Saturday, 21st September 2024

ಮರೆತೇನೆಂದರೂ.. ಮರೆಯಲಿ ಹ್ಯಾಂಗ…

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್

ಗಂಗಾವತಿ ನನ್ನ ಹುಟ್ಟೂರು, ಜನನಿ ಜನ್ಮಭೂಮಿ ಎರಡೂ ಸ್ವರ್ಗಕ್ಕಿಂತ ಮಿಗಿಲು ಎನ್ನುತ್ತಾರೆ. ಜನನಿಗೆ ಅಂತ್ಯವಿದೆ, ಸಾವಿದೆ. ಆದರೆ ಜನ್ಮಭೂಮಿ? ಎಲ್ಲರಿಗೂ. ಅಂದರೆ ಅಲ್ಲಿ ಹುಟ್ಟಿದ ಹಲವಾರು ತಲೆಮಾರುಗಳಿಗೆ ತಲೆ ಇಡಲು ಮೇಲೆ ಸೂರು, ಕಾಲು ಊರಲು, ನಡೆದಾಡಲು ಶತಶತಮಾನಗಳ ಕಾಲ ಆಶ್ರಯ
ನೀಡುತ್ತದೆ. ತಾಯಿ ಮಡಿಲನ್ನು ನಾವು ಬೆಳೆದ ಮೇಲೆ ಬಿಟ್ಟು ನಡೆದಾಡುತ್ತೇವೆ. ಆದರೆ ಭೂಮಿ ಮಾತ್ರ ನಮ್ಮನ್ನು ನಡೆದಾಡಿಸಿ, ಕುಣಿದಾಡಿಸಿ, ಬೀಳಿಸಿ ಮತ್ತೇ ಎಬ್ಬಿಸಿ ಕೊನೆಗೆ ತನ್ನ ಮಡಿಲಲ್ಲೇ ಮಲಗಿಸಿಕೊಂಡು ನಮ್ಮನ್ನೇ ಮತ್ತೆ ಗೊಬ್ಬರವಾಗಿಸಿಕೊಂಡು ಮುಂದಿನ ಪೀಳಿಗೆಗೆ ಅನ್ನ, ಆಶ್ರಯ ಕೊಡುತ್ತದೆ ಅಲ್ಲವೇ? ಒಮ್ಮೊಮ್ಮೆ ನನಗನಿಸುವುದೇನೆಂದರೆ, ಜನನಿಗಿಂತ ಲೂ ಒಂದು ಪಟ್ಟು ಜನ್ಮಭೂಮಿಯೇ ಮೇಲು ಎನಿಸುತ್ತದೆ.

ಇವಕ್ಕೆ ದ್ರೋಹ ಬಗೆದವನಿಗೆ ಬದುಕಾಗಲಿ, ಭವಿಷ್ಯವಾಗಲೀ ಇಲ್ಲವೆನಿಸುತ್ತದೆ. ನಾವು ಈ ಭೂಮಿಯ ಮೇಲೆ ಇನ್ನೊಬ್ಬನ ರಕ್ತ ಕಣ್ಣೀರು ಹರಿಸಿದರೆ, ನಮ್ಮ ರಕ್ತ ಕಣ್ಣೀರುಗಳೂ ಇದೇ ಭೂಮಿಯ ಮೇಲೆ ಹರಿಯದೇ ಇರುವುದಿಲ್ಲ. ‘ಸತತ ಸಂಪರ್ಕದಿಂದ ಸ್ಥಾವರ ವಸ್ತುಗಳೂ ಆತ್ಮೀಯವಾಗುತ್ತವೆ’ ಎಂಬ ಮಾತಿದೆ. ನನ್ನೂರ ಬೆಟ್ಟ, ಗುಡ್ಡ, ರಸ್ತೆ, ಓಣಿ, ಹಳೆಯ ಮರ, ಗಿಡ, ಆಡಿದ ಬಯಲು, ಕೂತ ಕಟ್ಟೆ, ಮಿಂದ ಹಳ್ಳ, ಕೆರೆ, ಬಾವಿ, ನದಿಗಳು ಸಹ ನಮ್ಮ ಒಡಹುಟ್ಟಿದವರೇ ಎನಿಸುವಷ್ಟು ಆತ್ಮೀಯವಾಗುತ್ತವೆ. ನನಗೂ ನಮ್ಮ ಗಂಗಾವತಿಯ ಮಳೆಮಲ್ಲಪ್ಪನ ಗುಡ್ಡ, ಪಾರ್ಕು, ಊರಿನ ದೇವಸ್ಥಾನಗಳು, ಅಲ್ಪಸ್ವಲ್ಪ ಬದಲಾಗಿದ್ದರೂ ಅಡ್ಡಾಡಿದ
ರಸ್ತೆಗಳು, ಊರ ಮಧ್ಯದ ರಾಯರ ಓಣಿ, ಮಿಠಾಯಿಗಾರ ಓಣಿ, ಕೆಲೋಜಿಯವರ ಓಣಿ, ಬಾವಿಕಟ್ಟೆರ ಓಣಿ ಇತ್ಯಾದಿಗಳು ಸೇಫ್ ಲಾಕರ್‌ನಲ್ಲಿಟ್ಟ ಒಡವೆಗಳಂತೆ ನೆನಪುಗಳೆಂಬ ನಿಧಿಗಳಾಗಿವೆ.

ಊರಲ್ಲಿದ್ದಾಗ ಅಲ್ಲಿ ಅಡ್ಡಾಡಿದರೆ ಅರವತ್ತನೇ ವಯಸ್ಸಿನ ನಾನೀಗಲೂ ಹನ್ನೆರೆಡು-ಹದಿನೈದರ ಹುಡುಗನಾಗು ತ್ತೇನೆ. ಆ ದಿನಗಳಿಗೇ ಜಾರುತ್ತೇನೆ. ವಿದ್ಯೆ ಅಷ್ಟೊಂದು ತಲೆಗೆ ಹತ್ತದ ನಾನು ಹಾಡು, ಕಥೆ, ನಾಟಕ, ಹಾಸ್ಯ ಇವುಗಳಿಂಲೇ ಎಂದಿಗೂ ಸುತ್ತ ಜನರನ್ನು ಕಟ್ಟಿಕೊಂಡು ಅಡ್ಡಾಡಿದ್ದೇನೆ. ಅನೇಕ ಸಂಘ-ಸಂಸ್ಥೆ ಗಳಲ್ಲಿ ಅಡ್ಡಾಡಿ, ಕೊನೆಗೆ ನನ್ನದೇ ಒಂದು ಸಂಸ್ಥೆ ಸಾಹಿತ್ಯ ಪ್ರೇಮಿಗಳ ಬಳಗ ಎಂಬ ಸಂಸ್ಥೆ ಕಟ್ಟಿ ಎಲ್ಲ ತರಹದ ಕಾರ್ಯಕ್ರಮ ಗಳಿಂದ ಊರಿನ ಎಲ್ಲ ಸಮಾಜದವರಿಗೂ ಚಿರಪರಿಚಿತನಾದೆ. ನನ್ನೆಲ್ಲ ಚಟುವಟಿಕೆಗಳಿಗೆ ಐವತ್ತಕ್ಕೂ ಹೆಚ್ಚು ನನ್ನನ್ನು ಅಂಗೈಯಲ್ಲಿ ಹಿಡಿದ ಸಹೃದಯ ಹಿರಿ-ಕಿರಿಯ ಗೆಳೆಯರ ಗುಂಪು ನನ್ನ ಸುತ್ತಲೂ ಇತ್ತು. ಒಂದು ಕಾವ್ಯ ಸಂಜೆಗಳೇ, ಒಂದು ಗಣೇಶೋತ್ಸವ ನಾಟಕ ಗಳೇ, ಒಂದು ಮಕ್ಕಳ ಶಿಬಿರಗಳೇ, ಓಹ್!

ಇಂಥ ಚಟುವಟಿಕೆಗಳನ್ನು ನಾನು ಮಾಡಿಲ್ಲ ಎಂಬ ಕೊರಗೇ ನನ್ನ ಜೀವನದಲ್ಲಿ ಉಳಿದಿಲ್ಲ. ದೇವರ ದಯೆ, ಆ ದೇವರೇ ಕೊಟ್ಟ ಗೆಳೆಯರ ಗುಂಪು ನನ್ನ ಇಂದಿನ ಈ ವಿಜಯಕ್ಕೆ, ಜನಪ್ರಿಯತೆಗೆ, ನನ್ನ ಸಾರ್ಥಕ ಬದುಕಿಗೆ ಸಾಕ್ಷಿಗಳು. ಇವೆಲ್ಲ ಹೊರಗೆ ಕಾಣುವ, ಮೇಲ್ನೋಟಕ್ಕೆ ತೋರಿಬರುವ ನನ್ನ ಬದುಕಿನ ಚಿತ್ರಣಗಳು. ನಾನು ಈ ಲೇಖನದಲ್ಲಿ ಹೇಳ ಹೊರಟಿರುವುದು, ನನ್ನ ಹತ್ತು-ಹದಿನೈದು ವರ್ಷದ ಚಟುವಟಿಕೆಗಳಿಂದ ಈ ಲೇಖನ ಬರೆಯುತ್ತಿರುವ ಈ ವಾರದವರೆಗೂ ಅಂದರೆ ಸರಿಸುಮಾರು ಐವತ್ತು ವರ್ಷಗಳಿಂದ ನನ್ನ ಈ ಏಳಿಗೆಗೆ, ನನ್ನ ಈ ಪ್ರಸಿದ್ಧಿಗೆ ಕಣ್ಣೀರು ಹಾಕುತ್ತಲೇ ತಮ್ಮ ಸಂತೋಷ ವ್ಯಕ್ತಪಡಿಸುತ್ತಿರುವ ಕೆಲವು ಹಿರಿಯ ಹೆಣ್ಣು ಜೀವಗಳು ನನ್ನ ಹಿಂದೆ ಇದ್ದರು.

ಈಗಲೂ ಕೆಲವರು ಉಳಿದುಕೊಂಡಿದ್ದಾರೆ. ಹಾಗೆಯೇ ಹರಸುತ್ತಲೂ ಇದ್ದಾರೆ. ನನ್ನ ನೋಡಿದರೆ ಅವರು ಚಪ್ಪಾಳೆ ತಟ್ಟುವದಿಲ್ಲ, ಕುಣಿದು ಕುಪ್ಪಳಿಸಿ ನಲಿಯುವು ದಿಲ್ಲ, ಆದರೆ ಫಳ್ಳನೇ ಕಣ್ಣಲ್ಲಿ ನೀರು ತುಂಬಿಕೊಂಡು ಸುಮ್ಮನೆ ನಿಂತುಬಿಡುತ್ತಾರೆ, ಇಲ್ಲವೇ ನನಗೆ ಬೆನ್ನು ಮಾಡಿ ಕಣ್ಣೀರು ಒರೆಸಿಕೊಂಡು ನನ್ನನ್ನು ಒಳ ಕರೆಯು ತ್ತಾರೆ. ಕೂರಿಸುತ್ತಾರೆ, ಮತ್ತೇ ಅಳುತ್ತಾರೆ, ಕಣ್ಣೀರು ಒರೆಸಿಕೊಳ್ಳುತ್ತಾರೆ. ನಾನು ಅವರಿಗೆ ಏನೂ ಹೇಳುವುದಿಲ್ಲ. ಅವರು ಏನೂ ಕೇಳುವುದಿಲ್ಲ, ಅವರಿಗೆ ಈಗಾಗಲೇ ನನ್ನ ಬಗ್ಗೆ ಟಿ.ವಿ ಗಳು, ಪತ್ರಿಕೆಗಳು, ಜನರಾಡುವ ಮಾತುಗಳು ಎಲ್ಲವನ್ನು ಹೇಳಿರುತ್ತವೆ. ಅಂಥವರಲ್ಲಿ ಕೆಲವರು ಈಗಿಲ್ಲ. ಆದರೂ ಆ ಜೀವಿಗಳನ್ನು ನಾನೂ ಕಣ್ತುಂಬಿಕೊಂಡೇ ಅವರ ಹೆಸರು ಬರೆಯುವುದರ ಮೂಲಕ ಕೃತಕೃತ್ಯನಾಗುತ್ತಿದ್ದೇನೆ.

ದಿ|| ಸಾವಿತ್ರವ್ವ (ನನ್ನ ಅಜ್ಜನ ತಂಗಿ), ದಿ|| ಸುಂದ್ರವ್ವ ದಿಗ್ಗಾವಿ, ದಿ|| ಗುಂಡೂರು ಇಂದಿರಾಬಾಯಿ (ಲೇಖಕ ಪವನಕುಮಾರ ಗುಂಡೂರು ಇವರ ತಾಯಿ) ಹಾಗೆಯೇ, ಈಗಲೂ ನನ್ನ ಸೌಭಾಗ್ಯವೆಂಬಂತೆ ನನ್ನ ಜತೆಗಿರುವ ಕೇಸಕ್ಕಿ ಮೈನಮ್ಮ, ಲೆಕ್ಕಿಹಾಳ ಗಂಗಮ್ಮ, ಶ್ರೀಮತಿ ಅಂಬುಜಾಬಾಯಿ ಸಿರಿಗೇರಿ, ಶ್ರೀಮತಿ ಸುಲೋಚನಾ ಬಾಯಿ ಟೀಚರ್, ಬಬಲಾದಿ ತಮ್ಮಣ್ಣ, ವಿರುಪಾಕ್ಷಪ್ಪ ಇಟಗಿ ಇತ್ಯಾದಿ, ಇವರಿಗೆ ನನ್ನ ಬಿರುದು ಬಾವಲಿಗಳು ಗೊತ್ತಿಲ್ಲ, ನಾ ಸುತ್ತಿದ ಊರು, ನಾನು
ಭೇಟಿಯಾದ, ಭೇಟಿಯಾಗಲಿರುವ ಜನಗಳೂ ಗೊತ್ತಿಲ್ಲ, ಇವರೆಂದೂ ನನ್ನ ಜತೆ ಸೆಲಿ ತೆಗೆಸಿಕೊಂಡಿಲ್ಲ, ಆಟೋಗ್ರಾಫ್ ಕೇಳಿಲ್ಲ.

ನಿಮ್ಮ ಕಾರ್ಯಕ್ರಮಕ್ಕೆ ಬರುತ್ತೇವೆ ಎಂದಿಲ್ಲ, ಅವರಿವರು ಆಡುವ ಮಾತುಗಳು ಟಿ.ವಿ ಯಲ್ಲಿ ಬರುವ ನನ್ನ ಹರಟೆ, ಹಾಸ್ಯ ದರ್ಬಾರ್, ನನ್ನ ರಿಕಾರ್ಡೆಡ್ ಕಾರ್ಯ ಕ್ರಮಗಳ ರಿಲೇಗಳನ್ನು ಬಿಟ್ಟರೆ ಬೇರೆ ಏನೂ ನೋಡಿಲ್ಲ, ಆದರೂ ನಮ್ಮೂರಿನವನು, ನಮ್ಮ ಮುಂದಿನ ಹುಡುಗ ಎಂಬ ಭಾವನೆ ಬಿಟ್ಟರೆ ಬೇರೇನೂ ವಿಶೇಷಣ, ಅರ್ಹತೆಗಳು ಇವರು ನನ್ನನ್ನು ಮೆಚ್ಚಲು ಬೇಕಿಲ್ಲ. ಇದನ್ನು ಎಂತಹ ಪ್ರೀತಿ-ಅಭಿಮಾನವೆನ್ನಬೇಕೋ, ಮನಶ್ಯಾಸ ವೈದ್ಯರನ್ನೇ ಕೇಳಬೇಕು. ನನ್ನಿಂದ ಇವರು ಇಂದಿಗೂ ಹತ್ತು ರೂಪಾಯಿ, ಒಂದು ಸೀರೆ, ಒಂದು ಕುಬುಸದ ಖಣ ಬಯಸಿಲ್ಲ, ಆದರೂ ಇವರು ತೋರುವ ಪ್ರೀತಿ, ಅಭಿಮಾನ, ಅಂತಃಕರಣಗಳನ್ನು ನಾನು ಯಾವ ಬೆಲೆಕೊಟ್ಟು ಕಂಡುಕೊಳ್ಳಲಿ ಎಂಬುದೇ ನನಗೆ ಬಿಡಿಸಲಾಗದ ಒಗಟಾಗಿದೆ.

ಮೊನ್ನೆ ‘ಸಿನಿಮಾದಾಗೂ ಪಾರ್ಟು ಮಾಡೀಯಾ? ವಿಮಾನದಾಗೂ ಅಡ್ಡಾಡಿಯಾ, ಆಕಾಶದಾಗೂ ಇರೋ ಊರಿಗೆ ಹೋಗಿಯಂತೆ ಹೌದಾ?” ಎಂದು ಕೇಳಿದ ನಮ್ಮೂರಿನ ಪಿಂಜಾರ ಓಣಿ ಒಂದು ಮುದುಕಿ ಹುಬ್ಬಿಗೆ ಕೈ ಹಚ್ಚಿ ನೋಡಿ, ಕೇಳಿದ ಪರಿ ನಾನೆಂದೂ ಮರೆಯುವಂತಿಲ್ಲ. ನಮ್ಮೂರಲ್ಲಿ ಇಂದಿಗೂ ಕೆಲವು ಓಣಿ,
ಗಲ್ಲಿಗಳಿಗೆ ಜಾತಿವಾರು ಹೆಸರಿವೆ. ಅವು ಅವರ ಉದ್ಯೋಗವನ್ನು ಸೂಚಿಸುತ್ತವೆ. ಉಪ್ಪಾರ ಓಣಿ, ಮೇದಾರ ಓಣಿ, ಶೆಟ್ಟರ ಓಣಿ, ಅಗಸರ ಓಣಿ, ಪಿಂಜಾರ ಓಣಿ ಇತ್ಯಾದಿ ಇತ್ಯಾದಿ.

ಮಂಡಾಳಭಟ್ಟಿ ಎಂಬ ಏರಿಯಾ ಇದೆ. ಇಲ್ಲಿ ಬರೀ ಕಳ್ಳೆಪುರಿ, ಚುರುಮುರಿ ತಯಾರಿಕೆ ಭಟ್ಟಿಗಳಿವೆ. ಇವು ಬಹುತೇಕ ಮುಸ್ಲಿಂ ಕುಟುಂಬಗಳ ಜೀವನ ವೃತ್ತಿಯ ಸ್ಥಳಗಳು. ಇಲ್ಲಿ ಹೋದರೂ ಕೂಡ ಇಲ್ಲಿನ ಬುರ್ಖಾ ಮಹಿಳೆಯರೂ ನನ್ನನ್ನು ಗುರುತಿಸಿ ನಗುತ್ತಾರೆ, ಮಾತನಾಡಿಸುತ್ತಾರೆ. ಗುರುತಿಸದ ತಮ್ಮ ಸಹೋದ್ಯೋಗಿ ಮಹಿಳೆಗೆ ‘ಟಿ.ವಿ ಪೆ ಆತೇನಾ? ಗಂಗಾವತಿ ವಾಲೆ, ವಹಿ ಐ ಓ’ ಎಂದು ಪರಿಚಯಿ ಸುತ್ತಾರೆ. ಟಿ.ವಿ, ಮೊಬೈಲು, ಯೂಟ್ಯೂಬ್‌ಗಳು ಖಾಸಗಿತನವನ್ನು ಕಸಿದು ಕೊಂಡರೂ ನಮ್ಮನ್ನು ಸಾರ್ವತ್ರಿಕ ಮಾಡಿವೆ. ಈ ಲಿಸ್ಟ್‌ಗಳಲ್ಲಿ ಸೇರಬೇಕಾದ ಇನ್ನೊಬ್ಬ ಮಹಿಳೆ ಎಂದರೆ ನನ್ನ ತಂದೆಯ ತಂಗಿ ಅಚ್ಚವ್ವ, ನನ್ನ ಸೋದರತ್ತೆ. ಕುಷ್ಟಗಿಯಲ್ಲಿ ಇರುತ್ತಿದ್ದ ಈಕೆಗೆ ತವರುಮನೆ, ಅಣ್ಣ ತಮ್ಮಂದಿರು, ತಾಯಿ ತಂದೆ ಎಂದರೆ ಅತೀವ ಮಮತೆ, ಮೋಹ, ಕರೆಯಲಿ ಬಿಡಲಿ ಊರೂರು ತಿರುಗುವ ಹುಚ್ಚಿನ ನನಗೆ ಮೂರು, ಮೂರು ದಿನಕ್ಕೊಮ್ಮೆ ಊರಿಗೆ ಹೋಗುವ, ಬಸ್ಸು ಏರುವ ಹುಮ್ಮಸ್ಸು, ಬರುಬರುತ್ತಾ ಚಟವಾಗಿ ಪರಿಣಮಿಸಿಬಿಟ್ಟಿತ್ತು.

ಹತ್ತಿಪ್ಪತ್ತು ರುಪಾಯಿ ಕೂಡಿದರೆ ಸಾಕು ಬಂಧುಗಳಿರುವ ಊರಿಗೆ ಹೊರಟು ಬಿಡುತ್ತಿದ್ದೆ. ಆ ಹುಚ್ಚಿಗೆ ನೀರೆರೆಯುತ್ತಿದ್ದಾಕಿ ಈ ಸೋದರತ್ತೆ ಅಚ್ಚವ್ವತ್ತಿ. ಕುಷ್ಟಗಿಯ ಅಡವಿರಾಯ (ಆಂಜನೇಯಸ್ವಾಮಿ) ಆ ಊರಿನ ಜನರ ಆರಾಧ್ಯ ದೈವ, ವರ್ಷಕ್ಕೊಮ್ಮೆ ಆತನ ಜಾತ್ರೆ, ಊರಿಂದ ದೂರದ ಅಡವಿಯಲ್ಲಿ ಆತನ ಗುಡಿಯಿರು ವುದರಿಂದ ಆತನಿಗೆ ಅಡವಿರಾಯ ಎಂಬ ಅನ್ವರ್ಥಕ ನಾಮ ರೂಢಿಯಾಗಿದೆ. ಹಿಂದೆ ಅಡವಿ, ಈಗೀಗ ಅಡವಿ ಊರು ಏಕವಾಗಿ ಬೆಳೆದುಬಿಟ್ಟಿದೆ. ನಾನು ಈಜಲು
ಕಲಿತದ್ದೇ ಈ ಅಡವಿರಾಯನ ಬಾವಿಯಲ್ಲಿ, ಆಗಾಗ ಹೋಗುತ್ತಿದ್ದ ಈ ಅತ್ತೆ ಮನೆಯಲ್ಲಿ ಮೂರು-ನಾಲ್ಕು ದಿನವಿರುತ್ತಿದ್ದೆ.

ತವರಿನಿಂದ ಬರುತ್ತಿದ್ದ ಸ್ವಂತ ಅಣ್ಣನ ಮಗನನ್ನು ಅಚ್ಚವ್ವತ್ತಿ ಬಲು ಆದರಿಸಿ ಅಳುತ್ತಲೆ ಸ್ವಾಗತಿಸುತ್ತಿದ್ದಳು. ನಾಲ್ಕೈದು ದಿನವಿದ್ದು ವಾಪಸ್ಸು ಹೋಗುವಾಗಲಂತೂ ಅಳುತ್ತಲೇ ಬೀಳ್ಕೊಡುತ್ತಿದ್ದಳು. ಚಾರ್ಜಿಗಲ್ಲದೇ, ನನ್ನ ಸಿನಿಮಾ ಹುಚ್ಚಿಗೆ, ಊರೂರು ತಿರುಗುವ ಹುಚ್ಚಿಗೆ, ಬಸ್ಸೇರುವ ಮುನ್ನ ಎರಡು, ಐದು ರೂಪಾಯಿಗಳನ್ನು ಜೇಬಿಗೆ ತುರುಕುತ್ತಿದ್ದಳು. ಇವೆಲ್ಲ 70-75 ರ ದಶಕದ ಮಾತಾದರೆ, ನಾನು ಹಾಸ್ಯ ಸಂಜೆಗಳಿಗಾಗಿ ಊರೂರು ಯಾತ್ರೆ ಶುರುವಾದಾಗ ಈ ಕುಷ್ಟಗಿಯ ಸಂಘ ಸಂಸ್ಥೆಗಳಿಂದಲೂ ಕರೆ ಬಂತು. ಅದು 1994ರ ಡಿಸೆಂಬರ್ ತಿಂಗಳ ಚಳಿಯ ದಿವಸಗಳು, ಇಷ್ಟೊತ್ತಿಗಾಗಲೇ ನನಗೆ ಕೊಂಚ ಹೆಸರು ಬಂದು ಕಾರ್ಯಕ್ರಮ ಸಂಘಟಕರು ಮಾಡಿದ ವಸತಿಯಲ್ಲೇ ಉಳಿಯಬೇಕಾಯಿತು. ಹೀಗಾಗಿ ಅತ್ತೆಯ ಮನೆಗೆ ಹೋಗಲಾಗಲೇ ಇಲ್ಲ.

ಕರೆಸಿದ ಕುಷ್ಟಗಿಯ ಗಣ್ಯ ವಕೀಲರೊಬ್ಬರ ಮನೆಯಲ್ಲಿ ಉಳಿದೆ. ಸಂಜೆ ನೂರಾರು ಜನ ಸೇರಿ ಗಂಟೆಗಳ ಕಾಲ ಮಾತನಾಡಿದೆ. ಮುಗಿದ ಮೇಲೆ ಜನರೆಲ್ಲ ವೇದಿಕೆ ಕೆಳಗೆ ಮುತ್ತಿದರು. ಅವರನ್ನು ಮಾತನಾಡಿಸುತ್ತಾ, ದಾರಿ ಮಾಡಿಕೊಳ್ಳುತ್ತಾ ಗುಂಪಿನಿಂದ ಹೊರಬರುತ್ತಿದ್ದರೆ, ಆ ಗುಂಪಿನಲ್ಲೇ ಕುಪ್ಪಸದ ಮೇಲೆ, ಕುಪ್ಪಸದ ಅಳತೆಯಷ್ಟೇ ಸ್ವೆಟರ್ ಹಾಕಿದ್ದ ತಲೆಗೆ ಮಫ್ಲರ್ ಇಳಿಬಿಟ್ಟುಕೊಂಡಿದ್ದ ಅಚ್ಚವ್ವತ್ತಿ! ನಗುತ್ತಾ, ಕಣ್ಣುತುಂಬಾ ನೀರು ತುಂಬಿಕೊಂಡು ನಿಂತಿರಬೇಕೆ? ಅದೆಷ್ಟು ಹೆಮ್ಮೆ
ಆಕೆಯ ಮುಖದ ಮೇಲೆ, ಭಾಷಣ ಕೇಳಿದ್ನೇಲೆ ಭಾಡಕೋ ಎಂದು ನನ್ನನ್ನು ಅಪ್ಪಿಯೇ ಬಿಟ್ಟಳು. ಅಷ್ಟು ಜನರ ಮಧ್ಯೆ ತನ್ನ ಕುಪ್ಪಸದಿಂದ ಎರಡು ರೂಪಾಯಿ ತೆಗೆದು ಎಂದಿನಂತೆಯೇ ನನ್ನ ಜೇಬಿಗೆ ತುರುಕಿದಳು, ‘ನಮ್ಮಣ್ಣನ ಮಗ, ಗಂಗಾವತಿಯಾಗ ಇರ‍್ತಾನ, ಮೊದಲಿನಿಂದ ಹಿಂಗ.. ನಗೆಚಟಾಕಿ ಮಾತೇ ಮಾತು ಇವನವು’ ಎಂದು ಸುತ್ತಲ ಜನರಿಗೆಲ್ಲ ಹೇಳಿದಳು.

ಇವೆಲ್ಲ ನಡೆದು ಇಪ್ಪತ್ತು-ಇಪ್ಪತ್ತೈದು ವರ್ಷಗಳಾಗಿ ಹೋದವು. ದೇಶ ವಿದೇಶ ಸುತ್ತಿದೆ. ನಾಡಿನ ಮುಖ್ಯಮಂತ್ರಿ, ಪ್ರಸಿದ್ಧ ನ್ಯಾಯಾಧೀಶರುಗಳು, ಖ್ಯಾತ ನಟರ ಜೊತೆಗೆಲ್ಲ ಕಾರ್ಯಕ್ರಮ ಕೊಟ್ಟೆ. ಆದರೆ, ಈ ಅಂತಃ ಕರುಣಿ ಹೆಣ್ಣುಮಕ್ಕಳ ನೀರು ತುಂಬಿದ ಕಣ್ಣಾಲಿಗಳ ದೃಶ್ಯದ ಮುಂದೆ ಬೇರಾವ ದೃಶ್ಯವೂ ಸಮವಾಗಲಾರದು
ಎನಿಸುತ್ತಲೇ ಇರುತ್ತದೆ. ಈಗಲೂ ಜನ ಗುರುತಿಸುತ್ತಾರೆ, ಗೌರವಿಸುತ್ತಾರೆ ನಿಜ, ಆದರೂ ಪ್ರಾರಂಭದ ದಿನಗಳು, ತಮ್ಮ ಹೃದಯಗಳನ್ನೇ ನನಗೆ ಮೆಟ್ಟಿಲಾಗಿ ಮಾಡಿ ಮೇಲೆ ಮೇಲೆ ಕಳಿಸಿದ ಈ ಜನರನ್ನ ಮರೆತೆನೆಂದರೆ ಮರೆಯಲಿ ಹ್ಯಾಂಗ? ಎಂದೆ ಆಗಾಗ ಕೇಳಿಕೊಳ್ಳುತ್ತಿರುತ್ತೇನೆ.

ನನ್ನ ಈ ಮೂವತ್ತು ವರ್ಷಗಳ ತಿರುಗಾಟದ ಈ ಅವಧಿಯಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಇನ್ನೂ ಆಗುತ್ತಲೇ ಇದ್ದಾರೆ. ಇವರೆಲ್ಲರ ಈ ಅಭಿಮಾನದ ಋಣ
ತೀರಿಸುವ ಬಗೆ ಹೇಗೆ? ಅವರ ಕಣ್ಣೀರಿಗೆ ನಾನು ಏನು ಪ್ರತಿಫಲ ಸಲ್ಲಿಸಲಿ ಎಂಬುದೇ ನನ್ನ ಮುಂದಿರುವ ದೊಡ್ಡ ಪ್ರಶ್ನೆ. ಅನೇಕ ಅಧಿಕಾರಿಗಳು, ರಾಜಕೀಯ ನಾಯಕರು ಅದರಲ್ಲೂ ಕೆಲವು ಒಳ್ಳೆಯವರು, ವೇದಿಕೆಯಲ್ಲಿ ಪಕ್ಕ ಕೂತಾಗ ಜನರ ಶಿಳ್ಳೆ, ಚಪ್ಪಾಳೆ ನೋಡಿ ನನಗೆ ಹೇಳುವ, ಹೇಳುತ್ತಿರುವ ಮಾತು ಏನೆಂದರೆ, ‘ಸಾರ್, ನಮಗೆಲ್ಲ ಕೆಲಸದಿಂದ ನಿವೃತ್ತಿಯಾಗುವ ತನಕ, ಇಲ್ಲಾ ಅಧಿಕಾರ ಹೋಗುವ ತನಕ ಈ ಗೌರವ, ಆದರೆ ನಿಮ್ಮದು ಹಾಗಲ್ಲ, ನೀವು ಇರುವವರೆಗೂ, ಹೋದ ಮೇಲೂ ಈ ಗೌರವ ಇರುತ್ತದೆ.

ಕಲೆ, ಕಲಾವಿದರು ಎಂದಿಗೂ ಮುಂದಿನ ಪೀಳಿಗೆಗೂ ಆದರ್ಶವೇ, ಅನುಕರಣೀಯವೇ ಸಾರ್’. ಎಷ್ಟು ನಿಜ ಈ ಮಾತು, ನಿಜ ಮಾಡುವವರು ಈ ಅಭಿಮಾನಿ ದೇವರುಗಳು.