Monday, 16th September 2024

ಹುಲಿಯಾ ಒಂದು ನೆನಪು

ತುಂಟರಗಾಳಿ

ಸಿನಿಗನ್ನಡ 

ಖಡಕ್ ಮಾತು, ವ್ಯಕ್ತಿತ್ವ, ಅಷ್ಟೇ ಖಡಕ್ ಚಿತ್ರಗಳು, ಇದು ನಿರ್ದೇಶಕ ಕೆವಿ ರಾಜು ಅವರ ಸ್ಟೈಲ್ ಆಗಿತ್ತು. ಜೀವನದುದ್ದಕ್ಕೂ ನೇರ ನಿಷ್ಠುರ ಬಂತೆ ಬದುಕಿದ್ದ ನಿರ್ದೇಶಕ ಅವರು.

ಕೆವಿ ರಾಜು ಅಂದ್ರೆ ಕನ್ನಡ ಚಿತ್ರರಂಗದಲ್ಲಿ ಕ್ರಾಂತಿಕಾರಿ ಸಿನಿಮಾಗಳನ್ನು, ಹೊಸ ರೀತಿಯ ಅನುಭವ ಕೊಡುವ ಸಿನಿಮಾ ಗಳನ್ನು ಮಾಡಿದ ನಿರ್ದೇಶಕರ ಹೆಸರು. ಇಂದ್ರಜಿತ್, ಯುದ್ಧಕಾಂಡ, ಸಂಗ್ರಾಮ, ಕದನ, ನಂ.೧, ಬೆಳ್ಳಿ ಮೋಡಗಳು, ನವಭಾರತ, ಯುದ್ಧ, ಓ ಗಂಡಸರೇ ನೀವೆಷ್ಟು ಒಳ್ಳೆಯವರು ಮುಂತಾದ ಹಲವು ವಿಭಿನ್ನ ಚಿತ್ರಗಳನ್ನು ನೀಡಿದವರು ರಾಜು.

ಕೆವಿ ರಾಜು ಅವರು ಅನೇಕ ಅದ್ಭುತ ಚಿತ್ರಗಳನ್ನು ಕೊಟ್ಟಿದ್ದರೂ ಬಹು ತೇಕರು ಅವರನ್ನು ಗುರುತಿಸೋದು ಅವರ ಹುಲಿಯಾ ಚಿತ್ರದಿಂದಲೇ. ಇಂದಿನ ನಮ್ಮ ಆಧುನಿಕ ಪ್ರೇಕ್ಷಕರಿಗೆ ಇಷ್ಟವಾಗುವಂಥ ಸೋ ಕಾಲ್ಡ ಹೊಸ ಅಲೆಯ ಚಿತ್ರಗಳ ಸಂಸ್ಕೃತಿ ಕನ್ನಡ ಚಿತ್ರಗಳಲ್ಲಿ ಎಂದೋ ಶುರುವಾಗಿತ್ತು. ಅಂತಹ ಚಿತ್ರಗಳ ಸಾಲಿನಲ್ಲಿ ಕೇಳಿಬರೋ ಪ್ರಮುಖ ಚಿತ್ರ ಅಂದ್ರೆ ದೇವರಾಜ್, ಅರ್ಚನಾ ಅಭಿನಯದ ಹುಲಿಯಾ. ಆದರೆ ಈಗಲೂ ಕೆವಿ ರಾಜು ಅವರ ಪ್ರಮುಖ ಮೂರು ಚಿತ್ರಗಳನ್ನು ಹೆಸರಿಸಿ ಅಂದ್ರೆ ಕನ್ನಡದ ಪ್ರೇಕ್ಷಕ ಖಂಡಿತಾ ಹುಲಿಯಾ ಚಿತ್ರವನ್ನು ನೆನಪಿಸಿಕೊಳ್ಳುತ್ತಾನೆ. ಆ ಚಿತ್ರದ ಖದರ್ರೇ ಹಾಗೆ.

ಇಂದಿಗೂ ಸದಭಿರುಚಿಯ ಚಿತ್ರಗಳನ್ನು ಇಷ್ಟಪಡುವ ಕನ್ನಡ ಪ್ರೇಕ್ಷಕನ ಮನಸ್ಸಿನಲ್ಲಿ ಹುಲಿಯಾ ಚಿತ್ರಕ್ಕೆ ಅಮೂಲ್ಯವಾದ ಜಾಗ ಇದೆ. ಈ ಚಿತ್ರದ ಕಥೆಯನ್ನು ನೋಡಿದರೆ ಅದು ಈಗ ಪರಭಾಷೆಯ ಚಿತ್ರರಂಗದವರು ಮಾಡುತ್ತಿರೋ ಕಥೆಗಳನ್ನ ರಾಜು ಅಂದೇ ಮಾಡಿದ್ದರು ಅನಿಸಿದರೆ ತಪ್ಪಿಲ್ಲ. ಯಾಕಂದ್ರೆ ಇತ್ತೀಚೆಗೆ ತಮಿಳಿನಲ್ಲಿ ಬಂದ ಧನುಷ್ ಅಭಿನಯದ ಅಸುರನ್ ಚಿತ್ರ ಹೆಚ್ಚು ಕಮ್ಮಿ ಹುಲಿಯಾ ಚಿತ್ರದ ಧಾಟಿಯ ಇತ್ತು.

ಶೋಷಿತರ ಮೇಲೆ ನಡೆಯುವ ದೌರ್ಜನ್ಯದ ಕಥೆ ಹುಲಿಯಾ ಚಿತ್ರದ್ದು. ಒಂದೇ ವ್ಯತ್ಯಾಸ ಅಂದ್ರೆ ಕೆವಿ ರಾಜು ಈ ಚಿತ್ರವನ್ನು ಅತಿ ರಿಯಲಿಸ್ಟಿಕ್ ಆಗಿ ತೋರಿಸಿದ್ದರು. ಅಂದರೆ ಬಡವರು ತಿರುಗಿ ಬಿದ್ದು ಉಳ್ಳವರ ಮೇಲೆ ಸೇಡು ತೀರಿಸಿಕೊಳ್ಳೋದೆ ನಿಜಜೀವನದಲ್ಲಿ ಆಗಲ್ಲ ಅನ್ನೋ ನಂಬಿಕೆಯಲ್ಲಿ ಕೆವಿ ರಾಜು ಈ ಚಿತ್ರದಲ್ಲಿ ಸ್ಯಾಡ್ ಎಂಡಿಂಗ್ ಇಟ್ಟಿದ್ದರು.

ದೇವರಾಜ್ ಮತ್ತು ಅರ್ಚನಾ ಅವರ ಕುಟುಂಬ ಮೇಲ್ವರ್ಗದವರ ತುಳಿತಕ್ಕೆ ಸಿಕ್ಕು ನಾಶವಾಗುವ ಕಥೆ ಇಲ್ಲಿತ್ತು. ದೇವರಾಜ್ ಅವರ ಅಭಿನಯಕ್ಕೆ ಎಡೆಯಿಂದ ಪ್ರಶಂಸೆ ಕೇಳಿಬಂದಿತ್ತು. ಅದರಲ್ಲೂ ನಟ ವಿಷ್ಣುವರ್ಧನ್ ‘ಈ ಚಿತ್ರದಲ್ಲಿ ದೇವರಾಜ್ ಅವರು
ರಸ್ತೆಯಲ್ಲಿ ನಿಂತು ಅಭಿನಯಿಸಿದ ಕ್ಲೈಮ್ಯಾಕ್ಸ್ ದೃಶ್ಯ ನೋಡಿ, ಅಲ್ರೀ, ಪಬ್ಲಿಕ್ ಪ್ಲೇಸ್ ನಲ್ಲಿ ನಿಂತುಕೊಂಡು ಅಷ್ಟೊಂದು ಜನರ ಎದುರಿಗೆ ಅಂಥ ಪರ್ಫಾಮೆನ್ಸ್ ಕೊಡೋದು ಅಂದ್ರೆ ಸುಮ್ನೆನಾ, ನನ್ನ ಕೈಲಂತೂ ಆಗ್ತಾ ಇರಲಿಲ್ಲ’ ಎಂದು ದೇವರಾಜ್ ಅಭಿನಯಕ್ಕೆ ಕ್ರೆಡಿಟ್ ಕೊಟ್ಟಿದ್ದರು.

ಆದರೆ, ಇದೆಲ್ಲದರ ನಡುವೆಯೂ ವಿಶೇಷ ಅಂದ್ರೆ, ಆ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸೋತು ಹೋಯಿತು, ನನಗೆ ಲಾಸ್ ಆಯಿತು, ಕ್ಲೈಮ್ಯಾಕ್ಸ್ ಬದಲಿಸಿ ಅಂತ ನಾನು ಹೇಳಿದ ಮಾತನ್ನು ಕೆವಿ ರಾಜು ಕೇಳಲಿಲ್ಲ, ಅನ್ನೋ ಚಿತ್ರದ ನಿರ್ಮಾಪಕ ಗೋವಿಂದು ಕೂಡ, ಯಾರಾದ್ರೂ ನಿಮ್ಮ ಹೆಸರೇನು? ಅಂತ ಯಾರಾದ್ರೂ ಕೇಳಿದ್ರೆ ಗೋವಿಂದು, ಹುಲಿಯಾ ಗೋವಿಂದು ಅಂತಲೇ ಹೇಳ್ತಾರೆ. ಅದು ಆ ಚಿತ್ರದ ತಾಕತ್ತು.

ಲೂಸ್ ಟಾಕ್
ಸ್ಯಾಂಡಲ್ ವುಡ್ ಡೈರೆಕ್ಟರ್ (ಕಾಲ್ಪನಿಕ ಸಂದರ್ಶನ)
ಏನ್ ಸಾರ್ ಹೆಂಗ್ ನಡೀತಿದೆ ನಿಮ್ಮ ಸಿನಿಮಾ ಶೂಟಿಂಗ್?
-ಅಯ್ಯೋ ಚಿತ್ರೀಕರಣ ಬರದಿಂದ ಸಾಗುತ್ತಿದೆ ಕಣ್ರೀ

ಅದು ಬರದಿಂದ ಅಲ್ಲ ರೀ, ಭರದಿಂದ!
-ರೀ ಸ್ವಾಮಿ ನಮ್ ಪ್ರೊಡ್ಯೂಸರ್ ಹತ್ರ ದುಡ್ಡಿಲ್ಲ, ಹಣದ ಕೊರತೆ ಇದೆ ಅದಕ್ಕೇ ಬರಿಂದ ಸಾಗುತ್ತಿದೆ ಅಂತ ಹೇಳಿದ್ದು

ಓ ಹಂಗೆ , ಆದ್ರೆ ಮೊನ್ನೆ ಶೂಟಿಂಗಿಗೆ ಅಂತ ರಾಜಸ್ಠಾನಕ್ಕೆ ಹೋಗಿದ್ದಾಗ, ನಮ್ ಪ್ರೊಡ್ಯೂಸರ್ ದುಡ್ಡನ್ನ ನೀರಿನ್ ಥರ ಖರ್ಚು ಮಾಡಿದ್ರು ಅಂತಿದ್ರಿ
-ಹೌದು ರೀ, ರಾಜಸ್ಥಾನದಲ್ಲಿ ನೀರಿನ್ ಥರ ಖರ್ಚ್ ಮಾಡಿದ್ರು ಅಂದ್ರೆ ತುಂಬಾ ಕಡಿಮೆ ದುಡ್ಡು ಖರ್ಚು ಮಾಡಿದ್ರು ಅಂತ ಅಲ್ವಾ.

ಓಹೋ, ಯಾಕೋ ಡೈರೆಕ್ಟರ್ ಸಾಹೇಬ್ರು ಬರೀ ಇನ್‌ಡೈರೆಕ್ಟ್ ಆಗಿ ಮಾತಾಡ್ತಾ ಇದ್ದೀರ.
-ಏನ್ ಮಾಡೋದು ನಮ್ಮ ನಿರ್ಮಾಪಕರು ಏರಿಯಲ್ ಶಾಟ್ ತೆಗೆಯೋಕೂ ದುಡ್ಡು ಬಿಚ್ಚಲ್ಲ.. ಕಲೆ ಒಳ್ಳೆಯದೇ ನಿಜ, ಆದ್ರೆ ಸಿನಿಮಾ ಕಲೆಗೆ ಬೆಲೆ ಕಟ್ಟಲಿಲ್ಲ ಅಂದ್ರೆ ಹೆಂಗೆ?

ಆದ್ರೂ ೧೫ ದಿನ ಶೂಟಿಂಗ್ ಯಶಸ್ವಿಯಾಗಿ ಮುಗಿಸಿದ್ದೀರ ಅಲ್ವಾ?
-ಹೌದೌದು. ಅದೇ ದೊಡ್ಡ ಸಾಧನೆ. ಸಿನಿಮಾಗಳು ಬಿಡುಗಡೆ ಆದಮೇಲೆ ಯಶಸ್ವಿ ೧೦ ನೇ ದಿನ, ೧೫ ದಿನ ಅಂತ ಹಾಕ್ಕೊ ತಾರಲ್ಲ, ಹಂಗೇ ನಾವು ಅಮೋಘ ೧೫ ದಿನಗಳ ಶೂಟಿಂಗ್ ಮುಕ್ತಾಯ ಅಂತ ಪೋಸ್ಟರ್ ಹಾಕಿಸ್ಬೇಕು ಅಂದ್ಕೊಂಡಿದ್ದೀವಿ.

ನೆಟ್ ಪಿಕ್ಸ್
ಖೇಮು ಖೇಮುಶ್ರೀ ಯಾವುದೋ ವಿಷಯಕ್ಕೆ ಮುನಿಸಿಕೊಂಡು ಮನೆಯಲ್ಲಿ ದೊಡ್ಡ ಜಗಳ ಆಗಿತ್ತು. ಖೇಮು ಕೂಡಾ ಅವತ್ತು ತುಂಬಾ ಸಿಟ್ಟಲ್ಲಿದ್ದ. ಹಂಗಾಗಿ ಖೇಮುಶ್ರೀಯನ್ನು ಬಾಯಿಗೆ ಬಂದಂತೆ ಬಯ್ದ. ಖೇಮುಶ್ರೀ ಏನೂ ಕಡಿಮೆ ಇರಲಿಲ್ಲ. ಗಂಡನ ಮೇಲೆ ತಿರುಗಿ ಬಿದ್ದು ಅವನನ್ನು ಎಲ್ಲ ರೀತಿಯಲ್ಲೂ ಹೀಯಾಳಿಸಿದ್ದಳು.

ಅದಕ್ಕೆ ಖೇಮುಗೆ ಸಿಕ್ಕಾಪಟ್ಟೆ ಬೇಜಾರಾಗಿ ಎದ್ದು ಗಾಡಿ ತಗೊಂಡು ಹೊರಗೆ ಹೋದ. ಹೋದ್ರೆ ಹೋಗ್ಲಿ ಅಂತ ಖೇಮುಶ್ರೀ ಸುಮ್ಮನಾದಳು. ಆದರೆ, ಎಷ್ಟೊತ್ತಾದರೂ ಖೇಮು ವಾಪಸ್ ಬರಲಿಲ್ಲ. ಊಟದ ಟೈಮಿಗೆ ಬರ್ತಾನೆ ಅಂತ ಕಾದು ಕೂತಿದ್ದ ಖೇಮುಶ್ರೀಗೆ ಕೊಂಚ ಗಾಬರಿ ಆಯ್ತು. ಹಂಗಾಗಿ ಗಂಡನಿಗೆ ಕಾಲ್ ಮಾಡಿದಳು. ಮೊದಲೆರಡು ಸಲ, ಖೇಮು ಕಾಲ್ ರಿಸೀವ್
ಮಾಡಲಿಲ್ಲ. ಆಮೇಲೆ ಮೂರ್ನಾಲ್ಕು ಸಲ ಆದ್ಮೆಲೆ ಕಾಲ್ ತೆಗೆದು ಖೇಮು ಏನು? ಅಂದ.

ಸದ್ಯ ಅಂತ ಸಮಾಧಾನ ಪಟ್ಟುಕೊಂಡ ಖೇಮುಶ್ರೀ ಎಲ್ಲಿದ್ದೀರಾ? ಅಂತ ಕೇಳಿದಳು. ಅದಕ್ಕೆ ಖೇಮು ಸ್ವಲ್ಪ ಎಮೋಷನಲ್ ಆಗಿ ಮಾತನಾಡತೊಡಗಿದ ‘ನಿಂಗೆ ನೆನಪಿದೆಯಾ, ೫ ವರುಷದ ಹಿಂದೆ ಸಿಟಿ ಸೆಂಟರ್ ಅಲ್ಲಿರೋ ಜ್ಯೂವೆಲ್ಲರ್ಸ್ ಒಂದಕ್ಕೆ ಹೋಗಿದ್ವಿ ಅಲ್ಲಿ ನಿಂಗೊಂದು, ಡೈಮಂಡ್ ನೆಕ್ಲೇಸ್ ತುಂಬಾ ಇಷ್ಟ ಆಗಿತ್ತು’. ಖೇಮುಶ್ರೀ ಎಕ್ಸೈಟ್ ಆಗಿ ಹೌದು, ಹೌದು ಅಂದ್ಳು. ಖೇಮು ಮುಂದುವರಿಸಿದ ಆದ್ರೆ ಅವತ್ತು ನನ್ನತ್ರ ದುಡ್ಡಿರಲಿಲ್ಲ.

ಮುಂದೊಂದಿನ ಏನೇ ಆಗ್ಲಿ ಆ ನೆಕ್ಲೇಸ್‌ನ ನಾನು ನಿಂಗೆ ಕೊಡಿಸೇ ಕೊಡಿಸ್ತೀನಿ ಅಂತ ಹೇಳಿದ್ದೆ’. ಖೇಮುಶ್ರೀ ಇನ್ನೂ ಎಕ್ಸೈಟ್ ಆಗಿ ‘ಹೌದು, ನಿಜ, ತುಂಬಾ ಚೆನ್ನಾಗಿ ನೆನಪಿದೆ’ ಅಂದ್ಳು. ಅದಕ್ಕೆ ಖೇಮು ‘ಆ ಜ್ಯೂವೆಲ್ಲರಿ ಮುಂದಿರೋ ಬಾರಲ್ಲಿ ಕುಂತು ಕುಡಿತಾ ಇದ್ದೀನಿ. ಏನ್ ಕಾಲ್ ಮಾಡಿದ್ದು?’ ಅಂತ ರೇಗಿದ.

ಲೈನ್ ಮ್ಯಾನ್

ಲೈಫಲ್ಲಿ ಏನೂ ಸಾಧನೆ ಮಾಡಿರದ ತಮ್ಮ ಮಕ್ಕಳನ್ನ ಬಾಲಿವುಡ್ ಮಂದಿ ಹೆಂಗೆ ಬಯ್ತಾರೆ?
-ಆ ಹೀರೋನ ನೋಡಿ ಕಲ್ತ್ಕೋ, ನಿನ್ ವಯಸ್ಸಿಗೆ ಮೂರ್ ಮೂರ್ ಮದ್ವೆ ಆಗಿದ್ದ ಅವ್ನು

ಹಂಗಾದ್ರೆ ಸಲ್ಮಾನ್ ಖಾನ್ ಕಥೆ?

-ಅವ್ನಿಗೆ ಅ ಅಪ್ಪ ಅಮ್ಮನೇ ಬಯ್ತಾರೆ, ‘ನಿನ್ ಜೊತೆಗಿದ್ದ ಹುಡಿಗೀರಿಗೆ’ ಮದ್ವೆ ಆಗಿ ಮಕ್ಕಳಾಯ್ತು, ನಿಂದ್ಯಾವಾಗ್ಲೋ?

ಕಿವಿ ಚುಚ್ಚುವವರ ಕೆಲಸಕ್ಕೆ ಏನಂತಾರೆ?
-‘ಇಯರ್’ರಿಂಗ್ ಏಯ್ಡ

ಡಿಕ್ಷನರಿಗೆ ಇನ್ನೊಂದು ಹೆಸರು
-‘ಅರ್ಥ’ ಶಾಸ್ತ್ರ
ಅಮೆರಿಕಾಕ್ಕೆ ಸಂಬಂಧ ಪಟ್ಟ ಸುದ್ದಿ
-‘ಸ್ಟೇಟ್ಸ್’ ಲೆವೆಲ್ ಸುದ್ದಿ

ಒನ್ ಡೇ ಮ್ಯಾಚಲ್ಲಿ ಸೆಂಚುರಿ ಹೊಡೆದು ಟೆ ಮ್ಯಾಚಲ್ಲಿ ಸೊನ್ನೆಗೆ ಔಟಾಗೋ ಬ್ಯಾಟ್ಸ್ ಮನ್ ನೋಡಿ ಹೇಳೋ ಮಾತು
– ಎವ್ವೆರಿ ಡೇ ಈಸ್ ನಾಟ್ ಒನ್ ಡೇ
‘ಸಿನಿಮಾರಂಗ’ದಲ್ಲಿ ಒಂದು ಸೂಪರ್ ಹಿಟ್ ಕೊಟ್ಟು ನಂತರದ ಸಿನಿಮಾ ಫ್ಲಾಪ್ ಆದ್ರೆ ಜನ ಏನಂತಾರೆ?
-‘ಎವ್ವೆರಿ ಡೇ ಈಸ್ ನಾಟ್ ಫ್ರೈಡೇ’
ಕಾಲೇಜಿನಲ್ಲಿ ವಿದ್ಯಾರ್ಥಿಗಳು ಡೆ ಅಥವಾ ಬೆಂಚ್ ಮೇಲೆ ಬರೆಯುವ ಕವಿತೆಗಳು
-‘ಬೆಂಚ್ ಮಾರ್ಕ್’ ಸಾಹಿತ್ಯ
ಅಂಥ ಸಾಹಿತ್ಯ ಬರೆಯುವ ವಿದ್ಯಾರ್ಥಿಯನ್ನ ಏನಂತಾರೆ?
-‘ಡೆ’ ಟಾಪ್ ಐಕಾನ್
ಹಾಸಿಗೆಯಲ್ಲಿ ಕಕ್ಕ ಮಾಡಿಕೊಳ್ಳೋ ಪುಟ್ಟ ಮಗನನ್ನು ಏನಂತಾರೆ?
-‘ಮಲ’ ಮಗ