ಅಭಿವ್ಯಕ್ತಿ
ಕೃಷ್ಣಾನಂದ ಶರ್ಮಾ
ಪ್ರತಿದಿನ ಬೆಳಗ್ಗೆ ದಿನಪತ್ರಿಕೆಯನ್ನು ತೆರೆದ ಕೂಡಲೆ ದಿನಭವಿಷ್ಯವನ್ನು ಹೇಳುವ ಅಂಕಣದತ್ತ ಕಣ್ಣು ಹೊರಳಿಸಿ, ಅರಳಿಸಿ
ನೋಡುವುದು ಅನೇಕರ ನಿತ್ಯ ಕಾಯಕ. ಆ ಮಟ್ಟಿಗೆ ಭವಿಷ್ಯ ವಿಭಾಗ ಜನಪ್ರಿಯತೆ ಗಳಿಸಿಕೊಂಡಿದೆ.
ಇಲ್ಲಿ ರಾಶಿಭವಿಷ್ಯ ಜೋತಿಷ್ಯದ ಸಾರಸರ್ವಸ್ವವೆಂದೂ ಅಥವಾ ರಾಶಿಭವಿಷ್ಯ ಒಂದು ದೊಡ್ಡ ಕಲ್ಪನೆಯೆಂದೂ ಹೇಳಲು ಹೊರಟಿದ್ದಲ್ಲ. ಆದರೆ ಮಾಧ್ಯಮಗಳ ಮೂಲಕ ರಾಶಿಭವಿಷ್ಯ ಓದಿ, ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿರು ವವರು ಹಾಗೂ ಪ್ರತ್ಯಕ್ಷವಾದ ಶಾಸ್ತ್ರವೆಂದು ಕರೆಯಲ್ಪಡುವ ಜೋತಿಷ್ಯದ ಮೂಢನಂಬಿಕೆಯ ಲೇಬಲ್ ಹಚ್ಚಿ ಸುಳ್ಳೆಂದು ಷರಾ ಬರೆಯಲು ಹೊರಟವರು ಕೆಲವು ವಿಷಯವನ್ನು ಮನಗಾಣಬೇಕಾಗುತ್ತದೆ.
ಕೇವಲ ರಾಶಿಗಳ ಮೂಲಕವೇ ಭವಿಷ್ಯವನ್ನು ತಿಳಿಯುವುದಾದರೆ ದೇಶದಲ್ಲಿ ಹನ್ನೆೆರಡು ತರಹದ ಜನರು ಮಾತ್ರ ಇರಬೇಕಾಗು ತ್ತಿತ್ತು. ಕನ್ಯಾರಾಶಿಯವರಿಗೆ ಈ ವರ್ಷ ಸಂತಾನ ಯೋಗವೆಂದು ಬರೆದಿದ್ದರೆ, ಆ ರಾಶಿಯಲ್ಲಿ ಹುಟ್ಟಿದ ಮದುವೆ ಯಾದವರಿಗೂ, ಮದುವೆ ಆಗದೆ ಇರುವವರಿಗೆ, ಬದುಕಿನ ಕೊನೆ ಕ್ಷಣ ಎಣಿಸುತ್ತಿರುವವರಿಗೆ, ಹಾಗೆಯೇ ನಿನ್ನೆ- ಮೊನ್ನೆ ಹುಟ್ಟಿದ ಮಗುವಿಗೂ ಅಪ್ಪ – ಅಮ್ಮ ಆಗುವ ಯೋಗ ಬರಬೇಕಾಗುತ್ತದೆ.
ಹಾಗಾಗಿ ನಿರ್ಣಯಕ್ಕೆ ಬರುವ ಮೊದಲು ಈ ಬಗ್ಗೆ ಕೆಲವು ವಿಚಾರಗಳನ್ನು ತಿಳಿಯಬೇಕಾಗುತ್ತದೆ. ಜಾತಕ ನೋಡುವುದು ಕೇವಲ ರಾಶಿ – ನಕ್ಷತ್ರಗಳಿಂದಲ್ಲ ಅಥವಾ ಜಾತಕವೆಂದರೆ ಬರಿ ರಾಶಿ – ನಕ್ಷತ್ರಗಳಲ್ಲ. ವ್ಯಕ್ತಿ ಹುಟ್ಟುವಾಗ ಚಂದ್ರಗ್ರಹ ಯಾವ ರಾಶಿ – ನಕ್ಷತ್ರ ದಲ್ಲಿರುತ್ತದೆಯೋ ಅದೇ ಆತನ ರಾಶಿ – ನಕ್ಷತ್ರವೆಂದು ಕರೆಯಲಾಗುತ್ತದೆ. ಚಂದ್ರ ಹೊರತುಪಡಿಸಿ ಕುಂಡಲಿಯಲ್ಲಿ ಲಗ್ನ, ರವಿ, ಕುಜ ಮುಂತಾದ ತಾರಾಗ್ರಹಗಳು, ರಾಹು, ಕೇತುಗಳು ಕೂಡ ಇರುತ್ತವೆ ಎನ್ನುವುದನ್ನು ಗಮನಿಸಬೇಕು.
ಪ್ರತಿಯೊಂದು ಗ್ರಹದ ಸ್ಥಿತಿ – ಗತಿಯ ಮೇಲೆ ನಾನಾ ರೀತಿಯಲ್ಲಿ ಚಿಂತಿಸಬೇಕಾಗುತ್ತದೆ. ಉದಾಹರಣೆಗೆ ಒಂದು ಗ್ರಹ ಯಾವ ಭಾವದಲ್ಲಿದೆ, ಯಾವ ರಾಶಿಯಲ್ಲಿದೆ, ಶತ್ರು ಕ್ಷೇತ್ರದಲ್ಲಿದೆಯೋ ಮಿತ್ರಕ್ಷೇತ್ರದಲ್ಲಿದೆಯೋ, ಕೇಂದ್ರ – ತ್ರಿಕೋನ – ಉಪಚಯ ಮುಂತಾದ ಯಾವ ಸ್ಥಾನಗಳಲ್ಲಿದೆ. ನೀಚಭಾವದಲ್ಲಿದೆಯೋ, ಉಚ್ಚಭಾವದಲ್ಲಿಯೋ, ಯಾವ ಭಾವಾಧಿಪತ್ವವನ್ನು ಹೊಂದಿದೆ, ಯಾವ ಅಂಶಕದಲ್ಲಿದೆ, ಭಾಗ್ಯಸ್ಥಾನ ಹೇಗಿದೆ, ಯಾವ ಗ್ರಹದ ಜತೆ ಇದೆ, ಯಾವ ಗ್ರಹಗಳ ದೃಷ್ಟಿ ಇದೆ, ಕಾರಕತ್ವ ಯಾವುದು, ಯಾವ ಯೋಗವನ್ನು ಕೊಡುತ್ತಿದೆ, ಷಡ್ಬಲೋಪೇತವಾಗಿದೆಯೋ ಇಲ್ಲವೋ… ಹೀಗೆ ಅನೇಕ ವಿಧಗಳಲ್ಲಿ ಈ ಬಗ್ಗೆ ಚಿಂತಿಸ ಬೇಕಾಗುತ್ತದೆ.
ಜತೆಗೆ ರಾಶಿಯಿಂದ ಗೋಚರದ ಮೂಲಕವೂ ಆಗಿನ ಗ್ರಹಸ್ಥಿತಿಗಳನ್ನು ನೋಡಬೇಕಾಗುತ್ತದೆ. ಇಷ್ಟು ಹೇಳಿದ್ದು ಯಾವುದೋ ಒಂದು ಗ್ರಹದ ಕುರಿತಾಯಿತು. ಹೀಗೆ ಎಲ್ಲ ಗ್ರಹಗಳ ಬಲಾಬಲಗಳನ್ನು ಚಿಂತಿಸಬೇಕಾಗುತ್ತದೆ. ಇಲ್ಲಿಗೆ ಜಾತಕಪರಿಶೀಲನೆ
ಮುಗಿಯುವುದಿಲ್ಲ. ಯಾವ ಗ್ರಹದ ದಶೆ ನಡೆಯುತ್ತಿದೆ ಎನ್ನುವುದನ್ನು ಮುಖ್ಯವಾಗಿ ಚಿಂತಿಸಬೇಕಾಗುತ್ತದೆ. ಆಯಾಯಾ
ಗ್ರಹಗಳು ತಮ್ಮ ಫಲವನ್ನು ಕೊಡುವುದು ತಮ್ಮ ದಶೆ ನಡೆಯುವಾಗ. ‘ಸ್ವಾಂ ಸ್ವಾಂ ದಶಾಮುಪಗತಾಃ ಸ್ವಫಲಪ್ರದಾಃ ಸ್ಯುಃ’.
ಜಾತಕದಲ್ಲಿ ಎಲ್ಲ ಗ್ರಹಗಳು ಬಲಿಷ್ಠವಾಗಿದ್ದು, ಒಂದು ಬಲಹೀನವಾಗಿದ್ದರೆ ಆತ ಸುಖವಾಗಿ ಬಾಳುತ್ತಾನೆ ಎಂದೇನಲ್ಲ. ಅವನ ಜಾತಕದಲ್ಲಿ ಬಲಹೀನವಾದ ಗ್ರಹದ ದಶೆ ಬಂದಾಗ ಆ ಗ್ರಹ, ಅದು ಇರುವ ಭಾವ, ಆಧಿಪತ್ಯದ ನಮೇಲೆ ಅದಕ್ಕೆ ಸಂಬಂಧಪಟ್ಟ ಕೆಟ್ಟ ಫಲವನ್ನು ಕೊಡಬಹುದು. ಹಾಗಾಗಿ ಒಂದು ಜಾತಕದಲ್ಲಿ ರಾಜಯೋಗವಿದೆ ಎಂದರೆ ಆತ ರಾಜನಾಗಿ ಬಿಡುತ್ತಾನೆ ಎಂದು ಹೇಳಲು ಆಗುವುದಿಲ್ಲ. ಒಬ್ಬನ ಜಾತಕದಲ್ಲಿ ಗುರು ರಾಜಯೋಗವನ್ನು ಕೊಡುತ್ತಿದ್ದಾನೆ ಎಂದರೆ ರಾಜ ಯೋಗದ ಫಲ ಸಿಗಲು ಆ ಗ್ರಹದ ದಶಾಭುಕ್ತಿಯ ಕಾಲವೇ ಬರಬೇಕಾಗುತ್ತದೆ.
ಒಂದೊಮ್ಮೆ ಆತ ಶನಿದಶೆಯಲ್ಲಿ ಹುಟ್ಟಿದ್ದರೆ ರಾಜಯೋಗ ಇದ್ದಾಗ್ಯೂ ಆತನ ಜೀವನದಲ್ಲಿ ಗುರುದಶೆ ಬರುವುದು ಅಸಾಧ್ಯ. ಹಾಗಾಗಿ ರಾಜಯೋಗ ಆತನಿಗೆ ಬರುವುದೂ ಕೂಡ ದುಃಸಾಧ್ಯ. ಒಬ್ಬ ವ್ಯಕ್ತಿಯ ಜಾತಕದಲ್ಲಿ ಗಜಕೇಸರಿ ಯೋಗವಿದ್ದೂ ಆತ ಯಾವುದೋ ನೌಕರಿಯನ್ನು ಮಾಡುತ್ತಾ ಜೀವನವನ್ನು ನಡೆಸುವುದನ್ನು ನಾವು ನೋಡುತ್ತೇವೆ. ಅದು ಈ ಕಾರಣದಿಂದಲೇ. ಹಾಗೆಯೇ ವಿಶೇಷವಾದ ಯೋಗಕೊಡುವ ದಶೆ ಬಂದಾಗ ಯೋಗ ಬಲಿಷ್ಠವಾಗಿದ್ದರೆ ಪ್ರತ್ಯಕ್ಷ ಅನುಭವಕ್ಕೆ ಬರುತ್ತದೆ.
ಕಷ್ಟ – ಸುಖಗಳು ಕೇವಲ ತಮ್ಮ ಜಾತಕದ ಕುಂಡಲಿಯ ಮೇಲೆ ಅವಲಂಬಿತ ಎಂದೂ ಹೇಳಲಾಗುವುದಿಲ್ಲ. ಹಿಂದೆ ಒಂದು ಕುಟುಂಬದಲ್ಲಿ ನಡೆದ ಪಾಪ ಕಾರ್ಯಗಳು, ವಾಗ್ದೋಷಗಳು, ಮಾಡಿದ ಆಣೆ – ಕಟ್ಟಿದ ಹರಕೆಗಳನ್ನು ನೆರವೇರಿಸದೆ ಇದ್ದಾಗ, ಸರಿಯಾಗಿ ಸಂಸ್ಕಾರ ಸಿಗದೆ ಸದ್ಗತಿ ಪಡೆಯದ ಆ ಕುಟುಂಬದ ಜೀವಗಳು, ಆ ಕುಲದ ದೇವ – ಗುರು – ಆಚಾರ್ಯರ ಕೋಪ – ಶಾಪ ಮುಂತಾದ ವಿಷಯಗಳು ಕೂಡ ಪರಿಣಾಮ ಬೀರುತ್ತದೆ.
ಹಾಗೆಯೇ ಗ್ರಾಮದೇವತೆಯ ವಾಸಸ್ಥಾನ ಜೀರ್ಣಾವಸ್ಥೆಯಲ್ಲಿರುವುದು, ಪೂಜೆ ಸರಿಯಾಗಿ ನಡೆಯದೆ ಇರುವುದು ಕೂಡ ದೋಷ ಗಳನ್ನು ಉಂಟುಮಾಡಬಹುದು.