತಾಗಿ ತಮ್ಮ ಭಾಷಣಗಳಲ್ಲಿ ಯಾವಾಗಲೂ ಹೇಳುತ್ತಿದ್ದ, ‘ಸಂಗೀತದ
ತೊಟ್ಟಿಲು ನಿಲ್ಲದೆ ಯಾವಾಗಲೂ ತೂಗುತ್ತಲೇ ಇರುತ್ತದೆ; ತೂಗುತ್ತಿದ್ದವರು ಒಬ್ಬರು ಹೋದರೆ, ಮತ್ಯಾರೋ ಒಬ್ಬರು ಬಂದು ಅದಕ್ಕೆ ಕೈಹಚ್ಚೇ ಹಚ್ಚುತ್ತಾರೆ’ ಎಂಬ ಭರವಸೆಯ ಮಾತುಗಳು ನಿರಂತರವಾಗಿ ಉಳಿಯುವಂತಾಗಿದೆ.

ರಾಜ್ಯ ಸಂಗೀತ-ನಾಟಕ ಅಕಾಡೆಮಿ, ಕೇಂದ್ರ ಸಂಗೀತ- ನಾಟಕ ಅಕಾಡೆಮಿಗಳ ವತಿಯಿಂದ ಪಡೆದ ಪ್ರಶಸ್ತಿ, ‘ಪದ್ಮ ಭೂಷಣ’ ಪುರಸ್ಕಾರ, ಮಧ್ಯಪ್ರದೇಶ ಸರಕಾರದಿಂದ ‘ತಾನ್ ಸೇನ್’ ಪ್ರಶಸ್ತಿ, ಕರ್ನಾಟಕ ಸರಕಾರದಿಂದ ‘ಕನಕ-ಪುರಂದರ’ ಪ್ರಶಸ್ತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ‘ನಾಡೋಜ’ ಪದವಿ ಹೀಗೆ ಹತ್ತು ಹಲವು ಪ್ರಶಸ್ತಿ, ಗೌರವಾದರಗಳಿಗೆ ಪಾತ್ರರಾಗಿದ್ದ ಗಂಗೂಬಾಯಿಯವರು, ‘ಸ್ವರಶಿರೋಮಣಿ’, ‘ಸಂಗೀತ ಕಲಾರತ್ನ’, ‘ಸಂಗೀತ ವಿದ್ವನ್ಮಣಿ’ ಸೇರಿದಂತೆ ಹಲವು ಬಿರುದುಗಳನ್ನೂ ಮುಡಿಗೇರಿಸಿಕೊಂಡರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಗುಲಬರ್ಗಾ ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯ ಸೇರಿದಂತೆ ಹಲವು ವಿವಿಗಳಿಂದ ಗೌರವ ಡಾಕ್ಟರೇಟ್ ಪಡೆದಿದ್ದ ಅವರು ಭಾರತ ಸರಕಾರದ ಸಂಗೀತ-ನಾಟಕ ಅಕಾಡೆಮಿಯ ಫೆಲೋಷಿಪ್ ಗೂ ಭಾಜನರಾಗಿದ್ದರು.

ಹಾನಗಲ್‌ನಲ್ಲಿ ಹುಟ್ಟಿ, ಧಾರವಾಡದಲ್ಲಿ ಬೆಳೆದು, ವಿಶ್ವಾದ್ಯಂತ ಸಂಗೀತದ ಸುಧೆಯನ್ನು ಹರಿಸಿದ ಗಂಗೂಬಾಯಿ ಹಾನಗಲ್ ಅವರು ೯೬ ವರ್ಷಗಳ ಸಾರ್ಥಕ ಜೀವನವನ್ನು ಪೂರೈಸಿ ೨೦೦೯ರ ಜುಲೈ ೨೧ರಂದು ಅಸ್ತಂಗತರಾಗಿ ಸಂಗೀತದ ಆಗಸದಲ್ಲಿ ಧ್ರುವತಾರೆಯಾದರು.

(ಲೇಖಕರು ಸಾಮಾಜಿಕ ತಜ್ಞರು)