ಮೂರ್ತಿಪೂಜೆ
ಅತ್ತ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ನಡೆದಿದ್ದರೆ ಇತ್ತ ರಾಜ್ಯ ಬಿಜೆಪಿ ಪಾಳಯದಲ್ಲಿ ಅನುಮಾನ ಕಾಡುತ್ತಿದೆ. ಕರ್ನಾಟಕದ ನೆಲೆಯಲ್ಲಿ ನಾವು ಇಪ್ಪತ್ತು ಸೀಟುಗಳ ಗಡಿ ತಲುಪಲು ಸಾಧ್ಯವೇ? ಎಂಬುದು ಈ ಅನುಮಾನದ ಮೂಲ.
ಅಂದ ಹಾಗೆ, ಶನಿವಾರ ಸಂಜೆ ಪ್ರಕಟವಾದ ಮತದಾನೋತ್ತರ ಸಮೀಕ್ಷೆಗಳು ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಮುನ್ನಡೆಯಲ್ಲಿದೆ ಎಂದೇ ಹೇಳಿವೆ. ನ್ಯೂಸ್ ನೇಷನ್‌ನಂಥ ಒಂದೆರಡು ಸಮೀಕ್ಷೆಗಳನ್ನು ಬಿಟ್ಟರೆ ಉಳಿದೆಲ್ಲ ಸಮೀಕ್ಷೆಗಳು ಮೈತ್ರಿಕೂಟ ಇಪ್ಪತ್ತಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿವೆ. ಇಷ್ಟಾದರೂ ರಾಜ್ಯ ಬಿಜೆಪಿ ಪಾಳಯದ ಅನುಮಾನ ಹೋಗುತ್ತಿಲ್ಲ. ಇದಕ್ಕೆ ಕಾರಣವೂ ಇದೆ. ಅದೆಂದರೆ, ಈ ಬಾರಿಯ ಚುನಾವಣೆ ಯಲ್ಲಿ ಬಿಜೆಪಿ ಸೈನ್ಯ ಒಗ್ಗಟ್ಟಿನಿಂದ ಹೋರಾಡಿಲ್ಲ.
ಇದ್ದುದರಲ್ಲಿ ದೇವೇಗೌಡ-ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಜತೆಗಿನ ಮೈತ್ರಿ ಹಳೆ ಮೈಸೂರು ಭಾಗದ ಕ್ಷೇತ್ರಗಳಲ್ಲಿ ಬಿಜೆಪಿಗೆ ಪ್ಲಸ್ ಆಗಿರುವುದೇನೋ ನಿಜ. ಆದರೆ ಮುಂಬೈ-ಕರ್ನಾಟಕ ಮತ್ತು ಹೈದ್ರಾಬಾದ್-ಕರ್ನಾಟಕದ ನೆಲೆಯಲ್ಲಿ ಪರಿಸ್ಥಿತಿ ಸರಳವಾಗಿಲ್ಲ. ಯಾಕೆಂದರೆ ಅಹಿಂದ ವರ್ಗಗಳ ಮತಗಳನ್ನು ಕಾಂಗ್ರೆಸ್ ಕ್ರೋಡೀಕರಿಸಿ ಯುದ್ಧ ಮಾಡಿದ ರೀತಿ ಡೆಡ್ಲಿಯಾಗಿದೆ. ಉಳಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಳಸಿರುವ ಅದೃಶ್ಯ ಅಸಗಳು ಯಾವ್ಯಾವ ರೀತಿ ಹೊಡೆತ ಕೊಡುತ್ತವೋ ಹೇಳಲು ಸಾಧ್ಯವಿಲ್ಲ. ಇದೇ ರೀತಿ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಒಂದು ಮಟ್ಟದಲ್ಲಿ ಫಲ ನೀಡಿದಂತೆ ಕಾಣುತ್ತಿದೆ.
ಹೀಗಾಗಿ ಏನೇ ಅಳೆದು ಸುರಿದು ನೋಡಿದರೂ ಕರ್ನಾಟಕದ ನೆಲೆಯಲ್ಲಿ ನಾವು ೧೬ರಿಂದ ೧೮ ಕ್ಷೇತ್ರಗಳಲ್ಲಿ ಗೆಲ್ಲಬಹುದು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ೧೦ರಿಂದ ೧೨ ಕ್ಷೇತ್ರಗಳಲ್ಲಿ ಗೆಲುವು ಗಳಿಸಬಹುದು. ಒಂದು ವೇಳೆ ಈ ಲೆಕ್ಕಾಚಾರವನ್ನು ಮೀರಿ ಬಿಜೆಪಿ ಇಪ್ಪತ್ತು ಪ್ಲಸ್ ಸೀಟು ಗಳಿಸಿದರೆ ಮೋದಿ ಅಲೆ ಮಾತ್ರವಲ್ಲ, ಯಡಿಯೂರಪ್ಪ ಬಲೆಯೂ ಯಶಸ್ವಿಯಾಗಿದೆ ಎಂದೇ ಅರ್ಥ. ಹಾಗಾಗದೆ ಕಾಂಗ್ರೆಸ್ ಪಕ್ಷವೇ ಹದಿನೈದು ಸೀಟುಗಳ ಗಡಿ ತಲುಪಿದರೆ
ಮೋದಿ ಅಲೆ, ಯಡಿಯೂರಪ್ಪ ಬಲೆ ಶಕ್ತಿ ಕಳೆದುಕೊಂಡಿದೆ ಅಂತಲೇ ಅರ್ಥ ಎಂಬುದು ಕಮಲ ಪಾಳಯದ ಮಾತು.
ಕುಮಾರಣ್ಣ ಹೇಗೆ ಕೇಂದ್ರ ಮಂತ್ರಿ ಆಗ್ತಾರೆ? ಇನ್ನು ದಿಲ್ಲಿ ಗದ್ದುಗೆಯ ಮೇಲೆ ಪುನಃ ಬಿಜೆಪಿ ಹತ್ತಿ ಕುಳಿತರೆ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ
ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಮಂತ್ರಿಯಾಗುವುದು ಬಹುತೇಕ ಪಕ್ಕಾ ಆಗಿದೆ. ಅಂದ ಹಾಗೆ, ಪ್ರಜ್ವಲ್ ರೇವಣ್ಣ ಪ್ರಕರಣದ ಕಾವು ತಾರಕಕ್ಕೇರಿದಾಗ, ಇನ್ನು ಕುಮಾರಸ್ವಾಮಿ ಅವರನ್ನು ಕೇಂದ್ರ ಮಂತ್ರಿಮಂಡಲಕ್ಕೆ ತೆಗೆದುಕೊಳ್ಳುವ ದುಸ್ಸಾಹಸಕ್ಕೆ ಬಿಜೆಪಿ ವರಿಷ್ಠರು ಕೈ ಹಾಕುವುದಿಲ್ಲ ಎಂಬ ಮಾತು
ಕೇಳಿಬಂದಿತ್ತು.
ಆದರೆ ಮೊನ್ನೆ ರಾಜ್ಯದ ಬಿಜೆಪಿ ಪಾಳಯಕ್ಕೆ ಬಂದ ಮಾಹಿತಿಯ ಪ್ರಕಾರ, ಮಂಡ್ಯದಲ್ಲಿ ಕುಮಾರಸ್ವಾಮಿ ಗೆದ್ದರೆ ಅವರು ಕೇಂದ್ರ ಮಂತ್ರಿಯಾಗುವುದು ಖಚಿತ. ಈ ವಿಷಯದಲ್ಲಿ ಮೋದಿ-ಅಮಿತ್ ಶಾ ತುಂಬಾ ಫಾರ್ಮ್ ಆಗಿದ್ದಾರಂತೆ. ಕಾರಣ? ಈ ಸಲ ಕರ್ನಾಟಕದ ನೆಲೆಯಲ್ಲಿ ಬಿಜೆಪಿಗೆ ನಿಜವಾದ ಶಕ್ತಿ ತುಂಬಿದ್ದು ಜೆಡಿಎಸ್. ಅದರಲ್ಲೂ ಮುಖ್ಯವಾಗಿ ಹಳೆ ಮೈಸೂರು ಭಾಗದ ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಜತೆಗಿನ ಮೈತ್ರಿ ಕಾರಣಕ್ಕಾಗಿಯೇ ಬಿಜೆಪಿ ದಡ ಸೇರಿದೆ ಎಂಬುದು ಮೋದಿ-ಅಮಿತ್ ಶಾ ಅವರಿಗಿರುವ ರಿಪೋರ್ಟು. ಮೈಸೂರು-ಕೊಡಗು ಕ್ಷೇತ್ರದಲ್ಲಿ ಜೆಡಿಎಸ್‌ನ ಸಾಲಿಡ್ ಸಪೋರ್ಟು ಯದುವೀರ್ ಒಡೆಯರ್ ಪಾಲಿಗೆ ಪ್ಲಸ್ ಆಗಿದೆ.
ಒಂದು ವೇಳೆ ಮೈತ್ರಿ ಇಲ್ಲದೆ ಹೋಗಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಮಿನ ಹೊಡೆತಕ್ಕೆ ಯದುವೀರ್ ಸೋಲುವ ಅಪಾಯವಿತ್ತು. ಇದೇ ರೀತಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ವಿ.ಸೋಮಣ್ಣ ಅವರ ಗೆಲುವಿಗಾಗಿ ಬಿಜೆಪಿಗಿಂತ ಜೆಡಿಎಸ್ ನಾಯಕರು ಹೆಚ್ಚಾಗಿ ಶ್ರಮಿಸಿದ್ದಾರೆ. ವಸ್ತುಸ್ಥಿತಿ ಎಂದರೆ ಸೋಮಣ್ಣ ಪರ ಹೋರಾಡಲು ತುಮಕೂರಿನ ಬಿಜೆಪಿ ಸೈನ್ಯ ತುಂಬ ಉತ್ಸುಕತೆ ತೋರಿಸಲಿಲ್ಲ. ಇಂಥ ಹೊತ್ತಿನಲ್ಲಿ ಸೋಮಣ್ಣ ತಮಗಿರುವ ತಂತ್ರಗಾರಿಕೆ ಮತ್ತು ಜೆಡಿಎಸ್ ಪಡೆಯ ವೀರಾವೇಶದ ಕಾರಣಕ್ಕಾಗಿ ಗೆಲುವಿನ ಹೊಸ್ತಿಲಿಗೆ ಬಂದು ನಿಂತಿದ್ದಾರೆ.
ಇದೇ ರೀತಿ ಚಿಕ್ಕಬಳ್ಳಾಪುರದಲ್ಲಿ ಡಾ.ಸುಧಾಕರ್ ಗೆಲುವಿನ ಆಸೆ ಇರಿಸಿಕೊಂಡಿದ್ದರೆ ಅದಕ್ಕೆ ಜೆಡಿಎಸ್ ಕಾರಣ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಸಿಎಂ ಡಿಕೆಶಿ ಸಹೋದರ ಡಿ.ಕೆ.ಸುರೇಶ್ ಅವರ ಪವರ್ ಫುಲ್ ಹೊಡೆತಕ್ಕೆ ಬಿಜೆಪಿ ಸಾಟಿಯೇ ಅಲ್ಲ. ಆದರೂ ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್ ಅಲ್ಲಿ ಗೆಲುವಿನ ನಂಬಿಕೆ ಇರಿಸಿಕೊಂಡಿದ್ದರೆ ಅದಕ್ಕೆ ಜೆಡಿಎಸ್ ಕಾರಣ. ಇದೇ ರೀತಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಜೆಡಿಎಸ್ ಬಲ ಸೇರದಿದ್ದರೆ ತೇಜಸ್ವಿ
ಸೂರ್ಯ ಅವರಿಗೆ ಕಷ್ಟವಾಗುತ್ತಿತ್ತು. ಹಾಗೆಯೇ ಚಿತ್ರದುರ್ಗ ದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಕ್ಯಾಂಡಿಡೇಟ್ ಗೋವಿಂದ ಕಾರಜೋಳ ಫೈಟು ಕೊಡಲು ಸಾಧ್ಯವಾಗಿದ್ದರೆ ಅದಕ್ಕೆ ಜೆಡಿಎಸ್ ಬಲ ಸೇರಿದ್ದೇ ಕಾರಣ. ಉಳಿದಂತೆ ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಫ್ರಂಟ್
ಲೈನಿನಲ್ಲಿ ಕಾಣಿಸುತ್ತಿದ್ದರೆ ಅದರಲ್ಲಿ ಜೆಡಿಎಸ್ ಪಾಲಿದೆ.
ಹೀಗೆ ನೋಡುತ್ತಾ ಹೋದರೆ ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವಿನ ಕನಸು ಮೂಡಲು ಜೆಡಿಎಸ್ ಕಾರಣವಾಗಿರುವುದರಿಂದ ಮೋದಿ-ಅಮಿತ್ ಶಾ ಜೋಡಿ ಖುಷಿಯಾಗಿದೆ. ಹೀಗಾಗಿ ದಿಲ್ಲಿ ಗದ್ದುಗೆಯ ಮೇಲೆ ಬಿಜೆಪಿ ಪುನಃ ಹತ್ತಿ ಕುಳಿತರೆ ಕುಮಾರಸ್ವಾಮಿ ಕೇಂದ್ರ ಮಂತ್ರಿಯಾಗುವುದು
ಪಕ್ಕಾ ಎಂಬುದು ರಾಜ್ಯ ಬಿಜೆಪಿ ಪಾಳಯಕ್ಕಿರುವ ಮಾಹಿತಿ.
ಸಿ.ಟಿ.ರವಿ ಎಂಟ್ರಿಯಾದ ಕತೆ
ಈ ಮಧ್ಯೆ ಬಿಜೆಪಿಯಿಂದ ಉಚ್ಚಾಟಿತರಾಗಿರುವ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರ ಜಾಗಕ್ಕೆ ಮತ್ತೊಬ್ಬ ಕುರುಬ ನಾಯಕನನ್ನು ಪ್ರತಿಷ್ಠಾಪಿ ಸಲು ಹೊರಟ ಯಡಿಯೂರಪ್ಪ ಟೀಮು, ಸಿ.ಟಿ.ರವಿ ಮೇಲೆದ್ದು ನಿಲ್ಲಲು ದಾರಿ ಮಾಡಿಕೊಟ್ಟಿದೆ. ಅಂದ ಹಾಗೆ, ಈಶ್ವರಪ್ಪ ಅವರ ಜಾಗಕ್ಕೆ ಕುರುಬ ಸಮುದಾಯದ ಮತ್ತೊಬ್ಬರನ್ನು ತರುವ ಯಡಿಯೂರಪ್ಪ ಆಸಕ್ತಿಗೆ ಒಂದು ಕಾರಣವಿದೆ. ಅದೆಂದರೆ ಸಂಘ ಪರಿವಾರದ ಕೆಲ ನಾಯಕರು ಈಶ್ವರಪ್ಪ ಅವರನ್ನು ಮರಳಿ ಬಿಜೆಪಿಗೆ ಕರೆತರಲು ಉತ್ಸುಕರಾಗಿದ್ದಾರೆ. ಎಷ್ಟೇ ಆದರೂ ಈಶ್ವರಪ್ಪ ಸಂಘನಿಷ್ಠರು.
ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಲು ದಶಕಗಳ ಕಾಲ ದುಡಿದವರು. ಯಾವುದೋ ಕೆಟ್ಟ ಗಳಿಗೆ. ತಮ್ಮ ಮಗ ಕಾಂತೇಶ್ ಅವರಿಗೆ ಸೀಟು ಸಿಗಲಿಲ್ಲ ಎಂಬ
ಕಾರಣಕ್ಕಾಗಿ ಅವರು ಬಂಡಾಯವೆದ್ದರು. ಯಡಿಯೂರಪ್ಪ ಪುತ್ರ ರಾಘವೇಂದ್ರ ಅವರ ವಿರುದ್ಧ ಸ್ಪರ್ಧಿಸಿದರು. ಹಾಗಂತ ಈಶ್ವರಪ್ಪ ಅವರೇನೂ ಬಿಜೆಪಿ ವಿರುದ್ಧ, ನರೇಂದ್ರ ಮೋದಿ ವಿರುದ್ಧ ಮಾತನಾಡಲಿಲ್ಲ. ಅವರ ಸಂಘನಿಷ್ಠೆ, ಪಕ್ಷನಿಷ್ಠೆ ಪ್ರಶ್ನಾತೀತ. ಹೀಗಾಗಿ ಅವರನ್ನು ಪಕ್ಷಕ್ಕೆ ಮರಳಿ ಕರೆತರೋಣ
ಎಂಬುದು ಪರಿವಾರದ ಕೆಲ ನಾಯಕರ ಆಸೆ.
ಯಾವಾಗ ಅವರ ಈ ಆಸೆಯ ವಿವರ ಕಿವಿಗೆ ಬಿತ್ತೋ ತಕ್ಷಣ ಜಾಗೃತರಾದ ಯಡಿಯೂರಪ್ಪ ಮತ್ತು ವಿಜಯೇಂದ್ರ ಅದಕ್ಕೆ ಅಡ್ಡಗಾಲು ಹಾಕಲು ರೆಡಿಯಾಗಿಬಿಟ್ಟರು. ಚುನಾವಣೆಯ ಸಂದರ್ಭದಲ್ಲಿ ತಮ್ಮನ್ನು ಯಗಾದಿಗಾ ಬೈಯಲೆಂದೇ ಈಶ್ವರಪ್ಪ ಅವರ ಬಂಡಾಯಕ್ಕೆ ಕುಮ್ಮಕ್ಕು ಕೊಡಲಾಯಿತು. ಈಗ ಅವರನ್ನು ಮರಳಿ ಪಕ್ಷಕ್ಕೆ ಕರೆತರುವ ಮೂಲಕ ತಮ್ಮ ವಿರುದ್ಧ ಮಾತನಾಡುವ ಶಕ್ತಿಯೊಂದನ್ನು ಮರುಪ್ರತಿಷ್ಠಾಪನೆ ಮಾಡುವುದು ವಿರೋಧಿಗಳ ಉದ್ದೇಶ ಎಂಬುದು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಸಿಟ್ಟು.
ಈ ಕಾರಣಕ್ಕಾಗಿ ಈಶ್ವರಪ್ಪ ಅವರ ಜಾಗಕ್ಕೆ ಪರ್ಯಾಯ ಕುರುಬ ನಾಯಕನನ್ನು ತರಲು ಮುಂದಾದ ಅವರು ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆಗೆ ಕುರುಬ ಸಮುದಾಯದ ನಾಗರಾಜ್ ಅವರನ್ನು ಕ್ಯಾಂಡಿಡೇಟ್ ಮಾಡಬೇಕು ಅಂತ ವರಿಷ್ಠರಿಗೆ ಪ್ರಪೋಸಲ್ಲು ಕಳಿಸಿದರು.
ಆದರೆ ಹೀಗವರು ಪ್ರಪೋಸಲ್ಲು ಕಳಿಸುತ್ತಿದ್ದಂತೆ ತಿರುಗಿ ಬಿದ್ದ ಬಿ.ಎಲ್.ಸಂತೋಷ್ ಅವರು ಸಿ.ಟಿ.ರವಿ ಪರ ನಿಂತಿದ್ದಲ್ಲದೆ, ಇವತ್ತು ಪಕ್ಷದಲ್ಲಿ ಭೈರತಿ ಬಸವರಾಜ್, ಎಂ.ಟಿ. ಬಿ.ನಾಗರಾಜ್, ರಘುನಾಥ ಮಲ್ಕಾಪುರೆ ಸೇರಿದಂತೆ ಹಲವು ಕುರುಬ ನಾಯಕರಿದ್ದಾರೆ.ಹೀಗಿರುವಾಗ ಈಶ್ವರಪ್ಪ ಅವರ ಜಾಗಕ್ಕೆ ಪರ್ಯಾಯ ನಾಯಕರನ್ನು ತರುವ ಅಗತ್ಯವೇ ಇಲ್ಲ. ಬದಲಿಗೆ ಪಕ್ಷಕ್ಕೆ ಇಮೇಜ್ ತಂದುಕೊಡುವವರು ಬೇಕು.
ಹೀಗಾಗಿ ಸಿ.ಟಿ.ರವಿ ಅವರಿಗೆ ಟಿಕೆಟ್ ಕೊಡಿ ಅಂತ ವರಿಷ್ಠರಿಗೆ ವಿವರಿಸಿ ಯಶಸ್ವಿಯಾಗಿದ್ದಾರೆ. ಅರ್ಥಾತ್, ಯಡಿಯೂರಪ್ಪ ಟೀಮು ಈಶ್ವರಪ್ಪ ಅವರ ಬಿಜೆಪಿ ರೀ- ಎಂಟ್ರಿಗೆ ಅಡ್ಡಗಾಲು ಇಡಲು ಹೊರಟರೆ, ಸಿ.ಟಿ.ರವಿ ಅವರಿಗೆ ಎಮ್ಮೆಲ್ಸಿ ಟಿಕೆಟ್ಟು ಕೊಡಿಸುವ ಮೂಲಕ ಯಡಿಯೂರಪ್ಪ ಟೀಮಿಗೇ ಸಂತೋಷ್ ತಿರುಗೇಟು ಕೊಟ್ಟಿದ್ದಾರೆ. ಅಂದ ಹಾಗೆ, ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಮೂರು ಸ್ಥಾನ ಗೆಲ್ಲುವ ಅವಕಾಶವಿದೆಯಾದರೂ, ಕುರುಬ
ಸಮುದಾಯದ ನಾಗರಾಜ್ ಅವರ ಹೆಸರನ್ನು ಯಡಿಯೂರಪ್ಪ ಗ್ಯಾಂಗು ಮುಂದಿಡುವುದರ ಒಳಗೆ ಇನ್ನಿಬ್ಬರು ಕ್ಯಾಂಡಿಡೇಟುಗಳ ಹೆಸರುಗಳನ್ನು ಬಿಜೆಪಿ ಹೈಕಮಾಂಡ್ ಅಂತಿಮಗೊಳಿಸಿತ್ತು. ಈ ಪೈಕಿ ರವಿಕುಮಾರ್ ಅವರು ಬಿ.ಎಲ್.ಸಂತೋಷ್ ಅವರ ಕ್ಯಾಂಡಿಡೇಟ್ ಅಗಿದ್ದರೆ, ಇನ್ನೊಬ್ಬ
ಕ್ಯಾಂಡಿಡೇಟ್ ಎಂ.ಜಿ.ಮುಳೆ ಅವರು ಕೇಂದ್ರ ಸಚಿವರಾಗಿದ್ದ ಬೀದರ್‌ನ ಭಗವಂತ ಖೂಬಾ ಅವರ ಕ್ಯಾಂಡಿಡೇಟ್.
ಮರಾಠರಾದ ಎಂ.ಜಿ.ಮುಳೆ ಈ ಹಿಂದೆ ಜೆಡಿಎಸ್‌ನಲ್ಲಿದ್ದವರು. ಲೋಕಸಭಾ ಚುನಾವಣೆಯಲ್ಲಿ ಮರಾಠರ ಮತಗಳನ್ನು ಅವರು ತಮಗೆ ಕೊಡಿಸಿದ್ದಾರೆ. ಹೀಗಾಗಿ ಅವರನ್ನು ಎಮ್ಮೆಲ್ಸಿ ಮಾಡಿ ಅಂತ ಖೂಬಾ ವರಿಷ್ಠರಿಗೆ ಮನವಿ ಮಾಡಿ ಯಶಸ್ವಿಯಾಗಿದ್ದರು. ಈ ಮಧ್ಯೆ ಯಡಿಯೂರಪ್ಪ ಟೀಮು ನಾಗರಾಜ್ ಅವರನ್ನು ಹೆಸರಿಸಿದರೆ ಸಂತೋಷ್ ರಪ್ಪಂತ ಮೇಲೆದ್ದು ಸಿ.ಟಿ.ರವಿ ಕೈ ಹಿಡಿದರು. ಖರ್ಗೆ ಮಾತಿಗೆ ಪವರ್ ಜಾಸ್ತಿ ಖರ್ಗೆ ಮಾತಿಗೆ ಪವರ್ ಜಾಸ್ತಿ ಇನ್ನು ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಏಳು ಮಂದಿಯ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೂಚಿಸಿದ ಮೂರು ಮಂದಿಗೆ ಟಿಕೆಟ್ ಕೊಡಲಾಗಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ್, ಜಯದೇವ ಗುತ್ತೇದಾರ್ ಮತ್ತು ಬಿಲ್ಕಿಸ್ ಬಾನು ನೇರವಾಗಿ ಖರ್ಗೆ ಸೂಚಿಸಿದ ಹೆಸರುಗಳು. ಇನ್ನು ಸಿದ್ದರಾ ಮಯ್ಯ ಅವರ ಕಾರಣಕ್ಕಾಗಿ ಯತೀಂದ್ರ ಮತ್ತು ಐವಾನ್ ಡಿಸೋಜಾ ಟಿಕೆಟ್ ಪಡೆದರೆ, ರಾಹುಲ್ ಗಾಂಧಿ ಶಿಫಾರಸಿನ ಮೇಲೆ ಸಚಿವ ಭೋಸರಾಜು ಟಿಕೆಟ್ ಪಡೆದಿದ್ದಾರೆ. ಇನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಎರಡು ಸಲ ಎಮ್ಮೆಲ್ಸಿಯಾಗಿದ್ದಾರೆ. ಈಗ ಪುನಃ ಅವರಿಗೇಕೆ ಟಿಕೆಟ್ಟು? ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆಗಿರಲು ಎಮ್ಮೆಲ್ಸಿ ಆಗಿರಬೇಕಿಲ್ಲ. ಹೀಗಾಗಿ ವಿನಯ್ ಕಾರ್ತಿಕ್ ಅವರಿಗೆ ಟಿಕೆಟ್ ಕೊಡಬೇಕು ಎಂಬ ಕೂಗು ಕೇಳಿಸಿದೆಯಾದರೂ ಈ ಟೈಮಿಗೆ ಸರಿಯಾಗಿ ಇಂಧನ ಸಚಿವ ಕೆ.ಜೆ.ಜಾರ್ಜ್ ಎಂಟ್ರಿಯಾಗಿ ಗೋವಿಂದರಾಜು ಪರವಾಗಿ ಲಾಬಿ ಮಾಡಿದ್ದಾರೆ. ಯಾವಾಗ ಸಿದ್ದರಾಮಯ್ಯ ಅವರ ಜತೆ ಜಾರ್ಜ್ ಒತ್ತಾಸೆ ಸೇರಿತೋ, ಆಗ ವರಿಷ್ಠರು ಗೋವಿಂದರಾಜು ಹೆಸರನ್ನು ಕ್ಲಿಯರ್ ಮಾಡಿದ್ದಾರೆ.
ಅಂದ ಹಾಗೆ, ಮುಸ್ಲಿಮರ ಕೋಟಾದಲ್ಲಿ ಇಸ್ಮಾಯಿಲ್ ತಮಟಗಾರ್ ಅವರಿಗೆ ಟಿಕೆಟ್ ಕೊಡುವಂತೆ ಸಚಿವ ಜಮೀರ್ ಅಹ್ಮದ್ ಪಟ್ಟು ಹಿಡಿದಿದ್ದರೂ ‘ನೋ, ನೋ, ಅವರ ಬದಲಿಗೆ ಬಿಲ್ಕಿಸ್ ಬಾನು ಅವರನ್ನು ಎಮ್ಮೆಲ್ಸಿ ಮಾಡಿದರೆ ಒಂದೇ ಕಲ್ಲಿಗೆ ಮೂರು ಹಕ್ಕಿ ಹೊಡೆದಂತಾಗುತ್ತದೆ. ಮೊದಲನೆಯದಾಗಿ
ಅವರು ಮಹಿಳೆ, ಎರಡನೆಯದಾಗಿ ಮಲೆನಾಡಿನವರು, ಮೂರನೆಯದಾಗಿ ಮುಸ್ಲಿಂ’ ಅಂತ ಖರ್ಗೆ ವಿವರಿಸಿದಾಗ ಅದಕ್ಕೆ ಯಾರೂ ಎದುರಾಡಲಿಲ್ಲವಂತೆ.