Sunday, 15th December 2024

ನಾಚಿಕೆಗೇಡಿನ ತಂತ್ರಗಾರಿಕೆ

ಅಭಿಪ್ರಾಯ

ಕೆ.ಎಸ್.ನಾಗರಾಜ್

೧೯೮೦ರಿಂದ ಸತತವಾಗಿ ಎಂಟು ಬಾರಿ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಆಯ್ಕೆ ಆಗಿರುವ ಸಭಾಪತಿಗಳಾಗಿರುವ ಶ್ರೀ ಬಸವರಾಜ್ ಹೊರಟ್ಟಿ ಅವರನ್ನು ಭೇಟಿ ಮಾಡಿ, ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ನಡೆಯುತ್ತಿರುವಂತಹ ಮತ್ತು ನಡೆದಂತಹ ಕೆಲವು ಘಟನೆಗಳ ಬಗ್ಗೆ ಪ್ರಸ್ತಾಪಿಸಿದಾಗ. ಅವರು ಸಹ ಅತ್ಯಂತ ಬೇಸರದಿಂದ, ನಮ್ಮಂತವರು ಈ ಕ್ಷೇತ್ರದಿಂದ ಆಯ್ಕೆಯಾಗಿದ್ದೇವೆ ಎಂದು ಹೇಳಿಕೊಳ್ಳಲು ಈಗ ನಮಗೂ ನಾಚಿಕೆಯಾಗುತ್ತಿದೆ. ಎಂದು ಬೇಸರವನ್ನು ವ್ಯಕ್ತಪಡಿಸುತ್ತಾ. ಚುನಾವಣೆಯಲ್ಲಿ ಹಣ ಮತ್ತು ಹೆಂಡದ ಬಳಕೆಯ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ವಿಧಾನ ಪರಿಷತ್ತು ಸದಸ್ಯತ್ವಕ್ಕಾಗಿ ಶಿಕ್ಷಕರ ಕ್ಷೇತ್ರ ಮತ್ತು ಪದವೀಧರ ಕ್ಷೇತ್ರಕ್ಕೆ ಚುನಾವಣೆಗಳು ನಡೆಯುತ್ತಿದೆ. ಪ್ರಥಮ ಬಾರಿಗೆ ೧೯೫೮ ರಲ್ಲಿ ಈ ಕ್ಷೇತ್ರಗಳು ಸ್ಥಾಪನೆ ಆಗಿರುತ್ತದೆ. ಕಳೆದ ಒಂದು ದಶಕದ ತನಕ ಇಲ್ಲಿ ಚುನಾವಣೆಗೆ ನಿಲ್ಲುವ ವ್ಯಕ್ತಿಗಳು ಶಿಕ್ಷಕರಾಗಿರುತ್ತಿದ್ದರು, ಇಲ್ಲವೇ ಸಾರ್ವಜನಿಕ ಜೀವನದಲ್ಲಿ ಪ್ರಮುಖವಾದಂತಹ ಪತ್ರವನ್ನು ವಹಿಸಿದಂತಹ ಗೌರವಾನ್ವಿತ ವ್ಯಕ್ತಿಗಳಾಗಿರುತ್ತಿದ್ದರು. ಅವರುಗಳು ಕೇವಲ ಮತದಾರರನ್ನ ನೋಂದಾಯಿಸಿ ಮನವಿ ಪತ್ರವನ್ನು ನೀಡಿ ತಮ್ಮ ಸೇವೆ ಮತ್ತು ಅನುಭವದ ಆಧಾರದ ಮೇಲೆ ಆದ್ಯತೆಯನ್ನ ನೀಡಬೇಕೆಂದು ಕೋರಿಕೊಳ್ಳುತ್ತಿದ್ದರು.

ಮತದಾರರು ಸಹ ಅದೇ ರೀತಿಯಲ್ಲಿ ಇವರಿಗೆ ಸ್ಪಂದಿಸುತ್ತಾ ಯಾವುದೇ ರೀತಿ ಯ ಹಣದ ಪ್ರಭಾವವಿಲ್ಲದೆ ಜಾತಿಯ ಸೋಂಕು ಇಲ್ಲದೆ ಯೋಗ್ಯರನ್ನ ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡುತ್ತಿದ್ದರು. ಇದಕ್ಕೆ ಉದಾಹರಣೆಯಾಗಿ ಬಸವರಾಜ್ ಹೊರಟ್ಟಿರವರು ಎಂಟು ಬಾರಿ ಗೆದ್ದಿರುವುದು ಈ ಹಿಂದೆ ವಿ ಎಸ್ ಕೃಷ್ಣ ಅಯ್ಯರ್, ಗುಂಡಯ್ಯ ಶೆಟ್ಟಿ, ಶಂಕರ್ ಮೂರ್ತಿ, ಡಾ.ತಂಗಾ, ಡಾ.ಎಂ.ಪಿ ನಾಡಗೌಡ, ಮಧುಸೂದನ್, ಪೂಜಾರ, ಬಸವರಾಜ್ ಹೀಗೆ ಅನೇಕರ ಹೆಸರುಗಳನ್ನು ಉದಾಹರಣೆಯಾಗಿ ಕೊಡಬಹುದು ಆದರೆ ಇತ್ತೀಚಿನ ದಿನಗಳಲ್ಲಿ ಈ ಚುನಾವಣೆ ನಾಚಿಕೆ ಬರುವ ರೀತಿಯಲ್ಲಿ ನಡೆಯುತ್ತಿದೆ ಮತದಾರ ಅನೇಕ ಸಂದರ್ಭದಲ್ಲಿ ಹಣದ ಪ್ರಭಾವಕ್ಕೆ ಗುರಿಯಾಗುತ್ತಿದ್ದಾರೆ ಇಲ್ಲವೇ ಕ್ಷಣಿಕ ಅಮಿಷಗಳಿಗೆ ಬಲಿಯಾಗುತ್ತಿದ್ದಾರೆ ಪ್ರತಿಯೊಂದು ಮತಕ್ಕೆ ೨,೦೦೦ ದಿಂದ ೧೦,೦೦೦ ತನಕ ನಿಗದಿ ಮಾಡುತ್ತಿರುವುದು, ಅತ್ಯಂತ ಆತಂಕದ ಸಂಗತಿಯಾಗಿದೆ.

ಸಾರ್ವಜನಿಕ ಚುನಾವಣೆಗಳಲ್ಲಿ ಬಡವರು ಹಣವನ್ನು ಬಯಸುತ್ತಾರೆ ಎನ್ನುವ ಮಾತಿದೆ. ಆದರೆ, ಬಹಳಷ್ಟು ಬಡವರು ಸ್ವಾಭಿಮಾನದಿಂದ ಇಂತಹ ಸಂದರ್ಭದಲ್ಲಿ ತಮ್ಮ ನೈತಿಕತೆಯನ್ನು ಪ್ರದರ್ಶಿಸಿ ದೊಡ್ಡತನವನ್ನು ತೋರಿದ್ದಾರೆ. ಅದೇ ರೀತಿಯಲ್ಲಿ ಶಿಕ್ಷಕರು ಮತ್ತು ಪದವೀಧರರು ಬಹಳಷ್ಟು ಮಂದಿ ಯಾವುದೇ ರೀತಿಯ ಅಮೀಷೆಗಳಿಗೆ ಬಲಿಯಾಗದೆ ತಮ್ಮ ಮತವನ್ನ ಸರಿಯಾದ ರೀತಿಯಲ್ಲಿ ಯೋಗ್ಯರಿಗೆ ಚಲಾವಣೆಯನ್ನು ಮಾಡುವ ಮನಸ್ಥಿತಿಯವರು ಸಾಕಷ್ಟು ಮಂದಿ ಇದ್ದಾರೆ. ಆದರೂ, ದುರ್ಬಲ ಮನಸ್ಸಿನ ಮತದಾರರನ್ನ ಗುರಿಯನ್ನಾಗಿಸಿಕೊಂಡು ಅವರಿಗೆ ಹಣವನ್ನ ಕೊಟ್ಟು ಮತವನ್ನು ಪಡೆಯುವಂತಹ ತಂತ್ರಗಾರಿಕೆಯನ್ನ ಅನುಸರಿಸುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ.

ಶಿಕ್ಷಕರು ಮತ್ತು ಪದವೀಧರ ಕ್ಷೇತ್ರದಲ್ಲಿನ ಹಣದ ಪ್ರಭಾವವನ್ನ ನಿಯಂತ್ರಿಸದಿದ್ದರೆ ಮುಂದಿನ ದಿನಗಳಲ್ಲಿ ಸಭ್ಯರು ಯಾರು ಚುನಾವಣೆಗೆ ಬರಲು ಸಾಧ್ಯವೇ ಇಲ್ಲ. ಬಂಡವಾಳ ಶಾಹಿಗಳು ಮಾತ್ರವೇ ಇಂತಹ ಚುನಾವಣೆಗಳಲ್ಲಿ ಆಯ್ಕೆಯಾಗಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಾನ್ಯ ಸಭಾಪತಿಗಳು ಒಂದು ಗಂಭೀರವಾದಂತಹ ಚರ್ಚೆಯನ್ನು ವಿಧಾನ ಪರಿಷತ್ತಿನಲ್ಲಿ ಆದರೂ ಸರಿಯೇ ಇಲ್ಲವೇ ಸಾರ್ವಜನಿಕ ವೇದಿಕೆಗಳಲ್ಲಿ ಆರಂಭಿಸಬೇಕಾಗಿದೆ. ಮತದಾರರಲ್ಲಿ ಜಾಗೃತಿಯನ್ನು ಉಂಟು ಮಾಡಬೇಕಾಗಿದೆ. ಇಲ್ಲದಿದ್ದರೆ ಇಂತಹ ಕ್ಷೇತ್ರಗಳ ಅವಶ್ಯಕತೆಯಾದರು ಇದೇಯೇ ಎನ್ನುವ ಪ್ರಶ್ನೆ ಪ್ರಜಾಪ್ರಭುತ್ವದಲ್ಲಿ ಮೌಲ್ಯಗಳನ್ನ ಬಯಸುವ ಜನರಿಗೆ ಕಾಡುತ್ತದೆ.