Thursday, 21st November 2024

ಹೊಂಬಾಳೆ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಲಿ

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನದ ಕಥೆಯನ್ನೇ ತಮಿಳರು ‘ಸೂರರೈ ಪೊಟ್ರು’ ಎಂಬ ಅದ್ಭುತ ಚಿತ್ರ ಮಾಡಿದರು. ಆದರೆ ಕನ್ನಡ ಚಿತ್ರರಂಗಕ್ಕೆ ಅಂಥ ಐಡಿಯಾ ಹೊಳೆಯಲೇ ಇಲ್ಲ. ಇತ್ತೀಚೆಗಷ್ಟೇ ಬಿಡುಗಡೆಯಾದ ವಿಜಯ ಸಂಕೇಶ್ವರರ ಜೀವನಾಧಾರಿತ ‘ವಿಜಯಾನಂದ’ ಚಿತ್ರವನ್ನು ತೆರೆಗೆ ತಂದಿರುವುದು ಒಳ್ಳೆಯ ಆರಂಭ.

ಪ್ರಧಾನಿ ಮೋದಿಯವರು ಮೊನ್ನೆ ಬೆಂಗಳೂರಿಗೆ ಆಗಮಿಸಿದ್ದಾಗ, ನಾಡಿನ ಕೆಲ ಸಂಭಾವಿತ ಸಾಧಕರಿಗೆ ತಮ್ಮ ಭೇಟಿಗೆ ರಾಜಭವನದಲ್ಲಿ ಅವಕಾಶ ನೀಡಿದ್ದರು. ಇದರಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಅಶ್ವಿನಿ ಪುನೀತ್ ರಾಜ್‌ಕುಮಾರ್, ನಟರಾದ ಯಶ್, ರಿಷಭ್ ಶೆಟ್ಟಿ, ನಿರ್ಮಾಪಕರಾದ ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು ಪ್ರಮುಖರಾಗಿದ್ದರು. ಕಳೆದ ವರ್ಷ ಇಡೀ ದೇಶ ಮತ್ತು ಹೊರದೇಶಗಳ ಗಮನ ಸೆಳೆದ ಕನ್ನಡ ಚಿತ್ರಗಳಾದ ‘ಕೆಜಿಎ–೨’ ಮತ್ತು ‘ಕಾಂತಾರ’ ಮಾಡಿದ ಸದ್ದು ಪ್ರಧಾನಿ ಮೋದಿಯವರನ್ನೂ ಮೋಡಿ ಮಾಡಿದ್ದ ರಿಂದ ಅವರನ್ನು ಪ್ರಶಂಸಿಸಿದ್ದರು.

ಅದರಲ್ಲೂ ‘ಕಾಂತಾರ’ ಚಿತ್ರವನ್ನು ಕೇಂದ್ರ ಸಚಿವರುಗಳಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಅವರಲ್ಲದೆ ದೇಶದ ಪ್ರಮುಖ ನಟರು-ನಿರ್ದೇಶಕರು ವೀಕ್ಷಿಸಿ ಮನಸಾರೆ ಪ್ರಶಂಸಿದರು. ಈ ಕೀರ್ತಿ ‘ದೈವಾಂಶ ಸಂಭೂತ’ ರಿಷಭ್ ಶೆಟ್ಟಿಯವರಿಗೆ ಸಲ್ಲುತ್ತದೆ. ಇಂಥ ಚಿತ್ರಗಳನ್ನು ನಿರ್ಮಿಸಿದ್ದ ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರು ಅವರನ್ನೂ ಮೋದಿ ಯವರು ಪ್ರಶಂಸಿಸಿದ್ದಾರೆ. ಮೋದಿಯವರೊಂದಿಗೆ ಕಳೆದ ಆ ಕ್ಷಣಗಳಲ್ಲಿ ತಮಗೆ ‘ಪಾಸಿಟಿವ್ ವೈಬ್ರೇಷನ್’ ಸಿಕ್ಕಿತು ಎಂಬ ಅನುಭವವನ್ನು ಕಿರಗಂದೂರು ಅವರು ಹೇಳಿ ಕೊಂಡಿದ್ದು, ಅವರ ಸಿನಿಮಾ ಯಾತ್ರೆಗೆ ಇದು ಹೆಚ್ಚಿನ ಉತ್ಸಾಹವನ್ನು ತುಂಬಿರುವುದು ಸುಳ್ಳಲ್ಲ.

ಒಂದು ಚಿತ್ರವನ್ನು ನಿರ್ಮಿಸಿದರೆ ಅದನ್ನು ಇಡೀ ದೇಶವಲ್ಲದೆ ವಿಶ್ವವೇ ಕುತೂಹಲದಿಂದ ನೋಡಿ ಆನಂದಿಸಿ  ಅನುಭವಿಸುವು ದಲ್ಲದೆ, ದೇಶದ ಪ್ರಧಾನಿಗಳೂ (ಬಹುಶಃ ಮೋದಿಯವರೂ ‘ಕಾಂತಾರ’ವನ್ನು ನೋಡಿರಬಹುದು) ಅದರ ಬಗ್ಗೆ ಮೆಚ್ಚಿ ಮಾತನಾಡುವುದಿದೆಯಲ್ಲಾ ಅದು ಕನ್ನಡ ಚಿತ್ರರಂಗದ ಒಂದು ಅಮೋಘ ಸಾಧನೆ. ಯಾರು ಏನೇ ಹೇಳಿದರೂ ಚಿತ್ರರಂಗ ವೆಂಬುದು ಬರಿಯ ಮನರಂಜನೆ, ಸಂಪಾದನೆಯ ಉದ್ಯಮವಲ್ಲ. ಮೊದಲಿಗೆ ರಂಗಭೂಮಿ ಎಂಬುದು ಸನಾತನ ಪರಂಪರೆ, ಸಂಸ್ಕೃತಿ, ಧಾರ್ಮಿಕತೆ, ಜಾನಪದ ವಿಷಯಾಧರಿತವಾಗಿಯೇ ಹುಟ್ಟಿಕೊಂಡಿತು.

ಅದು ಚಲನಚಿತ್ರದ ರೂಪ ಪಡೆದ ಮೇಲೂ ಸಾಂಸ್ಕೃತಿಕ, ಸಾಹಿತ್ಯಿಕ, ಶೈಕ್ಷಣಿಕ ಬದ್ಧತೆಯ ಮೇಲೆಯೇ ಸಾಗಿತು. ವೈ.ವಿ. ರಾವ್, ಸುಬ್ಬಯ್ಯ ನಾಯ್ಡು, ಎಚ್.ಎಲ್.ಎನ್. ಸಿಂಹ, ಜಿ.ವಿ. ಅಯ್ಯರ್, ಆರ್. ನಾಗೇಂದ್ರರಾವ್, ಹೊನ್ನಪ್ಪ ಭಾಗವತರ್, ಬಿ.ಆರ್. ಪಂತುಲು, ಹುಣಸೂರು ಕೃಷ್ಣಮೂರ್ತಿ, ಕು.ರಾ. ಸೀತಾರಾಮ ಶಾಸ್ತ್ರಿ, ಕಣಗಾಲ್ ಪ್ರಭಾಕರ ಶಾಸ್ತ್ರಿ, ವೈ.ಆರ್. ಸ್ವಾಮಿ, ಸಿ.ವಿ. ಶಿವಶಂಕರ್, ರೇಣುಕಾಶರ್ಮ, ನಾಗಾಭರಣ ಅವರಂಥ ದಿಗ್ಗಜರು ಕನ್ನಡ ಚಿತ್ರರಂಗವನ್ನು ಒಂದು ವಿಶ್ವವಿದ್ಯಾಲಯದಂತೆ ಬೆಳೆಸಿದರು.

ಪೌರಾಣಿಕ ಚಿತ್ರಗಳಲ್ಲದೆ, ಇತಿಹಾಸ ಪುರುಷರ ಜೀವನಾಧಾರಿತ ಚಿತ್ರಗಳನ್ನೂ ನಿರ್ಮಿಸಿ ಕನ್ನಡಿಗರ ಜ್ಞಾನವನ್ನೂ ಹೆಚ್ಚಿಸಿದ್ದರು. ಮಯೂರ, ಇಮ್ಮಡಿ ಪುಲಿಕೇಶಿ, ಶ್ರೀಕೃಷ್ಣ ದೇವರಾಯ, ಸರ್ವಜ್ಞಮೂರ್ತಿ, ರಾಘವೇಂದ್ರ ಸ್ವಾಮಿಗಳು, ಬಸವಣ್ಣ, ಕನಕ-ಪುರಂದರ ದಾಸರು, ಕಿತ್ತೂರು ಚೆನ್ನಮ್ಮ ಹೀಗೆ ಇತಿಹಾಸ ಪುರುಷರನ್ನು ನಾವು ಸಾಕ್ಷಾತ್ ಕಾಣಲು ಅಸಾಧ್ಯವಾದರೂ ಸಿನಿಮಾಗಳ ಮೂಲಕ ಅವರ ಅನುಭೂತಿಯನ್ನು ಪಡೆಯು ವಂತಾದದ್ದು ಈ ಕಾಲದ ನಿರ್ಮಾಪಕ-ನಿರ್ದೇಶಕ-ಕಲಾವಿದರ ಇಚ್ಛಾಶಕ್ತಿಯಿಂದ. ಅವರ ಸಾಮಾಜಿಕ ಬದ್ಧತೆಯ ದಾಹ ಎಷ್ಟಿತ್ತೆಂದರೆ, ನೆರೆರಾಜ್ಯಗಳ ಸಂತರಾದ ಭಕ್ತಕುಂಬಾರ, ಮಹಾತ್ಮ ಕಬೀರ, ಸತಿ ಸಕ್ಕೂಬಾಯಿ ಅಂಥವರ ಚಿತ್ರಗಳನ್ನೂ ಕನ್ನಡಿಗರಿಗೆ ನೀಡಿದ್ದರು.

ಈಗ ‘ಬಯೋಪಿಕ್’ ಎಂಬ ಪದವನ್ನು ಬಳಸುತ್ತಿರಬಹುದಷ್ಟೇ; ಆದರೆ ಕನ್ನಡದಲ್ಲಿ ಹಿಂದೆಯೇ ಇಂಥ ವ್ಯಕ್ತಿಯಾಧಾರಿತ ಅನೇಕ ಚಿತ್ರಗಳನ್ನು ದೊಡ್ಡಮಟ್ಟದಲ್ಲಿ ಮಾಡಿ ಗೆದ್ದಿದ್ದಾರೆ. ಇಂಥ ಇತಿಹಾಸವಿರುವ ಕನ್ನಡ ಚಿತ್ರರಂಗದಲ್ಲಿ ಒಂದು ಅತಿಬುದ್ಧಿವಂತರ (ಹಾಗೆ ಅಂದುಕೊಂಡಿರುವ) ಕೂಟವೊಂದಿದೆ. ‘ನಮ್ಮಿಂದಲೇ ಚಿತ್ರರಂಗ, ನಾವುಗಳೇ ಚಿತ್ರರಂಗದ ಮುಖವಾಣಿಗಳು’ ಎಂದು ಭಾವಿಸಿರುವ ಇವರು ಕನ್ನಡ ಚಿತ್ರಗಳನ್ನು ನಿರ್ದೇಶಿಸುತ್ತಾರೆ. ಆದರೆ ಅದನ್ನು ಕನ್ನಡ ಪ್ರೇಕ್ಷಕಪ್ರಭುಗಳಿಗಾಗಿ ಚಿತ್ರಮಂದಿರದಲ್ಲಿ ಬಿಡುಗಡೆಯನ್ನೇ ಮಾಡುವುದಿಲ್ಲ. ಏಕೆಂದರೆ ಇಂಥವರು ಸಿನಿಮಾ ಮಾಡುವುದು ಮೊದಲಿಗೆ ಪ್ರಶಸ್ತಿಗಾಗಿ, ನಂತರ ಸಬ್ಸಿಡಿಗಾಗಿ ಮತ್ತು ಚಿತ್ರೋತ್ಸವದಲ್ಲಿ ಪ್ರದರ್ಶಿಸಿ ತಾವೊಬ್ಬ ಮಹಾನ್ ನಿರ್ದೇಶಕ, ಬುದ್ಧಿಜೀವಿ, ಪ್ರಗತಿಪರ ಎಂದು ಬಿಂಬಿಸಿಕೊಳ್ಳುವ ಸಲುವಾಗಿ.

ಕೇವಲ ೧೦-೧೫ ಲಕ್ಷದೊಳಗೆ ಸಿನಿಮಾ ಮಾಡುವುದು, ಸರಕಾರದ ಪ್ರತಿನಿಽಗಳನ್ನು ‘ಹಿಡಿದುಕೊಂಡು’ ಪ್ರಶಸ್ತಿ, ಸಬ್ಸಿಡಿ ‘ಹೊಡೆ ಯುವುದು’, ಆ ನಂತರ ಯಾವುದೋ ಕಿತ್ತುಹೋದ, ಹೇಳ ಹೆಸರಿಲ್ಲದ ಬೋಗಸ್ ಚಿತ್ರೋತ್ಸವಗಳಲ್ಲಿ ಪ್ರದರ್ಶಿಸಿ ಮಹಾನ್ ನಿರ್ಮಾಪಕ-ನಿರ್ದೇಶಕ ಎಂದು ತೋರಿಸಿಕೊಳ್ಳುವುದು. ಇಂಥ ಅಯೋಗ್ಯರು ಇಂದು ಗಾಂಧಿನಗರದಲ್ಲಿ ಬಿಲಗಳನ್ನು ತೋಡಿಕೊಂಡಿದ್ದಾರೆ. ಆದರೆ ದೇಶದ ಗಮನ ಸೆಳೆಯುವಂಥ ಚಿತ್ರಗಳನ್ನು ನೀಡಿದ ದ್ವಾರಕೀಶ್, ಕೆಸಿಎನ್ ಗೌಡ, ರವಿಚಂದ್ರನ್‌ ರಂಥವರು, ವಜ್ರೇಶ್ವರಿ ಯಂಥ ಅನೇಕ ಸಂಸ್ಥೆಗಳು ಇಂದು ಬಡವಾಗಿಹೋಗಿವೆ.

ಅನೇಕ ಹೊಸ ನಿರ್ಮಾಪಕರು ಕನ್ನಡ ಚಿತ್ರರಂಗದಲ್ಲಿ ಒಂದೊಳ್ಳೆಯ ರೀತಿ ಗುರುತಿಸಿಕೊಳ್ಳುವುದಕ್ಕಾಗಿ ಕೋಟ್ಯಂತರ ರುಪಾಯಿ
ಬಂಡವಾಳ ಹೂಡಿ, ದೇಶದಾದ್ಯಂತ ತೆರೆ ಕಾಣಿ ಸುವ ಅಭಿಲಾಷೆಯಿಂದ ಚಿತ್ರನಿರ್ಮಿಸಿ, ಅದರಿಂದ ಹಣ ವಾಪಸ್ ಬಂದರೆ ಮತ್ತಷ್ಟು ಹಣ ಕೂಡಿಸಿ ಇನ್ನೊಂದು ಚಿತ್ರ ಮಾಡುತ್ತಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ‘ತನುಜಾ’ ಕನ್ನಡ ಸಿನಿಮಾ ನಿರ್ಮಿಸಿದ ನಿರ್ಮಾಪಕ-ನಿರ್ದೇಶಕರಿಗೆ ಹಣ ಮತ್ತು ಹೆಸರಿಗಿಂತ ಸಮಾಜಕ್ಕೆ ಒಂದು ವಿಭಿನ್ನ ಚಿತ್ರವನ್ನು ನೀಡುವ ಸಾಮಾಜಿಕ ಕಳಕಳಿಯೇ ಮೊದಲಾಗಿತ್ತು.

ಇಂಥ ಪ್ರಾಯೋಗಿಕ, ಕ್ರಿಯಾಶೀಲ ತಂಡವೂ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸುತ್ತಿದೆ. ಹಾಗೆಯೇ ಇನ್ನೊಂದಷ್ಟು ಹೊಸಬರು ‘ಹಾರರ್-ಥ್ರಿಲ್ಲರ್’ ಇವೆರಡನ್ನೇ ಇಟ್ಟುಕೊಂಡು ದೆವ್ವ-ಭೂತ-ಪಿಶಾಚಿಗಳ ಹಿಂದೆ ಬಿದ್ದಿದ್ದಾರೆ. ಇನ್ನೊಂದು ವರ್ಗವಿದೆ, ಇವರು ತಮ್ಮ ಮಕ್ಕಳ ರಾಜಕೀಯ ಭವಿಷ್ಯಕ್ಕಾಗಿ ಚಿತ್ರರಂಗವನ್ನು ಬಳಸಿಕೊಳ್ಳುತ್ತಿದ್ದಾರೆ. ಇನ್ನೊಂದಷ್ಟು ಮಂದಿ ಹಣ ಹೆಚ್ಚಾದವರು, ಪ್ರಚಾರದ ಹುಚ್ಚಾಗಿರುವವರು, ವಿಕೃತ ತೀಟೆ-ತೆವಲಿಗಾಗಿ ಮಾಡುವ ಕೆಲಸವನ್ನು ಬಿಟ್ಟು ತಾನೂ ಒಬ್ಬ ಹೀರೋ ಎಂದು ಭಾವಿಸಿಕೊಂಡು ನಾಯಕ-ಕಥೆ-ಚಿತ್ರಕಥೆ-ಸಂಭಾಷಣೆ- ಸಾಹಸ-ನೃತ್ಯ ಕೊನೆಗೆ ನಾಯಕಿಯೂ ತಾನೇ ಆಗಿಬಿಡುವ ದರಿದ್ರ ಮುಖಗಳ ಅಡ್ಡಕಸುಬಿಗಳು ಚಿತ್ರರಂಗವನ್ನು ಬಳಸಿಕೊಳ್ಳುತ್ತಿದ್ದಾರೆ.

ಇಂಥ ಕನ್ನಡ ಚಿತ್ರರಂಗದಲ್ಲಿ ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರು ಅವರಂಥ ನಿರ್ಮಾಪಕರು, ರಿಷಭ್ ಶೆಟ್ಟಿ ಯವರಂಥ ಅಪ್ಪಟ ಸಾಂಸ್ಕೃತಿಕ ಶ್ರದ್ಧಾವಂತ ನಿರ್ದೇಶಕರು ತಮ್ಮ ಚಿತ್ರಗಳ ಮೂಲಕ ದೇಶದ ಪ್ರಧಾನಿಗಳ ಮನಸೂರೆ ಗೊಂಡಿರುವುದು ಒಳ್ಳೆಯ ಬೆಳವಣಿಗೆ. ಇತ್ತೀಚೆಗೆ ಕೆಲ ಚಿತ್ರಗಳು ‘ಬೇಸ್ಡ್ ಆನ್ ಟ್ರೂ ಸ್ಟೋರಿ, ಸತ್ಯಘಟನೆ ಆಧರಿತ’ ಎಂದು ಬರಿಯ ರಕ್ತಸಿಕ್ತ ‘ನಾನ್‌ವೆಜ್’ ಚಿತ್ರಗಳನ್ನು ನಿರ್ಮಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಆದರೆ ಅಂಥ ಸತ್ಯ ಘಟನೆಗಳಂತೆ ಕನ್ನಡದಲ್ಲಿ ಸಾಧನೆಗೈದ, ಸಮಾಜಕ್ಕೆ ಮಾದರಿಯಾದ ವ್ಯಕ್ತಿಗಳ ಬದುಕಿನ ಆಧರಿತ ಬಯೋಪಿಕ್ ಚಿತ್ರಗಳತ್ತ ವಿಜಯ್ ಕಿರಗಂದೂರು ಅವರಂಥ ನಿರ್ಮಾಪಕರು ಕಣ್ತೆರೆಯಬೇಕಿದೆ.

ಅಂಥ ಪ್ರಯತ್ನಗಳನ್ನು ಹಿಂದಿ ಚಿತ್ರರಂಗದಲ್ಲಿ ಕೆಲವರು ಮಾಡುತ್ತಿದ್ದಾರೆ. ‘ಕೆಜಿಎಫ್’ ಚಿತ್ರವನ್ನು ಜನ ಮರೆತುಬಿಡಬಹುದು, ಆದರೆ ಒಂದು ಪ್ರಾದೇಶಿಕ ಸಂಸ್ಕೃತಿಯನ್ನು ಕಣ್ಣಿಗೆ ಕಟ್ಟಿಕೊಟ್ಟ ‘ಕಾಂತಾರ’ದಂಥ ಚಿತ್ರವು ಯಾವ ಕಾಲಕ್ಕೂ ಇತಿಹಾಸ ಹೇಳುವ ಒಂದು ‘ದಂತಕಥೆ’ಯಾಗಿ ನಿಲ್ಲುತ್ತದೆ. ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನದ ಕಥೆಯನ್ನೇ ತಮಿಳರು ‘ಸೂರರೈ ಪೊಟ್ರು’ ಎಂಬ ಅದ್ಭುತ ಚಿತ್ರಮಾಡಿ ಹಣ, ಪ್ರಶಸ್ತಿಗಳನ್ನು ಬಾಚಿಕೊಂಡರು. ಆದರೆ ಕನ್ನಡ ಚಿತ್ರರಂಗಕ್ಕೆ ಅಂಥ ಒಂದು ಐಡಿಯಾ ಹೊಳೆಯಲೇ ಇಲ್ಲ.

ಇತ್ತೀಚೆಗಷ್ಟೇ ಬಿಡುಗಡೆಯಾದ ಉದ್ಯಮಿ ವಿಜಯ ಸಂಕೇಶ್ವರರ ಜೀವನಾಧಾರಿತ ‘ವಿಜಯಾ ನಂದ’ ಚಿತ್ರವನ್ನು ತೆರೆಗೆ ತಂದಿರುವುದು ಒಳ್ಳೆಯ ಆರಂಭ. ಈ ನಿಟ್ಟಿನಲ್ಲಿ ವಿಜಯ್ ಕಿರಗಂದೂರು ಅವರು ಅಗ್ರಗಣ್ಯರಾಗಬಹುದಾದ ನಿರೀಕ್ಷೆಗಳಿವೆ. ಏಕೆಂದರೆ ಮೊನ್ನೆ ಅವರು ಮುಂದಿನ ಐದು ವರ್ಷಗಳಲ್ಲಿ ೩,೦೦೦ ಕೋಟಿ ರುಪಾಯಿಗಳನ್ನು ಹೂಡುವುದಾಗಿ ಘೋಷಿಸಿದ್ದಾರೆ. ಅದರಲ್ಲಿ ‘ಕೆಜಿಎ-’, ‘ಸಲಾರ್’ನಂಥ ಚಿತ್ರಗಳಿದ್ದರೂ, ‘ಬಯೋಪಿಕ್’ ಚಿತ್ರಗಳಿಗೆ ಹೆಚ್ಚು ಪ್ರಾಮುಖ್ಯ ಕೊಟ್ಟರೆ ದೇಶಕ್ಕೆ ಅತ್ಯ ಮೂಲ್ಯ ಕೊಡುಗೆ ನೀಡಿದಂತಾಗುತ್ತದೆ.

ಉದಾಹರಣೆಗೆ, ಸರ್ ಎಂ.ವಿಶ್ವೇಶ್ವರಯ್ಯ ಅವರ ಜೀವನಗಾಥೆಯೇ ಒಂದು ಅದ್ಭುತ ಬಯೋಪಿಕ್ ಆಗುವುದರಲ್ಲಿ ಸಂಶಯವಿಲ್ಲ. ಹಾಗೆಯೇ ನಾಲ್ವಡಿ ಕೃಷ್ಣರಾಜ ಒಡೆಯರ್, ರಾಷ್ಟ್ರಕವಿ ಕುವೆಂಪು, ಶಿವಕುಮಾರ ಸ್ವಾಮೀಜಿಗಳು, ಸಾಲುಮರದ ತಿಮ್ಮಕ್ಕ, ದವಡೆ ಮುರಿದಿದ್ದರೂ ಬ್ಯಾಂಡೇಜು ಕಟ್ಟಿಕೊಂಡು ಎದುರಾಳಿ ಬ್ಯಾಟಿಗನ ಮೇಲೆ ಬೆಂಕಿಯುಂಡೆ ಹೂಡುತ್ತಿದ್ದ, ಐತಿಹಾಸಿಕ ಹತ್ತು ವಿಕೆಟ್‌ಗಳನ್ನು ಕಿತ್ತ ‘ಜಂಬೋ’ ಅನಿಲ್  ಕುಂಬ್ಳೆ, ಮಹಾಸಂಯಮಿ ರಾಹುಲ್ ದ್ರಾವಿಡ್ ಅವರ ಬಯೋಪಿಕ್‌ಗಳು ಮನರಂಜನೆ ಯೊಂದಿಗೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಿತ್ರಗಳಾಗಿಯೂ ನಿಲ್ಲುತ್ತವೆ. ಇಂಥ ಸಾಧಕರ ಪಾತ್ರಗಳಲ್ಲಿ ಶಿವಣ್ಣ, ಉಪೇಂದ್ರ, ಸುದೀಪ್, ಯಶ್‌ರಂಥ ಖ್ಯಾತ ನಟರು ಅಭಿನಯಿಸಿದರಂತೂ ಇಡೀ ದೇಶದ ಗಮನ ಸೆಳೆಯುವುದರೊಂದಿಗೆ ವ್ಯಾವಹಾರಿಕವಾಗಿಯೂ ಮೋಸವಾಗುವುದಿಲ್ಲ.

ಅಂತೆಯೇ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗಾಗಿ ತಲೆದೋರಿದ ಅನಿವಾರ್ಯತೆಯಲ್ಲಿನ ವಿದ್ಯಾರಣ್ಯರು, ಹರಿಹರ ಬುಕ್ಕರ ಕಥೆ, ಕೊನೆಗೆ ರಕ್ಕಸತಂಗಡಿ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯ ಪತನವಾಗಿ ಹಾಳುಹಂಪಿಯಾದ ಕಥೆ, ೧೯೪೭ರಲ್ಲಿ ದೇಶ ಇಬ್ಭಾಗ ವಾದಾಗ ಪಾಕಿಸ್ತಾನ ನಡೆದುಕೊಂಡ ರೀತಿ, ಗೋಡ್ಸೆ ಗಾಂಧಿಯನ್ನು ಕೊಂದ ಕಾರಣ, ನಂತರ ಕಟಕಟೆಯಲ್ಲಿ ನಿಂತು ವಾದಿಸಿದ ಗೋಡ್ಸೆಯ ಮನದಾಳದ ಮಾತುಗಳು ಮಾತ್ರವಲ್ಲದೆ, ಛತ್ರಪತಿ ಶಿವಾಜಿ, ತಿಲಕ್, ವೀರ ಸಾವರ್ಕರ್, ನೇತಾಜಿ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಚಂದ್ರಶೇಖರ ಆಜಾದ್, ಎಪಿಜೆ ಅಬ್ದುಲ್ ಕಲಾಂರವರ ಜೀವನಗಾಥೆಯನ್ನೂ ಪರಿಗಣಿಸ ಬಹುದು.

ಇನ್ನು ಒಬ್ಬ ಚಿತ್ರ ನಿರ್ದೇಶಕ ಹೇಗಿರಬೇಕು ಎನ್ನುವುದನ್ನು ತೋರಿಸಿಕೊಟ್ಟ ಪುಟ್ಟಣ್ಣ ಕಣಗಾಲ್, ಶತಮಾನದ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಪತ್ರಿಕೋದ್ಯಮಿಗಳಾದ ವೈಎನ್‌ಕೆ, ಶಾಮರಾಯರು, ಖುಷ್ವಂತ್ ಸಿಂಗ್ ಇವರ ಬಯೋಪಿಕ್‌ಗಳನ್ನು ನಿರ್ಮಿಸಿದರೆ ಅವು ಒಂದೊಂದೂ ಮುತ್ತಿನಂಥ ಪ್ರಸ್ತುತಿಯಾಗುವುದರಲ್ಲಿ ಸಂದೇಹವಿಲ್ಲ. ನಿಜ ಹೇಳಬೇಕೆಂದರೆ ಇಂಥ ಬಯೋಪಿಕ್‌ಗಳ ಅಗತ್ಯ ಸಮಾಜಕ್ಕಿದೆಯೇ ಹೊರತು, ‘ಹೆಡ್‌ಬುಷ್’ನಂಥ ರೌಡಿಯಿಸಂ ಚಿತ್ರಗಳಲ್ಲ. ಈಗಾಗಲೇ ಬಾಲಿವುಡ್‌ನ ದೇಶ ದ್ರೋಹಿಗಳ ದೇಶಗೇಡಿ ಚಿತ್ರಗಳಿಂದ  ರೋಸಿಹೋಗಿರುವ ಚಿತ್ರಪ್ರೇಮಿಗಳು, ರಾಷ್ಟ್ರೀಯತೆ, ದೇಶಾಭಿಮಾನ, ಸಂಸ್ಕೃತಿಯ ವೈಭವ ಕುರಿತ ಚಿತ್ರಗಳತ್ತ ಕಣ್ಣು ತೆರೆದಿದ್ದಾರೆ.

ಇಂಥ ಸಮಯದಲ್ಲಿ ಹೊಂಬಾಳೆಯ ವಿಜಯ್ ಕಿರಗಂದೂರು ಅವರಂಥ ನಿರ್ಮಾಪಕರು ಇಂಥ ‘ನೈಜ ಘಟನೆಗಳ’ ಆಧರಿತ ಚಿತ್ರಗಳನ್ನು ‘ಪ್ಯಾನ್ ಇಂಡಿಯಾ’ ಚಿತ್ರಗಳಾಗಿ ನಿರ್ಮಿಸಿದರೆ ಅದರಿಂದ ದೇಶಕ್ಕೂ ಕೊಡುಗೆ, ಹಾಕಿದ ಬಂಡವಾಳಕ್ಕೂ ಸಂಚಕಾರವಿಲ್ಲ. ಇದೀಗ ಬಂದಿರುವ ಅದ್ಭುತ ಸುದ್ದಿಯೆಂದರೆ, ದೇಶಭಕ್ತಿಯ ‘ಆರ್‌ಆರ್‌ಆರ್’ ಸಿನಿಮಾ ಮಾಡಿದ್ದ ರಾಜಮೌಳಿ ಯವರು ತಮ್ಮ ತಂದೆ ವಿಜಯೇಂದ್ರ ಪ್ರಸಾದ್ ಅವರು ನಿರ್ಮಿಸುತ್ತಿರುವ ‘ಆರ್.ಎಸ್. ಎಸ್’ (ರಾಷ್ಟ್ರೀಯ ಸ್ವಯಂ ಸೇವಕ್) ಕುರಿತಾದ ಚಿತ್ರಕಥೆಯನ್ನು ಮುಂದಿನ ಚಿತ್ರವಾಗಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ದೇಶಪ್ರೇಮಿಗಳಿಗೆ ಮಾತ್ರ ಇಂಥ ವಿಚಾರಗಳು ಹೊಳೆಯುತ್ತವೆ. ಇನ್ನೇನು ಬೇಕು ನಮ್ಮ ವಿಜಯ್ ಕಿರಗಂದೂರು ಅವರಿಗೆ? ಇಂಥ ಚಿತ್ರಗಳು ಇಡೀ ದೇಶಕ್ಕೆ ‘ಪಾಸಿಟಿವ್ ವೈಬ್ರೇಷನ್’ ನೀಡುತ್ತವೆ. ಇದಕ್ಕಾಗಿ ಶಿವಣ್ಣ, ಸುದೀಪ್, ಯಶ್, ರಿಷಭ್ ಶೆಟ್ಟರೂ ಸ್ವಯಂಪ್ರೇರಿತರಾಗಲಿ.

Read E-Paper click here