ಪರಿಶ್ರಮ
ಪ್ರದೀಪ್ ಈಶ್ವರ‍್
parishramamd@gmail.com
ಸ್ಪರ್ಧಾತ್ಮಕ ಜಗತ್ತಿಗೆ ಕಾಲಿಡುವ ಅನೇಕ ಅಭ್ಯರ್ಥಿಗಳು ಮೊದಲು ಐಎಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಾರೆ. ಮೊದಮೊದಲು ಪರೀಕ್ಷೆಗೆ ತಯಾರಿಯನ್ನು ಬಹಳ ಆಸಕ್ತಿಯಿಂದ ನಡೆಸಿದರೂ ತದನಂತರ ಇದರಿಂದ ಹಿಂದೆ ಸರಿದು ಬಿಡುತ್ತಾರೆ. ಪರೀಕ್ಷೆಗೆ ತಯಾರಿ ನಡೆಸುವಾಗ ಅಭ್ಯರ್ಥಿಗಳು ಏನು ಮಾಡಬೇಕು ಹಾಗೂ ಮಾಡಬಾರದು ಎನ್ನುವುದನ್ನು ಅರಿತುಕೊಂಡಿರಬೇಕು.
ಭಾರತದ ಅತ್ಯುನ್ನತ ನಾಗರಿಕ ಸೇವೆ ಭಾರತೀಯ ಆಡಳಿತ ಸೇವೆ (ಐಎಎಸ್). ಇದು ಸ್ವಾರ್ಥವನ್ನು ಬಿಟ್ಟು ದೇಶ ಸೇವೆ ಮಾಡಬೇಕೆಂಬ ಯುವಕ ಯುವತಿಯರ
ಅಂತಿಮ ನಿಲ್ದಾಣ. ಕನಸುಗಳ ಬೆನ್ನೇರಿ ಹೊರಟ ಸಾಧಕರ ಯಶಸ್ವಿ ಪಯಣ.
ಸಾವಿರ ಕನಸುಗಳನ್ನು ಕಟ್ಟಿಕೊಂಡು ದೆಹಲಿ ಎಂಬ ಮಹಾನಗರದತ್ತ ಹೊರಟು, ಬೆಳಗ್ಗೆ ರಾತ್ರಿಯ ವ್ಯತ್ಯಾಸ ವಿಲ್ಲದೆ, ನಿತ್ಯವೂ 15 ತಾಸುಗಿಂತ ಹೆಚ್ಚು ಓದಿ ಐಎಎಸ್ ಪಾಸ್ ಆಗಿ ಎಲ್ಲರನ್ನು ಅಚ್ಚರಿಗೊಳಿಸಬೇಕೆಂಬ ಬಯಕೆ ಇದ್ದರೂ, ಇದರಲ್ಲಿ ಲಕ್ಷಾಂತರ ಮಂದಿ ಪ್ರತಿ ವರ್ಷ ಸೋಲುತ್ತಾರೆ. ಸೋತು ಕಣ್ಣೀರಾಗುತ್ತಾರೆ. ಬದುಕಿನ ಬಹಳಷ್ಟು ವರ್ಷಗಳನ್ನು ಐಎಎಸ್ ತಯಾರಿಯಲ್ಲಿ ಹಾಗೂ ಗೆಲುವಿನ ನಿರೀಕ್ಷೆಯಲ್ಲಿ ಅನೇಕರು ಕಳೆದು ಬಿಡುತ್ತಾರೆ. ನಾಗರಿಕ ಸೇವಾ ಪರೀಕ್ಷೆಯನ್ನು ಪಾಸ್ ಮಾಡಲು ಏನು ಮಾಡಬೇಕು ಎನ್ನುವುದು ಎಷ್ಟು ಮುಖ್ಯವೋ, ಏನು ಮಾಡಬಾರದು ಎನ್ನುವುದು ಕೂಡಾ ಅಷ್ಟೇ ಮುಖ್ಯ.
ಮಧ್ಯಮ ವರ್ಗ ಕುಟುಂಬದ ಸಾಕಷ್ಟು ಹುಡುಗರ ಅಂತಿಮ ನಿಲ್ದಾಣವಾಗಿರುವ ಐಎಎಸ್ ಸಾಕಷ್ಟು ವಿದ್ಯಾರ್ಥಿ ಗಳಿಗೆ ಏಳು ಬೀಳಿನ ಸರಮಾಲೆ. ನನ್ನಂತವನ ಐಎಎಸ್ ಪಯಣ ಬಹಳ ವಿಭಿನ್ನವಾದದ್ದು. ಡಿಗ್ರಿಯ ಪ್ರಾರಂಭದಲ್ಲಿ ಐಎಎಸ್ ಮಾಡಬೇಕೆಂಬ ಆಸೆ ಚಿಗುರಿಸಿಕೊಂಡು ಅಲ್ಪ ಸ್ವಲ್ಪ ಹಣ ಹೊಂದಿಸಿ, ಬೆಂಗಳೂರಿನ ಅವೆನ್ಯೂ ರಸ್ತೆಯ ಬಳಿ ಪುಸ್ತಕಗಳ ರಾಶಿಯನ್ನೇ ಖರೀದಿಸಿ, ನಂತರ ಏನು ಓದಬೇಕೆಂಬ ಗೊಂದಲಗಳಲ್ಲಿ ಪದವಿ ಜೀವನ ಕಳೆದು ಹೋಗುತ್ತದೆ. ನಂತರ ಮತ್ತದೆ ಹುಮ್ಮಸ್ಸು ಬೆಳಸಿಕೊಂಡು ಮೊದಲ ಪ್ರಯತ್ನದಲ್ಲೇ ಐಎಎಸ್ ಪಾಸ್ ಮಾಡ ಬೇಕೆಂಬ ಹುಚ್ಚಿಗೆ ಬಿದ್ದು ಅದೇ ರೇಸಿನಲ್ಲಿ ಉಳಿದು ಹೋಗುವ ಮಾನಸಿಕ ಸ್ಥಿತಿ ಉಂಟಾಗುತ್ತದೆ. ನನ್ನಂತ ಮಧ್ಯಮ ವರ್ಗದ ವಿದ್ಯಾರ್ಥಿ ಐಎಎಸ್ ಕನಸು ಕಾಣಲು ಹೊರಟಾಗ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಹಾಗಾದರೆ ಈ ಪರೀಕ್ಷೆ ಅಷ್ಟು ಕಠಿಣವಾ? ಖಂಡಿತ ಹಾಗಿಲ್ಲ. ಈ ಪರೀಕ್ಷೆ ಸ್ಪರ್ಧಾರ್ಥಿಗಳ ಮನೋಸ್ಥಿತಿ ಮೇಲೆ ನಿಂತಿದೆ.
ಕಷ್ಟ ಎಂದುಕೊಂಡವರಿಗೆ ಕಷ್ಟ ಸುಲಭ ಎಂದುಕೊಂಡವರಿಗೆ ಸುಲಭ. ಒಂದೇ ಪ್ರಯತ್ನದಲ್ಲಿ ಓದಿ ಆಲ್ ಇಂಡಿಯಾ ರ‍್ಯಾಂಕ್ ಬಂದವರು ಇದ್ದಾರೆ, ಒಂದು ದಶಕವೇ ಕಳೆದರೂ ಏನು ಮಾಡಲಾಗದೇ ಇರುವವರು ಇದ್ದಾರೆ. ಐಎಎಸ್‌ಗೆ ಶ್ರಮ ಹಾಗೂ ಏಕ್ರಾಗತೆ ಎಷ್ಟು ಮುಖ್ಯವೋ ಅಷ್ಟೇ ಪ್ರಮಾಣದಲ್ಲಿ ಗೆದ್ದೆ ಗೆಲ್ಲುವೆ ಎನ್ನುವ ನಂಬಿಕೆ ಕೂಡಾ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಕೆಲವರಿಗೆ ನಿತ್ಯವೂ ೧೫ ತಾಸುಗಳ ಅಧ್ಯಯನ ಮಾಡಿದರೆ ಪರೀಕ್ಷೆ ಪಾಸಾಗಬಹುದು ಎನ್ನುವ ನಂಬಿಕೆ. ಆದರೆ ಎಲ್ಲರೂ ೧೫ ತಾಸು ಅಧ್ಯಯನ ಮಾಡಬೇಕೆಂದು ಇಲ್ಲ. ಅವರವರ ಓದಿನ ಸಾಮರ್ಥ್ಯದ ಮೇಲೆ ಇದು ನಿರ್ಧಾರವಾಗುತ್ತದೆ. ಆದರೆ ನಿರಂತರ ಪ್ರಯತ್ನ ಇದ್ದರೆ ಮಾತ್ರ ಐಎಎಸ್ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸಾಧ್ಯ.
ಈಗಾಗಲೇ ಬೆಂಗಳೂರಿನ ವಿಜಯನಗರ ಮತ್ತು ಚಂದ್ರಾ ಲೇಔಟ್ ಸಾಕಷ್ಟು ಐಎಎಸ್ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಆಸರೆ ಆಗಿದೆ. ಅಷ್ಟೇ ಸಮವಾಗಿ ಸೋತು ಸುಣ್ಣವಾಗುವ ಜೀವಗಳಿಗೂ ಆಶ್ರಯವಾಗಿದೆ. ಬದುಕಿನ ಕೊನೆಯ ಆಸೆ ಐಎಎಸ್ ಎಂದು ನಂಬಿದವರಿಗೆ ಮಾತ್ರ ಅದು ಲಭಿಸುವ ಸಾಧ್ಯತೆ ಹೆಚ್ಚಾಗಿ ರುತ್ತದೆ. ನಾಳೆ ಓದೋಣ, ನಾಡಿದ್ದು ಓದೋಣ ಈ ಹಬ್ಬವನ್ನು ಮುಗಿಸಿಕೊಂಡು ಓದೋಣ ಎಂದು ಕಾಲಹರಣ ಮಾಡುವ ಅಭ್ಯರ್ಥಿಗಳಿಗೆ ಐಎಎಸ್ ಕನಸಿನ ಕೂಸು ಹಾಗೆ ಉಳಿಯಲಿದೆ. ಇಷ್ಟಕ್ಕೂ ಐಎಎಸ್ ಅಭ್ಯರ್ಥಿಗಳು ಮಾಡುವ ತಪ್ಪುಗಳೇನು? ಒಂದೇ ಪ್ರಯತ್ನದಲ್ಲಿ ಸಾಧಿಸಿ ಬಿಡುತ್ತೇನೆ ಹಾಗೂ ಮೊದಲ ಪ್ರಯತ್ನ ದಲ್ಲಿ ದೇಶದಲ್ಲೇ ಮೊದಲ ರ‍್ಯಾಂಕ್‌ಗಳಿಸಿ ಬಿಡುತ್ತೇನೆ ಎಂದು ಅತಿಯಾಗಿ ನಂಬುವುದು. ಆ ನಂಬಿಕೆಗೆ ತಕ್ಕ ಹಾಗೆ ಪ್ರಯತ್ನ ಮಾಡದಿರುವುದು. ಆದರೆ ಇದು ಸಾಧ್ಯವಿಲ್ಲವೇ? ಖಂಡಿತಾ ಸಾಧ್ಯವಿದೆ.
ಇದು ಸಾಧ್ಯವಿರುವುದು ನಿರಂತರವಾಗಿ ಪ್ರಯತ್ನದಲ್ಲಿರುವ ಕೆಲವೇ ಕೆಲವು ಅಭ್ಯರ್ಥಿಗಳಿಂದ ಮಾತ್ರ. ಪದೇ ಪದೇ ಐಚ್ಚಿಕ ವಿಷಯವನ್ನು ಬದಲಿಸುವುದು, ಓದುವ ಪುಸ್ತಕಗಳ ರಾಶಿಯನ್ನು ಬದಲಿಸುವುದು. ಒಂದೋ ಎರಡೂ ಪ್ರಯತ್ನದಲ್ಲಿ ಸೋತೆ ಎಂದ ಮಾತ್ರಕ್ಕೆ ಸ್ಪರ್ಧೆಯಿಂದ ಹಿಂದೆ ಸರಿಯುವುದು, ಮತ್ತೆ ಕೆಲ ದಿನಗಳ ನಂತರ ಓದಲು ಆರಂಭಿಸುವುದು ಓದಿಗೆ ಪೂರಕವಾಗಿರುವುದಿಲ್ಲ. ಎಲ್ಲ ಬುದ್ದಿವಂತರೇ ಐಎಎಸ್ ತಯಾರಿ ನಡೆಸುತ್ತಾರೆ. 10ನೇ ತರಗತಿಯಲ್ಲಿ ರಾಜ್ಯ
ಮಟ್ಟ ದಲ್ಲಿ ರ‍್ಯಾಂಕ್ ಬಂದ ವಿದ್ಯಾರ್ಥಿಗಳು ಐಎಎಸ್ ಪೂರ್ವ ಭಾವಿಯಲ್ಲೂ ಯಶಸ್ವಿಯಾಗಲು ವಿಫಲರಾಗಿದ್ದಾರೆ.
ದ್ವಿತೀಯ ಪಿಯುಸಿ ವಿಜ್ಞಾನ ಭಾಗದಲ್ಲಿ ಯಶಸ್ವಿಯಾಗಿ 10ನೇ ತರಗತಿಯಲ್ಲಿ ಶೇ.60, ಪಿಯುಸಿ 75% ಪಡೆದು ಆಲ್ ಇಂಡಿಯಾ ಮಟ್ಟದಲ್ಲಿ 18ನೇ ರ‍್ಯಾಂಕ್ ಬಂದಿರುವ ನಿದರ್ಶನಗಳಿವೆ. ಇಲ್ಲಿ ನಮ್ಮ ಓದಿನ ಹಿನ್ನೆಲೆ ಎಷ್ಟು ಮುಖ್ಯವೋ ಓದಲು ಕೂತಾಗ ನಮ್ಮ ಪ್ರಾಮಾಣಿಕ ಪ್ರಯತ್ನವೂ ಅಷ್ಟೇ ಮುಖ್ಯ. ಐಎಎಸ್ ಪರೀಕ್ಷೆ ತಯಾರಿಗೆ ನೀಡುವ ಅನೇಕ ಸಂಸ್ಥೆಗಳಿವೆ. ಕೋಚಿಂಗ್ ಸೆಂಟರ್‌ಗಳು, ಪಠ್ಯಪುಸ್ತಕಗಳು ಮಾರುಕಟ್ಟೆಯಲ್ಲಿ ಬಹಳಷ್ಟು ಲಭ್ಯವಿವೆ. ಆದರೆ ಐಎಎಸ್
ಪರೀಕ್ಷೆಯಲ್ಲಿ ವಿಫಲರಾದವರ ಕಥೆಗಳು ಪರೀಕ್ಷೆ ತಯಾರಿ ನಡೆಸುತ್ತಿರುವವರಿಗೆ ಸೂರ್ತಿ ಆಗುತ್ತವೆ. ನಾನು ದೃಢ ಸಂಕಲ್ಪದಿಂದ ಐಎಎಸ್ ಓದಿ ಪಾಸ್ ಮಾಡಿ ಕೊಳ್ಳಬೇಕೆಂಬ ಕನಸಿನಲ್ಲಿದ್ದೆ.
ದೆಹಲಿಯ ಓಲ್ಡ್ ರಾಜಿಂದರ್ ಹೋಗಿ ಹೊಸ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಪ್ರಯತ್ನದಲ್ಲಿದ್ದೆ. ಮೊದಲ ಪ್ರಯತ್ನದಲ್ಲಿ ಸಮಾಜಶಾಸ್ತ್ರ ತೆಗೆದುಕೊಂಡು ಪ್ರಯೋಗ ಮಾಡಿ ಸೋತವನು. ನಂತರ ಪೊಲಿಟಿಕಲ್ ಸೈನ್ಸ್ ವಿಷಯವನ್ನು ತೆಗೆದುಕೊಂಡು ಗೊಂದಲಕ್ಕೆ ಬಿದ್ದು, ಕಡೆಗೂ ಜೀವಶಾಸವನ್ನು ಐಚ್ಚಿಕವಾಗಿ ತೆಗೆದುಕೊಂಡು ಅಂದ್ರೆ ಜೀವಶಾಸ್ತ್ರದಲ್ಲಿ ಸಸ್ಯಶಾಸವನ್ನು ಐಚ್ಛಿಕವಾಗಿ ತೆಗೆದುಕೊಂಡು, ಕೊನೆಯ ಹಂತದವರೆಗೂ ತಲುಪಿದ್ದವನು. ಇಲ್ಲಿ ಹೇಗೆ ಓದಬೇಕೆಂಬು ವುದು ಎಷ್ಟು ಮುಖ್ಯವೋ ಹೇಗೆ ಓದಬಾರದು ಎಂಬುವುದು ಅಷ್ಟೇ ಮುಖ್ಯ.
ಐಎಎಸ್ ತಯಾರಿ ಪ್ರಾರಂಭಿಸುವಾಗ ಒಂದಷ್ಟು ಕಾಸನ್ನು ಕೂಡಿಸಿಟ್ಟುಕೊಂಡು, ಲಕ್ಷ್ಮಿಕಾಂತ್ ಪುಸ್ತಕವನ್ನು ತೆಗೆದುಕೊಂಡು ಸಂಪೂರ್ಣ ರಾಜಕೀಯ ಶಾಸವನ್ನು
ಪುಸ್ತಕದಿಂದಲೇ ಓದಿ ಪಾಸ್ ಮಾಡುತ್ತೇನೆ ಎಂಬ ರೇಸಿಗೆ ಬಿದ್ದಿರುತ್ತೇವೆ. ಆದರೆ ಎರಿಗೂ ಸ್ಪಷ್ಟವಾಗಿ ನೆನೆಪಿರಲಿ, ದೊಡ್ಡ ದೊಡ್ಡ ಗ್ರಂಥಗಳನ್ನು ಓದುವುದರಿಂದ ದೊಡ್ಡ ದೊಡ್ಡ ಅಧಿಕಾರಿಗಳಾಗುವುದಿಲ್ಲ. ಚಿಕ್ಕ ಪುಸ್ತಕಗಳನ್ನು ದೊಡ್ಡ ಮಟ್ಟದಲ್ಲಿ ಓದುವುದರಿಂದ ದೊಡ್ಡ ದೊಡ್ಡ ಅಧಿಕಾರಿಗಳಾಗಬಹುದು. ಐಎಎಸ್ ಪರೀಕ್ಷೆಗೆ ತಯಾರಿ ನಡೆಸುವ ಮೊದಲು ಆರನೇ ತರಗತಿಯಿಂದ 12ನೇ ತರಗತಿವರೆಗೂ ಎನ್‌ಸಿಆರ್‌ಟಿ ಪುಸ್ತಕಗಳನ್ನು ಚಂದವಾಗಿ ಓದಿ, ಸಾಧ್ಯವಾದರೆ ನೋಟ್ಸ್ ಅಥವಾ ಟಿಪ್ಪಣಿ ಮಾಡಿಕೊಳ್ಳಿ, ಪದೇ ಪದೇ ಅದನ್ನು ಓದಿ ನಂತರ ಮೊದಲು ಪೂರ್ವಭಾವಿ ಪರೀಕ್ಷೆಗೆ ತಯಾರಿ ನಡೆಸಿ, ಅದರ ಮೇಲೆ ನಂಬಿಕೆ ಬಂದ ಮೇಲೆ ಮುಖ್ಯ ಪರೀಕ್ಷೆಗೆ ತಯಾರಿ ನಡೆಸಿ. ತಮಗೆಲ್ಲ ಅನ್ನಿಸಬಹುದು ಮುಖ್ಯ, ಪರೀಕ್ಷೆ ಮುಖ್ಯ ತಾನೇ ಮೊದಲು ಮುಖ್ಯ ಪರೀಕ್ಷೆಗೆ ಓದಬೇಕು. ನಂತರ ಪೂರ್ವಭಾವಿ ಪರೀಕ್ಷೆಗೆ ಓದಬೇಕು. ನಿಮ್ಮ ನಂಬಿಕೆ ತಪ್ಪಲ್ಲ, ನಾನು ಸೇರಿದಂತೆ ಸಾವಿರಾರು ಮಂದಿ ಮುಖ್ಯಪರೀಕ್ಷೆಗೆ ಓದಿ ಬಹಳಷ್ಟು ಸಂದರ್ಭದಲ್ಲಿ ಪೂರ್ವಭಾವಿ ಪರೀಕ್ಷೆ ಯಲ್ಲಿ ವಿಫಲವಾಗಿ, ನಂತರ ಒಂದು ವರ್ಷ ಕಾದಿರುವ ದಿನಗಳು ಬಹಳಷ್ಟಿದೆ.
ಹೀಗಾಗಿ ಪ್ರಾರಂಭದಲ್ಲಿ ಪೂರ್ವಭಾವಿ ಪರೀಕ್ಷೆಯ ತಯಾರಿಯನ್ನು ಮುಗಿಸಿ, ಸಮವಾಗಿ ಮುಖ್ಯಪರೀಕ್ಷೆಯ ತರಬೇತಿಯನ್ನು ಮುಂದುವರಿಸಿ.