Saturday, 14th December 2024

ಪ್ರಾಮಾಣಿಕತೆ, ನೇರವಂತಿಕೆ ಒಂದು ಮಿತಿಯಲ್ಲಿದ್ದರೇ ಚಂದ

ಶಿಶಿರ ಕಾಲ 

shishirh@gmail.com

ಎಲ್ಲಿ ಏನನ್ನು ಹೇಳಬೇಕು, ಹೇಳಬಾರದು ಎಂಬುದನ್ನು ಬದುಕಿನಲ್ಲಿ ಆದಷ್ಟು ಬೇಗ ತಿಳಿದುಕೊಂಡಷ್ಟೂ ಬದುಕು ಸುಲಭವಾಗುತ್ತದೆ. ಇಂದಿನ ನಮ್ಮೆಲ್ಲ ವ್ಯವಹಾರಗಳಲ್ಲಿ- ಅದು ಕೌಟುಂಬಿಕವಿರಬಹುದು, ವ್ಯಾವಹಾರಿಕ, ಉದ್ಯೋಗಕ್ಕೆ ಸಂಬಂಧಿಸಿದ್ದಿರಬಹುದು- ಯಾವಾಗ ನಮ್ಮ ಪ್ರಾಮಾಣಿಕತೆ, ನೇರವಂತಿಕೆ ಯನ್ನು ಪ್ರದರ್ಶಿಸಬೇಕು ಎಂಬುದಕ್ಕಿಂತ ಯಾವಾಗ ತೆಪ್ಪಗಿರಬೇಕು ಎಂಬುದನ್ನು ಕಲಿಯುವುದೇ ಮುಖ್ಯ.

ನಾವು ಮಕ್ಕಳಿಗೆಲ್ಲ ಬೇಸಿಗೆಯ ರಜೆ. ಸುಡು ಬಿಸಿಲಿನ ದಿನಗಳು. ಆ ದಿನ ಆಗಿನ್ನೂ ಮಧ್ಯಾಹ್ನವಾಗಿರಲಿಲ್ಲ. ಅದಾಗಲೇ ಬಿಸಿಲಿನ ಝಳ, ಸೆಖೆ ವಿಪರೀತವಿತ್ತು. ಮಕ್ಕಳಾದ ನಮಗೆ ಬಿಸಿಲಿನ ಲೆಕ್ಕ ಬಿಟ್ಟು ಆಟವಾಡುವ ಉಮೇದು. ಆದರೆ ಮನೆಯ ಹಿರಿಯರು ಬಿಡುತ್ತಿರಲಿಲ್ಲ. ನಾನು ಐದಾರನೆಯ ಕ್ಲಾಸಿರಬೇಕು. ನನ್ನ ಹತ್ತಿರದ ಸಂಬಂಧಿಕರ ಮಗ (ತಮ್ಮ) ಒಂದನೇ ಕ್ಲಾಸು. ರಜೆಗೆಂದು ಊರಿಗೆ ಬಂದಿದ್ದ. ನಾನು, ತಮ್ಮ ಮತ್ತು ಸೋದರ ಮಾವ, ಮೂವರು ಅಂಗಳದಲ್ಲಿ ಹಾಕಿಟ್ಟ ಆರಾಮ್ ಕುರ್ಚಿ ಯಲ್ಲಿ ಕುಳಿತಿದ್ದೆವು. ಆ ಸಮಯದಲ್ಲಿ ನಮ್ಮ ಮನೆಗೆ ಬಡ ಬ್ರಾಹ್ಮಣರೊಬ್ಬರು ಸಂಭಾವನೆಗೆಂದು ಬಂದರು. ಅವರು ಬೆವರಿ ಬಸವಳಿದದ್ದು ಕಾಣಿಸುತ್ತಿತ್ತು.

ಅವರ ಕಾಲಿಗೆ ಹತ್ತಿದ್ದ ಮಣ್ಣಿನಿಂದಲೇ ಅವರೆಷ್ಟು ಮೈಲಿ ನಡೆದಿದ್ದರು ಎಂದು ಅಂದಾಜಿಸಬಹುದಿತ್ತು. ನಮ್ಮ ಅಕ್ಕ ಪಕ್ಕದ ಊರಿನಲ್ಲಿ- ಊರಿನ, ಕೇರಿಯ ದೇವಸ್ಥಾನದ ಹೊರತಾಗಿ ಬಹಳಷ್ಟು ಚಿಕ್ಕ ಚಿಕ್ಕ ದೇಗುಲಗಳಿವೆ. ಅವುಗಳಿಗೆ ವಿಶೇಷ ಆದಾಯವಿರುವುದಿಲ್ಲ. ಹಾಗೆ ನೋಡಿದರೆ ಊರಿನ ಮುಖ್ಯ ದೇವಸ್ಥಾನವೂ ಅಷ್ಟೇ, ಆದಾಯ ಕಡಿಮೆ, ಭಕ್ತಿ ಜಾಸ್ತಿ. ಇಂಥ ದೇವಸ್ಥಾನದ ಅರ್ಚಕರು ಬಿಡುವಿದ್ದಾಗ ಊರೂರಿಗೆ ಪ್ರವಾಸ ಮಾಡುವುದು, ಪ್ರಸಾದವನ್ನು ಒಯ್ದು ಮನೆ ಮನೆಗೆ ತಲುಪಿಸಿ, ಸಂಭಾವನೆಯಾಗಿ ಕಾಯಿ, ಹಣ, ಅಕ್ಕಿ ಇದನ್ನೆಲ್ಲ ಪಡೆದು ಹೋಗುವ ಒಂದು ಅನನ್ಯ ಪದ್ಧತಿ ಇತ್ತು.

ಇದೆಲ್ಲ ಆದಾಯವನ್ನು ಅವರು ತಮ್ಮ ಜೀವನಕ್ಕೆ ಬಳಸಿಕೊಳ್ಳುತ್ತಿದ್ದರು. ಅವರಿಗೆ ಇದರ ಹೊರತಾಗಿ ಬೇರೆ ವಿಶೇಷ ಆದಾಯವಿರಲಿಲ್ಲ. ದೇವಸ್ಥಾನದ ಸಂಬಳ, ತಟ್ಟೆ ಕಾಸು ಅಷ್ಟಕ್ಕಷ್ಟೆ. ಊರಿನವರೆಲ್ಲ ತಮ್ಮ ಕೈಲಾದಷ್ಟು ಹಣ, ತೆಂಗಿನಕಾಯಿ, ಅಡಿಕೆ, ಅಕ್ಕಿ ಇವನ್ನೆಲ್ಲ ಅವರ ಜೋಳಿಗೆಗೆ ಹಾಕುತ್ತಿದ್ದರು. ಈ ಸಂಭಾವನೆಗೆ ಬರುತ್ತಿದ್ದ ಅರ್ಚಕರು ಇದನ್ನು ಅವಶ್ಯಕತೆಯ ಜತೆ, ರೂಢಿಯಂತೆ ನಡೆಸಿಕೊಂಡು ಬಂದಿದ್ದರು. ಅವರಲ್ಲಿಯೂ ವೈವಿಧ್ಯ.

ಮಂಜಗುಣಿಯ ಭಟ್ಟರು ವಿಶೇಷ ಅತಿರಸ ಮಾಡಿಕೊಂಡು ಬರುತ್ತಿದ್ದರು. ಇನ್ನೊಬ್ಬರು ಮತ್ತಿನ್ನೇನೋ ಕಜ್ಜಾಯವನ್ನು ಪ್ರಸಾದವಾಗಿ ತಂದುಕೊಡುತ್ತಿದ್ದರು. ಅವರ ಮತ್ತು ಮನೆಯವರ ನಡುವಿನ ಭೇಟಿ ವರ್ಷಕ್ಕೊಮ್ಮೆ ಮಾತ್ರ. ಅವರು ಬಂದಾಗ ತಮ್ಮ ಊರಿನ, ದೇವಸ್ಥಾನದ ಸುದ್ದಿಗಳನ್ನು, ಅವರ ಕಷ್ಟಕಾರ್ಪಣ್ಯಗಳನ್ನು ಹೇಳಿಕೊಳ್ಳುವುದು ಇತ್ಯಾದಿಯಿತ್ತು. ವರ್ಷಕ್ಕೊಮ್ಮೆ ಭೆಟ್ಟಿಯಾದರೂ ಮನೆಯವರ ಪರಿಚಯ ಅವರಿಗಿರುತ್ತಿತ್ತು. ಅದೇನೋ ಗೊತ್ತಿಲ್ಲ, ಈ ರೀತಿ ಸಂಭಾವನೆಗೆ
ಬರುತ್ತಿದ್ದವರ ಬಗ್ಗೆ ಮನೆಯವರಿಗೆಲ್ಲ ಒಂದು ವಿಶೇಷ ಆಸ್ಥೆ, ಗೌರವ ಇತ್ತು.

ಆ ದಿನ ಮನೆಗೆ ಬಂದ ಸಂಭಾವನೆ ಭಟ್ಟರ ಹಲ್ಲು ಎಲೆಅಡಿಕೆಯಿಂದಾಗಿ ಕೆಂಪುಗಟ್ಟಿತ್ತು. ಅವರ ಹಲ್ಲು ಕೂಡ ಉಬ್ಬಿ ತುಸು ಮುಂದಕ್ಕೆ ಬಂದಿತ್ತು. ತಲೆಯಲ್ಲಿ ಜುಟ್ಟು.
ಅವರು ನೋಡಲಿಕ್ಕೆ ಸ್ವಲ್ಪ ಆದಿಮಾನವನ ಚಿತ್ರದಲ್ಲಿರುವಂತೆ ಕಾಣಿಸುತ್ತಿದ್ದರು. ಅವರಿಗೆ ಬಾಯಾರಿಕೆಗೆ ಕೇಳಿ ಮಜ್ಜಿಗೆ ತರಲು ನಾನು ಇನ್ನೇನು ಒಳಕ್ಕೆ ಹೋಗ ಬೇಕು, ಅಷ್ಟರಲ್ಲಿ ಆರು ವರ್ಷದ ನನ್ನ ತಮ್ಮನನ್ನು ಅವರು ಮಾತನಾಡಿಸಿದರು. ತಮ್ಮ ಅವರ ಒಂದೆರಡು ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಅವರನ್ನುದ್ದೇಶಿಸಿ  ‘ನೀವು ನೋಡಲಿಕ್ಕೆ ಥೇಟ್ ಮಂಗನಂತೆ ಕಾಣಿಸುತ್ತೀರಿ’ ಎಂದುಬಿಟ್ಟ.

ಅವರು ವಯೋವೃದ್ಧರು, ಅದನ್ನು ಕೇಳಿಸಿಕೊಂಡರೂ ಕೇಳಿಸದಂತೆ ವ್ಯವಹರಿಸಿದರು. ಎರಡು ಮೂರು ಬಾರಿ ‘ಹೂಂ’ ಎಂದರು. ಆದರೆ ತಮ್ಮ ಬಿಡಲಿಲ್ಲ, ಬಹುಶಃ
ಅವರಿಗೆ ಕೇಳಿಸಿರಲಿಕ್ಕಿಲ್ಲ ಎಂದೆನಿಸಿರಬೇಕು. ಮೂರ್ನಾಲ್ಕು ಬಾರಿ ಅದನ್ನೇ ಹೇಳಿದ. ಆಮೇಲೆ ಅವರಿಗೆ ಅರ್ಥವಾಗಿರಲಿಕ್ಕಿಲ್ಲ ಎಂದೆನಿಸಿತೋ ಏನೋ. ‘ನೀವು ಆ ಮರದ ಮೇಲೆ ಓಡಾಡುತ್ತವಲ್ಲ, ಆ ಮಂಗನಂತೆ ಕಾಣಿಸುತ್ತೀರಿ’ ಎಂದ. ಪಕ್ಕದಲ್ಲಿಯೇ ಇದ್ದ ಸೋದರಮಾವ ಮತ್ತು ನಾನು ಎಷ್ಟೇ ‘ಹುಶ್ ಹುಶ್’ ಎಂದರೂ ಕೇಳಿಸಿಕೊಳ್ಳಲಿಲ್ಲ. ಅವರು ಕೂಡ ಆಮೇಲೆ ಸ್ವಲ್ಪ ಸೋತಂತೆ ಅನ್ನಿಸಿರಬೇಕು, ಪಾಪ.

‘ಹೌದು ಮಗ, ಗೊತ್ತಾಯ್ತು’ ಎಂದರು. ಆಗಲೇ ನನ್ನ ತಮ್ಮ ಸುಮ್ಮನಾದದ್ದು. ನಾನು ತಕ್ಷಣ ಅವನ ಕೈಹಿಡಿದು ಒಳಕ್ಕೆ ಎಳೆದುಕೊಂಡು ಹೋದೆ. ಇದ್ದದ್ದು ಇದ್ದಂತೆ ಹೇಳಲು ಹೆದರಬಾರದು ಎಂಬುದು ನಮ್ಮ ಮನೆಯಲ್ಲಿ ಅಲಿಖಿತ ನಿಯಮ. ಸತ್ಯ ಹೇಗೇ ಇರಲಿ, ಹೇಳಿದರೆ ಅದರಿಂದಾಗುವ ಅನಾಹುತಗಳಿಗೆ ಆಂಟಿಸಿಪೇಟರಿ
ಬೇಲ್. ಹೇಳಿದ್ದು ಸತ್ಯವೆಂದರೆ ಇಡೀ ಕುಟುಂಬವೇ ಬೆನ್ನಿಗೆ ನಿಲ್ಲುತ್ತಿತ್ತು. ತಮ್ಮ ಹೇಳಿದ್ದರಲ್ಲಿ ಯಾವುದೇ ಸುಳ್ಳಿರಲಿಲ್ಲ. ಆ ಭಟ್ಟರು ಥೇಟ್ ಮಂಗನಂತೆಯೇ ಕಾಣಿಸುತ್ತಿದ್ದುದು ಸತ್ಯ.

ನನ್ನದು ಇಲ್ಲಿ ಯಾವುದೇ ವ್ಯಕ್ತಿಯ ರೂಪವನ್ನು ಕೀಳಾಗಿ ಬಿಂಬಿಸುವ ಉದ್ದೇಶವಲ್ಲ. ಇಲ್ಲಿ ನನ್ನ ಪುಟ್ಟ ತಮ್ಮ ನೇರವಂತಿಕೆಯನ್ನು ಸಂಪೂರ್ಣ ತಪ್ಪಾಗಿ ಗ್ರಹಿಸಿದ್ದನಿರಬೇಕು. ಒಟ್ಟಾರೆ ಈ ಘಟನೆಯ ನಂತರ ನಮ್ಮ ಮನೆಯವರೆಲ್ಲ ಸೇರಿ ತಮ್ಮನಿಗೆ ಕ್ಲಾಸು ತೆಗೆದುಕೊಂಡರು. ತಮ್ಮ ತನ್ನ ನೇರವಂತಿಕೆಯನ್ನು
ಯಾವತ್ತೂ ಪ್ರತಿರೋಽಸದ ಮನೆಯವರು ಇವತ್ತೇಕೆ ತಿರುಗಿ ಬಿದ್ದಿದ್ದಾರೆ ಎಂದು ತಿಳಿಯದೇ ಗೊಂದಲದಲ್ಲಿದ್ದಂತೆನಿಸಿತು. ಮಕ್ಕಳ ಇಂಥ ಅದೆಷ್ಟೋ ಪ್ರಾಮಾಣಿಕತೆಗಳು ಮುಜುಗರಕ್ಕೆ ದೂಡಿದಾಗ, ಅದೆಲ್ಲವನ್ನು ಸೂಕ್ಷ್ಮವಾಗಿ ತಿಳಿಹೇಳುವುದು ಸುಲಭದ ಮಾತಲ್ಲ. ಅವರಲ್ಲಿ ಪ್ರಾಮಾಣಿಕತೆಯನ್ನು ಶ್ರೇಷ್ಠ
ವೆಂದು ನಾವೇ ಹೇಳಿರುತ್ತೇವೆ. ಆ ಪ್ರಾಮಾಣಿಕತೆಯೆಡೆಗಿನ ನಂಬಿಕೆಗೆ ಧಕ್ಕೆಯಾಗದಂತೆ ವಿವರಿಸಿ ಹೇಳಬೇಕು.

ಅವರನ್ನು ಗೊಂದಲಕ್ಕೊಳಗಾಗಿಸಬಾರದು. ಮಕ್ಕಳು ಪ್ರಾಮಾಣಿಕತೆಯನ್ನು, ನೇರವಂತಿಕೆಯನ್ನು ಬಿಟ್ಟುಕೊಡದೇ, ಕೆಲವೊಂದು ಅನಿಸಿಕೆಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳಬೇಕೆಂದು ಹೇಳುವ ಸೂಕ್ಷ್ಮ ಮಾತುಕತೆ ಅದು. ನಮ್ಮ ಸಮಾಜದಲ್ಲಿ ಸ್ಟ್ರೈಟ್ ಫಾರ್ವರ್ಡ್, ನೇರಾನೇರ ವ್ಯಕ್ತಿತ್ವದವರಿಗೊಂದು ವಿಚಿತ್ರ ಸ್ಥಾನವಿದೆ. ಆತನ ಮಾತು ಕಡ್ಡಿ ಮುರಿದಂತೆ, ಖಡಾಖಂಡಿತ, ಅವಳು ತುಂಬಾ ಸ್ಟ್ರೈಟ್, ಅವನು ಅನಿಸಿದ್ದನ್ನು ನೇರವಾಗಿ ಹೇಳಿಬಿಡುವ ವ್ಯಕ್ತಿ, ಅವಳ ಗುಣ ಖಡಕ್ ಇತ್ಯಾದಿ. ಯಾವ ವ್ಯಕ್ತಿ, ಹಿಂದೆ ಮುಂದೆ ಯಾರಿದ್ದಾರೆ ಯಾರಿಲ್ಲ ಎಂದು ನೋಡದೆ, ಗುಂಡು ಹೊಡೆದಂತೆ ನೇರ ನಡೆ-ನುಡಿ ಹೊಂದಿರುತ್ತಾನೋ ಅಂಥವನನ್ನು
ಸಮಾಜ ಒಂದು ಹಂತದವರೆಗೆ ವೈಭವೀಕರಿಸುತ್ತದೆ, ರಕ್ಷಿಸುತ್ತದೆ, ಉತ್ತೇಜಿಸುತ್ತದೆ.

ಅದು ಪ್ರಾಮಾಣಿಕತೆಗೆ ಕೊಡಲೇ ಬೇಕಾದ ಗೌರವ ಎಂಬ ಅನಿಸಿಕೆ. ಯಾರು ತನ್ನ ಅನಿಸಿಕೆಗಳನ್ನು ಫಿಲ್ಟರ್ ಇಲ್ಲದೆ ಹೇಳುತ್ತಾರೋ ಅಂಥವರನ್ನು ಮಂದಿ ವಿಶೇಷವಾಗಿ ಕಾಣುತ್ತಾರೆ. ಪ್ರಾಮಾಣಿಕತೆಯ ಸೋಗಿನಲ್ಲಿ ಆತನ ಉಳಿದೆಲ್ಲ ನಡೆ ನುಡಿಗಳೂ ಮಾಫಿ. ಆದರೆ ನೋಡನೋಡುತ್ತಿದ್ದಂತೆ ಇವರ ಈ ನಡವಳಿಕೆ ಸುತ್ತಲಿನ ಸ್ನೇಹಿತರನ್ನು, ಆಪ್ತರನ್ನು ಮುಜುಗರಕ್ಕೆ ಈಡುಮಾಡುತ್ತಿರುತ್ತದೆ. ನೇರವಂತಿಕೆ ದಿನಗಳೆದಂತೆ ಸಹಿಸಲಾಗದ ಪ್ರಮಾಣ ತಲುಪಿಬಿಡುತ್ತದೆ. ಅದು ಅವರ ಅರಿವಿಗೆ ಬರದಿರುವುದೇ ಜಾಸ್ತಿ. ಪರಮಾಪ್ತರಿಗೆ ಅಂಥವರ ಮಾತು ಬೇಸರವನ್ನುಂಟುಮಾಡುತ್ತದೆ.

ಯಾರಾದರೂ ಇಂಥವರ ನೇರವಂತಿಕೆಯ ಕಾರಣದಿಂದ ಬೇಸರಕ್ಕೊಳಗಾದರೆ ಉಳಿದವರು, ‘ಅವನ ವ್ಯಕ್ತಿತ್ವ ಹೇಗೆ ಎಂಬುದು ನಿನಗೆ ಗೊತ್ತು, ನೇರ. ಹಾಗಾಗಿ ಅದಕ್ಕೆಲ್ಲ ನೀನು ಬೇಸರಿಸಬಾರದು’ ಎಂಬ ಸಮಾಧಾನ ಹೇಳುತ್ತಾರೆ. ಆದರೆ ಯಾರೊಬ್ಬರೂ ಅವರ ನೇರ ವ್ಯಕ್ತಿತ್ವವನ್ನು ಪ್ರಶ್ನಿಸುವುದಿಲ್ಲ. ಅವರು ಹೇಳಿದ್ದು
ಸರಿಯಲ್ಲ. ಸತ್ಯವಿರಬಹುದು, ಆದರೆ ಹೇಳಿದ ರೀತಿ ಸರಿಯಲ್ಲ ಎಂದು ಹೇಳುವುದೇ ಇಲ್ಲ. ಒಂದೊಮ್ಮೆ ಯಾರೋ ಒಬ್ಬರು ಧೈರ್ಯ ಮಾಡಿ ಅವರಲ್ಲಿ ಹೇಳಿಯೇಬಿಟ್ಟರೆಂದು ಕೊಳ್ಳಿ, ಆ ನೇರ ವ್ಯಕ್ತಿತ್ವದ ವ್ಯಕ್ತಿ ಅದನ್ನು ಒಪ್ಪುವ ಸ್ಥಿತಿಯಲ್ಲಿ ರುವುದಿಲ್ಲ. ಅದಕ್ಕೊಂದು ಕಾರಣವಿದೆ.

ಅಂಥವರ ವ್ಯಕ್ತಿತ್ವದ ಗುರುತೇ ನೇರವಂತಿಕೆ. ನಾನು ನೇರವಾಗಿಯೇ ಮಾತನಾಡುವುದು, ಬೇಸರಿಸುವವರು ಬೇಸರಿಸಿಕೊಳ್ಳಲಿ ಎಂಬ ಒಂದು ಒರಟು ಸ್ಥಿತಿಗೆ ಇಂಥವರು ಬಹುಬೇಗ ತಲುಪಿರುತ್ತಾರೆ. ಹಾಗಾಗಿಯೇ ಬೆಕ್ಕಿಗೆ ಗಂಟೆ ಕಟ್ಟಲು ಸಾಮಾನ್ಯವಾಗಿ ಯಾರೂ ಮುಂದುವರಿಯುವುದಿಲ್ಲ. ಕೆಲವೊಮ್ಮೆ ಇಂಥವರ ಅನವಶ್ಯಕ ನೇರವಂತಿಕೆ ಅಪಾರ ಸ್ನೇಹವರ್ಗವನ್ನು ಕಳೆದುಕೊಳ್ಳುವುದಕ್ಕೆ ಕಾರಣವಾಗಿರುತ್ತದೆ. ಅವರನ್ನು ಒಂಟಿತನಕ್ಕೆ ದೂಡುತ್ತದೆ. ವಂತಿಕೆಯೇ ಮುಖ್ಯ. ‘ಬಾಕಿದೆಲ್ಲಾ ಕತ್ತೆಬಾಲ, ಕುದುರೆ ಜುಟ್ಟು’ ಎನ್ನುತ್ತಿರುತ್ತಾರೆ. ನನ್ನ ನೇರವಂತಿಕೆಯನ್ನು ಒಪ್ಪುವವರು ಮಾತ್ರ ಸ್ನೇಹಿತರಾಗಿರಲಿ ಎಂಬ ಮೊಂಡುತನ.

ಒಬ್ಬ ವ್ಯಕ್ತಿ ತನ್ನ ಕೆಲವು ಗುಣಗಳೇ ತನ್ನ ವ್ಯಕ್ತಿತ್ವ ಎಂದು ಸಂಪೂರ್ಣ ನಂಬಿಕೊಂಡಾಗ ಆಗುವ ಎಡವಟ್ಟುಗಳು ಇವು. ಇದನ್ನು ಸಮಾಜವೇ ಅವರಲ್ಲಿ ಬೆಳೆಸಿರುತ್ತದೆ, ಅವರು ಮಿತಿಮೀರಿದ್ದನ್ನು ಮಾತ್ರ ಸಮಾಜ ಹೇಳುವುದೇ ಇಲ್ಲ. ಈಗ್ಗೆ ಕೆಲವು ವರ್ಷ ಹಿಂದಿನ ಕಥೆ. ನನ್ನ ಕಂಪನಿಯ ಒಂದು ಪ್ರಾಜೆಕ್ಟ್
ಸಂಬಂಧವಾಗಿ ಕೆಲವೊಂದು ವಿವರಗಳನ್ನು ಸೀನಿಯರ್ ಲೀಡರ್‌ಶಿಪ್‌ನಿಂದ ಪಡೆಯುವ ಕೆಲಸ ನನ್ನದಾಗಿತ್ತು. ವಿವರವನ್ನು ಕೋರಿ ಜಪಾನ್‌ನಲ್ಲಿದ್ದ ಉನ್ನತ
ಅಽಕಾರಿಗಳಿಗೆ ಇಮೇಲ್ ಮಾಡಿದ್ದೆ. ಅದಕ್ಕೆ ಸುಮಾರು ದಿನ ಉತ್ತರ ಬರಲಿಲ್ಲ. ಅವರಿಂದ ಉತ್ತರ ಪಡೆಯುವುದು ಬಹಳ ಮುಖ್ಯವಾಗಿತ್ತು. ಸಹಜವಾಗಿ, ‘ಉತ್ತರ ಬಂದಿಲ್ಲ’ ಎಂದು ಮರು ಇಮೇಲ್ ಕಳುಹಿಸಿದೆ.

ಆ ಇಮೇಲ್‌ನಲ್ಲಿ ಇನ್ನೊಂದಿಷ್ಟು ಮಂದಿ ಅತ್ಯುನ್ನತ ಪೋಸ್ಟಿನಲ್ಲಿರುವರು, ವೈಸ್ ಪ್ರೆಸಿಡೆಂಟುಗಳು ಇಇಯಲ್ಲಿ ಇದ್ದರು. ಅಮೆರಿಕದಲ್ಲಿ ವ್ಯವಹರಿಸುವಾಗ, ಹೆಸರಿಟ್ಟು ಸಂಬೋಽಸುವುದು, ಭಾಷೆಗೆ ಅಲಂಕಾರಗಳನ್ನು ಹಚ್ಚದೆ ಅತ್ಯಂತ ನೇರವಾಗಿ ಬರೆಯುವುದು, ಮಾತನಾಡುವುದು ರೂಢಿ. ನಾನು ಕೂಡ ಅದೇ
ಧಾಟಿಯಲ್ಲಿ ಜಪಾನಿ ಮುಖ್ಯಸ್ಥರನ್ನು ಸಂಬೋಧಿಸಿ ಬರೆದಿದ್ದೆ. ತಕ್ಷಣ ನನ್ನ ಮೂರು ಹಂತದ ಮೇಲಿನ ಬಾಸ್‌ನಿಂದ ಫೋನ್ ಬಂತು. ನನ್ನ ತಪ್ಪಿನ ಬಗ್ಗೆ ತಿಳಿಯಿತು. ನಂತರ ಅವರಲ್ಲಿ ಕ್ಷಮೆಕೇಳಬೇಕಾದ ಸ್ಥಿತಿಯವರೆಗೂ ಹೋಗಿ ಮುಟ್ಟಿತು.

ಜಪಾನಿಗರು ನಮ್ರತೆಗೆ ಹೆಸರುವಾಸಿ. ಆದರೆ ‘ಸಾನ್’ ಎಂದು ಬಹುವಚನ ಕೊಡದೆ, ನೇರವಾಗಿ, ಅಮೆರಿಕನ್ ರೀತಿಯಲ್ಲಿ ಮಾತನಾಡಿಸಿದರೆ ಅವರು ಅದನ್ನು ಸಹಿಸುವುದಿಲ್ಲ. ನನ್ನ ಆ ತಪ್ಪಿನ ಕಾರಣಕ್ಕೋ ಏನೋ, ಈ ಪ್ರಾಜೆಕ್ಟ್ ನಂತರದಲ್ಲಿ ಮುಂದುವರಿಯಲೇ ಇಲ್ಲ. ಕಾರ್ಪೊರೇಟ್ ಜಗತ್ತಿನಲ್ಲಿ ಇಂಥ ಅನುಭವಗಳು ಸಾಮಾನ್ಯ. ಅಂತಾರಾಷ್ಟ್ರೀಯ ತಂಡಗಳ ಜತೆ ವ್ಯವಹರಿಸುವಾಗ, ಒಂದೊಂದು ದೇಶದವರಲ್ಲಿ ಮಾತನಾಡುವ ರೀತಿ, ಇಮೇಲ್ ಬರೆಯುವ ರೀತಿ, ಸಂಬೋಧಿಸುವುದು ಇವೆಲ್ಲ ಬದಲಿಸಿಕೊಳ್ಳದಿದ್ದಲ್ಲಿ ನಮ್ಮ ನೇರ ನಡೆಯನ್ನೇ ಅವಮಾನವಾಗಿ ಸ್ವೀಕರಿಸುವ ಸಾಧ್ಯತೆಗಳೇ ಜಾಸ್ತಿ.

ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ ದೇಶಗಳ ಜನರ ಜತೆ ಮಾತನಾಡುವಾಗ, ವ್ಯವಹರಿಸುವಾಗ ನೇರವಂತಿಕೆ ಇದ್ದಷ್ಟು ಒಳ್ಳೆಯದು. ಆದರೆ ಅದೇ ನೇರವಂತಿಕೆಯನ್ನಿಟ್ಟುಕೊಂಡು ಜಪಾನ್, ಇಟಲಿ, ಅಜೆಂಟಿನಾ, ಬ್ರೆಜಿಲ್ ದೇಶಗಳವರಲ್ಲಿ ವ್ಯವಹರಿಸಿದರೆ ಅದು ಅವಮಾನವಾಗಿಬಿಡುತ್ತದೆ. ಕೆಲವೊಮ್ಮೆ
ಅಮೆರಿಕದವರ ಜತೆ ಮಾತನಾಡುವಾಗ ಅಲ್ಲಿ ಜಪಾನಿ ವ್ಯಕ್ತಿಯಿದ್ದರೆ ಹೈಬ್ರಿಡ್ ರೀತಿಯಲ್ಲಿ ವ್ಯವಹರಿಸಬೇಕಾಗುತ್ತದೆ. ಅಯ್ಯೋ, ಒಳ್ಳೆ ಪೀಕಲಾಟ. ಇಂಥ ನೇರವಂತಿಕೆಯ ತಪ್ಪು ಗ್ರಹಿಕೆಗಳು ಸಾಂಸ್ಕೃತಿಕವಾಗಿ ಭಿನ್ನವಾಗಿರುವವರು ವ್ಯವಹರಿಸುವಾಗಲೆಲ್ಲ ಸಾಮಾನ್ಯ. ಇದು ಕೌಟುಂಬಿಕ ಹಂತದಲ್ಲಿಯೂ
ಅಷ್ಟೇ ಸತ್ಯ. ಮಕ್ಕಳ ಮದುವೆಯ ನಂತರ ಎರಡು ಕುಟುಂಬ ಗಳ ನಡುವೆಯ ಕಂದಕಕ್ಕೆ, ವಿರಸಕ್ಕೆ, ಮುನಿಸಿಗೆ ಅದೆಷ್ಟೋ ಬಾರಿ ಅಲ್ಲಿ ಒಬ್ಬರ ನೇರವಂತಿಕೆಯೇ ಕಾರಣವಾಗಿರುತ್ತದೆ.

ನಾವು ಪ್ರಾಮಾಣಿಕತೆ, ನೇರವಂತಿಕೆಯನ್ನು ವೈಭವೀಕರಿಸುವಾಗ ಅದರಿಂದಾಗುವ ಅಡ್ಡ ಪರಿಣಾಮಗಳ ಬಗ್ಗೆ ಯೋಚಿಸುವುದೇ ತಪ್ಪು ಎನ್ನುವ ಮನಸ್ಥಿತಿಗೆ ತಲುಪಿಬಿಡುತ್ತೇವೆ. ನಾನಿಲ್ಲಿ ಅಪ್ರಿಯವಾದದ್ದನ್ನು ಹೇಳಬಾರದು ಎಂದಷ್ಟೇ ಹೇಳುತ್ತಿಲ್ಲ. ಅದರಾಚೆ ಯೋಚಿಸಬೇಕಾದದ್ದು ಬಹಳಷ್ಟಿವೆ. ಸ್ನೇಹಿತನೊಬ್ಬ ತನ್ನ ಭಾಷಣಕ್ಕೆ ಕೆಲವೇ ನಿಮಿಷವಿರುವಾಗ ತನ್ನ ಬಟ್ಟೆ ಹೇಗಿದೆ ಎಂದು ಕೇಳುತ್ತಾನೆ ಎಂದಿಟ್ಟುಕೊಳ್ಳಿ. ಸ್ನೇಹಿತನ ಬಟ್ಟೆ ಅವನಿಗೆ ಒಂಚೂರೂ ಹೊಂದಾಣಿಕೆ ಯಾಗುವುದಿಲ್ಲ. ಆದರೆ ಆ ಸಮಯದಲ್ಲಿ ಕೇಳಿದಾಗ ‘ಸರಿಯಿಲ್ಲ’ ಎಂದು ಹೇಳುವುದು ಯಾವ ಸುಡುಗಾಡು ಪ್ರಾಮಾಣಿಕತೆಯೂ ಅಲ್ಲ. ಒಂದೊಮ್ಮೆ ನೀವು ಆ ಸ್ನೇಹಿತನಿಗೆ ‘ನಿನ್ನ ಬಟ್ಟೆ ಒಂದು ಸ್ವಲ್ಪವೂ ಸರಿಯಿಲ್ಲ’ ಎಂದುಬಿಟ್ಟರೆ ತಕ್ಷಣ ಅವನಲ್ಲಿದ್ದ ಸಂಪೂರ್ಣ ವಿಶ್ವಾಸ ನೆಲಕಚ್ಚಿಬಿಡುತ್ತದೆ.

ಅಂಥ ಸಮಯದಲ್ಲಿ ‘ಸರಿಯಿದೆ, ಚೆನ್ನಾಗಿದೆ’ ಎಂದೇ ಹೇಳಬೇಕು. ಹಾಗೆ ಹೇಳುವಾಗ, ಅದು ಸುಳ್ಳು ಎಂಬ ತಪ್ಪಿತಸ್ಥ ಭಾವನೆ ನಮ್ಮಲ್ಲಿ ಹುಟ್ಟಬಾರದು. ಅದೇ ವ್ಯಕ್ತಿ, ಮನೆಯಿಂದ ಹೊರಡುವಾಗ ಆ ಪ್ರಶ್ನೆ ಕೇಳಿದ್ದರೆ, ಆಗ ಸತ್ಯವನ್ನೇ ಹೇಳಬೇಕು. ಆಗ ಹೇಳಿದರೆ ಅವನಿಗೆ ಬಟ್ಟೆ ಬದಲಾಯಿಸಿಕೊಳ್ಳಲು ಅವಕಾಶವಿರುತ್ತದೆ.
ಪ್ರಾಮಾಣಿಕತೆಯು ಸಮಯ ಮತ್ತು ಸಂದರ್ಭಕ್ಕೆ ತಕ್ಕಂತೆ ಬದಲಾಗಬೇಕು. ಆದರೆ ಉದ್ದೇಶ ಮಾತ್ರ ಒಳ್ಳೆಯದಿರಬೇಕು. ನೇರವಾಗಿ, ಇದ್ದದ್ದು ಇದ್ದಂತೆ ಹೇಳುವ ಪ್ರಾಮಾಣಿಕತೆ ಯನ್ನು ಪ್ರದರ್ಶಿಸುವಾಗ ಸಮಯ ಯಾವುದು ಎಂಬುದು ಬಹಳ ಮುಖ್ಯ. ಅಭಿಪ್ರಾಯ, ಅನಿಸಿಕೆ ಇವುಗಳನ್ನು ಹೇಳುವಾಗ ಪ್ರಾಮಾಣಿಕತೆ ಅತ್ಯವಶ್ಯಕವೇನೋ ಹೌದು. ಹಾಗಂತ ಅದನ್ನು ಬದಲಿಸಲಿಕ್ಕೆ ಆಗದ ಸಮಯದಲ್ಲಿ, ಅಥವಾ ಬದಲಿಸಲಿಕ್ಕೆ ಸಾಧ್ಯವೇ ಇಲ್ಲದಿರುವಾಗ ಹೇಳದಿರುವುದೇ ಸರಿ.

ಅಲ್ಲಿ ಪ್ರಾಮಾಣಿಕತೆಗಿಂತ ಸಂಬಂಧ, ಅದರಾಚೆಯ ಹಲವು ಮಾನವೀಯ ವಿಚಾರಗಳು ಮುಖ್ಯ ವಾಗುತ್ತವೆ. ಯಾವುದೇ ಪ್ರಾಮಾಣಿಕ ಅನಿಸಿಕೆಯನ್ನು ಹೇಳು
ವಾಗ, ಅದರ ಅವಶ್ಯಕತೆಯ ಬಗ್ಗೆ ಎಲ್ಲಕ್ಕಿಂತ ಮೊದಲು ವಿಚಾರಮಾಡಲೇಬೇಕು. ಅನಿಸಿಕೆಯನ್ನು ಅಳೆದು ತೂಗಿಯೇ ಹೇಳಬೇಕು. ಅದೆಲ್ಲದಕ್ಕಿಂತ ಮುಖ್ಯವಾಗಿ ನಮ್ಮ ಅನಿಸಿಕೆಗಳು ಪ್ರಯೋಜನಕ್ಕೆ ಬರುವುದಾದರಷ್ಟೇ ಹೇಳಬೇಕು. ಅದಿಲ್ಲ ವಾದಲ್ಲಿ ತೆಪ್ಪಗಿರುವುದೇ ಸರಿ. ಇಂಥ ಸಮಯದಲ್ಲಿ ಸತ್ಯದ ಆಚರಣೆಗೆ ಸಂಬಂಧಿ ಸಿದ ಯಾವುದೇ ದ್ವಂದ್ವಗಳು ನಮ್ಮನ್ನು ಬಾಧಿಸಬಾರದು. ಸ್ನೇಹಿತೆಯೊಬ್ಬಳು ಕರ್ಕಶವಾಗಿ ಹಾಡುತ್ತಾಳೆ ಎಂದರೆ ಅದನ್ನು ಎಲ್ಲರೆದುರು ಹೇಳುವುದು ಉದ್ಧಟ
ತನವೇ ಹೊರತು ಪ್ರಾಮಾಣಿಕತೆಯಲ್ಲ. ಕೆಲವು ವೈಯಕ್ತಿಕ ವಿಚಾರಗಳನ್ನು ಇನ್ನೊಬ್ಬರು ಊರಿಗೆಲ್ಲ ಹೇಳುವುದು ಕೂಡ ಮುಗ್ಧ ನೇರವಂತಿಕೆ ಅಲ್ಲ, ಅಸಂವೇದಿತನ.

ಎಲ್ಲಿ ಏನನ್ನು ಹೇಳಬೇಕು, ಹೇಳಬಾರದು ಎಂಬುದನ್ನು ಬದುಕಿನಲ್ಲಿ ಆದಷ್ಟು ಬೇಗ ತಿಳಿದುಕೊಂಡಷ್ಟೂ ಬದುಕು ಸುಲಭವಾಗುತ್ತದೆ. ಇಂದಿನ ನಮ್ಮೆಲ್ಲ ವ್ಯವಹಾರಗಳಲ್ಲಿ, ಅದು ಕೌಟುಂಬಿಕವಿರಬಹುದು, ವ್ಯಾವಹಾರಿಕ, ಉದ್ಯೋಗಕ್ಕೆ ಸಂಬಂಧಿಸಿದ್ದಿರಬಹುದು, ಯಾವಾಗ ನಮ್ಮ ಪ್ರಾಮಾಣಿಕತೆ, ನೇರವಂತಿಕೆ ಯನ್ನು ಪ್ರದರ್ಶಿಸಬೇಕು ಎಂಬುದಕ್ಕಿಂತ ಯಾವಾಗ ತೆಪ್ಪಗಿರಬೇಕು ಎಂಬುದನ್ನು ಕಲಿಯುವುದೇ ಮುಖ್ಯವಾಗುತ್ತದೆ. ನೇರ ನಡೆ-ನುಡಿಯಿಂದಲೇ ಗುರುತಿಸಿ
ಕೊಳ್ಳುವವರು, ನಾನಿರುವುದೇ ಹೀಗೆ ಎನ್ನುವವರು ಸಮಾಜದಲ್ಲಿ ಕ್ರಮೇಣ ಅಪ್ರಸ್ತುತ ಪ್ರಸಂಗಿಯಾಗಿ ಬಿಡುತ್ತಾರೆ ಎಂಬುದು ಇಲ್ಲಿನ ಸೂಕ್ಷ್ಮ. ಇದರ ಗ್ರಹಿಕೆಯಿಲ್ಲದೆ, ‘ನೇರ ವಂತಿಕೆಯೇ ನನ್ನ ಛಾಪು, ನೀವು ಒಪ್ಪದಿದ್ದರೆ ಅದು ನನ್ನ ತಪ್ಪಲ್ಲ’ ಎಂದು ಮೊಂಡು ವಾದಿಸುವವರು ವಯಸ್ಸು ಕಳೆದಂತೆ ಇನ್ನಷ್ಟು
ಅಪ್ರಿಯರಾಗುತ್ತ ಹೋಗುತ್ತಾರೆ.

ಇದನ್ನು ಏಟ್ಞಛಿoಠಿqs ಟಞmಛ್ಡಿ ಎಂದು ಕರೆಯುತ್ತಾರೆ. ಇದು ನೇರವಂತಿಕೆ, ಪ್ರಾಮಾಣಿಕತೆಯ ಬೇಕುಗಳ ಪ್ರಮಾಣವನ್ನು ತಿಳಿಯದ ಸ್ಥಿತಿ, ಗೊಂದಲ. ಅಂಥವರ ನೇರವಂತಿಕೆಯನ್ನು ಕ್ರಮೇಣ ಅವರೇ ಹೊಗಳಿಕೊಳ್ಳುತ್ತಾರೆ. ಉಳಿದವರಿಗೆ ಕ್ರಮೇಣ ಅವರ ಆ ಗುಣವೇ ಪೀಡೆಯಾಗಿ ಕಾಡುತ್ತದೆ. ಉತ್ತಮ ಜೀವನಕ್ಕೆ ನಾಲಗೆಗೆ ಒಂದಿಷ್ಟು ಫಿಲ್ಟರ್‌ಗಳು ಅವಶ್ಯಕ ಎನ್ನುವುದರಲ್ಲಿ ದೂಸ್ರಾ ಮಾತಿಲ್ಲ. ನೇರವಂತಿಕೆ ಮತ್ತು ಪ್ರಾಮಾಣಿಕತೆ ಸರಿಯಲ್ಲವೆನ್ನುತ್ತಿಲ್ಲ. ಆದರೆ ಜೀವನ ‘ಉಪ್ಪಿ’ ಸಿನಿಮಾ ಅಲ್ಲ. ನೇರವಂತಿಕೆಯ ಪ್ರಮಾಣ ಮತ್ತು ರೂಪವನ್ನು ಆಗೀಗ ಅಳೆಯುತ್ತ ಇರಲೇಬೇಕು, ಒರೆಗೆ ಹಚ್ಚುತ್ತಲೇ ಇರಬೇಕು. ಸಾಮಾಜಿಕ ವ್ಯವಹಾರ ಸೂಕ್ಷ್ಮತೆ ಇಂದು ಹಿಂದೆಲ್ಲದಕ್ಕಿಂತ ಅತ್ಯವಶ್ಯಕ. ಅದು ಮೋಸ ಅಥವಾ ಅಪ್ರಾಮಾಣಿಕತೆಯಲ್ಲ. ಅದನ್ನು ಸಮಾಜ, ಶಿಕ್ಷಣ ಕಲಿಸುವುದಿಲ್ಲ. ನಾವೇ ಕಲಿತುಕೊಳ್ಳಬೇಕು. ಬದಲಿಸಿಕೊಳ್ಳಬೇಕು. ಮಾತು ಕಡ್ಡಿ ಮುರಿದಂತಿರಬೇಕು ನಿಜ, ಹಾಗಂತ ಕಂಡ ಕಂಡ ಕಡ್ಡಿಯನ್ನೆಲ್ಲ ಮುರಿಯಲಿಕ್ಕೆ ಹೊರಡಬಾರದು. ಅಲ್ಲವೇ?