Saturday, 14th December 2024

ಸತ್ತವರು ನಮ್ಮ ಸಂಬಂಧಿಕರೇನೂ ಅಲ್ಲವಲ್ಲ, ಸರ್‌ !

ಸಂಗತ

ಡಾ.ವಿಜಯ್ ದರಡಾ

ದೇಶದಲ್ಲಿ ಹೋರ್ಡಿಂಗ್ ಮಾಫಿಯಾ ಅಸ್ತಿತ್ವದಲ್ಲಿದೆ. ಜನಸಾಮಾನ್ಯರಿಗೆ ಮರಳು ಮಾಫಿಯಾ ಗೊತ್ತಿದೆ. ಆದರೆ ಈ ಹೋರ್ಡಿಂಗ್ ಮಾಫಿಯಾ ಇನ್ನೂ ಬಲಿಷ್ಠವಾಗಿದೆ. ರಾಜಕೀಯ ನಾಯಕರಿಂದ ಹಿಡಿದು ಅಧಿಕಾರಿಗಳವರೆಗೆ ನಾನಾ ರೀತಿಯ ಪ್ರಭಾವಿಗಳು ಇದರಲ್ಲಿ ಕೈಜೋಡಿಸಿ ದ್ದಾರೆ. ಈಗ ನಮಗಿರುವ ಏಕೈಕ ಭರವಸೆಯೆಂದರೆ ಕೋರ್ಟ್‌ಗಳು ಮಾತ್ರ.

ನೀವೊಬ್ಬ ನಾಯಕ, ಸರ್. ನೀವೊಬ್ಬ ಅಧಿಕಾರಿ, ಸರ್. ನೀವು ಇಡೀ ವ್ಯವಸ್ಥೆಯನ್ನು ನಿಮ್ಮ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡುವಲ್ಲಿ ಎಕ್ಸ್‌ಪರ್ಟ್ ಇದ್ದೀರಿ, ಸರ್! ನಿಮಗೆ ಈ ಮಾತುಗಳು ಕಹಿ ಅನ್ನಿಸಬಹುದು. ಬಹುಶಃ ನಾನು ನಿಮಗೆ ಅವಮಾನ ಮಾಡುತ್ತಿದ್ದೇನೆ ಎಂದೂ ನೀವಿದನ್ನು ವಿಶ್ಲೇಷಿಸ ಬಹುದು. ಹಾಗಿದ್ದರೆ ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುತ್ತೇನೆ: ವ್ಯವಸ್ಥೆ ನಿಮ್ಮ ನಿಯಂತ್ರಣದಲ್ಲಿದೆ. ನೀವೇ ಈ ಸರಕಾರ ನಡೆಸುತ್ತಿದ್ದೀರಿ, ಸರ್! ಆದರೆ ‘ಜನಸಾಮಾನ್ಯ ಎಂದು ಕರೆಸಿಕೊಳ್ಳುವ ಯಃಕಶ್ಚಿತ್ ಹುಲುಮಾನವರ ಬಗ್ಗೆ ಯೋಚಿಸಲು, ಅವರ ಬಗ್ಗೆ ತಲೆಕೆಡಿಸಿಕೊಳ್ಳಲು ನಿಮಗೆ ಸಮಯವಾದರೂ ಎಲ್ಲಿದೆ!

ಮುಂಬೈನ ಹೊರವಲಯದಲ್ಲಿ ದೈತ್ಯಾಕಾರದ ರಾಕ್ಷಸನಂತೆ ತಲೆಯೆತ್ತಿ ನಿಂತಿದ್ದ ಬೃಹತ್ತಾದ ಅಕ್ರಮ ಹೋರ್ಡಿಂಗ್‌ನ ಅಡಿಗೆ ಸಿಲುಕಿ ೧೬ ಜನರು ದಯನೀಯವಾಗಿ ಸತ್ತುಹೋದರಲ್ಲ, ಅವರು ನಿಮಗೇನೂ ಸಂಬಂಧಿಕರಲ್ಲ. ಹಾಗಾಗಿ ನೀವೇಕೆ ಅವರ ಸಾವಿಗೆ ದುಃಖಪಡುತ್ತೀರಿ ಅಲ್ಲವೇ. ಇಂತಹು ದೆಲ್ಲ ನಡೆಯುತ್ತಲೇ ಇರುತ್ತದೆ ಎಂದು ನೀವು ಅಂಗಿ ಕೊಡವಿಕೊಂಡು ಮುಂದೆ ಹೋಗುತ್ತೀರಿ, ಅಲ್ಲವೇ? ಸರ್, ಗೊತ್ತು ಬಿಡಿ, ಜನಸಾಮಾನ್ಯರು ಹುಟ್ಟಿರುವುದೇ ಸಾಯುವುದಕ್ಕಾಗಿ. ಮತ್ತು ನೀವು ಜನಸಾಮಾನ್ಯ ಅಲ್ಲ..!

ಆದರೆ, ಇಲ್ಲೊಂದು ಪ್ರಶ್ನೆಯಿದೆ, ಸರ್! ಅಲ್ಲಿ ಸಂಭವಿಸಿರುವುದು ಅಪಘಾತವಲ್ಲ, ಅದು ೧೬ ಜನರ ಬರ್ಬರ ಕೊಲೆ ಎಂದು ನಿಮಗೆ ಅನ್ನಿಸುವುದಿಲ್ಲವೇ? ಖಂಡಿತ ನನಗೆ ಆ ಹೋರ್ಡಿಂಗ್‌ನ ಮಾಲಿಕರ ವಿರುದ್ಧ ಪಂತನಗರ ಪೊಲೀಸ್ ಠಾಣೆಯಲ್ಲಿ ಉದ್ದೇಶಪೂರ್ವಕವಲ್ಲದ ಹತ್ಯೆಯ ಕೇಸು ದಾಖಲಿಸಿದ್ದಾರೆ ಎಂಬುದು ಗೊತ್ತಿದೆ. ಇಗೋ ಮೀಡಿಯಾ ಕಂಪನಿಯ ಮಾಲಿಕ ಭವೇಶ್ ಭಿಂಡೆ ಆ ದೈತ್ಯಾಕಾರದ ಹೋರ್ಡಿಂಗ್ ಹಾಕಿದ್ದರು. ಅದಕ್ಕೆ ಯಾರ ಅನುಮತಿಯನ್ನೂ ತೆಗೆದುಕೊಂಡಿರಲಿಲ್ಲ. ಅದೊಂದು ಅಕ್ರಮ ಹಾಗೂ ಕಾನೂನುಬಾಹಿರವಾದ ಹೋರ್ಡಿಂಗ್ ಆಗಿತ್ತು. ಹೀಗಾಗಿ ಈ ಜನರ ಸಾವಿಗೆ ಅವರು ಪರೋಕ್ಷ ಕಾರಣ ಎಂದು ಭಾವಿಸಿ ಉದ್ದೇಶ ಪೂರ್ವಕವಲ್ಲ ಹತ್ಯೆ ಕೇಸು ದಾಖಲಿಸಿದ್ದಾರೆ.

ನನ್ನ ಪ್ರಶ್ನೆಯಿರುವುದು ಇದರ ಬಗ್ಗೆಯೇ. ಏಕೆ ಅವರ ವಿರುದ್ಧ ಕೊಲೆ ಕೇಸು ದಾಖಲಿಸಿಲ್ಲ? ಏಕೆ ಪೊಲೀಸರು ಉದ್ದೇಶಪೂರ್ವಕವಲ್ಲದ ಕೊಲೆ ಕೇಸು ದಾಖಲಿಸಿದ್ದಾರೆ? ೧೨೦ ಅಡಿ ಅಗಲ ಮತ್ತು ೧೨೦ ಅಡಿ ಉದ್ದದ ಈ ರಾಕ್ಷಸನಂತಹ ಹೋರ್ಡಿಂಗನ್ನು ೧೦೦ ಅಡಿ ಎತ್ತರದಲ್ಲಿ ಅಕ್ರಮವಾಗಿ ಕಟ್ಟಿ
ನಿಲ್ಲಿಸಿದ್ದು ಬೃಹತ್ ಮುಂಬೈ ಮಹಾನಗರ ಪಾಲಿಕೆಯವರಿಗೂ ಗೊತ್ತಿರಲಿಲ್ಲವಂತೆ, ಆ ಜಾಗದ ಮಾಲಿಕರಾದ ರೈಲ್ವೆ ಇಲಾಖೆಯವರಿಗೂ ಗೊತ್ತಿರಲಿಲ್ಲ ವಂತೆ. ಎಷ್ಟು ಚೆನ್ನಾಗಿದೆ ಈ ಕಟ್ಟುಕತೆ! ನಿಯಮಗಳ ಪ್ರಕಾರ ಮುಂಬೈನ ಆ ಪ್ರದೇಶದಲ್ಲಿ ೪೦ ಅಡಿ ಉದ್ದ ಮತ್ತು ೪೦ ಅಡಿ ಅಗಲಕ್ಕಿಂತ ದೊಡ್ಡ ಹೋರ್ಡಿಂಗ್ ಹಾಕುವಂತಿಲ್ಲ. ಅದನ್ನು ನಿಷೇಧಿಸಲಾಗಿದೆ. ಆದರೆ ಈ ವ್ಯಕ್ತಿ ಅದಕ್ಕಿಂತ ಮೂರು ಪಟ್ಟು ದೊಡ್ಡ ಹೋರ್ಡಿಂಗ್‌ನ್ನು ವಿಮಾನದಿಂದಲೂ ಕಾಣಿಸುವಂತೆ ಹಾಕಿದ್ದ. ಎಲ್ಲರಿಗೂ ಎಲ್ಲವೂ ಗೊತ್ತಿದೆ, ಸರ್! ಆದರೆ ಭ್ರಷ್ಟಾಚಾರದಲ್ಲಿ ಎಲ್ಲರೂ ಪಾಲುದಾರರಾಗಿರುವಾಗ ಅವರೆಲ್ಲರೂ ತಮ್ಮ ಆತ್ಮಸಾಕ್ಷಿಯ ಜೊತೆಗೇ ರಾಜಿ ಮಾಡಿಕೊಂಡುಬಿಡುತ್ತಾರೆ.

ಒಂದು ವೇಳೆ ನಿಮ್ಮ ಆತ್ಮಸಾಕ್ಷಿ ಶುದ್ಧವಾಗಿದೆ ಎಂದೇನಾದರೂ ನಾವು ಭಾವಿಸಬೇಕು ಅಂತಾದರೆ, ನೀವು ಈಗಲಾದರೂ ಭವೇಶ್ ಭಿಂಡೆಯ ಅಸಾಧಾ ರಣ ಪ್ರಭಾವಕ್ಕೆ ಮಣಿಯುತ್ತಿರಲಿಲ್ಲ. ಆ ವ್ಯಕ್ತಿಯ ವಿರುದ್ಧ ೨೬ ಪೊಲೀಸ್ ಕೇಸುಗಳು ಇವೆ ಎಂಬ ವದಂತಿಗಳಿವೆ. ಆತ ೨೦೦೯ರ ಚುನಾವಣೆಯಲ್ಲಿ ಮುಲುಂಡ್ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿ ಯಾಗಿ ಚುನಾವಣೆಗೂ ಸ್ಪಽಸಿದ್ದನಂತೆ. ಸರ್, ಅಽಕಾರಿಗಳು ಹಾಗೂ ರಾಜಕೀಯ ನಾಯಕರ ಈ ಅಪವಿತ್ರ ಹಾಗೂ ಖೂಳ ಕೂಟದಿಂದ ವ್ಯವಸ್ಥೆಯೇ ಕೊಲೆಯಾಗುತ್ತಿದೆ. ಇದು ಮುಂಬೈನ ಬಗ್ಗೆ ಮಾತ್ರ ಇರುವ ಆತಂಕವಲ್ಲ, ಸರ್. ಇಂತಹ ದುರಂತಗಳು ಈ ಹಿಂದೆಯೂ ಮಹಾರಾಷ್ಟ್ರದಲ್ಲಿ ಹಾಗೂ ದೇಶದ ಇನ್ನೂ ಸಾಕಷ್ಟು ನಗರಗಳಲ್ಲಿ ಸಂಭವಿಸಿವೆ.

ಇತ್ತೀಚಿನ ಮುಂಬೈ ದುರಂತದಲ್ಲಿ ೧೬ ಮುಗ್ಧ ಜೀವಗಳು ಹತ್ಯೆಯಾಗಿ, ೭೦ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದು ದೊಡ್ಡ  ದುರಂತವಾಗಿರುವು ದರಿಂದ ದೊಡ್ಡ ಪ್ರಮಾಣದಲ್ಲೇ ಜನಾಕ್ರೋಶವೂ ವ್ಯಕ್ತವಾಗಿದೆ. ಏಕೆ ನೀವು ಹಾಗೂ ನಿಮ್ಮ ವ್ಯವಸ್ಥೆಯು ಜನರು ಸಾಯುವವರೆಗೂ ಎಚ್ಚರಗೊಳ್ಳುವು ದಿಲ್ಲ? ಪ್ರತಿ ಎರಡು ವರ್ಷಕ್ಕೊಮ್ಮೆ ಹೋರ್ಡಿಂಗ್ ಗಳ ಆಡಿಟ್ ನಡೆಸಲಾಗುತ್ತಿದೆ ಎಂದು ನೀವು ಸ್ಪಷ್ಟನೆ ನೀಡಬಹುದು. ಹಾಗಿದ್ದರೆ ನನ್ನ ಪ್ರಶ್ನೆ ಏನೆಂದರೆ, ಏಕೆ ಆ ಆಡಿಟ್ ನಲ್ಲಿ ಅಕ್ರಮ ಹೋರ್ಡಿಂಗ್‌ಗಳು ಪತ್ತೆಯೇ ಆಗುವುದಿಲ್ಲ? ವರದಿಗಳ ಪ್ರಕಾರ ಮುಂಬೈನಲ್ಲಿ ೧೦೨೫ ಹೋರ್ಡಿಂಗ್‌ ಗಳಿವೆ.

ಅವುಗಳ ಪೈಕಿ ೧೭೯ ಹೋರ್ಡಿಂಗ್‌ಗಳು ರೈಲ್ವೆ ಇಲಾಖೆಗೆ ಸೇರಿದ ಜಾಗದಲ್ಲಿವೆ. ನಿಜವಾಗಿಯೂ ಮುಂಬೈನಲ್ಲಿ ಇಷ್ಟೇ ಹೋರ್ಡಿಂಗ್‌ಗಳಿವೆಯೇ? ಹಾದಿಬೀದಿಯಲ್ಲೆಲ್ಲ ಹೋರ್ಡಿಂಗ್‌ಗಳು ಕಾಣಿಸುವಾಗ, ಇಷ್ಟು ದೊಡ್ಡ ಮುಂಬೈ ಶಹರದಲ್ಲಿ ಕೇವಲ ೧೦೨೫ ಹೋರ್ಡಿಂಗ್‌ಗಳಿವೆ ಅಂದರೆ ಹೇಗೆ ನಂಬುವುದು, ಸರ್? ಅದು ಹೋಗಲಿ, ಹೋರ್ಡಿಂಗ್‌ಗಳ ವಿಷಯದಲ್ಲಿ ಅದೇನದು ಮಹಾನಗರ ಪಾಲಿಕೆ ಹಾಗೂ ರೈಲ್ವೆ ಇಲಾಖೆ ನಡುವಿನ ವ್ಯಾಪ್ತಿಯ ತಿಕ್ಕಾಟ? ಈ ವ್ಯಾಪ್ತಿ, ಜುರಿಡಿಕ್ಷನ್‌ಗಳ ತಲೆನೋವೆಲ್ಲ ನಿಮ್ಮ ಪ್ರಾಬ್ಲಂ, ಸರ್! ಮನೆಮಂದಿಗೆಲ್ಲ ಊಟ ಹಾಕುವ ಯಜಮಾನನನ್ನೇ ಕುಟುಂಬ ದವರು ಕಳೆದುಕೊಂಡಿರುವಾಗ ಈ ವ್ಯಾಪ್ತಿಯ ಸಮಸ್ಯೆಯನ್ನು ಅವರಿಗೆ ಹೇಳಿ ಸಮಾಧಾನ ಮಾಡಲು ನಿಮ್ಮಿಂದ ಸಾಧ್ಯವಿದೆಯೆ? ಮನೆಯ ಸದಸ್ಯರನ್ನು ಕಳೆದುಕೊಂಡವರ ಕಣ್ಣಿನಲ್ಲಿ ಹೀಗೆ ಅಕ್ರಮ ಹೋರ್ಡಿಂಗ್‌ಗಳು ಎದ್ದು ನಿಲ್ಲುವಾಗ ಕಣ್ಮುಚ್ಚಿಕೊಂಡು ಸುಮ್ಮನಿದ್ದ ಅಽಕಾರಿಗಳು, ನಾಯಕರೆಲ್ಲರೂ ಕೊಲೆಗಡುಕರೇ ಆಗಿದ್ದಾರೆ.

ಸದ್ಯ ನಾನು ಅಮೆರಿಕ ಮತ್ತು ಮೆಕ್ಸಿಕೋ ಪ್ರವಾಸದಲ್ಲಿದ್ದೇನೆ. ಇಲ್ಲಿನ ಸುಂದರವಾದ ರಸ್ತೆಗಳ ಅಕ್ಕಪಕ್ಕ ಎಲ್ಲೂ ಹೋರ್ಡಿಂಗ್ ಗಳೇ ಕಾಣಿಸುವುದಿಲ್ಲ. ಇಲ್ಲಿನ ಫುಟ್‌ಪಾತುಗಳಲ್ಲಿ ನಡೆದುಕೊಂಡು ಹೋಗುವಾಗ ನನಗೆ ನಮ್ಮೂರಿನ ಫುಟ್‌ಪಾತುಗಳು ನೆನಪಾಗುತ್ತವೆ. ಈ ದೇಶದ ಫುಟ್‌ಪಾತಿನಲ್ಲಿ ನಡೆದು ಕೊಂಡು ಹೋಗಲು ಎಷ್ಟು ಹಾಯೆನಿಸುತ್ತದೆ, ಆದರೆ ನಮ್ಮೂರಿನ ಫುಟ್ ಪಾತಿನಲ್ಲಿ ಹೆಜ್ಜೆಹೆಜ್ಜೆಗೂ ಅಂಗಡಿಗಳು, ಬೀದಿ ವ್ಯಾಪಾರಿಗಳ ಕಿರಿಕಿರಿಗಳು ಅಟಕಾಯಿಸಿ ಕೊಳ್ಳುತ್ತವೆ. ಇಲ್ಲಿನ ಫುಟ್‌ಪಾತ್ ಅಥವಾ ರಸ್ತೆಗಳ ಪಕ್ಕದಲ್ಲಿ ಒಂದೇ ಒಂದು ಬ್ಯಾನರ್ ಅಥವಾ ಬಿಲ್ ಬೋರ್ಡ್‌ಗಳು ಕಾಣಿಸುವುದಿಲ್ಲ. ಏಕೆ ನಮ್ಮ ದೇಶದಲ್ಲಿ ಮಾತ್ರ ಅವು ಕಣ್ಣುಬಿಟ್ಟು ನೋಡಿದಲ್ಲೆಲ್ಲ ಕಾಣಿಸುತ್ತವೆ? ಏನಿದು ನಮ್ಮ ದುರವಸ್ಥೆ? ನಮ್ಮ ದೇಶದ ರಾಜಕೀಯ ಪಕ್ಷಗಳು ಹಾಗೂ ಅವುಗಳ ನಾಯಕರು ಸೇತುವೆಗಳ ಮೇಲೆ, ಟ್ರಾಫಿಕ್ ಸಿಗ್ನಲ್‌ಗಳಲ್ಲಿ, ಡಿವೈಡರ್‌ಗಳ ಮೇಲೆ, ಇಂಟರ್‌ಸೆಕ್ಷನ್‌ಗಳಲ್ಲಿ ಹೋರ್ಡಿಂಗ್ ಹಾಕುವುದು ತಮ್ಮ ಆಜನ್ಮಸಿದ್ಧ ಹಕ್ಕು ಎಂದೇ ಭಾವಿಸಿದ್ದಾರೆ. ಕೊನೆಗೆ ಅವರು ಕರೆಂಟ್ ಕಂಬಗಳನ್ನೂ ಬಿಡುವುದಿಲ್ಲ.

ಎಲ್ಲಿ ನೋಡಿದರೂ ಯಾವನೋ ಒಬ್ಬನ ಫೋಟೋ ಹಾಕಿ ಶುಭಾಶಯ ಕೋರಿರುತ್ತಾರೆ ಅಥವಾ ಇನ್ನಾವುದೋ ದೇವರ ಚಿತ್ರ ಹಾಕಿ ಬ್ಯಾನರ್
ಅಳವಡಿಸಿರುತ್ತಾರೆ. ಐತಿಹಾಸಿಕ ಕಟ್ಟಡಗಳನ್ನೂ ಈ ದುಷ್ಟರು ಬಿಡುವುದಿಲ್ಲ. ಅವುಗಳಿಗೂ ಮೊಳೆ ಹೊಡೆದು ಬೋರ್ಡು ನೇತುಹಾಕುತ್ತಾರೆ. ಅವು ಯಾವತ್ತೋ ಒಂದು ದಿನ ಯಾರೋ ಅಮಾಯಕನ ತಲೆಯ ಮೇಲೆ ಬೀಳುತ್ತವೆ. ಏಕೆ ಈ ಹೋರ್ಡಿಂಗ್‌ಗಳ ಕಾಟದಿಂದ ಜನರಿಗೆ ಮುಕ್ತಿ ದೊರಕಿಸಲು ನಮ್ಮ ಸೂಕ್ಷ್ಮ ಮನಸ್ಸಿನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬಾರದು? ನನ್ನ ಪ್ರಾಮಾಣಿಕ ಮನವಿಯಿದು. ದಯವಿಟ್ಟು ನಮಗೆ ಈ ಹೋರ್ಡಿಂಗ್‌ಗಳ ಕಿರುಕುಳದಿಂದ ಮುಕ್ತಿ ಕೊಡಿಸಿ.

ಭಾರತ ಸದ್ಯದಲ್ಲೇ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. ಆ ಘನತೆಗೆ ತಕ್ಕಂತೆ ನಮ್ಮ ನಡತೆಯೂ ಇರಬೇಕಲ್ಲವೇ! ಭಾರತದ ಮುಖ್ಯ ನ್ಯಾಯಮೂರ್ತಿಯಾಗಿದ್ದ ಪಿ.ಎನ್.ಭಗವತಿಯವರು ಅವರ ಅವಧಿಯಲ್ಲಿ ಕೈಗೊಂಡಿದ್ದ ಸಕಾರಾತ್ಮಕ ಕ್ರಮಗಳು ನನಗೆ ನೆನಪಿವೆ.
ಅವರ ಅವಧಿಯಲ್ಲಿ ಅಕ್ರಮ ಹೋರ್ಡಿಂಗ್‌ಗಳು ಕಾಣಿಸಿದಾಗಲೆಲ್ಲ ಕೋರ್ಟುಗಳು ಸ್ವಯಂಪ್ರೇರಿತವಾಗಿ ಕೇಸು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದವು. ಅದರ ಪರಿಣಾಮವಾಗಿ ಬೇರೆ ಬೇರೆ ರಾಜ್ಯಗಳ ಹೈಕೋರ್ಟ್‌ಗಳು ಹೋರ್ಡಿಂಗ್ ಗಳನ್ನು ಅಳವಡಿಸುವುದಕ್ಕೆ ಕಠಿಣ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೊಳಿಸಿದವು. ಅಕ್ರಮ ಹೋರ್ಡಿಂಗ್‌ಗಳು ಹಾಗೂ ಬ್ಯಾನರ್‌ಗಳ ವಿರುದ್ಧ ಕ್ರಮ ಕೈಗೊಳ್ಳದ ಮಹಾರಾಷ್ಟ್ರದ ರಾಜ್ಯ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್ ೨೦೨೩ರ ಡಿಸೆಂಬರ್‌ನಲ್ಲಿ ಛೀಮಾರಿ ಹಾಕಿತ್ತು. ೨೦೧೭ರ ನಂತರ ಕೋರ್ಟ್‌ಗಳು ನಿರಂತರವಾಗಿ ರಾಜ್ಯ ಸರ್ಕಾರಗಳು ಹಾಗೂ ಸ್ಥಳೀಯ ಮಹಾನಗರ ಪಾಲಿಕೆಗಳಿಗೆ ಈ ವಿಷಯದಲ್ಲಿ ಸಲಹೆ ಸೂಚನೆಗಳನ್ನು ನೀಡುತ್ತಲೇ ಬಂದಿವೆ. ರಾಜಕೀಯ, ಧಾರ್ಮಿಕ ಅಥವಾ ವಾಣಿಜ್ಯ
ಸಂಸ್ಥೆಗಳು ಸಾರ್ವಜನಿಕ ಸ್ಥಳಗಳನ್ನು, ರಸ್ತೆಗಳನ್ನು ಹಾಗೂ ಫುಟ್‌ಪಾತುಗಳನ್ನು ವೈಯಕ್ತಿಕ ಲಾಭಕ್ಕಾಗಿ ಹೋರ್ಡಿಂಗ್ ಅಳವಡಿಸುವುದಕ್ಕೆ ಬಳಸು ವಂತಿಲ್ಲ ಎಂದು ಅವು ಸ್ಪಷ್ಟವಾಗಿ ಹೇಳಿವೆ.

ಆದರೂ ಮಹಾನಗರ ಪಾಲಿಕೆ, ಎಂಎಂಆರ್‌ಡಿಎ ಹಾಗೂ ಮೆಟ್ರೋ ನಿಗಮಗಳು ಈ ನಿರ್ದೇಶನಗಳನ್ನು ರಾಜಾರೋಷವಾಗಿ ಗಾಳಿಗೆ ತೂರುತ್ತಿವೆ. ಅದರ ಕೀರ್ತಿ ರಾಜಕೀಯ ನಾಯಕರು ಹಾಗೂ ಅಧಿಕಾರಿಗಳ ದುಷ್ಟಕೂಟಕ್ಕೆ ಸಲ್ಲುತ್ತದೆ! ನಮ್ಮ ದೇಶದಲ್ಲಿ ನೀರು, ಕರೆಂಟ್ ಕದಿಯುವವರಿಂದ ಹಿಡಿದು ಸೇತುವೆ, -ಓವರ್‌ಗಳನ್ನೇ ಕದಿಯುವವರೆಗೆ ಡಜನ್ ಗಟ್ಟಲೆ ಮಾಫಿಯಾಗಳಿವೆ, ಸರ್! ಈ ವ್ಯವಸ್ಥೆ ಕೆಟ್ಟು ಕೊಳಕೆದ್ದುಹೋಗಿದೆ. ಸರ್, ಭಂಡಾರಾದಲ್ಲಿ ಸಂಭವಿಸಿದ ಮಕ್ಕಳ ದುರಂತ ಸಾವನ್ನು ನೀವು ಮರೆತಿರಲಿಕ್ಕಿಲ್ಲ. ಆದರೆ ನಂತರ ಆ ಪ್ರಕರಣದಲ್ಲಿ ಏನಾಯಿತು? ಎಷ್ಟು ಜನರಿಗೆ ಶಿಕ್ಷೆಯಾಯಿತು? ಅದೇನಾದರೂ ನಿಮಗೆ ನೆನಪಿದೆಯೇ? ಈಗ ನಮ್ಮೆದುರು ಇರುವ ಏಕೈಕ ಆಶಾಕಿರಣವೆಂದರೆ ಕೋರ್ಟ್‌ಗಳು. ಈ ಮಾಫಿಯಾಗಳು ಬೇರೆ ಯಾರ ಮಾತನ್ನೂ ಕೇಳುವುದಿಲ್ಲ. ಅಕ್ರಮ ಹೋರ್ಡಿಂಗ್‌ಗಳನ್ನು ಅಳವಡಿಸುವ ಅವಕಾಶ ನೀಡುವ ಅಧಿಕಾರಿಗಳು ಹಾಗೂ ವ್ಯಕ್ತಿಗಳನ್ನು ಇಂತಹ ಘಟನೆಗೆ ನೇರವಾಗಿ ಹೊಣೆಗಾರರನ್ನಾಗಿ ಮಾಡದಿದ್ದರೆ ಈ ಮಾಫಿಯಾಗಳನ್ನು ಬಗ್ಗಿಸುವುದಕ್ಕೆ ಸಾಧ್ಯವೇ ಇಲ್ಲ ಎಂಬುದು ನನಗೆ ಮನದಟ್ಟಾಗಿದೆ.

ಸರ್, ಪರಿಸ್ಥಿತಿ ಕೆಟ್ಟ ಹಂತದಿಂದ ಕಡುಕೆಟ್ಟ ಹಂತಕ್ಕೆ ಹೋಗಿ ತಲುಪಿದೆ. ಈಗಲಾದರೂ ನೀವು ಕಠಿಣ ಕ್ರಮ ಕೈಗೊಳ್ಳಲೇಬೇಕು. ದಯವಿಟ್ಟು ಏನಾ
ದರೂ ಮಾಡಿ, ಸರ್. ಇಲ್ಲದಿದ್ದರೆ ಹೇಗಿದ್ದರೂ ಜನರ ಕೈಲಿ ಮತ ಎಂಬ ಅತ್ಯಂತ ಪ್ರಬಲ ಅಸವಿದೆ. ಅದನ್ನು ಯಾರೂ ಕೀಳಂದಾಜು ಮಾಡಬೇಡಿ.

(ಲೇಖಕರು : ಹಿರಿಯ ಪತ್ರಕರ್ತರು, ರಾಜ್ಯಸಭಾ ಮಾಜಿ ಸದಸ್ಯರು)