S Suresh Vathsa Column: ಪಾಠ ಕಲಿಯದಿದ್ದರೆ ಪಾಕಿಸ್ತಾನಕ್ಕೇ ನಷ್ಟ !
ನಾವು ವಸ್ತುಸ್ಥಿತಿಯನ್ನು ಅರಿಯಬೇಕಾದ್ದು ಅಗತ್ಯ. ಅದು 1998ರ ಕಾಲಘಟ್ಟ. ಕೀನ್ಯಾ ಮತ್ತು ಟಾಂಜಾ ನಿಯಾದಲ್ಲಿನ ಅಮೆರಿಕ ರಾಯಭಾರ ಕಚೇರಿಗಳ ಮೇಲೆ ಬಾಂಬ್ ದಾಳಿಯಾಯಿತು. ನಂತರ 2001ರ ಸೆಪ್ಟೆಂಬರ್ 11ರಂದು ಅಮೆರಿಕದ ‘ವರ್ಲ್ಡ್ ಟ್ರೇಡ್ಸೆಂ ಟರ್’ ಮೇಲೆ ಉಗ್ರರ ದಾಳಿಯಾಯಿತು. ಈ ದಾಳಿಗಳ ಹಿಂದಿದ್ದ ಸಂಚುಕೋರ ಒಸಾಮಾ ಬಿನ್ ಲಾಡೆನ್. ‘ಅಲ್ -ಖೈದಾ’ ಎಂಬ ಉಗ್ರ ಸಂಘಟನೆಯ ಸಂಸ್ಥಾಪಕನಾಗಿದ್ದ ಈತ ಅಂತಾರಾಷ್ಟ್ರೀಯ ಮಟ್ಟದ ಭಯೋತ್ಪಾದಕನಾಗಿ ಗುರುತಿಸಿಕೊಂಡಿದ್ದ.


ಹಿತೋಪದೇಶ
ಎಸ್.ಸುರೇಶ್ ವತ್ಸ
ಪಾಕಿಸ್ತಾನದ ವಿರುದ್ಧದ ಕದನವಿರಾಮಕ್ಕೆ ಒಪ್ಪಿಕೊಂಡ ಕೇಂದ್ರ ಸರಕಾರದ ನಡೆಗೆ ಬಿಜೆಪಿಯ ಬೆಂಬಲಿಗರೇ ಅತೃಪ್ತಿ ತೋರ್ಪಡಿಸಿದ್ದಾರೆ. ಸೇನೆಯ ಕಾರ್ಯಕ್ಷಮತೆಗೆ ಬೆರಗಾಗಿ ಸಮರದ ಸಂತೋಷ ಮತ್ತು ಉನ್ಮಾದದಲ್ಲಿದ್ದವರು ಸದರಿ ಕದನ ವಿರಾಮಕ್ಕೆ ವ್ಯಾಪಕ ವಿರೋಧ ತೋರಿ ದ್ದಾರೆ, ಚರ್ಚೆಗಳಿಗೆ ಒಡ್ಡಿಕೊಂಡು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಈ ಘಟ್ಟದಲ್ಲಿ ನಾವು ವಸ್ತುಸ್ಥಿತಿಯನ್ನು ಅರಿಯಬೇಕಾದ್ದು ಅಗತ್ಯ. ಅದು 1998ರ ಕಾಲಘಟ್ಟ. ಕೀನ್ಯಾ ಮತ್ತು ಟಾಂಜಾನಿಯಾದಲ್ಲಿನ ಅಮೆರಿಕ ರಾಯಭಾರ ಕಚೇರಿಗಳ ಮೇಲೆ ಬಾಂಬ್ ದಾಳಿಯಾಯಿತು. ನಂತರ 2001ರ ಸೆಪ್ಟೆಂಬರ್ 11ರಂದು ಅಮೆರಿಕದ ‘ವರ್ಲ್ಡ್ ಟ್ರೇಡ್ಸೆಂ ಟರ್’ ಮೇಲೆ ಉಗ್ರರ ದಾಳಿಯಾಯಿತು. ಈ ದಾಳಿಗಳ ಹಿಂದಿದ್ದ ಸಂಚುಕೋರ ಒಸಾಮಾ ಬಿನ್ ಲಾಡೆನ್. ‘ಅಲ್ -ಖೈದಾ’ ಎಂಬ ಉಗ್ರ ಸಂಘಟನೆಯ ಸಂಸ್ಥಾಪಕನಾಗಿದ್ದ ಈತ ಅಂತಾರಾಷ್ಟ್ರೀಯ ಮಟ್ಟದ ಭಯೋತ್ಪಾದಕ ನಾಗಿ ಗುರುತಿಸಿಕೊಂಡಿದ್ದ. ಲಾಡೆನ್‌ನ ಹೆಡೆಮುರಿ ಕಟ್ಟಲು ತೀವ್ರಶೋಧ ನಡೆಸುತ್ತಿದ್ದ ಅಮೆರಿಕದ ಮಿಲಿಟರಿ ಪಡೆಯು ಕೊನೆಗೂ ಇಸ್ಲಾಮಾಬಾದ್ ಸಮೀಪ ಆತನನ್ನು ಪತ್ತೆಹಚ್ಚಿತು; ಅತ ಬಚ್ಚಿಟ್ಟುಕೊಂಡಿದ್ದ ಬಂಗಲೆಯನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಿತು.
ಗುಂಡಿನ ತೀವ್ರ ದಾಳಿಗೆ ಮುಂದಾಗಿ ಒಸಾಮಾ ಬಿನ್ ಲಾಡೆನ್ ಮಾತ್ರವಲ್ಲದೆ ಇನ್ನೂ 20 ಉಗ್ರರನ್ನು ಅದು ಸದೆಬಡಿಯಿತು. ಈ ಕಾರ್ಯಾಚರಣೆಯಿಂದಾಗಿ ಅಮೆರಿಕ ತನ್ನ ಸೇನಾಪಡೆಯ ತಾಕತ್ತನ್ನು ಪಾಕಿಸ್ತಾನಕ್ಕೆ ಅರ್ಥ ಮಾಡಿಸಿತು. ಇದು ಕೂಡ ಯುದ್ಧವಾಗಿರಲಿಲ್ಲ, ಭಯೋತ್ಪಾದಕರು ಎಸಗಿದ ಕುಕೃತ್ಯಕ್ಕೆ ಪ್ರತಿಯಾಗಿ ಕೈಗೊಂಡ ಪ್ರತೀಕಾರದ ಕ್ರಮವಷ್ಟೇ ಆಗಿತ್ತು.
ಇದನ್ನೂ ಓದಿ: Vishweshwar Bhat Column: ಅದು ದುಡಿಯುವವರ ದೇಶ
ಪಹಲ್ಗಾಮ್ ಹತ್ಯಾಕಾಂಡದ ಬಳಿಕ ಉಗ್ರರ ಸರ್ವನಾಶಕ್ಕೆ ನಿಂತ ಭಾರತದ ಗುರಿ ಸ್ಪಷ್ಟವಾಗಿತ್ತು. ಉಗ್ರರನ್ನು ಸದೆಬಡಿಯಲೆಂದೇ ತಕ್ಕ ಯೋಜನೆಯನ್ನು ಹಾಕಿಕೊಳ್ಳಲಾಯಿತು. ನಿಖರ ಗುರಿ, ಕರಾರುವಾಕ್ಕಾದ ರೂಪುರೇಷೆಯನ್ನು ಸಿದ್ಧಪಡಿಸಿಕೊಂಡು, ಪಾಕಿಸ್ತಾನದಲ್ಲಿ ಗಾಢನಿದ್ರೆಯಲ್ಲಿದ್ದ ಉಗ್ರರ 9 ಕ್ಯಾಂಪ್‌ಗಳನ್ನು ಗುರುತಿಸಿ, ಅವುಗಳಲ್ಲಿನ 21 ಕಟ್ಟಡಗಳನ್ನು ನಮ್ಮ ಸೇನಾಯೋಧರು ಕೆಡವಿದ್ದು ಸುಲಭದ ಮಾತಲ್ಲ.
ಇದು ಭಾರತದ ಸೇನೆಯ ತಾಕತ್ತಿನ ದ್ಯೋತಕ. ಈ ಕಟ್ಟಡಗಳೆಲ್ಲ ಧ್ವಂಸಗೊಂಡಿದ್ದು ಕೇವಲ 25
ನಿಮಿಷಗಳಲ್ಲಿ. ಉಗ್ರ ಮಸೂದ್‌ನ ಒಂದಿಡೀ ಪರಿವಾರವನ್ನೇ ಮುಗಿಸಿಬಿಡುವುದು ಸುಲಭದ ಮಾತಾಗಿರಲಿಲ್ಲ; ಆದರೆ ನಮ್ಮ ಯೋಧರು ಅದನ್ನು ಸಾಧಿಸಿ ತೋರಿಸಿದರು. ಆದರೆ ಪಾಕಿಸ್ತಾನವು ಇಂಥ ನಿದರ್ಶನಗಳಿಂದ ಬುದ್ಧಿ ಕಲಿಯುವಂಥ ದೇಶವೂ ಅಲ್ಲ, ಅದು ನಂಬಿಕೆಗೆ ಅರ್ಹವೂ ಅಲ್ಲ. ಈ ಕಾರ್ಯಾಚರಣೆಯ ಮೂಲಕ, ‘ಉಗ್ರವಾದಿ ಚಟುವಟಿಕೆಗಳನ್ನು ನಡೆಸುವ ರಾಷ್ಟ್ರಗಳ ಪರವಾಗಿ ಎಂದಿಗೂ ನಿಲ್ಲಬಾರದು’ ಎಂಬ ಸ್ಪಷ್ಟ ಸಂದೇಶವಂತೂ ಜಗತ್ತಿನ ಎಲ್ಲ ರಾಷ್ಟ್ರಗಳಿಗೆ ರವಾನೆ ಯಾಗಿದೆ.
ಅಸಲಿಗೆ ಪಾಕಿಸ್ತಾನದ ವಿರುದ್ಧ ಭಾರತವು ಯುದ್ಧವನ್ನು ಆರಂಭಿಸಿಯೇ ಇಲ್ಲ; ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಹೇಯಕೃತ್ಯಕ್ಕೆ ಪ್ರತೀಕಾರದ ಕ್ರಮವಾಗಿ ಭಾರತವು ಉಗ್ರರ ನೆಲೆಗಳನ್ನು ಧ್ವಂಸ ಗೊಳಿಸಿತೇ ವಿನಾ, ಯುದ್ಧವನ್ನು ಸಾರಲಿಲ್ಲ. ಆದರೆ, ಪಾಕಿಸ್ತಾನದ ಸೇನೆಯ ತಥಾಕಥಿತ ಯೋಧರು ‘ಮಿಲಿಟರಿ ದಿರಿಸು’ ಧರಿಸಿರುವ ಭಯೋತ್ಪಾದಕರೇ ಹೊರತು ಬೇರೆ ಇನ್ನೇನೂ ಅಲ್ಲ!

ತಮ್ಮ ದೇಶದ ಮಡಿಲಲ್ಲಿದ್ದ ಉಗ್ರಗಾಮಿಗಳಿಗೆ ತೊಂದರೆ ಆಯಿತು ಎಂಬ ಕಾರಣಕ್ಕೆ ಪಾಕಿಸ್ತಾನಿ ಸೈನಿಕರು (ಸ್ವತಃ ಸಮರ್ಥವಾದ ಪಡೆಯನ್ನಾಗಲೀ, ಯುದ್ಧ ಪರಿಕರಗಳನ್ನಾಗಲೀ ಹೊಂದಿಲ್ಲದಿ ದ್ದರೂ!) ಭಾರತದ ಮೇಲೆ ಎರಗಿ, ಕಾಶ್ಮೀರ ಕಣಿವೆ, ಪಂಜಾಬ್‌ನ ಹಲವು ಪ್ರಾಂತ್ಯಗಳಲ್ಲಿನ ಸಾಮಾ ನ್ಯರ ಮೇಲೆ ದಾಳಿ ನಡೆಸುವಂಥ ದುಷ್ಕೃತ್ಯಕ್ಕೆ ಕೈಹಾಕಿದ್ದು ನಾಚಿಕೆಗೇಡಿನ ಸಂಗತಿ.
ಪಾಕಿಸ್ತಾನದ ಆಳುಗ ವ್ಯವಸ್ಥೆಗೆ ತನ್ನ ಸೇನೆಯ ಮೇಲೆ ಹಿಡಿತ ಹೊಂದುವಷ್ಟು ಇಚ್ಛಾಶಕ್ತಿಯೇ ಇಲ್ಲವೆನ್ನಬೇಕು. ತನ್ನ ಸೇನೆಯು ಉಗ್ರವಾದಿ ಚಟುವಟಿಕೆಗಳಿಗೆ ಒತ್ತಾಸೆಯಾಗಿ ನಿಂತಿದ್ದರೂ ನೋಡಿ ಕೊಂಡು ಸುಮ್ಮನಿರುವ ಪಾಕಿಸ್ತಾನದ ಆಳುಗ ವ್ಯವಸ್ಥೆಯು ಛೀಮಾರಿಗೆ ಅರ್ಹ ಎನ್ನಲಡ್ಡಿಯಿಲ್ಲ. ಇಡೀ ವಿಶ್ವವೇ ಪಾಕಿಸ್ತಾನದ ಆಳುಗರನ್ನು ಅಣಕಿಸುವಂತಾಗಿದೆ!
ಪಾಕಿಸ್ತಾನದ ಮೇಲೆ ಭಾರತವು ಘನಘೋರ ಯುದ್ಧವನ್ನು ಮಾಡಿಬಿಡಬೇಕು ಎಂಬುದು ಸಾಕಷ್ಟು ಮಂದಿಯ ಆಗ್ರಹ. ಪಾಕ್-ಕೃಪಾಪೋಷಿತ ಉಗ್ರರು ಪಹಲ್ಗಾಮ್‌ನಲ್ಲಿ 26 ಮಂದಿ ಅಮಾಯಕರನ್ನು ಹತ್ಯೆ ಮಾಡಿದ್ದನ್ನು ಜೀರ್ಣಿಸಿಕೊಳ್ಳಲಾಗದ ದೇಶಪ್ರೇಮಿ ಭಾರತೀಯರಲ್ಲಿ ‘ಇದಕ್ಕೆ ಪ್ರತೀಕಾರಾರ್ಥ ವಾಗಿ ಪಾಕಿಸ್ತಾನವನ್ನು ಪುಡಿಪುಡಿ ಮಾಡಿಬಿಡಬೇಕು’ ಎಂಬ ರೋಷ, ಆಕ್ರೋಶ ಸ್ಫೋಟ ಗೊಂಡಿರುವುದೇನೋ ಖರೆ. ಆದರೆ, ಯುದ್ಧವನ್ನು ಆರಂಭಿಸುವುದು ಅಂದುಕೊಂಡಷ್ಟು ಸುಲಭ ವಲ್ಲ, ಇನ್ನುಆರಂಭವಾದ ಯುದ್ಧವು ನಿಲ್ಲುವುದು ಕೂಡ ಸುಲಭದ ಮಾತೇ ಅಲ್ಲ.
ಪಾಕಿಸ್ತಾನವನ್ನು ಕೆಲವೇ ನಿಮಿಷಗಳಲ್ಲಿ ಪುಡಿಗಟ್ಟಿಬಿಡುವ ತಾಕತ್ತು ಭಾರತೀಯ ಸೇನೆಗೆ ಇದೆ. ಆದರೆ ಭಾರತವನ್ನು ಕೆಣಕಿ ಬಂದ ಉಗ್ರರನ್ನು ಹೆಡೆಮುರಿ ಕಟ್ಟಿ ಯಮಪುರಿಗೆ ಅಟ್ಟಿದ್ದೇವೆ ಎಂಬ ಸಂದೇಶವನ್ನಷ್ಟೇ ನಮ್ಮ ಸೇನಾಪಡೆ ಜಗತ್ತಿಗೆ ರವಾನಿಸಿದೆ.
ಭಾರತದ ಈ ನಡೆಗೊಂದು ಕಾರಣವೂ ಇದೆ. ರಷ್ಯಾ ಮತ್ತು ಉಕ್ರೇನ್ ದೇಶಗಳ ನಡುವೆ ನಡೆಯು ತ್ತಿರುವ ಘರ್ಷಣೆಯು, ಎರಡನೇ ಮಹಾಯುದ್ಧದ ನಂತರದ ಘೋರಸಮರವೇ ಆಗಿದೆ ಎನ್ನಲಡ್ಡಿ ಯಿಲ್ಲ. ಆದರೆ ಇದರ ಫಲಶ್ರುತಿಗಳನ್ನೊಮ್ಮೆ ಅವಲೋಕಿಸಿ ನೋಡಿ- ಈಗ ಉಕ್ರೇನ್ ಗತಿ ಏನಾಗಿದೆ? ಯುದ್ಧ ಮಾಡಿ ರಷ್ಯಾ ಉದ್ಧಾರವಾಗಿಬಿಟ್ಟಿತಾ? ಎಲ್ಲ ಸಮಸ್ಯೆಗಳಿಗೂ ಯುದ್ಧವೇ ಪರಿಹಾರವಲ್ಲ, ಆದರೆ ‘ಆಪರೇಷನ್ ಸಿಂದೂರ’ದಂಥ ಕಾರ್ಯಾಚರಣೆಗಳಿಂದ ಸಂಬಂಧಪಟ್ಟವರಿಗೆ ಒಂದಿಷ್ಟು ಪಾಠವನ್ನು ಕಲಿಸುವುದಂತೂ ಸಾಧ್ಯ.
ಅದನ್ನೇ ಈಗ ಭಾರತ ಮಾಡಿ ತೋರಿಸಿರುವುದು. ಒಸಾಮಾ ಬಿನ್ ಲಾಡೆನ್ ಪ್ರಕರಣದಲ್ಲಿ ಅಮೆರಿಕವು ಪಾಕಿಸ್ತಾನಕ್ಕೆ ಕಲಿಸಿದ ಪಾಠವನ್ನೇ, ಭಾರತವು ಈಗ ಪಾಕಿಸ್ತಾನಕ್ಕೆ ಕಲಿಸಿದೆ. ಈ ಎರಡೂ ನಿದರ್ಶನಗಳಲ್ಲಿ, ಅಮೆರಿಕವನ್ನಾಗಲೀ ಭಾರತವನ್ನಾಗಲೀ ಪ್ರತಿದಾಳಿಯ ಮೂಲಕ ಹಣಿಯುವಷ್ಟು ಧೈರ್ಯವಾಗಲೀ, ತಾಕತ್ತಾಗಲೀ, ಸೇನಾ ಪರಿಕರಗಳ ವ್ಯವಸ್ಥೆಯಾಗಲೀ, ಆರ್ಥಿಕ ಸದೃಢತೆಯಾಗಲೀ ಪಾಕಿಸ್ತಾನಕ್ಕೆ ಇಲ್ಲವೇ ಇಲ್ಲ ಎಂಬುದು ಸ್ಪಷ್ಟಗೋಚರ ಸಂಗತಿ.
ಭಾರತವು ಯುದ್ಧವನ್ನು ಬಯಸುವ ರಾಷ್ಟ್ರವಲ್ಲ, ಆದರೆ ಭಯೋತ್ಪಾದನೆಯನ್ನು ಬೇರುಸಮೇತ ಕಿತ್ತೊಗೆಯುವ ಉದ್ದೇಶವನ್ನಂತೂ ಅದು ಕೈಬಿಡುವುದಿಲ್ಲ ಎಂಬುದು ಖರೆ. ಭೂಕಂಪ, ಚಂಡ ಮಾರುತ, ಸುನಾಮಿಯಂಥ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ, ಅದರ ಸಂತ್ರಸ್ತರನ್ನು ಕಂಡು ಅನುಕಂಪ ಮೂಡುತ್ತದೆ, ಮಾನವೀಯತೆಯ ಸೆಲೆ ಚಿಮ್ಮುತ್ತದೆ.
ಆದರೆ, ಸುಖಾಸುಮ್ಮನೆ ಕೆಣಕಿ ಬರುವ ಉಗ್ರಪಡೆಗಳ ಕೃತ್ಯಕ್ಕೆ ಯಾವ ಅನುಕಂಪ ತೋರುವ, ಮಾನವೀಯತೆಯ ಸೆಲೆಯನ್ನು ಚಿಮ್ಮಿಸುವ ಅಗತ್ಯವಿಲ್ಲ. ಒಂದು ತಲೆಮಾರನ್ನೇ ನಾಶ ಮಾಡಿ ಬಿಡುವ ಉಗ್ರವಾದ ದಿಂದಾಗಿ ಜನರ ಆರೋಗ್ಯ, ಸ್ಥಿತಿಗತಿ, ದೈನಂದಿನ ಜೀವನದ ಮೇಲೂ ಸಾಕಷ್ಟು ವ್ಯತಿರಿಕ್ತ ಪರಿಣಾಮಗಳಾಗುತ್ತವೆ.
ಉಗ್ರರ ಪೋಷಣೆಯನ್ನೇ ಉಸಿರಾಗಿಸಿಕೊಂಡಿರುವ ಪಾಕಿಸ್ತಾನಕ್ಕೆ ಇದು ಅರ್ಥವಾಗಬೇಕಷ್ಟೇ. ಒಂದೊಮ್ಮೆ ಅರ್ಥವಾಗದಿದ್ದರೆ, ಅದು ತನ್ನ ಸರ್ವನಾಶಕ್ಕೆ ತಾನೇ ಆಹ್ವಾನವನ್ನು ನೀಡುತ್ತಿದೆ ಎಂದರ್ಥ. ಏಕೆಂದರೆ, ಪಾಕಿಸ್ತಾನದ ಉಗ್ರಗಾಮಿಗಳ ಹುಟ್ಟಡಗಿಸುವ ಸಾಮರ್ಥ್ಯ ಮತ್ತು ಶೌರ್ಯ ಭಾರತಕ್ಕೆ ಇದ್ದೇ ಇದೆ.
(ಲೇಖಕರು ಹಿರಿಯ ಪತ್ರಕರ್ತರು)