Sunday, 24th November 2024

ಆ ಮೂರನ್ನೂ ತಳ್ಳಿ, ಜೋರಾಗಿ ಬಂದು ನೀನು ನನ್ನ ತಬ್ಬಿಕೊಂಡೆ !

ಇದೇ ಅಂತರಂಗ ಸುದ್ದಿ

vbhat@me.com

ಕ್ಷಣ, ಕ್ಷಣಕ್ಕೂ ನನ್ನ ಕುತೂಹಲ, ಉದ್ವೇಗ ಜಾಸ್ತಿಯಾಗಲಾರಂಭಿಸಿತು. ಕೊನೆಗೂ ನೀನು ಮಣೆ ಮೇಲಿನ ಆ ಮೂರನ್ನೂ ಕೈಯಿಂದ ತಳ್ಳಿ, ಜೋರಾಗಿ ಬಂದು ನನ್ನನ್ನು ತಬ್ಬಿಕೊಂಡೆ. ಆ ಮೂರನ್ನು ಬಿಟ್ಟು ನಾಲ್ಕನೆ ಆಯ್ಕೆ ನಾನಾಗಬಹುದು ಎಂದು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಆಗ ನನಗೆ ನನ್ನ ಭಾವ ತೀವ್ರತೆ ಹಿಡಿದಿಟ್ಟುಕೊಳ್ಳಲಾಗಲಿಲ್ಲ. ನಿನ್ನನ್ನು ಬರಸೆಳೆದು ಅಪ್ಪಿಕೊಂಡು ಜೋರಾಗಿ ಅತ್ತು ಬಿಟ್ಟೆ.

‘ಇಂದು ವಿಶ್ವ ಅಪ್ಪಂದಿರ ದಿನ’. ಅದ್ಯಾವ ಪುಣ್ಯಾತ್ಮ ಧೈರ್ಯ ಮಾಡಿ ಅಪ್ಪಂದಿರ ದಿನವನ್ನು ವಿಶ್ವ ದೈನಂದಿನ ದಿನಗಳ ಪಟ್ಟಿಗೆ ಸೇರಿಸಿ ದನೋ ಏನೋ? ನಿಜಕ್ಕೂ ಆತ ಮಹಾ ಧೈರ್ಯಶಾಲಿಯೇ ಇರಬೇಕು. ಹಾಗೆ ಮಾಡಿದವನ ಸ್ಥಿತಿ ಮನೆಗೆ ಬಂದ ನಂತರ ಏನಾಯಿತು ಎಂಬುದು ಮಾತ್ರ ತಿಳಿದಿಲ್ಲ. ಈ ಒಂದು ದಿನವಾದರೂ ಅಪ್ಪಂದಿರು ಮನೆಯಲ್ಲಿ ತುಸು ಗಮನ ಸೆಳೆಯಬಹುದು.

ಅಷ್ಟಕ್ಕೂ ಅಪ್ಪಂದಿರ ದಿನ ಆಚರಿಸಲು ಅಮ್ಮಂದಿರು ಒಪ್ಪಿಕೊಂಡಿದ್ದಾರಲ್ಲ, ಅದೇ ಇಂದಿಗೂ ಸೋಜಿಗದ ವಿಷಯವೇ, ಇರಲಿ. ಇತ್ತೀಚೆಗೆ ಟ್ವಿಟರ್‌ನಲ್ಲಿ ಓದಿದ ಒಂದು ಪ್ರಸಂಗವನ್ನು ನನ್ನ ಸ್ಕ್ರ್ಯಾಪ್‌ಬುಕ್‌ನಲ್ಲಿ ಬರೆದಿಟ್ಟುಕೊಂಡೆ. ನಿಮಗೂ ಇಷ್ಟವಾಗ ಬಹುದು. ‘ಅಪ್ಪಾ ನನ್ನಿಂದಾಗಿ ನೀನು ಜೋರಾಗಿ ಅತ್ತ ಯಾವುದಾದರೂ ಪ್ರಸಂಗ ವಿದೆಯಾ’ ಎಂದು ಕೇಳಿದೆ. ಅದಕ್ಕೆ ಆತ ‘ಕೇವಲ ಒಮ್ಮೆ’ ಎಂದ. ‘ಹೌದಾ? ಅದ್ಯಾವ ಪ್ರಸಂಗ ?’ ಎಂದು ಅಪ್ಪನನ್ನು ಕೇಳಿದೆ. ಅದಕ್ಕೆ ಅಪ್ಪ ಆ ಪ್ರಸಂಗವನ್ನು ಹೇಳಿದ.

‘ನೀನು ಮೂರು ವರ್ಷದವನಿದ್ದೆ. ಒಂದು ದಿನ ನಾನು ನಿನ್ನ ಮುಂದೆ ಪೆನ್ನು, ನೂರು ರುಪಾಯಿ ನೋಟು ಹಾಗೂ ಆಟಿಕೆ ಸಾಮಾನನ್ನು ಇಟ್ಟೆ. ನೀನು ಮೊದಲು ಯಾವುದನ್ನು ಎತ್ತಿಕೊಳ್ಳುತ್ತೀಯಾ ಎಂಬುದನ್ನು ಪರೀಕ್ಷಿಸ ಬೇಕೆನಿಸಿತು. ಬೆಳೆವ ಪೈರನ್ನು ಚಿಗುರಿನಲ್ಲಿ ನೋಡು ಅಂತಾರಲ್ಲ. ನಿನ್ನ ಈ ಆಯ್ಕೆಯಿಂದ ನೀನು ದೊಡ್ಡವನಾದ ನಂತರ ಯಾವುದಕ್ಕೆ ಮಹತ್ವ ಕೊಡುತ್ತೀಯಾ ಎಂಬುದನ್ನು ತಿಳಿಯುವ ಆಸೆ ಯಾಯಿತು. ನೀನು ಪೆನ್ನು ಎತ್ತಿಕೊಂಡರೆ ಬರಹಗಾರ/ಪತ್ರಕರ್ತ ಆಗಬಹುದು.

ಓದು ಬರಹದಲ್ಲಿ ಮುಂದೆ ಬರಬಹುದು ಎಂದರ್ಥ. ಹಣವನ್ನು ಎತ್ತಿಕೊಂಡರೆ ಬಿಜಿನೆಸ್‌ನಲ್ಲಿ ಆಸಕ್ತಿ ತೋರಿಸಿ ಹಣಗಳಿಸಬಹುದು ಎಂದು ಭಾವಿಸಬಹುದು. ಆಟಿಕೆ ಸಾಮಾನನ್ನು ಎತ್ತಿಕೊಂಡರೆ ನಿನಗೆ ಆಟ, ಪಠ್ಯೇತರ ಚಟುವಟಿಕೆಗಳಲ್ಲಿ ಆಸ್ಥೆ ಎಂದು ತಿಳಿಯಬಹುದು. ಹೀಗಾಗಿ ನಿನಗೆ ಯಾವುದರಲ್ಲಿ ಆಸಕ್ತಿಯಿದೆಯೆಂಬುದನ್ನು ಅಂದು ನಾನು ತಿಳಿಯಬಯಸಿದೆ. ನೀನು ಯಾವುದನ್ನು ಆಯ್ದುಕೊಳ್ಳಬಹುದೆಂದು ನಾನು ಉಸಿರು ಬಿಗಿ ಹಿಡಿದು ಕಾಯುತ್ತಿದ್ದೆ.

ನೀನು ಆ ಮೂರೂ ವಸ್ತುಗಳನ್ನು ಇಟ್ಟ ಮಣೆಯ ಹತ್ತಿರ ಬಂದೆ. ತದೇಕಚಿತ್ತದಿಂದ ಅವುಗಳನ್ನು ದಿಟ್ಟಿಸಿದೆ. ಒಮ್ಮೆ ನನ್ನ ಮುಖವನ್ನು ನೋಡಿ ಪುನಃ ಆ ವಸ್ತುಗಳನ್ನು ನೋಡಿದೆ. ಕ್ಷಣ, ಕ್ಷಣಕ್ಕೂ ನನ್ನ ಕುತೂಹಲ, ಉದ್ವೇಗ ಜಾಸ್ತಿಯಾಗಲಾರಂಭಿಸಿತು. ಕೊನೆಗೂ ನೀನು ಮಣೆಯ ಮೇಲಿನ ಆ ಮೂರನ್ನೂ ಕೈಯಿಂದ ತಳ್ಳಿ, ಜೋರಾಗಿ ಬಂದು ನನ್ನನ್ನು ತಬ್ಬಿಕೊಂಡೆ. ಆ ಮೂರನ್ನು ಬಿಟ್ಟು ನಾಲ್ಕನೆಯ ಆಯ್ಕೆ ನಾನಾಗಬಹುದು ಎಂದು ಕನಸು ಮನಸಿನಲ್ಲಿಯೂ ಯೋಚಿಸಿರಲಿಲ್ಲ. ಆಗ ನನಗೆ ನನ್ನ ಭಾವ ತೀವ್ರತೆ ಹಿಡಿದಿಟ್ಟುಕೊಳ್ಳಲಾಗಲಿಲ್ಲ. ನಿನ್ನನ್ನು ಬರಸೆಳೆದು ಅಪ್ಪಿಕೊಂಡು ಜೋರಾಗಿ ಅತ್ತು ಬಿಟ್ಟೆ. ಹಾಗೆ ಅತ್ತಿದ್ದು ಅದೇ ಮೊದಲು ಹಾಗೂ ಅದೇ ಕೊನೆ’ ಎಂದು ಅಪ್ಪ ವಿವರಿ ಸಿದ. ನನ್ನ ಎರಡೂ ಕೈಗಳನ್ನು ಮುಖಕ್ಕೆ ಮುಚ್ಚಿಕೊಂಡು ನಾನು ಜೋರಾಗಿ ಅಳಲಾರಂಭಿಸಿದೆ. ಅವನ ಕಣ್ಣಾಲಿಗಳೂ ತೇವವಾಗಿದ್ದವು.

ಅಪ್ಪನ ಬಗ್ಗೆ ಕೆಲ ಸೊಗಸಾದ ಮಾತುಗಳು

ಹುಟ್ಟುವಾಗಲೇ ಯಾರೂ instruction book ಹಿಡಿದು ಬರುವುದಿಲ್ಲ. ಆ ಉದ್ದೇಶ ಈಡೇರಿಸಲು ಅಪ್ಪ ಇದ್ದಾನಲ್ಲ. ಅಪ್ಪನ ಹೆಗಲಿಗಿಂತ ಮೆತ್ತನೆಯ ತಲೆದಿಂಬು ಇಲ್ಲ ಈ ಜಗತ್ತಿನಲ್ಲಿ ಮಗನ ಬುದ್ಧಿಮತ್ತೆ, ಸಾಮರ್ಥ್ಯ, ಏಳ್ಗೆ ನೋಡಿ ಕರುಬದಿರುವ ಒಬ್ಬನೇ ವ್ಯಕ್ತಿ ಇದ್ದರೆ ಅದು ತಂದೆ. ಜಗತ್ತಿನ ದೃಷ್ಟಿಯಲ್ಲಿ ನೀನು ತಂದೆಯಾಗಿರಬಹುದು. ಆದರೆ ನಿನ್ನ ಕುಟುಂಬಕ್ಕೆ ನೀನೇ ಜಗತ್ತು. ನನ್ನ ತಂದೆ ನನಗಿಂತ ಚಿಕ್ಕವರು ಅಂದರೆ ನನ್ನ ತಲೆ ಸರಿ ಇಲ್ಲ ಎಂದೇ ಎಲ್ಲರೂ ಭಾವಿಸುತ್ತಾರೆ. ಆದರೆ ತುಂಟತನದಲ್ಲಿ ಇಂದಿಗೂ ನನ್ನ ತಂದೆಯೇ ಗೆದು.

ನನ್ನ ಅಪ್ಪ ಮಹಾ ಪೋಲಿ. ಅದಕ್ಕೆ ಪ್ರತಿಕ್ರಿಯೆ: ಪೋಲಿಯಾದವರು ಮಾತ್ರ ಅಪ್ಪಂದಿರಾಗುತ್ತಾರೆ! ಮಗನ ಬರ್ಥಡೇ ದಿನ ಪ್ರೆಸೆಂಟ್
(ಉಡುಗೊರೆ) ಕೊಡಲಿಲ್ಲವಲ್ಲ ಎಂದು ಅನೇಕ ಅಪ್ಪಂದಿರು ಚಡಪಡಿಸುತ್ತಾರೆ. ಮಗನ ಜತೆ ಇರುವುದೇ ದೊಡ್ಡ ಪ್ರಸೆಂಟ್ ಎಂದು ಅನೇಕರು ಯೋಚಿಸುವುದಿಲ್ಲ. ಅಪ್ಪ, ನೀನು ಎಂಥ ವ್ಯಕ್ತಿ ಅಂದರೆ, ನಾನು ಎಷ್ಟೇ ಎತ್ತರಕ್ಕೆ ಬೆಳೆದಿರಬಹುದು, ನಾನು ನಿನ್ನನ್ನು ನೋಡೋದು ನನ್ನ ಕತ್ತು ಎತ್ತಿಯೇ!

ಇಂದಿಗೂ ನಿಮ್ಮ ಮಕ್ಕಳು ನಿಮ್ಮ ಸಲಹೆ, ಮಾರ್ಗದರ್ಶನವನ್ನು ಬಯಸುತ್ತಾರೆ ಅಂದ್ರೆ, ಅದಕ್ಕಿಂತ ಮಿಗಿಲಾದ, ನೀವು ಗಳಿಸಿದ ಸಂಪತ್ತು ಮತ್ತೊಂದಿಲ್ಲ. ಈ ನಿಸರ್ಗ ಸೃಷ್ಟಿಸಿದ ಅತ್ಯಂತ ಸುಂದರ ಸ್ಥಳಕ್ಕೆ ತಂದೆಯ ಹೃದಯ ಅಂತಾರೆ. ಅಮ್ಮಂದಿರ ದಿನದಂತೆ ಅಪ್ಪಂದಿರ ದಿನ. ಎರಡೂ ಒಂದೇ. ಆದರೆ ಮೊದಲನೆಯದರಲ್ಲಿ ಖರ್ಚು ಜಾಸ್ತಿ. ನಾನು ಏರದ ಎತ್ತರವನ್ನು ನೀನು ಏರು ಎಂದು ಹುರಿ ದುಂಬಿಸುವವನು ಒಬ್ಬನೇ – ಆತ ನನ್ನ ತಂದೆ !

ನನ್ನ ತಂದೆ ಹೇಳಿದ್ದು ಎಷ್ಟು ಸತ್ಯ ಎಂದು ತಿಳಿಯುವ ಹೊತ್ತಿಗೆ, ಅಪ್ಪನಿಗೆ ಬುದ್ಧಿಯಿಲ್ಲ ಎಂದು ಮಗನ ಗೊಣಗುವಿಕೆಯನ್ನು ಕೇಳುವುದು ಈ ಜೀವನದ ಘೋರ ಅಣಕ. ಮನೆಯ ಮೂತ್ರ ವಿಸರ್ಜನೆ ಮಾಡು, ನಾನು ಕ್ಲೀನ್ ಮಾಡ್ತೀನಿ ಅಂತ ಹೇಳಿದವಳು ಅಮ್ಮ. ಹೊರಗೆ ಹೋಗಿ ಮಾಡಿ ಬಾ ಎಂದು ಹೇಳಿದವನು ಅಪ್ಪ.

ಯಾರು ಬೇಕಾದರೂ ತಂದೆ (father) ಆಗಬಹುದು. ಆದರೆ ಕೆಲವರು ಮಾತ್ರ ಅಪ್ಪ (dad) ಆಗಬಲ್ಲರು. ಜಗತ್ತಿನಲ್ಲಿ ಅಪ್ಪನಂಥ ಶಾಕ್ ಆಬ್ಸಾರ್ಬರ್ ಮತ್ತೊಂದಿಲ್ಲ. ಅಪ್ಪ ಅದೆಂಥ ಅದ್ಭುತ -ಂಡ್ ಅಂದ್ರೆ ಆತ ಒಮ್ಮೆಯೂ ಜಗಳವಾಡೊಲ್ಲ ಮತ್ತು ಎಲ್ಲಾ ಸಲವೂ ಆಟದಲ್ಲಿ ನನ್ನ ವಿರುದ್ಧ ಸೋಲುತ್ತಾನೆ. ನಾನು ಏನು ಬೇಕಾದರೂ ಸಾಧಿಸಬಹುದು. ಕಾರಣ ನನ್ನ ಪರವಾಗಿ ನನ್ನ ಅಪ್ಪ ಇದ್ದಾನೆ. ನಿಮಗೆ ಅನಿಸಿ ದ್ದನ್ನು ಮಾಡಲು ತಡವಾಯಿತು ಎಂಬುದಿಲ್ಲ. ನನ್ನ ಅಪ್ಪ, ಅಪ್ಪನಾಗಿದ್ದು ಅವನಿಗೆ ಐವತ್ತೈದು ವರ್ಷಗಳಾದಾಗ ! ನನ್ನ ತಂದೆ ನನಗೆ ಯಾವ ಆಸ್ತಿಯನ್ನೂ ಮಾಡಿಡಲಿಲ್ಲ.

ಆದರೆ ಅವನಿಗೆ ನನ್ನ ಸಾಮರ್ಥ್ಯದ ಬಗ್ಗೆ ಅಪಾರ ನಂಬಿಕೆ. ನನಗೆ ಅದಕ್ಕಿಂತ ಹೆಚ್ಚಿನ ಆಸ್ತಿ ಬೇಕಿಲ್ಲ. ತಂದೆಯಾಗುವುದರ ಒಂದು ಮಹಾನ್ ಅವಕಾಶವೆಂದರೆ, ತಮ್ಮ ಮಕ್ಕಳನ್ನು ಮೊದಲ ದಿನದಿಂದಲೇ ಕೆಡಿಸಬಹುದು. ಕಷ್ಟಗಳು ಬರುತ್ತವೆ, ಹೋಗುತ್ತವೆ ಕಷ್ಟಗಳು, ತೊಂದರೆಗಗಳು ನೆಂಟರ ಹಾಗೆ. ಬರುತ್ತವೆ, ಹೋಗುತ್ತವೆ. ಅವು ಯಾವತ್ತೂ ನಮ್ಮ ಮನೆಯಲ್ಲಿಯೇ ಸದಾ ನೆಲೆಸುವುದಿಲ್ಲ. ನಮ್ಮ ಮನೆಯಲ್ಲಿ ಉಳಿಯಲು ಪಾಲು ಕೇಳುವುದಿಲ್ಲ. ಬಂದಹಾಗೆಯೇ ಹೊರಟುಹೋಗುತ್ತವೆ. ಕೆಲವೊಮ್ಮೆ ಅವು ಬಂದಿದ್ದೂ ಗೊತ್ತಾಗುವು ದಿಲ್ಲ. ಅವು ಬಂದುಹೋದ ನೆನಪು ಉಳಿದಿರುವುದಿಲ್ಲ.

ಆದರೆ ನಮ್ಮ ಸಮಸ್ಯೆಯೇನೆಂದರೆ, ಕಷ್ಟಗಳು ಬಂತೆಂದರೆ ನಾವು ಏಕಾಏಕಿ ಕಂಗಲಾಗುತ್ತೇವೆ. ಕಾರಣ ಅವು ನಮ್ಮ ಮನೆಯಲ್ಲಿಯೇ ಶಾಶ್ವತವಾಗಿ ನೆಲೆಸಲು ಬರುವ ನೆಂಟರು ಎಂದು ಭಾವಿಸುತ್ತೇವೆ. ನಮ್ಮ ಮನೆಯಲ್ಲಿ ವಾಸ್ತವ್ಯ ಹೂಡಲು ಪಾಲು ಕೇಳಬಹುದು ಎಂದು ಅನಗತ್ಯ ಯೋಚಿಸುತ್ತೇವೆ. ಇಲ್ಲದ ಸಮಸ್ಯೆಯನ್ನು ಊಹಿಸಿಕೊಂಡು ಗಾಬರಿಪಡುತ್ತೇವೆ. ಕಷ್ಟಗಳು ಎಲೆಯ ಮೇಲಿನ ನೀರಿನಂತೆ. ಹೆಚ್ಚೆಂದೆರೆ ತೊಯ್ಯಬಹುದು. ಕಷ್ಟಗಳಿಗೂ ಪುರುಸೊತ್ತು ಇಲ್ಲ. ಅವುಗಳಿಗೆ ನೀವೊಂದೇ ಪರಿಚಿತರು ಎಂದು ಭಾವಿಸಬೇಡಿ. ಅವುಗಳಿಗೆ
ಊರೆಲ್ಲ ನೆಂಟರು. ಅದು ಲೋಕಪ್ರಿಯ. ಅದಕ್ಕೆ ಎಲ್ಲರ ಸ್ನೇಹವೂ ಬೇಕು. ಹೀಗಾಗಿ ನಿಮ್ಮನ್ನು ಬಿಟ್ಟು ಬೇರೆಯವರ ಜತೆ ಹೋಗುತ್ತದೆ. ಕಷ್ಟಗಳು ಬಂದ ಕೂಡಲೇ ಅಧೀರರಾಗಬೇಡಿ. ಅಷ್ಟಕ್ಕೂ ನೀವು ಇಲ್ಲಿ ತನಕ ಎಷ್ಟುಕಷ್ಟಗಳನ್ನು ಎದುರಿಸಿಲ್ಲ. ಅವುಗಳ ನೆನಪಾದರೂ ಇದೆಯಾ? ಇಲ್ಲತಾನೆ? ಕಷ್ಟಗಳು ಬರುತ್ತವೆ, ಹೋಗುತ್ತವೆ.

ಸಮಯಪಾಲನೆ ಏನು?
ನೀವು ಯಾರನ್ನೇ ಕೇಳಿ, ಎಲ್ಲರೂ ತಮಗೆ ಟೈಮಿಲ್ಲ ಎಂದು ಹೇಳುವವರೇ. ನನಗೆ ಧಾರಾಳ ಟೈಮಿದೆ ಎಂದು ಹೇಳುವವರು ಸಿಗುವುದು ವಿರಳ. (ಅಂಥ ವ್ಯಕ್ತಿಗಳಿದ್ದರೆ ಭೇಟಿಯಾದರೆ ಅವರು ಸಮಯವನ್ನು ಹೇಗೆ ಕಳೆಯುತ್ತಾರೆಂಬುದನ್ನು ತಿಳಿದು ಕೊಳ್ಳಬಹುದು.) ಎಲ್ಲರಿಗೂ ಕೈತುಂಬಾ ಕೆಲಸ. ಸ್ವಲ್ಪವೂ ವ್ಯವಧಾನವಿಲ್ಲ. ವಿಪರೀತ ಅವಸರವಿಲ್ಲ. ಧಾವಂತದ ಬದುಕು. ಹಾಗಾದರೆ ಇವರೆಲ್ಲ ಏನು ಮಾಡುತ್ತಾರೆ? ಅಂಥ ಮಹತ್ವದ ಕೆಲಸವೇನು? ಇವರ ಜೀವನವೇಕೆ ಹೀಗೆ? ಇವರೇಕೆ ತಮ್ಮನ್ನು ಈ ಪರಿ ಒತ್ತಡಕ್ಕೆ ಸಿಲುಕಿಸಿಕೊಳ್ಳುತ್ತಾರೆ? ಈ ಪ್ರಶ್ನೆ ಗಳಿಗೆ ನಮಗೂ ಉತ್ತರ ಗೊತ್ತಿಲ್ಲ. ಹಾಗೆ ಅವಸರ, ಧಾವಂತದಲ್ಲಿರುವವರಿಗೂ ಗೊತ್ತಿಲ್ಲ.

ಎಲ್ಲರೂ ಒಂದು ಹುಚ್ಚು ಸರ್ಧೆಗಿಳಿದವರಂತೆ, ನಾಗಲೋಟದಲ್ಲಿ ಓಡುತ್ತಿದ್ದಾರೆ. ಸಮಯ ನಿರ್ವಹಣೆ ಒಂದು ಕಲೆ. ಅದೊಂದು ಅದ್ಭುತ ವಾದ ಮ್ಯಾನೇಜ್‌ಮೆಂಟ್. ಯಾರು ಸಮಯವನ್ನು ಚೆನ್ನಾಗಿ ಚೆನ್ನಾಗಿ ನಿರ್ವಹಿಸುತ್ತಾನೋ ಅವನು ಬದುಕಿನಲ್ಲಿ ಎಲ್ಲವನ್ನೂ ಸಮರ್ಥ ವಾಗಿ ನಿರ್ವಹಿಸುತ್ತಾನೆ. ಸಮಯದ ಮಹತ್ವ, ಸಮಯ ಪಾಲನೆಯ ಮಹತ್ವವನ್ನು ಅರಿತವರು ಜೀವನದ ಮಹತ್ವವನ್ನು ಚೆನ್ನಾಗಿ ಅರಿತವರಾಗಿರುತ್ತಾರೆ. ಜೀವನದಲ್ಲಿ ಏನೂ ಬೇಕಾದರೂ ಗಳಿಸಬಹುದು. ಕಳೆದುದನ್ನು ಮರಳಿಪಡೆಯಬಹುದು. ಆದರೆ ಗತಿಸಿ ಹೋದ ಸಮಯವನ್ನು ಮಾತ್ರ ಏನೇ ಆದರೂ ಮರಳಿ ಪಡೆಯುವುದು ಅಸಾಧ್ಯ. ಎಲ್ಲ ಕೆಲಸಗಳನ್ನು ಒಂದೇ ಸಲ ಮಾಡಲು ಸಾದ್ಯವಿಲ್ಲ. ಪ್ರಮುಖವಾದ, ಅಗತ್ಯವಾದ ಕೆಲಸಗಳಿಗೆ ಆದ್ಯತೆ ನೀಡಿ, ಈಡೇರಿಸಿದರೆ ಎಷ್ಟೋ ಕೆಲಸಗಳನ್ನು ಒಂದೇ ಸಲ ಮಾಡಲು ಸಾಧ್ಯವಿಲ್ಲ. ಪ್ರಮುಖವಾದ, ಅಗತ್ಯವಾದ, ಕೆಲಸಗಳಿಗೆ ಆದ್ಯತೆ ನೀಡಿ, ಈಡೇರಿಸಿದರೆ ಎಷ್ಟೋ ಕೆಲಸಗಳನ್ನು ಮಾಡಿ ಮುಗಿಸಬಹುದು. ಅನಗತ್ಯ ಗಡಿಬಿಡಿ ಮಾಡಬೇಕಿಲ್ಲ.

ಪ್ರಮುಖವಾದದನ್ನು ಮರೆತುಬಿಡಿ
ನೀವು ಎಷ್ಟೇ ಹೇಳಿ, ಜನ ಹಳೆಯದನ್ನು ಕೆದಕುವುದನ್ನು ಬಿಡುವುದಿಲ್ಲ. ಗತಿಸಿಹೋದ ಸಂಗತಿಗಳನ್ನು ನೆನಪು ಮಾಡಿಕೊಂಡು ಕೊರಗು ತ್ತಿರುತ್ತಾರೆ. ಎಂದೋ ಕೇಳಿದ ಟೀಕೆ, ಚೋದ್ಯ, ಲಘುಮಾತು, ಆರೋಪಗಳನ್ನು ಹತ್ತಾರು ವರ್ಷಗಳಾದರೂ ಮರೆಯದೇ ಚೆನ್ನಾಗಿ ನೆನಪಿಟ್ಟು ಕೊಂಡಿರುತ್ತಾರೆ. ಪುನಃ ಪುನಃ ಅವುಗಳನ್ನು ಜ್ಞಾಪಿಸಿಕೊಂಡು ಬೇಸರಪಟ್ಟುಕೊಂಡು ಖಿನ್ನರಾಗುತ್ತಾರೆ.

ಹರಿದುಹೋದ ನೀರಿಗೆ ಕಟ್ಟೆಹಾಕಿ ಪ್ರಯೋಜನವಾದರೂ ಏನು? ಯಾರು ಎಂದೋ ಹೇಳಿದ ಮಾತಿಗೆ ಈಗೇಕೆ ತಲೆಕೆಡಿಸಿಕೊಳ್ಳಬೇಕು? ಅದಕ್ಕೆ ನಮ್ಮ ಶಾಂತಿ, ನೆಮ್ಮದಿಯನ್ನು ಹಾಳುಮಾಡಿಕೊಳ್ಳಬೇಕು? ಬಹುತೇಕ ಸಂದರ್ಭಗಳಲ್ಲಿ ಟೀಕೆ ಮಾಡಿದವರು ಲಘು ಮಾತನಾಡಿ ದವರು ತಮ್ಮ ಮಾತುಗಳನ್ನು ಮರೆತುಬಿಟ್ಟಿರುತ್ತಾರೆ. ಆದರೆ ನಾವು ಮಾತ್ರ ಮರೆತಿರುವುದಿಲ್ಲ. ನಮ್ಮ ಮನಸ್ಸಿನಲ್ಲಿ ಈ ಮಾತುಗಳು ಆಗಾಗ ಸುನಾಮಿ ಎಬ್ಬಿಸುತ್ತಿರುತ್ತವೆ. ಎಂದೋ, ಯಾವುದೋ ಸಂದರ್ಭ, ಸನ್ನಿವೇಶದಲ್ಲಿ ಹೇಳಿದ ಮಾತುಗಳಿಗೆ ಈಗೇಕೆ ತಲೆಕೆಡಿಸಿ ಕೊಳ್ಳಬೇಕು ಎಂದು ಸಹ ಯೋಚಿಸುವುದಿಲ್ಲ.

ನಮ್ಮ ಬಹುತೇಕ ಸಮಸ್ಯೆಗಳಿಗೆ ನಮ್ಮ ನೆನಪಿನ ಗಣಿಯಲ್ಲಿ ತುಂಬಿಕೊಂಡಿರುವ ಈ ಹಳವಂಡಗಳೂ ಕಾರಣ. ಮನುಷ್ಯನಿಗೆ ಪ್ರಾಣಿ ಗಳಂತೆ ಸ್ಮರಣಶಕ್ತಿಯೇ ಇಲ್ಲದಿದ್ದರೆ, ಸಮಸ್ಯೆಯೇ ಇರುತ್ತಿರಲಿಲ್ಲ. ಆದರೆ ಅಪ್ರಮುಖ ಸಂಗತಿಗಳನ್ನು ಸ್ಮರಣೆಯಿಂದ ಕಿತ್ತುಹಾಕುವುದು ಸಾಧ್ಯವಿದೆ. ಅದನ್ನು ಮಾಡದಿದ್ದರೆ ನೆಮ್ಮದಿ ನಮ್ಮದಾಗುವುದಿಲ್ಲ.

ರಾಷ್ಟ್ರಪತಿಯನ್ನು ಎಬ್ಬಿಸುವವರಾರು?
ಮಧ್ಯರಾತ್ರಿ ಸಮಯ. ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಯವರು ಮಲಗಿದ್ದಾರೆ. ಪ್ರಧಾನಮಂತ್ರಿಯವರು ನಿಧನರಾದ ಸುದ್ದಿಯನ್ನು ತಿಳಿಸಬೇಕು. ಹೇಗೆ ತಿಳಿಸುವುದು? ರಾಷ್ಟ್ರಪತಿಯವರನ್ನು ಯಾರು ಹೋಗಿ ಎಬ್ಬಿಸುತ್ತಾರೆ? ಇಲ್ಲವೇ ಬೆಳಗ್ಗೆ ಅವರು ಏಳುವ ತನಕ ಕಾಯುತ್ತಾರಾ? ತಾಷ್ಕೆಂಟ್‌ನಲ್ಲಿ ಪ್ರಧಾನಿ ಲಾಲ್‌ಬಹಾದ್ದೂರ್ ಶಾಸ್ತ್ರಿ ನಿಧನರಾದಾಗ ಇದೇ ಪ್ರಶ್ನೆ ಎದುರಾಯಿತು. ಸಂವಿಧಾನದ ಪ್ರಕಾರ ಪ್ರಧಾನಿಯವರು ನಿಧನರಾದರೆ ಸಚಿವ ಸಂಪುಟ ಅಸ್ತಿತ್ವ ಕಳೆದುಕೊಳ್ಳುತ್ತದೆ.

ತಕ್ಷಣ ಹೊಸ ಪ್ರಧಾನಿ(ಹಂಗಾಮಿ) ಪ್ರಮಾಣ ವಚನ ಸ್ವೀಕರಿಸಬೇಕು. ಅದಾಗಬೇಕೆಂದರೆ ರಾಷ್ಟ್ರಪತಿಯವರಿಗೆ ಪ್ರಧಾನಿ ನಿಧನರಾದ ಸುದ್ದಿಯನ್ನು ತಲುಪಿಸಬೇಕು. ರಾಷ್ಟ್ರಪತಿ ಭವನದಲ್ಲಿ 24 ಗಂಟೆಯೂ ಸಂಪರ್ಕ ಕಲ್ಪಿಸುವ ಟೆಲಿಫೋನ್ ವ್ಯವಸ್ಥೆಯಿತ್ತು. ತಾಷ್ಕೆಂಟ್‌ನಲ್ಲಿ ಶಾಸಿ ಅವರ ಕಾರ್ಯದರ್ಶಿ ಶ್ರೀವಾಸ್ತವ ರಾಷ್ಟ್ರಪತಿ ಭವನವನ್ನು ಸಂಪರ್ಕಿಸಿದರೆ ಟೆಲಿಫೋನ್ ಆಪರೇಟರ್ ‘ ಈ ಹೊತ್ತಿನಲ್ಲಿ ರಾಷ್ಟ್ರಪತಿ ಯವರನ್ನು ಎಬ್ಬಿಸಲು ಸಾಧ್ಯವಿಲ್ಲ, ಇಡಿ ಫೋನ್’ ಎಂದು ಕುಕ್ಕಿಬಿಟ್ಟ. ಮೂರ್ನಾಲ್ಕು ಸಲ ಫೋನ್ ಮಾಡಿದಾಗಲೂ, ಇದೇ ಉತ್ತರ. ಆತನಿಗೆ ಅತ್ತ ಕಡೆಯವರು ಹೇಳುವುದನ್ನು ಕೇಳಿಸಿಕೊಳ್ಳುವ ಸಂಯಮವೇ ಇರಲಿಲ್ಲ.

ಶ್ರೀವಾಸ್ತವ ಅವರು ಜನರಲ್ ಪಿ.ಪಿ. ಕುಮಾರಮಂಗಲಂ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದರು. ಕುಮಾರಮಂಗಲಂ ಅವರು ಆರ್ಮಿ ಆಫೀಸರ್ ರೂಮಿಗೆ ಫೋನ್ ಮಾಡಿ ಡ್ಯೂಟಿ ಆಫೀಸರ್ ಮೇಜರ್ ಟಂಡನ್‌ಗೆ ‘ನಾನು ಜನರಲ್ ಕುಮಾರಮಂಗಲಂ’ ಎಂದರು.
ಮಧ್ಯರಾತ್ರಿ ಜನರಲ್ ಸಾಹೇಬರು ಫೋನ್ ಮಾಡೋದುಂಟಾ? ಯಾರೋ ಕಿತಾಪತಿ ಮಾಡುತ್ತಿರಬೇಕೆಂದು ಭಾವಿಸಿದ ಮೇಜರ್ ಟಂಡನ್,‘ನೀನು ಮೇಜರ್ ಕುಮಾರಮಂಗಲಂ ಆದರೆ ನಾನು ಕ್ವೀನ್ ಆಫ್ ಶೆಬಾ’ ಎಂದು ಫೋನ್ ಕುಕ್ಕಿದರು.

ಪುನಃ ನಾಲ್ಕು ಬಾರಿ ಫೋನ್ ರಿಂಗ್ ಆಯಿತು. ಮೇಜರ್ ಟಂಡನ್ ಫೋನ್ ಎತ್ತಲಿಲ್ಲ. ಈ ಮಧ್ಯೆ ಗೃಹಕಾರ್ಯದರ್ಶಿ ಎಲ್.ಪಿ. ಸಿಂಗ್‌ಗೆ ಶಾಸಿ ನಿಧನದ ವಿಷಯ ತಿಳಿಯಿತು. ಅವರು ಅದನ್ನು ಕ್ಯಾಬಿನೆಟ್ ಸೆಕ್ರೆಟರಿ ಧರ್ಮವೀರ್‌ಗೆ ತಿಳಿಸಿದರು. ಅವರೂ ರಾಷ್ಟ್ರಪತಿ ಭವನ ಸಂಪರ್ಕಿಸಲು ವಿಫಲ ಪ್ರಯತ್ನ ನಡೆಸಿ, ಬೇರೆ ದಾರಿ ಕಾಣದೆ ತಾವೇ ಕಾರನ್ನು ಓಡಿಸಿಕೊಂಡು ರಾಷ್ಟ್ರಪತಿ ಭವನಕ್ಕೆ ಹೋದರು. ರಾಷ್ಟ್ರ ಪತಿ ಡಾ. ಎಸ್. ರಾಧಾಕೃಷ್ಣ ಅವರನ್ನು ಎಬ್ಬಿಸಿ ವಿಷಯ ತಿಳಿಸಿದರು. ಅದೇ ದಿನ ಬೆಳಗ್ಗೆ ಗುಲ್ಜಾರಿಲಾಲ್ ನಂದಾ ಅವರಿಗೆ ಹಂಗಾಮಿ ಪ್ರಧಾನಿಯಾಗಿ ಪ್ರಮಾಣವಚನ ಬೋಧಿಸಿದರು. ಆಗ ಸರಕಾರಕ್ಕೆ ಜೀವ ಬಂತು. ಹಿಂದೊಮ್ಮೆ ಖ್ಯಾತ ಪತ್ರಕರ್ತ, ದಿವಂಗತ ಇಂದರ್ ಮಲ್ಹೋತ್ರಾ ತಮ್ಮ ಅಂಕಣದಲ್ಲಿ ಬರೆದಿದ್ದು ಮತ್ತೊಂದು ರಾಷ್ಟ್ರಪತಿ ಚುನಾವಣೆಯ ಹೊಸ್ತಿಲಲ್ಲಿ ದೇಶ ಇರುವ ಈ ಸನ್ನಿವೇಶದಲ್ಲಿ ನೆನಪಿಗೆ ಬಂತು.