Sunday, 15th December 2024

ಬೇಟೆಗಾರನೊಬ್ಬ ಪರಿಸರ ರಕ್ಷಕನಾದ ಕಥನ

ಶಶಾಂಕಣ

ಶಶಿಧರ ಹಾಲಾಡಿ

shashidhara.halady@gmail.com

ಮೂಲತಃ ಬೇಟೆಗಾರನಾಗಿದ್ದ ಇವರು ಪರಿಸರ ಕಾಳಜಿಯನ್ನೂ ಹೊಂದಿದ್ದರು. ಬಂದೂಕಿನ ಬದಲು ಕ್ಯಾಮೆರಾದಿಂದ ಶೂಟ್ ಮಾಡುವುದು ಒಳ್ಳೆಯದು ಎಂದಿದ್ದರು. ಜತೆಗೆ ಉತ್ತಮ ಬೇಟೆ – ಸಾಹಿತ್ಯವನ್ನೂ ರಚಿಸಿ, ಜನರಲ್ಲಿ ಪರಿಸರ ಕಾಳಜಿ ಮೂಡಿಸಿದರು.

ಹಿಮಾಲಯದ ಸೆರಗಿನಲ್ಲಿರುವ ಬದರಿನಾಥ ಮತ್ತು ಕೇದಾರನಾಥಕ್ಕೆ ಪ್ರತಿವರ್ಷ ಸಾವಿರಾರು ಜನರು ನಡೆದುಕೊಂಡೇ ಹೋಗುತ್ತಿದ್ದ ಕಾಲವದು. ರುದ್ರ ಪ್ರಯಾಗದ ಹತ್ತಿರ ಸಾಗುವ ಕಾಡುದಾರಿಯಲ್ಲಿ ಒಂದು ಚಿರತೆಯು ಅಮಾಯಕ ಯಾತ್ರಿಕರ ಮೇಲೆ ಎರಗು ತ್ತಿತ್ತು. ಯಾವುದೋ ಕಾರಣದಿಂದ ನರಭಕ್ಷಕನ ರೂಪ ಪಡೆದಿದ್ದ ಆ ಚಿರತೆಯು ರುದ್ರಪ್ರಯಾಗದ ಸರಹದ್ದಿನ ಜನರಿಗೆ, ಯಾತ್ರಿಕರಿಗೆ ಕಂಟಕ ಎನಿಸಿತ್ತು.

14.4.1926 ರಂದು ಆ ಚಿರತೆ ಒಬ್ಬ ವ್ಯಕ್ತಿಯನ್ನು ಸಾಯಿಸಿತು. ಅದೇ ಆ ಚಿರತೆಯ ಕೊನೆಯ ಬಲಿ. ಏಕೆಂದರೆ, 2.5.1926ರಂದು ಖ್ಯಾತ ಬೇಟೆಗಾರ ಜಿಮ್ ಕಾರ್ಬೆಟ್ ಅದನ್ನು ಗುಂಡಿಟ್ಟು ಕೊಂದರು. 15.5.1926 ರಂದು ಈ ನರಭಕ್ಷಕನ ಬೇಟೆಯ ಕಥೆಯನ್ನು ‘ದಿ ಪಯೊನಿರ್’ ಪತ್ರಿಕೆ ವರದಿ ಮಾಡಿತ್ತು. ಈ ಘಟನೆ ನಡೆದು ಸುಮಾರು 20 ವರ್ಷಗಳ ನಂತರ, ಜಿಮ್ ಕಾರ್ಬೆಟ್ ಬರೆದ ಪುಸ್ತಕ, ‘ರುದ್ರಪ್ರಯಾಗದ ನರಭಕ್ಷಕ ಚಿರತೆ’ (ದಿ ಮ್ಯಾನ್ ಈಟಿಂಗ್ ಲೆಪಾರ್ಡ್ ಆ- ರುದ್ರಪ್ರಯಾಗ) (1947) ಪುಸ್ತಕದಲ್ಲಿ ಅವರ ಅನುಭವವು ವಿವರವಾಗಿ ಪ್ರಕಟಗೊಂಡಿತು.

ಆ ಒಂದು ನರಭಕ್ಷಕ ಚಿರತೆಯ ಬೇಟೆಯ ಅನುಭವವು ಜಿಮ್ ಕಾರ್ಬೆಟ್ ಅವರ ನೆನಪಿನಲ್ಲಿ ಎರಡು ದಶಕಗಳ ಕಾಲ ಅಡಗಿ ಕುಳಿತಿದ್ದು, ಕಾವು ಪಡೆದು, ಕಾದಂಬರಿ ಸ್ವರೂಪದ ಪುಸ್ತಕದಲ್ಲಿ ಪ್ರಕಟಗೊಂಡು, ಜನಮೆಚ್ಚುಗೆ ಗಳಿಸಿತು ಎಂಬುದು ಒಂದು ಸಾಹಿತ್ಯಕ ಅನುಭವವಾಗಿಯೂ ವಿಶಿಷ್ಟ. ಜತೆಗೆಈ ಪುಸ್ತಕ ಮತ್ತು ಜಿಮ್ ಕಾರ್ಬೆಟ್ ರಚಿಸಿದ ಇತರ ಬೇಟೆಯ ನೆನಪಿನ ಪುಸ್ತಕಗಳು ವಿಶ್ವದಾದ್ಯಂತ ಓದುಗರ ಮೆಚ್ಚುಗೆಗೆ ದಕ್ಕಿದ್ದು, ಅದನ್ನು ಇಂಗ್ಲಿಷ್ ಬಲ್ಲ ಓದುಗರು ಬಹುವಾಗಿ ಮೆಚ್ಚಿಕೊಂಡದ್ದು, ಇವೆಲ್ಲವೂ ಸಾಹಿತ್ಯ ಲೋಕದ ದಾಖಲೆಗಳಾಗಿ ಉಳಿದುಹೋಗಿವೆ. ‘ರುದ್ರಪ್ರಯಾಗದ ನರಭಕ್ಷಕ’ ಎಂಬ ಹೆಸರಿನಲ್ಲಿ ತೇಜಸ್ವಿಯವರು ಇದನ್ನು ಕನ್ನಡದಲ್ಲೂ ಹೊರತಂದಿದ್ದಾರೆ, ಜಿಮ್ ಕಾರ್ಬೆಟ್ ಅವರ ಬೇಟೆಯ ಇತರ ಪುಸ್ತಕಗಳೂ ಕನ್ನಡದಲ್ಲಿ ಹೊರಬಂದು ಜನ ಮೆಚ್ಚುಗೆ ಗಳಿಸಿವೆ.

ಜಿಮ್ ಕಾರ್ಬೆಟ್ ಒಬ್ಬ ಬ್ರಿಟಿಷ್ ಬೇಟೆಗಾರ. ಹುಟ್ಟಿದ್ದು ನಮ್ಮ ದೇಶದಲ್ಲೇ ಆದರೂ ಬ್ರಿಟಿಷ್ ರಾಜ್ ವ್ಯವಸ್ಥೆಯ ಪ್ರಾತಿನಿಧಿಕ ವ್ಯಕ್ತಿ. ಹುಲಿ, ಚಿರತೆಯಂತಹ ದೊಡ್ಡ ಪ್ರಾಣಿಗಳನ್ನು ಬೇಟೆಯಾಡಿ ಪ್ರಸಿದ್ಧನಾದ ವ್ಯಕ್ತಿ. ಸಾಮಾನ್ಯವಾಗಿ ಜನರಿಗೆ ತೊಂದರೆ ಕೊಡುವ, ನರಭಕ್ಷಕ ಸ್ವರೂಪ ಪಡೆದ ಹುಲಿಗಳನ್ನು ಬೇಟೆಯಾಡುವುದರಲ್ಲಿ
ಇವರು ಎತ್ತಿದ ಕೈ. ಬಂದೂಕು ಚಲಾಯಿಸಿ ಪ್ರಾಣಿಗಳನ್ನು ಹತ್ಯೆ ಮಾಡುವುದ ಇವರ ಖಯಾಲಿಯೂ ಹೌದು, ಹಳ್ಳಿಯ ಜನರಿಗೆ ಸಹಾಯ ಮಾಡುವ ವಿಧಾನವೂ ಹೌದು. ಮೂಲತಃ ಮನುಷ್ಯರನ್ನು ಕಂಡರೆ ಹೆದರಿ ದೂರ ಸರಿಯುವ ಹುಲಿ ಮತ್ತು ಚಿರತೆಗಳು, ಅದಾವುದೋ ಕಾರಣದಿಂದ ಮನುಷ್ಯನ ಮೇಲೆ ಆಕ್ರಮಣ ಮಾಡುವ ಗುಣವನ್ನು ರೂಢಿಸಿಕೊಂಡಾಗ, ಅಂತಹ ನರಭಕ್ಷಕನನ್ನು ಗುಂಡಿಟ್ಟು ಸಾಯಿಸುವ ಮೂಲಕ ತಾನು ಬಹಳಷ್ಟು ಜನರ ಜೀವ ಉಳಿಸಿದೆ ಎಂದೇ ಜಿಮ್
ಕಾರ್ಬೆಟ್ ತಮ್ಮ ಬರಹಗಳಲ್ಲಿ ಸೂಚಿಸಿದ್ದಾರೆ.

ಜತೆಗೆ ಹುಲಿ, ಚಿರತೆಗಳು ಅದೇಕೆ ನರಭಕ್ಷಕನಾಗಿ ರೂಪುಗೊಳ್ಳುತ್ತವೆ ಎಂದು ವಿವರವಾದ ಅಧ್ಯಯನವನ್ನೂ ನಡೆಸಿದ್ದಾರೆ. ಮುಳ್ಳುಹಂದಿಯ ಮುಳ್ಳು ಚುಚ್ಚಿದ ಹುಲಿ ನರಭಕ್ಷಕನಾಗಿದ್ದನ್ನು ಗಮನಿಸಿದ್ದಾರೆ. 1919-20ರ ನಡುವೆ ಸಾಂಕ್ರಾಮಿಕ ರೋಗದಿಂದ ಸಾವಿರಾರು ಜನ ಸತ್ತಾಗ, ಅಡವಿ ಅಂಚಿನಲ್ಲಿ ಹೆಣಗಳನ್ನು ಎಸೆದಾಗ, ಅದರ ರುಚಿ ಕಂಡ ಹುಲಿ, ಚಿರತೆಗಳು ನರಭಕ್ಷಕನಾಗಿ ರೂಪುಗೊಂಡದ್ದನ್ನು ಗುರುತಿಸಿದ್ದಾರೆ. ಇಂತಹ ಒಬ್ಬ ಬೇಟೆಗಾರನು ಸಾಹಿತಿಯಾಗಿಯೂ ಯಶಸ್ಸು ಪಡೆದಿರುವುದು ಒಂದು ಅಚ್ಚರಿ. ಇನ್ನೂ ವಿಸ್ಮಯದ ವಿಚಾರವೆಂದರೆ, ನಮ್ಮ ದೇಶದ ಪ್ರಖ್ಯಾತ ರಾಷ್ಟ್ರೀಯ ಅಭಯಾರಣ್ಯಕ್ಕೆ ಇವರ ಹೆಸರನ್ನು ಇಟ್ಟಿರು ವುದು! ಜಿಮ್ ಕಾರ್ಬೆಟ್ ಕೇವಲ ಗುಂಡು ಹಾರಿಸಿ ಮೃಗಗಳನ್ನು ಸಾಯಿಸುವ ಬೇಟೆಗಾರನಾಗಿರಲಿಲ್ಲ, ಅವರಲ್ಲಿ ಒಬ್ಬ ಸಾಹಿತಿ ಇದ್ದ, ಒಬ್ಬ ಪರಿಸರಪ್ರೇಮಿ ಇದ್ದ, ಪ್ರಾಣಿ ಪ್ರೇಮಿಯೂ ಇದ್ದ, ಜನರ ಮೇಲೆ ಕಳಕಳಿಯಿದ್ದ ಅಧಿಕಾರಿಯೂ ಇದ್ದ.

ಬೇಟಗಾರನೊಬ್ಬನು ಪರಿಸರ ರಕ್ಷಣೆಯ ಮೊದಲ ಪಾಠಗಳನ್ನು ಬೋಧಿಸಿದ ಅಪರೂಪದ ಉದಾಹರಣೆಯನ್ನು ಜಿಮ್ ಕಾರ್ಬೆಟ್ ಅವರಲ್ಲಿ ನೋಡಬಹುದು.
25.7.1875ರಂದು ಜಿಮ್ ಕಾರ್ಬೆಟ್ ಜನಿಸಿದ ಸಮಯದಲ್ಲಿ, ಅವರಿದ್ದ ನೈನಿತಾಲ್, ಪಕ್ಕಾ ಕಾಡುಪ್ರದೇಶ. ಹಿಮಾಲಯದ ತಪ್ಪಲಿನ ಕಾಡುಗಳ, ಬೆಟ್ಟಗಳ ಮಧ್ಯೆ ಇದ್ದ ನೈನಿತಾಲ್ ಅಂದು ಬ್ರಿಟಿಷರ ಕಾಲೊನಿ. ತಂಪಾದ ಹವೆ ಇದ್ದುದರಿಂದ, ಮನೆಕಟ್ಟಲು, ಮಕ್ಕಳನ್ನು ಶಾಲೆಗೆ ಕಳಿಸಲು ಬ್ರಿಟಷರು ನೈನಿತಾಲ್‌ನ್ನು ಆಯ್ದುಕೊಳ್ಳುತ್ತಿದ್ದರು.

ಜಿಮ್ ಕಾರ್ಬೆಟ್ ಅವರ ತಂದೆಯು, ಬ್ರಿಟಿಷ್ ಸೇನೆಯಿಂದ ಸ್ವಯಂ ನಿವೃತ್ತಿ ಪಡೆದು ನೈನಿತಾಲ್ ನಲ್ಲಿ ಪೋಸ್ಟ್ ಮಾಸ್ಟರ್ ವೃತ್ತಿ ನಿರ್ವಹಿಸುತ್ತಿದ್ದರು. ಅವರ ತಾಯಿಯು ನೈನಿತಾಲ್‌ನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು! ಇವರಿಬ್ಬರಿಗೆ 12 ಜನ ಮಕ್ಕಳು. ಅವರಲ್ಲಿ ಎಂಟನೆಯವರೇ ಜಿಮ್ ಕಾರ್ಬೆಟ್. ಆರಂಭಿಕ ಶಿಕ್ಷಣವನ್ನು ನೈನಿತಾಲ್‌ನಲ್ಲಿ ಪಡೆದ ಜಿಮ್ ಕಾರ್ಬೆಟ್, 19ನೆಯ ವಯಸ್ಸಿನಲ್ಲಿ ಬೆಂಗಾಲ್ ಮತ್ತು ನಾರ್ತ್ ಈಸ್ಟರ್ನ್ ರೈಲ್ವೆಯಲ್ಲಿ ಕೆಲಸಕ್ಕೆ ಸೇರಿದರು. ನಂತರದ ದಿನಗಳಲ್ಲಿ ಪದೋನ್ನತಿ ಹೊಂದಿ, ಬ್ರಿಟಿಷ್ ಸೇನೆಯೊಂದಿಗೂ ವೃತ್ತಿ ನಿರ್ವಹಿಸಿ, ಬೇರೆ ದೇಶಗಳಲ್ಲಿ ಮುಖ್ಯವಾಗಿ ಆಫ್ರಿಕಾದಲ್ಲಿ ಸುತ್ತಾಡಿ ನೋಡಿ ಬಂದರು. ಬ್ರಿಟಿಷ್ ಸೇನೆಯಲ್ಲಿ ಅವರಿಗೆ ಕರ್ನಲ್ ಸಮಾನ ಸ್ಥಾನವಿತ್ತು.

ನೈನಿತಾಲ್ ಸುತ್ತಮುತ್ತಲಿನ ಕಾಡು ಎಂದರೆ ಜಿಮ್ ಕಾರ್ಬೆಟ್‌ಗೆ ಬಹು ಇಷ್ಟ. ಬಾಲ್ಯದಿಂದಲೂ ಕಾಡಿನಲ್ಲಿ ಓಡಾಡಿದ್ದರಿಂದ, ಆ ಕಾಡಿನ ಮಿಡಿತವನ್ನು ಅವರು ಬಲ್ಲರು. ಕ್ರಮೇಣ ಚತುರ ಬೇಟೆಗಾರನಾಗಿ ರೂಪಗೊಂಡ ಅವರ ಗುರಿ ಅಸಾಧಾರಣ. ಬ್ರಹ್ಮಚಾರಿಯಾಗಿಯೇ ಉಳಿದ ಜಿಮ್ ಕಾರ್ಬೆಟ್ ಕಾಡಿನ ಸಹವಾಸದಲ್ಲೇ ತಮ್ಮ ಜೀವನ ಕಳೆದರು. ಬ್ರಿಟಿಷ್ ಸಾಮ್ರಾಜ್ಯದ ಉತ್ತರ ಭಾಗದಲ್ಲಿ ಎಲ್ಲೇ ನರಭಕ್ಷಕ ಹುಲಿ, ಚಿರತೆಗಳ ಕಾಟ ಕಂಡುಬಂದರೂ, ಕರೆ ಹೋಗುತ್ತಿದ್ದುದು ಜಿಮ್
ಕಾರ್ಬೆಟ್ ಅವರಿಗೆ. ಸ್ಥಳೀಯ ಬೇಟೆಗಾರರು ನರಭಕ್ಷಕ ಹುಲಿಯನ್ನು ಕೊಲ್ಲಲು ವಿಫಲರಾದಾಗ, ಜಿಮ್ ಕಾರ್ಬೆಟ್ ರಂಗಪ್ರವೇಶಿಸುತ್ತಿದ್ದರು.

ಜನರಿಗೆ ತೊಂದರೆ ಕೊಡುವ, ಜನರ ಮೇಲೆ ಆಕ್ರಮಣ ಮಾಡುವ ಹುಲಿಗಳನ್ನು ಸಾಯಿಸುವುದು ಎಂದರೆ ಅಂದಿನ ದಿನಗಳಲ್ಲಿ ಪರೋಪಕಾರ ಮಾಡಿದಂತೆ. ಸರಕಾರವೂ ಅದನ್ನು ಪ್ರೋತ್ಸಾಹಿಸುತ್ತಿತ್ತು. ಆದ್ದರಿಂದಲೇ, ಅಂತಹ ಕರೆ ಬಂದಾಗ ಜಿಮ್ ಕಾರ್ಬೆಟ್ ತಮ್ಮ ರೈಫಲ್ ಹಿಡಿದು ಹೊರಡುತ್ತಿದ್ದರು. ಅವರ ಬಂದೂ ಕಿಗೆ ಬಲಿಯಾದವುಗಳು ಸಾಮಾನ್ಯವಾಗಿ ನರಭಕ್ಷಕ ಹುಲಿ ಮತ್ತು ಚಿರತೆಗಳು. ಒಮ್ಮೊಮ್ಮೆ ನರಭಕ್ಷಕ ಅಲ್ಲದ ಹುಲಿಯನ್ನೂ ಅವರು ಬೇಟೆಯಾಡಿದ್ದುಂಟು.
‘ಬ್ಯಾಚಲರ್ ಆಫ್ ಪಾವಲ್ಗರ್’ ಎಂದು ಹೆಸರಾಗಿದ್ದ, 10 ಅಡಿ 7 ಇಂಚು ಉದ್ದದ ಭಾರೀ ಹುಲಿ ಅಂತಹ ಬೇಟೆಗಳಲ್ಲಿ ಒಂದು. ಜಿಮ್ ಕಾರ್ಬೆಟ್ ಭಾರತದಲ್ಲಿ ಒಟ್ಟು 19 ಹುಲಿ, 16 ಚಿರತೆಗಳನ್ನು ಸಾಯಿಸಿದ್ದಾರೆ.

1926ರಲ್ಲಿ ಅವರು ರುದ್ರಪ್ರಯಾಗದ ನರಭಕ್ಷಕ ಚಿರತೆಯನ್ನು ಕೊಂದಿದ್ದು ಬಹಳ ಸುದ್ದಿಯಾಯಿತು. ಅದು ಕೆಲವು ವರ್ಷಗಳ ಅವಧಿಯಲ್ಲಿ 120ಕ್ಕೂ ಹೆಚ್ಚಿನ ಯಾತ್ರಿಕರನ್ನು ಸಾಯಿಸಿತ್ತು ಎಂದು ಬ್ರಿಟಿಷ್ ದಾಖಲೆಗಳು ಹೇಳುತ್ತವೆ. ನರಭಕ್ಷಕ ಪ್ರಾಣಿಗಳನ್ನು ಸಾಯಿಸಿ, ಜನರಿಗೆ ಉಪಕಾರ ಮಾಡಿದ ಹಿನ್ನೆಲೆಯಲ್ಲಿ, ಬ್ರಿಟಿಷ್
ಸರಕಾರವು ಇವರಿಗೆ 1928ರಲ್ಲಿ ‘ಕೈಸರ್ ಎ ಹಿಂದ್’ ಪ್ರಶಸ್ತಿಯನ್ನು ನೀಡಿ ಗೌರವಿಸಿತು! ಆ ಪ್ರಶಸ್ತಿಯು ಇಂದಿನ ಭಾರತ ರತ್ನಕ್ಕೆ ಸಮಾನ ಎನ್ನಬಹುದು.
ಬ್ರಿಟಿಷ್ ಸರಕಾರವು ಅವರಿಗೆ ‘ಚಾಂಪಿಯನ್ ಆಫ್ ಇಂಡಿಯಾ’ ಗೌರವವನ್ನು ಸಹ ದಯಪಾಲಿಸಿದೆ.

ಜಿಮ್ ಕಾರ್ಬೆಟ್ ಕೇವಲ ಬೇಟೆಗಾರನಾಗಿದ್ದರೆ ಇಷ್ಟು ಪ್ರಸಿದ್ಧಿ ಪಡೆಯುತ್ತಿರಲಿಲ್ಲ. 1920ರಲ್ಲಿ ಅವರೊಂದು ಕ್ಯಾಮೆರಾ ಖರೀದಿಸಿ, ವನ್ಯಜೀವಿಗಳ ಚಿತ್ರಗಳನ್ನು ತೆಗೆಯತೊಡಗಿದರು. ಅವರ ಗೆಳೆಯ, ಛಾಯಾಚಿತ್ರಗ್ರಾಹಕ ಫ್ರೆಡರಿಕ್ ವಾಲ್ಟರ್ ಚಾಂಪಿಯನ್ ಇದಕ್ಕೆ ಸ್ಫೂರ್ತಿ. ಬಂದೂಕಿನಿಂದ ಶೂಟ್ ಮಾಡುವ ಬದಲು ಕ್ಯಾಮೆರಾದಿಂದ ಶೂಟ್ ಮಾಡುವ ಹವ್ಯಾಸವು ಉತ್ತಮ ಎಂಬುದನ್ನು ಅಂದಿನ ದಿನಗಳಲ್ಲೇ ಜಿಮ್ ಕಾರ್ಬೆಟ್ ಪ್ರತಿ ಪಾದಿಸಿದ್ದುಂಟು. ಮೂವಿ ಕ್ಯಾಮೆರಾಗಳನ್ನು
ಅರಣ್ಯದ ಕಿಬ್ಬದಿಯಲ್ಲಿ ಅಳವಡಿಸಿ, ವನ್ಯಜೀವಿಗಳ ಚಿತ್ರವನ್ನು ಚಿತ್ರಸಲು ಅವರು ಸಾಕಷ್ಟು ಪಡಿಪಾಟಲು ಪಟ್ಟಿದ್ದರು.

ಅವರು ಆಫ್ರಿಕಾದ ಕೀನ್ಯಾ ಮೊದಲಾದ ಪ್ರದೇಶದಲ್ಲಿ ವ್ಯಾಪಕವಾಗಿ ಓಡಾಡಿದ್ದರು. ಆಗಾಗ ಅಲ್ಲಿ ಹೋಗಿ ತಂಗುತ್ತಿದ್ದರು, ಅಲ್ಲಿನ ವನ್ಯಜೀವಿಗಳನ್ನು ಗಮನಿಸು ತ್ತಿದ್ದರು. ಆಫ್ರಿಕಾದಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದ ಪ್ರಾಣಿಗಳ ಹಿಂಡನ್ನು ಹೋಲಿಸಿದರೆ, ನಮ್ಮ ದೇಶದಲ್ಲಿರುವ ವನ್ಯಜೀವಿಗಳ ಸಂಖ್ಯೆ ತುಂಬಾ ಕಡಿಮೆ ಎಂಬು ದನ್ನು ಗುರುತಿಸಿದ್ದರು. 1920ರ ದಶಕದಲ್ಲಿ ಅವರ ಸಹ ಸಂಪಾದಕತ್ವದಲ್ಲಿ ‘ಇಂಡಿಯನ್ ವೈಲ್ಡ್ ಲೈಫ್ೞ ಎಂಬ ಪತ್ರಿಕೆ ಹೊರಬರುತ್ತಿದ್ದು, ಆಗಲೇ ಇಲ್ಲಿನ ಪರಿಸರ ಮತ್ತು ವನುಜೀವಿ ನಾಶದ ಕುರಿತು ತಮ್ಮ ಕಳಕಳಿ ವ್ಯಕ್ತಪಡಿಸಿದ್ದಾರೆ.

ನಮ್ಮ ದೇಶದಲ್ಲಿ ಅರಣ್ಯ ನಾಶವು ಅವ್ಯಾಹತವಾಗಿ ಮುಂದುವರಿದರೆ, ಕಾಡುಪ್ರಾಣಿಗಳ ಬೇಟೆಯನ್ನು ನಿಯಂತ್ರಿಸದಿದ್ದರೆ, ಇಲ್ಲಿನ ವನ್ಯಸಂಪತ್ತು ಕ್ರಮೇಣ ಕಣ್ಮರೆಯಾಗುತ್ತದೆ ಎಂಬುದನ್ನು ಅವರು ಗುರುತಿಸಿ, ಆ ಕುರಿತು ಬರೆಯುತ್ತಿದ್ದರು. ಬಂದೂಕಿನಿಂದ ಶೂಟ್ ಮಾಡುವ ಬದಲು, ಮೂವಿ ಕ್ಯಾಮೆರಾದಲ್ಲಿ ಶೂಟ್ ಮಾಡಿ ಎಂದು ಸೂಚಿಸುತ್ತಾ, ತಾವೇ ಶೂಟ್ ಮಾಡಿದ್ದ ಚಲನಚಿತ್ರಗಳನ್ನು ಪ್ರದರ್ಶಿಸಿದ್ದೂ ಉಂಟು. ಈಗಿನಂತೆ ಪರಿಸರ ಕಾಳಜಿ ಅಂದು ಸಾರ್ವತ್ರಿಕವಾಗಿರ ಲಿಲ್ಲ. ಅಂತಹ ದಿನಗಳಲ್ಲಿ, ಕಾಡನ್ನು ಕಡಿದು ನಾಡನ್ನಾಗಿಸುವುದೇ ಪ್ರಧಾನವಾಗಿದ್ದ ಆ ಕಾಲದಲ್ಲಿ, ಪರಿಸರ ರಕ್ಷಣೆಯ ಮತ್ತು ವನ್ಯಜೀವಿಗಳ ರಕ್ಷನೆಯ ಮೊದಲ ಪಾಠಗಳನ್ನು ಅವರು ಮಾಡಿದ್ದು ವಿಶೇಷ ಎನಿಸುತ್ತದೆ.

ಈ ನಿಟ್ಟಿನಲ್ಲಿ, ಬ್ರಿಟಿಷ್ ಸರಕಾರದ ಗಮನ ಸೆಳೆದು, 1936ರಲ್ಲಿ ‘ಹೈಲಿ ನ್ಯಾಷನಲ್ ಪಾರ್ಕ್’ ನ್ನು ಸ್ಥಾಪಿಸಲು ಇವರು ಪರಿಶ್ರಮ ಪಟ್ಟಿದ್ದು ಬಹು ವಿಶೇಷ ಸಾಧನೆ. ಅಂದಿನ ಕಲೆಕ್ಟರ್ ಆಗಿದ್ದ ಹೈಲಿ ಎಂಬಾತನ ಹೆಸರನ್ನು ಹೊತ್ತ ಈ ರಾಷ್ಟ್ರೀಯ ಅಭಯಾರಣ್ಯವು, ನಮ್ಮ ದೇಶದ ಮೊತ್ತ ಮೊದಲ ನ್ಯಾಷನಲ್ ಪಾರ್ಕ್. ಅಲ್ಲಿ ಮುಕ್ತ ಬೇಟೆಗೆ ಅವಕಾಶವಿರಲಿಲ್ಲ. ಉತ್ತರಾಖಂಡದಲ್ಲಿರುವ ಆ ಅಭಯಾರಣ್ಯವು ವಿಸ್ತಾರಗೊಳ್ಳುತ್ತಾ ಮುಂದುವರಿದು, ನಮ್ಮ ದೇಶದ ಪ್ರಖ್ಯಾತ ಅಭಯಾರಣ್ಯ ವಾಗಿ ರೂಪುಗೊಂಡಿದೆ. 1954-55ರಲ್ಲಿ ಇದನ್ನು ರಾಮ್‌ಗಂಗಾ ಅಭಯಾರಣ್ಯ ಎಂದು ಮರುನಾಮಕರಣ ಮಾಡಲಾಯಿತು.

1955ರಲ್ಲಿ ಜಿಮ್ ಕಾರ್ಬೆಟ್ ಮರಣ ಹೊಂದಿದ ನಂತರ, ಅವರ ಗೌರವಾರ್ಥ ಇದನ್ನು ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ ಎಂದು ಹೆಸರಿಸಲಾಯಿತು. ಇಕೋ ಟೂರಿಸಂಗೆ ಅವಕಾಶ ಇರುವ ಇಲ್ಲಿ ಇಂದು ಸುಮಾರು 215 ಹುಲಿಗಳು ಮತ್ತು ಇತರ ಹಲವು ಪ್ರಭೇದದ ಜೀವಿಗಳಿವೆ. 1947ರಲ್ಲಿ ನಮ್ಮ ದೇಶವನ್ನು ಬ್ರಿಟಿಷರು ತೊರೆದರು; ಆ ಸಮಯದಲ್ಲಿ ಹಲವು ಯುರೋಪಿಯನರು ಸಹ ಭಾರತ ಬಿಟ್ಟು ಹೊರಟರು. ಅವರನ್ನು ಅನುಸರಿಸಿ, ನವೆಂಬರ್ 1947ರಲ್ಲಿ
ಜಿಮ್ ಕಾರ್ಬೆಟ್ ಮತ್ತು ಅವರ ಸಹೋದರಿಯು ಕೆನ್ಯಾ ದೇಶಕ್ಕೆ ವಲಸೆಹೋದರು. ಕೊನೆಯ ತನಕ ಅವರು ಅಲ್ಲೇ ಇದ್ದರು.

ಜಿಮ್ ಕಾರ್ಬೆಟ್ ಅವರ ಸಾಹಿತ್ಯಕ ಅಭಿಯಾನ ಕುತೂಹಲಕಾರಿ ಮತ್ತು ವಿಶೇಷ. ಅವರ ಮೊದಲ ಪುಸ್ತಕ (ಕೇವಲ 100 ಪ್ರತಿಗಳು) ಪ್ರಕಟಗೊಂಡದ್ದು
1935ರಲ್ಲಿ. ಆದರೆ ಅವರಿಗೆ ಅಪಾರ ಹೆಸರು, ಯಶಸ್ಸು ತಂದು ಕೊಟ್ಟದ್ದು 1944ರಲ್ಲಿ ಪ್ರಕಟಗೊಂಡ ‘ಮ್ಯಾನ್ ಈಟರ್ಸ್ ಆಫ್ ಕುಮಾಂವ್’. ಅಮೆರಿಕದಲ್ಲಿ ಈ ಪುಸ್ತಕ ಪ್ರಕಟಗೊಂಡಾಗ ಸುಮಾರು 250000 ಪ್ರತಿಗಳು ಮಾರಾಟವಾದವು. ಬೇಟೆ ಸಾಹಿತ್ಯದ ಅಗ್ರಗಣ್ಯ ಲೇಖಕರಾಗಿ ಈ ಮೂಲಕ ಹೆಸರು ಪಡೆದಾಗ ಜಿಮ್ ಕಾರ್ಬೆಟ್ ಅವರಿಗೆ 69 ವರ್ಷ ವಯಸ್ಸು!

ಇಳಿ ವಯಸ್ಸಿನಲ್ಲಿ ಸಾಹಿತಿಯಾಗಿ ಹೆಸರು ಪಡೆಯಬಹುದು ಎಂಬುದಕ್ಕೆ ಕಾಬೇಟ್ ಉತ್ತಮ ಉದಾಹರಣೆ! ಆ ನಂತರ, 1947ರಲ್ಲಿ ರುದ್ರಪ್ರಯಾಗದ ನರಭಕ್ಷಕ
ಚಿರತೆಯ ಕುರಿತಾದ ಪುಸ್ತಕ ಸಹ ಬಹಳ ಜನರನ್ನು ತಲುಪಿತು. ಆ ನಂತರವೂ ಅವರು ನಾಲ್ಕಾರು ಪುಸ್ತಕಗಳನ್ನು ಬರೆದರು. ಇವರ ಬೇಟೆಯ ಅನುಭವಗಳು ಅತಿವರ್ಣನೆ, ಅತಿರಂಜನೆ ಎನಿಸಿದರೂ, ಕಾಡಿನ ಅಂತರಂಗವನ್ನು ಬಿಚ್ಚಿಡುತ್ತಾ, ಇಪ್ಪತ್ತನೆಯ ಶತಮಾನದ ನಮ್ಮ ದೇಶದ ಹಳ್ಳಿಯ ಜನರ ಬವಣೆಯನ್ನು ಚಿತ್ರಿಸುತ್ತಾ, ಅದೇ ಸಮಯದಲ್ಲಿ ಹುಲಿಯೊಂದು ಏಕೆ ನರಭಕ್ಷಕನಾಗಿ ರೂಪುಗೊಳ್ಳುತ್ತದೆ ಎಂದು ಸಂಶೋಧಿಸುತ್ತಾ ಸಾಗುತ್ತವೆ.

ಆದ್ದರಿಂದಲೇ ಅವು ಮುಖ್ಯ ಎನಿಸುತ್ತವೆ. ಹುಲಿ, ಚಿರತೆ ಮೊದಲಾದ ಪ್ರಾಣಿಗಳ ಬೇಟೆಗಾರನಾದರೂ, ಪರಿಸರ ಕಾಳಜಿ ಹೊಂದಿದ್ದ, ವನ್ಯಜೀವಿ ನಾಶದ ಕುರಿತು ಕಳವಳ ಹೊಂದಿದ್ದ, ಕಾಡುಪ್ರಾಣಿಗಳ ರಕ್ಷಣೆಗೆ ಅಭಯಾರಣ್ಯ ರೂಪಿಸಲು ಪ್ರಯತ್ನಿಸಿದ್ದ ಜಿಮ್ ಕಾರ್ಬೆಟ್, ಇಪ್ಪತ್ತನೆಯ ಶತಮಾನದ ಅಪರೂಪದ ಬ್ರಿಟಿಷ್
ಪ್ರಜೆಯಾಗಿ ಹೊರಹೊಮ್ಮಿದ್ದಾರೆ. ಸಾಹಿತಿಯಾಗಿ ಅವರು ವಿವರವಾಗಿ ಚಿತ್ರಿಸುವ ಅಂದಿನ ಪರಿಸರದ ಕಥನಗಳು ಅನನ್ಯ.