Sunday, 15th December 2024

ನಮ್ಮ ತಂದೆ-ತಾಯಿಯ ಗುರುತು ಹಿಡಿಯಲಾಗದ ಸ್ಥಿತಿ ಬರಬಾರದು !

ನೂರೆಂಟು ವಿಶ್ವ

vbhat@me.com

ನಾನು ಕೊನೆಯ ಬಾರಿ ಲಂಡನ್‌ಗೆ ಹೋಗಿದ್ದು ಕೋವಿಡ್‌ಗಿಂತ ಎರಡು ತಿಂಗಳು ಮುನ್ನ. ಕೋವಿಡ್‌ನಲ್ಲಿ ಅಮೆರಿಕ ನಂತರ ತೀರಾ ಬಳಲಿದ ದೇಶವೆಂದರೆ ಬ್ರಿಟನ್. ನಾನು ಮೊದಲ ಸಲ ವಿದೇಶದ ನೆಲದ ಮೇಲೆ ಕಾಲಿಟ್ಟ ಮತ್ತು ವ್ಯಾಸಂಗ ಮಾಡಿದ
ದೇಶ ಎಂಬುದು ಒಂದು ಕಾರಣವಾದರೆ, ಭಾಷೆ, ಸಂಸ್ಕೃತಿ, ಇತಿಹಾಸ, ಜನಜೀವನದ ದೃಷ್ಟಿಯಿಂದಲೂ ಬ್ರಿಟನ್ ಅತ್ಯಂತ ಇಷ್ಟದ ದೇಶ. ಅಮೆರಿಕ ಮತ್ತು ಯುಕೆ ಮಧ್ಯೆ ಆಯ್ಕೆ ಪ್ರಶ್ನೆ ಬಂದಾಗ, ನಿಸ್ಸಂದೇಹವಾಗಿ, ಎರಡನೆ ಯದೇ ಹೆಚ್ಚು ಆಪ್ತ.

ಕಳೆದ ಇಪ್ಪತ್ತೈದು ವರ್ಷಗಳ ಅವಧಿಯಲ್ಲಿ ಸರಾಸರಿ ವರ್ಷಕ್ಕೊಮ್ಮೆ ಯಾದರೂ ಲಂಡನ್‌ಗೆ ಭೇಟಿ ನೀಡಿದ್ದೇನೆ. ಬೇಸಿಗೆ ರಜೆಯಲ್ಲಿ ಅಜ್ಜನ ಮನೆಗೆ ಹೋಗದಿದ್ದರೆ ಹೇಗೆ? ಲಂಡನ್‌ನನ್ನು ಆ ರೀತಿ ಭಾವಿಸಿಕೊಂಡವನು ನಾನು. In London, everyone is different, and hat means anyone can fit in ಎಂಬ (ಹೇಳಿದವರಾರು ಎಂಬುದು ನೆನಪಾಗು ತ್ತಿಲ್ಲ) ಮಾತು ಅಪ್ಪಟ ನಿಜ. ‘ಲಂಡನ್ ಮಹಾ ದಗಾಕೋರರ, ಪಾತಕಿಗಳ, ಜೂಜುಕೋರರ, ಮೋಸಗಾರರ, ಛದ್ಮವೇಷ ಧಾರಿಗಳ ನಗರವೆಂಬುದು ಗೊತ್ತು. ಅಲ್ಲಿ ಕುಡುಕರು, ಲಂಪಟರು, ತಲೆ ಹಿಡುಕರು, ದಗಲ್ಬಾಜಿಗಳು ಇzರೆಂಬುದು ಗೊತ್ತು. ಅಲ್ಲಿ ವೇಶ್ಯೆಯರು, ಕಳ್ಳಕಾಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆಂಬುದೂ ಗೊತ್ತು.

ಒಂದು ನಗರ ಕೆಟ್ಟ ಕಾರಣಗಳಿಗೆ ಕುಪ್ರಸಿದ್ಧವಾಗಿದ್ದರೆ, ಲಂಡನ್ ಅದನ್ನು ಮೀರಿಸುವಷ್ಟು ಕುಪ್ರಸಿದ್ಧವಾಗಿದೆ ಎಂಬುದು ಸಹ ಗೊತ್ತು. ಇಷ್ಟು ಹೇಳಿದ ನಂತರವೂ, ನನಗೆ ಆ ನಗರದ ಬಗ್ಗೆ ನನ್ನ ಅಭಿಪ್ರಾಯ ಬದಲಾಗಿಲ್ಲ. ನಾನು ಲಂಡನ್ ನಗರವನ್ನು ಮತ್ತಷ್ಟು ಅತಿಯಾಗಿ ಪ್ರೀತಿಸಲಾರಂಭಿಸಿದ್ದೇನೆ’ ಎಂಬ ಇಂಗ್ಲಿಷ್ ಸಾಹಿತಿ ಚಾಲ್ಸ ಡಿಕೆನ್ಸ್ ಮಾತನ್ನು ನಾನಂತೂ ಅಕ್ಷರಶಃ
ಒಪ್ಪುತ್ತೇನೆ. ಲಂಡನ್ ನಗರದಲ್ಲಿ ಓಡಾಡುವಾಗ, ಖ್ಯಾತ ಇಂಗ್ಲಿಷ್ ಲೇಖಕಿ ವರ್ಜಿನಿಯಾ ವೂಲ ಹೇಳಿದ To walk
alone in London is the greatest rest ಎಂಬ ಮಾತು ಆಗಾಗ ನೆನಪಾಗುತ್ತದೆ.

ಒಮ್ಮೆ ಲಂಡನ್‌ನಲ್ಲಿ ಆರು ತಿಂಗಳು ಉಳಿಯುವ ಪ್ರಸಂಗ ಬಂದಾಗ, ಆ ನಗರದ ಗಲ್ಲಿ ಗಲ್ಲಿಗಳನ್ನೆಲ್ಲ ಹಳೆ ಕಬ್ಬಿಣ, ರದ್ದಿ
ವ್ಯಾಪಾರಿಗಳು ಸುತ್ತುವಂತೆ ಸುತ್ತಿದೆ. ಇಂದಿಗೂ ಲಂಡನ್‌ನ ಬೀದಿಗಳಲ್ಲಿ ಸುತ್ತುವುದೆಂದರೆ, ಬೀದಿ ಬಸವನ ಉತ್ಸಾಹ,
ಹುರುಪು. ಅದ್ಯಾಕೋ ಗೊತ್ತಿಲ್ಲ, ಇಂಥ ಹುರುಪು ಬೇರೆ ನಗರಗಳನ್ನು ಸುತ್ತುವಾಗ ಬರುವುದಿಲ್ಲ. ಲಂಡನ್‌ನ ಆ ವಿಶೇಷ ಆಕರ್ಷಣೆ ಆಗಲೂ ಇತ್ತು, ಈಗಲೂ ಇದೆ. ಲಂಡನ್ ನಲ್ಲಿ ಏನೇ ಸ್ಪರ್ಶಿಸಿ, ನೀವು ಇತಿಹಾಸವನ್ನು ಸ್ಪರ್ಶಿಸಿದಂತೆ.

ಎಲ್ಲಿಯೇ ನಡೆದರೂ, ಇತಿಹಾಸದ ಪುಟಗಳ ಮೇಲೆ ನಡೆದಂತೆ. ಅಲ್ಲಿ ಪ್ರತಿಯೊಂದಕ್ಕೂ ಒಂದು ಕತೆಯಿದೆ, ಐತಿಹ್ಯವಿದೆ. ಬ್ರಿಟಿಷರು ಏನನ್ನಾದರೂ ತೋರಿಸಿ ಒಂದು ಕಥೆ ಹೇಳುತ್ತಾರೆ. ಲಂಡನ್ ತೋರಿಸಿ ಮಹಾಕಥೆ ಹೇಳುತ್ತಾರೆ. ನೀವು ಲಂಡನ್‌ನನ್ನು ಎಷ್ಟೇ ತಿರುಗಿದರೂ ದಣಿವಾಯಿತು, ನೀರಸವಾಯಿತು, ಸಾಕು ನೋಡಿದ್ದು ಎಂದು ಅನಿಸುವುದಿಲ್ಲ.
ಹದಿನೆಂಟನೇ ಶತಮಾನದ ಖ್ಯಾತ ಇಂಗ್ಲಿಷ್ ಲೇಖಕ, ಸಾಹಿತಿ, ಕವಿ, ಇಂಗ್ಲಿಷ್ ಪದಕೋಶ ರಚಿಸಿದ ಭಾಷಾ ಪಂಡಿತ
ಸ್ಯಾಮುಯೆಲ್ ಜಾನ್ಸನ್ ಇದನ್ನೇ ಹೀಗೆ ಹೇಳಿದ್ದ – When a man is tired of London, he is tired of life!  ಲಂಡನ್ ವಿಷಯದಲ್ಲಿ ಇದು ನೂರಕ್ಕೆ ನೂರು ಸತ್ಯ.

ಮೊದಲ ಬಾರಿಗೆ ನಾನು ಲಂಡನ್‌ಗೆ ಹೊರಟು ನಿಂತಾಗ, ನನಗೆ ಆ ನಗರದ ಬಗ್ಗೆ ತರೇಹವಾರಿ ಕಲ್ಪನೆ, ಅಪರೂಪದ
ಚಿತ್ರಣ ಮತ್ತು ಸೂಕ್ಷ್ಮ ಒಳನೋಟಗಳನ್ನು ಕಟ್ಟಿಕೊಟ್ಟವರು ವೈಎನ್ಕೆ. ಲಂಡನ್ ನೋಡುವ ಕ್ರಮದ ಬಗ್ಗೆ ಹೇಳಿದವರೂ
ಅವರೇ. ಅವರ ಮಾರ್ಗದರ್ಶನದಂತೆ, ಅಲ್ಲಿನ ಕಲಾ ಗ್ಯಾಲರಿಗಳು, ಥಿಯೇಟರುಗಳು, ಸಾಹಿತಿಗಳ ಮನೆಗಳು,
ಲೈಬ್ರರಿಗಳು, ಲಂಡನ್ ಟ್ಯೂಬ್, ವಿಶಿಷ್ಟ ಪಬ್ಬುಗಳಿಗೆಲ್ಲ ನಾನು ಅಂದಿನಿಂದ ಇಂದಿನ ತನಕವೂ ಅಲೆಯುತ್ತಿದ್ದೇನೆ.

‘ಯಾವ ಅಜೆಂಡಾ ಇಲ್ಲದೇ, ನಿರ್ಮೋಹಿತರಾಗಿ, ನಿರ್ಭಾವುಕರಾಗಿ ತಿರುಗಬೇಕು, ಅದು ಜಗತ್ತಿನ ಚಿಂತನೆಯನ್ನು
ತನ್ನತ್ತ ಸೆಳೆದ ನಗರ. ಅಲ್ಲಿ ಅಲೆದು ಅಲೆದು ಜಛಿಠಿ ಟoಠಿ ಆಗಬೇಕು’ ಎಂದು ವೈಎನ್ಕೆ ಹೇಳುತ್ತಿದ್ದುದು ನೆನಪಾಗುತ್ತದೆ.
ಒಮ್ಮೆ ಅವರು, ‘ಆಸ್ಕರ್ ವೈಲ್ಡ ಲಂಡನ್ ಬಗ್ಗೆ ಏನು ಹೇಳಿದ್ದಾನೆ ಗೊತ್ತಾ? ಅವನ ಈ ಒಂದು ಮಾತಿನ ಅರ್ಥವನ್ನು
ನೀವು ಸರಿಯಾಗಿ ಮನನ ಮಾಡಿಕೊಂಡರೆ ಲಂಡನ್ ಮಹಿಮೆ ತಿಳಿಯುತ್ತದೆ.

ಆಸ್ಕರ್ ಹೇಳುತ್ತಿದ್ದ – The man who can dominate a London dinner table can dominate the world.. ಇದು ನಿಜ’ ಎಂದು ಹೇಳಿದ್ದು ಈಗಲೂ ಹಸಿಹಸಿಯಾಗಿದೆ. ನಾನು ವಾರಕ್ಕೊಮ್ಮೆ ಲಂಡನ್ ನಿಂದ ಫೋನಿನಲ್ಲಿ ಮಾತಾಡುವಾಗ ಅವರು ಸಣ್ಣ ಮಗುವಿನಂತೆ ನಾನು ಹೇಳುವ ಕತೆಗಳನ್ನು ಕೇಳುತ್ತಿದ್ದರು. ಆಗಲೂ ಅವರು ಅದನ್ನು ನೋಡಿದಿರಾ, ಇದನ್ನು ನೋಡಿದಿರಾ, ಇದನ್ನೇಕೆ ನೋಡಿಲ್ಲ ಎಂದು ಕೇಳುತ್ತಿದ್ದರು.

ನನಗೆ ಲಂಡನ್ ನಗರವನ್ನು ಅದಕ್ಕೂ ಚೆನ್ನಾಗಿ ಪರಿಚಯಿಸಿದವರು ನನ್ನ ಪತ್ರಿಕೋದ್ಯಮದ ಮೇಷ್ಟ್ರಾದ ಜಾನ್ ರೈನ್.
ಅವರು ಸುಮಾರು ಮೂರು ದಶಕಗಳ ಕಾಲ ಲಂಡನ್‌ನ ಹತ್ತಾರು ಪತ್ರಿಕೆಗಳಲ್ಲಿ ಕ್ರೈಂ ರಿಪೋರ್ಟರ್, ರಾಯಲ್
ರಿಪೋರ್ಟರ್, ಪೊಲಿಟಿಕಲ್ ರಿಪೋರ್ಟರ್, ವಿದೇಶಾಂಗ ವ್ಯವಹಾರ ವಿಶ್ಲೇಷಕರಾಗಿ ಕೆಲಸ ಮಾಡಿ, ನಂತರ
ಪತ್ರಿಕೋದ್ಯಮದ ಕ್ಲಾಸಿಗೆ ಮೇಷ್ಟ್ರಾಗಿ ನಡೆದು ಬಂದವರು.

ಅವರಿಗೆ ಲಂಡನ್ ಬೀದಿಗಳೆಂದರೆ, ಕೈಮೇಲಿನ ಗೆರೆಗಳಷ್ಟೇ ಪರಿಚಿತ. ಜಾನ್ ರೈನ್ ಅವರು I love London! It is
entirely composed of beautiful idiots and brilliant lunatics. Just what society should be ಎಂದು ಒಂದು ಸಾಲಿನಲ್ಲಿ ಲಂಡನ್ ಅನ್ನು ಬಣ್ಣಿಸಿದ್ದರು. ಸುಮಾರು ಮೂವತ್ತು ವರ್ಷಗಳ ಕಾಲ, ಜಾನ್ ರೈನ್ ಲಂಡನ್‌ನ ಬೇರೆ ಬೇರೆ ಬೀದಿಗಳಲ್ಲಿ ನಡೆಯುತ್ತಿzರಂತೆ. ಪ್ರತಿ ಸಲ ನಡೆಯುವಾಗಲೂ ತಮಗೆ ಏನಾದರೂ ಒಂದು ಹೊಸ ಅನುಭವ ಆಗುತ್ತಿರುವುದರಿಂದಲೇ ತಾವು ನಿತ್ಯವೂ ನಡೆಯುತ್ತಿರುವುದಾಗಿ ಅವರು ಹೇಳುತ್ತಿದ್ದರು. ನೀವು ಸಣ್ಣ ಸಣ್ಣ ಸಂಗತಿಗಳಿಗೂ ಕುತೂಹಲ, ಬೆರಗು ಮೂಡಿಸಿಕೊಳ್ಳುವ ಪ್ರವೃತ್ತಿಯವರಾದರೆ, ಲಂಡನ್ ಬೀದಿ ನಿಮಗೆ ಹೇಳಿ ಮಾಡಿಸಿದ್ದು. ಕಾರಣ ಪ್ರತಿ ಮೂಲೆಯಲ್ಲೂ ಏನಾದರೂ ಅಚ್ಚರಿಪಡುವ ಸಂಗತಿಗಳು ಅಲ್ಲಿವೆ.

ಕಳೆದ ಇಪ್ಪತ್ತೈದು ವರ್ಷಗಳಿಂದ (1997 ರಿಂದ) ನಾನು ಲಂಡನ್ ನಗರವನ್ನು ನೋಡುತ್ತಿದ್ದೇನೆ. ಮೊನ್ನೆಯೂ,
ಮೊದಲ ಸಲ ನೋಡಿದಂತೆ, ಬೆರಗುಗಣ್ಣುಗಳಿಂದಲೇ ನೋಡಿದೆ. ಆಗಲೂ ಮತ್ತು ಈಗಲೂ ಎದ್ದು ಕಾಣುವ ಒಂದು
ಅಂಶವೆಂದರೆ, ಕಳೆದ ಕಾಲು ಶತಮಾನದಲ್ಲಿ ಲಂಡನ್ ನಗರ ಸ್ವಲ್ಪವೂ, ಒಂಚೂರೂ ಬದಲಾಗದೇ ಇರುವುದು. ಮೊನ್ನೆ
ಲಂಡನ್ ನಗರದಲ್ಲಿ ದಿನಕ್ಕೆ ಏನಿಲ್ಲವೆಂದರೂ ಹದಿನೆಂಟು- ಇಪ್ಪತ್ತು ಸಾವಿರ ಹೆಜ್ಜೆಗಳನ್ನು ಹಾಕಿರಬಹುದು, ನಾನು ಈ
ಮೊದಲು ಅಲೆದಾಡಿದ ಬೀದಿಗಳಲ್ಲಿ ಅಲೆದಾಡಿರಬಹುದು, ಅಂದು ನೋಡಿದ ಲಂಡನ್ ಥೇಟು ಹಾಗೆಯೇ ಇದೆ. ಸಣ್ಣ,
ಪುಟ್ಟ ಬದಲಾವಣೆ ಸಹ ಆಗಿಲ್ಲ. ಲಂಡನ್‌ನ ಹೃದಯ ಭಾಗದಲ್ಲಿರುವ ವೆಸ್ಟ್ ಮಿನಿಸ್ಟರ್, ಬಿಗ್ ಬೆನ್, ಪಾರ್ಲಿಮೆಂಟ್ ಸ್ಕ್ವೇರ್, ಚರ್ಚಿಲ್ ಪ್ರತಿಮೆ, ಟ್ರಫಲ್ಗರ್ ಸ್ಕ್ವೇರ್, ಥೇಮ್ಸ ನದಿ ತೀರ, ಪಿಕಡಿಲಿ ವೃತ್ತ, ರೀಜೆಂಟ್ ಸ್ಟ್ರೀಟ್, ಆಕ್ಸಫರ್ಡ್ ಸ್ಟ್ರೀಟ್, ವಿಕ್ಟೊರಿಯಾ ಸ್ಟ್ರೀಟ್… ಹೀಗೆ ಯಾವುದೇ ಪ್ರದೇಶಗಳಿಗೆ ಹೋದರೂ ಒಂದೇ ಒಂದು ಬದಲಾವಣೆ ಕಾಣಲು ಸಾಧ್ಯವಿಲ್ಲ.

ಬಿಗ್ ಬೆನ್ (ಈಗ ಎಲಿಜಬೆತ್ ಟಾವರ್) ಸನಿಹವಿರುವ ಬೀದಿಯಲ್ಲಿ ಈಗಲೂ ಕೆಂಪು ಬಣ್ಣದ ಟೆಲಿಫೋನ್ ಬೂತ್ ಗಳಿವೆ. ಇಪ್ಪತ್ತೈದು ವರ್ಷಗಳ ಹಿಂದೆ ಹೋದಾಗ, ನಾನು ನಾಣ್ಯಗಳನ್ನು ಹಾಕಿ ಅಲ್ಲಿಂದ ಫೋನ್ ಮಾಡಿದ್ದೆ. ನಂತರ ಮೊಬೈಲ್ ತಂತ್ರಜ್ಞಾನದದ ಬದಲಾವಣೆಯಿಂದ ಫೋನುಗಳೆಲ್ಲ ಹಳ್ಳ ಹಿಡಿದು, ಮ್ಯೂಸಿಯಂ ಅಥವಾ ಗುಜರಿ ಸೇರಿದವು. ಹಾಗೆ ನೋಡಿದರೆ, ಆ ಕೆಂಪು ಬಣ್ಣದ ಟೆಲಿಫೋನ್ ಬೂತುಗಳನ್ನು 1924ರಲ್ಲಿಯೇ ಲಂಡನ್‌ನ ಬೀದಿಗಳಲ್ಲಿ ಸಾರ್ವಜನಿಕರ ಉಪಯೋಗಕ್ಕೆಂದು ಸ್ಥಾಪಿಸಿದ್ದರಂತೆ.

ಅಂದರೆ ಸುಮಾರು ತೊಂಬತ್ತೆಂಟು ವರ್ಷಗಳ ಹಿಂದೆ ಸ್ಥಾಪಿಸಿದ ಈ ಟೆಲಿಫೋನ್ ಬೂತುಗಳ ನಂತರ, ಆ ನಗರ ಅಗಾಧ ವಾಗಿ ಬೆಳೆದಿದೆ. ಆದರೆ ಇಂದಿಗೂ ಆ ಬೀದಿಗಳಲ್ಲಿ ಆ ಕೆಂಪು ಟೆಲಿಫೋನ್ ಬೂತುಗಳನ್ನು ಅತ್ಯಂತ ಜತನದಿಂದ ಸಂರಕ್ಷಿಸಿ ಇಡಲಾಗಿದೆ. ಲಂಡನ್ ನಗರದ ಹತ್ತು ಪ್ರಮುಖ ಹೆಗ್ಗುರುತುಗಳಲ್ಲಿ (ಐಕಾನ್) ಈ ಕೆಂಪು ಟೆಲಿಫೋನ್ ಬೂತು ಸಹ ಒಂದು. ಅದಕ್ಕೆ ಶತಮಾನದ ಇತಿಹಾಸ, ಸಾಂಸ್ಕೃತಿಕ ಸಂಕೇತ ಮತ್ತು ಸ್ಮರಣೀಯ ಅನುಭವ ನೀಡುವ ಗುಣವಿರುವುದು ಸ್ಪಷ್ಟ.

ಹೀಗಾಗಿ ಟೆಲಿಫೋನ್ ಮೂಲೆ ಸೇರಿದ್ದರೂ, ಈ ಕೆಂಪು ಡಬ್ಬವನ್ನು ಮಾತ್ರ ನಗರದ ಎಲ್ಲಿಲ್ಲಿದ್ದವೋ ಅಲ್ಲ ಹಾಗೆಯೇ ಉಳಿಸಿ ಕೊಳ್ಳಲಾಗಿದೆ. ಆದರೆ ಬೂತ್ ಒಳಗಿರುವ ಫೋನಿಗೆ ಜೀವವಿಲ್ಲ. ಆದರೆ ಅದು ನಗರದ ಒಂದು ಸ್ಮಾರಕವಾಗಿ ಇಂದಿಗೂ ನಿಂತಿದೆ. ತಮಾಷೆ ಅಂದ್ರೆ, ಇಂದಿಗೂ ಚರ್ಚಿಲ್ ಪ್ರತಿಮೆ ಸನಿಹದಲ್ಲಿರುವ ಆ ಕೆಂಪು ಟೆಲಿಫೋನ್ ಬೂತ್ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳಲು ಕನಿಷ್ಠ ಇಪ್ಪತ್ತು ನಿಮಿಷ ಸರತಿ ಸಾಲಿನಲ್ಲಿ ನಿಲ್ಲಬೇಕು!

ಸುಮಾರು ಹತ್ತು ವರ್ಷಗಳ ಹಿಂದೆ ಬಂದಾಗ, ಆ ಬೂತುಗಳಲ್ಲಿ ಪುಸ್ತಕಗಳನ್ನು ಇಟ್ಟಿದ್ದರು. ಆದರೆ ಈಗ ಆ ಜಾಗದಲ್ಲಿ
ಮೊದಲಿನ -ನನ್ನೇ ಇಡಲಾಗಿದೆ. ಅಂದರೆ ಆ ಬೀದಿಯಲ್ಲಿ ಅಷ್ಟು ವರ್ಷಗಳಿಂದ ಇದ್ದ, ಈಗ ಕಾಲಗರ್ಭ ಸೇರಿದ ಟೆಲಿಫೋನನ್ನು ಬಿಸಾಕಿ, ಆ ಪಾದಚಾರಿ ರಸ್ತೆಯನ್ನು ಸಂಚಾರಕ್ಕೆ ಸುಗಮಗೊಳಿಸುವುದಕ್ಕೂ ಅವಕಾಶ ನೀಡಿಲ್ಲ. ಬಿಗ್ ಬೆನ್ ನಿಂದ ಪ್ರಧಾನಿಯವರ ಅಽಕೃತ ನಿವಾಸ ಬಳಸಿ, ಟ್ರಫಲ್ಗರ್ ಸ್ಕ್ವೇರ್ ತನಕ, ಕಳೆದ ಒಂದು ಶತಮಾನದ ಅವಧಿಯಲ್ಲಿ ಯಾವ ಬದಲಾವಣೆಯನ್ನೂ ಮಾಡಿಲ್ಲ. ಇದು ಆ ಪ್ರದೇಶಕ್ಕೆ ಮಾತ್ರ ಅಲ್ಲ, ಲಂಡನ್ ಮಧ್ಯಭಾಗದಲ್ಲಿರುವ ಯಾವ ರಸ್ತೆ, ಬೀದಿ, ಗಲ್ಲಿಗಳಿಗೆ ಹೋದರೂ ಒಂದೇ ರೀತಿ. ಥೇಮ್ಸ್ ನದಿಗುಂಟ ಹೋಗುವಾಗ, ಅಲ್ಲಲ್ಲಿ ಒಂದಷ್ಟು ಗಾಜಿನ ಹೊದಿಕೆಯಿರುವ ಬಹುಮಹಡಿ ಕಟ್ಟಡಗಳು ತಲೆಯೆತ್ತಿವೆ ಮತ್ತು ಎಲ್ಲಿ ನಿಂತರೂ ಕಾಣುವ ಲಂಡನ್ ಐ ಗೋಚರಿಸುತ್ತದೆ.

ಇವನ್ನು ಬಿಟ್ಟರೆ, ಉಹುಂ.. ಕೇಳಲೇಬೇಡಿ, ಯಾವ ಬದಲಾವಣೆಯೂ ಇಲ್ಲ. ಪತ್ತಲ ಉಟ್ಟು, ಹಣೆಗೆ ಎಂಟಾಣೆ ಗಾತ್ರದ ಕುಂಕುಮ ಇಟ್ಟು, ಮಲ್ಲಿಗೆ ಮುಡಿದ ಆದರ್ಶ ಮುತ್ತೈದೆ ಹೆಂಗಸು ಲಕ್ಷಣವಾಗಿ ನಿಂತಂತೆ ಲಂಡನ್ ನಗರಿ ಭಾಸವಾಗುತ್ತದೆ.
ಲಂಡನ್‌ನ ಬಹಳ ದೊಡ್ಡ ಅಂತಃಶಕ್ತಿಯಿರುವುದು ಕಾಲದ ಬಿರುಸಿಗೆ ಮೈಯೊಡ್ಡಿ, ಎಲ್ಲ ಒತ್ತಡಗಳನ್ನು ಸಹಿಸಿಕೊಂಡು
ಬದಲಾಗದೇ ಇರುವುದರಲ್ಲಿ. ಲಂಡನ್ ಒಂದೇ ಅಲ್ಲ, ಬ್ರಿಟನ್‌ನ ಯಾವುದೇ ನಗರ, ಪ್ರದೇಶಗಳಿಗೆ ಹೋದರೂ, ಹಠಾತ್ ಬದಲಾವಣೆಯ ಗಲಿಬಿಲಿ, ದಿಕ್ಕು ತಪ್ಪಿಸುವುದಿಲ್ಲ. ಯಾವ ಊರಿಗೆ ಬಂದಿದ್ದೇವೆ, ನಾವು ನೋಡಿದ ಊರು

ಇದೇನಾ, ಎಷ್ಟೆಲ್ಲ ಬದಲಾವಣೆಗಳಾಗಿವೆ, ಗುರುತೇ ಸಿಗುವುದಿಲ್ಲವಲ್ಲ ಎಂಬ ಗೊಂದಲ, ಬದಲಾವಣೆಯ ಆರ್ಭಟ, ಅಬ್ಬರ ಮುಖಕ್ಕೆ ಬಡಿಯುವುದಿಲ್ಲ. ಕಾಲಗಳು ಉರುಳಿದರೂ, ಹೊಸತನದ ಗಾಳಿ ಬೀಸಿದರೂ, ಆಧುನಿಕತೆಯ ಮಾರುತ ತೇಲಿ ಬಂದರೂ ಬ್ರಿಟನ್ ಮಾತ್ರ ಇಂದಿಗೂ ಅದೇ ಮುತ್ತೈದೆಯೇ! ಮನಃಸ್ಥಿತಿಯಲ್ಲಿ ಮಾತ್ರ ಆಧುನಿಕತೆಯನ್ನು ಆವಾಹಿಸಿಕೊಂಡು, ಬಾಹ್ಯಚರ್ಯೆ ಯಲ್ಲಿ ಹೊಸ ರೂಪ ಧರಿಸದೇ, ಸ್ಮಾರಕದಂತೆ ನಿಂತುಬಿಟ್ಟಿದೆ.

ಇದು ಇಡೀ ಜಗತ್ತಿಗೆ ಬ್ರಿಟನ್ ಕೊಟ್ಟ ದೊಡ್ಡ ಕಾಣ್ಕೆ. ಮೊನ್ನೆ ಸ್ನೇಹಿತರಾದ ರೋಹಿತ್ ಚಕ್ರತೀರ್ಥ ತಮ್ಮ ಫೇಸ್
ಬುಕ್‌ನಲ್ಲಿ, ಬೆಂಗಳೂರಿನ ಸೌತ್ ಎಂಡ್ ಸರ್ಕಲ್ಲಿನಿಂದ ನಂದಾ ಥಿಯೇಟರ್ ಮಾರ್ಗವಾಗಿ ರಾಜಲಕ್ಷ್ಮಿ ಕಲ್ಯಾಣ
ಮಂಟಪಕ್ಕೆ ಹೋಗುವ ಮಾರ್ಗದ ಫೋಟೋ ಹಾಕಿ, ‘ಕೇವಲ ಹತ್ತು ವರ್ಷಗಳ ಹಿಂದೆ ನಮ್ಮ ಜಯನಗರದ ಒಂದು
ಪ್ರಮುಖ ರಸ್ತೆ ಹೀಗಿತ್ತು… ಈಗ ಇನು ಬಂದಿದೆ ಹೇಳಿ ನೋಡೋಣ!’ ಎಂದು ಕೇಳಿದ್ದರು.

ಇಂದು ಆ ರಸ್ತೆ ಗುರುತು ಸಿಗದಂತೆ ಬದಲಾಗಿದೆ. ಇದು ಬಿಡಿ, ಐವತ್ತು ವರ್ಷಗಳ ಹಿಂದಿನ ಬೆಂಗಳೂರು ಬಿಡಿ, ಕಳೆದ ಹತ್ತು ವರ್ಷಗಳಲ್ಲಿ ವಿಧಾನ ಸೌಧದ ಮುಂದಿನ ಪ್ರದೇಶ, ರಸ್ತೆಯನ್ನು ಅವೆಷ್ಟೋ ಸಲ ಬದಲಾಯಿಸಿದ್ದೇವೆ. ಕಳೆದ ಹತ್ತು ವರ್ಷಗಳ
ಬೆಂಗಳೂರಿಗೂ, ಈಗಿನ ಬೆಂಗಳೂರಿಗೂ ಸಂಬಂಧವೇ ಇಲ್ಲ. ಕೆಂಪೇಗೌಡರೇನಾದರೂ ಈಗ ಬೆಂಗಳೂರಿಗೆ ಬಂದರೆ
ಮೂರ್ಛೆ ಹೋದಾರು! ಯಾವುದೇ ಬಡಾವಣೆಗೆ ಆರೇಳು ತಿಂಗಳ ನಂತರ ಹೋದರೆ, ಹೊಸ ಪ್ರದೇಶಕ್ಕೆ ಬಂದ
ಅನುಭವ ವಾಗುತ್ತದೆ.

ಬೆಂಗಳೂರಿನ ಹೆಗ್ಗುರುತುಗಳಾದ ಮೆಜೆಸ್ಟಿಕ್, ಗಾಂಧಿ ಬಜಾರ್, ಬುಲ್ ಟೆಂಪಲ್ ರಸ್ತೆ, ಮಶ್ವರದ ಸಂಪಿಗೆ ರಸ್ತೆ, ಬೇವಿನ ಮರದ ರಸ್ತೆಗಳೆಲ್ಲ ತಮ್ಮ ನೈಜ ಸ್ವರೂಪವನ್ನು ಎಂದೋ ಕಳೆದುಕೊಂಡು ಬಿಟ್ಟಿವೆ. ಕಳಪೆ ಕಾಮಗಾರಿ ಮತ್ತು ಅಂದವಿಲ್ಲದ ಮೇಲ್ಸೇತುವೆಗಳು ಹಸುರುಗzಯಲ್ಲಿ ಬೆರ್ಚಪ್ಪಗಳಂತೆ ಗೋಚರಿಸುತ್ತವೆ. ನಗರ ನಿರ್ಮಾತೃಗಳಿಗೆ ಸೌಂದರ್ಯ ಪ್ರಜ್ಞೆಯೇ ಇಲ್ಲ. ಬೆಂಗಳೂರಿನಲ್ಲಿ ನೂರಿನ್ನೂರು ಜನ ನಿಂತು ಬೀದಿ ನಾಟಕವನ್ನೋ, ಹಗ್ಗದ ಮೇಲೆ ನಡೆಯುವ ಹುಡುಗಿಯ ಪ್ರದರ್ಶನವನ್ನೋ, ಬೀದಿ ನೃತ್ಯಪಟುಗಳ ಕಲೆಯನ್ನೋ ನೋಡಬೇಕೆಂದರೆ, ಅದಕ್ಕೆ ಸೂಕ್ತ ಮತ್ತು ಪ್ರಶಸ್ತ ಸ್ಥಳವೇ ಇಲ್ಲ. ಒಂದು ಅಂದವಾದ ನಗರ ಬಯಸುವ ಅಷ್ಟು ಉಸಿರಾಡುವ ಸ್ಥಳವನ್ನೂ ಬಿಟ್ಟಿಲ್ಲ.

ಬೆಂಗಳೂರಿನ ಯಾವ ಬಡವಾಣೆಯೂ ಮೊದಲಿನ ಅಂದ, ಚೆಂದ, ಗುರುತುಗಳನ್ನು ಇಟ್ಟುಕೊಂಡಿಲ್ಲ. ಈ ಮಾತು ಎಲ್ಲ
ಊರುಗಳಿಗೂ, ಹಳ್ಳಿಗಳಿಗೂ ಅನ್ವಯ. ಯಾವುದೇ ರಾಷ್ಟ್ರೀಯ ಹೆzರಿಯಲ್ಲಿ ಚಲಿಸುವಾಗ, ಪಕ್ಕದಲ್ಲಿ ನಮ್ಮ ಊರು ಇತ್ತು ಎಂಬುದೂ ಗೊತ್ತಾಗದಷ್ಟು ಚಹರೆ ಬದಲಾಗಿಬಿಟ್ಟಿದೆ. ಎಷ್ಟೋ ಊರುಗಳನ್ನು ಹೆದ್ದಾರಿಗಳು ನುಂಗಿಬಿಟ್ಟಿವೆ. ಇಷ್ಟೇ, ನಮಗೆ ನಮ್ಮ ತಂದೆ-ತಾಯಿಯನ್ನು ಗುರುತು ಹಿಡಿಯಲಾಗದ ಪರಿಸ್ಥಿತಿ ಬರಬಾರದು!