Thursday, 12th December 2024

ನಾವು ಬೇರೆಯವರ ನೆನಪಿನಲ್ಲಿ ಉಳಿಯುವುದು ಹೇಗೆ ?

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

vbhat@me.com

ಆ ಹೊಟೇಲಿನಲ್ಲಿರುವ ಐಸ್ ಕ್ಯಾಂಡಿ ಹಾಟ್ ಲೈನ್ ಅರ್ಥಾತ್ ಪಾಪ್ಸಿಕಲ್ (Popsicle) ಹಾಟ್ ಲೈನ್. ಹೊಟೇಲಿನ ಈಜುಗೊಳದ ಸನಿಹದ ಒಂದು ಗೋಡೆಗೆ ಕೆಂಪುಬಣ್ಣದ ಒಂದು ಫೋನನ್ನು ಇಟ್ಟಿದ್ದಾರೆ. ಆ ಫೊನನ್ನು ಎತ್ತಿಕೊಂಡರೆ ಸಾಕು, ನಮಗೆ ಇಷ್ಟವಾದ ಸ್ವಾದದ, ಬಣ್ಣದ ಐಸ್ ಕ್ಯಾಂಡಿ ಕ್ಷಣಾರ್ಧದಲ್ಲಿ ಬರುತ್ತದೆ.

ನಾನು ಮುನ್ನೂರೈವತ್ತಕ್ಕೂ ಅಧಿಕ ಸಲ ವಿದೇಶ ಪ್ರವಾಸ ಮಾಡಿದ್ದೇನೆ. ಆ ಸಂದರ್ಭ ಗಳಲ್ಲಿ ಪ್ರತಿಷ್ಠಿತ ಹೊಟೇಲುಗಳಲ್ಲಿ ಉಳಿದು ಕೊಂಡಿದ್ದೇನೆ. ಆದರೆ ಒಂದೆರಡು ಹೊಟೇಲು ಗಳನ್ನು ಮಾತ್ರ ಎಂದೂ ಮರೆಯುವುದಿಲ್ಲ. ನಾನು ಫಿನ್‌ಲ್ಯಾಂಡಿನ ರಾಜಧಾನಿ ಹೆಲ್ಸಿಂಕಿ ಯಲ್ಲಿ ‘ಹಿಲ್ಟನ್ ಹೆಲ್ಸಿಂಕಿ ಸ್ಟ್ರಾಂಡ್’ ಹೊಟೇಲ್‌ನಲ್ಲಿ ಉಳಿದುಕೊಂಡಿದ್ದೆ. ಅಲ್ಲಿನ ಪ್ರಸಿದ್ಧ ಸರೋವರವೊಂದರ ದಡದ ಮೇಲಿರುವ ಅತ್ಯಂತ ಸುಂದರವಾದ ಹೊಟೇಲ್ ಅದು. ಅಲ್ಲಿ ಉಳಿದುಕೊಂಡ ಒಂದು ರಾತ್ರಿ, ಎರಡು ಗಂಟೆ ಹೊತ್ತಿಗೆ ಇದ್ದಕ್ಕಿದ್ದಂತೆ ಟಿವಿಯಿಂದ ಎಚ್ಚರಿಕೆಯ ಗಂಟೆ ಮತ್ತು ಸಂದೇಶ ಮೊಳಗಲಾರಂಭಿಸಿತು.

ಯಾವ ಸ್ಥಿತಿಯಲ್ಲಿದ್ದೀರೋ ಹಾಗೆ, ತುರ್ತಾಗಿ ರೂಮಿನಿಂದ ಹೊರಗೆ ಬಂದು, ಲಿಫ್ಟ್ ಬಳಸದೇ, ಕೆಳಗೆ ಓಡಿ ಬಂದು, ಹೊಟೇಲಿನ ಹೊರಗಿನ ಮುಂಭಾಗದಲ್ಲಿ ಸೇರಬೇಕು ಎಂಬ ಸಂದೇಶ ಟಿವಿ ಪರದೆ ಮೇಲೆ ಮೂಡಿ ಬಂದಿತು. ಆ ರಾತ್ರಿ ಹೊಟೇಲಿನಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಹೊಟೇಲಿನ ಒಂದು ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಹೊಗೆ ಆವರಿಸಿಕೊಂಡಿತ್ತು. ಇಡೀ ಹೊಟೇಲಿನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಹೆಂಗಸರು, ಮಕ್ಕಳು, ವಯಸ್ಸಾದವರು ಮಲಗಿದ ದಿರಿಸಿನಲ್ಲಿಯೇ ಮೆಟ್ಟಿಲಿಳಿದು ಓಡೋಡಿ ಬರುತ್ತಿದ್ದರು. ನಾನು ಆ ಆತಂಕಮಯ ಸ್ಥಿತಿಯಲ್ಲಿ ಜೀವ ಉಳಿಸಿಕೊಂಡರೆ ಸಾಕೆಂದು, ನಿದ್ದೆಗಣ್ಣಿನಲ್ಲಿ ಕೆಳಗೆ ಓಡಿ ಬಂದಿದ್ದೆ.

ನಾನು ಓಡೋಡಿ ಕೆಳಗೆ ಬರುವ ಹೊತ್ತಿಗೆ ಅಗ್ನಿಶಾಮಕ ದಳದ ಐದಾರು ವಾಹನಗಳು ಹೊಟೇಲ್ ಮುಂದೆ ಬಂದು ಕಾರ್ಯಪ್ರವೃತ್ತ ವಾಗಿದ್ದವು. ಕ್ಷಣಾರ್ಧದಲ್ಲಿ ಅವು ಬೆಂಕಿಯನ್ನು ನಂದಿಸಿದವು. ಮುಂದಿನ ಒಂದು ಗಂಟೆ ಕಾಲ ಎಲ್ಲರಲ್ಲೂ ಉದ್ವೇಗ, ಅನಿಶ್ಚಯತೆ ಮನೆ ಮಾಡಿತ್ತು. ಅದೃಷ್ಟವಶಾತ್, ಹೆಚ್ಚಿನ ದುರಂತವೇನೂ ಸಂಭವಿಸಿರಲಿಲ್ಲ. ಹೊಟೇಲ್ ರೂಮು ಒಂದರ ಕಾರ್ಪೆಟ್‌ಗೆ ಬೆಂಕಿ ತಗುಲಿ, ಅದು ಭಾಗಶಃ ಸುಟ್ಟಿತ್ತು. ಅಷ್ಟರೊಳಗೆ ಸ್ಮೋಕ್ ಡಿಟೆಕ್ಟರುಗಳು ಕಿರುಚಿಕೊಂಡಿದ್ದರಿಂದ ಆಗಬಹುದಾದ ದೊಡ್ಡ ಬೆಂಕಿ ದುರಂತ ತಪ್ಪಿದಂತಾ ಗಿತ್ತು.

ಇದು ಘಟನೆಯ ಒಂದು ಭಾಗ. ನನಗೆ ಮುಖ್ಯವಾಗಿ ಕಂಡಿದ್ದು ಇದಲ್ಲ, ಇದರ ನಂತರದ ಘಟನಾವಳಿ. ಅದಾದ ಬಳಿಕ ಹೊಟೇಲಿನಲ್ಲಿ ಉಳಿದುಕೊಂಡಿದ್ದ ಅತಿಥಿಗಳನ್ನು ಉದ್ದೇಶಿಸಿ, ಜನರಲ್ ಮ್ಯಾನೇಜರ್ ಮಾತಾಡಿದ. ನಿಜಕ್ಕೂ ಆತನ ಮಾತು ಎಲ್ಲರ ಮನಕಲಕಿತು. ಇಂಥ ತುರ್ತು ಸಂದರ್ಭದಲ್ಲಿಯೂ ಪಾಸ್ ಪೋರ್ಟ್ ಮತ್ತು ಪರ್ಸ್ ಎತ್ತಿಕೊಂಡು ರೂಮಿನಿಂದ ಓಡಿ ಬಂದವರೆಷ್ಟು ಎಂದು ಆತ ಕೇಳಿದ. ಬಹುತೇಕ ಎಲ್ಲರೂ ಪಾಸ್ ಪೋರ್ಟ್ ಮತ್ತು ಪರ್ಸ್ ಎತ್ತಿಕೊಂಡು ಬಂದಿದ್ದರು, ಸುಮಾರು ಇಪ್ಪತ್ತು ಜನರ ಹೊರತಾಗಿ. ನೋಡಿ, ಇವರಿಗೆ ಜೀವಕ್ಕಿಂತ ಪಾಸ್ ಪೋರ್ಟ್ ಮತ್ತು ಪರ್ಸ್ ಮುಖ್ಯವಾ ಎಂದು ಆತ ತಮಾಷೆ ಮಾಡಿದ.

ಆದರೆ ಒಬ್ಬ ಮಧ್ಯವಯಸ್ಕ ಆ ಆತಂಕದ ಸಂದರ್ಭದಲ್ಲಿ ತನ್ನ ಎರಡು ಸೂಟ್ ಕೇಸುಗಳ ಜತೆ ಕೆಳಗಿಳಿದು ಬಂದಿದ್ದ. ಮಹಿಳೆಯೊಬ್ಬಳು ತನ್ನ ಹ್ಯಾಂಡ್ ಬ್ಯಾಗ್ ಜತೆ ಬಂದಿದ್ದಳು. ಅದರಲ್ಲಿ ಪಾಸ್ ಪೋರ್ಟ್, ಪರ್ಸ್ ಎಲ್ಲವೂ ಇದ್ದವು. ಆದರೆ ಮತ್ತೊಬ್ಬ ಮಹಿಳೆಯೊಬ್ಬಳು, ಎಲ್ಲವನ್ನೂ ಬಿಟ್ಟು, ತಾನು, ಗಂಡ, ಇಬ್ಬರು ಮುದ್ದಾದ ಮಕ್ಕಳ ಫೋಟೋ ಫ್ರೇಮ್ ಅನ್ನು ಮಾತ್ರ ಎತ್ತಿ ತಂದಿದ್ದಳು. ಅವಳು ಎಲ್ಲಿಗೆ
ಹೋದರೂ ಅದನ್ನು ತೆಗೆದುಕೊಂಡು ಹೋಗುತ್ತಾಳಂತೆ.

ಅವಳ ಗಂಡ ಮತ್ತು ಮಕ್ಕಳು ಸತ್ತು ಬಹಳ ವರ್ಷಗಳಾಗಿವೆ, ಅವರ ನೆನಪಿನ ಕುರುಹಾಗಿ ಆಕೆ ಹೋದೆಡೆಯ ಆ ಫ್ರೇಮನ್ನು ತೆಗೆದು ಕೊಂಡು ಹೋಗುತ್ತಾಳೆ. ಆಕೆ ಪಾಲಿಗೆ ಅದು ಅತ್ಯಂತ ಅಮೂಲ್ಯ. ಹೀಗಾಗಿ ಆಕೆ ತನ್ನ ಪಾಸ್ ಪೋರ್ಟ್, ಪರ್ಸ್ ಮತ್ತು ಬೆಲೆಬಾಳುವ ಸಾಮಾನುಗಳನ್ನೆ ರೂಮಿನ ಬಿಟ್ಟು, ಅದೊಂದನ್ನೇ ಎದೆಗವುಚಿಕೊಂಡು ಓಡೋಡಿ ಬಂದಿದ್ದಳು. ಹೊಟೇಲ್ ಜನರಲ್ ಮ್ಯಾನೇಜರ್ ಆ ಹೊತ್ತಿನಲ್ಲಿ ಹೇಳಿದ ಮಾತುಗಳು ನನ್ನ ಮನಸ್ಸಿನಲ್ಲಿ ಇಂದಿಗೂ ಕುಳಿತು ಬಿಟ್ಟಿವೆ. ಆ ಹೊತ್ತಿನಲ್ಲಿ ನಿಮ್ಮಲ್ಲಿ ಅನೇಕರು ಪಾಸ್ ಪೋರ್ಟ್
ಮತ್ತು ಪರ್ಸ್ ಹಿಡಿದುಕೊಂಡು ಓಡಿ ಬಂದಿದ್ದೀರಿ. ನನಗೆ ನಿಮ್ಮ ಬಗ್ಗೆ ಮೆಚ್ಚುಗೆ ಇದೆ ಎಂದು ಭಾವಿಸಬೇಡಿ. ಜೀವಕ್ಕಿಂತ ಮುಖ್ಯವಾದುದು ಯಾವುದೂ ಇಲ್ಲ.

ಹೊಟೇಲಿನಲ್ಲಿ ಅಗ್ನಿಅಪಘಾತಗಳು ಸಂಭವಿಸಿದಾಗ, ಬಚಾವಾಗಲು ಹೆಚ್ಚಿ ಸಮಯವಿರುವುದಿಲ್ಲ. ಪಾಸ್‌ಪೋರ್ಟ್ ರಕ್ಷಿಸಿಕೊಳ್ಳುವುದು
ನಮ್ಮ ಆದ್ಯತೆ ಆಗಬಾರದು. ಕ್ಷಣಾರ್ಧದಲ್ಲಿ ಏನು ಬೇಕಾದರೂ ಆಗಬಹುದು. ಹೀಗಾಗಿ ನಮಗೆ ಪಾಸ್ ಪೋರ್ಟ್, ಪರ್ಸ್ ಹುಡುಕುತ್ತಾ ಇರಬಾರದು. ನೋಡಿ, ಅಲ್ಲೊಬ್ಬರು ಬನಿಯನ್ ಧರಿಸಿ, ಟಾವೆಲ್ ಸುತ್ತಿಕೊಂಡು ಬಂದಿದ್ದಾರಲ್ಲ, ನಾನು ಅವರ ಧಾವಂತವನ್ನು ಮೆಚ್ಚು ತ್ತೇನೆ. ಅವರಿಗೆ ಜೀವವೇ ಮುಖ್ಯ ಎಂಬುದು ವೇದ್ಯವಾಗುತ್ತದೆ.

ಪಾಸ್‌ಪೋರ್ಟ್ ಸುಟ್ಟುಹೋದರೆ ಮಾಡಿಸಬಹುದು. ಇಂಥ ಸಂದರ್ಭಗಳಲ್ಲಿ ರಾಯಭಾರ ಕಚೇರಿಗಳು ಸಹಾಯ ಮಾಡುತ್ತವೆ. ನಿಮ್ಮ
ಪರ್ಸ್ ಸುಟ್ಟುಹೋದರೆ ವಿಮಾ ಕಂಪನಿಗಳು ನೆರವಿಗೆ ಧಾವಿಸುತ್ತವೆ. ನೀವು ಕಳೆದುಕೊಂಡ ಹಣಕ್ಕಿಂತ ಹೆಚ್ಚಿನ ಮೊತ್ತವನ್ನು ಪರಿಹಾರ ವಾಗಿ ನೀಡುತ್ತವೆ. ಆದರೆ ಜೀವ ಹೋದರೆ?’ ಎಂದು ಜನರಲ್ ಮ್ಯಾನೇಜರ್ ಮಾತು ನಿಲ್ಲಿಸಿದ. ಎಲ್ಲರಿಗೂ ತಾವು ಅದೆಂಥ ಘೋರ ತಪ್ಪು ಮಾಡಿದ್ದೇವೆ ಎನಿಸಿತು. ಆ ಪಾಸ್ ಪೋರ್ಟ್ ಮತ್ತು ಪರ್ಸಿನಲ್ಲಿದ್ದ ಹಣ ಕೇವಲ ಕಾಗದದ ತುಣುಕು ಎಂದು ಅನಿಸಿಬಿಟ್ಟಿತು.
ಯಾವುದೇ ಬೆಂಕಿ ಅಪಘಾತ ಘಟನೆಯನ್ನು ನೋಡಿ ಬಚಾವಾದವರು ಕೂದಲೆಳೆ ಅಂತರದಿಂದ ಬದುಕಿದ್ದಾರೆ ಮತ್ತು ಸತ್ತವರು ಕೂಡ ಕೂದಲೆಳೆ ಅಂತರದಲ್ಲಿ ಸತ್ತಿದ್ದಾರೆ.

ಒಂದು ನಿಮಿಷ ಸಿಕ್ಕಿದ್ದರೆ ಬಚಾವ್ ಆಗುವುದು ಮತ್ತು ಒಂದು ನಿಮಿಷ ಸಿಗದಿದ್ದರಿಂದ ಸಾಯುವುದು ಸಹಜ. ಇಂಥ ಸ್ಥಿತಿಯಲ್ಲಿ ನಮಗೆ ಜೀವ ಉಳಿಸಿ ಕೊಳ್ಳುವುದೊಂದೇ ಗುರಿಯಾಗಬೇಕು. ಮಿಕ್ಕಿzಲ್ಲ ನಗಣ್ಯ. ಇನ್ನು ಮುಂದೆ ಇಂಥ ತಪ್ಪುಗಳನ್ನು ಮಾಡಬೇಡಿ’ ಎಂದು ತುಸು ಗಂಭೀರವಾಗಿ ಹೇಳಿದ. ಯಾರೂ ಮಾತಾಡಲಿಲ್ಲ. ಪ್ರತಿಯೊಬ್ಬರಿಗೂ ತಾವು ಅದೆಂಥ ತಪ್ಪು ಮಾಡಿದ್ದೇವೆ ಎಂಬುದು ಮನವರಿಕೆ ಯಾಯಿತು.

ಅದಾದ ಬಳಿಕ, ಹೊಟೇಲಿನ ಸಿಬ್ಬಂದಿ ಒಬ್ಬಬ್ಬ ಅತಿಥಿಯನ್ನು ಕರೆದು ಅವರವರ ಅನುಭವವನ್ನು ಕೇಳಿ, ಯಾವ ಸಹಾಯ ಬೇಕು ಎಂದು ಕೇಳಿದರು. ಆಘಾತಕಾರಿ ಸನ್ನಿವೇಶ ಎದುರಿಸಿದಾಗ ಸಾಂತ್ವನ ನೀಡುವ ಕೌನ್ಸಿಲರುಗಳನ್ನು ಕರೆಯಿಸಿದರು. ವೈದ್ಯರು, ಮನಶಾಸಜ್ಞರು ಆಗಮಿಸಿದರು. ಪ್ರಥಮ ಚಿಕಿತ್ಸೆ ಘಟಕದ ಮುಖ್ಯಸ್ಥರು ಬಂದರು. ಯಾರಿಗೆ ಏನೇ ವೈದ್ಯಕೀಯ ನೆರವು ಬೇಕಾದರೂ, ತಕ್ಷಣ ಇಲ್ಲಿಯೇ
ಪಡೆಯಬಹುದು ಎಂದು ತಿಳಿಸಿದರು. ಯಾರಲ್ಲೂ ವ್ಯವಸ್ಥೆಯ ಬಗ್ಗೆ ಆಕ್ರೋಶಗಳಿರಲಿಲ್ಲ. ಎಲ್ಲರ ಮನಸ್ಸಿನಲ್ಲಿ ಹೊಟೇಲ್ ಸಿಬ್ಬಂದಿ ನೆರವಿಗೆ ಧಾವಿಸಿದ ಬಗ್ಗೆಯೇ ಸಮಾಧಾನ, ಅಭಿಮಾನ ಇದ್ದಂತಿತ್ತು. ಎಲ್ಲರ ಕಣ್ಣುಗಳಿಂದ ನಿದ್ದೆ ಹಾರಿ ಹೋಗಿತ್ತು.

ನಾವೇ ಹೋಟೇಲಿನ ಪೋರ್ಟಿಕೋದಲ್ಲಿ ಕುಳಿತಿದ್ದಾಗ, ಸಿಬ್ಬಂದಿ ಬಂದು ಎಲ್ಲರಿಗೂ ಕಾಫಿ ನೀಡಿದರು. ಆಗ ಹೊಟೇಲ್ ಜನರಲ್ ಮ್ಯಾನೇಜರ್ ಬಂದು, ಇಂದು ನಿಮಗಾದ ಅನಾನುಕೂಲಕ್ಕಾಗಿ ಒಂದು ದಿನದ ಹಣವನ್ನು ತೆಗೆದುಕೊಳ್ಳುವುದಿಲ್ಲ’ ಎಂದು ತಿಳಿಸಿದರು.
ಅದಾದ ನಂತರ, ಮ್ಯಾನೇಜರ್ ಇನ್ನೊಂದು ಮಹತ್ವದ ಸಂಗತಿ ತಿಳಿಸಿದರು – ನಿಮ್ಮಲ್ಲಿ ಯಾರಾದರೂ ರೂಮಿನಲ್ಲಿ ಒಬ್ಬಂಟಿಯಿದ್ದರೆ, ಭಯಾತಂಕದ ಕಾರಣದಿಂದ ನಿದ್ದೆ ಬರದಿದ್ದರೆ, ನಿಮಗೆ ಸಹಾಯಕರ ಅವಶ್ಯಕತೆ ಇದ್ದರೆ ತಿಳಿಸಿ, ಅಂಥವರ ರೂಮಿಗೆ ಸಹಾಯಕರನ್ನು ಕಳಿಸುತ್ತೇವೆ. ಅವರು ನಿಮ್ಮ ಜತೆ ರೂಮಿನಲ್ಲಿ ಮಲಗುತ್ತಾರೆ.

ನೀವು ಒಬ್ಬಂಟಿ ಎಂಬ ಭಾವ ಬಾರದಿರಲಿ ಎಂದು ಅವರ ಸಹಾಯ ಪಡೆಯಬಹುದು. ವಯಸ್ಸಾದವರಿಗೂ ಈ ಸೇವೆ ನೀಡುತ್ತೇವೆ.
ಅಗತ್ಯವಿದ್ದವರು ಇದರ ಪ್ರಯೋಜನ ಪಡೆಯಬಹುದು.’ ನನಗೆ ಆ ಹೊಟೇಲ್ ಜನರಲ್ ಮ್ಯಾನೇಜರ್ ಮತ್ತು ಸಿಬ್ಬಂದಿ ಆ ಸರಹೊತ್ತಿನಲ್ಲಿ ನಮ್ಮೆಲ್ಲರ ಜತೆ ವರ್ತಿಸಿದ ರೀತಿ ಮಾನವೀಯ ಸಂಬಂಧಕ್ಕೆ ಹೊಸ ಭಾಷ್ಯ ಬರೆದಂತಿತ್ತು. ಅವರು ತಮ್ಮ ಮಾತು ಮತ್ತು ವರ್ತನೆ ಗಳಿಂದ ಪ್ರತಿಯೊಬ್ಬರ ಅಂತಃಕರಣವನ್ನು ಸ್ಪರ್ಶಿಸಿ, ಮೀಟಿದ್ದರು. ತುರ್ತುಸ್ಥಿತಿಯಲ್ಲಿ ಮನುಷ್ಯ ಸಂವೇದನೆಗಳ ಭಾವ ಕೋಶಗಳು ವರ್ತಿಸಬೇಕಾದ ರೀತಿಯನ್ನು ಎಲ್ಲರ ಮುಂದೆ ತೆರೆದಿಟ್ಟಿದ್ದರು.

ಅದಾದ ಬಳಿಕ ನಾನು ನೂರಾರು ಹೊಟೇಲುಗಳಲ್ಲಿ ಉಳಿದುಕೊಂಡಿದ್ದೇನೆ. ಆದರೆ ಪ್ರತಿ ಸಲ ಬೇರೆ ಹೊಟೇಲಿಗೆ ಹೋದಾಗ ನನ್ನ ಕಣ್ಮುಂದೆ ‘ಹಿಲ್ಟನ್ ಹೆಲ್ಸಿಂಕಿ ಸ್ಟ್ರಾಂಡ್’ ಅಯಾಚಿತವಾಗಿ ಹಾದು ಹೋಗುತ್ತದೆ. ನಾನು ನೂರಾರು ವೇದಿಕೆಗಳಲ್ಲಿ, ಸ್ನೇಹಿತರ ಹರಟೆಗಳಲ್ಲಿ ಈ ಪ್ರಸಂಗವನ್ನು ಹೇಳಿದ್ದೇನೆ. ನನ್ನ ಮುಂದೆ ಆ ಬೆಂಕಿ ಆಕಸ್ಮಿಕ ಘಟನೆಗಿಂತ, ಅದಾದ ನಂತರ ಹೊಟೇಲ್ ಸಿಬ್ಬಂದಿ ವರ್ತಿಸಿದ ರೀತಿ ಯೇ ಸ್ಥಾಯಿಯಾಗಿ ನಿಂತು ಬಿಟ್ಟಿದೆ. ಯಾರಾದರೂ, ಯಾವುದಾದರೂ ಹೋಟೆಲ್ ಶ್ರೇಷ್ಠತೆಯ ಬಗ್ಗೆ ಪ್ರಸ್ತಾಪಿಸಿದರೆ, ನಾನು ‘ಹಿಲ್ಟನ್ ಹೆಲ್ಸಿಂಕಿ ಸ್ಟ್ರಾಂಡ್’ ಬಗ್ಗೆ ಹೇಳುತ್ತೇನೆ. ಅದಾದ ಬಳಿಕ ಅದಕ್ಕಿಂತಲೂ ದುಬಾರಿ, ಐಷಾರಾಮಿ ಹೊಟೇಲುಗಳಲ್ಲಿ ಉಳಿದರೂ, ನನಗೆ ‘ಹಿಲ್ಟನ್ ಹೆಲ್ಸಿಂಕಿ ಸ್ಟ್ರಾಂಡ್’ಗಿಂತ ದೊಡ್ಡದಾಗಿ ಕಂಡಿಲ್ಲ.

ಕೆಲವು ವರ್ಷಗಳ ಹಿಂದೆ, ನಾನು ಹಾಲಿವುಡ್‌ನಲ್ಲಿ ಮ್ಯಾಜಿಕ್ ಕ್ಯಾಸೆಲ್ ಹೊಟೇಲಿನಲ್ಲಿ ಉಳಿದಿದ್ದೆ. ಹಾಗಂತ ಇದು ‘ಹಿಲ್ಟನ್ ಹೆಲ್ಸಿಂಕಿ ಸ್ಟ್ರಾಂಡ್’ ಹೊಟೇಲಿನಷ್ಟು ಬೃಹತ್ ಹೋಟೆಲ್ ಅಲ್ಲ. ಫೈವ್ ಸ್ಟಾರ್ ವರ್ಗಕ್ಕೆ ಸೇರಿದ್ದೂ ಅಲ್ಲ. ಆದರೂ ಹಾಲಿವುಡ್‌ನ ವಿಶಿಷ್ಟ ಹೊಟೇಲು ಗಳಲ್ಲಿ ಇದೂ ಒಂದು. ಅನೇಕ ಟ್ರಾವೆಲ್ ಏಜೆಂಟರು ಈ ಹೊಟೇಲನ್ನು ಶಿ-ರಸು ಮಾಡುತ್ತಾರೆ. ಈ ಹೋಟೆಲಿನಲ್ಲಿ ಉಳಿದವರು
ಯಾವತ್ತೂ ಒಂದು ಸಂಗತಿಯನ್ನು ಮರೆಯುವುದಿಲ್ಲ ಮತ್ತು ಅದರ ಬಗ್ಗೆ ತಪ್ಪದೇ ಪ್ರಸ್ತಾಪಿಸುತ್ತಾರೆ. ನಾನು ಇತ್ತೀಚೆಗೆ ನನಗೆ ಆಪ್ತರಾದ ಪ್ರಕಾಶ ಅಯ್ಯರ್ ಅವರು ಬರೆದ How come no one told me that? ಪುಸ್ತಕವನ್ನು ಓದುತ್ತಿದ್ದೆ.

ಅವರೂ ಸಹ ಒಂದು ಅಧ್ಯಾಯದಲ್ಲಿ ಮ್ಯಾಜಿಕ್ ಕ್ಯಾಸೆಲ್ ಹೊಟೇಲ’ ಬಗ್ಗೆ ಬರೆದಿದ್ದು ನೋಡಿ ಆಶ್ಚರ್ಯವಾಯಿತು. ನನ್ನ ಹಾಗೆ ಅಯ್ಯರ್ ಅವರಿಗೂ ಆ ಹೊಟೇಲ ಆಪ್ತವಾಗಿ ನೆಲೆ ನಿಂತಿದೆಯಲ್ಲ ಎನಿಸಿತು. ಆ ಹೊಟೇಲಿನಲ್ಲಿ ಉಳಿದವರೆಲ್ಲ ಆ ಒಂದು ವಿಷಯವನ್ನು ಪ್ರಸ್ತಾಪಿಸು ತ್ತಾರೆ. ಅದೇನೆಂದರೆ, ಆ ಹೊಟೇಲಿನಲ್ಲಿರುವ ಐಸ್ ಕೇಂಡಿ ಹಾಟ್ ಲೈನ್ ಅರ್ಥಾತ್ ಪಾಪ್ಸಿಕಲ್ (Popsicle) ಹಾಟ್ ಲೈನ್. ಹೊಟೇಲಿನ ಈಜುಗೊಳದ ಸನಿಹದ ಒಂದು ಗೋಡೆಗೆ ಕೆಂಪುಬಣ್ಣದ ಒಂದು ಫೋನನ್ನು ಇಟ್ಟಿದ್ದಾರೆ. ಆ ಫೋನನ್ನು ಎತ್ತಿಕೊಂಡರೆ ಸಾಕು, ನಮಗೆ ಇಷ್ಟವಾದ ಸ್ವಾದದ, ಬಣ್ಣದ ಐಸ್ ಕೇಂಡಿ ಕ್ಷಣಾರ್ಧದಲ್ಲಿ ಬರುತ್ತದೆ. ಅದಕ್ಕಾಗಿ ಅತಿಥಿಗಳು ಹಣ ನೀಡಬೇಕಿಲ್ಲ.

ಮಕ್ಕಳು, ದೊಡ್ಡವರೆಲ್ಲ ಆ ಪಾಪ್ಸಿಕಲ್ ಸೇವಿಸಲು ಇಷ್ಟಪಡುತ್ತಾರೆ ಮತ್ತು ಅದರ ಬಗ್ಗೆ ಚರ್ಚಿಸುತ್ತಾರೆ. ಆ ಹೊಟೇಲ್ ಆತಿಥ್ಯಕ್ಕೆ, ಸ್ವಚ್ಛತೆಗೆ ಹೆಸರಾಗಿದೆ. ಆ ಹೊಟೇಲಿನ ರೂಮಿನ ಬಗ್ಗೆ, ಇನ್ನಿತರ ಸೇವೆ ಬಗ್ಗೆ, ಈಜುಗೊಳದ ಬಗ್ಗೆ ಯಾರೂ ಹೆಚ್ಚುಮಾತಾಡುವುದಿಲ್ಲ. ಆದರೆ ಜನರ ಮನಸ್ಸಿನಲ್ಲಿ ಕುಳಿತಿರುವುದು ಪಾಪ್ಸಿಕಲ್ ಮಾತ್ರ. ಮ್ಯಾಜಿಕ್ ಕ್ಯಾಸೆಲ್ ಹೋಟೆಲಿನ ಮಾಲೀಕರು ಆ ಹೊಟೇಲಿನ ನವೀಕರಣಕ್ಕೆ,
ಆಧುನೀಕರಣಕ್ಕೆ ಸಾಕಷ್ಟು ಹಣವನ್ನು ವ್ಯಯಿಸಿರಬಹುದು.

ಆದರೆ ಅವ್ಯಾವವೂ ಆ ಹೊಟೇಲಿನ ಮಹತ್ವ ಹೆಚ್ಚಿಸಲು ಸಹಕಾರಿಯಾಗಿಲ್ಲ. ಆದರೆ ಹಾಟ್‌ಲೈನ್‌ನಲ್ಲಿ ಹತ್ತಾರು ಬಣ್ಣ, ಸ್ವಾದಗಳ ಪಾಪ್ಸಿಕಲ್‌ನ್ನು ಉಚಿತವಾಗಿ ಸೇವಿಸಿದ ‘ಮ್ಯಾಜಿಕ್ ಮೊಮೆಂಟ್’ ನ್ನು ಯಾವಜ್ಜೀವ ನೆನಪಿಸಿಕೊಳ್ಳುತ್ತಾರೆ. ಆ ಹೊಟೇಲಿನ ಹೆಸರು ಹೇಳುತ್ತಿದ್ದಂತೆ, ಒಹೋ ಅದಾ?! ಪಾಪ್ಸಿಕಲ್ ಹಾಟ್‌ಲೈನ್ ಇರುವ ಹೊಟೇಲ್ ತಾನೇ?’ ಎಂದು ಕೇಳುತ್ತಾರೆ. ನಮ್ಮೆಲ್ಲರ ಜೀವನದಲ್ಲಿ ಅಸಂಖ್ಯ ಘಟನೆಗಳು, ಪ್ರಸಂಗಗಳು ಜರುಗಿರುತ್ತವೆ. ಆದರೆ ಕೆಲವು ಮ್ಯಾಜಿಕ್ ಮೊಮೆಂಟ್ ಗಳು ಮೊಡವೆಗಳ ಕಲೆಗಳಂತೆ ಶಾಶ್ವತ ವಾಗಿ ನೆಲೆಸಿರುತ್ತವೆ.

ಪ್ರಕಾಶ ಅಯ್ಯರ್ ಹೇಳಿದ ತಮ್ಮ ಜೀವನದಲ್ಲಿ ನಡೆದ ಒಂದು ಘಟನೆಯನ್ನು ನಿಮಗೆ ಹೇಳಬೇಕು. ಒಂದು ದಿನ ಅವರ ಬಾಸ್, ನಾನು ನನ್ನ ಸ್ನೇಹಿತನ ಹೆಂಡತಿಗೆ ಒಂದು ಸೀರೆ ಗಿಫ್ಟ್ ಕೊಡಬೇಕಿದೆ. ನೀನು ಅದನ್ನು ತಂದುಕೊಡುತ್ತೀಯಾ?’ ಎಂದು ಕೇಳಿದರಂತೆ. ಅದಕ್ಕೆ ಅಯ್ಯರ್, ಸಾರ್, ನನಗೆ ಸೀರೆ ಆಯ್ಕೆ ಮಾಡಿ ಗೊತ್ತಿಲ್ಲ. ನಾನು ನನ್ನ ಪತ್ನಿ ಸಹಾಯ ಪಡೆಯಲೇ?’ ಎಂದು ಕೇಳಿದರಂತೆ. ಇಲ್ಲ, ನನಗೆ
ಇನ್ನು ಅರ್ಧ ಗಂಟೆಯಲ್ಲಿ ಬೇಕು’ ಎಂದರಂತೆ ಬಾಸ್.

ಸೀರೆಯ ಬೆಲೆ ಹದಿನೈದು ಸಾವಿರದಿಂದ ಇಪ್ಪತ್ತು ಸಾವಿರ ರುಪಾಯಿಯೊಳಗಿರಲಿ ಎಂದು ತಿಳಿಸಿದರಂತೆ. ಬೇರೆ ದಾರಿಯಿಲ್ಲದೇ ಅಯ್ಯರ್, ಅಂಗಡಿಗೆ ಹೋಗಿ ಒಂದು ಸೀರೆಯನ್ನು ಖರೀದಿಸಿ ಬಾಸ್ ಮುಂದೆ ಇಟ್ಟರಂತೆ. ಆಗ ಬಾಸ್, ಮಿಸ್ಟರ್ ಅಯ್ಯರ್, ಈ ಸೀರೆ ಯನ್ನು ನಿಮ್ಮ ಹೆಂಡತಿಗೆ ಕೊಡಿ ಮತ್ತು ಅವಳಿಗೆ ಹೇಳಿ ನಿನ್ನ ಗಂಡನಿಗೆ ಪ್ರೊಮೋಷನ್ ಸಿಕ್ಕಿದೆ ಅಂತ.’

ನನಗೆ ಇಂಥ ‘ಮ್ಯಾಜಿಕ್ ಮೊಮೆಂಟ’ನ್ನು ಯಾರೂ ನೀಡಿರಲಿಲ್ಲ. ಆ ಪ್ರಸಂಗವನ್ನು ಎಂದೂ ಮರೆಯಲಾರೆ’ ಎಂದು ಅಯ್ಯರ್ ಹೇಳುತ್ತಾರೆ. ನಾವು ನಮ್ಮ ಜೀವನದಲ್ಲಿ ಇಂಥ ಕ್ಷಣಗಳನ್ನು ನಮಗೆ ಮತ್ತು ಬೇರೆಯವರಿಗೆ ಸೃಷ್ಟಿಸಬೇಕು. ಬೇರೆಯವರು ನಮ್ಮ ಬಗ್ಗೆ ಉತ್ತಮ ಚಿತ್ರಣ, ನೆನಪುಗಳನ್ನು ಕಟ್ಟಿಕೊಳ್ಳುವಂಥ ಅನುಭವವನ್ನು ನೀಡಬೇಕು. ಯಾವುದೋ ಹಿತಾನುಭವ ಆದಾಗ ಅವರ ಕಣ್ಣ ಮುಂದೆ ನಮ್ಮ ವ್ಯಕ್ತಿತ್ವದ ಮೆರವಣಿಗೆ ಸಾಗಬೇಕು. ಅಂಥ ಬದುಕು ನಮ್ಮದಾಗಿದ್ದರೆ ಅದೆಷ್ಟು ಚೆಂದ ಅಲ್ಲವೇ? ಪ್ರಯತ್ನಿಸೋಣ.