ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
ಮೊನ್ನೆ ಮೂಡಿಗೆರೆಯಿಂದ ಬರುವಾಗ, ಹಾಸನ ಹೊರವಲಯದಲ್ಲಿರುವ ಹೊಯ್ಸಳ ವಿಲೇಜ್ ರೆಸಾರ್ಟ್‌ಗೆ ಉಪಾಹಾರಕ್ಕೆಂದು
ಹೋಗಿದ್ದಾಗ, ಕಣ್ಣ ಮುಂದೇ ನಡೆದ ಪ್ರಸಂಗವಿದು. ನಮ್ಮ ಟೇಬಲ್ ಪಕ್ಕ ಮೂವರು ಬಂದು ಕುಳಿತರು. ವೇಟರ್ ಬಂದ.
‘ಏನೇನಿದೆ ತಿಂಡಿ?’ ಎಂದು ಅವರು ಕೇಳಿದರು. ‘ಇಲ್ಲಿ ಮೂವತ್ತೆರಡು ವಿಧದ ತಿಂಡಿಗಳಿವೆ. ನೀವೇ ಆಯ್ದು (ಬಫೆ) ಸೇವಿಸ ಬಹುದು. ಒಬ್ಬರಿಗೆ 450 ರೂಪಾಯಿ ಪ್ಲಸ್ ಟ್ಯಾಕ್ಸ್’ ಎಂದ ವೇಟರ್. ಅದಕ್ಕೆ ಅವರು ಹೇಳಿದರು – ‘ಅಬ್ಬಬ್ಬಾ.. ಬೆಳಗ್ಗೆ ಬೆಳಗ್ಗೆ ಅಷ್ಟೆ ತಿನ್ನಲು ಆಗುವುದಿಲ್ಲ. ನಾವು ಬರಗಾಲ ದೇಶದಿಂದ ಬಂದಿಲ್ಲ. ನಮಗೆ ಎರಡು ಇಡ್ಲಿ ಮತ್ತು ಒಂದು ವಡಾ ಸಾಕು.
ಅಷ್ಟೇ ಕೊಡಿ.’
‘ಸಾರಿ ಸರ್, ಇಲ್ಲಿ ಬಫೆ ಸರ್ವೀಸ್ ಮಾತ್ರ. ಬೇಕಾದ್ರೆ ಎರಡು ಇಡ್ಲಿ ಮತ್ತು ಒಂದು ವಡಾವನ್ನೇ ತಿನ್ನಿ. ಆದರೆ ಒಬ್ಬರಿಗೆ 450
ರುಪಾಯಿ ಪ್ಲಸ್ ಟ್ಯಾಕ್ಸ್’ ಎಂದ. ಅದಕ್ಕೆ ಅವರು ಹೇಳಿದರು – ‘ಅರಿ, ಎರಡು ಇಡ್ಲಿ ಒಂದು ವಡಾಕ್ಕೆ ಐನೂರು ರುಪಾಯಿ ಛಾರ್ಜ್ ಮಾಡೋದು ಸರೀನಾ? ಅದು ಯಾವ ನ್ಯಾಯ?’ ಆದರೆ ಅದಕ್ಕೆ ವೇಟರ್, ‘ಇದು ಇಲ್ಲಿನ ನಿಯಮ.
ತಿನ್ನೋದಾದ್ರೆ ತಿನ್ನಬಹುದು.. ಇಂದ್ರೆ …’ ಎಂದು ಹೇಳಿದ. ಅಷ್ಟಕ್ಕೇ ಆ ಮೂವರು ಬೇಸರದಿಂದ ಎದ್ದು ಹೊರಟರು. ಈಗಷ್ಟೇ ಆಗಮಿಸಿದ ಕಸ್ಟಮರ್ಸ್ ಎದ್ದು ಹೋಗುತ್ತಿರುವುದನ್ನು ಗಮನಿಸಿದ ರೆಸಾರ್ಟಿನ ಮಾಲೀಕ ಧಾವಿಸಿದ. ‘ಏನಾಯ್ತು?’ ಎಂದು ಕೇಳಿದ. ಆ ಮೂವರು ನಡೆದುದನ್ನು ಹೇಳಿದರು. ಆಗ ಮಾಲೀಕ, ವೇಟರ್ ಹೇಳಿದ್ದನ್ನು ಸಮರ್ಥಿಸಿಕೊಂಡ.
ಅದಕ್ಕೆ ಆ ಮೂವರಲ್ಲಿ ಒಬ್ಬ ಖಡಾಖಡಿ ಹೇಳಿದ – ‘ಬೆಳಗ್ಗೆ ಯಾರು ಮೂವತ್ತೆರಡು ಐಟಮ್ಮುಗಳನ್ನು ಸೇವಿಸುತ್ತಾರೆ? ಅಷ್ಟಕ್ಕೂ ಅವೆಲ್ಲವನ್ನೂ ಸೇವಿಸಬೇಕೆಂದು ನೀವೇಕೆ ಬಯಸುತ್ತೀರಿ? ಅಷ್ಟು ಐಟಮ್ ಸೇವಿಸದಿದ್ದರೆ, ಸೇವಿಸದ ಐಟಮ್ಮುಗಳಿಗೆ ಯಾಕೆ ಹಣ ಪೀಕಿಸುತ್ತೀರಿ? ಸರಿ, ತಿನ್ನುವವರು ತಿನ್ನಲಿ, ಆದರೆ ನಮಗೆ ಬೇಕಾಗಿದ್ದು ಕೇವಲ ಎರಡು ಇಡ್ಲಿ ಮತ್ತು ಒಂದು ವಡಾ. ಅದಕ್ಕಾಗಿ ಉಳಿದ ಮೂವತ್ತು ಐಟಮ್ಮುಗಳನ್ನು ನಾವ್ಯಾಕೆ ಸೇವಿಸಬೇಕು? ಸೇವಿಸದಿದ್ದರೂ ಒಬ್ಬರಿಗೆ 45 ರುಪಾಯಿ ಪ್ಲಸ್ ಟ್ಯಾಕ್ಸ್ ಕೊಡಿ ಅಂತೀರಾ. ಇದ್ಯಾವ ನ್ಯಾಯ? ಇದು ಗ್ರಾಹಕ ಸ್ನೇಹಿ ಅಲ್ಲ.
ಅಲ್ಲದೇ ನಿಮ್ಮಲ್ಲಿ ಅಲಾ ಕಾರ್ಟ್ (ಟೇಬಲ್ಲಿಗೆ ವೇಟರ್ ಬಂದು ಸರ್ವ್ ಮಾಡುವುದು) ಸೇವೆ ಇಲ್ಲ ಎಂದು ಹೇಳುತ್ತೀರಿ. ನೀವು ಹೇಳಿದ್ದನ್ನು ಗ್ರಾಹಕ ಯಾಕೆ ಸೇವಿಸಬೇಕು? ಅವನಿಗೆ ಬೇಕಾಗಿದ್ದನ್ನು ನೀವೇಕೆ ಕೊಡುವುದಿಲ್ಲ? ನಿಮಗೆ ಗೊತ್ತು, ಯಾರೂ ಮೂವತ್ತೆರಡು ಐಟಮ್ ಸೇವಿಸುವುದಿಲ್ಲವೆಂದು. ಅದಕ್ಕಾಗಿಯೇ ಅಷ್ಟು ಹೆಚ್ಚು ಐಟಮ್ ಮತ್ತು ಹೆಚ್ಚಿನ ಬೆಲೆ ಇಟ್ಟಿದ್ದೀರಿ. ಇದು
ಹಗಲು ದರೋಡೆ ಮತ್ತು ಗ್ರಾಹಕ ವಿರೋಧಿ ನಡೆ. ಇದು ನಿಮಗೆ ಶೋಭೆ ಅಲ್ಲ.’
ಮಾಲೀಕನ ಬಳಿ ಉತ್ತರವಿರಲಿಲ್ಲ. ‘ಇದು ನಮ್ಮ ನಿಯಮ. ಬೇಕಾದವರು ಸೇವಿಸುತ್ತಾರೆ. ಇಷ್ಟವಿಲ್ಲದವರು ಹೋಗಲಿ. ನಮಗೆ ಬೇಸರವಿಲ್ಲ’ ಎಂದು ಹೇಳಿದ. ಇದು ವ್ಯಾಪಾರಕ್ಕೆ ಕುಳಿತವ ಹೇಳುವ ಮಾತಲ್ಲ. ಹೊಟ್ಟೆ ತುಂಬಿದವ ಅಥವಾ ದುಡ್ಡು ಹೊಡ ಕೊಂಡವ (‘ಹುಡ್ಕೋ’ ಅಲ್ಲ) ಹೇಳುವ ಮಾತು ಎಂದೆನಿಸಿತು. ಹಣ ಕೊಡುವವನಿಗೆ ಎಂದೂ ಬೇಸರವಾಗದಂತೆ ನೋಡಿಕೊಳ್ಳಬೇಕು.
ಗ್ರಾಹಕ ನಗುಮೊಗದಿಂದ ಹಣ ಕೊಡಬೇಕು. ಬೇಸರಿಸಿಕೊಂಡು ಕೊಟ್ಟ ಹಣ ಕೈಗೆ ಹತ್ತುವುದಿಲ್ಲ. ಹೋಟೆಲ್ಲಿಗೆ ಹೊಟ್ಟೆ ದುಂಬಿ ದವ ಬರುವುದಿಲ್ಲ. ಹಸಿದು ಹೊಟ್ಟೆಯಲ್ಲಿ ಬಂದವರನ್ನು ಹಾಗೆ ಕಳಿಸಬಾರದು. ಗ್ರಾಹಕನನ್ನು ಸಂತೃಪ್ತಗೊಳಿಸದ ಯಾವ ಉದ್ಯಮವೂ ಬಹಳ ದಿನ ನಡೆಯುವುದಿಲ್ಲ. ಲಾಭ ಮಾಡುವುದು ಉದ್ದೇಶವಾದರೂ, ಗ್ರಾಹಕನನ್ನು ಸಂತೃಪ್ತ ಗೊಳಿಸುವುದು ಪರಮೋದ್ದೇಶವಾಗಿರಬೇಕು.
ಹಸಿವಿನಲ್ಲಿ ಬರುವ ಗ್ರಾಹಕ ಬೇರೆ ಉಪಾಯ ಕಾಣದೇ ತನಗಿಷ್ಟವಿಲ್ಲದಿದ್ದರೂ, ಹಣ ಕೊಟ್ಟ ಕಿಚ್ಚಿಗೆ ಹತ್ತಾರು ಐಟಮ್ಮುಗಳನ್ನು ಸೇವಿಸಿ, ಹೊಟ್ಟೆ ಭಾರ ಮಾಡಿಕೊಂಡು ನಂತರ ಪರಿತಪಿಸಬಹುದು. ಇನ್ನು ರೆಸಾರ್ಟಿನಲ್ಲಿ ವಾಸಿಸುವವರಿಗೆ ಅಷ್ಟೊಂದು ವೆರೈಟಿಗಳು ಇಷ್ಟವಾಗಬಹುದು. ಕಾರಣ ಅವರು ವಿಶ್ರಾಂತಿ ತೆಗೆದುಕೊಳ್ಳಲೆಂದೇ ಬಂದಿರುತ್ತಾರೆ. ಆದರೆ ಹೊರಗಿನಿಂದ ಬರು ವವರಿಗೆ, ಅತಿಯಾದ ಸೇವನೆ ತೀವ್ರ ಕಿರಿಕಿರಿಯಾಗಬಹುದು. ಅದೇನೇ ಇರಲಿ, ಗ್ರಾಹಕನಿಗೆ ಆಯ್ಕೆಗಳನ್ನು ಕೊಡಬೇಕು. ಅವನಿಗೆ ಆಯ್ಕೆಗಳನ್ನು ಕೊಡದೇ, ಕೈ ಕಟ್ಟಿಹಾಕಬಾರದು. ಅದು ಒಳ್ಳೆಯ ಬಿಜಿನೆಸ್ ಮಾದರಿಯಲ್ಲ.
ಇದನ್ನು ಅರ್ಥ ಮಾಡಿಕೊಳ್ಳದವರು ಎಲ್ಲಾ ಇದ್ದೂ ಸೋಲುತ್ತಾರೆ. ಒಮ್ಮೆ ವಾಪಸ್ ಹೋದ ಗ್ರಾಹಕನನ್ನು ಮರಳಿ ಬರುವಂತೆ ಮಾಡುವುದು ಕಷ್ಟ. ಅಷ್ಟೂ ಸಾಲದೆಂಬಂತೆ ಆತ ಸಂದರ್ಭ ಸಿಕ್ಕಾಗ ತನ್ನ ಅನುಭವವನ್ನು ಹತ್ತಾರು ಜನರ ಮುಂದೆ ಹೇಳಿ ಹಾನಿ ಮಾಡುತ್ತಾನೆ. If you don’t appreciate your customers, someone else will.. ಎಂಬ ಮಾತನ್ನು ಬಿಜಿನೆಸ್ ಮಾಡುವ ಪ್ರತಿಯೊಬ್ಬರೂ ಅರಿತಿರಲೇಬೇಕಾದ ಮೂಲಮಂತ್ರ.
ಗ್ರಾಹಕ ಸೇವೆ ಅಥವಾ ಸೇವೆಯಲ್ಲಿ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಒಂದು ಮಾತಿದೆ Quality in a service or product is not what you put into it. It is what the customer gets out of it.. ಇದು ಪ್ರತಿ ವ್ಯವಹಾರದಲ್ಲೂ ಅಕ್ಷರಶಃ ಸತ್ಯ. ತಿಂಡಿ ತಿನ್ನದೇ ಎದ್ದು ಹೋದ ಆ ಮೂವರ ನಡೆ ಇಷ್ಟವಾಯಿತು. ಒಂದು ಒಳ್ಳೆಯ ಮ್ಯಾನೇಜಮೆಂಟ್ ಪಾಠ ಕೇಳಿದಂತೆ ಭಾಸವಾಯಿತು.
ಹೊಸ ವರ್ಷಕ್ಕೆ ಹೀಗೊಂದು ಉಡುಗೊರೆ!
ಖ್ಯಾತ ಪತ್ರಕರ್ತ ಮತ್ತು ಟಿವಿ ನಿರೂಪಕ ರಾಜದೀಪ ಸರದೇಸಾಯಿ ಹೊಸ ವರ್ಷದ ಎರಡನೆಯ ದಿನ ಒಂದು ಟ್ವೀಟ್ ಮಾಡಿದ್ದರು – ‘ಹೊಸ ವರ್ಷಕ್ಕೆ ನಿಮ್ಮ ಮಗಳು ಈ ಟೀ-ಶರ್ಟನ್ನು ತೆಗೆಸಿಕೊಟ್ಟರೆ, ಅಷ್ಟಕ್ಕೂ ನೀವು ಹೇಳಬಹುದಾದು ದೇನೆಂದರೆ, ಭಗವಂತ, ಹೆಣ್ಣುಮಕ್ಕಳಿಗೆ ಒಳ್ಳೆಯದನ್ನು ಮಾಡು. ಎಲ್ಲರಿಗೆ 2021 ಅದ್ಭುತವಾದು ದನ್ನು ಮಾಡಲಿ. ಇದು ಬರೀ ಆರಂಭವಷ್ಟೇ.’
ಈ ಟ್ವೀಟ್ ಜತೆಗೆ ತಮ್ಮ ಮಗಳು ಉಡುಗೊರೆಯಾಗಿ ಕೊಟ್ಟ ಆ ಕಪ್ಪು ಬಣ್ಣದ ಟೀ-ಶರ್ಟ್ ಹಿಡಿದಿರುವ ಫೋಟೋವನ್ನು ಸಹ
ಪೋಸ್ಟ್ ಮಾಡಿದ್ದರು. ಅದರ ಮೇಲೆ ಬರೆದಿತ್ತು – This T-Shirt is white – Indian Media ಇದಕ್ಕೆ ಎರಡು ಸಾವಿರಕ್ಕೂ ಅಧಿಕ ಮಂದಿ ಪ್ರತಿಕ್ರಿಯಿಸಿದ್ದರು.
ಆ ಪೈಕಿ ಆಯ್ದ ಹತ್ತು ಟ್ವೀಟ್ ಗಳು: ಟೀ-ಶರ್ಟ್ ಮೇಲೆ ಬರೆದ ಅಕ್ಷರಗಳು ಹಿಂದಿಯಲ್ಲಿವೆ. ತಮ್ಮ ತಂದೆ ಹೇಗೆ ಎಂಬುದು
ಅವರ ಮಗಳಿಗೆ ಚೆನ್ನಾಗಿ ಗೊತ್ತಿರುತ್ತದೆ. ಅವಳಿಗೆ ತನ್ನ ಅಪ್ಪ ಭಾರತದ ಮಾಧ್ಯಮದ ಒಂದು ಭಾಗ ಎಂಬುದು ಗೊತ್ತಿದ್ದೇ ಸರಿಯಾದ ಉಡುಗೊರೆ ಕೊಟ್ಟಿದ್ದಾಳೆ.
ಕೆಲವರು ತಮಾಷೆಗಾದರೂ ಸತ್ಯ ನುಡಿದಾಗ ನಾನು ಜೋರಾಗಿ ಅಳುತ್ತೇನೆ. ಇದೂ ಸಹ ಅಂಥ ಒಂದು ಸಂದರ್ಭ. ನಿಮ್ಮ ಮಗಳು ನಿಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಳೆ. ಇದು ಟೀ-ಶರ್ಟ್ ಅಲ್ಲ, ಹ್ಯಾಟ್ ! ತಂದೆಯನ್ನು ಇಷ್ಟು ಸರಿಯಾಗಿ
ಅರ್ಥ ಮಾಡಿಕೊಂಡ ಮಗಳನ್ನು ಪಡೆದ ನೀವೇ ಧನ್ಯರು. ದೇವ್ರೇ.. ನಿಮ್ಮ ಮಗಳೂ ನಿಮ್ಮನ್ನು ಟ್ರೋಲ್ ಮಾಡುತ್ತಿದ್ದಾಳಲ್ಲ..
ಅದು ಕಪ್ಪು ಬಣ್ಣದ್ದಲ್ಲ, ಕೇಸರಿ!
ಟೀ-ಶರ್ಟ್ ಮೇಲೆ ಬರೆದಿದ್ದರಲ್ಲ ಒಂದು ತಪ್ಪಿದೆ, ‘ಇಂಡಿಯನ್ ಮೀಡಿಯಾ’ ಎಂದು ಬರೆಯುವ ಬದಲು ‘ಇಂಡಿಯಾ ಟುಡೇ’ ಎಂದು ಬರೆದಿರಬೇಕಿತ್ತು.
ಯಾರು ಬುದ್ಧಿವಂತರು?
ಸುಮಾರು ಐವತ್ತು ವರ್ಷಗಳ ಹಿಂದಿನ ರೀಡರ್ಸ್ ಡೈಜೆಸ್ಟ್ ಮಾಸಿಕದಲ್ಲಿ, ಬಹಳ ಹಿಂದೆ ಓದಿದ ಒಂದು ಪ್ರಸಂಗವಿದು.
ಮುಸ್ಸೋಲಿನಿ ಅಧಿಕಾರಕೆ ಬಂದ ಕೆಲ ದಿನಗಳಲ್ಲಿ ಅಮೆರಿಕದ ಶ್ರೀಮಂತ ಆರ್ಟ್ ಸಂಗ್ರಹಕಾರ ಇಟಲಿಗೆ ಬಂದು, ಹದಿನಾರನೇ
ಶತಮಾನದ ಪ್ರಸಿದ್ಧ ಕಲಾವಿದ ಟಿಟಿಯನ್‌ನ ಬೃಹತ್ ವರ್ಣಚಿತ್ರವನ್ನು ಭಾರಿ ಬೆಲೆಗೆ ಖರೀದಿಸಿದ. ಅದನ್ನು ಅಮೆರಿಕಕ್ಕೆ ತೆಗೆದುಕೊಂಡು ಹೋಗುವುದು ಅವನ ಉದ್ದೇಶವಾಗಿತ್ತು.
ಆದರೆ ಅದನ್ನು ಇಟಲಿಯಿಂದ ಹೊರಗೆ ತೆಗೆದುಕೊಂಡು ಹೋಗಲು ಮುಸ್ಸೋಲಿನಿ ಸರಕಾರ ಅನುಮತಿ ನೀಡಲಿಕ್ಕಿಲ್ಲ ಎಂದು ಅವನಿಗೆ ಕೆಲವರು ಹೇಳಿದರು. ಆಗ ಆ ಅಮೆರಿಕನ್ ಕಲಾ ಸಂಗ್ರಹಕಾರನಿಗೆ ಅತೀವ ಬೇಸರವಾಯಿತು. ಇದನ್ನು ತನ್ನ ದೇಶಕ್ಕೆ ತೆಗೆದುಕೊಂಡು ಹೋಗುವುದು ಹೇಗೆ ಎಂದು ಆತ ಒಬ್ಬ ಸಲಹೆಗಾರನನ್ನು ಕೇಳಿದ.
ಅದಕ್ಕೆ ಆತ ಒಂದು ಸಲಹೆ ನೀಡಿದ – ‘ಒಂದು ಕೆಲಸ ಮಾಡಿ, ಟಿಟಿಯನ್‌ನ ವರ್ಣಚಿತ್ರದ ಮೇಲೆ ಮುಸ್ಸೋಲಿನಿ ವರ್ಣಚಿತ್ರ ವನ್ನು ಬಿಡಿಸುವಂತೆ ಸ್ಥಳೀಯ ಕಲಾವಿದನಿಗೆ ಹೇಳಿ. ಆತ ಅದನ್ನು ಬಿಡಿಸಿಕೊಡುತ್ತಾನೆ. ಮುಸ್ಸೋಲಿನಿ ಆಡಳಿತದ
ಅಧಿಕಾರಿಗಳು ತಮ್ಮ ನಾಯಕನ ಚಿತ್ರವನ್ನು ಅಮೆರಿಕಕ್ಕೆ ತೆಗೆದುಕೊಂಡು ಹೋಗುವವನು ಮುಸ್ಸೋಲಿನಿ ಅಭಿಮಾನಿಯಿರ ಬೇಕೆಂದು, ತಕ್ಷಣ ಸಂತೋಷದಿಂದ ಅನುಮತಿ ನೀಡುತ್ತಾರೆ.
ಅಮೆರಿಕಕ್ಕೆ ಹೋದ ನಂತರ, ಮೇಲಿನ ಪೇಂಟಿಂಗ್ ನ್ನು ಕರೆಸಿ ತೆಗೆದುಹಾಕಿ.’ ಅಮೆರಿಕದ ಕಲಾ ಸಂಗ್ರಹಕಾರನಿಗೆ ಇದು ಅದ್ಭುತ ಐಡಿಯಾ ಎಂದೆನಿಸಿತು. ಆತ ತಕ್ಷಣ ಸ್ಥಳೀಯ ಕಲಾಕಾರನನ್ನು ಕರೆಯಿಸಿ, ಟಿಟಿಯನ್ ಪೇಂಟಿಂಗ್ ಮೇಲೆ ಮುಸ್ಸೋಲಿನಿ ಪೇಂಟಿಂಗ್ ಬಿಡಿಸಿಕೊಡುವಂತೆ ಹೇಳಿದ. ಆತ ಬಿಡಿಸಿಕೊಟ್ಟ. ಮುಂದೆ ಆತ ಅಂದುಕೊಂಡಂತೆ ಆಯಿತು. ಯಾವ ತೊಂದರೆಯೂ ಇಲ್ಲದೇ ಪೇಂಟಿಂಗ್‌ನ್ನು ಸುಲಭವಾಗಿ ಅಮೆರಿಕಕ್ಕೆ ತೆಗೆದುಕೊಂಡು ಬಂದ.
ಬಂದವನೇ ಆ ಪೇಂಟಿಂಗ್ ಮೇಲೆ ಬಿಡಿಸಿದ ಮುಸ್ಸೋಲಿನಿ ಚಿತ್ರವನ್ನು ಕೆರೆಸಿ ಹಾಕುವಂತೆ ನುರಿತ ಪೇಂಟರ್‌ಗೆ ಹೇಳಿದ. ಆತ
ಹರಿತವಾದ ಚಾಕುವಿನಿಂದ ಬಹಳ ನಾಜೂಕಿನಿಂದ ಮೇಲಿನ ಪದರ ಕೆರೆಸಿ ಹಾಕಿದ. ಟಿಟಿಯನ್‌ನ ಅದ್ಭುತ ಪೇಂಟಿಂಗ್ ಎದ್ದು
ಕಂಡಿತು. ಅಷ್ಟಕ್ಕೇ ಸುಮ್ಮನಾಗದ ಪೇಂಟರ್, ‘ಸರ್, ಈ ಟಿಟಿಯನ್ ಪೇಂಟಿಂಗ್ ಕೆಳಗೆ ಬೇರೆ ಇನ್ನೊಂದು ಪೇಂಟಿಂಗ್ ಇರು ವಂತಿದೆ’ ಎಂದು ಹೇಳಿದ. ಕಲಾ ಸಂಗ್ರಹಕಾರನಿಗೆ ದಿಗಿಲಾಯಿತು. ಆ ಪೇಂಟರ್, ಟಿಟಿಯನ್‌ನ ಪೇಂಟಿಂಗ್‌ನ್ನು ಕೆರೆಸು ತ್ತಿದ್ದಂತೆ ಮತ್ತೊಂದು ಚಿತ್ರ ಎದ್ದು ಬಂದಿತು. ನೋಡಿದರೆ ಮುಸ್ಸೋಲಿನಿ ಪೇಂಟಿಂಗ್ !
ಖುಲಾಸೆ ಅಂದ್ರೆ ಏನರ್ಥ?
ಬೆಳಗ್ಗೆ ಪತ್ರಿಕೆ ಓದುವಾಗ, ಮಂತ್ರಿ ಖುಷಿಯಿಂದ ಬೀಗುತ್ತಿದ್ದ. ತನ್ನ ಹತ್ತಿರದ ಸಂಬಂಧಿಕರಿಗೆ ಲಾಭ ಮಾಡಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ತೀರ್ಪು ನೀಡಿತ್ತು. ಅದರಂತೆ, ಮಂತ್ರಿಯನ್ನು ಸ್ವಜನಪಕ್ಷಪಾತ ಆಪಾದನೆಯಿಂದ ಖುಲಾಸೆ ಗೊಳಿಸ ಲಾಗಿತ್ತು. ಮುಖಪುಟದಲ್ಲಿ ಪ್ರಕಟವಾದ ಈ ಸುದ್ದಿ ನೋಡಿ ಮಂತ್ರಿಗೆ ಅತೀವ ಆನಂದವಾಗಿತ್ತು.
ಸದಾ ಗಂಭೀರವಾದನನಾಗಿ ಪತ್ರಿಕೆ ಓದುವ ಅಪ್ಪ, ಇಂದು ನಗುತ್ತಾ ಖುಷಿಯಲ್ಲಿರುವುದನ್ನು ಕಂಡು ಮಗನಿಗೆ ತುಸು ಆಶ್ಚರ್ಯ ವಾಯಿತು. ‘ಅಪ್ಪ, ನೀನು ಖುಷಿಪಡುವಂಥ ವಿಷಯ ಪತ್ರಿಕೆಯಲ್ಲಿ ಪ್ರಕಟವಾಗಿದೆಯಾ? ಅದು ಯಾವ ಸುದ್ದಿ?’ ಎಂದು ಮಗ ಕೇಳಿದ. ‘ನಾನು ಎಲ್ಲಾ ಆರೋಪಗಳಿಂದ ಖುಲಾಸೆ ಆಗಿದ್ದೇನೆ ಗೊತ್ತಾ? ಇದಕ್ಕಿಂತ ಖುಷಿ ಮತ್ತೇನಿದೆ?’ ಎಂದು ಮಂತ್ರಿ ಮಗನಿಗೆ ಹೇಳಿದ.
ಮಗನಿಗೆ ಖುಲಾಸೆ ಪದದ ಅರ್ಥ ಗೊತ್ತಾಗಲಿಲ್ಲ. ‘ಅಪ್ಪ, ಖುಲಾಸೆ ಅಂದ್ರೆ ಏನು?’ ಕೇಳಿದ. ‘ಅಷ್ಟೂ ಗೊತ್ತಾಗುವುದಿಲ್ಲವಾ? ಖುಲಾಸೆ ಅಂದ್ರೆ ನಾನು ಏನೂ ಮಾಡಿಲ್ಲ ಅಂತ ಅರ್ಥ’ ಎಂದ ಮಂತ್ರಿ. ಅದಕ್ಕೆ ಮಗ ಹೇಳಿದ : ‘ಈ ಮಾತನ್ನು ನಮ್ಮ ಕಾಲೇಜಿ ನಲ್ಲೂ ಎಲ್ಲರೂ ಹೇಳ್ತಾರೆ. ನಿನ್ನಪ್ಪ ಏನೂ ಮಾಡಲ್ಲ ಅಂತ’ ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ..
ಕೆಲ ದಿನಗಳ ಹಿಂದೆ, ಯೋಗಿ ದುರ್ಲಭಜೀ ಹೇಳಿದ ಒಂದು ತಮಾಷೆ ಪ್ರಸಂಗ. ಮೊಬೈಲ್ ಫೋನ್ ಇಲ್ಲದ ಕಾಲದಲ್ಲಿ ನಡೆದ
ಪ್ರಸಂಗವಿದು. ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಕೆಲವರು ತಪ್ಪಾಗಿ ಭಾವಿಸುತ್ತಾರೆ ಎಂಬುದನ್ನು ವಿವರಿಸಲು ಅವರು ಈ
ಘಟನೆ ಹೇಳಿದ್ದರು. ಯುವ ವಿದ್ಯಾರ್ಥಿಯೊಬ್ಬ ಲೈಬ್ರರಿಯಿಂದ ಹೊರಡುವಾಗ ರಾತ್ರಿ ಹತ್ತು ಗಂಟೆಯಾಗಿತ್ತು. ಲೈಬ್ರರಿಯಿಂದ ನಿರ್ಗಮಿಸಿದವರಲ್ಲಿ ಅವನೇ ಕೊನೆಯವನಾಗಿದ್ದ.
ಪಾರ್ಕಿಂಗ್ ತಾಣದಲ್ಲಿ ನಿಲ್ಲಿಸಿದ್ದ ಕಾರನ್ನು ಸ್ಟಾರ್ಟ್ ಮಾಡಬೇಕು ಎಂದು ಚಾವಿ ತಿರುವಿದರೆ, ಬ್ಯಾಟರಿ ಡೆಡ್ ಆಗಿತ್ತು. ಮೆಕಾನಿಕ್ ಗೆ ಫೋನ್ ಮಾಡಿ ಕರೆಯೋಣ ಅಂದರೆ ಫೋನ್ ಬೂತ್ ದೂರದಲ್ಲಿತ್ತು. ಬೇರೆ ದಾರಿ ಕಾಣದೇ ಹತ್ತಿರದಲ್ಲಿರುವ ಲೇಡೀಸ್ ಹಾಸ್ಟೆಲ್‌ಗೆ ಹೋದ. ಬಾಗಿಲಲ್ಲಿ ಯುವತಿಯೊಬ್ಬಳು ಕುಳಿತಿದ್ದಳು. ತನ್ನ ಸಮಸ್ಯೆಯನ್ನು ಅವಳಿಗೆ ಹೇಳಿದ. ಅವಳು ಹಾಸ್ಟೆಲ್
ವರಾಂಡದಲ್ಲಿರುವ ಫೋನ್ ತೋರಿಸುತ್ತಾ, ‘ಪರವಾಗಿಲ್ಲ, ಒಳಗೆ ಹೋಗಿ, ಫೋನ್ ಮಾಡಿ’ ಎಂದು ಹೇಳಿದಳು.
ಆತ ಒಳ ಬಂದು ಮೆಕಾನಿಕ್‌ಗೆ ಫೋನ್ ಮಾಡಿದ. ಮೆಕಾನಿಕ್ ಗೆ ಸರಿಯಾಗಿ ಕೇಳಿಸುತ್ತಿರಲಿಲ್ಲ. ಹೀಗಾಗಿ ಯುವಕ ಜೋರಾಗಿ
ಕಿರುಚುತ್ತಿದ್ದ. ಆ ಹೊತ್ತಿನಲ್ಲಿ ಗಂಡಸಿನ ದನಿಯನ್ನು ಕೇಳಿದ ಮೊದಲ ಮಹಡಿಯಲ್ಲಿದ್ದ ಹಾಸ್ಟೆಲ್ ಸಂಘದ ಸೆಕ್ರೆಟರಿ ಗಾಬರಿ ಗೊಂಡಳು. ಬಾಗಿಲಲ್ಲಿ ಕುಳಿತಿದ್ದ ಯುವತಿಗೆ ಹೇಳಿದಳು – ‘ಏನಮ್ಮಾ, ಯಾವನೋ ಗಂಡಸು ಹಾಸ್ಟೆಲ್ ಒಳಗೆ ಬಂದಂತಿದೆ. ರಾತ್ರಿ ಹತ್ತು ಗಂಟೆ ನಂತರ, ಹಾಸ್ಟೆಲ್ ಒಳಗೆ ಗಂಡಸರನ್ನು ಒಳಬಿಡಬಾರದು ಎಂಬುದು ಗೊತ್ತಿಲ್ಲವಾ?’ ಅದಕ್ಕೆ ಬಾಗಿಲಲ್ಲಿ ನಿಂತವಳು ಜೋರಾಗಿ ಹೇಳಿದಳು – ‘ಪರವಾಗಿಲ್ಲ ಬಿಡಮ್ಮ, ಅವನ ಬ್ಯಾಟರಿ ಡೆಡ್ ಆಗಿದೆಯಂತೆ’ ಹೀಗೊಂದು ಸಂಭಾಷಣೆ ಕೆಲವು ವರ್ಷಗಳ ಹಿಂದೆ, ನಾನು ಸ್ವೀಡನ್ ರಾಜಧಾನಿ ಸ್ಟಾಕ್ ಹೋಮ್‌ಗೆ ಹೋದಾಗ ಅಲ್ಲಿ ಕೇಳಿದ್ದು.
ಒಮ್ಮೆ ಅಮೆರಿಕದ ಪ್ರವಾಸಿಗ ಸ್ಟಾಕ್ ಹೋಮ್‌ನಲ್ಲಿ ಬಸ್ಸಿನಲ್ಲಿ ಹೋಗುತ್ತಿದ್ದ. ಅವನ ಪಕ್ಕದಲ್ಲಿ ಸ್ವೀಡಿಷ್ ಪ್ರಜೆ ಕುಳಿತಿದ್ದ. ಇಬ್ಬರೂ ಪರಸ್ಪರ ಪರಿಚಿತರಾದರು. ಹರಟೆ ಹೊಡೆಯಲಾರಂಭಿಸಿದರು. ಅಮೆರಿಕನ್ ಪ್ರಜೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ –
ಜಗತ್ತಿನಲ್ಲಿಯೇ ಅಮೆರಿಕದಂಥ ಪ್ರಜಾಸತ್ತಾತ್ಮಕ ದೇಶ ಮತ್ತೊಂದಿಲ್ಲ. ವೈಟ್ ಹೌಸಿಗೆ ಹೋಗಿ ಅಧ್ಯಕ್ಷನನ್ನು ಭೇಟಿ ಮಾಡಬ ಹುದು. ಅವನ ಜತೆ ಕೈಕುಲುಕಬಹುದು. ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಬಹುದು. ಇವೆ ಬೇರೆ ದೇಶಗಳಲ್ಲಿ ಸಾಧ್ಯವಿಲ್ಲ. ಅದರಲ್ಲೂ ನಿಮ್ಮ ದೇಶದಲ್ಲಂತೂ ಸಾಧ್ಯವೇ ಇಲ್ಲವೇನೋ?’ ಇದೇನು ಅಮೆರಿಕನ್ ಪ್ರವಾಸಿಗ ತನ್ನ ದೇಶದ ಬಗ್ಗೆ ಬಹಳ ಬಡಾಯಿ ಕೊಚ್ಚಿಕೊಳ್ಳುತ್ತಾನಲ್ಲ ಎಂದು ಸ್ವೀಡಿಷ್ ಪ್ರಜೆಗೆ ಅನಿಸಿತು.
ಆತ ಅಷ್ಟು ಹೇಳಿದ ನಂತರ ತಾನೂ ತನ್ನ ದೇಶದ ಬಗ್ಗೆ ಹೇಳದಿದ್ದರೆ ಹೇಗೆ ಎಂದು ಅನಿಸಿತು. ‘ನಿಮ್ಮದೇನು ಮಹಾ? ನಮ್ಮ ದೇಶದಲ್ಲಿ ರಾಜ ಮತ್ತು ಸಾಮಾನ್ಯ ಒಂದೇ ಬಸ್ಸಿನಲ್ಲಿ ಕುಳಿತುಕೊಂಡು ಪ್ರಯಾಣ ಮಾಡುತ್ತಾರೆ, ಗೊತ್ತಾ?’ ಎಂದ ಸ್ವೀಡಿಷ್ ಪ್ರಜೆ.
ಅಷ್ಟೊತ್ತಿಗೆ ಮುಂದಿನ ಸ್ಟಾಪ್ ಬಂತು. ಸ್ವೀಡಿಷ್ ಪ್ರಜೆ ಬಸ್ಸಿನಿಂದ ಇಳಿದು ಹೋದ. ಅವರಿಬ್ಬರ ಸಂಭಾಷಣೆಯನ್ನು ಮತ್ತೊಬ್ಬ ಕೇಳಿಸಿಕೊಳ್ಳುತ್ತಿದ್ದ. ‘ನಿಮ್ಮ ಪಕ್ಕದಲ್ಲಿ ಕುಳಿತಿದ್ದವ ಯಾರು ಗೊತ್ತಾಯಿತಾ?’ ಎಂದು ಕೇಳಿದಕ್ಕೆ ಅಮೆರಿಕದ ಪ್ರವಾಸಿಗ ಗೊತ್ತಿಲ್ಲ ಎಂದು ತಲೆ ಅಡಿಸಿದ. ‘ಆತನೇ ಸ್ವೀಡನ್‌ನ ಆರನೇ ರಾಜ ಗುಸ್ತಾಫ್ ಅಡಾಲ್ಫ್ !’