ನೂರೆಂಟು ವಿಶ್ವ
ವಿಶ್ವೇಶ್ವರ ಭಟ್
vbhat@me.com
ನಾವೆಲ್ಲಾ ಈಕೆಯನ್ನು ನೋಡಿದ್ದೇವೆ. ಇವಳನ್ನು ನೋಡಿದರೆ ಥೇಟ್ ನಮ್ಮ ಬೀದಿಯ ಹುಡುಗಿ ಎಂದೇ ಅನಿಸುತ್ತದೆ. ಅಷ್ಟು ಪರಿಚಿತ, ಅಷ್ಟು ಆಪ್ತ. ಈಕೆಯ ಫೋಟೋವನ್ನು ಪತ್ರಿಕೆಗಳಲ್ಲಿ, ಮ್ಯಾಗಜಿನ್ ಗಳಲ್ಲಿ, ಜಾಹೀರಾತು ಫಲಕಗಳಲ್ಲಿ (hoarding) ನೋಡಿ ಖುಷಿಪಟ್ಟಿದ್ದೇವೆ. ಆ ತಿಳಿನಗುವಿನಲ್ಲಿ ಏನೋ ಒಂದು ಮಧುರಭಾವ. ಬಹುತೇಕ ಪ್ರಮುಖ ಜಾಹೀರಾತು ಕ್ಯಾಂಪೇನ್‌ಗಳಿಗೆ ಈಕೆಯೇ ರೂಪದರ್ಶಿ. ನಮಗೊಂದೇ ಅಲ್ಲ, ನೂರಾರು ದೇಶಗಳಲ್ಲಿ ಜಾಹೀರಾತು ಪ್ರಚಾರಕ್ಕೆ ರೂಪದರ್ಶಿಯಾಗಿ ಇವಳೇ ಬೇಕು.
ತಮಾಷೆ ಅಂದ್ರೆ ಈಕೆ ನೋಡಲು ನಮ್ಮ ಕನ್ನಡಿಗಳಂತೆ, ಮಲಯಾಳಿಯಂತೆ, ಕಾಶ್ಮೀರಿಯಂತೆ, ಬಿಹಾರಿ ಯಂತೆ, ಪಂಜಾಬಿಯಂತೆ, ದಕ್ಷಿಣ ಆಫ್ರಿಕಾದವಳಂತೆ, ಅಮೆರಿಕದವಳಂತೆ, ಮುಸ್ಲಿಂ ಯುವತಿಯಂತೆ, ಮಲಯಾ ಕುವರಿಯಂತೆ, ವಿಯೆಟ್ನಾಮ್ ತರುಣಿಯಂತೆ… ಹೀಗೆ ಅವರವರಿಗೆ, ಆಯಾ ಪ್ರದೇಶದವಳಂತೆ, ಕಾಣುತ್ತಾಳೆ. ಹೀಗಾಗಿ ಅವಳು ರೂಪದರ್ಶಿಯಾಗಿ ಎಲ್ಲರಿಗೂ ಬೇಕು. ಹಲ್ಲುಪುಡಿ, ಖಾಸಗಿ ಟ್ಯೂಷನ್, ಮುಖಕ್ಕೆ ಹಚ್ಚುವ ಕಾಂತಿವರ್ಧಕ ಕ್ರೀಮ್, ಸ್ಕೂಲ್ ಯೂನಿ ಫಾರ್ಮ್, ಅಡುಗೆ ಮನೆ ಸಾಮಾನು, ರಿಯಲ್ ಎಸ್ಟೇಟ್ ಏಜೆನ್ಸಿ, ಡೇಟಿಂಗ್ ವೆಬ್ ಸೈಟ್… ಹೀಗೆ ಎಲ್ಲಾ ಕಂಪನಿಗಳ ಉತ್ಪನ್ನಗಳ ಮಾರಾಟಕ್ಕೆ ಈಕೆಯೇ ಮೊದಲ ಆಯ್ಕೆಯ ರೂಪದರ್ಶಿ.
ಜಗತ್ತಿನಾದ್ಯಂತ ಈಕೆ ನೂರಕ್ಕೂ ಹೆಚ್ಚು ಜಾಹೀರಾತುಗಳಲ್ಲಿ, ರೂಪದರ್ಶಿಯಾಗಿ ಕಂಗೊಳಿಸಿದ್ದಾಳೆ. ಹಾಗಾ ದರೆ ಅದರಿಂದ ಇವಳು ಕೋಟ್ಯಂತರ ರುಪಾಯಿ ಸಂಪಾದಿಸಿರಬಹುದು ಎಂದು ಭಾವಿಸಿದ್ದರೆ, ನಿಮ್ಮ ಊಹೆ ತಪ್ಪು. ಇಷ್ಟೆಲ್ಲಾ ಜಾಹೀರಾತು ಕ್ಯಾಂಪೇನುಗಳಲ್ಲಿ ಪ್ರಧಾನ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದರೂ, ಅವಳಿಗೆ ಒಂದು ಬಿಲ್ ಕೂಡ ಸಿಕ್ಕಿಲ್ಲ.
ಎಲ್ಲವೂ ಉಚಿತವಾಗಿ! ಅಂದ ಹಾಗೆ, ಅವಳ ಹೆಸರು ಶುಬ್ನಮ್ ಖಾನ್! ನೂರಾರು ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದರೂ, ಉಚಿತವಾಗಿ ಆ ಕೆಲಸವನ್ನು ಮಾಡುವುದು ಹೇಗೆ ಸಾಧ್ಯ ಎಂದು ನಿಮಗೆ ಅನಿಸಬಹುದು. ಅಷ್ಟಕ್ಕೂ ಒಬ್ಬಳು ನೂರಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾಳೆ ಅಂದ್ರೆ ರೂಪವತಿಯೋ, ಮಹಾನ್ ವ್ಯಕ್ತಿಯೋ ಆಗಿರಬೇಕು ಎಂದು ಯೋಚಿಸುವುದು ಸಹಜವೇ. ಕಾರಣ ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಸಿನಿಮಾ ತಾರೆಯರು, ಕ್ರೀಡಾಮಣಿಗಳು ಕಾಣಿಸಿಕೊಳ್ಳುತ್ತಾರೆ. ಹಾಗೆ ಕಾಣಿಸಿಕೊಂಡರೆ ಕೋಟ್ಯಂತರ ರುಪಾಯಿ ಸಂಭಾವನೆ ತೆಗೆದುಕೊಳ್ಳುತ್ತಾರೆ. ಅದರಲ್ಲೂ ಅಮಿತಾಬ್ ಬಚ್ಚನ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ದೀಪಿಕಾ ಪಡುಕೋಣೆಯಂಥವರು ಇಪ್ಪತ್ತೈದು ಕೋಟಿಗಿಂತ ಹೆಚ್ಚು ಹಣ ಪೀಕುತ್ತಾರೆ.
ಆದರೆ ಶುಬ್ನಮ್ ಖಾನ್ ಅಂಥ ಯಾವ ‘ಮಹಾನ್’ ಎಂಬ ಸಂಗತಿಗಳನ್ನು ಹೊಂದಿರುವ ವ್ಯಕ್ತಿಯೇನಲ್ಲ. ಇವಳು ಮೂಲತಃ ದಕ್ಷಿಣ ಆಫ್ರಿಕಾದ ಲೇಖಕಿ ಮತ್ತು ಕಲಾವಿದೆ. ಅವಳ ಚೊಚ್ಚಲ ಕಾದಂಬರಿ Onion Tears, ಆಫ್ರಿಕಾ ಬರವಣಿಗೆ ವಿಭಾಗದಲ್ಲಿ ಪೆಂಗ್ವಿನ್ ಬಹುಮಾನಕ್ಕೆ ಆಯ್ಕೆಯಾಗಿತ್ತು. ಆಕೆ ಇಂಗ್ಲಿಷ್ ವಿಷಯ ದಲ್ಲಿ ಸ್ನಾತಕೋತ್ತರ ಪದವಿ ಪಡೆದವಳು. ಸಾಹಿತ್ಯಕ್ಕೆ ಸಂಬಂಧಿಸಿದ ಹಲವು ಫೆಲೋಶಿಪ್‌ಗಳನ್ನೂ ಸಹ ಪಡೆದಿರುವ ಶುಬ್ನಮ್ ಖಾನ್, ಪ್ರವಾಸದಲ್ಲಿ ಇರದಿದ್ದರೆ, ಒಂದೋ ಓದುತ್ತಾಳೆ, ಇಲ್ಲವೇ ಬರೆಯುತ್ತಾಳೆ. ಗಳಿಕೆಗಾಗಿ ಪೇಂಟಿಂಗ್ ಬಿಡಿಸುತ್ತಾಳೆ.
ಓದುವುದು, ಬರೆಯುವುದು, ಚಿತ್ರಬಿಡಿಸುವುದು, ತಿರುಗಾಡುವುದರಲ್ಲಿ ಖುಷಿ ಕಾಣುವ ಶುಬ್ನಮ್, ಒಂಥರಾ ತನ್ನ ಪಾಡಿಗೆ ತಾನಿರುವ ಮತ್ತು ಹಾಗಿರುವುದನ್ನು
ಇಷ್ಟಪಡುವ ವಿಲಕ್ಷಣ ವ್ಯಕ್ತಿ. ಹಾಗಾದರೆ ನೂರಕ್ಕೂ ಹೆಚ್ಚು ಜಾಹೀರಾತು ಕ್ಯಾಂಪೇನುಗಳಲ್ಲಿ ಉಚಿತವಾಗಿ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದು ಹೇಗೆ? ಇದೇ ಈ ಕಥನದ ಕುತೂಹಲ. ದಕ್ಷಿಣ ಆಫ್ರಿಕಾದ ಕ್ವಾಜುಲು-ನಟಾಲ್ ವಿಶ್ವವಿದ್ಯಾಲಯದಲ್ಲಿ ಮೀಡಿಯಾ ಸ್ಟಡಿಸ್ ನಲ್ಲಿ ಕಲಿಸುವಾಗ, ಒಂದು ದಿನ ಆಫೀಸಿನಲ್ಲಿ ಕುಳಿತಿ ದ್ದಾಗ, ಫೇಸ್ ಬುಕ್ ವಾಲ್ ನ್ನು ನೋಡುವಂತೆ ಯಾರೋ ಶುಬ್ನಮ್‌ಗೆ ಫೋನ್ ಮಾಡಿ ಹೇಳಿದರು.
ಅವಳ ಸ್ನೇಹಿತೆಯಾದ ಸಾನಾ, ಕೆನಡಾದ ಪ್ರಮುಖ ದೈನಿಕವಾದ ‘ಗ್ಲೋಬ್ ಅಂಡ್ ಮೇಲ್’ ನಲ್ಲಿ ಪ್ರಕಟವಾದ ಒಂದು ಜಾಹೀರಾತನ್ನು ಪೋಸ್ಟ್ ಮಾಡಿದ್ದಕ್ಕೆ
ಫೇಸ್ ಬುಕ್ ನಲ್ಲಿ ಒಂದು ಚರ್ಚೆ ಆರಂಭವಾಗಿತ್ತು. ಆ ಜಾಹೀರಾತಿನಲ್ಲಿ ಪ್ರಕಟವಾದ ರೂಪದರ್ಶಿಯನ್ನು ನೋಡಿ ಅಚ್ಚರಿಗೊಂಡ ಸಾನಾ, ಇದು ತೀರಾ ಪರಿಚಿತ ಮುಖ, ಶುಬ್ನಮ್ ಥರಾ ಕಾಣುತ್ತಾಳಲ್ಲಾ, ಯಾವುದಕ್ಕೂ ಅವಳಿಗೇ ಕಳಿಸಿ ಖಚಿತಪಡಿಸಿಕೊಳ್ಳೋಣ ಎಂದು ಶುಬ್ನಮ್‌ಗೆ ಕಳಿಸಿದ್ದಳು. ‘ಇದು ನೀನೇನಾ?’ ಎಂದು ಕೇಳಿದ್ದಳು. ಕೆನಡಾಕ್ಕೆ ವಿದೇಶಿಯಾರನ್ನು ಆಹ್ವಾನಿಸುವ ಆ ಜಾಹೀರಾತಿನಲ್ಲಿ ಶುಬ್ನಮ್ ಫೋಟೋವನ್ನು ರೂಪದರ್ಶಿಯಾಗಿ ಬಳಸಿಕೊಳ್ಳಲಾಗಿತ್ತು.
ಆ ಚಿತ್ರವನ್ನು ನೋಡಿದ ಶುಬ್ನಮ್ ಗೆ ಆಶ್ಚರ್ಯ! ‘ಹೌದು, ಇದು ನನ್ನದೇ ಫೋಟೋ!’ ಎಂದು ಉದ್ಗಾರ ತೆಗೆದಳು. ತಾನಿರುವುದು ದಕ್ಷಿಣ ಆಫ್ರಿಕಾದಲ್ಲಿ, ಆದರೆ ತನ್ನ ಫೋಟೋ ಕೆನಡಾದ ಪತ್ರಿಕೆಯಲ್ಲಿ ಜಾಹೀರಾತೊಂದರಲ್ಲಿ ರೂಪದರ್ಶಿಯಾಗಿ ಬರಲು ಹೇಗೆ ಸಾಧ್ಯ? ಜಗತ್ತಿನಲ್ಲಿ ಒಂದೇ ರೀತಿ ಇರುವವರು ಏಳು ಮಂದಿ ಇರುತ್ತಾರಂತೆ.. ತನ್ನ ಹಾಗೆ ಇನ್ನೂ ಆರು ಮಂದಿ ಇದ್ದಿರಬಹುದು… ಆದರೆ ಆ ಫೋಟೋ ಕ್ಕೂ, ಶುಬ್ನಮ್‌ಗೂ ಸ್ವಲ್ಪವೂ ವ್ಯತ್ಯಾವಿರಲಿಲ್ಲ. ಥೇಟ್ ನೂರಕ್ಕೆ ನೂರು ಶುಬ್ನಮ್. ಧರಿಸಿದ ಡ್ರೆಸ್ ಕೂಡ ಒಂದೇ ಆಗಿತ್ತು. ತನ್ನ ಸ್ನೇಹಿತೆಯರಿಗೆಲ್ಲಾ ತೋರಿಸಿದಳು.
ಅವರಿಗೂ ಆಶ್ಚರ್ಯ. ಕೆನಡಾದಲ್ಲಿರುವ ಸಾನಾಳನ್ನು ಸಂಪರ್ಕಿಸಿ, ಪತ್ರಿಕಾ ಕಚೇರಿಯನ್ನು ಸಂಪರ್ಕಿಸಿದಳು. ಅವರು ಇದು ತಮಗೆ ಗೊತ್ತಿಲ್ಲ, ಜಾಹೀರಾತು ಸಂಸ್ಥೆಯನ್ನು ಸಂಪರ್ಕಿಸಿ ಎಂದರು. ಜಾಹೀರಾತು ಏಜೆನ್ಸಿಯವರು ಫೋನ್ ಸ್ವೀಕರಿಸಲಿಲ್ಲ. ಮುಂದೇನು ಮಾಡುವುದು ಎಂಬ ಯೋಚನೆಯಲ್ಲಿದ್ದಾಗ, ಅವಳ ಸ್ನೇಹಿತೆಯೊಬ್ಬಳು, ‘ಓಹೋ ಈ ಫೋಟೋವಾ? ಎರಡು ವರ್ಷಗಳ ಹಿಂದೆ, ಡರ್ಬನ್ ನಲ್ಲಿ ನಡೆದ ಫೋಟೋಶೂಟ್ ನಲ್ಲಿ ತೆಗೆದ ಫೋಟೋ ಇದು’ ಎಂದು ನೆನಪಿಸಿದಳು.
ಆಗ ಶುಬ್ನಮ್‌ಗೆ ಏನೋ ನೆನಪಾದಂತಾಯಿತು. ಎರಡು ವರ್ಷಗಳ ಹಿಂದೆ, ಕೇಪ್ ಟೌನಿನ ಫೋಟೋಗ್ರಾಫರನೊಬ್ಬ ’100 Real Faces Project’ ಕಾರ್ಯಕ್ರಮದಡಿ ವಿಶ್ವವಿದ್ಯಾಲಯದ ಹುಡುಗಿಯರ ಫೋಟೋಶೂಟ್ ಏರ್ಪಡಿಸಿದ್ದ. ಆತ ಒಂದು ಫೋಟೋ ಪ್ರಾಜೆಕ್ಟ್ ಮೇಲೆ ಕೆಲಸ ಮಾಡುತ್ತಿದ್ದ. ಈ ಪ್ರಾಜೆಕ್ಟ್‌ನ್ನು ಫೇಸ್ ಬುಕ್ ನಲ್ಲಿ ಪ್ರೊಮೋಟ್ ಮಾಡಲಾಗಿತ್ತು. ಅದರನ್ವಯ ಭಿನ್ನ, ವಿಶಿಷ್ಟ ಹಿನ್ನೆಲೆಯುಳ್ಳ ಯಾರು ಬೇಕಾದರೂ ಬಂದು ತಮ್ಮ ಭಾವ-ಭಂಗಿಯ ಪೋಸ್ ಕೊಡಬಹುದು ಎಂದು ಪ್ರಚಾರ ಮಾಡಲಾಗಿತ್ತು. ಅದರಲ್ಲಿ ಭಾಗವಹಿಸಲು ವಿಶ್ವವಿದ್ಯಾಲಯದ ಅನೇಕ ಯುವತಿಯರು ಅವನ ಪ್ರಾಜೆಕ್ಟ್ ನಲ್ಲಿ ಭಾಗ ವಹಿಸಲು ಸಹಿ ಹಾಕಿದ್ದರು. ಸಾವಿರಾರು ಯುವತಿಯರು ಅವನ ಕೆಮರಾ ಮುಂದೆ ನಿಂತು ಪೋಸು ಕೊಡಲು ಸರತಿ ಸಾಲಿನಲ್ಲಿ ದಿನವಿಡೀ ನಿಂತಿದ್ದರು. ಅದರಲ್ಲಿ ಪಾಲ್ಗೊಂಡವರೆಲ್ಲ ಒಂದು ಅನುಮತಿ ಪತ್ರಕ್ಕೆ ಸಹಿ ಹಾಕಬೇಕಿತ್ತು.
ಅಸಲಿಗೆ ಅದು, ಅವರ ಫೋಟೋಗಳನ್ನು ಬಳಸಿಕೊಳ್ಳಲು ಒಪ್ಪಿಗೆ ಸೂಚಿಸುವ ಅನುಮತಿ ಪತ್ರವಾಗಿತ್ತು. ಎಲ್ಲರೂ ಆ ಫೋಟೋಗ್ರಾಫರ್ ಎದುರು ತರೇಹವಾರಿ
ಭಂಗಿಗಳಲ್ಲಿ ಫೋಟೋ ತೆಗೆಸಿಕೊಂಡು, ಅನುಮತಿ ಪತ್ರಕ್ಕೆ ಸಹಿ ಹಾಕಿದರು. ಒಂದು ವಾರದ ನಂತರ, ಅವನಿಂದ ’Thank you’ ಪತ್ರ ಬಂದಿತು. ಅದಾದ ಬಳಿಕ ಶುಬ್ನಮ್ ಮರೆತು ಬಿಟ್ಟಳು.
ಕೆನಡಾದ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟವಾದ ಬಳಿಕ, ವಿಶ್ವವಿದ್ಯಾಲಯದ ಸ್ನೇಹಿತೆ ಸಾನಾ, ಅದನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ, ಫೋಟೋಗ್ರಾಫರ್ ಗೆ ಟ್ಯಾಗ್ ಮಾಡಿ ಕಳಿಸಿದಾಗಲೇ ಶುಬ್ನಮ್ ಗೆ ಹಳೆ ನೆನಪಿನ ಸುರುಳಿ ಬಿಚ್ಚಿಕೊಂಡಿದ್ದು. ಈ ಪೋಸ್ಟ್‌ಗೆ, ‘ನಾನು ನಿಮ್ಮ ಫೋಟೋಗಳನ್ನು ಬಳಸಿಕೊಳ್ಳಲು ನಿಮ್ಮ ಅನುಮತಿ ಪಡೆದಿದ್ದೇನಲ್ಲ’ ಎಂದು ಫೋಟೋಗ್ರಾಫರ್ ಕಾಮೆಂಟ್ ಮಾಡಿದ್ದ. ಆ ಫೋಟೋಗ್ರಾಫರ್, ಆಯ್ಕೆ ಮಾಡಿದ ನೂರು ಯುವತಿಯರ ಅಂದವಾದ ಫೋಟೋಗಳನ್ನು ಪ್ರತಿಷ್ಠಿತ ‘ಸ್ಟಾಕ್ ಫೋಟೋಸ್ ’ಗೆ ಮಾರಾಟ ಮಾಡಿದ್ದ. ಇದರಿಂದ ಮತ್ತಷ್ಟು ಕುತೂಹಲಗೊಂಡ ಶುಬ್ನಮ್, ರಿವರ್ಸ್ ಗೂಗಲ್ ಸರ್ಚ್ ಕೊಟ್ಟಾಗ, ಬಂದ ರಿಸಲ್ಟ್ ನೋಡಿ ದಿಗ್ಭ್ರಾಂತಳಾದಳು.
ಜಗತ್ತಿನಾದ್ಯಂತ ನೂರಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಶುಬ್ನಮ್ ಪೋಟೋಗಳನ್ನು ರೂಪದರ್ಶಿಯಾಗಿ ಬಳಸಿಕೊಳ್ಳಲಾಗಿತ್ತು. ಆಕೆ ಐಸ್ ಕ್ರೀಮ್, ಸ್ಕಿನ್ ಲೈಟೆನಿಂಗ್, ಮೇಕಪ್, ಶಾಂಪೂ, ನೇಲ್ ಪಾಲಿಶ್, ಬ್ಯಾಂಕಿಂಗ್, ಇನ್ಸೂರೆನ್ಸ್, ಸ್ಕಾಲರ್ ಶಿಪ್, ಟ್ಯೂಷನ್, ರಿಯಲ್ ಎಸ್ಟೇಟ್, ಕಾರ್ಪೆಟ್, ಟ್ರಾವೆಲ್, ಸ್ಕೂಲ್ ಪಠ್ಯ-ಪುಸ್ತಕ, ಮೆಕ್ ಡೊನಾಲ್ಡ್, ಆಟೋಮೊಬೈಲ್… ಹೀಗೆ ನೂರಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಳು ! ನ್ಯೂಯಾರ್ಕ್, ಉರುಗ್ವೆ, ಕಾಂಬೋಡಿಯಾ, ವಿಯೆಟ್ನಾಮ್, ದುಬೈ, ಮಲೇಷಿಯಾ, ಐಲೆಂಡ್, ಬೀಜಿಂಗ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಫ್ರಾನ್ಸ್… ಹೀಗೆ ಅನೇಕ ದೇಶಗಳ ಪತ್ರಿಕೆಗಳಲ್ಲಿ ಮತ್ತು ಜಾಹೀ ರಾತು ಫಲಕಗಳಲ್ಲಿ ಅವಳ ಚಿತ್ರ ಪ್ರಕಟವಾಗಿತ್ತು.
ಲಂಡನ್‌ನ ಬಸ್ ನಿಲ್ದಾಣ, ಅಂಡರ್ ಗ್ರೌಂಡ್ ಟ್ರೇನು ನಿಲ್ದಾಣಗಳಲ್ಲೆಲ್ಲ ಅವಳ ಫೋಟೋಗಳುಳ್ಳ ಜಾಹೀರಾತುಗಳು ರಾರಾಜಿಸಿದ್ದವು. ಹಲವು ಮ್ಯಾಗಜಿನ್ ಗಳು ಶುಬ್ನಮ್ ಫೋಟೋವನ್ನು ಮುಖಪುಟದಲ್ಲಿ ಪ್ರಕಟಿಸಿ, ‘ಎಲ್ಲರಿಗೂ ಸಲ್ಲುವ ಮುಖ’ ಎಂದು ಕೊಂಡಾಡಿದವು. ಆಯಾ ದೇಶಕ್ಕೆ ತಕ್ಕ ಹಾಗೆ ಶುಬ್ನಮ್ ರಾಷ್ಟ್ರೀಯತೆ ಮತ್ತು ಹೆಸರನ್ನು ಮಾರ್ಪಾಟು ಮಾಡಲಾಗಿತ್ತು. ಕಾಂಬೋಡಿಯಾದಲ್ಲಿ ಕಾಣಿಸಿಕೊಂಡ ಜಾಹೀರಾತಿನಲ್ಲಿ ಶುಬ್ನಮ್ ಬೋನಿ ಸೆಂಗ್ ಆಗಿದ್ದರೆ, ಮುಂಬೈಯಲ್ಲಿ ಕಾಣಿಸಿಕೊಂಡ ಜಾಹೀರಾತಿನಲ್ಲಿ ಚಂದ್ರಾ ಆಗಿದ್ದಳು. ಇನ್ನಾವುದೋ ದೇಶದಲ್ಲಿ ಫೋಬೆಲೋಪೆಜ್, ಅಲೆಕ್ಸಾಂಡ್ರಾ, ಡೋರಿನ್, ಆರ್ತಿ, ಡೋನಾ, ಸಮಂತಾ, ಸಾಜಾ… ಆಗಿದ್ದಳು. ಡೇಟಿಂಗ್ ವೆಬ್ ಸೈಟ್ ನಲ್ಲಿ ಲಿಲ್ಲಿ ಲಾಜವನ್ ಆಗಿದ್ದಳು. ‘ಮಕ್ಕಳು ಕಾಣೆಯಾಗಿದ್ದಾರೆ’ ಎಂಬ ಜಾಹೀರಾತಿಗೂ ಶುಬ್ನಮ್ ಚಿತ್ರವನ್ನು
ಬಳಸಿಕೊಳ್ಳಲಾಗಿತ್ತು.
ತನ್ನ ಫೋಟೋ ಬಳಸಿಕೊಂಡಿದ್ದಕ್ಕೆ ಒಂದು ಅಥವಾ ಎರಡು ಸಂಸ್ಥೆಗಳ ವಿರುದ್ಧವಾದರೆ ದೂರು ಸಲ್ಲಿಸಬಹುದು. ಜಗತ್ತಿನಾದ್ಯಂತ ನೂರಾರು ಕಂಪನಿಗಳು ಬಳಸಿಕೊಂಡಾಗ ಯಾರ ವಿರುದ್ಧ, ಯಾರಿಗೆ ದೂರು ಅಂತ ದೂರು ಸಲ್ಲಿಸುವುದು? ಹಿಂದೆ-ಮುಂದೆ ನೋಡದೇ, ಪೂರ್ವಾಪರಗಳನ್ನು ಅರಿಯದೇ, ಪರಿಣಾಮ ಗಳನ್ನು ಊಹಿಸದೇ, ಬೇಕಾಬಿಟ್ಟಿ ಸಹಿ ಹಾಕಿದ ತನ್ನ ಅವಿವೇಕಿತನಕ್ಕೆ ಶುಬ್ನಮ್ ಒಂದು ಕ್ಷಣ ಮರುಕಪಟ್ಟುಕೊಂಡಳು. ಅದಕ್ಕಿಂತ ಬೇರೇನೂ ಮಾಡಲು ಅವಳಿಂದ ಸಾಧ್ಯವಿರಲಿಲ್ಲ. ಅದರ ಹೊರತಾಗಿ, ಇನ್ನು ಜಗತ್ತಿನ ಪ್ರಮುಖ ಪತ್ರಿಕೆಗಳಲ್ಲಿ, ರಸ್ತೆ ಬದಿಯ ಫಲಕಗಳಲ್ಲಿ ತನ್ನ ಚಿತ್ರ ಕಂಡು ಸಂತೋಷಪಡಬೇಕು.
ಇವೆರಡರ ಹೊರತಾಗಿ ಅವಳ ಮುಂದೆ ಬೇರೆ ಆಯ್ಕೆಗಳಿರಲಿಲ್ಲ.
ಆದರೆ ಶುಬ್ನಮ್ ಅಷ್ಟಕ್ಕೇ ಸುಮ್ಮನಾಗಲಿಲ್ಲ. ಟ್ವಿಟರ್, ಫೇಸ್ ಬುಕ್ ಮತ್ತು ಇನ್ಸ್ಟಾ ಗ್ರಾಂಗಳಲ್ಲಿ, ಉಚಿತ ಫೋಟೋಶೂಟ್‌ಗಳು ನಿಮ್ಮನ್ನು ಹೇಗೆ ದಾರಿ ತಪ್ಪಿಸು ತ್ತವೆ ಎಂದು ತನ್ನ ಅನುಭವಗಳನ್ನು ಬರೆದುಕೊಂಡಳು. How I ended up with my face on a McDonald’s advertisement in China – A cautionary tale ಎಂಬ ಲೇಖನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಇದನ್ನು ಕಂಡು ಮೋನಿಕಾ ಲೆವಿನ್ಸ್ಕಿ ಸಹ ರೀಟ್ವೀಟ್ ಮಾಡಿದಳು. ಸಿಎನ್‌ಎನ್ ಮತ್ತು ಬಿಬಿಸಿ ಶುಬ್ನಮ್‌ಳನ್ನು ಸಂದರ್ಶಿಸಿದವು ಮತ್ತು ವೆಬ್ ಸೈಟ್‌ಗಳಳ್ಳಿ ಪ್ರಧಾನವಾಗಿ ವರದಿ ಮಾಡಿದವು. ಇದರಿಂದ ಆಕೆ ಏಕಾಏಕಿ ವಿಶ್ವದ ಗಮನ ಸೆಳೆಯುವಂತಾದಳು. ಅವಳಿಗೆ ಎಲ್ಲೆಲ್ಲಿಂದಲೋ ಕರೆಗಳು, ಇಮೇಲ್ ಗಳು ಬರಲಾರಂಭಿಸಿದವು. ಅವಳ ಖಾಸಗಿ ಜೀವನವೆಂಬುದು ಗಾಳು-ಮೇಳಾ ಯಿತು. ಎಲ್ಲೆಂದರಲ್ಲಿ ಜನ ಅವಳನ್ನು ಗುರುತಿಸಲಾರಂಭಿಸಿದರು.
ಈ ಹಠಾತ್ ಬೆಳವಣಿಗೆಯನ್ನು ಅವಳಿಗೆ ನಿಭಾಯಿಸುವುದು ದುಸ್ತರವಾಯಿತು. ಅವಳಿಗೆ ಯಾವುದೂ ನಿಯಂತ್ರಣಕ್ಕೆ ಸಿಗುತ್ತಿಲ್ಲ ಎಂದು ಅನಿಸಲಾರಂಭಿಸಿತು.
ಮೊಬೈಲ್ ತೆರೆದರೆ ಮೆಸೇಜುಗಳ ಸುರಿಮಳೆ. ‘ನೀನು ನಿಜಕ್ಕೂ ಸುಂದರಿ,’ ‘ನಿನ್ನ ಸೌಂದರ್ಯ ನೋಡಿ ಫಿದಾ ಆಗಿದ್ದೇನೆ’, ‘ನಿನ್ನಂಥ ಮೂರ್ಖಳನ್ನು ನಾನು ನೋಡಿಲ್ಲ’, ‘ನಿನ್ನನ್ನು ಇಷ್ಟು ಸುಲಭವಾಗಿ ಯಾಮಾರಿಸಬಹುದು ಎಂದು ಗೊತ್ತಿದ್ದರೆ ನಾನು ನಿನ್ನನ್ನು ಲಪಟಾಯಿಸುತ್ತಿದ್ದೆ’, ‘ನೀನು ಬೇಕೆಂದೇ ಜನರ ಗಮನ ಸೆಳೆಯಲು ಈ ನಾಟಕವಾಡುತ್ತಿದ್ದೀಯ’, ‘ನಿನ್ನ ವಕೀಲರನ್ನು ಸಂಪರ್ಕಿಸು, ಎಲ್ಲಾ ಜಾಹೀ ರಾತು ಏಜೆನ್ಸಿಗಳ ವಿರುದ್ಧ ದೂರು ಕೊಡು’ .. ಜನ ತಲೆಗೊಂದು ಸಲಹೆ ಕೊಡಲಾರಂಭಿಸಿದರು. ಅಮೆರಿಕದ ‘ಸಿಬಿಎಸ್ ನ್ಯೂಸ್’ ಚಾನೆಲ್‌ನ ಖ್ಯಾತ ನಿರೂಪಕಿ ಗೇಯ್ಲ್ ಕಿಂಗ್ ತನ್ನ ಕಾರ್ಯಕ್ರಮಗಳಲ್ಲಿ ಶುಬ್ನಮ್ ಹೆಸರನ್ನು ಪ್ರಸ್ತಾಪಿಸ ಲಾರಂಭಿಸಿದಳು. ಯುವರಾಜ ಹ್ಯಾರಿ ಸಹ ಅವಳ ಹೆಸರನ್ನು ಸಂದರ್ಶನವೊಂದರಲ್ಲಿ ಹೇಳಿದ.
ತಾನೇನೋ ದೊಡ್ಡ ಸಾಧನೆ ಮಾಡಿದ್ದಕ್ಕಾಗಿ ಜನರೆಲ್ಲಾ ತನ್ನ ಹೆಸರನ್ನು ಹೇಳುತ್ತಿದ್ದಾರೆ ಎನ್ನುವುದಕ್ಕಿಂತ ತನ್ನ ಎರಡು ನಿಮಿಷಗಳ ಮೂರ್ಖತನಕ್ಕೆ ಇವರೆಲ್ಲ ತನ್ನ ಹೆಸರನ್ನು ಒಂದು ನಿದರ್ಶನ ಅಥವಾ ಎಚ್ಚರಿಕೆಯಾಗಿ ಪ್ರಸ್ತಾಪಿಸುತ್ತಿದ್ದಾರೆ ಎಂದು ಶುಬ್ನಮ್‌ಗೆ ಅನಿಸಲಾರಂಭಿಸಿತು. ತನ್ನ ಹಾಗೆ ಬೇರೆ ಯಾರೂ ಈ ರೀತಿ ಮೋಸ ಹೋಗದಿರಲಿ ಎಂಬ ಕಾರಣಕ್ಕೆ, ಎಷ್ಟೇ ಕಷ್ಟವಾದರೂ ಇವೆಲ್ಲವನ್ನೂ ಸಹಿಸಿಕೊಳ್ಳುತ್ತಲೇ ಸ್ವೀಕರಿಸಿದಳು.
ಇಷ್ಟೆಲ್ಲಾ ಆದ ನಂತರವೂ ಅವಳ ಫೋಟೋ ರೂಪದರ್ಶಿಯಾಗಿ ಜಾಹೀರಾತುಗಳಲ್ಲಿ ಬರುವುದು ನಿಂತಿಲ್ಲ. ಒಂದು ಸಂಗತಿಯಂತೂ ಸತ್ಯ, ಈ ರೀತಿ ಜಗತ್ತಿನ ಎಲ್ಲರಿಗೂ ಇವಳು ತಮ್ಮವಳು, ನೆರೆಮನೆ ಹುಡುಗಿ ಎಂಬ ಭಾವನೆ ಮೂಡಿಸುವ ಮುಖಭಾವ ಹೊಂದುವುದು ನಿಜಕ್ಕೂ ಅಪರೂಪವೇ. ನಾನು ಇತ್ತೀಚೆಗೆ ಶುಬ್ನಮ್ ಖಾನ್ ಬರೆದ How I accidentally became a global stock photo ಎಂಬ ಪುಸ್ತಕವನ್ನು ಓದಿ ಮುಗಿಸಿದೆ. ಅವಳು ಅನುಭವಿಸಿದ ಸಂಕಟ, ತಳಮಳ, ಪುಳಕಗಳನ್ನೂ ನಿಮಗೂ ಹೇಳಬೇಕು ಅನಿಸಿತು.