Sunday, 15th December 2024

ಕಾಲ ಕೆಳಗಿದ್ದುದು ನೂರಾರು ಶವಗಳ ಸಂತೆ…

ಅಲೆಮಾರಿಯ ಡೈರಿ

ಸಂತೋಷಕುಮಾರ ಮೆಹೆಂದಳೆ

ಇನ್ನೆರಡು ದಿನ ನಿರಂತರ ಏರು ಏರಿದರೆ ಓಂ ಪರ್ವತ ಸಿಕ್ಕುತ್ತದೆ. ಅದರಾಚೆಗೆ ಇರುವುದೇ ನಾಭಿಡಾಂಗ್.

ಏರಲಾಗದ ದಾರಿಯನ್ನು ಅವಸರದಿಂದ ಕ್ರಮಿಸುವಲ್ಲಿ ವಿಫಲವಾಗುತ್ತಲೆ ಏರುತ್ತಿದ್ದಾಗ ಕಾಲಿಗಡರಿ ನಿಲ್ಲಿಸಿದ್ದು ಮಾಲ್ಪಾ.
ನಿದ್ರೆಯಲ್ಲೆ ಅನಾಮತ್ತು ಇನ್ನೂರು ಚಿಲ್ರೆ ಜನ ಆಹುತಿಯಾಗಿದ್ದರಲ್ಲ ಅವರೆಲ್ಲರ ಶವಸಮಾಧಿಯ ಮೇಲೆ ನಡೆದು ಹೋಗ ಬೇಕಿತ್ತು ಆವತ್ತು. ಯಾವ ಆಳದಲ್ಲಿ ಯಾರ ಶವ ಕದಲುತ್ತಿತ್ತೋ ಯಾರ ಪಾಪಕ್ಕೆ ಯಾವ ಪುಣ್ಯಾತ್ಮ ಆತ್ಮ ಅಳುತ್ತಿತ್ತೋ ದೇವರಿಗೂ ಗೊತ್ತಿರಲಿಕ್ಕಿಲ್ಲ.

ನಾನು ಕೈಲಾಸ ಪರ್ವತ ಚಾರಣದಲ್ಲಿ ತಡೆದು ನಿಲ್ಲಿಸಿದ್ದು ಈ ಶಿಲಾಸಮಾಧಿ. ಡೆಲ್ಲಿಯಿಂದ ಹೊರಟು ದಾರ್ಚುಲಾ ಬೇಸ್
ಕ್ಯಾಂಪ್ ತಲುಪುವ ಮೊದಲು, ಜಾಗೇಶ್ವರ್, ಪಾತಾಳ ಭುವನೇಶ್ವರ, ಅಲ್ಮೋಡ, ಕೊತ್ತಗುಡಂ, ಮುನ್ಶಿಯಾರಿ, ಅರೋಮಾ, ಸೇರಿದಂತೆ ತವಾಘಾಟ್, ಪಾಂಗು, ಲಾಮಾರಿ, ನಾರಾಯಣ ಆಶ್ರಮ, ಶಿರ್ಖಾವನ್ನು ಕ್ರಮಿಸುವ ಹೊತ್ತಿಗಾಗಲೇ ತೀರ ಆಕ್ಸಿಜನ್ ನೆತ್ತಿಗೆ ಹತ್ತುವ ಮಟ್ಟ ಮೇಲಕ್ಕೇರಿತ್ತು. ಶಿರ್ಖಾ ದಾಟಿದರೆ ಗಾಲಾ ಕ್ಯಾಂಪು ಸಿಗುತ್ತದೆ ಅದರ ಮಧ್ಯೆ ತಡೆದದ್ದು ಈ ಸಾಲು ಸಾಲು ಜೀವಂತ ಸಮಾಧಿಗಳ ಮಾಲ್ಪಾ.

ಆ ಜಾಗದಲ್ಲಿ ಹೀಗಾಗಬಹುದೆಂಬ ಸಣ್ಣ ಅಂದಾಜೂ ಅವರಿಗಿರಲಿಲ್ಲ. ಅಲ್ಲಿ ಆಗಾಗ ಭೂಮಿ ಅದರುವಿಕೆ ಜೊತೆ ಕಲ್ಲು ಮಣ್ಣು ಕುಸಿಯುತ್ತಲೆ ಇರುತ್ತದೆ. ಕೆಲವೊಮ್ಮೆ ರಸ್ತೆಯೇ ನಾಪತ್ತೆಯಾಗಿ ನಾಲ್ಕೆ ದು ಅಡಿ ಎತ್ತರದ ಕಲ್ಲು ಮಣ್ಣಿನ ದಿಬ್ಬ ಮೂಡಿ ಬೇರೆ ಕಾಲ್ದಾರಿ ನಿರ್ಮಾಣ ವಾಗಿರುತ್ತದೆ. ಇದರಿಂದಾಗಿ ಸ್ಥಳಿಯರಾರೂ ಇದರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ.

ಆದರೆ ಇಪ್ಪತ್ಮೂರು ವರ್ಷಗಳ ಹಿಂದೆ ಈ ರೇಂಜಿನಲ್ಲಿ ಭೂಮಿ ಅದರುತ್ತದೆ ಎಂದು ಅಂದಾಜಿರಲಿಲ್ಲ. ಅಲ್ಲಿಯವರೆಗೆ ಮಾಲ್ಪಾ
ಮತ್ತು ಬುಧಿಗಳ ಪರ್ವತ ಸಾಲು ಯಾವತ್ತೂ ಹೀಗೆ ವರ್ತಿಸಿರಲಿಲ್ಲ. ಇಲ್ಲಿನ ಪರ್ವತ ಸಾಲುಗಳು ಅಗಾಧ ಎತ್ತರಕ್ಕಿದ್ದು ಒಂದೊಂದು ಆಕಾಶವನ್ನು ಚುಂಬಿಸುವಂಥ ಭಾರಿ ಅಳತೆಯ ಕಲ್ಲು ಬಂಡೆಗಳ ಸಮೂಹ. ಕೊಟ್ಟಕೊನೆಯ ರಸ್ತೆಯ ಸೌಕರ್ಯದ ದಾರ್ಚುಲಾ ಭಾಗದಿಂದ ಮಾಂಗ್ಟಿ ಎಂಬ ಹತ್ತಿರದ ತಿರುವಿನವರೆಗೆ ವಾಹನದಲ್ಲಿ ಡ್ರಾಪ್ ಪಡೆದು ನಂತರ ನಡೆದೇ ಹೊರಡುವ ಯಾತ್ರಿಕರು ಇದೇ ರಸ್ತೆಯ ಮೂಲಕವಾಗಿಯೇ ಕೈಲಾಸ – ಮಾನಸ ಸರೋವರ ಯಾತ್ರೆ ಹೊರಡಬೇಕು.

ಇಂತಹದ್ದೇ ಒಂದು ತಂಡ 1998ರಲ್ಲಿ ಯಾತ್ರೆಗಾಗಿ ಆಗಸ್ಟ್ ಹದಿನಾರರಂದು ಮಾಂಗ್ಟಿಯಿಂದ ಹದಿನಾಲ್ಕು ಕಿ.ಮೀ. ದೂರದ ಗಾಲದವರೆಗೆ ಏರುತ್ತಾ ಸಾಗಿ ಹೋಗಿದೆ. ಒಂದೆಡೆ ಪ್ರಪಾತ, ಇನ್ನೊಂದೆಡೆ ನೇರವಾಗಿ ನಿಂತ ಶಿಲಾ ಸಮೂಹ ಪರ್ವತಗಳು. ಚಾರಣ ಆರಂಭಿಸಿದ ತಂಡ ಮೂರೂವರೆ ಸಾವಿರ ಮೆಟ್ಟಿಲ ಕಲ್ಲಿನ ದಾರಿಯಿಳಿದು ಲಖನಪುರ ತಲುಪಿದೆ. ಅಲ್ಲಿ ಮಧ್ಯಾಹ್ನದ ವಿಶ್ರಾಂತಿ ಮುಗಿಸಿ ಮುಂದಿನ ಇನ್ನು ಆರೆಂಟು ಕೀ.ಮೀ ದೂರದ ಕ್ಯಾಂಪ್ ಸೇರಿಕೊಂಡಿದೆ. ಅದೇ ಮಾಲ್ಪಾ ಕ್ಯಾಂಪು.

ಬೆಳಗ್ಗೆಯಿಂದ ಏರು ದಾರಿ ಕ್ರಮಿಸಿದ್ದ ತಂಡ ಸುಸ್ತಾಗಿ ಕೊಂಚ ವಿಶ್ರಾಂತಿ ಪಡೆದುಕೊಂಡು ಹೊರಕ್ಕೆ ಬಂದಿದೆ. ಆ ದಿನ ತಂಡ ದೊಂದಿಗೆ ಐ.ಟಿ.ಬಿ.ಪಿ ತಂಡದ ಶಸಸಜ್ಜಿತ ಸೈನಿಕರಿದ್ದರು. ಮೂವತ್ತಕ್ಕೂ ಹೆಚ್ಚು ಜನ ಕಚ್ಚರಗಳ ಮೇಲೆ ಸಾಮಾನು ಸಾಗಿಸು ವವರು, ಅವರೊಂದಿಗೆ ಪೋನಿಗಳನ್ನು ನಡೆಸುವವರು, ಜೊತೆಗೆ ಅವರ ಕುದುರೆಗಳು ಇವರೆಲ್ಲರೊಂದಿಗೆ ಲಾಮಾರಿ, ಲಖನಪುರ ಹಾಗೂ ಮಲ್ಪಾದ ಜನರು. ಒಟ್ಟು ಸೇರಿದ್ದ ಜನಸಂಖ್ಯೆ ಸುಮಾರು ಇನ್ನೂರಿಪ್ಪತ್ತೊಂದು. ಆ ತಂಡದಲ್ಲಿ ಭಾರತದ ಆಗಿನ ಗ್ಲಾಮರಸ್ ನೃತ್ಯಪಟು ಪ್ರೋತಿಮಾ ಬೇಡಿ ಇದ್ದಳು. ಆಕೆ ಈ ಕೈಲಾಸ ಮಾನಸ ಪರ್ವತ ಯಾತ್ರೆಯ ಉದ್ದಕ್ಕೂ ಕ್ಯಾಂಪ್ ಹಾಕಿದ ಜಾಗದಲ್ಲಿ ನೃತ್ಯ ಮಾಡುತ್ತಾ ಕೈಲಾಸ ಪರ್ವತ ದರ್ಶನಕ್ಕೆ ಹೊರಟಿದ್ದಳು.

ಆದ್ದರಿಂದಲೇ ಸಂಜೆಯ ಹೊತ್ತಿಗೆ ಎಲ್ಲ ಜನರು ಸೇರಿ ಆಕೆಯ ಆಗಮನದ ನಿರೀಕ್ಷೆಯಲ್ಲಿದ್ದರು. ಮಾಲ್ಪಾದಲ್ಲೂ ಕಂಡ ಕಂಡಲ್ಲಿ
ಪಂಜಿನ ಹಿಡಿಕೆಗಳನ್ನು ಹೂಡಿ ಶೃಂಗರಿಸಲಾಗಿತ್ತು. ಕರೆಂಟಿನ ಮಾತೇ ಇಲ್ಲವಲ್ಲ. ಉಳಿದ ಕಡೆಗಳಲ್ಲಿ ಪ್ರೋತಿಮಾ ಬೇಡಿ ಅಲ್ಲಿನ
ಕ್ಯಾಂಪುಗಳ ಕಟ್ಟೆಯ ಮೇಲೋ, ಪಕ್ಕದ ಊಟದ ಹಾಲ್‌ನಲ್ಲೋ ಪ್ರದರ್ಶನ ನೀಡಿದ್ದರೆ ಇಲ್ಲಿ ಮಾತ್ರ ಆಕೆ ಅಗಾಧವಾಗಿದ್ದ ಕಪ್ಪುಕಲ್ಲು ಹಾಸಿನ ಮೇಲೆ ಎತ್ತರಕ್ಕೇರಿ ಬಹಿರಂಗ ಪ್ರದರ್ಶನ ನೀಡುವವಳಿದ್ದಳು.

ನೈಜ ಕಲ್ಲು ಮಂಚದಂಥ ಕಪ್ಪು ಶಿಲೆಯ ಮೇಲೆ ಇನ್ನೇನು ನೃತ್ಯ ಕಾರ್ಯಕ್ರಮ ಆರಂಭವಾಗಬೇಕು. ಒಮ್ಮೆ ಸಣ್ಣದಾಗಿ ಭೂಮಿ ಅದುರಿದೆ. ಮತ್ತೊಮ್ಮೆ ಎನೋ ಧಡಾರನೇ ಶಬ್ದವಾಗಿದೆ. ಅಷ್ಟು ದೂರದಲ್ಲಿ ಸಣ್ಣದಾಗಿ ಕಲ್ಲು ಜರುಗಿದೆ ಅದೂ ತುಂಬ ಕೆಳಮಟ್ಟದಲ್ಲಿ. ಅಲ್ಲೆಲ್ಲಾ ಭೂಮಿ ಅದರುವುದು ಸಾಮಾನ್ಯ. ಎದ್ದು ನಿಂತ ಜನರು ಪುನಃ ಕುಳಿತಿದ್ದಾರೆ. ಆದರೆ ಹಾಗೆ ಜರುಗಿದ್ದು ಪಕ್ಕದ ಮಾಲ್ಪಾ ಮಾತೆಯ ಬೆಟ್ಟದ ತುಂಬ ಕೆಳಗಿನ ಅಡಿಪಾಯದ ರೀತಿಯಲ್ಲಿದ್ದ ದೊಡ್ಡ ಕಲ್ಲಿನ ಸಮೂಹ ಎನ್ನುವುದನ್ನು ಯಾರೂ ಗಮನಿಸಿಯೇ ಇಲ್ಲ.

ಮೇಲಿಂದ ಸಣ್ಣ ಕಲ್ಲುಗಳು ಬುಲೆಟ್ ತರಹ ಧಾವಿಸಿ ಬರುತ್ತಿದ್ದಂತೆ ತಂಡದ ಕುದುರೆ ವಾಹಕನಾಗಿದ್ದ ಧೇನುಬಾಬ ಪಕ್ಕದಲ್ಲಿದ್ದ ಸ್ಥಳೀಯ ಸವಾರಿಗೆ ಪಿಸುಗುಟ್ಟಿದ್ದಾನೆ. ಅವನು ಇದಕ್ಕೆ ಸೊಪ್ಪು ಹಾಕದಿದ್ದಾಗ ಇದ್ದಕ್ಕಿದ್ದಂತೆ ಧೇನುಬಾಬನಿಗೆ ಏನೋ ನೆನಪಾಗಿ ಕೆಳಗಿನ ಕ್ಯಾಂಪಿಗೆ ಹೊರಟು ನಿಂತಿದ್ದಾನೆ. ಸ್ಥಳೀಯ ದಾರಿಬಲ್ಲವನು ಕತ್ತಲ ರಾತ್ರಿಗಳಲ್ಲೂ ಸಲೀಸಾಗಿ ಏರಿಳಿಯಬಲ್ಲವನು.
ಸಂಪೂರ್ಣ ಇನ್ನೂರು ಚಿಲ್ರೆ ಜನರಿದ್ದ ಗುಂಪು ಅಲ್ಲೆಲ್ಲಾ ಚದುರಿಕೊಂಡು ಅವರ ಅನುಕೂಲಕ್ಕೆ ತಕ್ಕಂತೆ ಕುಳಿತಿದ್ದರೆ, ಒಂದೆರಡು ನೃತ್ಯ ಪ್ರದರ್ಶನ ನೀಡಿದ ಪ್ರೋತಿಮಾ ಬೇಡಿ ಸಮಯವಾಯಿತೆಂದು ಎಚ್ಚರಿಸುತ್ತಿದ್ದ ಕಾರಣ ಅಧಿಕಾರಿಯ ಮಾತಿನಂತೆ ಟೆಂಟ್ ಸೇರಿಕೊಂಡಿದ್ದಾಳೆ. ಕಾರಣ ಅಲ್ಲೆಲ್ಲ ಸಂಜೆಯ ಆರು ಗಂಟೆ ಎಂದರೆ ಹೆಚ್ಚಾಗುವ ಸಮಯ.

ಊಟ ಮುಗಿಸಿ ಬೆಳಿಗ್ಗೆ ಮತ್ತೆ ಬೇಗ ಹೊರಡಬೇಕೆಂದು ಎಂಟು ಗಂಟೆಗೆಲ್ಲಾ ಮಾಲ್ಪಾ ಕ್ಯಾಂಪು ನಿದ್ರೆಗಿಳಿದಿದೆ. ಇತ್ತ ಸಂಜೆ ಹೊರಬಿದ್ದಿದ್ದ ಧೇನುಬಾಬ, ಮರುದಿನ ಬೆಳಗ್ಗೆದ್ದು ವಾಪಸ್ಸು ಬರುವಾಗ ಶಿರ್ಖಾದಿಂದ ಸರಿಯಾದ ದಾರಿಯಲ್ಲೆ ಬಂದಿದ್ದನಾ ದರೂ ಯಾಕೋ ದಾರಿ ತಪ್ಪಿದೆಯೇ ಎನ್ನಿಸಿದೆ. ಹಿಂದಿರುಗಿ ನೋಡಿದರೆ ಅಲ್ಲಿಯವರೆಗೂ ಸರಿ ಇದೆ. ಇಲ್ಲಿಯೇ ಮಾಲ್ಪಾ ಸಿಕ್ಕುತ್ತದೆ. ಈ ಕ್ಯಾಂಪು ದಾಟಿದ ಮೇಲೆ ಗಾಲಾ, ಬುಧಿ, ಗುಂಜಿ, ಜಾಲಿಂಗ್ ಕಾಂಗ್, ಕುಠಿ, ಕಾಲಾಪಾನಿ, ಓ ಪರ್ವತ, ನಾಭಿಡಾಂಗ್ ಅದಕ್ಕೂ ಮುಂದೆ ಸಿಕ್ಕುವುದೇ ಚೀನಿ ಬಾರ್ಡರ್‌ನ ಡೇತ್‌ಪಾಸ್ ಎಂದೇ ಹೆಸರಾದ ಲಿಪಿಲೇಕ್ ಪಾಸ್.

ಅದರಾಚೆಗೆ ಕೈಲಾಸ ಪರ್ವತ. ಇದೆಲ್ಲ ಅದೆಷ್ಟು ಬರಿ ಪೋನಿಗಳ ಜೊತೆ ಹೋಗಿದ್ದಾನೋ, ಹೊಸ ದಾರಿ ಅಲ್ಲವೇ ಅಲ್ಲ. ಆದರೆ ಇದೇನು ಮಧ್ಯೆ ಇದ್ದಕ್ಕಿದ್ದಂತೆ ಅಗಾಧ ಪರ್ವತ ಎದ್ದು ನಿಂತಿದೆ. ಆಗಿರುವ ಅನಾಹುತ ಅರಿವಾಗಲು ಸುಮಾರು ಸಮಯ
ಬೇಕಾಗಿದೆ. ಅವತ್ತು ಬೆಳಗಿನ ಜಾವ ಮೂರು ಗಂಟೆಯ ಹೊತ್ತಿಗೆ ಕ್ಯಾಂಪು ಗಾಢ ನಿದ್ರೆಯಲ್ಲಿದ್ದಾಗ ಮಾಲ್ಪಾ ಬೆಟ್ಟ ಅನಾಮತ್ತಾಗಿ
ಕುಸಿದು ಬಿದ್ದಿದೆ. ಧೇನುಬಾಬಾ ಮಾತ್ರ ಹೊರತುಪಡಿಸಿದರೆ ನಿನ್ನೆ ಅಲ್ಲೊಂದು ಗುಂಪು ಬಿಡಾರ ಹೂಡಿತ್ತು ಎನ್ನುವ ಅವಶೇಶವೂ
ಉಳಿಯದಂತೆ ಭೂಮಿಯ ಮುಖವನ್ನೇ ಬದಲಿಸಿ ಅಕ್ಷರಶಃ ಅರವತ್ತೈದು ಅಡಿ ಎತ್ತರದ ಹೆಬ್ಬಂಡೆಯ ರಾಶಿ.

ಸುತ್ತಲಿನ ಸುಮಾರು ಮುಕ್ಕಾಲು ಕಿ.ಮಿ ವ್ಯಾಸದಷ್ಟು ಭೂಮಿ, ಕುಸಿದ ಅವಶೇಷಗಳಿಂದ ತುಂಬಿಹೋಗಿತ್ತು. ಒಂದೂವರೆ ದಶಲಕ್ಷ ಚ.ಮೀ. ಕಲ್ಲಿನ ಸಂಗ್ರಹ ಅಲ್ಲಿ ಪೇರಿಸಿದಂತೆ ಬಿದ್ದಿತ್ತು. ಮರುದಿನ ಬೆಳಗ್ಗೆ ನಿಗಮದ ಜನ ಮತ್ತು ಜಿಲ್ಲಾಡಳಿತ ತಲುಪುವ ವೇಳೆಗೆ ಒಂದೇ ಒಂದು ಅವಶೇಷ ಕೂಡಾ ಕದಲಿಸಲಾಗದಂತೆ ಮಾಲ್ಪಾ ಕ್ಯಾಂಪು ಶಾಶ್ವತವಾಗಿ ಮುಚ್ಚಿ ಹೋಗಿತ್ತು.

ಪೂರ್ತಿ ಇನ್ನೂರಿಪ್ಪತ್ತೊಂದು ಜನರ ಜೀವಂತ ಸಮಾಧಿಯ ಗುಂಪಿನಿಂದ ಒಂದೇ ಒಂದು ವಸ್ತುವನ್ನೂ ಇವತ್ತಿಗೂ ಈಚೆಗೆ
ತೆಗೆಯಲಾಗಿಲ್ಲ. ಅಂಥಾ ಅಗಾಧ ಹೆಬ್ಬಂಡೆಗಳ ರಾಶಿಯನ್ನು ಕದಲಿಸಲಾಗದ ಸಿಬ್ಬಂದಿ ಸುಮ್ಮನಾದರು. ಕಾರಣ ಅವಶೇಷವನ್ನು
ಕದಲಿಸಲು ಬೇಕಾಗುವ ಯಾವುದೇ ಯಂತ್ರ ಸಾಮಗ್ರಿ ಈ ರಸ್ತೆಯಲ್ಲಿ ಕ್ರಮಿಸಿ ಬರಲೇ ಸಾಧ್ಯವಿರಲಿಲ್ಲ. ಕಥೆ ಹೇಳಲು ಉಳಿದಿದ್ದ
ಧೇನುಬಾಬಾ ಮಾತ್ರ ಜೀವಂತ ಸಾಕ್ಷಿಯಾಗಿದ್ದ.

ಕೈಲಾಸ ಮಾನಸ ಯಾತ್ರಿಗಳು ಈಗಲೂ ಅದೇ ದಾರಿಯಲ್ಲಿ ಕುಸಿದ ಭೂಮಿಯ ಮೇಲೆ, ಅಷ್ಟು ಜನರ ಜೀವಂತ ಸಮಾಧಿಯ
ಮೇಲೆ ಕಾಲಿಟ್ಟು ನಡೆಯುತ್ತಾರೆ. ಆದರೆ ಈಗ ಮಾಲ್ಪಾ ಬದಲಾಗಿ ಅದರ ಮುಂದಿನ ಊರಿಗೆ ಕ್ಯಾಂಪ್ ಬದಲಾಗಿದೆ. ಈಗಲೂ ತಲೆ
ಮೇಲೆ ಬೀಳುವಂತೆ ಭಯ ಹುಟ್ಟಿಸುತ್ತ ಸಣ್ಣ ಸಣ್ಣ ಕಲ್ಲುಗಳು ಉದುರುತ್ತವೆ. ಅಲ್ಲೆಲ್ಲ ಗೈಡ್ ನಿಲ್ಲಲು ಕೊಡದೆ ಬೇಗ ಬೇಗ ಮುಂದಕ್ಕೆ ಹೋಗುವಂತೆ ಕೂಗುತ್ತಿರುತ್ತಾನೆ.

ಆದರೂ ಅಲ್ಲಿದ್ದ ಬಾರ್ಡರ್ ಆರ್ಮಿಯವರು ಹೂಡಿರುವ ಒಂದು ಫಲಕ ಈ ಕಥೆಯನ್ನು ನೆನಪಿಸುತ್ತಿದ್ದರೆ ಒಮ್ಮೆ ನಿಟ್ಟುಸಿರು ಹೊಮ್ಮುವುದು ಸತ್ಯ. ಅಲ್ಲಿಯವರೆಗೆ ತೀರ ಅಪರಿಚಿತವಾಗಿದ್ದ ಮಾಲ್ಪಾ ಒಮ್ಮೆಲೆ ಗ್ಲಾಮರಸ್ ನೃತ್ಯ ಪಟು, ಗುರು ಕೇಳುಚರಣ ಮಹಾಪಾತ್ರರ ಶಿಷ್ಯೆಯನ್ನು ನುಂಗಿದ ಕುಖ್ಯಾತಿಗೆ ಪಾತ್ರವಾಯಿತು. ಅಷ್ಟೆ ಪ್ರಸಿದ್ಧಿಗೂ ಬಂತು. ಕೇದಾರದಲ್ಲಿ ಜಲಪ್ರಳಯ ವಾದಾಗ ಮಾಲ್ಪಾ ಮತ್ತೆ ಕುಸಿದಿದ್ದನ್ನು ಖಚಿತ ಪಡಿಸಿದ್ದಾರೆ ಸ್ಥಳಿಯರು. ಆದರೂ ಕೈಲಾಸ – ಮಾನಸ ಪರ್ವತ ಯಾತ್ರೆ ಯಲ್ಲೇನೂ ವ್ಯತ್ಯಾಸವಾಗಿಲ್ಲ. ಕಾರಣ ಬದುಕಿದ್ದವರಿಗೆ ಮಾತ್ರ ಮರ್ಯಾದೆ ಎಂದು ಬದಲಾಗಿರುವ ಜಗತ್ತಿನಲ್ಲಿ ಮರೆಯಾದ ವರು ಮರೆತು ಹೋಗಲು ಮೂರು ದಿನವೂ ಬೇಕಿಲ್ಲ.

ಹಾಗೆಯೇ ಪ್ರೋತಿಮಾ ಸಹಿತ ಸೈನಿಕರು ಎಲ್ಲ ಮರೆಯಾಗಿ ದಶಕಗಳೆ ಕಳೆದಿವೆ. ಭಾರವಾದ ಮನಸ್ಸಿನಿಂದ ನಾನೂ ಗಾಲ ಕ್ಯಾಂಪ್
ನತ್ತ ಕಾಲು ಹರಿಸಿದ್ದೆ. ಎದುರಿಗೆ ಹಿಮ ಹಾಸಿನ ಮೇಲೆ ಓಂ..ಕಾರ ಲಕಲಕ ಹೊಳೆಯುತ್ತಿತ್ತು