ತಿಳಿರು ತೋರಣ
ಶ್ರೀವತ್ಸ ಜೋಶಿ
ಅ ಪಾನವಾಯು ಬಗ್ಗೆಯೂ ನಿಮ್ಮ ಅಂಕಣದಲ್ಲಿ ಬರೆಯಬಲ್ಲಿರಾ? ಎಂದು ಮಿತ್ರರೊಬ್ಬರು ಒಮ್ಮೆ ನನ್ನನ್ನು ಕೇಳಿದ್ದರು. ಹೂಸ್ ಕ್ವೆಷ್ಚನ್ ವಾಸ್ ದ್ಯಾಟ್!? ನೀವು ಆಶ್ಚರ್ಯಪಡಬೇಡಿ. ಹೂಸ್ ಅನ್ನೋದು ಮುಖ್ಯವಲ್ಲ, ವಸ್ತುನಿಷ್ಠವಾಗಿ ವಿಷಯ ವಷ್ಟೇ ಮುಖ್ಯ.
ಆದ್ದರಿಂದ ಅವರ ಹೆಸರಿಲ್ಲಿ ಬೇಡ. ಅಲ್ಲದೇ ಆ ಬಗ್ಗೆ ಬರೆಯುವಂತೆ ಅವರದು ಸಲಹೆಯಾಗಲೀ ಕೋರಿಕೆಯಾಗಲೀ ಇದ್ದದ್ದಲ್ಲ.
‘ಊಹಿಸಲಾಗದ ಟಾಪಿಕ್ಸ್ ಎಲ್ಲ ಸೆಲೆಕ್ಟ್ ಮಾಡ್ಕೊಂಡು ಬರೀತೀರಿ, ಹಾಗಾದ್ರೆ ಇದೂ ನಿಮಗೊಂದು ಟಾಪಿಕ್ ಆಗಬಲ್ಲದೇ?’ ಅಂತ ನನಗವರು ಒಂಥರ ತಮಾಷೆಯ ಚಾಲೆಂಜ್ ಕೊಟ್ಟದ್ದು ಅಷ್ಟೇ. ಅಪಾನವಾಯು ಎಂಬ ಸುಸಂಸ್ಕೃತ ಪದಬಳಕೆಯೂ ಅವರದಲ್ಲ. ಅವರ ಇಮೇಲ್ ಇದ್ದದ್ದು ಇಂಗ್ಲಿಷ್‌ನಲ್ಲಿ.
‘ವ್ಹೈ ನಾಟ್? ಐ ಮೇ ರೈಟ್!’ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ನಾನು ಉತ್ತರಿಸಿದ್ದೂ ಇಂಗ್ಲಿಷ್‌ನಲ್ಲೇ. ಏಳೆಂಟು ತಿಂಗಳ ಹಿಂದಿನ ಮಾತಿದು. ಆಮೇಲೆ ಅವರೂ ಜ್ಞಾಪಿಸಲಿಲ್ಲ, ನಾನೂ ತಲೆಕೆಡಿಸಿಕೊಳ್ಳಲಿಲ್ಲ. ಆದರೂ ‘ಐ ಮೇ ರೈಟ್’ ಅಂದಿದ್ದು ನೆನಪಿತ್ತು. ಈಗ ಈ ಮೇ ಕೊನೆ ಭಾನುವಾರದ ಟಾಪಿಕ್ ಆಗಿ ಅವರ ಚಾಲೆಂಜನ್ನೇ ಏಕೆ ಎತ್ತಿಕೊಳ್ಳಬಾರದೆಂದು ನಿರ್ಧರಿಸಿದ್ದೇನೆ. ಇದೇನಪ್ಪಾ ಎಂದುಕೊಳ್ಳಬೇಡಿ ದಯವಿಟ್ಟು.
ಮೂಗು ಮುರಿಯದೆ, ಮೂಗು ಮುಚ್ಚದೆ, ಆರಾಮಾಗಿ ನೀವಿದನ್ನು ಓದಿ ಆನಂದಿಸಬಹುದು. ಧೈರ್ಯದಿಂದ ಹೇಳಬಲ್ಲೆ. ಟಾಪಿಕ್ ಅಪಾನವಾಯುವೇ ಆದರೂ, ಬರೆಯುವ ನನಗೂ ಓದುವ ನಿಮಗೂ ಮುಜುಗರ ಆಗದಂತೆ, ಅಸಹ್ಯ ಎನಿಸದಂತೆ, ಸಾಕಷ್ಟು ಕ್ರಮ ಕೈಗೊಂಡಿದ್ದೇನೆ. ಮೊದಲನೆಯದಾಗಿ ಈ ಲೇಖನದ ಮಟ್ಟಿಗೆ ಮಾತ್ರ ‘ಅವಾ’ ಎಂಬ ಹೊಸ ಪದವೊಂದನ್ನು ಟಂಕಿಸಿದ್ದೇನೆ. ಇದು ಅಪಾನವಾಯು ಎಂಬ ಪದದ ಹ್ರಸ್ವ ರೂಪವೂ ಹೌದು; ತೀರ ಅವಾಚ್ಯ ಅಲ್ಲ ಅದರ ಮೂರನೆಯ ಎರಡಂಶ ಮಾತ್ರ ಸಹ ಹೌದು.
ಅದಕ್ಕಿಂತಲೂ ಬೆಸ್ಟ್ ಅಂದರೆ ಹ-ಕಾರ ಉಚ್ಚಾರ ಬಾರದವರು ‘ಹವಾ’ ಎಂದರೆ ಹೇಗಿರುತ್ತದೋ ಅದೇ ಈ ‘ಅವಾ’! ಎರಡನೆಯದಾಗಿ ಈ ಲೇಖನದ ಶೈಲಿ(ಬಾನಿ) ಮತ್ತು ಹೂರಣ ಸಹ ಬಹುಮಟ್ಟಿಗೆ ಆಕಾಶವಾಣಿಯಲ್ಲಿ ಬರುತ್ತಿದ್ದ ‘ರಸವಾರ್ತೆ’ ಯಂತೆ, ಅಥವಾ ಸುಧಾದ ಕೊನೆಯ ಪುಟದಲ್ಲಿ ಇರುತ್ತಿದ್ದ ‘ಸುದ್ದಿ ಸ್ವಾರಸ್ಯ’ದಂತೆ ಇರುತ್ತದೆ. ತುಟಿಯ ಮೇಲೆ ತುಂಟ ಕಿರುನಗೆ ಬೀರಿಕೊಂಡು ಓದಿದರಾಯ್ತು.
ಮೂರನೆಯದಾಗಿ, ‘ನಿಮ್ಮ ಅನುಭವ ಬರೆದುತಿಳಿಸಿ, ನಿಮ್ಮ ಸಂಗ್ರಹದಿಂದ ಕಳಿಸಿ’ ಅಂತೆಲ್ಲ ಬಿನ್ನಹಗಳು ಲೇಖನದ ಕೊನೆಯಲ್ಲಿ ಇರುವುದಿಲ್ಲ. ಆ ದೃಷ್ಟಿಯಿಂದಲೂ ಮುಜುಗರದ ಮಾತಿಲ್ಲ. ಅಷ್ಟಾಗಿ, ಅಪಾನವಾಯು ಎಂದ ಮಾತ್ರಕ್ಕೇ ಅಂಥ ಅನಗತ್ಯ ಮುಜುಗರ ಮಡಿವಂತಿಕೆ ಏಕೆ ಬೇಕು? ಅಮೆರಿಕನ್ನಡಿಗ ಲೇಖಕ, ವೈದ್ಯ ಡಾ.ಗುರುಪ್ರಸಾದ್ ಕಾಗಿನೆಲೆ ಅವರು ಬರೆದ ಒಂದು ಸಣ್ಣಕತೆಯ ಶೀರ್ಷಿಕೆಯೇ ‘ಅಲಬಾಮಾದ ಅಪಾನವಾಯು’ ಎಂದು! ಕಥೆ ಆರಂಭವಾಗುವುದೇ ‘… ಫಟ್ಟೆಂದು ಹೊಡೆದಿತ್ತು ವಾಸನೆ! ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ಅಲಬಾಮಾ ಎಂದು ಬರೆಸಿಕೊಳ್ಳುವ ಮತ್ತು ಅಲಬ್ಯಾಮಾ ಎಂದು ಓದಿಸಿಕೊಳ್ಳುವ ರಾಜ್ಯದ ಪೂರ್ವಕ್ಕಿರೋ ಬಾರ್ಬೌರ್ ಕೌಂಟಿಯ ಕ್ಲೇಟನ್ ಎಂಬ ಊರಲ್ಲಿರೋ ಆಸ್ಪತ್ರೆಯಲ್ಲಿ.
ಅನಿತಾ ಎಂದು ಬರೆಸಿಕೊಳ್ಳುವ ಮತ್ತು ಅನೀಟ ಎಂದು ಕರೆಸಿಕೊಳ್ಳುವ ತನ್ನ ನರ್ಸಿನ ಜತೆ ಡಾ.ಮುಕುಂದ. ಹದಿನೇಳು ವರ್ಷದ ಸುಂದರಿಯೊಬ್ಬಳಿಗೆ ಸ್ಟಮಕ್ ವಾಷ್ ಕೊಡುವುದಕ್ಕೆ ಒಂದೈದು ನಿಮಿಷ ಮುಂಚೆ. ಏಸಿ ರೂಮಿನಲ್ಲಿ ನಡೆಯುತ್ತಿರುವ ಮೀಟಿಂಗಿನ ನಡುವೆ ಮೂಲಂಗಿ ಹುಳಿಯ ಡಬ್ಬಿ ತೆಗೆದಂತೆ, ಕೆಮಿಸ್ಟ್ರಿ ಲ್ಯಾಬಿನಲ್ಲಿ ಹೈಡ್ರೋಜನ್ ಸಲ್ ಫೈಡ್ ಅನಿಲ ತಯಾರಾದಾಗ ಬಂದಂತೆ, ಗಟ್ಟಿಯಾಗಿ ಮತ್ತು ತೀಕ್ಷ್ಣವಾಗಿ ಬಂದಿತ್ತು, ಆ ವಾಸನೆ’ ಎಂಬ ವಾಕ್ಯಗಳಿಂದ!
ಇನ್ನೊಂದು ನನಗಿಲ್ಲಿ ನೆನಪಾಗುತ್ತಿರುವುದು ನಾಲ್ಕೈದು ವರ್ಷಗಳ ಹಿಂದೆ ಟಿವಿಯಲ್ಲಿ ಪ್ರಸಾರವಾದ (ಮತ್ತು ಆಮೇಲೆ
ಜಗದ್ವಿಖ್ಯಾತವಾದ) ಒಂದು ಸಂದರ್ಶನದಲ್ಲಿ ದಲೈಲಾಮಾ ಹೇಳಿದ್ದ ಜೋಕು. ‘ವಿಮಾನದಲ್ಲಿ ಪಯಣಿಸುತ್ತಿರುವಾಗ
ಅಚಾನಕ್ಕಾಗಿ ಅವಾ ಬಂದರೆ ಏನು ಮಾಡೋದು? ಆಚೆಈಚೆ ನೋಡಿ ಯಾರೂ ಗಮನಿಸುತ್ತಿಲ್ಲ ಎಂದು ದೃಢಪಡಿಸಿಕೊಂಡು
ಅಂಡು ಸ್ವಲ್ಪ ಟಿಲ್ಟ್ ಮಾಡಿ ಅವಾ ಬಿಟ್ಟುಬಿಡೋದು.
ಹಹ್ಹಹ್ಹಾ…’ ಎಂದು ದಲೈಲಾಮಾ ಮಗುವಿನಂತೆ ಬಾಯ್ತುಂಬ ನಕ್ಕಿದ್ದು, ಟಿಲ್ಟಿಂಗ್ ಆಕ್ಷನ್ ಮಾಡಿತೋರಿಸಿದ್ದು, ಕಣ್ಮುಂದೆ
ಬರುತ್ತಿದೆ. ಅಂತೂ ಲಘುಹಾಸ್ಯದ ಚೌಕಟ್ಟಿನಲ್ಲಿ ‘ಅವಾ’ ಟಾಪಿಕ್ ಓಕೆ ಎಂದು ನನ್ನ ಅಂಬೋಣ. ಈ ಲೇಖನಕ್ಕೆ ಮುಖ್ಯ ಆಧಾರವಾಗಿ ನಾನು ಬಳಸಿರುವುದು ಅಮೆರಿಕದ ಇ-ಮ್ಯಾಗಜಿನ್ ಒಂದರಲ್ಲಿ ಪ್ರಕಟವಾದ 30 Fascinating Facts About Farts ಎಂಬ ಬರಹ. ಮೂವತ್ತರಲ್ಲಿ ಮೋಸ್ಟ್ ಸ್ವಾರಸ್ಯಕರ ಅಂತ ನನಗನಿಸಿದ ಅಂಶಗಳನ್ನಷ್ಟೇ ಕನ್ನಡೀಕರಣಕ್ಕೆ ಆಯ್ದುಕೊಂಡಿ ದ್ದೇನೆ.
ಉದಾಹರಣೆಗೆ, ಲೇಖನ ಆರಂಭವಾಗುವುದು ‘ಪ್ರಪಂಚದ ಅತಿ ಹಳೆಯ ಜೋಕು ಕ್ರಿಸ್ತಪೂರ್ವ 1900ರಷ್ಟು ಪ್ರಾಚೀನವಾದುದು ಮತ್ತು ಅದೊಂದು ಅವಾ ಜೋಕು ಆಗಿರುವುದು’ ಎಂಬ ಮಾಹಿತಿಯಿಂದ. ಆ ಜೋಕು ಈಗಿನ ಇರಾಕ್ ಪ್ರದೇಶದಲ್ಲಿ ಆ ಕಾಲ ದಲ್ಲಿದ್ದ ಸುಮೇರಿಯನ್ ಜನಾಂಗದವರ ಉಕ್ತಿ: ‘ಅನಾದಿಕಾಲದಿಂದ ಸಂಭವಿಸದೇ ಇರುವ ಘಟನೆಯೆಂದರೆ ತರುಣಿಯು ಪ್ರಿಯತಮನೊಡನೆ ಲಲ್ಲೆಗರೆಯುವಾಗ ಅವಾ ಬಿಡದೆ ಇರುವುದು!’ ನನಗಿದು ಅಂಥದೇನೂ ಹಾಸ್ಯ ಅಂತನಿಸಲಿಲ್ಲವಾದ್ದರಿಂದ ಲೇಖನಕ್ಕೆ ಬೇಡವೆಂದುಕೊಂಡೆ.
ಎರಡನೆಯ ಮಾಹಿತಿ: ಈ ಪ್ರಪಂಚದಲ್ಲಿ ಪ್ರತಿಯೊಬ್ಬರೂ ಅವಾ ಬಿಟ್ಟೇಬಿಡುತ್ತಾರೆ. ಬಿಡುವುದಿಲ್ಲ ಎಂದು ಯಾರಾದರೂ ಪೋಸುಕೊಟ್ಟರೆ ಅವರು ಸುಳ್ಳುಹೇಳುತ್ತಿದ್ದಾರೆ ಎಂದರ್ಥ. ಉಸಿರಾಡುವ ಪ್ರತಿ ಮನುಷ್ಯನೂ ಆಗೊಮ್ಮೆ ಈಗೊಮ್ಮೆಯಾದರೂ ಅವಾ ಬಿಡಲೇಬೇಕು. ಆಹಾರದೊಂದಿಗೆ ದೇಹದೊಳಕ್ಕೆ ಹೋಗುವ ಗಾಳಿಯು ದೊಡ್ಡಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ಮತ್ತು ಇತರ ಸಾವಯವ ಅಂಶಗಳೊಡನೆ ಮಿಶ್ರಣವಾದಾಗಿನ ಅನಿಲ ಪದಾರ್ಥವು ಅವಾ ರೂಪದಲ್ಲಿ ಹೊರಹೋಗಲೇಬೇಕು.
ವೈದ್ಯಕೀಯ ಪರಿಭಾಷೆಯಲ್ಲಿ ಇದಕ್ಕೆ flatus ಎನ್ನುತ್ತಾರೆ. ಲ್ಯಾಟಿನ್ (ನಡುವಿನಕ್ಷರಕ್ಕೆ ಅರ್ಧಚಂದ್ರ ಒತ್ತು ಇಲ್ಲ ಗಮನಿಸಿ) ಮೂಲದ ಈ ಪದದ ಅರ್ಥ ಗಾಳಿಯೂದುವ ಕ್ರಿಯೆ ಎಂದು. ಕರುಳಿನಲ್ಲೇ ಅನಿಲದ ಗರ್ಜನೆ ಆಗುತ್ತಿರುತ್ತದೆ ಅದನ್ನು borborygmus ಎನ್ನುವುದಂತೆ. ವಯಸ್ಕ ದೇಹದಲ್ಲಿ ದಿನಕ್ಕೆ ಎರಡು ಲೀಟರ್ ಗಾತ್ರದಷ್ಟು ಉತ್ಪಾದನೆಯಾಗುವ ಅನಿಲ ಸರಾಸರಿ 14 ಬಾರಿ ಅವಾ ಆಗಿ ಹೊರಹೋಗುತ್ತದೆ. ಆ ಸಂಖ್ಯೆ ದಿನಕ್ಕೆ 21ರವರೆಗೇರಿದರೂ ಗಾಬರಿಪಡಬೇಕಿಲ್ಲ.
ಎರಡು ಲೀಟರ್ ಗಾತ್ರದಷ್ಟು ಅನಿಲ ಉತ್ಪಾದನೆಯಲ್ಲಿ 99 ಶೇಕಡಾ ಇರುವುದು ಸಾರಜನಕ, ಆಮ್ಲಜನಕ, ಜಲಜನಕ, ಇಂಗಾಲದ ಡೈಆಕ್ಸೈಡ್, ಮತ್ತು ಮಿಥೇನ್. ಇವೆಲ್ಲವೂ ವಾಸನೆಯಿಲ್ಲದವು. ದುರ್ಗಂಧಕ್ಕೆ ಮುಖ್ಯ ಕಾರಣವಾಗುವುದು ನಮ್ಮ ಕೆಲ ಆಹಾರ ಗಳಲ್ಲಿರುವ ಗಂಧಕದ ಅಂಶ. ಅವಾ ಬರುತ್ತದೆಂದು ಗೊತ್ತಾದಾಗ ಅದನ್ನು ತಡೆಹಿಡಿಯುವುದು ಮನುಷ್ಯದೇಹಕ್ಕೆ ಸಾಧ್ಯವಿಲ್ಲ. ಸ್ವಲ್ಪ ಅದೃಷ್ಟವಿದ್ದರೆ ಅವಾ ತನ್ನ ಪಾಡಿಗೆ ತಾನು ಸದ್ದಿಲ್ಲದೆ ಹೊರಹೋದೀತು, ಪರಂತು ತಡೆಹಿಡಿವ ಪ್ರಯತ್ನ ಹೆಚ್ಚು ಮಾಡಿ ದಷ್ಟೂ ಅದರ ಗರ್ಜನೆಯೂ ಹೆಚ್ಚಾದೀತು. ಹಾಗಾಗಿ ತಡೆಹಿಡಿಯುವ ಯತ್ನ ನಿರರ್ಥಕ. ಆದರೇನು ಮಾಡುವುದು
ಕೆಲವು ಸನ್ನಿವೇಶಗಳಲ್ಲಿ ಅವಾ ಅವಾಂತರ ಮಾಡದಿರಲಿ ಎಂದು ನಮ್ಮಿಂದಾದಷ್ಟು ಪ್ರಯತ್ನಿಸುತ್ತೇವೆ, ಅಂಥ ಸಂದರ್ಭದಲ್ಲಿ ಬಾಯಿಯ ಮೂಲಕವಾದರೂ ಅದು ಹೋಗೇಹೋಗುತ್ತದೆ!
ಡಾ.ಕಾಗಿನೆಲೆ ಬರೆದ ಸಣ್ಣಕತೆ ಬಗ್ಗೆ ಉಲ್ಲೇಖಿಸಿದೆನಷ್ಟೆ? ವಿಲಿಯಂ ಶೇಕ್ಸ್‌ಪಿಯರ್‌ನಂಥ ಮಹಾನ್ ಸಾಹಿತಿಗಳ ಕೃತಿಗಳಲ್ಲೂ ಅವಾ ಬಂದದ್ದಿದೆ! ಕಾಮಿಡಿ ಆಫ್ ಎರರ‍್ಸ್ ನಾಟಕದಲ್ಲಿ ಡ್ರೊಮಿಯೊ ಎಂಬ ಪಾತ್ರದ್ದೊಂದು ಡೈಲಾಗ್ ಹೀಗಿದೆಯಂತೆ: ‘ಅಯ್ಯಾ, ಆ ಮನುಷ್ಯನು ನಿನ್ನ ಮೇಲೆ ಮಾತೆಂಬ ಪದಗಳನ್ನು ಬಿಟ್ಟಾನು. ಪದಗಳೆಂದರೇನು? ಗಾಳಿಯೇ ತಾನೆ? ಗಾಳಿ ಆತನ ಬಾಯಿಯಿಂದಲೇ ಬರಲಿ, ಹಿಂದಿನಿಂದಲ್ಲ!’ ಜೆಫ್ರಿ ಚೌಸರ್‌ನ ‘ದ ಕ್ಯಾಂಟರ್‌ಬರಿ ಟೇಲ್ಸ್’ ನಲ್ಲಿ ಒಂದು ಪಾತ್ರವು ಮೇಘಗರ್ಜನೆ ಯಂಥ ಶಬ್ದವುಳ್ಳ ಅವಾ ಬಿಡುತ್ತಿರುತ್ತದೆ.
ಡಾಂಟೆ ಬರೆದ ‘ದ ಇನ್‌ಫರ್ನೊ’, ಅರಿಸ್ಟೋಫೇನ್‌ನ ‘ದ ಕ್ಲೌಡ್ಸ್’, ಮಾರ್ಕ್ ಟ್ವೈನ್‌ನ ‘1601’ ಮುಂತಾದ ಕೃತಿಗಳಲ್ಲೂ ಅವಾ ಅವಾಂತರಗಳು ರಾರಾಜಿಸಿವೆ. ಜೇಮ್ಸ್ ಜಾಯ್ಸ್ ಎಂಬ ಲೇಖಕನಂತೂ ತನ್ನ ಪ್ರಿಯತಮೆಗೆ ಬರೆದ ಪ್ರೇಮಪತ್ರದಲ್ಲಿ ಹತ್ತು ಬಾರಿ ಅವಾ ತಂದಿಟ್ಟಿದ್ದನಂತೆ! ಛೀ ಅದೇನು ಹುಚ್ಚು ಎನ್ನಬೇಡಿ. 2013ರ ಒಂದು ಅಧ್ಯಯನದ ಪ್ರಕಾರ ಕೆಲವು ಗಂಡು – ಹೆಣ್ಣು ಜೋಡಿಗಳಲ್ಲಿ ಅವಾ ಒಂದು ಲೈಂಗಿಕ ಆಕರ್ಷಣೆಯಾಗಿ, ಕಾಮೋದ್ರೇಕಕಾರಿಯಾಗಿ ಪಾತ್ರವಹಿಸುತ್ತದಂತೆ!
1982ರಲ್ಲಿ ಅಮೆರಿಕದ ಜಾರ್ಜಿಯಾ ಸ್ಟೇಟ್ ಯುನಿವರ್ಸಿಟಿಯ ವಿಜ್ಞಾನಿಗಳಿಬ್ಬರು ಪ್ರಕಟಿಸಿದ ಒಂದು ಕೇಸ್-ಸ್ಟಡಿ ಇನ್ನೂ ರೋಚಕವಾದುದು. 33 ವರ್ಷ ಪ್ರಾಯದ ಒಬ್ಬ ಹೆಂಗಸಿಗೆ (ಆಕೆ ವೃತ್ತಿಯಲ್ಲಿ ವೈದ್ಯೆ!) ಒಂದು ವಿಚಿತ್ರ ಮಾನಸಿಕ ರೋಗ. ತಾನು ಸಶಬ್ದ ಅವಾಗಳನ್ನು ಸದಾ ಬಿಡುತ್ತಲೇ ಇರುವಂತಾಗಬೇಕು ಎಂಬ ಯೋಚನೆ! ಕೊನೆಗೂ ಆಕೆಯ ರೋಗ ಪರಿಹಾರವಾದದ್ದು ಹೇಗೆ ಗೊತ್ತೇ? ನಿಜವಾದ ಅವಾ ಬಂದಾಗ ಎಷ್ಟು ಸಾಧ್ಯವೋ ಅಷ್ಟು ಅದನ್ನು ಸಶಬ್ದಗೊಳಿಸಬೇಕು ಎಂದು ಆಕೆಗೆ ಕೊಟ್ಟ ಸಲಹೆಯಿಂದ. ಆ ಚಿಕಿತ್ಸೆ ಆಕೆಯ ಮನಸ್ಸನ್ನು ನಿರಾಳಗೊಳಿಸಿತು.
2016ರ ನವೆಂಬರ್‌ನಲ್ಲಿ ಕೆನಡಾ ದೇಶದ ಸಂಸತ್ತಿನಲ್ಲಿ ಒಂದು ಅವಾ ಅವಾಂತರ ನಡೆದಿತ್ತು. ನಿಜವಾದ ಅವಾ ಅಲ್ಲ, ಬರಿ
ಮಾತಿನಲ್ಲಷ್ಟೇ, ಆದರೆ ಅದೇ ದೊಡ್ಡ ರಾದ್ಧಾಂತವಾಯ್ತು. ಆಗಿನ ವಿರೋಧಪಕ್ಷದ ಸದಸ್ಯೆಯಾಗಿದ್ದ ಮಿಷೆಲ್ ರೆಂಪೆಲ್
ಎಂಬಾಕೆ ‘ಸರಕಾರವು ಆಲ್ಪರ್ಟಾ ಪ್ರದೇಶದ ವಿಚಾರದಲ್ಲೇಕೆ ಕೊಠಡಿಯಲ್ಲಿ ಯಾರೋ ಅವಾ ಬಿಟ್ಟಾಗಿನ ಪರಿಸ್ಥಿತಿಯಂತೆ –
ಅಂದರೆ ಯಾರೂ ಅದರ ಬಗ್ಗೆ ಮಾತನಾಡಲಿಕ್ಕೂ ಒಪ್ಪಿಕೊಳ್ಳಲಿಕ್ಕೂ ಸಿದ್ಧರಿಲ್ಲ ಎಂಬಂತೆ- ವರ್ತಿಸುತ್ತಿದೆ?’ ಎಂದು
ಸಂಸತ್ತಿನಲ್ಲಿ ಮೇಜು ಗುದ್ದಿ ಪ್ರಶ್ನಿಸಿದಳು.
ಆಡಳಿತ ಪಕ್ಷದ ಎಲಿಜಬೆತ್ ಮೇ ಇದರಿಂದ ಕ್ರುದ್ಧಳಾದಳು. ಅವಳ ತಾಕೀತು ಮಿಷೆಲ್‌ಳ ಪ್ರಶ್ನೆಯಲ್ಲಿದ್ದ ಆಲ್ಬರ್ಟಾ ಪ್ರದೇಶದ ಬಗ್ಗೆಯಲ್ಲ, ಮಿಷೆಲ್‌ಳ ಮಾತಿನಲ್ಲಿದ್ದ ಒಂದು ಪದ (ಅವಾ ಇಂಗ್ಲಿಷ್ ರೂಪ fart) ಅನ್‌ಪಾರ್ಲಿಮೆಂಟರಿ ಎಂದು. ಕೊನೆಗೂ ಅಲ್ಲಿಯ ಸಂಸತ್ತಿನ ಸ್ಪೀಕರ್ ಮಹಾಶಯ ನಿಯಮಾವಳಿ ಪುಸ್ತಕ ತೆರೆದು ನೋಡಿ ಮಿಷೆಲ್ ಬಳಸಿದ ಪದ ಅನ್‌ಪಾರ್ಲಿಮೆಂಟರಿ
ಪದಗಳ ಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸಿದ. ನೇರವಾಗಿ ಆ ಪದ ಇಲ್ಲದಿದ್ದರೂ ಅದರಂಥ ವಿವರಣೆಯ ಪದಗಳನ್ನು
ಬಳಸಬಾರದು ಎಂದು ಇತ್ತಂತೆ. ಹಾಗಾಗಿ ಮಿಷೆಲ್‌ಗೆ ಪ್ರಶ್ನೆಯನ್ನು ತಿದ್ದಿಕೊಳ್ಳುವಂತೆ ಸಲಹೆ ನೀಡಲಾಯಿತು.
ಕೆನಡಾದ ಕಥೆ ಅದಾದರೆ ಅಮೆರಿಕ ಸಂಯುಕ್ತ ಸಂಸ್ಥಾನಗಳ ಮಾಜಿ ಅಧ್ಯಕ್ಷನೊಬ್ಬನ ಅವಾ ಪುರಾಣ ಭಲೇ ತಮಾಷೆಯದು.
ಅಮೆರಿಕದ 38ನೆಯ ಅಧ್ಯಕ್ಷ ಜೆರಾಲ್ಡ್ ಫೋರ್ಡ್ ಅಧ್ಯಕ್ಷೀಯ ಆಸನದಲ್ಲಿ ಕುಳಿತಿದ್ದಾಗಲೂ ಕೆಲವೊಮ್ಮೆ ಅವಾ ಬಿಡುತ್ತಿದ್ದ ನಂತೆ. ಆದರೆ ಪ್ರತಿಸಲವೂ ತನ್ನ ಅಂಗರಕ್ಷಕರತ್ತ ಕೈತೋರಿ ‘ಏನಯ್ಯಾ ಸ್ವಲ್ಪವೂ ನಾಚಿಕೆ ಆಗುವುದಿಲ್ವಾ? ಇನ್ನುಮುಂದೆ ಸದ್ವರ್ತನೆ ತೋರು!’ ಎಂದು ಬಾಯಿಯಿಂದಲೂ ಗರ್ಜಿಸುತ್ತಿದ್ದನಂತೆ.
ಇದು ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ಎಂಜಿನಿಯರಿಂಗ್ ಕಂಪನಿಯೊಂದರಲ್ಲಿ ಸುಪರ್ ವೈಸರ್ ಆಗಿದ್ದ ಗ್ರೆಗ್ ಶಾರ್ಟ್ ಎಂಬಾತನ ಕಥೆ. ಆತನೊಂದಿಗೆ ಕೆಲಸ ಮಾಡಿದ್ದ ಡೇವಿಡ್ ಹಿಂಗ್ಸ್ಟ್ ಎಂಬುವವನು ಗ್ರೆಗ್‌ನನ್ನು ಕೋರ್ಟಿಗೆಳೆದಿದ್ದ. ಕಾರಣ ಏನು ಗೊತ್ತೇ? ಮೇ 2008ರಿಂದ ಏಪ್ರಿಲ್ 2009ರವರೆಗಿನ ಅವಧಿಯಲ್ಲಿ ತಾನು ಗ್ರೆಗ್‌ನೊಂದಿಗೆ ಕೆಲಸ ಮಾಡುತ್ತಿದ್ದಾಗ ಗ್ರೆಗ್ ಆಗಾಗ ತನ್ನ ಕ್ಯೂಬಿಕಲ್‌ನ ಹತ್ತಿರ ಬಂದು ಅವಾ ಬಿಡುತ್ತಿದ್ದ. ಇದು ತನಗೆ ಕೆಲಸದಲ್ಲಿ ಏಕಾಗ್ರತೆಗೆ ತೊಂದರೆಯಾಗುತ್ತಿತ್ತು ಎಂದು.
18 ಲಕ್ಷ ಆಸ್ಟ್ರೇಲಿಯನ್ ಡಾಲರ್‌ಗಳಷ್ಟು ಮೊತ್ತ ಗ್ರೆಗ್‌ನ ವಿರುದ್ಧ ಡೇವಿಡ್ ಹೂಡಿದ್ದ ಮೊಕದ್ದಮೆಯದು! ಕೋರ್ಟಿನಲ್ಲಿ ಗ್ರೆಗ್ ತಾನು ಭಾರೀ ಅವಾಗಾರನೇನಲ್ಲ, ಯಾವತ್ತೋ ಒಂದೆರಡು ಸಲ ಡೇವಿಡ್ ಹತ್ತಿರವಿದ್ದಾಗ ತಾನು ಅವಾ ಬಿಟ್ಟದ್ದೂ ಇರಬಹುದು
ಎಂದನಂತೆ. ಕೋರ್ಟು ಗ್ರೆಗ್‌ನ ಪರವಾಗಿಯೇ ತೀರ್ಪನ್ನಿತ್ತಿತು. ಅಪರೂಪಕ್ಕೊಮ್ಮೆ ಬಾಸ್ ಅವಾ ಬಿಟ್ಟರೆ ಅದು ವರ್ಕ್‌ಪ್ಲೇಸ್
ಹರಾಸ್‌ಮೆಂಟ್ ಎಂದು ಪರಿಗಣನೆಯಾಗುವುದಿಲ್ಲ ಎಂದಿತು.
ಛಲಬಿಡದ ಡೇವಿಡ್ ಅಲ್ಲಿಯ ಸುಪ್ರೀಂ ಕೋರ್ಟಿಗೂ ಅಹವಾಲು ಸಲ್ಲಿಸಿದ್ದನಂತೆ, ಆಮೇಲೇನಾಯ್ತೋ ಗೊತ್ತಿಲ್ಲ. ಜರ್ಮನಿ ದೇಶದಲ್ಲಿ ಹಾಗಲ್ಲ, 2016ರಲ್ಲೊಮ್ಮೆ ಅಲ್ಲೇನಾಯ್ತೆಂದರೆ ಬರ್ಲಿನ್ ನಗರದ ಪೊಲೀಸರು ಕೆಲ ಪುಂಡಪೋಕರಿಗಳನ್ನು ಹಿಡಿದು ನಿಲ್ಲಿಸಿ ಅವರ ಗುರುತುಪತ್ರ ತಪಾಸಣೆಗೆ ಹೊರಟರು. ಪೋಕರಿಗಳಲ್ಲಿ ಒಬ್ಬಾತ ಗುರುತುಪತ್ರ ತೋರಿಸದೆ ಮಹಿಳಾ ಪೊಲೀಸಳತ್ತ ಗುರಿಯಾಗಿಸಿ ಎರಡು ಅವಾಬಿಟ್ಟನಂತೆ. ಕಾನೂನುಪಾಲಕರನ್ನು ಅಗೌರವಿಸಿದ್ದಕ್ಕೆ ಆತ 900 ಯುರೋಗಳಷ್ಟು ದಂಡ ತೆರುವ ಶಿಕ್ಷೆಯೆದುರಿಸಬೇಕಾಯ್ತು.
ಫ್ರಾನ್ಸ್‌ನ ಜೊಸೆಫ್ ಪುಜೋಲ್ ಕೋರ್ಟು – ಪೊಲೀಸು ಅಂತೆಲ್ಲ ಅಲೆಯಲಿಲ್ಲ. ಆತ ಅವಾ ಬಿಡುವ ತನ್ನ ಅಭ್ಯಾಸವನ್ನು ಒಂದು ಕಲೆಯನ್ನಾಗಿಸಿದ. ಬೀದಿಗಳಲ್ಲಿ ಅವಾ ಬಿತ್ತರಿಕೆ ಪ್ರದರ್ಶನಗಳನ್ನು ಏರ್ಪಡಿಸಿ ಒಂದಿಷ್ಟು ಕಾಸು ಗಳಿಸಿದ! ಈಗ, ಅವಾ ಬಗೆಗಿನ ಒಂದಷ್ಟು ವಿಜ್ಞಾನವಿಚಾರಗಳನ್ನು ಅವಲೋಕಿಸೋಣ. ಮನುಷ್ಯರು ಮಾತ್ರವಲ್ಲ, ಬೇರೆ ಜೀವಿಗಳೂ ಅವಾ ಬಿಡುತ್ತವೆ. ಅದರಲ್ಲೂ ಅತಿಹೆಚ್ಚು ಅವಾ ಬಿಡುವ ಖ್ಯಾತಿ ಯಾವ ಜೀವಿಯದು ಗೊತ್ತೇ? ಗೆದ್ದಲುಹುಳ!
ವರ್ಷವೊಂದಕ್ಕೆ 20 ಮಿಲಿಯನ್ ಟನ್‌ಗಳಷ್ಟು ಮಿಥೇನ್ ಉತ್ಪಾದನೆಯಾಗುವುದು ಗೆದ್ದಲುಗಳಿಂದ. ಅವಾ ಬಿಡದ ಕೆಲ
ಸಮುದ್ರಜೀವಿಗಳೂ ಪಕ್ಷಿಗಳೂ ಇವೆ. ಆದರೆ ಒಟ್ಟಾರೆಯಾಗಿ ಅವಾ ವಿಚಾರ ಚರ್ಚೆಗೆ ಬರುವುದು ಮನುಷ್ಯರ ಕೇಸ್‌ನಲ್ಲಿ ಮಾತ್ರ. ಇಂಗ್ಲೇಂಡ್‌ನ ಶೇಫೀಲ್ಡ್‌ನಲ್ಲಿರುವ ರಾಯಲ್ ಹಲ್ಲಂಶೈರ್ ಆಸ್ಪತ್ರೆಯ ಕೆಲವು ವೈದ್ಯರು 1991ರಲ್ಲಿ ಒಂದು ಸಂಶೋಧನಾಪತ್ರ ಪ್ರಕಟಿಸಿದ್ದಾರೆ. ಮಾನವದೇಹದಿಂದ ಹೊರಬಂದ ಒಂದು ಸರಾಸರಿ ಅವಾ ಎಷ್ಟು ಗಾತ್ರದಷ್ಟು ಜಾಗವನ್ನಾಕ್ರಮಿಸುತ್ತದೆ? 10 ಪ್ರಯೋಗಾರ್ಥಿಗಳಿಗೆ ದಿನವೂ 200 ಗ್ರಾಮ್ ಬೇಯಿಸಿದ ಅಲಸಂಡೆಬೀಜಗಳನ್ನು ಹೆಚ್ಚುವರಿ ಆಹಾರವಾಗಿ ಉಣಿಸಿ ಮುಂದಿನ 24 ಗಂಟೆಗಳಲ್ಲಿ ಅವರ ಅವಾಗಳನ್ನು ಅಧ್ಯಯನ ಮಾಡಲಾಯ್ತು.
ಲಿಂಗ, ದೇಹದ ಗಾತ್ರ, ದಿನದ ವೇಳೆ ಇವ್ಯಾವುದನ್ನೂ ಲೆಕ್ಕಿಸದೆ ಅವಾಗಳು ಸರಾಸರಿ 90 ಮಿಲಿಲೀಟರ್ ಗಾತ್ರದವಾಗಿದ್ದುವಂತೆ.
ಅಲಸಂಡೆಬೀಜ ಮತ್ತಿತರ ವಾಯುಪದಾರ್ಥಗಳು ಅವಾ ಹೆಚ್ಚಿಸುತ್ತವೆಂಬುದು ಗೊತ್ತಿದ್ದದ್ದೇ. ಆದರೂ 2011ರಲ್ಲಿ ಅದರ
ಬಗ್ಗೆಯೇ ಒಂದು ವೈಜ್ಞಾನಿಕ ಅಧ್ಯಯನ ನಡೆದು ಅಂಥ ವಾಯುಪದಾರ್ಥಗಳು ಒಂದೊಮ್ಮೆ ಅವಾ ಉಂಟು ಮಾಡುವುದು ಹೌದಾದರೂ ಒಟ್ಟಾರೆಯಾಗಿ ಅವುಗಳಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳೇ ಹೆಚ್ಚು ಎಂದು ವಿಜ್ಞಾನಿಗಳು ಕಂಡುಕೊಂಡಿ ದ್ದಾರೆ.
ಆದರೆ ವಿಜ್ಞಾನಿಗಳಿಗೆ ಇದುವರೆಗೂ ಕಂಡುಕೊಳ್ಳಲಿಕ್ಕೆ ಆಗಿಲ್ಲದಿರುವುದು ಏನೆಂದರೆ ಅವಾಗಳ ಗರ್ಜನೆಗೂ ಅದು ಬೀರಬಹು ದಾದ ವಾಸನೆಯ ತೀಕ್ಷ್ಣತೆಗೂ ಏನಾದರೂ ಅನುಲೋಮ ವಿಲೋಮ ಅನುಪಾತವಿದೆಯೇ ಎಂಬುದು. ಶಬ್ದ ದೊಡ್ಡದಿದ್ದಷ್ಟೂ ವಾಸನೆ ಕಡಿಮೆ, ನಿಶ್ಶಬ್ದದ್ದಕ್ಕೆ ಕಟುವಾಸನೆ ಅಂತೆಲ್ಲ ಹೇಳುವ ಲೋಕಾನುಭವದ ಸಂಸ್ಕೃತ ಶ್ಲೋಕಗಳೆಲ್ಲ ಇವೆಯಾದರೂ
ವೈಜ್ಞಾನಿಕ ಪುರಾವೆ ಇನ್ನೂ ಸಾಬೀತಾಗಿಲ್ಲ. ಇನ್ನೊಂದು ಕುತೂಹಲಕರ ಸಂಗತಿಯೆಂದರೆ ಚಳಿಗಾಲದಲ್ಲಿ ನಮ್ಮ ಉಸಿರು
ಅಥವಾ ಬಾಯಿಯಿಂದ ಹೊರಬರುವ ಗಾಳಿ ಹೇಗೆ ಹೊಗೆಯಂತೆ ದೃಷ್ಟಿಗೋಚರವಾಗಿರುತ್ತದೋ ಹಾಗೆಯೇ ಚಳಿಯಲ್ಲಿ ನಗ್ನರಾಗಿ ಅವಾ ಬಿಟ್ಟರೆ ಅದೂ ಸಹ ದೃಷ್ಟಿಗೋಚರವಾಗಬಲ್ಲದಂತೆ!
ಮತ್ತೊಂದು ಸಾಮಾನ್ಯಜ್ಞಾನ ಸಂಗತಿ: ಬಚ್ಚಲುಮನೆಯೊಳಗೆ ಅವಾ ಹೊರಟರೆ ವಾಸನೆ ಅನುಭವ ಹೆಚ್ಚು. ನಿರ್ಬಂಧಿತ ಜಾಗ ಅದಕ್ಕೆ ಒಂದು ಕಾರಣವಾದರೆ ನೀರಾವಿಯು ನಮ್ಮ ಘ್ರಾಣ ಸಂವೇದಕಗಳನ್ನು ಚುರುಕುಗೊಳಿಸುವುದು ಇನ್ನೊಂದು ಕಾರಣ. ಅಷ್ಟಾಗಿ ಅವಾ ಜನಕರಿಗೆ ಅವುಗಳ ವಾಸನೆ ಯಾವತ್ತಿಗೂ ಕಡಿಮೆಯೇ ಅನುಭವಕ್ಕೆ ಬರುವುದು. ಬೇರೆಯವರಿಗೇ ಹೆಚ್ಚು.
ಕೊನೆಯದಾಗಿ, ಅವಾಗಳ ವಾಸನೆ ಕಡಿಮೆಗೊಳಿಸುವ ದಿಸೆಯಲ್ಲಿ ಸಂಶೋಧನೆಗಳು ನಡೆದಿವೆಯೇ? ಹೌದು.
ಶ್ರೆಡ್ಡೀಸ್ ಎಂಬ ಕಂಪನಿಯು ತಯಾರಿಸುವ ಅಂಡರ್‌ವೇರ್, ಪೈಜಾಮಾ, ಜೀನ್ಸ್, ಮತ್ತು ಸೀಟ್ ಕಮಿಷನ್‌ಗಳಲ್ಲಿ ಇಂಗಾಲದ ಒಂದಿಷ್ಟು ಲೇಪನ ಇದ್ದು ಅವಾಗಳ ವಾಸನೆ ಹೀರಿಕೊಳ್ಳುತ್ತದಂತೆ. ಅದಕ್ಕಿಂತಲೂ, 2014ರಲ್ಲಿ ಕ್ರಿಸ್ಟಿಯನ್ ಪೊಂಯ್ಚೆವಾಲ್ ಎಂಬ ಫ್ರೆಂಚ್ ಸಂಶೋಧಕ ಒಂದು ಮಾತ್ರೆ ಅಭಿವೃದ್ಧಿಪಡಿಸಿದ್ದಾನೆ.
ಅದನ್ನು ಸೇವಿಸಿದರೆ ಅವಾದ ದುರ್ವಾಸನೆಯ ಬದಲಿಗೆ ಚಾಕೊಲೇಟ್ ಫ್ಲೇವರ್ ಅಥವಾ ರೋಸ್, ಲಿಲ್ಲಿ, ಜಿಂಜರ್ ಮತ್ತಿತರ ಪ್ಲೇವರ್‌ಗಳ ಪರಿಮಳ ಬರುತ್ತದೆ. ಇದನ್ನೋದುವಾಗಲೇ ನನಗೆ ನೆನಪಾದದ್ದು ಕೆಲ ವರ್ಷಗಳ ಹಿಂದೆ ಸ್ನೇಹಿತರೊಬ್ಬರು ಮುಂಗಾರುಮಳೆ ಧಾಟಿಯಲ್ಲಿ ಹೊಸೆದ ಅಣಕವಾಡು: ‘ಅನಿಸುತಿದೆ ಯಾಕೋ ಇಂದು ನೀನೇನೇ ಹೂಸಿದೆಯೆಂದು… ಮಾಯದ ಲೋಕದಿಂದ ನನಗಾಗಿ ಬೀಸಿದೆಯೆಂದು… ಆಹಾ ಎಂಥ ಮಧುರ ವಾಸನೆ… ಮುಚ್ಚುವೆನ್ನ ಮೂಗನೊಮ್ಮೆ ಹಾಗೇ ಸುಮ್ಮನೆ…’