Saturday, 14th December 2024

ಆರ್ಥಿಕತೆ, ಪರಿಸರ, ಹಸಿವು ಮತ್ತು ಎಥೆನಾಲ್ ರಾಜಕೀಯ !

ಸುಪ್ತ ಸಾಗರ

rkbhadti@gmail.com

ಗೊತ್ತಿಲ್ಲ; ಹೀಗೊಂದು ಇದ್ದರೂ ಇರಬಹುದೇನೋ?! ದೇಶಾದ್ಯಂತ ಬಹು ಭಕ್ತರ ನಂಬುಗೆಯ ಶಿರಡಿ ಸಾಯಿಬಾಬಾ ಅವರಿಗೆ ಆಗಲೇ ಎಥೆನಾಲ್ ಅಥವಾ ಪರ್ಯಾಯ ಇಂಧನ ಬಳಕೆಯ ತಂತ್ರಗಳು ಗೊತ್ತಿದ್ದರೂ ಗೊತ್ತಿದ್ದಿರಬಹುದು. ಅವರ ಚರಿತ್ರೆಯಲ್ಲಿ ಹೀಗೊಂದು ಘಟನೆಯ ಉಲ್ಲೇಖವಿದೆ-ಬಾಬಾರು ಕಾರ್ತೀಕದ ಒಂದು ರಾತ್ರಿ ಮಂದಿರ ದೆದುರು ಸಾಲು ದೀಪಗಳಿಗೆ ಎಣ್ಣೆ ಇಲ್ಲದೇ ಹೋದಾಗ ನೀರನ್ನು ಸುರಿದು, ಬೆಳಗಿಸಿದರಂತೆ.

ದೇವ ಮಾನವರೆಂದೇ ನಂಬಿರುವ ಬಾಬಾರ ಪವಾಡದ ಮಾತುಗಳು ಬೇರೆ. ಇರಲಿ, ಅಂತೂ ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆ ಚಂದ್ರಯಾನದ ರಾಕೆಟ್‌ನಂತೆ ಗಗನದೆತ್ತರಕ್ಕೆ ಚಿಮ್ಮುತ್ತಿರುವಾಗ ಅದು ನೀರೋ, ಮತ್ತೊಂದೋ ಅಂತೂ ನಮಗೆ ಪೆಟ್ರೋಲ್, ಡೀಸೆಲ್‌ಗಳ ಬದಲಿಗೆ ಬೇರೇನನ್ನಾದರೂ ಹಾಕಿ ಸುಲಭದಲ್ಲಿ ನಮ್ಮ ಗಾಡಿಗಳನ್ನು ರೊಯ್ಯನೆ ರಸ್ತೆಯ ಮೇಲೆ ಓಡಿಸುವ ಉಪಾಯವೊಂದು ಬೇಕಿದೆ. ಇತ್ತೀಚಿನ ಹವಾಮಾನ ವೈಪರೀತ್ಯಗಳ ಹೆಚ್ಚಳದ ಸನ್ನಿವೇಶದಲ್ಲಂತೂ ವಾತಾವರಣದ ಮಾಲಿನ್ಯ ನಿಯಂತ್ರಣದ ನಿಟ್ಟಿನಲ್ಲೂ ಪರ್ಯಾಯ ಇಂಧನ ಬಳಕೆ ನಮಗೆ ಅನಿವಾರ್ಯವಾಗಿದೆ.

ಹಾಗೆಂದೇ ಜಗತ್ತಿನೆಲ್ಲೆಡೆ ಪೆಟ್ರೋಲ್‌ಗೆ ಪರ್ಯಾಯವಾಗಿ ಎಥೆನಾಲ್ ಉತ್ಪಾದನೆ ಮತ್ತು ಬಳಕೆ ಹೆಚ್ಚಾಗುತ್ತಿದೆ. ನಮ್ಮಲ್ಲೂ ಕೇಂದ್ರ ಸರಕಾರ ಪೆಟ್ರೋಲ್-ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಹಂತಹಂತವಾಗಿ ಹೆಚ್ಚಿಸುತ್ತಿದ್ದು, ಇನ್ನೊಂದು ತಿಂಗಳಲ್ಲಿ ಸಂಪೂರ್ಣ ಎಥೆನಾಲ್ -ಚಾಲಿತ ವಾಹನಗಳು ಮಾರುಕಟ್ಟೆಗೆ ದಾಂಗುಡಿಯಿಡಲಿವೆ ಎಂದು ಸ್ವತಃ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಾರಿ ಬಿಟ್ಟಿದ್ದಾರೆ.

ಸಚಿವರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ದೇಶದಲ್ಲಿ ಕೇವಲ ೧೫ ರು.ಗೆ ಪೆಟ್ರೋಲ್ ಸಿಗುವ ದಿನ ದೂರವಿಲ್ಲ ಎಂದಿದ್ದಾರೆ. ಅಂದರೆ ಎಥೆನಾಲ್ ಚಾಲಿತ, ಇ-ವಾಹನಗಳು ಜನಪ್ರಿಯವಾಗುತ್ತಿದ್ದಂತೆಯೇ ಅಷ್ಟರ ಮಟ್ಟಿಗೆ ಪೆಟ್ರೋಲ್-ಡೀಸೆಲ್‌ಗಳು ಬೇಡಿಕೆ ಕಳೆದುಕೊಳ್ಳುತ್ತವೆ ಎಂಬುದು ಅವರ ಮಾತಿನ ಸಾರ. ತಕ್ಷಣಕ್ಕೆ ಇದು ತುಸು ಉತ್ಪ್ರೇಕ್ಷೆಯೆನಿಸಿದರೂ, ಈ ವಾಹನಗಳ ಭರಾಟೆ ಬೆಂಗಳೂರು ಸೇರಿದಂತೆ ದೇಶದ ನಗರಗಳಲ್ಲಿ ಹೆಚ್ಚುತ್ತಿರುವುದು ನೋಡಿದರೆ, ಬಹುಮಟ್ಟಿಗೆ ಇಂಧನ ದರ ನಿಯಂತ್ರಣಕ್ಕೆ ಬರುವುದರಲ್ಲಿ ಅನುಮಾನವಿಲ್ಲ.

ಎಥೆನಾಲ್ ವಿಚಾರದಲ್ಲಿ ಕೇಂದ್ರ ಸರಕಾರದ ಇಂಥ ಮಹತ್ವಾಕಾಂಕ್ಷೆ ತಪ್ಪೇನಲ್ಲ. ಪರಿಸರ ಹಾಗೂ ಆರ್ಥಿಕತೆಯ ದೃಷ್ಟಿಯಿಂದ
ನೋಡಿದಾಗಲೂ, ಕಚ್ಚಾ ತೈಲದ ಆಮದು ವೆಚ್ಚ ಗಣನೀಯ ವಾಗಿ ತಗ್ಗುತ್ತದೆ ಮತ್ತು ವಾಯುಮಾಲಿನ್ಯ ಕಡಿಮೆಯಾಗುತ್ತದೆ. ಆದರೆ ಈ ಪ್ರಮಾಣದ ಎಥೆನಾಲ್ ಉತ್ಪಾದನೆಯ ಸಾಧ್ಯಾಸಾಧ್ಯತೆ ಮತ್ತು ಅದರ ತಯಾರಿಕೆಯ ರೀತಿಯ ಬಗೆಗೆ ಒಂದಷ್ಟು ಚರ್ಚೆ ಅಗತ್ಯವೆನಿಸುತ್ತದೆ. ಈಗ ನಾವು ಎಥೆನಾಲ್ ತಯಾರಿಕೆಗೆ ಪ್ರಮುಖ ಕಚ್ಚಾಪದಾರ್ಥವಾಗಿ ಬಳಸುತ್ತಿರುವ ಅಕ್ಕಿ ಸೇರಿದಂತೆ ಆಹಾರ ಪದಾರ್ಥಗಳ ಲಭ್ಯತೆ ಮತ್ತು ಔಚಿತ್ಯ ಪ್ರಹ್ನಾರ್ಹವಾಗುತ್ತಿದೆ.

ಅಂದುಕೊಂಡಂತೆ ಸಂಪೂರ್ಣ ಪೆಟ್ರೋಲ್‌ನ ಹಂಗನ್ನೇ ತೊರೆದು ಭಾರತದಂಥ ದೇಶ ಬದುಕಬೇಕೆಂದರೆ ಎಥೆನಾಲ್‌ನ ಉತ್ಪಾ
ದನೆ ಸುಸ್ಥಿರವಾಗಿರಬೇಕು, ಪೂರೈಕೆ ನಿರಂತರವಾಗಿರಬೇಕು. ದೇಶದಲ್ಲಿ ಪೆಟ್ರೋಲ್ ದರ ನೂರರ ಗಡಿದಾಟಿ ಎಷ್ಟೋ ಕಾಲವಾಯಿತು. ಯಾವಾಗ ಅರಬ್ ರಾಷ್ಟ್ರಗಳಿಂದ ಆಮದು ತೈಲ ಕೈ ಸುಡುತ್ತದೆ ಎಂಬುದು ಅರಿವಾಯಿತೋ, ನಾವು ಎಥೆನಾಲ್ ಪರ್ಯಾಯ ಬಳಕೆಗೆ ಮುಂದಾದೆವು. ಕೇಂದ್ರ ಸರಕಾರದ ಅಂಕಿ ಅಂಶಗಳ ಪ್ರಕಾರ ಇದೀಗ ಪೆಟ್ರೋಲ್‌ಗೆ ಶೇ. ೨೦ರಷ್ಟು ಎಥೆನಾಲ್ ಮಿಶ್ರಣ ಮಾಡಿ ಬಳಸಲಾಗುತ್ತಿದೆ. ಎಥನಾಲ್ ಎನ್ನುವುದು ಯಾವುದೋ ರಾಸಾಯಣಿಕ ಮಿಶ್ರಣವಾಗಲೀ, ಭಾರೀ ಸಂಶೋಧನೆಯ ಫಲತವಾಗಲೀ ಅಲ್ಲ. ಸಸ್ಯಜನ್ಯ ಕೊಬ್ಬಿನ ಅಂಶ.

ಇನ್ನೂ ಸರಳವಾಗಿ ಹೇಳುವುದಾದರೆ ಲಾಗಾಯ್ತಿನಿಂದಲೂ ಗ್ರಾಮೀಣ ಭಾಗದಲ್ಲಿ ಬಳಸುತ್ತಲೇ ಬಂದಿರುವ ಕಳ್ಳು ಅಥವಾ ಭಟ್ಟಿ ಸಾರಾಯಿಯ ಇನ್ನಷ್ಟು ಸುಧಾರಿತ ರೂಪ. ಕಬ್ಬಿನ ಆಲೆಮನೆಗಳಲ್ಲಿ ದೊರೆಯುವ ಕಾಕಂಬಿನ್ನು ಮತ್ತಷ್ಟು ಕುದಿಸಿ, ಭಟ್ಟಿ ಇಳಿಸಿದಾಗ ದೊರೆಯುವುದೇ ಎಥೆನಾಲ್; ಆಲ್ಕೋಹಾಲ್ ಅಥವಾ ಸ್ಪಿರಿಟ್‌ನ ಇನ್ನೊಂದು ಸ್ವರೂಪ. ಕೊಳೆತ ಆಲೂಗಡ್ಡೆ, ಗೆಣಸು, ಮೆಕ್ಕೆಜೋಳ ಮೊದಲಾದ ‘ಪಿಷ್ಟಭರಿತ’ ತರಕಾರಿ/ಗಡ್ಡೆ-ಗೆಣಸು, ಕೆಲ ಜಾತಿಯ ಹಣ್ಣು ಗಳಿಂದ ತಯಾರಿಸುವ ಎಥೆನಾಲ್ ಒಂದು ತೆರನಾದರೆ, ಸೆಲ್ಯುಲಾಸ್ ಮತ್ತು ಲಿಗ್ನೋಸೆಲ್ಯುಲಾಸ್ ಅಂಶಗಳನ್ನು ಹೇರಳವಾಗಿ ಒಳಗೊಂಡಿರುವ ಅಕ್ಕಿಹೊಟ್ಟು, ಗೋಧಿ ಹೊಟ್ಟು, ಮುಸುಕಿನ ಜೋಳದ ತೆನೆದಿಂಡು, ಬಿದಿರು ಹಾಗೂ ಕಾಂಡಭಾಗವಿರುವ ಜೀವದ್ರವ್ಯ ಇತ್ಯಾದಿಗಳಿಂದ
ತಯಾರಾಗುವ ಎಥೆನಾಲ್ ಮತ್ತೊಂದು ರೀತಿಯದ್ದು.

ಇದಲ್ಲದೇ, ಕೆಲ ಜಾತಿಯ ಪಾಚಿ-ಆಲ್ಗೆಗಳಿಂದಲೂ ಎಥೆನಾಲ್ ತಯಾರಿಕೆ ಸಾಧ್ಯ ಎನ್ನಲಾಗಿದ್ದು, ಪ್ರಯೋಗ ನಡೆಯುತ್ತಿದೆ.
ಸಾಮಾನ್ಯವಾಗಿ ಆಲೆಮನೆಗಳಲ್ಲಿ ಬೆಲ್ಲ ತಯಾರಿಸುವಾಗ ಅಥವಾ ಕಾರ್ಖಾನೆಗಳಲ್ಲಿ ಸಕ್ಕರೆ ತಯಾರಿಯಲ್ಲಿ ಉತ್ಪಾದನೆ ಯಾಗುವ ‘ಕಾಕಂಬಿ’ಯನ್ನು ಡಿಸ್ಟಿಲರಿಗಳಲ್ಲಿ ಭಟ್ಟಿ ಇಳಿಸಿದಾಗ ‘ರೆಕ್ಟಿ-ಡ್ ಸ್ಪಿರಿಟ್’ ಸಿಗುತ್ತದೆ. ಇದನ್ನು ಈಥೈಲ್ ಆಲ್ಕೋಹಾಲ್ ಎಂದೂ ಕರೆಯಲಾಗುತ್ತದೆ. ಇದಕ್ಕೆ ೧:೮ ಪ್ರಮಾಣದಲ್ಲಿ ನೀರನ್ನು ಬೆರೆಸಿದಾಗ ಸಾರಾಯಿ ಎನಿಸಿಕೊಳ್ಳುತ್ತದೆ. ನೀರು ಬೆರೆಸದೇ ಮತ್ತೆ ಕುದಿಸಿ, ಸಂಸ್ಕರಣೆಗೆ ಒಳಪಡಿಸಿ ಒಂದಿನಿತೂ ಸಸ್ಯದಲ್ಲಿನ ಸಕ್ಕರೆಯಂಶ ಇಲ್ಲದಂತೆ ತೆಗೆದರೆ ‘ತಟಸ್ಥ ಸ್ಪಿರಿಟ್’ ರೂಪುಗೊಳ್ಳುತ್ತದೆ.

ಇದೇ ಬಿಯರ್-ಬ್ರಾಂದಿ-ವಿಸ್ಕಿ ರೂಪದಲ್ಲಿ ಸಿಗುವುದು. ಇದನ್ನು ತಟಸ್ಥ ಸ್ಪಿರಿಟ್ ಎಂದೂ ಕರೆಯುತ್ತಾರೆ. ಇಂಥ ತಟಸ್ಥ ಸ್ಪಿರಿಟ್
ಅನ್ನು ಇನ್ನೂ ಸಂಸ್ಕರಿಸಿದ ಬಳಿಕ ಎಥೆನಾಲ್ ಸಿಗುತ್ತದೆ. ಇದನ್ನು ೧೯೭೦ರ ದಶಕದಲ್ಲಿಯೇ ಜಗತ್ತಿಗೆ ಪರಿಚಯಿಸಿದ ಕೀರ್ತೀ ಬ್ರೆಜಿಲ್‌ನದ್ದು. ಇಂದಿಗೂ ಎಥೆನಾಲ್‌ನ ವಿಶ್ವದ ಎರಡನೇ ಅತಿದೊಡ್ಡ ಉತ್ಪಾದಕ. ಹಾಗೆ ನೋಡಿದರೆ, ಇಷ್ಟೆಲ್ಲದರ ನಡುವೆಯೂ ಅಂದು ಕೊಂಡಷ್ಟು ವೇಗ ಮತ್ತು ಪ್ರಮಾಣದಲ್ಲಿ ಎಥೆನಾಲ್ ಉತ್ಪಾದನೆ ನಮ್ಮಿಂದಾಗುತ್ತಿಲ್ಲ. ಕಾರಣವಿಷ್ಟೇ ಕೃಷಿಕರಿಗೆ ಇನ್ನೂ ಎಥೆನಾಲ್ ಉತ್ಪಾದನೆ ಲಾಭದಾಯಕ ಎನಿಸಿಲ್ಲ.

ಆಹಾರದ ದೃಷ್ಟಿಕೋನದಲ್ಲಿ ನೋಡಿದರೆ ಇದು ಒಳ್ಳೆಯದೇ. ಆದರೆ, ಆರ್ಥಿಕ ಲಾಭದ ದೃಷ್ಟಿಕೋನದಲ್ಲಿ ಹೇಳುವುದಾದರೆ ಎಥೆನಾಲ್‌ನೆಡೆಗೆ ರೈತರು ಹೆಚ್ಚಿನ ಗಮನ ಹರಿಸಬೇಕಾದದ್ದು ಸಮಂಜಸ. ಕೃಷಿಕರು, ಸಂಸ್ಕರಣಾ ಕೇಂದ್ರಗಳು ಮತ್ತು ಸಕ್ಕರೆ ಕಾರ್ಖಾನೆಗಳು ಈ ವಿಷಯದಲ್ಲಿ ದೃಢಹೆಜ್ಜೆಯಿಟ್ಟರೆ ಹೊಸಮಾರ್ಗ ಮತ್ತು ಪರ್ಯಾಯ ಆದಾಯದ ಮೂಲ ತನ್ನಿಂತಾನೇ ತೆರೆದುಕೊಳ್ಳುತ್ತವೆ ಎನ್ನುತ್ತಾರೆ ತಜ್ಞರು. ಕರ್ನಾಟಕದ ವಿಚಾರಕ್ಕೆ ಬಂದರೆ ನಮ್ಮಲ್ಲಿ ಕಬ್ಬು ಉತ್ಪಾದನೆ ಹಾಗೂ ಸಕ್ಕರೆ
ಕಾರ್ಖಾನೆಗಳೆರಡೂ ಹೆಚ್ಚಿರುವುದರಿಂದ ನಮ್ಮಲ್ಲಿ ಎಥೆನಾಲ್ ಉತ್ಪಾದನೆಗೆ ಹೆಚ್ಚಿನ ಅವಕಾಶವಿದೆ.

ಸದ್ಯದ ಒಟ್ಟಾರೆ ಎಥೆನಾಲ್ ಉತ್ಪಾದನೆಯನ್ನು ಗಮನಿಸಿದರೆ ರಾಜ್ಯವೇ ಮೊದಲ ಸ್ಥಾನದಲ್ಲಿದೆ. ಬೆಳಗಾವಿ, ಬಾಗಲಕೋಟೆ,  ವಿಜಯಪುರ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವೆಡೆ ೬೦ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಿದ್ದು, ಈ ಪೈಕಿ ಮುಕ್ಕಾಲು ಭಾಗಕ್ಕೂ ಹೆಚ್ಚಿನವು ಎಥೆನಾಲ್ ತಯಾರಿಯಲ್ಲಿ ವ್ಯಸ್ತವಾಗಿವೆ. ಹೀಗಾಗಿ ರಾಜ್ಯದಿಂದ ಎಥೆನಾಲ್ ಪೂರೈಕೆ ಅಬಾಧಿತವಾಗಿರಲಿದೆ ಎಂಬುದರಲ್ಲಿ ಅನುಮಾನವಿಲ್ಲ.

ಆದರೆ, ಇಡೀ ರಾಷ್ಟ್ರ ಇಂಧನ ಸ್ವಾವಲಂಬಿಯಾಗಲು ಯಾವುದೋ ಒಂದು ರಾಜ್ಯದ ಉತ್ಪಾದನೆ ಯಾವ ಕಾರಣಕ್ಕೂ ಸಾಲದು. ಈ ನಿಟ್ಟಿನಲ್ಲಿ ಎಲ್ಲ ರಾಜ್ಯಗಳಲ್ಲೂ ಸರಕಾರದ ಮಟ್ಟದಲ್ಲಿ ಸ್ಪಷ್ಟ ನೀತಿ ರೂಪುಗೊಳ್ಳುವ ಅಗತ್ಯವಿದೆ. ಮಹಾರಾಷ್ಟ್ರ, ಒಡಿಶಾ, ಉತ್ತರಪ್ರದೇಶ, ಹರಿಯಾಣ, ಪಂಜಾಬ್‌ನಂಥ ರಾಜ್ಯಗಳಲ್ಲಿ ಕರ್ನಾಟಕದಂತೆಯೇ ಎಥೆನಾಲ್ ಉತ್ಪಾದನೆಯ ಅವಕಾಶ ಹೇರಳವಾಗಿದೆ. ಸಕ್ಕರೆ ಉತ್ಪಾದನೆಯೇ ಮುಖ್ಯಗುರಿಯಾಗಿರುವ ಸಕ್ಕರೆ ಕಾರ್ಖಾನೆಗಳು ಎಥೆನಾಲ್ ಉತ್ಪಾದನೆಯತ್ತ ಹೊರಳಿದರೆ ‘ವ್ಯಾವಹಾರಿಕವಾಗಿ’ ಅದು ಜಾಣನಡೆಯೇ? ಲಾಭದಾಯಕವೇ? ಎಂಬ ಪ್ರಶ್ನೆಯಿಲ್ಲಿ ಮೂಡಬಹುದು.

ಮಾರುಕಟ್ಟೆಯಲ್ಲಿ ಗಣನೀಯ ಪ್ರಮಾಣದ ಸಕ್ಕರೆ ದಾಸ್ತಾನಿದ್ದು ಅದರ ಪೂರೈಕೆಯ ಅಗತ್ಯವಿರದ ಅಥವಾ ಬೇಡಿಕೆಗಿಂತ ಹೆಚ್ಚಿನ ಕಬ್ಬಿನ ಬೆಳೆ ಉತ್ಪಾದನೆಯಾದ ಸಂದರ್ಭವಿರುವುದರಿಂದ ಸಕ್ಕರೆ ಕಾರ್ಖಾನೆಗಳನ್ನು ಎಥೆನಾಲ್ ತಯಾರಿಗೆ ಬಳಸಿಕೊಳ್ಳ ಬಹುದು. ಕಬ್ಬಿನ ಹಾಲಿನಿಂದ ನೇರವಾಗಿ ತಯಾರಾದ ಎಥೆನಾಲ್‌ಗೆ ಲೀಟರ್‌ಗೆ ೬೨ ರು. ಸಿಕ್ಕರೆ, ಕಾಕಂಬಿಯಿಂದ ತಯಾರಾಗಿ ದ್ದಕ್ಕೆ ಲೀ.ಗೆ ೫೮ ರೂ. ದಕ್ಕುತ್ತದೆ. ಹೀಗಾಗಿ ಸಕ್ಕರೆ ತಯಾರಿ ಮತ್ತು ಮಾರಾಟವನ್ನೇ ನೆಚ್ಚದೆ ಎಥೆನಾಲ್ ನತ್ತಲೂ ಗಮನ ಹರಿಸಿದರೆ ಸಕ್ಕರೆ ಕಾರ್ಖಾನೆಗಳು ವ್ಯಾವಹಾರಿಕ ಸಮತೋಲನವನ್ನು ಕಾಯ್ದುಕೊಳ್ಳಬಹುದು.

ಇದರಿಂದ ದೇಶಕ್ಕೂ ದುಡ್ಡಿನ ಉಳಿತಾಯ ಆಗುವುದರಲ್ಲಿ ಅನುಮಾನವಿಲ್ಲ. ಬದಲಿ ಇಂಧನವಾಗಿ ಎಥೆನಾಲ್‌ನ ಮೊರೆ ಹೋಗುವುದರಿಂದ ದೇಶಕ್ಕೆ ಗಣನೀಯ ಆರ್ಥಿಕ ಪ್ರಯೋಜನವಿದೆ. ೨೦೨೦-೨೧ರ ಹಣಕಾಸು ವರ್ಷದಲ್ಲಿ ಭಾರತವು ಬರೋಬ್ಬರಿ ೫೫ ಶತಕೋಟಿ ಡಾಲರ್ ವೆಚ್ಚಮಾಡಿ ೧೮೫ ಮೆಟ್ರಿಕ್ ಟನ್‌ನಷ್ಟು ಪೆಟ್ರೋಲಿಯಂ ಅನ್ನು ಆಮದು ಮಾಡಿಕೊಂಡಿತ್ತು. ಈಗಿನಂತೆ, ಪೆಟ್ರೋಲ್-ಎಥೆನಾಲ್ ಮಿಶ್ರಣದ ಪರಿಪಾಠವನ್ನು ಹೀಗೇ ಮುಂದುವರಿಸಿದರೆ ದೇಶಕ್ಕೆ ಏನಿಲ್ಲವೆಂದರೂ ವಾರ್ಷಿಕ ೩೦,೦೦೦ ಕೋಟಿ ರು.ನಷ್ಟು ವಿದೇಶಿ ವಿನಿಮಯ ಉಳಿತಾಯವಾಗುತ್ತದೆ ಎನ್ನುತ್ತಾರೆ ನೀತಿ ಆಯೋಗದ ತಜ್ಞರು.

ಈ ಎಲ್ಲ ಅಂಕಿ ಅಂಶಗಳು, ಸಾಧ್ಯಾಸಾಧ್ಯತೆಗಳ ನಡುವೆ ಹೆಚ್ಚು ಸುದ್ದಿಯಾಗುತ್ತಿರುವುದು ಎಥೆನಾಲ್‌ನ ರಾಜಕೀಯ. ಎಥೆನಾಲ್ ಉತ್ಪಾದನೆಗೆ ೨೯.೫ ಲಕ್ಷ ಟನ್ ಗೃಹಬಳಕೆಗೆ ಉಪಯುಕ್ತವಾದ ಅಕ್ಕಿಯನ್ನು ಬಳಸಲಾಗುತ್ತಿದೆ ಎಂದು ಕೇಂದ್ರ ಸರಕಾರ ಹೇಳಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಮಾನವ ಬಳಕೆಗೆ ಯೋಗ್ಯವಲ್ಲದ ಅಕ್ಕಿ, ಜೋಳದಂತಹ ಆಹಾರಧಾನ್ಯವನ್ನು ಎಥೆನಾಲ್ ಉತ್ಪಾದನೆಗೆ ಬಳಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿತ್ತು.

ಆದರೆ, ಆಹಾರ ಬಳಕೆಯ ಉತ್ಪನ್ನಗಳಾದ ಅಕ್ಕಿ ಗೋಧಿ ಬಳಸಿ ಎಥೆನಾಲ್ ಉತ್ಪಾದನೆಯನ್ನು ಹೆಚ್ಚಿಸಲು ರಾಷ್ಟ್ರೀಯ ಜೈವಿಕ ಇಂಧನ ಯೋಜನೆ ೨೦೧೮ಕ್ಕೆ ಕೇಂದ್ರ ಸರಕಾರ ತಿದ್ದುಪಡಿ ತಂದಿತ್ತು. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಗೃಹಬಳಕೆಗೆ ಉಪಯುಕ್ತ ವಾದ ಅಕ್ಕಿಯನ್ನು ಎಥೆನಾಲ್ ಉತ್ಪಾದನೆಗೆ ಬಳಸಲಾಗುತ್ತಿದೆ. ಇದನ್ನು ಕೇಂದ್ರದ ವಿರುದ್ಧ ಟೀಕಾಸವಾಗಿ ಕಾಂಗ್ರೆಸ್‌ನ ಬಳಸಿದೆ. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ ೧೦೧ನೇ ಸ್ಥಾನದಲ್ಲಿರುವ ವರದಿಗಳು ಬಂದಿರುವಾಗಲೇ, ಹಸಿವು ನೀಗಿಸುವುದು ಆದ್ಯತೆಯಾಗದೇ, ಇಂಧನ ಉಳಿತಾಯ ಮತ್ತು ಪಾರಿಸಾರಿಕ ಕಾರಣಕ್ಕೆ ಎಥೆನಾಲ್ ಮಿಶ್ರಣದ ಯೋಜನೆಗೆ ಕೋಟಿಗಟ್ಟಲೆ
ವ್ಯಯಿಸುತ್ತಿರುವುದು ಒಪ್ಪತಕ್ಕ ನಡೆ ಎನಿಸಿಕೊಳ್ಳುವುದಿಲ್ಲ.

‘ಅಭಿವೃದ್ಧಿ’ ಎಂಬುದು ಮೊದಲಿಂದಲೂ ಹೀಗೆಯೇ ವ್ಯಾಖ್ಯಾನವಾಗುತ್ತಿದೆ. ಅಲ್ಲಿ ಅಂತಃಕರಣವಾಗಲೀ, ಭಾವನೆಗಳಾಗಲೀ ಗಣನೆಗೆ ಬರುವುದೇ ಇಲ್ಲ. ಅದು ಭೌತಿಕ ನಿರ್ಮಾಣಗಳಾಗಲೀ, ತಾಂತ್ರಿಕ ಲೆಕ್ಕಾಚಾರಗಳಾಗಲೀ ಇದಕ್ಕೆ ಹೊರತಲ್ಲ. ಪಕ್ಷಾತೀತ ವಾಗಿ ಸರಕಾರಗಳು ವರ್ತಿಸುವುದೇ ಹೀಗೆ. ಇನ್ನೂ ವಿಶೇಷ ಗೊತ್ತೇ? ಭಾರತದಲ್ಲಿ ಉತ್ಪಾದನೆಯಾಗುವ ಅಕ್ಕಿ ಇಲ್ಲಿನ ಆಹಾರಕ್ಕಾಗಿ ಬಳಕೆಯಾಗುವ ದರ ಕ್ವಿಂಟಲ್‌ಗೆ ?೩,೪೦೦. ಆದರೆ, ಎಥೆನಾಲ್ ಉತ್ಪಾದನೆಗೆ ಅಕ್ಕಿ ಖರೀದಿಸಲು ಒಂದು ಕ್ವಿಂಟಲ್‌ಗೆ ?೨,೪೦೦ ಎಂದು ಕೇಂದ್ರ ಮಾರ್ಗಸೂಚಿಯಲ್ಲಿ ನಿಗದಿಪಡಿಸಿದೆ.

ಹಾಗಾದಲ್ಲಿ ತಿನ್ನುವ ಅನ್ನದ ಬೆಲೆಯೇನು? ಕಬ್ಬು ಅಥವಾ ಸಕ್ಕರೆಯಿಂದ ಎಥೆನಾಲ್ ಉತ್ಪಾದಿಸುವುದು ಅತ್ಯಂತ ಸರಳ ಮತ್ತು ಕಡಿಮೆ ವೆಚ್ಚ ತಗುಲುತ್ತದೆ ಎಂಬುದು ಸತ್ಯ. ಹೇಗೂ ದೇಶದಲ್ಲಿ ಕಬ್ಬಿನ ಬೆಳೆ ಹೆಚ್ಚೇ ಇದೆ. ಹೀಗಾಗಿ ಸಹಜವಾಗಿಯೇ ದೇಶದಲ್ಲಿ
ಸಕ್ಕರೆ ಉತ್ಪಾದನೆ ಅವಶ್ಯಕತೆಗಿಂತ ಬಹಳ ಹೆಚ್ಚಿದೆ. ೫೫ ಲಕ್ಷ ಟನ್ ಸಕ್ಕರೆ ಗೋದಾಮುಗಳಲ್ಲಿದ್ದು, ಈ ಹಂಗಾಮಿನಲ್ಲಿ
ಮತ್ತೆ ಬರಲಿದೆ.

ರಫ್ತು ಮಾರುಕಟ್ಟೆ ಬೇಡಿಕೆ ಕಡಿಮೆಯಿರುವಾಗ, ಕಬ್ಬನ್ನೇ ನೇರವಾಗಿ ಬಳಸಿ ಎಥೆನಾಲ್ ಉತ್ಪಾದಿಸಬಹುದು. ಹೀಗೆ ಮಾಡಿದಲ್ಲಿ
ಉತ್ಪಾದನೆಯಾಗುವ (ಶೇ.೬೮) ಎಥೆನಾಲ್ ಪ್ರಮಾಣವೂ ಹೆಚ್ಚು. ಇನ್ನೂ ಗಮನಾರ್ಹ ಸಂಗತಿಯೆಂದರೆ, ಅಕ್ಕಿಯಿಂದ ಎಥೆನಾಲ್ ಉತ್ಪಾದಿಸುವುದು ಸುದೀರ್ಘ ಪ್ರಕ್ರಿಯೆ, ಇಳುವರಿ ಕೂಡ ಕಡಿಮೆ. ಇನ್ನು ಒಂದು ಎಥೆನಾಲ್ ಘಟಕ ಪ್ರಾರಂಭ ಮಾಡುವ ಉದ್ದೇಶ ಹೊಂದಿದ್ದರೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಕ್ಕೆ ವ್ಯವಸ್ಥೆ ಇದೆ. ಇದರ ಜತೆಗೆ ಸರಕಾರ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ರಾಜ್ಯಗಳು ಅಥವಾ ಯಾವುದೇ ಖಾಸಗಿ ವ್ಯಕ್ತಿಗಳು ಎಷ್ಟು ಬೇಕಾದರೂ ಧಾನ್ಯಗಳನ್ನು ಖರೀದಿಸಬಹುದಾಗಿದೆ.

ದುರಂತ ಎಂದರೆ ಸರಕಾರ ಇಷ್ಟು ದೊಡ್ಡ ಪ್ರಮಾಣದಲ್ಲಿ ಎಥೆನಾಲ್ ಉತ್ಪಾದನೆಗೆ ಯೋಜನೆ ರೂಪಿಸಿದರೂ ಇಲ್ಲಿಯವರೆಗೆ ಒಂದೇ ಒಂದು ಸರಕಾರಿ ಸ್ವಾಮ್ಯದ ಎಥೆನಾಲ್ ಘಟಕ ಸ್ಥಾಪಿಸಿಲ್ಲ. ಇಲ್ಲಿಯವರೆಗೆ ಹತ್ತಾರು ಎಥೆನಾಲ್ ಘಟಕ ಸ್ಥಾಪನೆ ಯಾಗಿದ್ದರೂ  ಅವೆಲ್ಲವೂ ಖಾಸಗಿ ಘಟಕಗಳೇ ಹೊರತು ಸರ್ಕಾರಿ ಸ್ವಾಮ್ಯದ್ದಾಗಿಲ್ಲ.

ದೇಶದಲ್ಲಿ ಒಟ್ಟು ಇರುವ ಸಕ್ಕರೆ ಕಾರ್ಖಾನೆಗಳು ಸರಿಸುಮಾರು ೭೫೦. ಈ ಪೈಕಿ ಅರ್ಧಕ್ಕೂ ಹೆಚ್ಚು ಕಾರ್ಖಾನೆಗಳು ಎಥೆನಾಲ್ ಉತ್ಪಾದಿಸುತ್ತಿವೆ. ೨೦೨೫ರ ವೇಳೆಗೆ ದೇಶದ ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲೂ ಎಥೆನಾಲ್ ಉತ್ಪಾದಿಸುವ ಗುರಿ. ದೇಶದ ಸಹಕಾರಿ ಮತ್ತು ಖಾಸಗಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳಗಳೆಲ್ಲವೂ ಸೇರಿ ೨೦೨೫ರ ವೇಳೆಗೆ ಒಟ್ಟು ಬೇಕಾಗುವ ಒಂದು ಸಾವಿರ ಕೋಟಿ ಲೀಟರ್ ಎಥೆನಾಲ್ ಪೂರೈಸಲು ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಕರ್ನಾಟಕದಲ್ಲಿ ೩೭ ಸಕ್ಕರೆ ಕಾರ್ಖಾನೆ ಗಳು ನೇರವಾಗಿ ಕಬ್ಬಿನಿಂದ ಎಥೆನಾಲ್ ಉತ್ಪಾದಿಸುತ್ತಿವೆ.

ರಾಜ್ಯದ ಉಳಿದ ಕಾರ್ಖಾನೆಗಳು ಕೂಡ ಉತ್ಪಾದನೆಗೆ ಸಿದ್ಧತೆ ಮಾಡಿಕೊಳ್ಳತೊಡಗಿವೆ. ಕಬ್ಬಿನಿಂದ ಎಥೆನಾಲ್ ಮಾತ್ರ ಉತ್ಪಾದಿಸುವ ಕಾರ್ಖಾನೆಗಳೂ ಆರಂಭಗೊಳ್ಳುತ್ತಿವೆ. ಏತನ್ಮಧ್ಯೆ ಪಂಜಾಬ, ಹರಿಯಾಣ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಗೋಧಿ, ಭತ್ತದ ಹುಲ್ಲಿನಿಂದ ಎಥೆನಾಲ್ ಉತ್ಪಾದಿಸುವ ಘಟಕಗಳೂ ತಲೆ ಎತ್ತುತ್ತಿವೆ. ಇದೇ ಮಾದರಿಯಲ್ಲಿ ಗ್ರಾಮೀಣ ಭಾಗದಲ್ಲಿ ಸಣ್ಣ ಸಣ್ಣ ಎಥೆನಾಲ್ ಘಟಕಗಳು ಬರುವಂತಾದರೆ ಗ್ರಾಮೀಣ ಉದ್ದಿಮೆಯನ್ನೂ ಪ್ರೋತ್ಸಾಹಿಸಿದಂತಾಗುತ್ತದೆ. ಸುಸ್ಥಿರ ಅಭಿವೃದ್ಧಿಗೂ ಮುನ್ನಡಿ ಬರೆದಂತಾಗುತ್ತದೆ. ಅಭಿವೃದ್ಧಿ ಸಾಗಬೇಕಾದ ಹಾದಿಯೇ ಹೀಗೆ.

ಜನಪರ, ಆರ್ಥಿಕವಾಗಿ ಕಾರ್ಯಸಾಧುವಾದ, ಪರಿಸರಪೂರಕ, ಸುಸ್ಥಿರ ಯೋಜನೆಗಳು ಮಾತ್ರ ನೈಜ ಅಭಿವೃದ್ಧಿ ಎನಿಸಿ ಕೊಳ್ಳುತ್ತದೆ. ಇಲ್ಲದಿದ್ದರೆ ಕಾಡು ನುಂಗುವ ವಿವಿಧೋದ್ದೇಶ ನಿರಾವರಿ ಯೋಜನೆಗಳ ಮೂಲಕ ವಿದ್ಯುತ್ ಉತ್ಪಾದಿಸಿ ದೇಶ ಬೆಳಗಿದಷ್ಟೇ ಅರ್ಥಹೀನ. ವಯ್ಯಾರದ ವೇಶ್ಯೆ ಕೊಟ್ಟ ದುಡ್ಡಿಗೆ ಮೀರಿಯೂ ಸುಖ ಕೊಡಬಹುದು. ಆದರೆ, ನಡುವಯಸ್ಸು ಮೀರಿದಾಗ ನಡುಗುವ ಕೈ ಹಿಡಿದು ನಡೆಸುವ ವಾತ್ಸಲ್ಯ, ಬದ್ಧತೆ ತೋರಲಾರಳು!