Thursday, 12th December 2024

ಆಸ್ಪತ್ರೆಗಳಿಗೆ ಅನುದಾನ ನೀಡಿ, ಚಿಕಿತ್ಸೆಯನ್ನು ಅಗ್ಗ ಮಾಡಿ

ಸ್ವಾಸ್ಥ್ಯ ಸಂಪದ

yoganna55@gmail.com

ಮಾನವ ಸಂತತಿಯನ್ನು ರಕ್ಷಿಸಿ ಪೋಷಿಸುವಲ್ಲಿ ಆರೋಗ್ಯಕ್ಷೇತ್ರದ ಪಾತ್ರ ಅತಿಮುಖ್ಯ. ಮಾನವ ಸಂತತಿಯ ಪ್ರಾರಂಭದಿಂದಲೂ ಅವನ ಆರೋಗ್ಯ ರಕ್ಷಣೆಯ ವಿಧಿ ವಿಧಾನಗಳು ಸಮರ್ಥವಾಗಿ ಕಾರ್ಯನಿರ್ವಹಿಸಿದ ಫಲವಾಗಿಯೇ ಇಂದು ಮನುಷ್ಯ ಅತ್ಯುನ್ನತ ಮಟ್ಟದಲ್ಲಿ ವಿಕಾಸವಾಗಿರುವ ಸೃಷ್ಟಿಯಲ್ಲಿನ ಜೀವಿಯಾಗಿದ್ದಾನೆ.

ಭಾರತದಲ್ಲಿ ಆದಿಕಾಲದಿಂದಲೂ ಪ್ರಚಲಿತವಾಗಿರುವ ಆಯುರ್ವೇದ, ಯೋಗ, ನೈಸರ್ಗಿಕ ಚಿಕಿತ್ಸೆ, ಜಾನಪದ ವೈದ್ಯ ಇತ್ಯಾದಿ ವಿವಿಧ ಪದ್ಧತಿಗಳು, ಇಂದು ವ್ಯಾಪಕವಾಗಿ ಜನಪ್ರಿಯವಾಗಿರುವ ಆಧುನಿಕ ವೈದ್ಯ ಪದ್ಧತಿ ಅಲೋಪತಿ ಕ್ರಿ.ಪೂ.೩-೪ನೇ ಶತಮಾನ ದಲ್ಲಿ ಹಿಪ್ಪೊಕ್ರೆಟಿ ಸ್‌ನಿಂದ ಜನ್ಮತಾಳುವವರೆವಿಗೂ ಬಹಳ ಸಮರ್ಥವಾಗಿಯೇ ಮಾನವ ಸಂತತಿಯನ್ನು ರಕ್ಷಿಸಿ ಕೊಂಡು ಬಂದಿವೆ ಎಂದು ಹೇಳಲೇಬೇಕು.

ಇಲ್ಲದಿದ್ದಲ್ಲಿ ಸುಮಾರು ೨೦ಕೋಟಿ ವಯಸ್ಸಿನ ಮಾನವ ಸಂತತಿ ಅಳಿಯಬೇಕಾಗಿತ್ತು. ಆದರೆ ಹಾಗಾಗಿಲ್ಲ! ಅಭಿವೃದ್ಧಿಯ ಕಡೆಗೇ ಸಾಗುತ್ತಾ ಬಂದಿದೆ. ಭಾರತೀಯ ಪ್ರಾಚೀನ ಆರೋಗ್ಯ ಪದ್ಧತಿಯ ಪಿತಾಮಹರುಗಳಾದ ಚರಕ, ಸುಶೃತ, ಆರ್ಯಭಟ, ಪತಂಜಲಿ ಇವರುಗಳ ಸೇವೆ ಅವಿಸ್ಮರಣೀಯ. ವೈಜ್ಞಾನಿಕ ಸಾಕ್ಷ್ಯಾಧಾರಗಳ ಮೇಲೆ ರೋಗಗಳನ್ನು ದೃಢೀಕರಿಸಿ ಚಿಕಿತ್ಸೆ ನೀಡುವ ಆಧುನಿಕ ವೈದ್ಯ ಪದ್ಧತಿ ಅದರ ಪಿತಾಮಹ ಹಿಪ್ಪೊಕ್ರೆಟಿಸ್‌ ನಿಂದ ಕ್ರಿ.ಪೂ.ದಲ್ಲಿ ಪ್ರಾರಂಭವಾದರೂ ಅದು ಪರಿಪಕ್ವತೆ ಪಡೆದು ವ್ಯಾಪಕವಾಗಿ ಜನಪ್ರಿಯವಾಗಿದ್ದು ಕ್ರಿ.ಶ.೧೮-೨೦ನೇ ಶತಮಾನದಲ್ಲಿ.

ಅಲ್ಲಿಯವರೆಗೆ ಭಾರತೀಯ ಪ್ರಾಚೀನ ವೈದ್ಯ ಪದ್ಧತಿಗಳೇ ಸಮರ್ಥವಾಗಿ ಮಾನವ ಸಂತತಿಯನ್ನು ಯಶಸ್ವಿಯಾಗಿ ರಕ್ಷಿಸಿದ್ದು, ಇಂದೂ ಸಹ ಅವು ಜನಪ್ರಿಯವಾಗಿವೆ. ಕ್ರಿ,ಶ ೧೮ನೇ ಶತಮಾನದಲ್ಲಿ ಬ್ರಿಟೀಷರಿಂದ ಭಾರತದಲ್ಲಿ ಆಧುನಿಕ ವೈದ್ಯ ವಿಜ್ಞಾನದ ಆಸ್ಪತ್ರೆಗಳು ಪ್ರಾರಂಭವಾಗಿ ಇಂದು ಅವು ವ್ಯಾಪಕವಾಗಿ ಸ್ಥಾಪಿತವಾಗಿ ಆರೋಗ್ಯ ರಕ್ಷಣೆಯಲ್ಲಿ ಪ್ರಾಚೀನ ವೈದ್ಯ ಪದ್ಧತಿಗಳಿಗಿಂತ
ಮೇಲುಗೈ ಪಡೆದು ಜನರ ವಿಶ್ವಾಸಾರ್ಹತೆಯನ್ನು ಗಳಿಸುವಲ್ಲಿ ಹೆಚ್ಚು ಯಶಸ್ವಿಯಾಗಿವೆ.

ರಾಷ್ಟ್ರೀಯ ವೈದ್ಯರ ದಿನಾಚರಣೆ

ಆರೋಗ್ಯ ಸೇವೆ ಮನುಷ್ಯನ ಬದುಕಿಗೆ ಬಹಳ ಹತ್ತಿರವಾದ ಸೇವೆ. ಈ ಸೇವೆಯ ರೂವಾರಿಗಳಾದ ವೈದ್ಯರು ಮತ್ತು ಇನ್ನಿತರ ವೈದ್ಯಕೀಯ ಸಿಬ್ಬಂದಿಗಳು ದೇವರಿಗೆ ಸಮಾನವೆಂಬ ಅತ್ಯುನ್ನತ ಗೌರವ ಅವರಿಗಿದೆ. ವೈದ್ಯೋ ನಾರಾಯಣೋ ಹರಿಃ. ವೈದ್ಯರು ಗಳ ಸೇವೆಯನ್ನು ಗುರುತಿಸಿ ಮನ್ನಣೆ ನೀಡುವ ದೃಷ್ಟಿಯಿಂದ ಅಂದಿನ ಪ್ರಧಾನಮಂತ್ರಿ, ಬಹು ಭಾಷಾ ಪಂಡಿತ, ಆಧುನಿಕ ಜಾಗತೀಕರಣದ ಹರಿಕಾರ ದಿವಂಗತ ಪಿ.ವಿ. ನರಸಿಂಹರಾವ್ ಅವರ ನಿರ್ಧಾರದಿಂದಾಗಿ ೧೯೯೧ರಿಂದ ಪ್ರತಿ ವರ್ಷ ಜುಲೈ ೧ರಂದು ದೇಶಾದ್ಯಂತ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಅಂದಿನ ಪ್ರಧಾನಮಂತ್ರಿಯವರ ಸಲಹೆಯ ಮೇರೆಗೆ ರಾಷ್ಟ್ರಮಟ್ಟದ ವೈದ್ಯಕೀಯ ಕ್ಷೇತ್ರದ ದಿಗ್ಗಜರು ರಾಷ್ಟ್ರಾದ್ಯಂತ ಅಭಿಪ್ರಾಯ ಸಂಗ್ರಹಿಸಿ ಡಾ.ಬಿದನ್ ಚಂದ್ ರಾಯ್ ಅವರು ಹುಟ್ಟಿದ ಜುಲೈ ೧ರಂದು ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ನಡೆಸಬೇ ಕೆಂದು ನೀಡಿದ ಒಮ್ಮತದ ಸಲಹೆಯ ಮೇರೆಗೆ ಕೇಂದ್ರ ಸರಕಾರ ಇದಕ್ಕೆ ಒಪ್ಪಿಗೆ ನೀಡಿತು.

ಯಾವುದೇ ದಿನಾಚರಣೆಯ ಹಿಂದಿನ ಉದ್ದೇಶ, ಆಯ್ಕೆ ಮತ್ತು ಸಂದೇಶಗಳನ್ನು ಪರಾಮರ್ಶಿಸುವುದು ಅತ್ಯವಶ್ಯಕ. ವೈದ್ಯಕೀಯ ಕ್ಷೇತ್ರದಲ್ಲಿ ತಾಂತ್ರಿಕವಾಗಿ ಮತ್ತು ಸೇವೆಯಲ್ಲಿ ಡಾ.ಬಿ.ಸಿ.ರಾಯ್ ಅವರಿಗಿಂತಲೂ ಹೆಚ್ಚಿನ ಸೇವೆಮಾಡಿದ ಅಸಂಖ್ಯಾತ ವೈದ್ಯರು ಗಳಿದ್ದರೂ ಅವರಿಗಿದ್ದ ಬಹುಮುಖ ವ್ಯಕ್ತಿತ್ವ, ಮಾನವೀಯ ಅಂತಃಕರಣ, ಅದ್ವಿತೀಯ ದೇಶಪ್ರೇಮ, ತ್ಯಾಗ ಮತ್ತು ಸಮರ್ಪಣಾ ಮನೋಭಾವ, ದಕ್ಷತೆ, ಸರಳತೆ, ದೂರದೃಷ್ಟಿತ್ವ, ವೃತ್ತಿಯ ಕೌಶಲ್ಯತೆ ಮತ್ತು ಬುದ್ಧಿವಂತಿಕೆ, ಸಾಮಾಜಿಕ ಕಳಕಳಿ ಇವೆಲ್ಲವುಗಳ ಸಮಾಗಮದ ವ್ಯಕ್ತಿತ್ವ ಅವರದ್ದಾಗಿದ್ದು, ಯುವ ವೈದ್ಯ ಪೀಳಿಗೆಗೆ ಅವರಿಗಿಂತ ಅನುಕರಣೀಯ ವೈದ್ಯ ಮತ್ತೊಬ್ಬರಿಲ್ಲದ ಕಾರಣ ಅವರು ಹುಟ್ಟಿದ ದಿನವೇ ವೈದ್ಯರ ದಿನಾಚರಣೆ ಆಯ್ಕೆಗೆ ಕಾರಣವಾಯಿತು.

ಡಾ.ಬಿ.ಸಿ.ರಾಯ್ ಅವರು ಜುಲೈ.೧.೧೯೮೨ರಲ್ಲಿ ಪಾಟ್ನಾದ ಬಂಕಿಪುರದಲ್ಲಿ ಹುಟ್ಟಿ ಜುಲೈ ೧, ೧೯೪೨ರಲ್ಲಿ ಕೋಲ್ಕತ್ತಾದಲ್ಲಿ ನಿಧನರಾಗಿ ಹುಟ್ಟಿದ ದಿನಾಂಕದಂದೇ ಸಾವನ್ನಪ್ಪಿದ ಅಪರೂಪದ ವ್ಯಕ್ತಿ ಇವರು. ಕೊಲ್ಕತ್ತಾದಲ್ಲಿ ಎಂ.ಬಿ.ಬಿ.ಎಸ್. ಮುಗಿಸಿ, ಇಂಗ್ಲೆಂಡ್‌ನಲ್ಲಿ ಎಂ.ಆರ್ .ಸಿ.ಪಿ. ಮತ್ತು ಎಫ್.ಆರ್.ಸಿ.ಎಸ್. ಎರಡೂ ಉನ್ನತ ಪದವಿಗಳನ್ನು ಎರಡೇ ವರ್ಷಗಳಲ್ಲಿ ಏಕಕಾಲ ದಲ್ಲಿ ಪಡೆದ ಪ್ರತಿಭಾವಂತ ವೈದ್ಯರಿವರು. ಸಾಮಾನ್ಯವಾಗಿ ವೈದ್ಯಶಾಸ್ತ್ರ ಪರಿಣಿತಿಯ ಎಂ.ಆರ್.ಸಿ.ಪಿ. ಪಡೆದವರು ಶಸ್ತ್ರ ಕ್ರಿಯಾ ಶಾಸ್ತ್ರ ಪರಿಣಿತಿಯ ಎಫ್.ಆರ್.ಸಿ.ಎಸ್.ಅನ್ನು ಓದುವುದಿಲ್ಲ.

ವೈದ್ಯಶಾಸ್ತ್ರ ಮತ್ತು ಶಸ್ತ್ರಕ್ರಿಯಾ ಶಾಸಗಳೆರಡರಲ್ಲೂ ವಿಶೇಷ ತಜ್ಞತೆಯನ್ನು ಪಡೆದ ಅಪರೂಪದ ವಿಶೇಷ ತಜ್ಞವೈದ್ಯರಿವರು. ವಿಶೇಷ ಪದವಿಗಳನ್ನು ಪಡೆದ ನಂತರ ವಿದೇಶದಲ್ಲಿಯೇ ಇರುವಂತೆ ಒತ್ತಾಯವಿದ್ದರೂ ತಾಯ್ನಾಡ ತುಡಿತಕ್ಕೆ ವಾಪಸ್ ಬಂದು ವೈದ್ಯ ಸೇವೆ ಒದಗಿಸಿದ ಅಪ್ರತಿಮ ದೇಶಭಕ್ತರಿವರು. ಸ್ವಾತಂತ್ರ್ಯ ಸಂಗ್ರಾಮದಲ್ಲೂ ಪಾಲ್ಗೊಂಡು ಗಾಂಧೀಜಿಯವರೊಡನೆ ಒಡನಾಟ ಹೊಂದಿದ್ದ ಅವರ ಸಲಹಾ ವೈದ್ಯರಾಗಿದ್ದರು.

ಗಾಂಧೀಜಿಯವರಿಗೆ ಕ್ಷಯ ತಗುಲಿದಾಗ ಅವರು ಪಾಶ್ಚಿಮಾತ್ಯ ಔಷಧಗಳನ್ನು ತೆಗೆದುಕೊಳ್ಳುವುದಿಲ್ಲವೆಂದು ನಿರಾಕರಿಸಿದಾಗ, ಅವರ ಮನವೊಲಿಸಿ ಗಾಂಧೀಜಿಯನ್ನು ಸಾವಿನಿಂದ ಪಾರುಮಾಡಿದ್ದರು. ವೈದ್ಯಕೀಯ ಶಿಕ್ಷಣದ ಬೋಧಕರಾಗಿ, ವಿಶ್ವವಿದ್ಯಾ ನಿಲಯದ ಕುಲಪತಿಗಳಾಗಿ, ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪುಮೂಡಿಸಿದವರು. ವಿಶೇಷ ತಜ್ಞ ವೈದ್ಯರಾಗಿ ಮತ್ತು ಶಿಕ್ಷಣತಜ್ಞರಾಗಿ, ಮಾನವೀಯ ಅಂತಃಕರಣದ ದಕ್ಷ ಸೇವೆಯಿಂದ ಸಮಾಜದ ಮನಗೆದ್ದು, ರಾಜಕೀಯ ಅಧಿಕಾರ ಪಡೆದವರು.

ತಮ್ಮ ವೃತ್ತಿಯ ಸೇವೆಯಿಂದ ಗಳಿಸಿದ ಜನಮನ್ನಣೆಯಿಂದಲೇ ಕೊಲ್ಕತ್ತಾ ನಗರದ ಮಹಾಪೌರರಾಗಿ, ತದನಂತರ ಪಶ್ಚಿಮ ಬಂಗಾಳದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾದ (೧೯೪೮-೬೨) ಅಪ್ರತಿಮ, ಆಕರ್ಷಣೀಯ, ದಾರ್ಶನಿಕ ವೈದ್ಯರಿವರು.
ಮುಖ್ಯಮಂತ್ರಿಯಾಗಿ ಕೊಳಚೆ ಪ್ರದೇಶದ ನಿರ್ಮೂಲನೆ, ಆಸ್ಪತ್ರೆಗಳ ನಿರ್ಮಾಣ, ಪರಿಸರ ಮಾಲಿನ್ಯ ತಡೆಗಟ್ಟುವಿಕೆಗೆ ಮತ್ತು ಆಧುನಿಕ ಪಶ್ಚಿಮ ಬಂಗಾಳದ ನಿರ್ಮಾಣದಲ್ಲಿ ಅವರು ಕೈಗೊಂಡ ಕಾರ್ಯಗಳು ಇಂದಿಗೂ ಅವಿಸ್ಮರಣೀಯ.

ತಮ್ಮ ವೈದ್ಯ ವೃತ್ತಿಯೇತರ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಚಟುವಟಿಕೆಗಳ ನಡುವೆಯೂ ತಮ್ಮ ವೃತ್ತಿಯ ಪಾವಿತ್ರ್ಯತೆ ಯನ್ನು ಎಂದೂ ಮರೆತವರಲ್ಲ. ಮುಖ್ಯಮಂತ್ರಿಯಾಗಿದ್ದಾಗಲೂ ಪ್ರತಿನಿತ್ಯ ಸಂಜೆ ೧ಗಂಟೆಗಳ ಕಾಲ ಕೊಳಚೆ ಪ್ರದೇಶದ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದ ಅವರ ಮನೋವೃತ್ತಿ, ವೃತ್ತಿಯ ಮೇಲೆ ಅವರಿಗಿದ್ದ ಬದ್ಧತೆಗೆ ಸಾಕ್ಷಿ. ತಮ್ಮ ಸೇವೆಯ ನಡುವೆ ವಿವಾಹವನ್ನೇ ಮರೆತು ಬ್ರಹ್ಮಚಾರಿಯಾಗಿ ಉಳಿದು ಸಮಾಜ ಸೇವೆಗಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟ
ತ್ಯಾಗಿ ಇವರು.

ಜೀವಿತದ ಕೊನೆ ದಿನಗಳಲ್ಲಿ ತಾವು ಗಳಿಸಿದ್ದ ಆಸ್ತಿಗಳನ್ನು ತಾಯಿಯ ಹೆಸರಿನಲ್ಲಿ ಸಾರ್ವಜನಿಕ ಟ್ರಸ್ಟ್ ಸ್ಥಾಪಿಸಿ ಅದಕ್ಕೆ ದಾನ ಮಾಡಿದ ಡಾ. ಬಿ.ಸಿ.ರಾಯ್ ಅವರು ಇಂದಿನ ಧನದಾಹಿ ರಾಜಕಾರಣಿಗಳಿಗೆ ಆದರ್ಶನೀಯರು. ಐಎಂಎ, ಐಎಂಸಿ ಸ್ಥಾಪಕರು
ಹರಿದು ಹಂಚಿ ಹೋಗಿದ್ದ ಆಧುನಿಕ ವೈದ್ಯ ಪದ್ಧತಿಯ ವೈದ್ಯರೆಲ್ಲರನ್ನೂ ರಾಷ್ಟ್ರಮಟ್ಟದಲ್ಲಿ ಸಂಘಟಿಸಿ, ‘ಭಾರತೀಯ ವೈದ್ಯ ಕೀಯ ಸಂಘ’ದ(ಐಎಂಎ) ಹುಟ್ಟಿಗೆ (೧೯೨೮) ಕಾರಣರಾದ ಇವರು. ವೈದ್ಯರುಗಳಿಗೆ ಐಎಂಎ ಮುಖಾಂತರ ಸಾಮಾಜಿಕ ಸೇವೆ, ಮುಂದುವರೆದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮಗಳನ್ನು ಏರ್ಪಡಿಸಿ, ವೈದ್ಯಕೀಯ ಕ್ಷೇತ್ರದಲ್ಲಾಗುವ ಆಧುನಿಕ ಬೆಳೆವಣಿಗೆ ಗಳನ್ನು ವೈದ್ಯರಿಗೆ ತಲುಪಿಸುವ ಮಹತ್ಕಾರ್ಯಕ್ಕೆ ಬುನಾದಿ ಹಾಕಿದರು.

ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ನಿಯಂತ್ರಿಸಲು ‘ಭಾರತೀಯ ವೈದ್ಯಕೀಯ ಪರಿಷತ್’(ಐಎಂಸಿ) ಎಂಬ ಸಾಂವಿಧಾನಿಕ ಸಂಸ್ಥೆಯ ಸ್ಥಾಪನೆ(೧೯೩೪)ಗೆ ಕಾರಣಕರ್ತರಾದರು. ಇಂದು ಇದು ‘ನ್ಯಾಷನಲ್ ಮೆಡಿಕಲ್ ಕೌನ್ಸಿಲ್’ ಆಗಿ ಪರಿವರ್ತನೆ
ಯಾಗಿದೆ. ವೈದ್ಯರೊಬ್ಬರಿಗೆ ರಾಜಕೀಯ ಅಧಿಕಾರ ಸಿಕ್ಕಿದರೆ ತನ್ನ ವೃತ್ತಿಯ ಘನತೆ, ಗೌರವ ಮತ್ತು ಬೆಳವಣಿಗೆಗಳನ್ನು ಶ್ರೇಷ್ಠ ಮಟ್ಟಕ್ಕೆ ಹೇಗೆ ಕೊಂಡೊಯ್ಯ ಬಹುದು ಎಂಬುದನ್ನು ಮಾಡಿ ತೋರಿಸಿದ ದಾರ್ಶ ನಿಕರು.

ಡಾ.ಬಿ.ಸಿ.ರಾಯ್‌ರ ಸೇವೆಯನ್ನು ಸ್ಮರಿಸಿದ ಸರಕಾರ ಇವರಿಗೆ ೧೯೬೧ರಲ್ಲಿ ‘ಭಾರತರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ. ಭಾರತದ ಇತಿಹಾಸದಲ್ಲಿ ಭಾರತರತ್ನ ಪಡೆದ ಏಕಮೇವ ವೈದ್ಯ ರಾಜಕಾರಣಿಯೂ ಇವರೇ. ಅಂದಿನ ಭಾರತೀಯ ವೈದ್ಯಕೀಯ ಪರಿಷತ್ (ಐಎಂಸಿ) ೧೯೬೨ರಿಂದ ಇವರ ಹೆಸರಿನಲ್ಲಿ ದೇಶೀಯ ಪ್ರತಿಷ್ಠಿತ ವೈದ್ಯರೊಬ್ಬರಿಗೆ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿವರ್ಷ ಜುಲೈ ೧ರಂದು ‘ಡಾ.ಬಿದನ್ ಚಂದ್ ರಾಯ್’ ಪ್ರಶಸ್ತಿಯನ್ನು ರಾಷ್ಟ್ರಪತಿಯವರಿಂದ ಪ್ರದಾನ ಮಾಡಲಾಗುತ್ತಿದ್ದು, ಪ್ರಶಸ್ತಿಯು
೧ಲಕ್ಷ ರುಪಾಯಿಗಳ ಬಹುಮಾನವನ್ನೊಳಗೊಂಡಿದೆ.

ಕೌಟುಂಬಿಕ ವೈದ್ಯರ ಪಾತ್ರ
ವೈದ್ಯದಿನಾಚರಣೆಯಂದು ಡಾ.ಬಿ.ಸಿ.ರಾಯ್ ಅವರ ವ್ಯಕ್ತಿತ್ವವನ್ನು ರಾಷ್ಟ್ರಾದ್ಯಂತ ಸ್ಮರಿಸಿ ವೈದ್ಯರುಗಳು ಅವರ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಅರಿವು ಮೂಡಿಸುವುದರ ಜತೆಗೆ ಪ್ರತಿ ವರ್ಷ ಈ ದಿನದಂದು ಘೋಷಣಾ ವಾಕ್ಯವೊಂದನ್ನು ಹೊರಡಿಸಿ ಅದರ ಪ್ರಾಮುಖ್ಯತೆಯನ್ನು ಸಮುದಾಯದಲ್ಲಿ ಅರಿವು ಮೂಡಿಸಲಾಗುತ್ತದೆ.

೨೦೨೧ರ ಘೋಷಣಾ ವಾಕ್ಯ- ‘ಬದುಕಿಸುವವರನ್ನು ರಕ್ಷಿಸಿ’ ಎಂಬು ದಾಗಿತ್ತು. ೨೦೨೨ರ ಘೋಷಣಾ ವಾಕ್ಯ- ‘ಕೌಟುಂಬಿಕ
ವೈದ್ಯರುಗಳು ಮುಂದಿನ ಸಾಲಿನಲ್ಲಿರಬೇಕು’ ಎಂಬುದಾಗಿದ್ದು, ಕೌಟುಂಬಿಕ ವೈದ್ಯರುಗಳ ಪ್ರಾಮುಖ್ಯತೆಯನ್ನು ಮನವರಿಕೆ ಮಾಡಿಕೊಡುವ ಉದ್ದೇಶ ಇದರ ಹಿಂದಿದೆ. ವೈದ್ಯಕೀಯ ಕ್ಷೇತ್ರದ ಬೆಳೆವಣಿಗೆಗಳು, ಏಳುಬೀಳುಗಳ ಬಗ್ಗೆ ಪ್ರತಿಯೊಬ್ಬರೂ ಆತ್ಮಾವ ಲೋಕನ ಮಾಡಿಕೊಂಡು, ತಪ್ಪುಗಳನ್ನು ತಿದ್ದಿಕೊಂಡು ಆರೋಗ್ಯ ರಕ್ಷಣೆಗೆ ಮತ್ತಷ್ಟು ಸಜ್ಜಾಗಲು ಸಂಕಲ್ಪ ಮಾಡಬೇಕಾದ ದಿನವಿದು.

ಬದಲಾದ ವೈದ್ಯವೃತ್ತಿ
ಡಾ.ಬಿ.ಸಿ.ರಾಯ್ ಅವರ ಕಾಲದ ವೈದ್ಯಕೀಯ, ರಾಜಕೀಯ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರಗಳ ಸ್ಥಿತಿಗತಿಗಳು ಹಾಗೂ ಈ ಹೊತ್ತಿನ ಸ್ಥಿತಿಗತಿಗಳ ನಡುವೆ ಸಾಕಷ್ಟು ನೀರು ಹರಿದುಹೋಗಿದೆ, ಹರಿಯುತ್ತಲೂ ಇದೆ. ಇವೆಲ್ಲವುಗಳ ಆತ್ಮಾವಲೋಕನ ಅತ್ಯವಶ್ಯಕ. ವೈದ್ಯರುಗಳು ತಮ್ಮ ಅನುಭವದ ಕೌಶಲ್ಯತೆಯ ಹಿನ್ನೆಲೆಯಲ್ಲಿ ರೋಗಿಯ ದೈಹಿಕ ಪರೀಕ್ಷೆಯಿಂದಲೇ ರೋಗಪತ್ತೆ ಮಾಡಿ, ಮಾನವೀಯ ಅಂತಃಕರಣದಿಂದ ವೈದ್ಯ ಮತ್ತು ರೋಗಿಯ ನಡುವಿನ ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡು, ಕಡಿಮೆ
ಖರ್ಚಿನಲ್ಲಿ ಚಿಕಿತ್ಸೆ ನೀಡಿ ಆರೋಗ್ಯ ರಕ್ಷಣೆ ಮಾಡುತ್ತಿದ್ದ ಸೇವೆಯೇ ಪ್ರಧಾನವೆಂದು ಪರಿಗಣಿಸಿದ್ದ ಕಾಲವದು.

ಎಲ್ಲ ಕಾಯಿಲೆಗಳನ್ನು ಒಬ್ಬನೇ ವೈದ್ಯ ನಿರ್ವಹಿಸಿ, ರೋಗಿಯನ್ನು ಸಮಗ್ರ ದೃಷ್ಟಿಕೋನದಿಂದ ಅರ್ಥೈಸಿಕೊಂಡು ಸಮಗ್ರ ಚಿಕಿತ್ಸೆ ನೀಡುತ್ತಿದ್ದ ವೈದ್ಯರುಗಳಿದ್ದ ಕಾಲವದು. ಮಿತಿಯಾದ ಜನ ಸಂಖ್ಯೆಯಿದ್ದು, ಸಾಮಾಜಿಕ ಮೌಲ್ಯಗಳು ವ್ಯಾಪ ಕವಾಗಿದ್ದು, ಸಂತೃಪ್ತಿಯಿಂದ ಮನುಷ್ಯರು ಬದುಕುತ್ತಿದ್ದ ಕಾಲವದು. ಸಾಂಕ್ರಾಮಿಕ ರೋಗಗಳು ಮತ್ತು ಪೌಷ್ಠಿಕಾಂಶಗಳ ಕೊರತೆಗೆ ಸಂಬಂಧಿಸಿದ ಕಾಯಿಲೆಗಳು ಅಂದು ವ್ಯಾಪಕವಾಗಿದ್ದವು.

ಇಂದು ಆಧುನಿಕ ವೈದ್ಯವಿಜ್ಞಾನ ಅಂಗಾಂಗಗಳಾಧಾರಿತ ಹಲವಾರು ಕವಲು ವೈದ್ಯ ವಿಜ್ಞಾನಗಳಾಗಿ ಕವಲೊಡೆದು, ಮನುಷ್ಯನ ಪ್ರತಿ ಅಂಗಾಂಗಕ್ಕೂ ಒಬ್ಬೊಬ್ಬ ವಿಶೇಷ ತಜ್ಞ ವೈದ್ಯರುಗಳಿರುವ ಕಾಲವಿದು. ಒಂದು ಅಂಗಾಂಗದ ತಜ್ಞ ವೈದ್ಯ ಮತ್ತೊಂದು ಅಂಗಾಂಗದ ಬಗ್ಗೆ ಆಸಕ್ತಿ ವಹಿಸದೆ, ಅದಕ್ಕಾಗಿ ಇನ್ನೊಬ್ಬ ತಜ್ಞ ವೈದ್ಯ ನನ್ನು ಅವಲಂಬಿಸುವ ಕಾರಣದಿಂದಾಗಿ ರೋಗಿಯನ್ನು ಸಮಗ್ರ ದೃಷ್ಟಿಕೋನದಲ್ಲಿ ಅರ್ಥೈಸಿ ಚಿಕಿತ್ಸೆ ನೀಡುವಲ್ಲಿ ಹಲವಾರು ಸಮಸ್ಯೆಗಳು ಈ ಬಹು ವಿಶೇಷ ತಜ್ಞಾ ಧಾರಿತ ವೈದ್ಯ ಪದ್ಧತಿಯಿಂದ ಕಾಣಿಸಿಕೊಳ್ಳುತ್ತಿವೆ.

ಮನು ಷ್ಯನ ದೇಹದ ಅಂಗಾಂಗಗಳ ನಡುವೆ ಒಂದಕ್ಕೊಂದು ಕ್ರಿಯಾತ್ಮಕವಾದ ಅವಿನಾಭಾವ ಸಂಬಂಧವಿದ್ದು, ಒಂದು ಅಂಗಾಂಗವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಚಿಕಿತ್ಸೆ ನೀಡುವ ಇಂದಿನ ಮನೋವೃತ್ತಿ ದೇಹದ ಒಟ್ಟಾರೆ ಆರೋಗ್ಯದ ಮೇಲೆ
ಗಂಭೀರ ಪರಿಣಾಮ ಬೀರುತ್ತಿದೆ. ಇಂದು ಒಂದೇ ಮನುಷ್ಯನಲ್ಲಿ ಬಹು ಅಂಗಾಂಗಗಳ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಒಂದೊಂದು ಅಂಗಾಂಗ ತಜ್ಞನು ಇನ್ನೊಂದು ಅಂಗಾಂಗದ ಕಾಯಿಲೆಯ ಬಗ್ಗೆ ಆಲೋಚಿಸದೆ ಚಿಕಿತ್ಸೆ ನೀಡುವುದರಿಂದ ಅನಾಹುತಗಳಾ ಗುತ್ತಿವೆ.

ಹೃದ್ರೋಗಗಳಿಗೆ ನೀಡುವ ಔಷಧಗಳು ಬೇರೆ ಅಂಗಾಂಗಗಳ ರೋಗಗಳಿಗೆ ಮಾರಕವಾಗಬಹುದು. ವೈದ್ಯಕೀಯ ವಿಜ್ಞಾನದ ಜ್ಞಾನ ಅತಿಸೂಕ್ಷ್ಮ ಮತ್ತು ಅತಿ ಆಳವಾಗಿದ್ದು, ಒಬ್ಬನೇ ವೈದ್ಯ ಎಲ್ಲಾ ಅಂಗಾಂಗಗಳ ಬಗ್ಗೆ ಆಳವಾದ ಪರಿಣತಿ ಹೊಂದುವುದು ಕಷ್ಟಕರವಾದರೂ ಸಮಗ್ರ ದೃಷ್ಟಿಕೋನ ಅತ್ಯವಶ್ಯಕ. ಈ ಕಾರಣದಿಂದಲೇ ರೋಗಿಯೊಬ್ಬರ ಬಗೆಗಿನ ಬಹು ವಿಶೇಷ ತಜ್ಞವೈದ್ಯರುಗಳ ಅಭಿಪ್ರಾಯಗಳನ್ನು ಕ್ರೋಢೀಕರಿಸಿ, ಸಮನ್ವಯಗೊಳಿಸಿ, ಸಮಗ್ರ ದೃಷ್ಟಿಕೋನದ ಚಿಕಿತ್ಸೆ ನೀಡುವ ನುರಿತ ಕುಟುಂಬ ವೈದ್ಯರುಗಳ (ಫ್ಯಾಮಿಲಿ ಫಿಜಿಷಿಯನ್ಸ್) ಅವಶ್ಯಕತೆ ಹಿಂದೆಗಿಂತಲೂ ಇಂದು ಹೆಚ್ಚಾಗಿರುವ ಕಾರಣದಿಂದಾಗಿಯೇ ಈ ವರ್ಷದ ಘೋಷಣಾ ವಾಕ್ಯ ‘ಕುಟುಂಬ ವೈದ್ಯರುಗಳು ಮುಂದಿನ ಸಾಲಿಗೆ ಬರಲಿ’ ಎಂಬುದಾಗಿದೆ.

ಇಂದು ಪ್ರತಿಯೊಬ್ಬ ವೈದ್ಯರಲ್ಲೂ ವಿಶೇಷ ಪರಿಣಿತಿ ಹೊಂದುವ ದಾಹದಿಂದಾಗಿ ಕುಟುಂಬ ವೈದ್ಯರ ಕೊರತೆ ಎದ್ದು ಕಾಣುತ್ತಿದೆ. ಎಂಬಿಬಿಎಸ್ ಪದವಿಯನ್ನು ಪಡೆದವರು ಮಾತ್ರ ಇಂದು ಕುಟುಂಬ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕುಟುಂಬ ವೈದ್ಯ ವಿಜ್ಞಾನಕ್ಕಾಗಿಯೇ ವಿಶೇಷ ಸ್ನಾತಕೋತ್ತರ ಪದವಿಯನ್ನು ವಿಶೇಷ ಆಕರ್ಷಣೆಯ ಹಿನ್ನೆಲೆಯಲ್ಲಿ ಪ್ರಾರಂಭ ಮಾಡುವ ಅವಶ್ಯ ಕತೆ ಇದೆ. ಈ ದಿಕ್ಕಿನಲ್ಲಿ ಸರಕಾರ ಜರೂರಾಗಿ ಕಾರ್ಯೋನ್ಮುಖವಾಗಬೇಕಾಗಿದೆ.

ನಮ್ಮ ದೇಶದಲ್ಲಿ ರೋಗಿಯೊಬ್ಬರು ತಮ್ಮ ಆಯ್ಕೆಯ ಕೌಟುಂಬಿಕ ಅಥವಾ ವಿಶೇಷ ತಜ್ಞತೆಯ ವೈದ್ಯರ ಸಲಹೆಯನ್ನು ನೇರವಾಗಿ ಪಡೆಯಬಹುದಾಗಿದೆ. ಆದರೆ ಬಹುಪಾಲು ಬೇರೆ ದೇಶಗಳಲ್ಲಿ ರೋಗಿ ಮೊದಲು ಅವರವರ ಕೌಟುಂಬಿಕ ವೈದ್ಯರನ್ನು ಮೊದಲು ಕಂಡು ನಂತರ ಅವರ ಸಲಹೆ ಮೇರೆಗೆ ವಿಶೇಷ ತಜ್ಞವೈದ್ಯರನ್ನು ಕಾಣಬೇಕೆಂಬ ಪದ್ಧತಿ ಇದೆ. ಈ ಪದ್ಧತಿಯನ್ನು ಹಂತ ಹಂತ ವಾಗಿ ನಮ್ಮ ದೇಶದಲ್ಲೂ ಜಾರಿಗೆ ತರುವ ಅವಶ್ಯಕತೆ ಇದೆ. ಈ ಬಗ್ಗೆ ವ್ಯಾಪಕವಾಗಿ ಚರ್ಚಿಸಿ ಸಮಗ್ರ ನೀತಿಯೊಂದನ್ನು ರೂಪಿಸ ಬೇಕಾಗಿದೆ.

ದುಬಾರಿಯಾದ ವೈದ್ಯಕೀಯ ಸೇವೆ

ರೋಗಪತ್ತೆ ಕ್ಷೇತ್ರದಲ್ಲೂ ಅಂದಿಗೂ ಇಂದಿಗೂ ಹಲವಾರು ಅನ್ವೇಷಣೆಗಳಾಗಿದ್ದು, ರೋಗಗ್ರಸ್ತ ಅಂಗಾಂಗವನ್ನು ಮತ್ತು ರೋಗ ವನ್ನು ನಿಖರವಾಗಿ ಗುರುತಿಸುವ ಅತ್ಯಾಧುನಿಕ ತಂತ್ರಜ್ಞಾನದ, ಪೆಟ್ ಸ್ಕ್ಯಾನ್, ಸಿಟಿ, ಎಂಆರ್‌ಐ, ರಕ್ತನಾಳಗಳ ಚಿತ್ರೀಕರಣ, ವಿವಿಧ ಬಗೆಯ ಅಲ್ಟ್ರಾಸೌಂಡ್ ಇತ್ಯಾದಿ ರೋಗಪತ್ತೆ ಸಲಕರಣೆಗಳು ವೈದ್ಯಕೀಯ ಕ್ಷೇತ್ರಕ್ಕೆ ವರದಾನವಾಗಿದ್ದರೂ ಅವುಗಳ ಬೆಲೆ
ದುಬಾರಿಯಾಗಿರುವುದರಿಂದ ಜನಸಾಮಾನ್ಯರಿಗೆ ಇವುಗಳ ಪ್ರಯೋಜನ ನಿರೀಕ್ಷಿತ ಮಟ್ಟದಲ್ಲಿ ತಲುಪುತ್ತಿಲ್ಲ.

ಕಾನೂನು ತೊಡಕುಗಳಿಂದಾಗಿ ಮತ್ತು ಕಾಯಿಲೆಯನ್ನು ಪ್ರಾರಂಭಿಕ ಹಂತದಲ್ಲಿಯೇ ಕಂಡುಕೊಳ್ಳಲು ಹಾಗೂ ಕಾಯಿಲೆಯನ್ನು ನಿಖರಗೊಳಿಸಿಕೊಳ್ಳದೆ ಚಿಕಿತ್ಸೆ ನೀಡಬಾರದೆಂಬ ಕಾರಣಗಳಿಂದಾಗಿ ಈ ಆಧುನಿಕ ತಂತ್ರಜ್ಞಾನದ ನಿಖರ ರೋಗಪತ್ತೆ ವಿಧಾನ ಗಳಿಗೆ ವೈದ್ಯರುಗಳು ಮೊರೆ ಹೋಗುವುದೂ ಸಹ ಅನಿವಾರ್ಯವಾಗಿ ದುಬಾರಿ ಚಿಕಿತ್ಸೆಗೆ ಕಾರಣವಾಗಿವೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ೧ಸಾವಿರ ಜನಸಂಖ್ಯೆಗೆ ಒಬ್ಬ ವೈದ್ಯನಿರಬೇಕಾಗಿದ್ದು, ಭಾರತದಲ್ಲಿ ಇಂದು ೧೪೦೦ ಜನಕ್ಕೆ ಒಬ್ಬ ವೈದ್ಯನಿದ್ದು, ವೈದ್ಯರ ಕೊರತೆ ಎದ್ದು ಕಾಣುತ್ತಿದೆ. ಗ್ರಾಮೀಣ ಪ್ರದೇಶದಲ್ಲಂತೂ ಆರೋಗ್ಯ ಸೇವೆ ಮತ್ತು ವೈದ್ಯರ ಕೊರತೆ ಮತ್ತಷ್ಟು ಬಿಗಡಾಯಿಸಿದೆ. ದೇಶದಲ್ಲಿ ಸುಮಾರು ೬೦೦ ವೈದ್ಯಕೀಯ ಕಾಲೇಜುಗಳಿದ್ದರೂ ಬಹುಪಾಲು ವೈದ್ಯಕೀಯ ಕಾಲೇಜುಗಳು ಖಾಸಗಿಯವರ ಹಿಡಿತದಲ್ಲಿದ್ದು, ಕ್ಯಾಪಿ ಟೇಷನ್ ಶುಲ್ಕದಿಂದಾಗಿ ವಾಣಿಜ್ಯ ಮನೋವೃತ್ತಿಯ ವೈದ್ಯರುಗಳ
ಉಗಮಕ್ಕೆ ನಾಂದಿಯಾಗುತ್ತಿದೆ.

ಸೇವಾ ಮನೋಭಾವದ ವೈದ್ಯರುಗಳ ಸಂಖ್ಯೆಯೂ ಸಹ ಇದ ರಿಂದ ಕ್ಷೀಣಿಸುತ್ತಿದ್ದು, ಜನಸಾಮಾನ್ಯರಲ್ಲಿ ‘ವೈದ್ಯೋ ನಾರಾ ಯಣೋ ಹರಿಃ’ (ವೈದ್ಯ ದೇವರಿಗೆ ಸಮಾನ) ಎಂಬ ಮನೋವೃತ್ತಿ ‘ವೈದ್ಯ ಹರತಿ ಪ್ರಾಣ ಧನಾನಿಚ’ (ವೈದ್ಯ ಹಣದ ಜತೆಗೆ ಪ್ರಾಣವನ್ನೂ ಕಸಿಯುತ್ತಾನೆ) ಎಂದು ಬದಲಾಗಿ, ವೈದ್ಯ ವೃತ್ತಿಯ ಪಾವಿತ್ರ್ಯತೆಯೂ ಕೂಡ ಮರೆಯಾಗುತ್ತಿದೆ.

ಕಳಚುತ್ತಿರುವ ವೈದ್ಯ-ರೋಗಿಯ ಆತ್ಮವಿಶ್ವಾಸ ವಾಣಿಜ್ಯಮಯ ವೈದ್ಯ ವೃತ್ತಿ ಮತ್ತು ಅದಕ್ಷ ವೈದ್ಯರುಗಳಿಂದಾಗಿ ವೈದ್ಯಕೀಯ ಸೇವೆಯ ಉದಾಸೀನತೆ ಯನ್ನು ಕಾನೂನಿನಡಿಯಲ್ಲಿ ಪರಾಮರ್ಶಿಸಿ ವೈದ್ಯರುಗಳನ್ನು ಶಿಕ್ಷೆಗೆ ಗುರಿಪಡಿಸುವ ಗ್ರಾಹಕರ ಸಂರಕ್ಷಣಾ ಕಾಯ್ದೆ ಮತ್ತು ವೈದ್ಯಕೀಯ ಉದಾಸೀನತೆಗಾಗಿ ಐಪಿಸಿ ಕಾನೂನುಗಳು ಜಾರಿಯಲ್ಲಿರುವ ಪರಿಣಾಮದಿಂದಾಗಿ ವೈದ್ಯ ಮತ್ತು ರೋಗಿಯ ನಡುವಿನ ಆತ್ಮವಿಶ್ವಾಸದ ಕೊಂಡಿ ಸಡಿಲಗೊಳ್ಳುತ್ತಿದೆ. ವೈದ್ಯರು ನನ್ನನ್ನು ಅನಾವಶ್ಯಕವಾಗಿ ಯಾವ ದುಬಾರಿ ಪರೀಕ್ಷೆಗೆ ಒಳಪಡಿಸುತ್ತಾರೋ ಎಂಬ ರೋಗಿಯ ಆತಂಕ, ರೋಗಿ ನನ್ನನ್ನು ಯಾವ ನ್ಯಾಯಾಂಗದ ಕಟಕಟೆಗೆ ನಿಲ್ಲಿಸುತ್ತಾನೋ ಎಂಬ ವೈದ್ಯನ ಆತಂಕ ಇಬ್ಬರಲ್ಲೂ ಮನೆಮಾಡಿ ಉಭ ಯತ್ರಯರಲ್ಲೂ ಆತ್ಮವಿಶ್ವಾಸ ಇಲ್ಲದಂತಾಗಿದೆ.

ವೈದ್ಯರುಗಳೂ ಸಹ ರೋಗಿಯನ್ನು ಮಾನವೀಯ ಅಂತಃಕರಣದಿಂದ ಮೈ ಮನ ಮುಟ್ಟಿ ರೋಗದ ಬಗ್ಗೆ ವಿಚಾರಿಸದೆ ದಿಢೀರನೆ
ರೋಗಪತ್ತೆ ಪರೀಕ್ಷೆಗಳಿಗೆ ಸಲಹೆ ಮಾಡುವುದೂ ಸಹ ಅವರಿಬ್ಬರ ನಡುವಿನ ಆತ್ಮವಿಶ್ವಾಸದ ಕೊಂಡಿ ಸಡಿಲವಾಗಲು ಕಾರಣ ವಾಗಿದೆ. ವೈದ್ಯರುಗಳು ನೀಡುವ ಔಷಧಗಳ ಚಿಕಿತ್ಸೆಗಳು ಕಾಯಿಲೆಯನ್ನು ಗುಣಪಡಿಸಿದರೂ, ರೋಗಿಯ ಆತ್ಮವಿಶ್ವಾಸವನ್ನು ಹೆಚ್ಚಿಸುವ ವೈದ್ಯರುಗಳ ಮಾನವೀಯ ಅಂತಃಕರಣದ ನಡವಳಿಕೆಗಳು ರೋಗಿಯನ್ನು ಗುಣಪಡಿಸುವಲ್ಲಿ ಹೆಚ್ಚು ಪರಿಣಾಮ ಕಾರಿ ಎಂಬುದನ್ನು ಆಧುನಿಕ ವೈದ್ಯರುಗಳು ಮನಗಾಣ ಬೇಕಾಗಿದೆ.

ಭಾರತದಲ್ಲಿ ಶೇ೮೫ ರಷ್ಟು ವೈದ್ಯಕೀಯ ಸೇವೆ ಖಾಸಗಿಯವರ ಹಿಡಿತದಲ್ಲಿದ್ದು, ಶೇ ೧೫ರಷ್ಟು ಮಾತ್ರ ಸರಕಾರದ ಹಿಡಿತ ದಲ್ಲಿರುವುದು ಇದುವರೆಗೆ ನಮ್ಮನ್ನಾಳಿದ ಸರಕಾರಗಳು ಆರೋಗ್ಯಕ್ಷೇತ್ರವನ್ನು ಎಷ್ಟರಮಟ್ಟಿಗೆ ನಿರ್ಲಕ್ಷಿಸಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಆಧುನಿಕ ವೈದ್ಯಕೀಯ ಸೌಲಭ್ಯದ ಮೂಲಭೂತ ಸೌಕರ್ಯಗಳು ಮತ್ತು ಅತ್ಯಾಧುನಿಕ ಉಪಕರಣಗಳು ಅತ್ಯಂತ ದುಬಾರಿಯಾಗಿದ್ದು, ವಾಣಿಜ್ಯಮಯ ಖಾಸಗಿ ವೈದ್ಯಕೀಯ ಸೇವೆಯಿಂದಾಗಿ ಅತ್ಯಾಧುನಿಕ ವೈದ್ಯಕೀಯ ಸೇವೆ ಸಾಮಾನ್ಯರಿಗೆ ಸುಲಭವಾಗಿ ಎಟುಕದಂತಾಗಿದೆ.

ಇನ್ನಿತರ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದ ವೈದ್ಯಕೀಯ ಸೇವಾ ವೆಚ್ಚ ಅತಿ ಕಡಿಮೆಯಾದರೂ, ಭರಿಸಲಾಗದ
ಸಾಮರ್ಥ್ಯವಿರದ ಕಾರಣ ಅದೂ ಕೂಡ ಜನಸಾಮಾನ್ಯರಿಗೆ ಹೊರೆಯಾಗಿ ಕಾಣುತ್ತಿದೆ. ಆದರೂ ಖಾಸಗಿ ವೈದ್ಯಕೀಯ ಸೇವೆ ಸರಕಾರಿ ವೈದ್ಯಕೀಯ ಸೇವೆಗಿಂತಲೂ ಜನರ ವಿಶ್ವಾಸಾರ್ಹತೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿರುವುದನ್ನು ತಳ್ಳಿಹಾಕು
ವಂತಿಲ್ಲ. ಸರಕಾರಗಳು ಖಾಸಗಿ ಶಿಕ್ಷಣ ಕ್ಷೇತ್ರಕ್ಕೆ ಅನುದಾನ ನೀಡುವಂತೆಯೇ ಖಾಸಗಿ ವೈದ್ಯಕೀಯ ಕ್ಷೇತ್ರದ ಆಸ್ಪತ್ರೆಗಳಿಗೂ ಅನುದಾನ ನೀಡಿ ಖಾಸಗಿ ವೈದ್ಯಕೀಯ ಸೇವಾ ವೆಚ್ಚವನ್ನು ತಗ್ಗಿಸಿ ಜನಸಾಮಾನ್ಯರಿಗೂ ಉತ್ಕೃಷ್ಟ ಆರೋಗ್ಯ ಸೇವೆ ಸುಲಭವಾಗಿ ಲಭಿಸುವಂತಾಗಿಸಲಿ ಎಂದು ಆಶಿಸೋಣ.