Sunday, 8th September 2024

ಹಂಡೆ ಹಾಲು ಹಾಳಾಗಲು ಬಿಂದುವಿನಷ್ಟು ಹುಳಿ ಸಾಕು!

ಕಳಕಳಿ

ಮೋಹನದಾಸ ಕಿಣಿ

‘ದೊಡ್ಡ ಹಂಡೆಯ ತುಂಬಾ ಹಾಲಿದ್ದರೂ, ಒಂದೇ ಒಂದು ತೊಟ್ಟು ಹುಳಿ ಅಷ್ಟನ್ನೂ ಹಾಳುಮಾಡಬಲ್ಲದು’ ಇದು ಸಾಮಾನ್ಯವಾಗಿ ನಮ್ಮ ಜನರು
ಸಂದರ್ಭಾನುಸಾರ ಹೇಳುವ ಮಾತು. ಆದರೆ ಇದು ಕೆಲವು ಇಲಾಖೆಗಳಿಗೆ ಮತ್ತು ಸಂಸ್ಥೆಗಳಿಗೆ ಬಹಳಷ್ಟು ಅನ್ವಯಿಸುತ್ತದೆ. ಅದು ಬ್ಯಾಂಕ್, ಅಂಚೆ ಕಚೇರಿ ಅಥವಾ ಹೆಚ್ಚಿನ ಸಂಖ್ಯೆಯ ಗ್ರಾಹಕರು ಭೇಟಿ ನೀಡುವ ಯಾವುದೇ ಸಂಸ್ಥೆಯಾಗಿರಲಿ, ಅಲ್ಲಿ ಸೌಜನ್ಯಯುತವಾಗಿ ಕೆಲಸ ಮಾಡುವ ನೂರು ನೌಕರರ ನಡುವೆ ಒಂದಿಬ್ಬರು ವಿರುದ್ಧ ಮನಸ್ಥಿತಿಯವರೂ ತೂರಿಕೊಂಡುಬಿಟ್ಟಿದ್ದರೆ, ಒಂದಿಡೀ ಸಂಸ್ಥೆಗೇ ಕೆಟ್ಟ ಹೆಸರು ಬರುತ್ತದೆ.

ಇದಕ್ಕೆ ಸಾಕಷ್ಟು ಉದಾಹರಣೆಗಳನ್ನು ನೀಡಬಹುದು. ಅಂಚೆ ಇಲಾಖೆ ಅಥವಾ ಬ್ಯಾಂಕುಗಳಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವ ಹಿರಿಯ ನಾಗರಿಕರಲ್ಲಿ ಕೆಲವರು ತಮ್ಮ ಖಾತೆಯಿಂದ ಚೆಕ್ ಮೂಲಕ ಹಣವನ್ನು ಹಿಂಪಡೆಯುವ ಪದ್ಧತಿಯನ್ನು ಈಗಲೂ ಅನುಸರಿಸುತ್ತಾರೆ. ಏಕೆಂದರೆ ಅವರು ನೆಟ್ ಬ್ಯಾಂಕಿಂಗ್, ಎಟಿಎಂ, ಮೊಬೈಲ್ ಆಪ್ ಮುಂತಾದ ನೂತನ ವ್ಯವಸ್ಥೆಗೆ ಇನ್ನೂ ಒಡ್ಡಿಕೊಂಡಿಲ್ಲ. ಅದು ಅವರ ಸ್ವಂತ ಉಳಿತಾಯ, ಬಡ್ಡಿ ಆದಾಯ, ವೃದ್ಧಾಪ್ಯ ವೇತನ ಅಥವಾ ಇನ್ಯಾವುದೇ ಸ್ವರೂಪದ್ದು ಇರಬಹುದು.

ಅದರಲ್ಲೂ, ವಯೋಸಹಜ ಸಮಸ್ಯೆಗಳಿಂದ ಬ್ಯಾಂಕು ಅಥವಾ ಅಂಚೆ ಕಚೇರಿಗೆ ಸ್ವತಃ ಬರಲಾಗದವರ ವಿಷಯದಲ್ಲಂತೂ ಹೇಳುವುದೇ ಬೇಡ. ಇತ್ತೀಚೆಗೆ ಹೀಗೆಯೇ ಆಯಿತು. ವಯಸ್ಸಾದವರೊಬ್ಬರು ತಮ್ಮ ಖಾತೆಯಿಂದ ಹಣ ಪಡೆಯಬೇಕಿತ್ತು. ತಮ್ಮ ಸಹಿಯಿರುವ ಚೆಕ್ ಅನ್ನು ಅವರು ಸೊಸೆಯ ಮೂಲಕ ಕಳಿಸಿದರು. ಚೆಕ್‌ನ ಮುಂಭಾಗ ಮತ್ತು ಹಿಂಭಾಗ ಹೀಗೆ ಎರಡೂ ಕಡೆ ಅವರು ಮಾಡಿದ್ದ ಸಹಿಗಳಲ್ಲಿ ಕೊಂಚ ವ್ಯತ್ಯಾಸವಿತ್ತು. ವಯಸ್ಸಾದ ಮೇಲೆ ಸಹಿಯಲ್ಲಿ ವ್ಯತ್ಯಾಸ ಬರುವುದು ಸಹಜವೇ; ಎಷ್ಟೋ ವರ್ಷಗಳ ಹಿಂದೆ ಪಡೆದಿರುವಂಥ ಮಾದರಿ ಸಹಿಗೆ ಹೋಲಿಸಿದಾಗ ವ್ಯತ್ಯಾಸವಿದ್ದು ಹಣವನ್ನು ಪಾವತಿಸಿದರೆ ಲೆಕ್ಕ ಪರಿಶೋಧನೆಯ ವೇಳೆ ಆಕ್ಷೇಪ ಎದುರಾಗುತ್ತದೆ ಎಂಬ ಸಿಬ್ಬಂದಿಯ ವಾದವೂ ಒಪ್ಪತಕ್ಕದ್ದೇ. ಆದರೆ ಖಾತೆದಾರರಿಗೆ ಆಗುವ ತೊಂದರೆ ಬದಿಗಿಟ್ಟು ನಿಯಮ ಪಾಲಿಸುವತ್ತ ಗಮನ ಹರಿಸಿದ ಸಿಬ್ಬಂದಿ ಹಣ ಪಾವತಿಸಲು ನಿರಾಕರಿಸಿದರು. ಚೆಕ್ ತಂದ ಮಹಿಳೆ ಪರಿಪರಿಯಾಗಿ
ವಿನಂತಿಸಿದರೂ ಸಾಧ್ಯವೇ ಇಲ್ಲ ಎಂದಾಗ, ಆಕೆ ಅಂಚೆ ಇಲಾಖೆಯನ್ನು ದೂಷಿಸಿ ಹೊರನಡೆದರು.

ಇಲ್ಲಿ ತಪ್ಪು ಯಾರದ್ದು? ಏನಾದರೂ ಪರ್ಯಾಯ ವ್ಯವಸ್ಥೆ ಮಾಡಲು ಸಾಧ್ಯವೇ ಎಂದು ಯೋಚಿಸದ ಸಿಬ್ಬಂದಿಯದ್ದು. ಕಚೇರಿಯಲ್ಲಿದ್ದ ಇತರ ಸಿಬ್ಬಂದಿ ಎಷ್ಟೇ ಉತ್ತಮ ಸೇವೆ ನೀಡಿದರೂ, ಅವರ ಪೈಕಿಯ ಒಬ್ಬರ ವರ್ತನೆ ಇಡೀ ವ್ಯವಸ್ಥೆಯ ಬಗ್ಗೆ ಜನರಲ್ಲಿ ಅಸಹನೆ ಮೂಡಲು ಕಾರಣವಾಯಿತು. ಗ್ರಾಹಕರು ಈ ಬಗ್ಗೆ ಇನ್ನೊಂದಿಷ್ಟು ಜನರಲ್ಲಿ ಹೇಳಿದರೆ ಪರಿಣಾಮ? ಇದೇ ರೀತಿ, ಯಾವುದಾದರೂ ಅರ್ಜಿ ಭರ್ತಿಮಾಡಬೇಕಾದಾಗ ತೀರಾ ಹಿರಿಯ
ನಾಗರಿಕರಿಗೆ ಸಹಕರಿಸಲು ಸಿಬ್ಬಂದಿ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಅವರೂ ಇದೇ ರೀತಿ ಪರದಾಡಿ ಇಲಾಖೆಗೆ ಒಂದಿಷ್ಟು ಶಾಪ ಹಾಕುತ್ತಾರಷ್ಟೇ. ಇಂಥ ಸಂದರ್ಭಗಳಲ್ಲಿ ಸೌಜನ್ಯಯುತ ಸೇವೆ ಸಿಗುವಂತೆ ಸೂಕ್ತ ವ್ಯವಸ್ಥೆ ಮಾಡುವ ಜವಾಬ್ದಾರಿ ಸರಕಾರದ್ದು ಮತ್ತು ಸಂಬಂಧಿಸಿದ ಸಂಸ್ಥೆಯದ್ದು.

(ಲೇಖಕರು ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *

error: Content is protected !!