Thursday, 12th December 2024

ನೆಪೋಟಿಸಂ ಕೆಟ್ಟದ್ದೇ ಆಗಿರಬೇಕು ಎಂದಿಲ್ಲ !

ವಿಶ್ವರಂಗ

ರಂಗಸ್ವಾಮಿ ಮೂಕನಹಳ್ಳಿ

ವ್ಯಾಪಾರ ಮಾಡಬೇಕು, ಸ್ವಂತಬಲದ ಮೇಲೆ ಉದ್ದಿಮೆದಾರನಾಗಬೇಕು ಎನ್ನುವ ಕನಸು ಬಹಳಷ್ಟು ಜನರಿಗೆ ಇರುವುದು ಸಹಜ. ಆದರೆ ವ್ಯಾಪಾರ ಎನ್ನುವುದು ಅಷ್ಟು ಸುಲಭವಲ್ಲ. ಉದ್ದಿಮೆದಾರನಾಗಲು ಬೇಕಾ ಗುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಇದೇನಿದು ಮನಸ್ಥಿತಿ? ಗಮನಿಸಿ ನೋಡಿ, ವೇತನಕ್ಕೆ ದುಡಿಯುವ ಒಬ್ಬ ವ್ಯಕ್ತಿಯ ಮನಸ್ಥಿತಿ ಭದ್ರತೆಯನ್ನ ಹೆಚ್ಚು ಇಷ್ಟ ಪಡುತ್ತದೆ. ಅದೇ ಉದ್ದಿಮೆದಾರನ ಮನಸ್ಥಿತಿ ನಾಳಿನ ಅಸ್ಥಿರತೆಯನ್ನ ತಡೆದು ಕೊಂಡು, ಎಲ್ಲಾ ಅಪಾಯ ಮತ್ತು ಬದಲಾವಣೆಗಳನ್ನ ಮೆಟ್ಟಿನಿಂತು ಬೇರೆಯವರಿಗೆ, ಸಮಾಜಕ್ಕೆ ಭದ್ರತೆಯನ್ನ ನೀಡುವ ಕೆಲಸವನ್ನ ಮಾಡುತ್ತದೆ.

ಇದು ಸರಿ, ಇದು ತಪ್ಪು ಎನ್ನುವುದನ್ನ ಹೇಳುವುದು ಈ ಬರಹದ ಉದ್ದೇಶವಲ್ಲ. ಮನಸ್ಥಿತಿ ಎನ್ನುವುದು ಆಯಾ ವ್ಯಕ್ತಿಯನ್ನ ಅವಲಂಬಿಸಿದೆ.
ಕೆಲವರು ಬೇರೆ ದಾರಿಯಿಲ್ಲದೆ ಉದ್ದಿಮೆದಾರರಾಗಿದ್ದರೆ, ಕೆಲವರು ಉದ್ದಿಮೆದಾರರಾಗಬೇಕು ಎನ್ನುವ ಆಶಯ, ಮನೋಬಲದಿಂದ ಉದ್ದಿಮೆದಾರರಾಗಿ
ದ್ದಾರೆ. ಜಗತ್ತಿನ ಬಹುತೇಕರು ವೇತನಕ್ಕೆ ಕೆಲಸ ಮಾಡುತ್ತಾರೆ. ಮೊದಲೇ ಹೇಳಿದಂತೆ ಉದ್ದಿಮೆದಾರರಾಗುವುದು ಸುಲಭದ ಮಾತಲ್ಲ. ಆಂತರಿಕ ಶಕ್ತಿಯ
ಜತೆಗೆ ಹೊರಜಗತ್ತಿನ ಬದಲಾವಣೆಗಳನ್ನ, ಅಸ್ಥಿರತೆಯ ಜತೆಗೆ ಯಾವಾಗ ಬೇಕಾದರೂ ಕುಸಿತ ಕಾಣ ಬಹುದಾದ ಸಂಭಾವ್ಯತೆಯನ್ನ ಮೆಟ್ಟಿ ನಿಲ್ಲುವ
ಮನೋಬಲ ಇದ್ದವರಿಗೆ ಮಾತ್ರ ಉದ್ದಿಮೆ ಕಟ್ಟಲು ಸಾಧ್ಯ.

ಕುಟುಂಬ ಕಟ್ಟಿದ ವ್ಯಾಪಾರವನ್ನ ಮುಂದುವರಿಸುವವರ ಸಂಖ್ಯೆ ಮೂರನೇ ತಲೆಮಾರಿನ ವೇಳೆಗೆ ಕುಸಿತ ಕಾಣುತ್ತದೆ ಎನ್ನುತ್ತದೆ ಅಂಕಿ-ಅಂಶ. ಹಾಗೆಯೇ ಬಹುತೇಕ ಯಾವುದೇ ವಲಯದಲ್ಲಿ ಪ್ರಾರಂಭ ಮಾಡಿದ ೯೦ ಪ್ರತಿಶತಕ್ಕೂ ಹೆಚ್ಚು ಉದ್ದಿಮೆಗಳು ವರ್ಷ ಪೂರ್ಣಗೊಳಿಸುವುದರಲ್ಲಿ ಮುಚ್ಚಿ ಹೋಗುತ್ತವೆ ಎನ್ನುವುದು ಕೂಡ ಸತ್ಯ. ಕುಟುಂಬ ಪ್ರಾರಂಭ ಮಾಡಿದ ಉದ್ದಿಮೆಗಳು ಜಗತ್ತಿನ ತುಂಬಾ ತುಂಬಿಕೊಂಡಿವೆ. ಏಳೂವರೆ ಬಿಲಿಯನ್ ಜನಸಂಖ್ಯೆಯ ಈ ಜಗತ್ತಿನಲ್ಲಿ ಕುಟುಂಬದ ಹಿಡಿತದಲ್ಲಿರುವ ೫೦೦ ಉದ್ದಿಮೆಗಳು ಜಗತ್ತನ್ನ ಆಳುತ್ತಿವೆ.

ಸಮಾನತೆ, ಸ್ವಾತಂತ್ರ್ಯ ಇತ್ಯಾದಿ ಗಳ ಪಾಠ ಹೇಳುವ ದೊಡ್ಡಣ್ಣ ಅಮೆರಿಕದಿಂದ ಹಿಡಿದು, ಜರ್ಮನಿ, -, ನೆದರ್ಲ್ಯಾಂಡ್, ಸೌತ್ ಕೊರಿಯಾ, ಭಾರತ, ಸ್ವಿಸ್, ಕೆನಡಾ, ಚೀನಾ ವರೆಗಿನ ದೇಶಗಳಲ್ಲಿ ಕುಟುಂಬಗಳು ವ್ಯಾಪಾರದ ಮೇಲಿನ ಹಿಡಿತವನ್ನ ಹೊಂದಿವೆ. ಭಾರತ ದೇಶದ ಒಟ್ಟು ಜಿಡಿಪಿಯ ೭೯ ಪ್ರತಿಶತ
ಭಾಗವು ಕುಟುಂಬದ ಆಡಳಿತದಲ್ಲಿರುವ ಸಂಸ್ಥೆಗಳಿಂದ ಬರುತ್ತಿದೆ ಎಂದರೆ ಅದೆಷ್ಟು ದೊಡ್ಡದು ಎನ್ನುವುದರ ಅರಿವು ನಿಮ್ಮದಾಗುತ್ತದೆ. ಜಗತ್ತಿನ
ಅತ್ಯಂತ ಮುಂದುವರಿದ ದೇಶ ಎನ್ನುವ ಹೆಗ್ಗಳಿಕೆ ಹೊಂದಿರುವ ಜರ್ಮನಿಯ ೯೦ ಪ್ರತಿಶತ ವ್ಯಾಪಾರ, ವಹಿವಾಟು ಕುಟುಂಬದ ಆಡಳಿತದಲ್ಲಿದೆ!

ಹಾಗೆಯೇ ಕುಟುಂಬದ ಆಡಳಿತ ಹೊಂದಿರುವ ಜಗತ್ತಿನ ೫೦೦ ಬಲಿಷ್ಠ ಸಂಸ್ಥೆಗಳಲ್ಲಿ ೧೧೯ ಅಮೆರಿಕ ದೇಶದಲ್ಲಿವೆ; ನಿಮಗೆ ತಿಳಿದಿರಲಿ ಅಮೆರಿಕ ದೇಶದ
೮೧ ಪ್ರತಿಶತ ಆದಾಯವನ್ನ ಈ ೧೧೯ ಸಂಸ್ಥೆಗಳು ನೀಡುತ್ತಿವೆ. ಇನ್ನು ಚೀನಾ ದೇಶದಲ್ಲಿ ಕಮ್ಯುನಿಸಂ ಇದ್ದೂ ಪರಿಸ್ಥಿತಿ ವಿಭಿನ್ನವಾಗಿಲ್ಲ, ಅಲ್ಲಿಯೂ ಕುಟುಂಬ, ಮನೆತನಗಳ ದರ್ಬಾರು ಅಬಾಧಿತ. ೧೪ ಕುಟುಂಬಗಳು ನಡೆಸುವ ಸಂಸ್ಥೆಗಳ ದೇಶ ಸೌತ್ ಕೊರಿಯಾ ಎಂದು ಧಾರಾಳವಾಗಿ ಹೇಳಬಹುದು.
ಜಗತ್ತಿನ ಯಾವುದೇ ದೇಶವನ್ನ ನೀವು ಗಮನಿಸಿ, ಎಡೆಯೂ ನಿಮಗೆ ಇದೇ ಅಂಕಿ-ಅಂಶಗಳು ಸಿಗುತ್ತವೆ. ಮೂಲತಃ ಮನುಷ್ಯನ ಸ್ವಭಾವ ಒಂದೇ;
ಹಿಂದೆಲ್ಲ ರಾಜ ಮನೆತನಗಳು ಆಳುತ್ತಿದ್ದವು, ಇಂದಿಗೆ ಅವುಗಳ ಜಾಗವನ್ನ ವ್ಯಾಪಾರಸ್ಥ ಕುಟುಂಬಗಳು ಬದಲಿಸಿವೆ.

ಮುಂದಿನ ತಲೆಮಾರಿನಲ್ಲಿ ಉತ್ತಮ ರಾಜ ಸಿಗದ ಕಾರಣ ಕೆಲವು ರಾಜ ಮನೆತನಗಳು ಹೇಗೆ ಅಳಿದವೋ, ಥೇಟ್ ಹಾಗೆಯೇ ವ್ಯಾಪಾರಸ್ಥ ಕುಟುಂಬಗಳು ಕೂಡ ಅವನತಿ ಕಾಣುತ್ತವೆ, ಅವುಗಳ ಜಾಗದಲ್ಲಿ ಹೊಸ ಮನೆತನ, ಕುಟುಂಬ ಬರುತ್ತದೆ. ಜಗತ್ತಿನಾದ್ಯಂತ ಇದೇ ಕಥೆ. ಕುಟುಂಬ ನಿಯಂತ್ರಣವಿರುವ ವ್ಯಾಪಾರ – ವ್ಯವಹಾರಗಳಲ್ಲಿ ಜಪಾನ್ ವಿಶಿಷ್ಟವಾಗಿ ನಿಲ್ಲುತ್ತದೆ. ಜಾಗತಿಕವಾಗಿ ಕೇವಲ ೩೦ ಪ್ರತಿಶತ ಕುಟುಂಬ ನಿಯಂತ್ರಣದಲ್ಲಿರುವ ಸಂಸ್ಥೆಗಳು ಮುಂದಿನ ತಲೆಮಾರಿನ ಒಡೆತನಕ್ಕೆ ಸಿಗುತ್ತವೆ. ಉಳಿದ ೭೦ ಪ್ರತಿಶತ ಭಾಗವು ಕುಟುಂಬ ಹೊರತುಪಡಿಸಿದ ನಾಯಕನನ್ನ ಹುಡುಕಿಕೊಳ್ಳುತ್ತದೆ. ಮೂರು ಮತ್ತು ನಾಲ್ಕನೇ ತಲೆಮಾರಿಗೆ ಅದೇ ಕುಟುಂಬದ ನಾಯಕತ್ವ ಹೊಂದಿರುವ ಸಂಸ್ಥೆಗಳು ಕೇವಲ ೩/೪ ಪ್ರತಿಶತ ಎನ್ನುವುದು ಅಚ್ಚರಿಯ ವಿಷಯ
ವಲ್ಲ. ಜಪಾನ್ ವಿಶಿಷ್ಟವಾಗಿ ನಿಲ್ಲುವುದು ಈ ವಿಷಯದಲ್ಲಿ!

ಜಪಾನಿನಲ್ಲಿರುವ ಹೋಷಿ ರ‍್ಯೋಕನ್ (Hoshi Ryokan) ಎನ್ನುವ ಹೋಟೆಲ್ ಅನ್ನು ೭೧೮ನೇ ಇಸವಿಯಿಂದ ಅದೇ ಕುಟುಂಬದವರು ನಡೆಸಿಕೊಂಡು ಬರುತ್ತಿದ್ದಾರೆ. ಇವತ್ತಿನ ಆಡಳಿತ ಮಂಡಳಿ ೪೬ನೇ ತಲೆಮಾರಿನದು!! ಜಾಗತಿಕವಾಗಿ ಕುಟುಂಬ ನಡೆಸಿಕೊಂಡು ಬಂದಿರುವ ಮತ್ತು ೨೦೦ ವರ್ಷಕ್ಕೂ ಹೆಚ್ಚು ಕಾಲ ತಮ್ಮ ಅಸ್ತಿತ್ವ ಉಳಿಸಿಕೊಂಡಿರುವ ಸಂಸ್ಥೆಗಳ ಸಂಖ್ಯೆ ಐದು ಸಾವಿರ. ಇದರಲ್ಲಿ ೬೦ ಪ್ರತಿಶತ ಅಂದರೆ ೩ ಸಾವಿರ ಸಂಸ್ಥೆಗಳು ಜಪಾನ್ ದೇಶದಲ್ಲಿವೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನ್ ಮೇಲೆ ಅಣುಬಾಂಬ್ ದಾಳಿ ಆಗಿದ್ದು ಎಲ್ಲರಿಗೂ ತಿಳಿದ ವಿಷಯ. ಅಂದಿನ ಭೀಕರತೆ ಯನ್ನು ಹೋಗಲಾಡಿಸಿಕೊಂಡು ಇಂದಿಗೆ ಜಪಾನ್ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆ ಎನ್ನಿಸಿಕೊಂಡಿದೆ.

ಭಾರತ ಐದನೇ ದೊಡ್ಡ ಆರ್ಥಿಕತೆಯಾಗಿದೆ ಎಂದು ನಾವು ಬೀಗುತ್ತೇವೆ. ಅದು ತಪ್ಪಲ್ಲ. ಆದರೆ ಜಪಾನ್ ಜನಸಂಖ್ಯೆಯಲ್ಲಿ, ಗಾತ್ರದಲ್ಲಿ ಭಾರತದ ಅತಿ ದೊಡ್ಡ ರಾಜ್ಯಕ್ಕಿಂತ ಸ್ವಲ್ಪ ದೊಡ್ಡದಿದೆ ಅಷ್ಟೇ. ಅಂದರೆ ನಾವು ಲೆಕ್ಕಾಚಾರಕ್ಕೆ ಹೊರಟರೆ ಜಪಾನ್ ನಮ್ಮ ಮುಂದೆ ಏನೇನೂ ಅಲ್ಲ. ಆದರೆ ಸಂಪತ್ತಿ ನಲ್ಲಿ ಅವರು ನಮಗಿಂತ ಎರಡು ಹೆಜ್ಜೆ ಮುಂದಿದ್ದಾರೆ. ತಲಾದಾಯದ ಲೆಕ್ಕದಲ್ಲಿ ನೋಡಿದರೆ ಕನಿಷ್ಠ ಇನ್ನೊಂದು ಐವತ್ತು ವರ್ಷವಾದರೂ ನಾವು ಅವರನ್ನು ಸರಿಗಟ್ಟಲಾರೆವು. ಹೀಗೇಕೆ? ಗಮನಿಸಿ ಜಪಾನಿಯರ ಮನಸ್ಥಿತಿ ಇದಕ್ಕೆ ಕಾರಣ.

ಅವರು ಜಗತ್ತನ್ನ, ಪರಿಸ್ಥಿತಿಯನ್ನ, ಇತರರನ್ನ ದೂಷಿಸುತ್ತ ಕೂರಲಿಲ್ಲ. ಬದಲಿಗೆ ಕಷ್ಟಪಟ್ಟು ಕೆಲಸ ಮಾಡುತ್ತಾ ಹೋದರು, ಉಳಿಸುತ್ತಾ ಹೋದರು.
ಅದನ್ನು ಮರುಹೂಡಿಕೆ ಮಾಡುತ್ತಾ ಹೋದರು. ೧೨ ಕೋಟಿಗೂ ಸ್ವಲ್ಪ ಹೆಚ್ಚು ಜನಸಂಖ್ಯೆಯಿರುವ ಜಪಾನ್ ಇಂದು ವಿಶ್ವ ಆರ್ಥಿಕತೆಯ ಬೆನ್ನೆಲುಬಾಗಿ
ನಿಂತಿದೆ. ಚೀನಾ ಕೂಡ ಹೀಗೆಯೇ; ೮೦ರ ದಶಕದಲ್ಲಿ ಭಾರತ ಮತ್ತು ಚೀನಾದ ಆರ್ಥಿಕತೆ ಹೆಚ್ಚು ಕಡಿಮೆ ಒಂದೇ ಇತ್ತು. ಇಂದಿಗೆ ಚೀನಾದ ಆರ್ಥಿಕತೆ
ಭಾರತದ್ದಕ್ಕಿಂತ ಐದು ಪಟ್ಟು ಹೆಚ್ಚಿದೆ. ಚೀನಾ, ಜಪಾನ್ ದೇಶಗಳು ಸಂಪತ್ತು ಸೃಷ್ಟಿಸಿಕೊಂಡ ವೇಗ ಜಗತ್ತನ್ನು ಅಚ್ಚರಿಗೊಳಿಸಿದೆ.

ಉದ್ದಿಮೆ ಕಟ್ಟಲು ಮತ್ತು ಅದನ್ನ ಸುಸ್ಥಿರವಾಗಿ ನಡೆಸಿಕೊಂಡು ಹೋಗಲು ಜಪಾನಿಯರ ಬಳಿ ಮಂತ್ರದಂಡವಿಲ್ಲ, ಆದರೆ ಕೆಲವು ಸರಳ, ಅತಿ ಸರಳ
ಸೂತ್ರಗಳಿವೆ. ಅವುಗಳನ್ನ ಅಳವಡಿಸಿಕೊಂಡರೆ ಯಶಸ್ಸಿನ ಸಂಭಾವ್ಯತೆ ಹೆಚ್ಚಾಗುತ್ತದೆ. ಅಂದಹಾಗೆ ಈ ಸೂತ್ರವನ್ನ ಕೇವಲ ಕುಟುಂಬ ಪ್ರಾರಂಭಿಸುವ
ಉದ್ದಿಮೆಗಳು ಮಾತ್ರ ಪಾಲಿಸಬೇಕೆಂದಿಲ್ಲ, ನಮ್ಮ ಇಂದಿನ ದಿನದ ನವೋದ್ದಿಮೆಗಳು ಕೂಡ ಇದನ್ನ ಅಳವಡಿಸಿಕೊಳ್ಳಬಹುದು. ಸಂಸ್ಥೆ ಹಳೆಯದೋ,
ಹೊಸತೋ ಎಂಬುದಾಗಲೀ, ಅದು ಯಾವ ವಲಯದ್ದು ಎಂಬ ಅಂಶವಾಗಲೀ ಇಲ್ಲಿ ಗಣನೆಗೆ ಬರುವುದಿಲ್ಲ; ಅಂದರೆ ಇದನ್ನ ಯಾವ ಸಂಸ್ಥೆ ಬೇಕಾ ದರೂ, ಅದು ಯಾವುದೇ ಹಂತದಲ್ಲಿದ್ದರೂ ತನ್ನದಾಗಿಸಿಕೊಳ್ಳಬಹುದು. ಇದರಿಂದ ಮೊದಲೇ ಹೇಳಿದಂತೆ ಗೆಲ್ಲುವ ಸಂಭಾವ್ಯತೆ ಹೆಚ್ಚಾಗುತ್ತದೆ.

ಅಂಥ ಸೂತ್ರಗಳು ಇಲ್ಲಿವೆ:

೧) ನಂಬಿಕೆಯೇ ಎಲ್ಲಕ್ಕಿಂತ ದೊಡ್ಡ ಬಂಡವಾಳ: ಜಪಾನ್ ದೇಶದ ಅತಿದೊಡ್ಡ ಶಕ್ತಿ ನಂಬಿಕೆ. ತಮ್ಮ ಗ್ರಾಹಕರ ಮೇಲೆ, ಉದ್ಯೋಗಿಗಳ ಮೇಲೆ,
ಕುಟುಂಬದ ಸದಸ್ಯರ ನಡುವೆ ಇರುವ ಅತೀವ ನಂಬಿಕೆ ಅವರ ದೇಶವನ್ನ, ಅವರ ಉದ್ದಿಮೆಗಳನ್ನ ಆ ಮಟ್ಟಕ್ಕೆ ಬೆಳೆಸಿದೆ. ನಮ್ಮ ಮತ್ತು ನಮ್ಮ ದೇಶದ
ಸನ್ನಿವೇಶಗಳಿಗೆ ತಕ್ಕಂತೆ ಅಲ್ಪಸ್ವಲ್ಪ ಬದಲಾವಣೆಯ ಅವಶ್ಯಕತೆ ಇದ್ದೇ ಇರುತ್ತದೆ. ಕಣ್ಣು ಮುಚ್ಚಿ ಎಲ್ಲವನ್ನೂ, ಎಲ್ಲರನ್ನೂ ನಂಬುವುದು ಸಾಧ್ಯ ವಿಲ್ಲದ ಮಾತು. ಆದರೆ ಕುಟುಂಬದ ಸದಸ್ಯರ ನಡುವೆ, ವ್ಯಾಪಾರ ಶುರುಮಾಡಿರುವ ಸ್ನೇಹಿತರ/ಪಾಲು ದಾರರ ನಡುವೆ ನಂಬಿಕೆ ಅತಿಮುಖ್ಯ. ಜತೆಗೆ
ವ್ಯಾಪಾರಕ್ಕೆ ಮುಖ್ಯವಾಗಿ ಬೇಕಾಗಿರುವ ಪ್ರತಿಭಾವಂತ ಸಿಬ್ಬಂದಿ ವರ್ಗದವರೊಂದಿಗೆ ಕೂಡ ಆರೋಗ್ಯಕರ ನಂಬಿಕೆ ಬೆಳೆಸಿಕೊಳ್ಳುವುದು ಪ್ರಮುಖ
ವಾಗುತ್ತದೆ. ನೆನಪಿರಲಿ, ಎಷ್ಟೇ ದೊಡ್ಡ ಮಟ್ಟದ ಹಣ, ಕನಸು ಯಾವುದೂ ಕೂಡ ಉತ್ತಮ ಸಿಬ್ಬಂದಿ ವರ್ಗವಿಲ್ಲದೆ ಒಂದಿಂಚೂ ಮುಂದೆ ಸಾಗುವುದಿಲ್ಲ.
ಜಪಾನಿಯರು ಪ್ರಥಮ ವರ್ಷಗಳಲ್ಲಿ ಗ್ರಾಹಕ ರೊಂದಿಗೆ ನಂಬಿಕೆ ಗಳಿಸಲು ಹೆಚ್ಚು ಆದ್ಯತೆಯನ್ನ ನೀಡುತ್ತಾರೆ.

೨) ನೇರ ಮತ್ತು ಪ್ರಾಮಾಣಿಕ ಸಂವಹನ: ಮಾತಿಗೂ ಮತ್ತು ಕೃತಿಗೂ ವ್ಯತ್ಯಾಸ ಇರಬಾರದು. ಯಾವಾಗ ಆಡಳಿತ ಮಂಡಳಿ ತನ್ನ ಕೆಲಸಗಾರ
ರೊಡನೆ ನೇರವಾಗಿ ಸಂವಹನ ನಡೆಸುತ್ತದೋ ಮತ್ತು ಪ್ರಾಮಾಣಿಕವಾಗಿರುತ್ತದೋ, ಆಗ ಹೆಚ್ಚಿನ ಯಶಸ್ಸು ಖಂಡಿತ ಸಿಗುತ್ತದೆ. ಕೇವಲ ಆಂತರಿಕ
ವಲಯದಲ್ಲಿರುವವರ ಜತೆಗಲ್ಲದೆ ಎಲ್ಲಾ ಕೆಲಸ ಗಾರರ ಜತೆಗೂ ಅದು ನಡೆಸುವ ಸಂವಹನದಲ್ಲಿ ಪ್ರಾಮಾಣಿಕತೆ ಇರಬೇಕು. ಗ್ರಾಹಕರ ಜತೆಗೂ ನೇರ
ವಾದ ಮತ್ತು ಪ್ರಾಮಾಣಿಕವಾದ ಸಂವಹನ ಅತ್ಯಗತ್ಯ.

೩) ಒಂದು ಕುಟುಂಬ, ನಾವೆ ಒಂದು ಎನ್ನುವ ಭಾವನೆ: ನಾವು ಇಂಥ ಸಮೂಹ ಸಂಸ್ಥೆಗಳಿಗೆ ಕೆಲಸ ಮಾಡುತ್ತಿದ್ದೇವೆ ಎನ್ನುವ ಭಾವನೆ, ನಾವು ಒಂದು ಕುಟುಂಬಕ್ಕೆ ಸೇರಿದವರು ಎನ್ನುವ ಭಾವನೆ ಬರುವಂಥ ವಾತಾವರಣ ನಿರ್ಮಾಣವಾದರೆ ಆಗ ಕೆಲಸ ಬಿಟ್ಟು ಹೋಗುವವರ ಸಂಖ್ಯೆ ಕಡಿಮೆ ಯಾಗುತ್ತದೆ. ನೆನಪಿರಲಿ ಇಂದು ಸಂಸ್ಥೆಗಳು ಎದುರಿಸುತ್ತಿರುವ ದೊಡ್ಡ ಸಮಸ್ಯೆ- ಗುಣಮಟ್ಟದ ಕೆಲಸಗಾರರನ್ನ ಉಳಿಸಿಕೊಳ್ಳುವುದು. ದೊಡ್ಡ ಸಂಸ್ಥೆಗಳು ‘ರಿಟೆನ್ಷನ್ ಬೋನಸ್’ ಎನ್ನುವ ಹೆಸರಿನಲ್ಲಿ ವೇತನದ ೨೦/೩೦ ಪ್ರತಿಶತ ಹಣವನ್ನ ವರ್ಷಕ್ಕೊಮ್ಮೆ ನೀಡಿ, ಪ್ರತಿಭಾವಂತ ಕೆಲಸಗಾರರನ್ನ ಉಳಿಸಿಕೊಳ್ಳುತ್ತವೆ. ಹಣ ಒಂದು ಹಂತದವರೆಗೆ ಮಾತ್ರ ಕೆಲಸ ಮಾಡುತ್ತದೆ. ಹಣ ಮಾಡಲಾಗದ ಕೆಲಸವನ್ನ ಪ್ರೀತಿ, ವಿಶ್ವಾಸ, ನನ್ನದೆನ್ನುವ ಭಾವಗಳು ಸುಲಭವಾಗಿ ಮಾಡುತ್ತವೆ.

೪) ಲಾಭದಲ್ಲೂ ನೀಡಬೇಕಿದೆ ಪಾಲು: ಎಲ್ಲಾ ಕೆಲಸಗಾರರು ವೇತನ ಮತ್ತು ರಿಟೆನ್ಷನ್ ಬೋನಸ್ ನಲ್ಲಿ ತೃಪ್ತಿ ಹೊಂದುವುದಿಲ್ಲ; ಸಂಸ್ಥೆ ನಡೆಯ ಬೇಕು ಎಂದರೆ ಕುಟುಂಬದ ಸದಸ್ಯರು ಮಾತ್ರ ತೀರ್ಮಾನ ಕೈಗೊಳ್ಳುವುದರಲ್ಲಿ, ಲಾಭದಲ್ಲಿ ಭಾಗಿಯಾದರೆ ಸಾಲದು. ಸಂಸ್ಥೆಯ ಉಳಿವು ಮತ್ತು ಬೆಳವಣಿಗೆಗೆ ಹೊರಗಿನ ಪ್ರತಿಭೆ ಕೂಡ ಮುಖ್ಯವಾಗುತ್ತದೆ. ಅಂಥ ಜನರನ್ನ ಗುರುತಿಸಿ ಸಂಸ್ಥೆಯ ಪಾಲುದಾರರನ್ನಾಗಿಸಿ, ಅವರಿಗೆ ಲಾಭದಲ್ಲಿ ಇಂತಿಷ್ಟು ಅಂಶ ಎನ್ನುವುದನ್ನ ಕೂಡ ನಿಗದಿಪಡಿಸಬೇಕಾಗುತ್ತದೆ.

೫) ಸಾಮಾಜಿಕ ಸಮಸ್ಯೆಗಳಿಗೂ ಕಿವಿಯಾಗ ಬೇಕು: ಗಳಿಸಿದ ಹಣವನ್ನೆ ತನ್ನ ಜೋಳಿಗೆಗೆ ಹಾಕಿಕೊಳ್ಳುವುದು ಕೂಡ ಸಂಸ್ಥೆಯ ದೀರ್ಘಕಾಲದ
ಉಳಿವಿಗೆ ಒಳಿತಲ್ಲ. ತನ್ನ ಸುತ್ತಮುತ್ತ ತಲೆದೋರಿರುವ ಸಮಸ್ಯೆಗಳಿಗೆ ಪರಿಹಾರ ನೀಡುವುದು, ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವುದು, ಸಾಧ್ಯ
ವಾದಷ್ಟೂ ಪರಿಸರ ಹಾನಿಯಾಗದಂತೆ ಕಾಯುವುದು, ಹೀಗೆ ಬಹಳಷ್ಟು ಕೆಲಸಗಳೆಡೆಗೆ ಸಂಸ್ಥೆ ಮುಖ ಮಾಡಬೇಕು. ಸಂಸ್ಥೆ ಸಮಾಜಮುಖಿ ಕೆಲಸದಲ್ಲಿ
ತೊಡಗಿಸಿಕೊಂಡಷ್ಟೂ ಸಮಾಜದಲ್ಲಿ ವಿಶ್ವಾಸ ಮತ್ತು ನಂಬಿಕೆ ಹೆಚ್ಚಾಗುತ್ತವೆ.

ಮೇಲಿನ ಅಂಶಗಳು ಕೇವಲ ಜಪಾನಿ ಸಂಸ್ಥೆಗಳಿಗೆ ಸೀಮಿತವಲ್ಲ. ದೀರ್ಘಕಾಲದಲ್ಲಿ ಇವೆಲ್ಲವೂ ಹೆಚ್ಚಿನ ಲಾಭವನ್ನೇ ತಂದುಕೊಡುತ್ತವೆ. ಹೀಗಾಗಿ
ಯಾವುದೇ ಸಂಸ್ಥೆ ಯಾವುದೇ ಹಂತದಲ್ಲಿ ಇವುಗಳನ್ನ ಅಳವಡಿಸಿಕೊಳ್ಳಬಹುದು. ಇದರೊಂದಿಗೆ ಅವಶ್ಯಕವಾಗಿ ಪಾಲಿಸಬೇಕಾದ ಹಣಕಾಸು ಸೂತ್ರಗಳು ಬೇರೆಯಿವೆ, ಅವುಗಳನ್ನ ಕೂಡ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಒಟ್ಟಿನಲ್ಲಿ ಸರಳವಾಗಿ ಹೇಳಬೇಕೆಂದರೆ ಕುಟುಂಬದ ನಿಯಂತ್ರಣದಲ್ಲಿರುವ ಸಂಸ್ಥೆ ಗಳು ಜಗತ್ತಿನಾದ್ಯಂತ ಹಬ್ಬಿವೆ, ಅಲ್ಲದೆ ಅವುಗಳ ಕೊಡುಗೆ ಕೂಡ ಹುಬ್ಬೇರಿಸುವಂತಿದೆ. ಸಂಸ್ಥೆ ಯಾರದೇ  ಆಡಳಿತದಲ್ಲಿರಲಿ ಅದು ಸಮಾಜದ ಒಳಿತನ್ನ, ತನ್ನ ನೌಕರರ ಒಳಿತನ್ನ ಮರೆಯಬಾರದು.