Saturday, 21st September 2024

ಕುದುರೆ ವ್ಯಾಪಾರಕ್ಕೆ ಬಿಗ್ ಮಾರ್ಕೆಟ್ ಆಗಲಿದೆ ಕರ್ನಾಟಕ

ಮೂರ್ತಿಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಇದು ಐವತ್ತು ವರ್ಷಗಳ ಹಿಂದೆ ನಡೆದ ಘಟನೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ರಾಷ್ಟ್ರ ಮಟ್ಟದಲ್ಲಿ ವಿಭಜನೆಯಾಗಿ ಎರಡು ಬಣಗಳು ತಲೆ ಎತ್ತಿ ನಿಂತಿದ್ದವು. ಈ ಪೈಕಿ ಕಾಂಗ್ರೆಸ್(ಓ)ಒಂದು ಬಣವಾದರೆ, ಕಾಂಗ್ರೆಸ್(ಆರ್)ಮತ್ತೊಂದು ಬಣ. ಒಂದು ಬಣದ ನಾಯಕತ್ವ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಕೈಲಿದ್ದರೆ, ಮತ್ತೊಂದು ಬಣಕ್ಕೆ ದೇವರಾಜ ಅರಸು ನಾಯಕರಾಗಿರುತ್ತಾರೆ.

1971 ರ ಲೋಕಸಭಾ ಚುನಾವಣೆಯಲ್ಲಿ ವೀರೇಂದ್ರ ಪಾಟೀಲ್ ನೇತೃತ್ವದ ಕಾಂಗ್ರೆಸ್(ಓ) ಸೋಲು ಅನುಭವಿಸಿದಾಗ ವೀರೇಂದ್ರ ಪಾಟೀಲರ ಸರಕಾರ ಅಲುಗಾಡತೊಡಗುತ್ತದೆ. ಈ ಸಂದರ್ಭದಲ್ಲಿ ಇತರ ಶಕ್ತಿಗಳ ಜತೆಗೂಡಿ ಶಾಂತವೇರಿ ಗೋಪಾಲಗೌಡರ ನೇತೃತ್ವದಲ್ಲಿ ಪರ್ಯಾಯ ಸರಕಾರ ರಚಿಸಲು ಕಾಂಗ್ರೆಸ್ (ಓ) ನಾಯಕರು ಮುಂದಾದರೆ, ಆ ಗುಂಪಿನಿಂದಲೇ ಹೊರಬಂದ ಹಲವರು ಸಿದ್ಧವೀರಪ್ಪ ಅವರ ನೇತೃತ್ವದಲ್ಲಿ ದೇವರಾಜ ಅರಸರನ್ನು ಸಂಪರ್ಕಿಸು ತ್ತಾರೆ.

ಹೀಗೆ ಸಂಪರ್ಕಿಸಿ, ಕಾಂಗ್ರೆಸ್(ಆರ್) ನೇತೃತ್ವದಲ್ಲಿ ಸರಕಾರ ರಚಿಸಿದರೆ ನಾವು ಬೆಂಬಲಕ್ಕೆ ನಿಲ್ಲುತ್ತೇವೆ. ನೀವು ಯಸ್ ಎಂದರೆ ಸಾಕು, ಇನ್ನಷ್ಟು ಶಾಸಕರನ್ನು ಕಾಂಗ್ರೆಸ್ (ಓ)ನಿಂದ ಸೆಳೆಯಬಹುದು ಎಂದು ಈ ಬಣದ ಪ್ರಮುಖರು ಹೇಳಿದಾಗ ದೇವರಾಜ ಅರಸರು ಅದನ್ನು ನಿರಾಕರಿಸುತ್ತಾರೆ. ಶಾಸಕರನ್ನು ಸೆಳೆಯು ವುದು ಎಂದರೆ ಕುದುರೆ ವ್ಯಾಪಾರ ಮಾಡಿದಂತೆ. ಅಂತಹ ಕುದುರೆ ವ್ಯಾಪಾರ ಮಾಡಿ ಸರಕಾರ ರಚಿಸುವುದು ಪ್ರಜಾಪ್ರಭುತ್ವಕ್ಕೆ ಮಾಡುವ ದ್ರೋಹ ಎಂದು ಅರಸರು ಈ ಪ್ರಸ್ತಾಪವನ್ನೇ ತಳ್ಳಿ ಹಾಕುತ್ತಾರೆ. ಹೀಗೆ ಶಾಸಕರನ್ನು ಸೆಳೆಯುವ ಪ್ರಕ್ರಿಯೆಗೆ ಕುದುರೆ ವ್ಯಾಪಾರ ಎಂದು ಮೊಟ್ಟ ಮೊದಲು ಕರೆದವರು ದೇವರಾಜ ಅರಸು.

ಅಂದ ಹಾಗೆ ಕುದುರೆ ವ್ಯಾಪಾರ ಎಂಬ ಶಬ್ದ ಹೆಚ್ಚು ಬಳಕೆಗೆ ಬರಲು ಅಮೆರಿಕ ಕಾರಣ. ಅದು ತನ್ನ ಮಿಲಿಟರಿಗಾಗಿ ದೊಡ್ಡ ಪ್ರಮಾಣದಲ್ಲಿ ಕುದುರೆಗಳನ್ನು
ಖರೀದಿಸುತ್ತಿತ್ತು. ಇದನ್ನೇ ದೇವರಾಜ ಅರಸರು ಶಾಸಕರನ್ನು ಸೆಳೆಯುವ ಪ್ರಕ್ರಿಯೆಗೆ ಹೋಲಿಸಿ, ಕುದುರೆ ವ್ಯಾಪಾರ ಎಂದು ಹೆಸರಿಟ್ಟರು. ಹೀಗೆ ಕುದುರೆ ವ್ಯಾಪಾರದ ಮೂಲಕ ಸರಕಾರವನ್ನು ರಚಿಸುವ ಕೆಲಸಕ್ಕೆ ಅರಸು ಅವತ್ತು ಕೈ ಹಾಕದೆ ಇದ್ದರೂ,ಇವತ್ತು ಪರಿಸ್ಥಿತಿ ಬದಲಾಗಿದೆ. ಎಷ್ಟರ ಮಟ್ಟಿಗೆ ಎಂದರೆ 2023ರ ವಿಧಾನಸಭಾ ಚುನಾವಣೆಯ ನಂತರ ಕರ್ನಾಟಕ ಈ ಕುದುರೆ ವ್ಯಾಪಾರದ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮಲಿದೆ ಅನ್ನುವುದು ಸದ್ಯದ ಆತಂಕ.

ಉದಾಹರಣೆಗೆ ಕರ್ನಾಟಕದ ಮೂರೂ ರಾಜಕೀಯ ಪಕ್ಷಗಳ ಒಳಬೇಗುದಿಯನ್ನು ಸೂಕ್ಷ್ಮವಾಗಿ ಗಮನಿಸಿ. ಈ ಪೈಕಿ ಯಾವ ಪಕ್ಷಕ್ಕೂ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವ ನಂಬಿಕೆ ಇಲ್ಲ. ಯಡಿಯೂರಪ್ಪ ಅವರ ಪದಚ್ಯುತಿಯ ನಂತರ ಆಡಳಿತಾರೂಢ ಬಿಜೆಪಿಯ ನಾಯಕರೇನೋ ಆತ್ಮವಿಶ್ವಾಸದ ಮಾತುಗಳ ನ್ನಾಡುತ್ತಿದ್ದಾರೆ. ಮೂರು ಮಹಾನಗರ ಪಾಲಿಕೆ ಚುನಾವಣೆಗಳ ಫಲಿತಾಂಶವನ್ನು ಇದಕ್ಕೆ ಸಾಕ್ಷಿಯಾಗಿ ತೋರಿಸುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಕೆಳಗಿಳಿದ ನಂತರ ಬಿಜೆಪಿಯ ಅಂತರಂಗದಲ್ಲಿ ಅಲ ಕಲವಾಗಿದೆ. ಸದ್ಯದ ಸ್ಥಿತಿಯಲ್ಲಿ ಯಡಿಯೂರಪ್ಪ ಅವರ ನಡೆ ಏನು? ಎನ್ನುವುದು ಸ್ಪಷ್ಟವಾಗದೆ ಇರುವುದರಿಂದ ಅವರ ಬೆನ್ನಿಗಿರುವವರು ತತ್ಕಾಲಕ್ಕೆ ಬಿಜೆಪಿಯ ಜತೆ ನಿಂತಿರಬಹುದು.

ಆದರೆ ಮುಂದಿನ ದಿನಗಳಲ್ಲಿ ಇದೇ ಪರಿಸ್ಥಿತಿ ಮುಂದುವರೆಯುತ್ತದೆ ಎಂದು ಹೇಳಲಾಗದು. ಅಂದ ಹಾಗೆ ಮುಖ್ಯಮಂತ್ರಿ ಹುದ್ದೆಯಲ್ಲಿ ಯಡಿಯೂರಪ್ಪ ಅವರು
ಭದ್ರವಾಗಿ ಕುಳಿತಿದ್ದರಲ್ಲ? ಆ ಸಂದರ್ಭದಲ್ಲಿ ತಮ್ಮ ಉತ್ತರಾಧಿಕಾರಿ ವಿಜಯೇಂದ್ರ ಅವರನ್ನು ಕರ್ನಾಟಕದ ಮುಂದಿನ ಸಿಎಂ ಹುದ್ದೆಯ ಮೇಲೆ ಕೂರಿಸಲು ತಮ್ಮ ತವರು ಜಿಲ್ಲೆ ಶಿವಮೊಗ್ಗದ ಸಮೀಪದಲ್ಲಿರುವ ತೋಟದ ಮನೆಯಲ್ಲಿ ಅವರು ಒಂದು ಮಾಸ್ಟರ್ ಪ್ಲಾನ್ ರೂಪಿಸಿದ್ದರು.

ಈ ಮಾಸ್ಟರ್ ಪ್ಲಾನ್ ಪ್ರಕಾರ, ಮುಂದಿನ ಚುನಾವಣೆಯಲ್ಲಿ ಗೆಲ್ಲಬಲ್ಲ ನೂರರಷ್ಟು ಮಂದಿಯ ಮೇಲೆ ಬಂಡವಾಳ ಹೂಡುವ ತೀರ್ಮಾನವಾಗಿತ್ತು. ಮುಂದೆ ಗೆದ್ದು ಬಂದವರ ಪೈಕಿ ಬಹುತೇಕ ಶಾಸಕರು ತಮ್ಮ ಬೆಂಬಲಿಗರೇ ಆದರೆ, ವಿಜಯೇಂದ್ರ ಅವರನ್ನು ಶಾಸಕಾಂಗ ನಾಯಕ ಎಂದು ಘೋಷಿಸುವುದು ಸುಲಭವಾಗುತ್ತದೆ.
ಶಾಸಕಾಂಗದ ಅರ್ಧ ಭಾಗದಷ್ಟು ಶಾಸಕರು ವಿಜಯೇಂದ್ರ ಅವರ ಬೆನ್ನಿಗಿzರೆ ಎಂದರೆ ವರಿಷ್ಠರೂ ಅವರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂಬುದು ಈ ಮಾಸ್ಟರ್
ಪ್ಲಾನಿನ ಲೆಕ್ಕಾಚಾರವಾಗಿತ್ತು.

ಒಂದು ವೇಳೆ ಯಡಿಯೂರಪ್ಪ ಅವರೇನಾದರೂ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿದಿದ್ದರೆ ಅನುಮಾನವೇ ಬೇಡ, ಈ ಮಾಸ್ಟರ್ ಪ್ಲಾನ್ ಜಾರಿಗಾಗಿ ಎಲ್ಲ
ತಯಾರಿ ನಡೆದುಕೊಂಡು ಹೋಗುತ್ತಿತ್ತು ಎಂಬುದು ಸದ್ಯ ಕೇಳಿ ಬರುತ್ತಿರುವ ಮಾತು. ಅದರರ್ಥ, ಇಂತಹ ಮಾಸ್ಟರ್ ಪ್ಲಾನ್‌ನ ರೂಪ ಬದಲಾಗಿರಬಹುದು. ಆದರೆ ಅದರ ಉದ್ದೇಶ ಮಾತ್ರ ಇನ್ನೂ ಜಾರಿಯಲ್ಲಿದೆ. ಆದರೆ ಹೇಗೆ? ಅನ್ನುವ ಪ್ರಶ್ನೆಗೆ ಯಡಿಯೂರಪ್ಪ ಉತ್ತರ ಕಂಡು ಹಿಡಿಯಲು ಪ್ರಯತ್ನಿಸುತ್ತಲೇ ಇದ್ದಾರೆ.
ಚುನಾವಣೆ ಹತ್ತಿರ ಬಂದಾಗ ಒಂದು ಗುಂಪಿನೊಂದಿಗೆ ಹೊರಹೋಗಿ ಹಿಂದಿನಂತೆ ಒಂದು ಪಕ್ಷ ಕಟ್ಟಿ ಸ್ವಯಂ ಸಾಮರ್ಥ್ಯದ ಮೇಲೆ ಸೆಣಸಾಡಿದರೆ, ಮೂವತ್ತರಿಂದ
ನಲವತ್ತು ಸ್ಥಾನಗಳನ್ನು ಗೆದ್ದುಕೊಂಡರೆ ಮುಂದೆ ತಾವೇ ನಿರ್ಣಾಯಕ ಶಕ್ತಿಯಾಗಬಹುದು ಎಂಬುದು ಯಡಿಯೂರಪ್ಪ ಅವರ ಲೆಕ್ಕಾಚಾರ.

ಯಾಕೆಂದರೆ, ತಾವು ಹೊಸ ಪಕ್ಷ ಸ್ಥಾಪಿಸಿ ರಣಾಂಗಣಕ್ಕಿಳಿದರೆ ಕರ್ನಾಟಕದ ನೆಲೆಯಲ್ಲಿ ನಾಲ್ಕು ಶಕ್ತಿಗಳು ಬಡಿದಾಡುವುದು ಅನಿವಾರ್ಯವಾಗುತ್ತದೆ. ಹೀಗೆ
ನಾಲ್ಕು ಶಕ್ತಿಗಳು ಹೋರಾಟ ನಡೆಸಿದರೆ ಅತಂತ್ರ ಫಲಿತಾಂಶ ಬರುವುದು ನಿಶ್ಚಿತ. ಹೀಗೆ ಅತಂತ್ರ ಫಲಿತಾಂಶ ಬಂದಾಗ ಮತ್ತು ತಾವು ಕಟ್ಟುವ ಪಕ್ಷ ಗಣನೀಯ ಸಂಖ್ಯೆಯ ಸೀಟುಗಳನ್ನು ಗೆದ್ದುಕೊಂಡಾಗ ಪರ್ಯಾಯ ಸರಕಾರ ರಚನೆಯ ಸಂದರ್ಭದಲ್ಲಿ ತಮ್ಮ ಪಕ್ಷಕ್ಕೇ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕು ಎಂಬ ಷರತ್ತ ನ್ನಿಟ್ಟುಕೊಂಡು ಆಟಕ್ಕಿಳಿಯಬಹುದು.

ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪರಸ್ಪರ ಕೈಗೂಡಿಸುವ ಸಾಧ್ಯತೆಗಳು ಇಲ್ಲದಿರುವುದರಿಂದ ಅವೆರಡೂ ಶಕ್ತಿಗಳು ಜೆಡಿಎಸ್ ಕಡೆ ನೋಡುವುದು ಅನಿವಾರ್ಯ. ಆದರೆ ಹೀಗೆ ನೋಡುವಾಗ ಅವುಗಳ ಕಣ್ಣ ಮುಂದೆ ಜೆಡಿಎಸ್ ಒಂದೇ ಏಕಿರಬೇಕು? ತಮ್ಮ ನೇತೃತ್ವದ ಮತ್ತೊಂದು ಪಕ್ಷವಿದ್ದರೆ ಆಗ ಆಟವೇ ಬೇರೆ ತಿರುವು ಪಡೆಯುತ್ತದೆ.

ಹೇಗೆಂದರೆ, ಹೊಂದಾಣಿಕೆಯ ಮಾತು ಬಂದಾಗ ಜೆಡಿಎಸ್ ಪಕ್ಷಕ್ಕೆ ಕಾಂಗ್ರೆಸ್‌ಗಿಂತ ಬಿಜೆಪಿ ಹತ್ತಿರ. ದೇವೇಗೌಡರೇನೋ ಕಾಂಗ್ರೆಸ್ ಜತೆ ಸಂಪರ್ಕವಿಟ್ಟು ಕೊಂಡಿದ್ದಾರಾದರೂ, ಸಿದ್ದರಾಮಯ್ಯ ಅವರಿರುವ ಕಾಂಗ್ರೆಸ್ ಪಕ್ಷದ ಜತೆ ಕೈಜೋಡಿಸಲು ಕುಮಾರಸ್ವಾಮಿ ಅವರಿಗೆ ಇಷ್ಟವಿಲ್ಲ. ಹೀಗಾಗಿ ಅವರು ಬಿಜೆಪಿಯ ಜತೆಗಿನ ಸ್ನೇಹವನ್ನು ಇಷ್ಟಪಡುತ್ತಾರೆಯೇ ಹೊರತು ಕಾಂಗ್ರೆಸ್ ಪಕ್ಷದ ಜತೆಗಲ್ಲ. ಹಾಗೇನಾದರೂ ಆದರೆ ಅತಂತ್ರ ಸನ್ನಿವೇಶದಲ್ಲಿ ಸರಕಾರ ರಚಿಸಲು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟಕ್ಕೆ ಹೆಚ್ಚಿನ ಅವಕಾಶ.

ಆದರೆ ತಾವೇ ಹೊಸ ಪಕ್ಷ ಕಟ್ಟಿ ಮೇಲೆದ್ದು ನಿಂತರೆ ಜೆಡಿಎಸ್ ಜತೆಗಲ್ಲದಿದ್ದರೆ ತಮ್ಮ ಜತೆ ಕೈ ಜೋಡಿಸಲು ಕಾಂಗ್ರೆಸ್ ಕೂಡಾ ಮುಂದಾಗಬಹುದು. ಅನಿವಾ ರ್ಯತೆ ಎದುರಾದರೆ ಬಿಜೆಪಿ ಕೂಡಾ ಆಗಿದ್ದೆಲ್ಲ ಮರೆತು ಬಿಡೋಣ ಎಂಬ ವರಸೆ ಶುರು ಮಾಡಬಹುದು. ಆದರೆ ಇಂತಹ ಸಾಧ್ಯತೆಗಳು ತಾವು ನೀರಿಗಿಳಿದರೆ ಮಾತ್ರ ಸಾಧ್ಯ. ಅದನ್ನು ಮಾಡದೆ ಸುಮ್ಮನಿದ್ದರೆ 2023 ರ ವಿಧಾನಸಭಾ ಚುನಾವಣೆಯ ನಂತರ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಸರಕಾರ ರಚಿಸುವ ಅವಕಾಶ ಹೆಚ್ಚು ಎಂಬುದು ಅವರ ಯೋಚನೆ.

ಈ ಯೋಚನೆಗೆ ಮತ್ತೊಂದು ಮಿಸೈಲ್ ಥಿಂಕಿಂಗ್ ಕೂಡಾ ಇದೆ. ಅದೆಂದರೆ, ಅತಂತ್ರ ಸನ್ನಿವೇಶ ನಿರ್ಮಾಣವಾದ ಸನ್ನಿವೇಶದಲ್ಲಿ ಎಲ್ಲ ಪಕ್ಷಗಳ ಬಹುತೇಕ ಶಾಸಕರು ಗೊಂದಲದಲ್ಲಿರುತ್ತಾರೆ. ಅಂತಹ ಸಂದರ್ಭದಲ್ಲಿ ಎದುರಾಳಿ ಪಕ್ಷದ ಕ್ಯಾಂಪಿನಿಂದ ಕೆಲ ಶಾಸಕರನ್ನು ತಮ್ಮ ಪಕ್ಷಕ್ಕೆ ಸೆಳೆಯಬಹುದು ಎಂಬುದು.
ಎಷ್ಟೇ ಆದರೂ ಕರ್ನಾಟಕದ ರಾಜಕಾರಣದಲ್ಲಿ ಕುದುರೆ ವ್ಯಾಪಾರಕ್ಕೊಂದು ಮೆನು ತಯಾರಿಸಿ, ಅದನ್ನು ಕಾಲ ಕಾಲಕ್ಕೆ ಪರಿಷ್ಕರಿಸಿದ ಅನುಭವದಲ್ಲಿ ಯಡಿಯೂರಪ್ಪ ಅವರೇ ನಂಬರ್ ಒನ್ ಅಲ್ಲವೇ? ಇದು ಯಡಿಯೂರಪ್ಪ ಅವರ ಲೆಕ್ಕಾಚಾರವಾದರೆ ಪ್ರತಿಪಕ್ಷ ಕಾಂಗ್ರೆಸ್ ಪಾಳೆಯದಲ್ಲೂ ಭಿನ್ನ ಭಿನ್ನ ಲೆಕ್ಕಾ ಚಾರಗಳು ನಡೆಯುತ್ತಿವೆ.

ಯಡಿಯೂರಪ್ಪ ಅವರ ನಾಯಕತ್ವವಿಲ್ಲದ ಬಿಜೆಪಿ ಸ್ವಯಂ ಸಾಮರ್ಥ್ಯದ ಮೇಲೆ ಅಧಿಕಾರಕ್ಕೆ ಬರುವುದು ಅಸಂಭವ ಎಂಬ ಲೆಕ್ಕಾಚಾರದಲ್ಲಿರುವ ಕೈ ಪಾಳೆಯ ದಲ್ಲಿ ಮುಂದಿನ ಮುಖ್ಯಮಂತ್ರಿ ಹುzಗಾಗಿ ಪ್ರಬಲ ಪೈಪೋಟಿ ಇದೆ. ಒಂದು ಕಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮತ್ತೊಂದು ಕಡೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒಳಗಿಂದೊಳಗೇ ತಮ್ಮ ಬಲವನ್ನು ಹಿಗ್ಗಿಸಿಕೊಳ್ಳುವ ಯತ್ನ ಮಾಡುತ್ತಿದ್ದಾರೆ. ಈ ಪೈಕಿ ಶಿವಕುಮಾರ್ ಅವರು ಬಿಜೆಪಿ ಪಾಳೆಯ ದಿಂದ ಶಾಸಕರನ್ನು ಸೆಳೆಯಲು ಕಸರತ್ತು ನಡೆಸಿದ್ದರೆ, ಶಾಸಕಾಂಗ ಪಕ್ಷದಲ್ಲಿ ತಮಗಿರುವ ಬಲ ಮತ್ತು ಮುಂದಿನ ಚುನಾವಣೆಯಲ್ಲಿ ಗೆಲ್ಲಬಹುದಾದ ತಮ್ಮ ಬೆಂಬಲಿಗರ ಪಟ್ಟಿ ಇಟ್ಟುಕೊಂಡಿರುವ ಸಿದ್ದರಾಮಯ್ಯ ಕೂಡಾ ಅದೇ ಯತ್ನದಲ್ಲಿದ್ದಾರೆ.

ಸ್ವಯಂ ಬಲದ ಮೇಲೆ ಗೆದ್ದು ಬಂದರೆ ತಾವು ಸಿಎಂ ಆಗುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂಬುದು ಸಿದ್ದರಾಮಯ್ಯ ಲೆಕ್ಕಾಚಾರವಾದರೆ, ಬರುವುದೇ
ಅತಂತ್ರ ಸರಕಾರ. ಹಾಗಾದಾಗ ಸಿದ್ದರಾಮಯ್ಯ ಸೈಡ್ ಲೈನಿಗೆ ಹೋಗುವುದು ಅನಿವಾರ್ಯ ಎಂದು ಡಿ.ಕೆ.ಶಿವಕುಮಾರ್ ಭಾವಿಸಿದ್ದಾರೆ. ಒಂದು ವೇಳೆ ಅತಂತ್ರ ಸರಕಾರ ಬಂದರೆ ಬೇರೆ ಪಕ್ಷಗಳಿಂದ ಎಷ್ಟು ಶಾಸಕರನ್ನು ಸೆಳೆಯಬಹುದು? ಅಥವಾ ಯಾವ ಶಕ್ತಿಗಳ ಜತೆ ಕೈಗೂಡಿಸಿ ಸರಕಾರ ರಚಿಸಬಹುದು ಎಂಬ ಬಗ್ಗೆ ಅವರು ಲೆಕ್ಕ ಹಾಕುತ್ತಿದ್ದಾರೆ. ಆ ದೃಷ್ಟಿಯಿಂದ ಕುದುರೆ ವ್ಯಾಪಾರದ ಹೊಡೆತಕ್ಕೆ ಆತಂಕಪಡುವ ಸ್ಥಿತಿ ಇರುವುದು ಜೆಡಿಎಸ್ ಪಕ್ಷಕ್ಕೆ ಮಾತ್ರ. ಮುಂದಿನ ಚುನಾವಣೆಯ ನಂತರ ತಾವು ಬಿಜೆಪಿ ಜತೆ ಕೈಜೋಡಿಸಿ ಸರಕಾರ ರಚಿಸಲು ಮುಂದಾದರೆ, ಕಾಂಗ್ರೆಸ್ ಪಕ್ಷ ತನ್ನ ಲಾಯಕ್ಕೆ ನುಗ್ಗಿ ಕುದುರೆಗಳನ್ನು ಹೊತ್ತೊಯ್ಯ
ಬಹುದು ಎಂಬುದು ಆ ಪಕ್ಷದ ಯೋಚನೆ.

ಹೀಗೆ ನೋಡುತ್ತಾ ಹೋದರೆ ಕರ್ನಾಟಕ ಮುಂದಿನ ಚುನಾವಣೆಯ ನಂತರ ದೇಶದ ಅತ್ಯಂತ ದೊಡ್ಡ ಕುದುರೆ ವ್ಯಾಪಾರದ ಮಾರುಕಟ್ಟೆಯಾಗಿ  ಪರಿವರ್ತನೆ ಯಾದರೆ ಅದರಲ್ಲಿ ಅಚ್ಚರಿ ಪಡುವಂತದ್ದೇನೂ ಇಲ್ಲ