ಪುಣ್ಯ ಪರ್ವ
ಆಮಿರ್ ಅಶ್ ಅರೀ
ಪವಿತ್ರ ಶವ್ವಾಲ್ ತಿಂಗಳ ಮೊದಲನೆಯ ದಿನ ‘ಈದುಲ್ ಫಿತ್ರ್’ ಹಬ್ಬದ ಆಚರಣೆ ಮತ್ತು ನಮಾಜ್ ನಿರ್ವಹಿಸಲು ಪವಿತ್ರ ಮಸೀದಿ ಯತ್ತ ಪ್ರವಾದಿ ಪೈಗಂಬರರು ನಡೆದುಕೊಂಡು ಹೋಗಬೇಕಾದರೆ, ದಾರಿಯಲ್ಲಿದ್ದ ಮೈದಾನದಲ್ಲಿ ಬೃಹತ್ ಸಂಖ್ಯೆಯ ಮಕ್ಕಳು ತಂಡೋಪ ತಂಡವಾಗಿ ಆಟವಾಡುತ್ತಿರುವುದನ್ನು ಗಮನಿಸಿದರು.
ನಲಿಯುತ್ತಾ, ಕುಣಿಯುತ್ತಾ ಆಟವಾಡುವ ಮಕ್ಕಳು ಒಂದು ಕಡೆಯಾದರೆ, ಮೈದಾನದ ಮತ್ತೊಂದು ಬದಿಯಲ್ಲಿ ಪುಟ್ಟ ಬಾಲಕ ನೊಬ್ಬ ಚಿಂತಿತನಾಗಿ ಕುಳಿತುಕೊಂಡಿರುವುದು ಅವರ ಗಮನ ಸೆಳೆಯಿತು. ಸದಾಕಾಲ ಮಕ್ಕಳೊಂದಿಗೆ ಒಡನಾಡುವ ಪ್ರವಾದಿ ಗಳಿಗೆ ಆ ಬಾಲಕನ ನಡೆಯು ಅಚ್ಚರಿಯುಂಟುಮಾಡಿತು. ಅಷ್ಟೆಲ್ಲಾ ಮಕ್ಕಳು ಆಟವಾಡುತ್ತಿರುವಾಗ ಅವರಿಂದ ಅಂತರ
ಕಾಯ್ದುಕೊಂಡು ಏಕಾಂಗಿಯಾಗಿದ್ದ ಆತನ ಬಳಿಗೆ ಪೈಗಂಬರರು ನೇರವಾಗಿ ಸಾಗಿದರು.
ಆ ಕ್ಷಣ ಬಿಕ್ಕಿಬಿಕ್ಕಿ ಅಳುತ್ತಿದ್ದ ಆ ಮಗುವನ್ನು ಕಂಡು ಪೈಗಂಬರರಿಗೂ ದುಃಖವಾಯಿತು. ಆತನ ಕಣ್ಣೀರಿಗೆ ಕಾರಣವನ್ನು ಅವರು ವಿಚಾರಿಸಿದಾಗ ಆ ಪುಟ್ಟ ಹುಡುಗ, ‘ಪ್ರವಾದಿಗಳೇ, ಈ ದಾರಿಯಲ್ಲಿ ಅದೆಷ್ಟು ಜನರು ಈದ್ ಆಚರಿಸಲು ಮಸೀದಿಯತ್ತ ತೆರಳು ತ್ತಿದ್ದಾರೆ. ಅವರ ಪೈಕಿ ನನ್ನದೇ ಪ್ರಾಯದ ಅದೆಷ್ಟೋ ಬಾಲಕರಿದ್ದಾರೆ. ಅವರೆಲ್ಲರೂ ಹೊಸ ಹೊಸ ಬಟ್ಟೆಗಳನ್ನು ತೊಟ್ಟಿದ್ದಾರೆ. ಸುಗಂಧ ದ್ರವ್ಯವನ್ನು ಪೂಸಿಕೊಂಡಿದ್ದಾರೆ. ಅವರ ಮುಖದಲ್ಲಿ ನಗುವಿದೆ, ಸಂತೋಷ ಮುಗಿಲು ಮುಟ್ಟಿದೆ.
ಎಲ್ಲಕ್ಕಿಂತಲೂ ಮಿಗಿಲಾಗಿ, ಸೃಷ್ಟಿಕರ್ತನ ಮೇಲಿನ ಅಪಾರವಾದ ಕೃತಜ್ಞತೆಯ ಭಾವನೆಯು ಅವರಲ್ಲಿ ತುಂಬಿದೆ. ಆದರೆ ನಿಮ್ಮನ್ನು ಹೊರತುಪಡಿಸಿದ ಮತ್ತಾರೂ ನನ್ನ ನೋವಿನ ಬಗ್ಗೆ ಕೇಳಲಿಲ್ಲ. ಯಾ ರಸೂಲುಲ್ಲಾಹ್, ನೀವು ಅದೆಂಥಾ ಕರುಣಾ ಮಯಿ’ ಎಂದು ನುಡಿದ. ಆ ಮಾತಿಗೆ ಪ್ರವಾದಿ ಮುಗುಳ್ನಕ್ಕರು. ಮಾತು ಮುಂದುವರಿಸಿದ ಆ ಬಾಲಕ, ‘ಇಂದು ಇಡೀ ಜಗತ್ತಿನ ಮುಸಲ್ಮಾನರು ಈದ್ ಹಬ್ಬದ ಸಂಭ್ರಮದಲ್ಲಿದ್ದಾರೆ. ನಾನು ನೋಡಿದ ಹಾಗೆ, ಬಗೆಬಗೆಯ ಬಟ್ಟೆ-ಬರೆ ಧರಿಸಿ ಪ್ರಾರ್ಥನೆಗೆಂದು ಮಸೀದಿಗಳತ್ತ ಹೆಜ್ಜೆಹಾಕುತ್ತಿದ್ದಾರೆ.
ಅವರು ರುಚಿಕಟ್ಟಾದ ತರಹೇವಾರಿ ಆಹಾರಗಳನ್ನು ಭಕ್ಷಿಸಿದಂಥವರು, ಬಟ್ಟೆಗಳಿಗೆ ಸುಗಂಧ ದ್ರವ್ಯಗಳನ್ನು ಪೂಸಿಕೊಂಡವರು. ಆದರೆ, ಹೆತ್ತವರನ್ನೇ ಕಳೆದುಕೊಂಡ ಈ ಅನಾಥನಿಗೆ ಹಬ್ಬದ ಸಂತೋಷವನ್ನು ಕೊಡಲು ಯಾರಿದ್ದಾರೆ?’ ಎಂದು ಪೈಗಂಬರ ರನ್ನು ಪ್ರಶ್ನಿಸಿದ. ಅದಕ್ಕೆ ತಕ್ಷಣದ ಉತ್ತರಿಸಲಾಗದ ಪೈಗಂಬರರು ಆ ಬಾಲಕನ ಕೈಹಿಡಿದು ನೇರವಾಗಿ ಮನೆಗೆ ಕರೆದುಕೊಂಡು ಬರುತ್ತಾರೆ.
ನಂತರ ಪ್ರಿಯ ಪತ್ನಿಯನ್ನುದ್ದೇಶಿಸಿ, ‘ಈ ಪವಿತ್ರ ದಿನದಂದು, ಹೆತ್ತವರನ್ನು ಕಳೆದುಕೊಂಡು ಅನಾಥನಾಗಿ ಮೈದಾನದ ಒಂದು ಮೂಲೆಯಲ್ಲಿ ಅಳುತ್ತಿದ್ದ ಈ ಬಾಲಕ ನನಗೆ ಕಾಣಿಸಿದ. ಈತ ಯಾರ ಮಗುವಾದರೇನಂತೆ, ನೀವು ತಕ್ಷಣ ಈತನ ಮುಖದಲ್ಲಿ ನಗು ತರಿಸುವ ಕಾರ್ಯ ಮಾಡಬೇಕು’ ಎಂದು ಆದೇಶಿಸಿದರು. ಪತಿಯ ಮಾತನ್ನು ಚಾಚುತಪ್ಪದೆ ನಿರ್ವಹಿಸುವ ಆಕೆಯು, ಬಲುಬೇಗನೆ
ಮಗುವಿಗೆ ಒಳ್ಳೆಯ ರೀತಿಯಲ್ಲಿ ಸತ್ಕಾರವನ್ನು ಮಾಡಿ, ಮಸೀದಿಗೆ ತೆರಳಲು ಬೇಕಾದ ವ್ಯವಸ್ಥೆಯನ್ನು ಮಾಡಿ, ಆ ಬಾಲಕನ ಮೊಗದಲ್ಲಿ ಅಗಣಿತವಾದ ಮಂದಹಾಸವನ್ನು ತರಿಸಿ ಕೃತಾರ್ಥರಾದರು.
ಕೆಲ ಹೊತ್ತಿಗೂ ಮುನ್ನ ಅಳುತ್ತಿದ್ದ ಆ ಬಾಲಕನ ಮುಖದಲ್ಲಿ ನಗು ಅರಳಿದ್ದನ್ನು ಕಂಡ ಪ್ರವಾದಿಗಳು ಮತ್ತು ಅವರ ಪತ್ನಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಬಾಲಕನ ಜತೆಗೂಡಿ ಪ್ರವಾದಿ ಪೈಗಂಬರರು ಮಸೀದಿಯತ್ತ ಹೆಜ್ಜೆ ಹಾಕಿದರು. ಆ ಬಾಲಕ ಪೈಗಂಬರರೊಂದಿಗೆ ಮತ್ತು ತನ್ನ ಅನುಚರರೊಂದಿಗೆ ಈದ್ ಹಬ್ಬವನ್ನು ಸಂತೋಷಭರಿತನಾಗಿ ಆಚರಿಸಿದ. ಪ್ರವಾದಿ ಪೈಗಂಬ ರರು ಕಲಿಸಿರುವ ಧಾರ್ಮಿಕ ಆಚಾರ -ವಿಚಾರಗಳ ಪರಿಯಿದು. ಸಮಾಜದಲ್ಲಿನ ಯಾವುದೇ ಧರ್ಮದ ಹಬ್ಬವಾಗಲೀ, ಧಾರ್ಮಿಕ ಕಾರ್ಯಗಳಾಗಲೀ ಇನ್ನಿತರ ಮನುಷ್ಯರ ಜೀವನದಲ್ಲಿ ಒಳಿತು ಮಾಡುವ ಅವಕಾಶವಾಗಿ ಹೊಮ್ಮಬೇಕು ಹಾಗೂ ನೊಂದವರ ನೋವಿಗೆ ಅದು ಮುಲಾಮಾಗಿ ಪರಿಣಮಿಸಬೇಕು.
ಇದನ್ನು ಹೊರತುಪಡಿಸಿ, ಹಬ್ಬಗಳು ಬಂದಾಗ ಧರ್ಮದ ಹೆಸರಿನಲ್ಲಿ ಕಚ್ಚಾಡಲು ಕುಮ್ಮಕ್ಕು ನೀಡುವುದು, ಧಾರ್ಮಿಕ ಭಾವನೆ ಗಳಿಗೆ ಧಕ್ಕೆಯುಂಟುಮಾಡುವ ವಿಽ-ವಿಧಾನಗಳನ್ನು ಹೇರುವುದು ಅಥವಾ ದುಡಿದು ತಿನ್ನುವ ಬಡಕುಟುಂಬಗಳ ಅನ್ನಕ್ಕೆ ಕಲ್ಲುಹಾಕುವ ಅಮಾನುಷ ಕೃತ್ಯಗಳಿಗೆ ಪ್ರಚೋದನೆ ನೀಡುವುದು ಸಲ್ಲ. ಇಂಥ ಯಾವುದೇ ಕೃತ್ಯಗಳನ್ನು ನಿಜವಾದ ಧರ್ಮದ ಸಂದೇಶಗಳು ಪುರಸ್ಕರಿಸುವುದಿಲ್ಲ ಮತ್ತು ಯಾವ ಧರ್ಮವೂ ಇಂಥ ಅಮಾನವೀಯ ವಿಚಾರಗಳನ್ನು ಹೇಳುವುದಿಲ್ಲ ಎಂಬುದು ಸತ್ಯ.
ಈದ್ ಹಬ್ಬದ ದಿನದಂದು ಪ್ರವಾದಿ ಪೈಗಂಬರರು ಓರ್ವ ಪುಟ್ಟ ಬಾಲಕನ ಕಣ್ಣೀರು ಒರೆಸಿ, ಅವನ ಮುಖದಲ್ಲಿ ನಗು ತರಿಸಿ ದ್ದನ್ನು ಪ್ರತಿಯೊಬ್ಬ ಮುಸಲ್ಮಾನ ಬಂಧುವೂ ಮೇಲ್ಪಂಕ್ತಿಯಾಗಿಟ್ಟುಕೊಳ್ಳಬೇಕು; ಇಂಥ ಮಾನವೀಯ ಗುಣವನ್ನು ತನ್ನ ಜೀವನದಲ್ಲಿ ಅಂತರ್ಗತಗೊಳಿಸಿ ಬದುಕಬೇಕು. ಹಬ್ಬಗಳ ಹೆಸರಿನಲ್ಲಿ ಹಣವನ್ನು ಅನವಶ್ಯಕವಾಗಿ ಪೋಲುಮಾಡುವುದಕ್ಕಿಂತ,
ತಮ್ಮ ಕುಟುಂಬಕ್ಕೆ ಬೇಕಿರುವಷ್ಟನ್ನು ಮಾತ್ರ ಬಳಸಿಕೊಂಡು, ಮಿಕ್ಕಿದ್ದನ್ನು ಸುತ್ತಮುತ್ತಲಿನ ಜನರ ಸಂಕಷ್ಟದ ಪರಿಹಾರಕ್ಕೆ
ವಿನಿಯೋಗಿಸಬೇಕು.
ತನ್ಮೂಲಕ ಸಮಾಜದಲ್ಲಿ ತಾಂಡವವಾಡುತ್ತಿರುವ ಬಡತನಕ್ಕೆ ಕಡಿವಾಣ ಹಾಕಲು ಸಂಕಲ್ಪಿಸಬೇಕು. ಹೀಗೆ ಪ್ರತಿಯೊಂದು ಧರ್ಮದ ಜನರೂ ತಂತಮ್ಮ ಹಬ್ಬಗಳನ್ನು ಬಡತನದ ನಿರ್ಮೂಲನೆಗಾಗಿ ಬಳಸುವುದಾದರೆ, ಸುಂದರ ಮತ್ತು ಸಮೃದ್ಧ ಸಮಾಜ ತಾನೇತಾನಾಗಿ ರೂಪುಗೊಳ್ಳುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಅತಿಹೆಚ್ಚು ಸಂತೋಷಭರಿತನಾಗಿರುವುದು ಹಬ್ಬಗಳ ಸಂದರ್ಭ ದಲ್ಲಿ ಎಂಬುದು ಜಾಗತಿಕ ಸತ್ಯ.
ಆದ್ದರಿಂದ, ಬದುಕಿನಾದ್ಯಂತ ನಾವು ಆಚರಿಸುವ ಪ್ರತಿಯೊಂದು ಹಬ್ಬದ ಸಂದರ್ಭದಲ್ಲೂ, ನಮ್ಮ ಬಗ್ಗೆ ಮಾತ್ರವಲ್ಲದೆ ಇತರರ
ಸುಖ-ಶಾಂತಿ-ನೆಮ್ಮದಿಯ ಕುರಿತೂ ದೇವರನ್ನು ಪ್ರಾರ್ಥಿಸಬೇಕು ಹಾಗೂ ನೊಂದವರ ಸಬಲೀಕರಣಕ್ಕಾಗಿ ಅಗತ್ಯವಾಗುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು.
(ಲೇಖಕರು ಹವ್ಯಾಸಿ ಬರಹಗಾರರು)