Sunday, 15th December 2024

ರಜೆ ಅರ್ಥಪೂರ್ಣವಾಗಿರಲಿ !

ಕಳಕಳಿ

ಹರಳಹಳ್ಳಿ ಪುಟ್ಟರಾಜು

ಕಳೆದ ಹತ್ತು ತಿಂಗಳಿಂದ ಶಾಲೆ ಹಾಗೂ ಪರೀಕ್ಷಾ ಒತ್ತಡವನ್ನು ಅನುಭವಿಸಿ ಬಸವಳಿದಿದ್ದ ಮಕ್ಕಳಿಗೆ ಬೇಸಗೆ ರಜೆ ಪ್ರಾರಂಭವಾಗಿದೆ. ಬೇಸಗೆ ರಜೆಯ ಅವಧಿಯಲ್ಲಿ ಸಂಪೂರ್ಣ ಮಜಾ ಮಾಡಬಹುದು ಎಂಬ ಭಾವನೆ ಮಕ್ಕಳಲ್ಲಿ ಕೆನೆಗಟ್ಟಿರುತ್ತದೆ. ಆದರೆ, ಮಜಾ ಅನುಭವಿಸುವುದರ ಜತೆಗೆ ರಜೆಯನ್ನು ಅರ್ಥಪೂರ್ಣವಾಗಿ ಕಳೆಯುವುದು ಬಹಳ ಮುಖ್ಯ ಎಂಬುದನ್ನು ಮಕ್ಕಳು ಮರೆಯಬಾರದು. ಈ ನಿಟ್ಟಿನಲ್ಲಿ ಪೋಷಕರ ಪಾತ್ರ ಮಹತ್ತರವಾದುದು.

ಬೇಸಗೆ ರಜೆಯ ಸುದೀರ್ಘ ಅವಧಿಯಲ್ಲಿ, ಮನೆಯಲ್ಲಿನ ಹಿರಿಯರು, ಬಂಧು-ಮಿತ್ರರು ಮಕ್ಕಳಲ್ಲಿ ಉತ್ತಮ ಹವ್ಯಾಸಗಳನ್ನು ಬೇರೂರಿಸಿದರೆ ಅವೇ ಮುಂದೆ ಮಕ್ಕಳ ವೈಯಕ್ತಿಕ ಹಾಗೂ ಶೈಕ್ಷಣಿಕ ಬದುಕಿಗೆ ಪೂರಕವಾಗಿ ಪರಿಣಮಿಸುತ್ತವೆ. ಐತಿಹಾಸಿಕ ಹಿನ್ನೆಲೆ, ಭೌಗೋಳಿಕ ಮಹತ್ವ ಇರುವ ಪ್ರವಾಸಿ ತಾಣಗಳಿಗೆ ಮತ್ತು ವೈಜ್ಞಾನಿಕ ಪ್ರಾಮುಖ್ಯವಿರುವ ನೆಲೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಪರಿಚಯ ಮಾಡಿಸಬೇಕು. ಪುರಾತನ ಕೋಟೆಗಳು, ಸ್ಮಾರಕಗಳಲ್ಲಿ ಇತಿಹಾಸವನ್ನು ಸಾರುವ ಸಾಕಷ್ಟು ಅಂಶಗಳಿರುತ್ತವೆ ಹಾಗೂ ಅವುಗಳಿಂದ ಮಕ್ಕಳ ಕಲಿಕೆಗೆ ಪುಷ್ಟಿ ದೊರಕುತ್ತದೆ.

ಇನ್ನು, ವಿಜ್ಞಾನ ಸಂಸ್ಥೆಗಳು, ತಾರಾಲಯದಂಥ ತಾಣಗಳಿಗೆ ಮಕ್ಕಳನ್ನು ಕರೆದೊಯ್ಯುವುದರಿಂದ ಅವರಲ್ಲಿ ಕುತೂಹಲ ಮತ್ತು ಆಸಕ್ತಿ ಇನ್ನಷ್ಟು
ಹೆಚ್ಚುತ್ತವೆ. ಮಕ್ಕಳಲ್ಲಿ ಪರಿಸರ ಕಾಳಜಿಯನ್ನು ಮೂಡಿಸಲೆಂದು ಮನೆಯೆ ದುರಿನ ಜಾಗದಲ್ಲೋ ಅಥವಾ ಕುಂಡಗಳಲ್ಲೋ ಗಿಡಗಳನ್ನು ಬೆಳೆಸುವು ದನ್ನು ಅವರಿಗೆ ಕಲಿಸುವುದು ಒಳಿತು. ಗಿಡ ನೆಡುವುದರಿಂದ ಮೊದಲ್ಗೊಂಡು ಅವಕ್ಕೆ ಪಾತಿ ಮಾಡುವುದು, ನೀರುಣಿಸುವುದು, ಕಳೆ ಕೀಳುವುದು ಹೀಗೆ ಪ್ರತಿ ಹಂತದಲ್ಲೂ ಅವರನ್ನು ತೊಡಗಿಸುವುದರಿಂದ ಪ್ರಾಯೋಗಿಕ ಅನುಭವವಾಗಿ ಮಕ್ಕಳ ಅರಿವಿನ ಪರಿಧಿ ಹಿಗ್ಗುತ್ತದೆ.

ತಾವೇ ನೆಟ್ಟು ಬೆಳೆಸಿದ ಗಿಡಗಳಲ್ಲಿ ಹೂವು-ಹಣ್ಣು ಬಿಡುವುದನ್ನು ಕಂಡಾಗ ಮಕ್ಕಳಲ್ಲಿ ಉಕ್ಕುವ ಸಂತಸವನ್ನು ಪದಗಳಲ್ಲಿ ವರ್ಣಿಸಲಾಗದು. ಬೇಸಗೆ ರಜೆಯ ನೆಪದಲ್ಲಿ ಪ್ರವಾಸಕ್ಕೆ ತೆರಳಿದಾಗ ಕೆಲ ಮಕ್ಕಳು ನದಿ-ಕೆರೆಗಳಲ್ಲಿ ಈಜಲು ಹೋಗಿ ಅನಾಹುತ ಮಾಡಿಕೊಳ್ಳುವುದಿದೆ. ಇದು ತಪ್ಪಬೇಕು. ಒಂದೊಮ್ಮೆ ಮಕ್ಕಳಿಗೆ ಈಜಬೇಕೆನಿಸಿದರೂ ಹಿರಿಯ ಮೇಲುಸ್ತುವಾರಿ ಅಲ್ಲಿರಬೇಕು. ಸಂಗೀತ, ಚಿತ್ರಕಲೆ, ಹಾಡುಗಾರಿಕೆ, ನೃತ್ಯ ಹೀಗೆ ತಮ್ಮ ಮಕ್ಕಳ ಆಸಕ್ತಿಯ ಕ್ಷೇತ್ರ ಯಾವುದು ಎಂಬುದನ್ನು ಗುರುತಿಸಿ ಅವರ ಬಿಡುವಿನ ವೇಳೆಯಲ್ಲಿ ಆಯಾ ಕೌಶಲಕ್ಕೆ ಅವರು ಒಡ್ಡಿಕೊಳ್ಳುವಂತೆ ಪೋಷಕರು ಪ್ರೋತ್ಸಾಹಿಸಬೇಕು.

ಪಠ್ಯಪುಸ್ತಕವನ್ನು ಹೊರತುಪಡಿಸಿದ ಮಿಕ್ಕಾವ ಓದಿನಲ್ಲೂ ಇಂದಿನ ಮಕ್ಕಳು ತೊಡಗಿಸಿಕೊಳ್ಳುವುದು ವಿರಳವೆನ್ನ ಬೇಕು. ಆದ್ದರಿಂದ ದಿನಪತ್ರಿಕೆ ಯಲ್ಲಿನ ಸುದ್ದಿಗಳು ಮತ್ತು ವಿಷಯಾಧಾರಿತ ಬರಹಗಳು, ಇತಿಹಾಸ, ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳು, ಮಾನವನ ಉಗಮ ಮತ್ತು ವಿಕಸನವನ್ನು
ಎಳೆಎಳೆಯಾಗಿ ಬಿಡಿಸಿಡುವ ಕೃತಿಗಳನ್ನು ಓದಲು ಮಕ್ಕಳಿಗೆ ಹೇಳಬೇಕು. ಒಂದೊಮ್ಮೆ ಇದಕ್ಕೆ ಅವರು ನಿರಾಕರಿಸಿದರೆ, ಅಂಥ ಬರಹಗಳಲ್ಲಿನ
ಸ್ವಾರಸ್ಯಕರ ಅಂಶವನ್ನು ಹೆಕ್ಕಿ ಓದಿ ಹೇಳಿದಾಗ ಅವರಲ್ಲೂ ಓದುವ ಆಸಕ್ತಿ ಹೆಚ್ಚುತ್ತದೆ.

ಪ್ರಸ್ತುತ ಕಂಪ್ಯೂಟರ್ ಹಾಗೂ ಸ್ಮಾಟ್ ಫೋನ್‌ಗಳಲ್ಲೇ ಕಳೆದುಹೋಗುತ್ತಿದೆ ಮಕ್ಕಳ ಬೇಸಗೆ ರಜೆಯ ಅಮೂಲ್ಯ ಸಮಯ! ಇದಕ್ಕೆ ಹೊರತಾದ ಸೃಜನ ಶೀಲ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಅವರನ್ನು ತೊಡಗಿಸುವುದರಿಂದ ಬೇಸಗೆಯ ರಜೆಯೂ ಅರ್ಥಪೂರ್ಣವಾಗುತ್ತದೆ. ಮಕ್ಕಳಿಗೆ ಕಲಿಕೆಯ ಜತೆಗೆ ಮನರಂಜನೆಯೂ ದಕ್ಕುತ್ತದೆ.

(ಲೇಖಕರು ಹವ್ಯಾಸಿ ಬರಹಗಾರರು)