ತುಂಟರಗಾಳಿ
ಹರಿ ಪರಾಕ್
ಸೋಷಿಯಲ್ ಮೀಡಿಯಾಗಳಲ್ಲಿ ಇತ್ತೀಚೆಗೆ ಪ್ರಚಾರ ಪ್ರಿಯರ ವರಸೆ ಹೆಚ್ಚಾಗುತ್ತಿದೆ. ಅದರಲ್ಲೂ ಸಿನಿಮಾದವರನ್ನ ಬಳಸಿ ಕೊಂಡ್ರೆ ನಮ್ಮ ಹೆಸರು ಹೆಚ್ಚು ಜನರಿಗೆ ಗೊತ್ತಾಗುತ್ತೆ ಅನ್ನೋದು ಇವರ ಪ್ಲ್ಯಾನು. ಇತ್ತೀಚೆಗೆ ಸುದೀಪ್‌ರನ್ನು ಟೀಕಿಸಿದ್ದ
ಅಹೋರಾತ್ರ ಅವರಿಂದ ಹಿಡಿದು ಹಲವರು ರಾತ್ರೋರಾತ್ರಿ ಫೇಮಸ್ ಆಗೋ ಚಟ ಬೆಳೆಸಿಕೊಳ್ಳುತ್ತಿದ್ದಾರೆ.
ಅಂಥದ್ದೇ ಸೆಲಿಶ್ ಕೆಲಸವನ್ನು ಈಗ ರವಿ ಹಂಜ್ ಅನ್ನೋ ಸೆಲ ಡಿಕ್ಲೇರ್ಡ್ ಸಾಹಿತಿಯೊಬ್ಬ ಮಾಡಿದ್ದಾನೆ. ಈತ ಬರೆದ ಒಂದು ಪುಸ್ತಕ ಇತ್ತೀಚೆಗೆ ಸದ್ದಿಲ್ಲದೆ ಬಿಡುಗಡೆ ಆಗಿದೆ. ಆದರೆ ಬಿಡುಗಡೆ ಆದ ಮೇಲೂ ಯಾವ ಸದ್ದೂ ಮಾಡುತ್ತಿಲ್ಲ ಎಂಬ ಹತಾಶೆಯಲ್ಲಿ ಈತ ಈಗ ಆಕ್ಟ್ 1978 ಎಂಬ ಸಿನಿಮಾವನ್ನು ಬಳಸಿಕೊಂಡಿದ್ದಾನೆ. ಹಾಗೆ ನೋಡಿದರೆ ಈತನಿಗೆ ಯಾವ ಸಿದ್ಧಾಂತವೂ ಇಲ್ಲ. ಮೋದಿಯಿಂದ ಹಿಡಿದು, ಮಧುಗಿರಿ ಮೋದಿವರೆಗೆ ಎಲ್ಲರನ್ನೂ ಹೀಗಳೆಯುತ್ತಾನೆ. ರೈತರನ್ನು ವಿರೋಧಿಸುತ್ತಾನೆ.
ಹೀಗೆ ಮಾಡಿದರೆ ಭಕ್ತರಾದರೂ ಬಂದು ನನಗೆ ಪ್ರಚಾರ ದಯಪಾಲಿಸುತ್ತಾರೆ ಎಂಬ ಆಸೆ ಈತನದ್ದಾಗಿತ್ತು. ಆದರೆ ಅವರ‍್ಯಾರು ಕ್ಯಾರೇ ಅನ್ನಲಿಲ್ಲ. ಇತ್ತೀಚೆಗೆ ನಡೆದಿದ್ದ ಈತನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕರೋನಾದ ಯಾವ ನಿಯಮಗಳನ್ನೂ ಪಾಲಿಸದ ಈತ ಈಗ ಆಕ್ಟ್ 1978ಚಿತ್ರ ಬಿಡುಗಡೆಯಾದ ಮೇಲೆ ಕರೋನಾ ಜಾಸ್ತಿ ಆಯ್ತು ಅಂತ ಬಾಯಿ ಬಡಿದುಕೊಳ್ಳು ತ್ತಿದ್ದಾನೆ.
ಆ ಚಿತ್ರ ತಂಡ ರೈತ ಪ್ರತಿಭಟನೆಗೆ ಬೆಂಬಲ ಸೂಚಿಸಿತು ಅನ್ನೋ ಕಾರಣಕ್ಕಾಗಿ ಅದೊಂದು ಕಳಪೆ ಚಿತ್ರ ಎಂದು ಬೊಂಬಡಾ ಬಜಾಯಿಸುತ್ತಿದ್ದಾನೆ. ಈ ಮೂಲಕ ಯಾವನಿಗೂ ಅರ್ಥವಾಗದ ಹೆಸರಿರುವ ಈತನ ಪುಸ್ತಕ ಮಾರ್ಕೆಟ್‌ನಲ್ಲಿ ಸೇಲ್ ಆಗುತ್ತದೆ ಅನ್ನೋ ಭ್ರಮೆ ಈತನದ್ದು. ಅದೇನೇ ಇರಲಿ, ಈ ರೀತಿ ತಮ್ಮ ವೈಯಕ್ತಿಕ ತೆವಲುಗಳನ್ನ ತೀರಿಸಿಕೊಳ್ಳುವ ಕಾರಣಕ್ಕೆ ಸಾವಿರಾರು ಜನ ನೋಡಿ ಮೆಚ್ಚಿದ ಚಿತ್ರವನ್ನು ಹೀಗೆ ಹೀಗಳೆದು, ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುವವರನ್ನು ನೋಡಿದಾಗ ಸೋಷಿಯಲ್ ಮೀಡಿಯಾಗಳನ್ನು ಕಂಟ್ರೋಲ್ ಮಾಡಬೇಕು ಎನ್ನುವ ಕಾನೂನಿನ ಬಗ್ಗೆ ಯೋಚನೆ ನಡೆಯುತ್ತಿರುವುದು ಸರಿಯಾಗಿಯೇ ಇದೆ ಎನಿಸುತ್ತದೆ.
ನೆಟ್ ಪಿಕ್ಸ್
ಖೇಮು ಹೊಸದಾಗಿ ಕ್ಯಾಬ್ ಡ್ರೈವರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ಮೊದಲ ದಿನ ಸಂಜೆಯವರೆಗೂ ಕಾದರೂ ಒಂದೂ ರೈಡ್ ಬುಕ್ ಆಗಿರಲೇ ಇಲ್ಲ. ಇನ್ನೇನು ಕತ್ತಲಾಯ್ತು ಮನೆಗೆ ಹೋಗೋಣ ಅಂತ ಯೋಚನೆ ಮಾಡುತ್ತಿರುವಾಗ ದಿನದ ಮೊದಲ ರೈಡ್ ಬುಕ್ ಆಯ್ತು. ಖೇಮು ಖುಷಿಯಿಂದ ಲೋಕೇಶನ್ ಕಡೆ ಹೋದ. ಅಲ್ಲಿ ಒಬ್ಬ ವಯಸ್ಸಾದ ಮುದುಕ ಬಂದು ಕ್ಯಾಬ್‌ನಲ್ಲಿ ಕೂತ. ಖೇಮು ಲೋಕೇಶನ್ ನೋಡಿದ. ತುಂಬಾ ದೂರ ಇತ್ತು.
ಸರಿ ಒಳ್ಳೆಯ ದುಡ್ಡು ಬರುತ್ತೆ ಅಂದ್ಕೊಂಡು ಕಾರು ಸ್ಟಾರ್ಟ್ ಮಾಡಿದ. ಕಾರಿನೊಳಗೆ ಕೂತಿದ್ದ ಮುದುಕ ತುಂಬಾ ಸೈಲೆಂಟ್ ಆಗಿದ್ದ. ಬಂದು ಕೂತಾಗ ಓಟಿಪಿ ಹೇಳಿದ್ದು ಬಿಟ್ಟರೆ ಮಾತೇ ಆಡಿರಲಿಲ್ಲ. ಹೋಗುವ ದಾರಿ ಬೇರೆ ತುಂಬಾ ದೂರ ಇತ್ತು. ಸುಮಾರು ಮುಕ್ಕಾಲು ಗಂಟೆ ಕಾರಿನಲ್ಲಿ ನೀರವ ಮೌನ. ಕಾರು ಓಡಿಸುತ್ತಿದ್ದ ಖೇಮುಗೆ ಮೆಲ್ಲನೆ ಮಂಪರು ಬಂದಾಗುತ್ತಿತ್ತು.
ನಿದ್ದೆಯ ಜೊಂಪು ಹತ್ತುತ್ತಿತ್ತು. ಅಷ್ಟರಲ್ಲಿ ಆ ಮುದುಕ ಇಳಿಯೋ ಜಾಗ ಬಂತು. ಇ ರಸ್ತೆ ಪಕ್ಕದ ನಿಲ್ಲಿಸೋಕೆ ಹೇಳೋಣ ಅಂತ ಅಂದುಕೊಂಡ ಹಿಂದಿನ ಸೀಟಿನಲ್ಲಿ ಕೂತಿದ್ದ ಮುದುಕ, ಏನಪ್ಪಾ ಅಂತ ಮೆಲ್ಲನೆ ಖೇಮುನ ಬೆನ್ನು ತಟ್ಟಿದ. ಖೇಮು ಇದ್ದಕ್ಕಿ ದ್ದಂತೆ ಹೆದರಿ ಬೆಚ್ಚಿಬಿದ್ದು, ಕೂತ ಜಾಗದ ಬೆವೆತು ಹೋಗಿ, ಕಾರಿನ ಕಂಟ್ರೋಲ್ ತಪ್ಪಿ, ಸ್ಟಿಯರಿಂಗ್ ಹಿಡಿಯಲಾಗದೆ ಕಾರು ಅಡ್ಡಾದಿಡ್ಡಿ ಚಲಾಯಿಸಿ ಕೊನೆಗೆ ಒಂದು ಮರಳಿನ ರಾಶಿಗೆ ಗುದ್ದಿ ಹೇಗೋ ಕಾರನ್ನು ನಿಯಂತ್ರಣಕ್ಕೆ ತಂದು, ಉಸ್ಸಪ್ಪಾ ಅಂತ ಉಸಿರು ಬಿಟ್ಟ. ಹಿಂದೆ ಕೂತಿದ್ದ ಮುದುಕ ಇನ್ನೇನು ಜೀವ ಹೋಗೇಬಿಟ್ಟಿತು ಎನ್ನುವಷ್ಟು ಗಾಬರಿಯಾಗಿದ್ದ.
ಅದೇ ಭಯದ ಯಾಕಪ್ಪಾ? ಸುಮ್ಮನೆ ಬೆನ್ನು ಮುಟ್ಟಿದ್ದಕ್ಕೇ ಅಷ್ಟೊಂದು ಗಾಬರಿಯಾಗಿಬಿಟ್ಟೆ? ಅಂತ ಮುದುಕ ಕೇಳಿದ್ದಕ್ಕೆ ಖೇಮು ಹೇಳಿದ, ಕ್ಷಮಿಸಿ ಯಜಮಾನ್ರೇ, ಇವತ್ತೇ ಕ್ಯಾಬ್ ಓಡಿಸೋ ಕೆಲಸಕ್ಕೆ ಬಂದಿದ್ದು ನಾನು, ಕಳೆದ ಮೂರು ತಿಂಗಳಿಂದ ಕರೋನಾದಿಂದ ಸತ್ತ ಹೆಣಗಳನ್ನ ಸಾಗಿಸೋ ವ್ಯಾನ್ ಡ್ರೈವರ್ ಆಗಿದ್ದೆ.
ಲೂಸ್ ಟಾಕ್
(ಕಾಲ್ಪನಿಕ ಸಂದರ್ಶನ) ಕುಮಾರಸ್ವಾಮಿ
ಏನ್ ಸಾರ್, ಇತ್ತೀಚೆಗೆ ಬಿಜೆಪಿಗೆ ಭಾರೀ ಸಪೋರ್ಟ್ ಮಾಡ್ತಾ ಇದ್ದೀರ, ಮೊನ್ನೆ ಅಮಿತ್ ಶಾ ಕಾಲ್ ಮಾಡಿದ್ರಂತೆ?
ಹೌದು ಮಾಡಿದ್ರು, ಯಡಿಯೂರಪ್ಪನ್ನ ಕೆಳಗಿಳಿಸ್ತೀವಿ. ಆಮೇಲೆ ಅವ್ರ ಕಡೆ ಶಾಸಕರೇನಾದ್ರೂ ಕಿರಿಕ್ ಮಾಡಿ ನಮ್ಮ ಸರಕಾರಕ್ಕೆ ಆಕ್ಸಿಜನ್ ಕೊರತೆ ಆದ್ರೆ ನಿಮ್ಮ ಸಹಕಾರ ಇರ್ಲಿ ಅಂದ್ರು.
ಅಮಿತ್ ಶಾ ಕರ್ನಾಟಕ ಕಂಟ್ರೋಲ್ ಮಾಡ್ತಾರೆ, ಆದ್ರೆ ಅವ್ರ ಕೈಲಿ ಕರೋನಾ ಕಂಟ್ರೋಲ್ ಮಾಡೋಕಾಗ್ತಾ ಇಲ್ವಲ್ಲ?
ಅಯ್ಯೋ, ಅವರೇನ್ ಡಾಕ್ಟರ್ ಏನ್ರೀ.. ಆಪರೇಷನ್ ಕಮಲ ಮಾಡಿದ್ ತಕ್ಷಣ ನೀವು ಅವರನ್ನ ಡಾಕ್ಟರ್ ಅಂತ ತಿಳ್ಕೊಂಡ್ರೆ ಹೆಂಗೆ?
ಸರಿ, ಕೇಂದ್ರ ಸರಕಾರ ರಾಮಮಂದಿರ ನಿರ್ಮಾಣ ಮಾಡ್ತಿರೋದರ ಬಗ್ಗೆ ನಿಮ್ಮ ಅನಿಸಿಕೆ
ಮಾಡ್ಲಿ ಬಿಡಿ. ಸರಕಾರಿ ಕೆಲಸ ದೇವರ ಕೆಲಸ ಅನ್ನೋ ಹಾಗೆ ದೇವರ ಕೆಲಸನೂ ಸರಕಾರಿ ಕೆಲಸನೇ.
ಸರಿ, ರಾಮಮಂದಿರ ನಿರ್ಮಾಣಕ್ಕೆ ನೀವು ಯಾವ ಥರ ಸಹಕಾರ ಕೊಡ್ತೀರಾ?
ಅವರಿಗೆ ಸರಕಾರ ರಚನೆ ಟೈಮಲ್ಲಿ ಮಾತ್ರ ನಮ್ಮ ನೆನಪಾಗೋದು. ಮಂದಿರ ರಚನೆ ಟೈಮಲ್ಲಿ ಅಲ್ಲ. ದೇವೇಗೌಡ್ರತ್ರ ಶಂಕುಸ್ಥಾಪನೆ ಮಾಡಿಸಬೇಕಿತ್ತು ಅನ್ನೋದು ನಮ್ಮ ಆಸೆ ಆಗಿತ್ತು.
ಮಣ್ಣಿನ ಮಕ್ಕಳ ಕೈಲಿ ಕಲ್ಲು ಹಾಕೋ ಕೆಲಸ, ಅಂದ್ರೆ ಶಂಕುಸ್ಥಾಪನೆ ಮಾಡಿಸಬಾರ್ದು ಅಂತ ಮಾಡ್ಸಿಲ್ಲ ಅನ್ಸುತ್ತೆ ಬಿಡಿ. ನಿಮ್ಮ ಇಮೇಜ್ ಹಾಳಾಗಬಾರದಲ್ವಾ?
ಹೌದು. ಹೌದು..ಕೆಟ್ಟ ಹೆಸರು ಬರೋದು ತಪ್ಪಿತು ಬಿಡಿ. ಯಾಕಂದ್ರೆ, ಶಿಲಾಯುಗದ ಕಾಲದಿಂದಲೂ ನಮ್ಮದು ಮಣ್ಣಿನ ಮಕ್ಕಳ ವಂಶ.
ಲೈನ್ ಮ್ಯಾನ್
ವಾಟ್ಸಾಪ್‌ನಲ್ಲಿ ಒಂದ್ ಟಿಕ್ ಬಂದ್ರೆ ಹಂಗೆ, ಎರಡು, ಮೂರು ಟಿಕ್ ಬಂದ್ರೆ ಹಿಂಗೆ ಅಂತ ಬರ್ತಾ ಇರೋ ಫೇಕ್ ಮೆಸೇಜ್ ಹಿಂದಿರೋದು
ಸೋಷಿಯಲ್ ಮೀಡಿಯಾ ಪೊಲಿಟಿಕ್ಸ್
ಲೇಟೆಸ್ಟ್ ಟ್ರೆಂಡ್
ಕೆಲವರು ‘ಐ ಸ್ಟಾಂಡ್ ವಿತ್’ ಅನ್ನೋಕೆ ತುದಿಗಾಲ ನಿಂತಿರ್ತಾರೆ
ಈ ಸಮಯದಲ್ಲಿ ‘ಐ ಸ್ಟ್ಯಾಂಡ್ ವಿತ್’ ಅಂತ ಪೋಸ್ಟ್ ಹಾಕಿದ್ರೆ, ಅವರನ್ನ ಅರೆಸ್ಟ್ ಮಾಡ್ತಾರೆ
ಸೋಷಿಯಲ್ ಡಿಸ್ಟೆನ್ಸಿಂಗ್ ಮೈನ್ಟೆ ನ್ ಮಾಡಿಲ್ಲ ಅಂತ ಮಾತೆತ್ತಿದರೆ, ‘ಐ ಸ್ಟ್ಯಾಂಡ್ ವಿತ್’ ಅನ್ನೋರದ್ದು ಸ್ಟ್ಯಾಂಡ್ ಅಪ್ ಕಾಮಿಡಿ
‘ಐ ಸ್ಟ್ಯಾಂಡ್ ವಿತ್’ ಅನ್ನೋದು ಎಲ್ಲ ಟೈಮಲ್ಲೂ ಸಪೋರ್ಟ್ ಮಾಡಿದ ಹಾಗಾಗಲ್ಲ
ಯಾಕಂದ್ರೆ, ಯಾರಾದ್ರೂ ಎಲೆಕ್ಷನ್ನಿಗೆ ನಿಂತಾಗ ಐ ಸ್ಟಾಂಡ್ ವಿತ್ ಅಂದ್ರೆ ನಾನು ಅವರ ವಿರುದ್ಧ ಸ್ಪರ್ಧೆ ಮಾಡ್ತಾ ಇದ್ದೀನಿ ಅಂತ ಅರ್ಥ.
ಮತದಾರರು ರಾಜಕಾರಣಿಗಳನ್ನ ಹೇಗೆ ಹೆದರಿಸಬಹುದು?
ನೀನ್ ಹಿಂಗೇ ಆಡ್ತಾ ಇದ್ರೆ, ನನ್ ಕೈ ಮಾತಾಡಲ್ಲ, ನನ್ ಬೆರಳು ಮಾತಾಡುತ್ತೆ ಅಷ್ಟೇ.
ರಾಜ್ಯದಲ್ಲಿ ಆಗ್ತಾ ಇರೋ ಎ ಅವಘಡಗಳಿಗೂ ಮುಖ್ಯಮಂತ್ರಿಯೇ ಕಾರಣ
ಯಾಕಂದ್ರೆ ಇದು ರಾಜ – ಕಾರಣ
ಸಮಯಕ್ಕೆ ತಕ್ಕಂತೆ ಕಾಂಗ್ರೆಸ್ ಬಿಜೆಪಿ ಇಬ್ಬರ ಕಡೆಗೂ ಪ್ರೀತಿ ತೋರಿಸೋ ಕುಮಾರಸ್ವಾಮಿ ಅವರಿಗೊಂದು ಬಿರುದು
ಕಮಲಾ – ಕರ
ಕಾಂಗ್ರೆಸಿಗರು ಇಷ್ಟ ಪಟ್ಟ ಬಿಜೆಪಿಯವರು ಮಾಡಿದ ಕೆಲಸ
ಕರ ಸೇವೆ
ರಾಜಕಾರಣಿಗಳನ್ನ ಯಾರಾದ್ರೂ ಹೊಟ್ಟೆಗೇನ್ ತಿಂತೀರಾ ಅಂತ ಕೇಳಿದ್ರೆ ಅವರ ಉತ್ತರ
ಏನಿರುತ್ತೆ?
ಓಟ್ಸ್