Sunday, 24th November 2024

ಒಂದು ವೇಳೆ ಈಜಿಪ್ಟಿನಂಥ ಪಿರಮಿಡ್ಡುಗಳು ಭಾರತದಲ್ಲಿ ಇದ್ದಿದ್ದರೆ ?

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

vbhat@me.com

ಈಜಿಪ್ಟಿನಿಂದ ಬಂದು ಒಂದು ವಾರವಾದರೂ ಅಲ್ಲಿನ ಪಿರಮಿಡ್ಡುಗಳು ನನ್ನ ತಲೆಯಲ್ಲಿ ಹಾಗೇ ಕುಳಿತುಬಿಟ್ಟಿವೆ. ಹಾಗೇ ಅಲ್ಲಿನ ಮಮ್ಮಿ ಗಳು. ನೈಲ್ ನದಿಯಂತೂ ಮನಸ್ಸಿನೊಳಗೆ ಹರಿಯುತ್ತಲೇ ಇದೆ. ಪಿರಮಿಡ್ಡುಗಳು ನಮ್ಮ ಭೂತ, ವರ್ತಮಾನ ಮತ್ತು ಭವಿಷ್ಯದ
ಸ್ಥಾವರದಂತೆ, ಮನುಷ್ಯ ಕಲ್ಪನೆಯ ಕ್ಷಿತಿಜವನ್ನು ವಿಸ್ತರಿಸುವ ಅನಂತತೆಯನ್ನು ನೆನಪಿಸುತ್ತದೆ.

ಕೈರೋ ನಗರ ಬಡತನ, ಗಿಜಿಗಿಡುವ ಜನ, ಸೊಬಗಿಗೆ ಬೆಲೆ ನೀಡಿದ ನಗರ ಸೌಂದರ್ಯ, ವಾಹನದಟ್ಟಣೆ ಇವೆಲ್ಲವುಗಳ ನಡುವೆಯೂ ನಮ್ಮ ಮನಸ್ಸಿನಲ್ಲಿ ಪಿರಮ್ಡಿಡಿನಂತೆ ಸ್ಥಾಯಿಯಾಗಿ ಉಳಿಯುತ್ತದೆ. ಪಿರಮಿಡ್ಡುಗಳು ಪ್ರಾಚೀನ ಈಜಿಪ್ಟಿನ ಪೆರೋ ದೊರೆಗಳ ಕಲ್ಪನೆ. ಅದಕ್ಕಿಂತ ಮುಂಚೆ ಆ ಆಕೃತಿಯಲ್ಲಿ ಯಾರೂ ಅಂಥ ಕಟ್ಟಡವನ್ನು ಕಟ್ಟಿರಲಿಲ್ಲ. ಪಿರಮಿಡ್ಡುಗಳ ಒಳಗೆ ಸಾವಿರಾರು ವರ್ಷಗಳವರೆಗೆ ಶವಗಳನ್ನು ಕೆಡದಂತೆ ಇಡಬಹುದು, ಹವಾಮಾನದ ಉಷ್ಣಾಂಶ ವನ್ನು ನಿರ್ದಿಷ್ಟ ಅಂಕಿಗೆ ನಿಯಂತ್ರಿಸಬಹುದು ಎಂದು ತೋರಿಸಿ ಕೊಟ್ಟ ವರೂ ಅವರೇ. ಈ ಸಂಗತಿಗಳನ್ನು ಅವರು ಯಾವ ಪ್ರಯೋಗದ ಮೂಲಕ ಕಂಡುಕೊಂಡರು ಎಂಬುದು ಸೋಜಿಗವೇ.

ಶವಗಳನ್ನು ಕೆಡದಂತೆ ಶಾಶ್ವತವಾಗಿ ಭೂಮಿಯೊಳಗೆ ಸುರಂಗ ಮಾಡಿ, ಅದರೊಳಗೆ ಇಡಲು ನಿರ್ಧರಿಸಿದ್ದರು. ಆದರೆ ಅದು ಉಷ್ಣಾಂಶ ವನ್ನು ಒಂದೇ ಮಟ್ಟದಲ್ಲಿ ಹಿಡಿದಿಟ್ಟುಕೊಳ್ಳುವುದಿಲ್ಲ ಎಂಬುದು ಮನವರಿಕೆಯಾದ ನಂತರ, ಪಿರಮಿಡ್ಡಿನ ಪ್ರಯೋಗಕ್ಕೆ ಮುಂದಾದರು. ಪಿರಮಿಡ್ಡಿನ ಆಕೃತಿ ಬಗ್ಗೆ ಹೆಚ್ಚಿನ ಸಂಶೋಧನೆಯಾದ ಬಗ್ಗೆ ಮಾಹಿತಿ, ಕುರುಹು ಸಿಗುವುದಿಲ್ಲ. ಹಾಗಂತ ಅದೊಂದು ಆಕಸ್ಮಿಕ ರಚನೆ ಆಗಿರಲಿಕ್ಕಿಲ್ಲ. ಅದರ ಬಗ್ಗೆ ಒಂದಷ್ಟು ಸಂಶೋಧನೆಗಳಂತೂ ನಡೆದಿರಲೇಬೇಕು. ಯಾಕೆಂದರೆ ಅದಕ್ಕಿಂತ ಮುನ್ನ ಪಿರಮಿಡ್ಡಿನಂಥ ಆಕೃತಿಯ ಕಲ್ಪನೆಯೇ ಇರಲಿಲ್ಲ. ಅದನ್ನು ಅಲ್ಪ-ಸ್ವಲ್ಪ ಹೋಲುವ ಬೇರೆ ಯಾವ ಕಟ್ಟಡಗಳೂ ಇರಲಿಲ್ಲ.

ತಲೆಕೆಳಗಾದ ಪಿರಮಿಡ್ಡುಗಳು ಮಾತ್ರ ಪತ್ರಕರ್ತರ ಕಲ್ಪನೆ ಎಂದು ತಮಾಷೆಗೆ ಹೇಳುವುದುಂಟು. ಸುದ್ದಿಯನ್ನು ತಲೆಕೆಳಗಾದ ಪಿರಮಿಡ್ಡಿನ ಮಾದರಿಯಲ್ಲಿ ಬರೆಯಬೇಕು ಎಂದು ಕ್ಲಾಸ್ ರೂಮುಗಳಲ್ಲಿ, ನ್ಯೂಸ್ ರೂಮುಗಳಲ್ಲಿ ಹೇಳುತ್ತಾರೆ. ಅಂದರೆ, ಒಂದು ಘಟನೆ ನಡೆದ ರೀತಿಯಲ್ಲಿ ಬರೆಯಬಾರದು, ಘಟನೆಯ ಬಹುಮುಖ್ಯ ಅಂಶವನ್ನು ಮೊದಲು ಬರೆದು, ಕಡಿಮೆ ಪ್ರಮುಖ ಸಂಗತಿಗಳನ್ನು ಅನುಕ್ರಮ ವಾಗಿ ಬರೆಯುತ್ತ ಹೋಗುವುದು ಸುದ್ದಿ ಬರಹದ ಮಾದರಿ. ಇದು ತಲೆಕೆಳಗಾದ ಪಿರಮಿಡ್ಡ ನ್ನು ಹೋಲುವುದರಿಂದ ಆ ಹೆಸರು.

ತಲೆಕೆಳಗಾದ ಪಿರಮಿಡ್ ಮಾದರಿಯಲ್ಲಿ ಘಟನೆಯ ಎಲ್ಲ ಪ್ರಮುಖ ಅಂಶಗಳು ಮೊದಲಿನ ಒಂದೆರಡು ಪ್ಯಾರಗಳಲ್ಲಿ ಅಡಕವಾಗಿರುವು ದನ್ನು ಗಮನಿಸಬಹುದು. ಮ್ಯಾನೇಜಮೆಂಟ್ ಕ್ಲಾಸುಗಳಲ್ಲಿ ‘ಪಿರಮಿಡ್ ಮಾದರಿ’ ಮತ್ತು ‘ತಲೆಕೆಳಗಾದ ಪಿರಮಿಡ್ ಮಾದರಿ’ಯನ್ನು ಮ್ಯಾನೇಜಮೆಂಟ್ ಸ್ವರೂಪವನ್ನು ಹೇಳುವಾಗ ಪದೇ ಪದೆ ಬಳಸುವುದುಂಟು. ಅಂದರೆ ಪಿರಮಿಡ್ಡುಗಳ ಆಕೃತಿ ಮಾತ್ರ ಎಂದೆಂದಿಗೂ ಒಂದು ಅನೂಹ್ಯ ರಚನೆಯೇ.

ಪಿರಮಿಡ್ಡುಗಳನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ, ಪ್ರಾಚೀನ ಈಜಿಪ್ಟಿನ ಜನರಿಗೆ ಅದರ (ಪಿರಮಿಡ್) ಪರಿಕಲ್ಪನೆ ಎಂಬುದೇ ಇರಲಿಲ್ಲ. ಅದಕ್ಕಿಂತ ಮುಂಚೆ ಪಿರಮಿಡ್ಡು ಗಳನ್ನು ಹೋಲುವ ರಚನೆ (Structure) ಯನ್ನು ಯಾರೂ, ಎಲ್ಲೂ ನಿರ್ಮಿಸಿರಲಿಲ್ಲ. ಅಷ್ಟರ ಮಟ್ಟಿಗೆ ಇದು ಪ್ರಾಚೀನ ಈಜಿಪ್ಟಿನವರ ಕಲ್ಪನೆ ಮತ್ತು ನಿರ್ಮಾಣ. ಅದಾದ ನಂತರ, ಲಿಬಿಯಾ ಮತ್ತು ಸುಡಾನ್ ಸೇರಿದಂತೆ ಈಜಿಪ್ಟಿನ ಸುತ್ತಮುತ್ತಲ ದೇಶಗಳಲ್ಲಿ, ಪಿರಮಿಡ್ಡುಗಳನ್ನು ನಿರ್ಮಿಸಲಾಯಿತಾದರೂ, ಇಂದಿಗೂ ಪಿರಮಿಡ್ಡುಗಳೆಂದರೆ, ತಕ್ಷಣ ನಮ್ಮ ನೆನಪುಗಳು ಸವಾರಿ ಹೋಗಿ ನಿಲ್ಲುವುದು ಈಜಿಪ್ಟಿನಲ್ಲಿಯೇ.

The pyramid shape is said to hold many secrets and amazing properties. One of them is a sense of wonder ಎಂಬ ಜನಪ್ರಿಯ ಮಾತಿಗೆ ಅದರ ರಚನೆ ಮತ್ತು ಆಕೃತಿಯೇ ಕಾರಣ. ಈಜಿಪ್ಟಿನವರಲ್ಲಿ ಒಂದು ಭಾವನೆಯಿದೆ. ಅದೇನೆಂದರೆ, ಒಂದು ವೇಳೆ ಪಿರಮಿಡ್ಡುಗಳು ಭಾರತದಲ್ಲಿ ಇದ್ದಿದ್ದರೆ, ಅವುಗಳನ್ನು ಜನ ದೇವಾಲಯಗಳೆಂದೂ, ತಮ್ಮ ಸಂಸ್ಕೃತಿಯ ಕೇಂದ್ರಗಳೆಂದೂ ಪರಿಗಣಿಸುತ್ತಿದ್ದರು ಮತ್ತು ಅವುಗಳ ಒಳಗಿರುವ ಮಮ್ಮಿಗಳನ್ನು ದೇವರುಗಳೆಂದು ಪೂಜಿಸುತ್ತಿದ್ದರು ಎಂಬುದು.

ಆದರೆ ನಾವು ಪಿರಮಿಡ್ಡುಗಳ ಬಗ್ಗೆ ಅಂಥ ಉದಾತ್ತ ಭಾವನೆ ಹೊಂದಿಲ್ಲ ಎಂದು ಈಜಿಪ್ಟಿನ ಜನ ಅಂದುಕೊಂಡಿದ್ದಾರೆ. ಅಂದರೆ ಪಿರಮಿಡ್ಡು ಗಳನ್ನು ಇನ್ನಷ್ಟು ಗೌರವದಿಂದ, ಆಸ್ಥೆಯಿಂದ ನೋಡಿಕೊಳ್ಳಬೇಕಾದ ಅಗತ್ಯದ ಬಗ್ಗೆ ಅವರಲ್ಲಿ ಅತೃಪ್ತಿಯಿದ್ದಂತಿದೆ ಮತ್ತು ಈ ವಿಷಯದಲ್ಲಿ ಭಾರತದತ್ತ ಅವರು ಮುಖ ಮಾಡುತ್ತಿದ್ದಾರೆ. ಆದರೆ, ವಾಸ್ತವ ಬೇರೆಯಿದ್ದೀತು. ಪಿರಮಿಡ್ಡುಗಳನ್ನು ಕನಿಷ್ಠ ಆ ದೇಶದಲ್ಲಿ ಇಷ್ಟಾದರೂ ಉಳಿಯಲು ಬಿಟ್ಟಿದ್ದಾರೆ. ಒಂದು ವೇಳೆ ನಮ್ಮ ದೇಶದಲ್ಲಿ ಇದ್ದಿದ್ದರೆ, ಇಷ್ಟಾದರೂ ಉಳಿಯುತ್ತಿತ್ತಾ?

ಪಿರಮಿಡ್ಡು ಮತ್ತು ಬ್ಲೇಡ್

ಪಿರಮಿಡ್ಡಿನಲ್ಲಿ ಇಟ್ಟ ವಸ್ತು ಮತ್ತಷ್ಟು ಹರಿತವಾಗುವುದಾ? ಈ ಪ್ರಶ್ನೆ ಇಂದಿಗೂ ಚರ್ಚಾಸ್ಪದ. ಈ ಬಗ್ಗೆ ಹಲವಾರು ಕುತೂಹಲಕರ ಪ್ರಯೋಗವನ್ನು ಅನೇಕರು ಮಾಡಿದ್ದಾರೆ. ಸುಮಾರು ಎಪ್ಪತ್ತೈದು ವರ್ಷಗಳ ಹಿಂದೆಯೇ ಬ್ಲೇಡನ್ನು ಪಿರಮಿಡ್ಡಿನಲ್ಲಿಟ್ಟು ಪ್ರಯೋಗ ಮಾಡಿ ದ್ದರು. ಬ್ಲೇಡ್, ರೇಜರ್ ಮತ್ತು ಖಡ್ಗದಂಥ ಹರಿತವಾದ, ಚೂಪಾದ ವಸ್ತುಗಳನ್ನು ಪಿರಮಿಡ್ಡಿನಲ್ಲಿಟ್ಟಾಗ ಅದು ಮೊದಲಿಗಿಂತ ಹೆಚ್ಚು ಹರಿತ ಮತ್ತು ಚೂಪಾಗಿರುವುದು ಕಂಡು ಬಂದಿತು.

ಜೆಕೊಸ್ಲೋವಾಕಿಯಾದ ತಂತ್ರಜ್ಞನೊಬ್ಬ ಬ್ಲೇಡಿನಿಂದ ತರಕಾರಿಗಳನ್ನು ಕತ್ತರಿಸಿ, ನಂತರ ಅದನ್ನು ಪಿರಮಿಡ್ಡಿನೊಳಗೆ ಇಟ್ಟಾಗ, ಮೊದಲಿ ಗಿಂತ ಅದು ಹರಿತವಾಗಿತ್ತು. ಈ ನಿಟ್ಟಿನಲ್ಲಿ ಆತ ಇನ್ನಷ್ಟು ನಿಖರವಾಗಿ ಪ್ರಯೋಗ ಮಾಡಿದ. ಬ್ಲೇಡನ್ನು ಬೇಕಾಬಿಟ್ಟಿಯಾಗಿ ಇಡದೇ, ಹರಿತ ವಾಗಬೇಕಾದ ಬ್ಲೇಡಿನ ಮೇಲೈ ಯನ್ನು ಉತ್ತರ ದಿಕ್ಕಿಗಿಡಬೇಕು ಮತ್ತು ಬ್ಲೇಡನ್ನು ಪಿರಮಿಡ್ಡಿನ ಮೂರನೇ ಒಂದರಷ್ಟು ಎತ್ತರಕ್ಕಿಡಬೇಕು ಎಂಬ ಸಂಗತಿಯನ್ನು ಕಂಡುಕೊಂಡ.

ಆರಂಭದಲ್ಲಿ ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಚೇಷ್ಟೆ ಮಾಡುವುದಕ್ಕಾಗಿ, ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದರ ಬಹುದು ಎಂದೇ ಭಾವಿಸಿದ್ದರು. ಆದರೆ ಯಾವಾಗ ಪ್ರಯೋಗ ಮಾಡಿ ಸಾಬೀತು ಮಾಡಿದನೋ, ಜನ ಬೇರೆ ದಾರಿಯಿಲ್ಲದೇ ನಂಬಿದರು. ಇದಕ್ಕಾಗಿ ಆತ ಪೇಟೆಂಟ್‌ಗೂ ಅರ್ಜಿ ಸಲ್ಲಿಸಿದ. ಆತನಿಗೆ ಪೇಟೆಂಟ್ ಕೊಡಬಾರದು ಎಂದು ಒಂದಷ್ಟು ಒತ್ತಡವೂ ಬಂದಿತು. ಇದನ್ನು ಯಾರೂ ನಂಬಬಾರದು ಎಂದು ಬ್ಲೇಡ್ ತಯಾರಿಕಾ ಕಂಪನಿಗಳು ಪ್ರಚಾರ ಮಾಡಿದವು. ಒಂದು ವೇಳೆ ಇದು ನಿಜವಾದರೆ, ಎಲ್ಲಿ ತಮ್ಮ ವ್ಯಾಪಾರಕ್ಕೆ ಧಕ್ಕೆಯಾಗಬಹುದೋ ಎಂದು ಅವು ಹೆದರಿದ್ದವು. ಕೊನೆಗೆ ಆತನಿಗೆ ಪೇಟೆಂಟ್ ಸಿಕ್ಕಿತು. ಸೋಜಿಗದ ಸಂಗತಿಯೆಂದರೆ, ಬ್ಲೇಡಿನಂಥ ಹರಿತ ವಸ್ತುವನ್ನು ಪಿರಮಿಡ್ಡಿನೊಳಗೆ ಇಟ್ಟರೆ ಅವು ಮತ್ತಷ್ಟು ಹರಿತವಾಗುತ್ತವೆ.

ಪಾಪರಿಸ್ ಕಾಗದದಲ್ಲಿ ಅರಳಿದ್ದು

ಈಜಿಪ್ಟಿನಲ್ಲಿ ಯಾವುದೇ ನಗರಕ್ಕೆ ಹೋದರೂ, ಚಿತ್ರ ಗ್ಯಾಲರಿಗೆ ಕರೆದುಕೊಂಡು ಹೋಗುತ್ತಾರೆ. ಕೈರೋದಲ್ಲಂತೂ ಇಂಥ ನೂರಾರು ಗ್ಯಾಲರಿಗಳಿವೆ. ಅಲ್ಲಿಗೆ ಹೋಗುತ್ತಿದ್ದಂತೆ, ಪೇಂಟಿಂಗ್ ಮಾಡುವ ಕಾಗದಗಳನ್ನು ತಯಾರಿಸುವುದು ಹೇಗೆ ಎಂಬುದನ್ನು ಪ್ರಾತ್ಯಕ್ಷಿಕೆಗಳ ಮೂಲಕ ತೋರಿಸುತ್ತಾರೆ. ಹಾಗೆ ಮಾಡಲಾದ ಕಾಗದಕ್ಕೆ ಪಾಪರಿಸ್ ಎಂದು ಕರೆಯುತ್ತಾರೆ.

ಈಜಿಪ್ಟಿನ ಗೋರಿಗಳಲ್ಲಿ, ಪಿರಮಿಡ್ಡುಗಳಲ್ಲಿ, ಈ ಪಾಪರಿಸ್ ಕಾಗದದ ಮೇಲೆ ಬಿಡಿಸಿದ ಚಿತ್ರ, ಅಕ್ಷರಗಳು ಸಿಕ್ಕಿವೆ. ಇದರ ವೈಶಿಷ್ಟ್ಯ ವೆಂದರೆ, ಈ ಕಾಗದದ ಮೇಲೆ ಬಿಡಿಸಿದ ಚಿತ್ರಗಳು ಶಾಶ್ವತವಾಗಿ ಇರುವುದು. ಕಾಲ ಕಳೆದಂತೆ ಕಾಗದವೂ ಸುಕ್ಕಾಗುವುದಿಲ್ಲ ಮತ್ತು ಅದರ ಮೇಲೆ ಬಿಡಿಸಿದ ಚಿತ್ರಗಳೂ ಮಸುಕಾಗುವುದಿಲ್ಲ. ಸುಮಾರು ಐದು ಸಾವಿರ ವರ್ಷಗಳ ಹಿಂದೆ, ಬಿಡಿಸಿದ ಚಿತ್ರಗಳು ಸಿಕ್ಕಿವೆ. ಈಜಿಪ್ಟಿನ ಅಕ್ಷರಗಳ ಲಿಪಿ ಚಿತ್ರಗಳಿಂದ ಕೂಡಿರುವುದರಿಂದ, ಅವು ಲೇಖನಗಳೂ, ಚಿತ್ರಗಳೂ ಎಂದು ಗುರುತಿಸುವುದು ಕಷ್ಟ.

ಅಷ್ಟಕ್ಕೂ ಈ ಚಿತ್ರ ಅಥವಾ ಲೇಖಕ್ಕೆ ಬಳಸುವ ಕಾಗದವನ್ನು ಪಾಪರಿಸ್ ಗಿಡದ ಕಾಂಡದಿಂದ ಮಾಡುತ್ತಾರೆ. ಎಲ್ಲ ಗ್ಯಾಲರಿಗಳಲ್ಲಿ ಪ್ರವಾಸಿಗರು ಹೋಗುತ್ತಲೇ ಆ ಕಾಗದವನ್ನು ಹೇಗೆ ತಯಾರಿಸುತ್ತಾರೆ ಎಂಬುದನ್ನು ಕಣ್ಣೆದುರೇ ಮಾಡಿ ತೋರಿಸುತ್ತಾರೆ. ಕಮಲದ ಹೂವಿನ ದಂಟಿನ ಗಾತ್ರದ ಆ ಗಿಡದ ಕಾಂಡವನ್ನು ಕತ್ತರಿಸಿ, ಅದನ್ನು ನೀರಿನಲ್ಲಿ ನೆನೆಸುತ್ತಾರೆ. ನಂತರ ಅದನ್ನು ನೀಳವಾಗಿ ಸೀಳಿ, ಚಾಪೆಯನ್ನು ನೇಯ್ದಂತೆ ನೇಯ್ದು, ಭಾರವಾದ ಕಲ್ಲುಗಳ ಅಡಿಯಲ್ಲಿ ಇಡುತ್ತಾರೆ. ಒಂದು ವಾರವಾಗುತ್ತಿದ್ದಂತೆ, ಇದು ಒಂದಕ್ಕೊಂದು
ಹೊಂದಿಕೊಂಡು ತೆಳುವಾಗಿ, ಹಳದಿಮಿಶ್ರಿತ ಬಿಳಿ ಕಾಗದದಂತಾಗುತ್ತದೆ. ಈ ಕಾಗದದ ಮೇಲೆ ಏನೇ ಬರೆದರೂ, ಚಿತ್ರ ಬಿಡಿಸಿದರೂ ಅದು ಶಾಶ್ವತವಾಗಿರುತ್ತದೆ.

ಇಂದು ಈ ಪಾಪರಿಸ್ ಕಾಗದಕ್ಕೆ ಬಳಸುವ ಕಾಂಡವನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಕಾರಣ ಪಾಪರಿಸ್ ಚಿತ್ರ ಈಜಿಪ್ಟಿನ ದೊಡ್ಡ ಉದ್ಯಮ ಲಕ್ಷಣವನ್ನು ಪಡೆದಿದೆ. ಸಾಮಾನ್ಯವಾಗಿ ಈಜಿಪ್ಟಿಗೆ ಬಂದವರು ಈ ಪಾಪರಿಸ್ ಕಾಗದದ ಮೇಲೆ ಬಿಸಿಡಿದ ಪೇಂಟಿಂಗ್ ಖರೀದಿಸುತ್ತಾರೆ. ನಮ್ಮ ತಾಳೆಗರಿಗಳಿಗೆ ಹೋಲಿಸಿದರೆ, ಈ ಪ್ಯಾಪಾರಿಸ್ ತೆಳು ಮತ್ತು ಬಿಳಿ. ಬೆಳಕಿಗೆ ಹಿಡಿದರೆ ಚಾಪೆಯಂತೆ ನೇಯ್ದಿರು ವುದು ಸ್ಪಷ್ಟವಾಗಿ ಕಾಣುತ್ತದೆ. ಆ ಕಾಗದದ ಮೇಲೆ ಚಿತ್ರವನ್ನು ಬಿಡಿಸಬಹುದು ಮತ್ತು ಅಚ್ಚು ಕೂಡ ಹಾಕಿಸಬಹುದು.

ಹೀಗಾಗಿ ಪೇಂಟಿಂಗ್‌ನ ಅಚ್ಚನ್ನು ಸಹ ಒರಿಜಿನಲ್ ಎಂದು ಮಾರಾಟ ಮಾಡುತ್ತಾರೆ. ಅವೆರಡರ ನಡುವಿನ ವ್ಯತ್ಯಾಸವನ್ನು ಕಂಡು ಹಿಡಿಯುವುದು ಕಷ್ಟ. ಎರಡೂ ಒಂದೇ ರೀತಿ ಕಾಣುತ್ತವೆ. ಈಜಿಪ್ಟಿನ ಫೆರೋ ರಾಜರು, ದೇವತೆಗಳ ಚಿತ್ರಗಳು ಪಾಪರಿಸ್ ಕಾಗದದ ಮೇಲೆ ಮೂಡಿ, ಕಲಾಕೃತಿಗಳಾಗಿ ಮಾರ್ಪಟ್ಟು ದಂಡಿಯಾಗಿ ಮಾರಾಟವಾಗುತ್ತವೆ.

ಪಿರಮಿಡ್ಡುಗಳು ಇಲ್ಲದಿದ್ದರೆ…?
ಒಂದು ವೇಳೆ ಈಜಿಪ್ಟಿನಲ್ಲಿ ಪಿರಮಿಡ್ಡುಗಳು ಇಲ್ಲದಿದ್ದರೆ ಏನಾಗುತ್ತಿತ್ತು? ಈ ಪ್ರಶ್ನೆಯನ್ನು ಸ್ವತಃ ಈಜಿಪ್ಟಿನ ಜನರೇ, ಪ್ರವಾಸಿಗರ ಮುಂದಿಡುತ್ತಾರೆ. ಇದಕ್ಕೆ ಬಹುತೇಕರು ನೀಡುವ ಉತ್ತರವೆಂದರೆ, ಪಿರಮಿಡ್ಡುಗಳಿಲ್ಲದಿದ್ದರೆ ನಾನಂತೂ ಬರುತ್ತಿರಲಿಲ್ಲ. ಇದು ನಿಜ ಕೂಡ. ಪಿರಮಿಡ್ಡುಗಳು ಇಲ್ಲದಿದ್ದರೆ, ಯಾರೂ ಈಜಿಪ್ಟಿಗೆ ಬರುತ್ತಿರಲಿಲ್ಲ. ಇದು ಪ್ರವಾಸಿಗರ ವಿಷಯದಲ್ಲಂತೂ ನೂರಕ್ಕೆ ನೂರು ನಿಜ.

ಪಿರಮಿಡ್ಡುಗಳನ್ನು ನೋಡದೇ ಯಾರೂ ಹೋಗುವುದಿಲ್ಲ. ಕೈರೋ ನಗರಕ್ಕೆ ಗಿಜಾ ಪಿರಮಿಡ್ಡುಗಳಿರುವುದರಿಂದ, ನಗರದ ಹೃದಯ ಭಾಗದಿಂದ ಸುಮಾರು ಮುಕ್ಕಾಲು ಗಂಟೆ ದೂರದಲ್ಲಿರುವುದರಿಂದ, ಯಾರೂ ಅಲ್ಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳುವುದಿಲ್ಲ. ಪ್ರವಾಸಿ ಗರು ಮಾತ್ರ ಅಲ್ಲ, ಬಿಜಿನೆಸ್ ಅಥವಾ ಇನ್ನಿತರ ಉದ್ದೇಶಕ್ಕೆ ಬಂದವರೂ ಕನಿಷ್ಠ ಗಿಜಾ ಪ್ರದೇಶಕ್ಕಾದರೂ ಹೋಗಿ ಬರುತ್ತಾರೆ. ಪ್ರವಾಸಿ ಗರ ಪಾಲಿಗೆ ಪಿರಮಿಡ್ಡೇ ಪ್ರಮುಖ ಆಕರ್ಷಣೆ. ಅದರಲ್ಲೂ ಅನೇಕರು ಪಿರಮಿಡ್ಡುಗಳ ಹೊರತಾಗಿ ಈಜಿಪ್ಟಿನಲ್ಲಿ ನೋಡಲು ಏನೂ ಇಲ್ಲ ಎಂದೇ ಭಾವಿಸಿರುತ್ತಾರೆ.

ವಾಸ್ತವವೆಂದರೆ, ಅದರ ಹೊರತಾಗಿಯೂ ಅಲ್ಲಿ ನೋಡಲು ಸಾಕಷ್ಟು ಆಕರ್ಷಣೆಗಳಿವೆ. ಕೈರೋಕ್ಕೆ ಮೊದಲ ಬಾರಿಗೆ ಬಂದ ಬಾಲಿವುಡ್ ನಟಿ ಕೇಟ್ ವಿನ್ ಸ್ಲೆಟ್, ‘ಪಿರಮಿಡ್ಡುಗಳ ಹೊರತಾಗಿ ಈಜಿಪ್ಟಿನಲ್ಲಿ ನೋಡಲು ನೂರಾರು ಆಕರ್ಷಣೆಗಳಿವೆ ಎಂಬುದು ಗೊತ್ತೇ ಇರಲಿಲ್ಲ. ಕೇವಲ ಪಿರಮಿಡ್ಡುಗಳನ್ನು ನೋಡಲು ನಾನು ಬಂದಿದ್ದೆ. ಒಂದೇ ವೇಳೆ ಅದೊಂದೇ ಇದ್ದರೂ ನನಗೆ ನಿರಾಸೆಯಾಗುತ್ತಿರಲಿಲ್ಲ’ ಎಂದು ಉದ್ಗರಿಸಿದ್ದಳಂತೆ.

ಅನೇಕರು ಪಿರಮಿಡ್ಡುಗಳನ್ನು ಒಂದು ಸಲ ಮಾತ್ರ ನೋಡಿ ಬರುತ್ತಾರೆ. ಸೋಜಿಗದ ಸಂಗತಿಯೆಂದರೆ, ಪಿರಮಿಡ್ಡುಗಳನ್ನು ನೋಡಿ ಮುಗಿಯಿತು ಎಂಬುದಿಲ್ಲ. ಒಂದು ಸಲ ನೋಡಿದ ಬಳಿಕ, ಅನೇಕ ಹೊಸ ಪ್ರಶ್ನೆಗಳು ಉದ್ಭವವಾಗುತ್ತವೆ. ಈ ಕಾರಣಕ್ಕೆ ಪಿರಮಿಡ್ಡನ್ನು ಮತ್ತೆ ಮತ್ತೆ ನೋಡಬೇಕು ಎನ್ನುವ ಮಾತಿದೆ. ಮೊದಲ ಬಾರಿಗೆ ಅದನ್ನು ನಾವು ಆಶ್ಚರ್ಯ ಮತ್ತು ಬೆರಗಿನ ಭಾವದಲ್ಲಿ ನೋಡುತ್ತೇವೆ. ಆದರೆ, ವಾಸ್ತವ ದೃಷ್ಟಿಕೋನದಿಂದ ನೋಡುವುದಿಲ್ಲ. ಎರಡನೇ ಬಾರಿಗೆ ಯಾರು ಪಿರಮಿಡ್ಡನ್ನು ನೋಡುತ್ತಾರೋ ಅವರು ಅದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಹೀಗಾಗಿ ಪಿರಮಿಡ್ಡು ಮೊದಲ ನೋಟಕ್ಕೆ ಯಾರಿಗೂ ಸುಲಭಕ್ಕೆ ಒಲಿಯುವುದಿಲ್ಲ.

ಕರೋನಾಗಿಂತ ಮುಂಚೆ ಈಜಿಪ್ಟಿಗೆ ಪ್ರತಿ ವರ್ಷ ಸುಮಾರು ಒಂದೂವರೆ ಕೋಟಿ ಪ್ರವಾಸಿಗರು ಬರುತ್ತಿದ್ದರು. ವರ್ಷದಿಂದ ವರ್ಷಕ್ಕೆ ಪಿರಮಿಡ್ಡುಗಳನ್ನು ನೋಡುವವರ ಸಂಖ್ಯೆ ಅಧಿಕವಾಗುತ್ತಲೇ ಇತ್ತು. ಆದರೆ ಕರೋನಾ ಹೊಡೆತದಿಂದ ಸುಮಾರು ಎರಡೂವರೆ ವರ್ಷ ಪಿರಮಿಡ್ ಹತ್ತಿರ ಯಾರೂ ಸುಳಿಯಲಿಲ್ಲ. ನಿಜವಾದ ಅರ್ಥದಲ್ಲಿ ಅದು ಪ್ರಾಚೀನತೆಯತ್ತ ಹೊರಳಿದಂತೆ ಭಾಸವಾಗಿತ್ತು. ಈಗ ನಿಧಾನ ವಾಗಿ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಪಿರಮಿಡ್ಡುಗಳೇ ಈಜಿಪ್ಟನ್ನು ರಕ್ಷಿಸಬೇಕಾಗಿದೆ. ಪಿರಮಿಡ್ಡುಗಳ ದೆಸೆಯಿಂದ ಈಜಿಪ್ಟಿಗೆ ಬಂದವರು ಇನ್ನಿತರ ಸಂಗತಿಗಳಿಂದ ಆಕರ್ಷಿತರಾಗಿ, ಅಲ್ಲಿ ವ್ಯಾಪಾರ-ವ್ಯವಹಾರ ಮಾಡುತ್ತಿರುವುದು ವಾಸ್ತವ. ಹೀಗಾಗಿ ಪಿರಮಿಡ್ಡುಗಳು ಇಲ್ಲದಿದ್ದರೆ ಈಜಿಪ್ಟ್ ಏನಾಗುತ್ತಿತ್ತು ಎಂಬುದನ್ನು ಯಾರಾದರೂ ಊಹಿಸಬಹುದು.

ಪ್ರಾಚೀನ ಮತ್ತು ಆಧುನಿಕ
ಇಸ್ರೇಲಿನ ಯಹೂದಿಯರು ಜೆರುಸಲೆಮ್ ಅನ್ನು ಪವಿತ್ರ ಭೂಮಿ (Holy Land) ಎಂದು ಕರೆಯುತ್ತಾರೆ. ಜಗತ್ತಿನಲ್ಲಿ ತಮ್ಮ ನೆಲಕ್ಕಿಂತ ಪರಮ ಪವಿತ್ರ ಭೂಮಿ ಮತ್ತೊಂದಿಲ್ಲ ಎಂದು ಭಾವಿಸುತ್ತಾರೆ. ಅದು ಅವರ ನಂಬಿಕೆ. Holy Land ಅಂದರೆ ಜೆರುಸಲೆಮ್ ಎಂದು ತಕ್ಷಣ ಮನಸ್ಸಿನಲ್ಲಿ ಮೂಡಿಸಿಕೊಳ್ಳುವಷ್ಟು ಅವರು ಆ ಪದ ಮತ್ತು ನಗರಕ್ಕೆ ಸಂಬಂಧ ಬೆಸೆದಿದ್ದಾರೆ.

ಅದೇ ರೀತಿ ಈಜಿಪ್ಟಿನ ಜನ ಕೈರೋ ನಗರವನ್ನು ಜಗತ್ತಿನ ತಾಯಿ, ನಾಗರಿಕತೆಯ ತೊಟ್ಟಿಲು, ಸಾವಿರ ಮಿನಾರುಗಳ ನಗರ, ಸಂಸ್ಕೃತಿ ನಗರ, ಪ್ರಾಚೀನತೆಯ ಸಂಕೇತ, ಮಾನವ ನಾಗರಿಕತೆಯ ಕೈತೋಟ… ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಕೈರೋ ನಗರ ಆಧುನಿಕ ಜಗತ್ತಿನ ಹಲವು ಅಪಸವ್ಯಗಳಿಂದ ಸೊರಗುತ್ತಿದ್ದರೂ, ಆ ನಗರದ ಐತಿಹಾಸಿಕ ವೈಭವವನ್ನು ಯಾರೂ ಅಲ್ಲಗಳೆಯು ವಂತಿಲ್ಲ. ಕೈರೋ ನಗರದಲ್ಲಿ ಸಿಗುವ ಪ್ರತಿ ಕಲ್ಲು ಸಹ ಇತಿಹಾಸವನ್ನು ಹೇಳುತ್ತದೆ ಎಂಬ ಮಾತು ಉತ್ಪ್ರೇಕ್ಷೆ ಅಲ್ಲ.

ಅದು ಯಾವುದೋ ಪ್ರಾಚೀನ ದೊರೆ, -ರೋ ರಾಜ, ದೇವತೆ, ರಾಣಿಯರ ಇತಿಹಾಸದ ಹತ್ತಿರ ನಮ್ಮನ್ನು ಕರೆದುಕೊಂಡು ಹೋಗುತ್ತದೆ. ಜಗತ್ತಿನ ತಾಯಿ ಎಂದು ಕರೆಯಿಸಿಕೊಳ್ಳುವ ನಗರದಲ್ಲಿ ಇವೆಲ್ಲ ಮಜಕೂರುಗಳು ಸಹಜ. ಈ ಕಾರಣದಿಂದ ಈಜಿಪ್ಟ್ ಹಲವು ದೊರೆ, ಸಾಮ್ರಾಜ್ಯಗಳ ಆಕ್ರಮಣ, ಆಡಳಿತಕ್ಕೆ ಒಳಪಟ್ಟಿತು. ಈ ರೀತಿ ಪಲ್ಲಟಗಳಾದಾಗ, ಒಂದು ನಗರ ಹಲವು ಕಥೆಗಳನ್ನು ತನ್ನ ಒಡಲೊಳಗೆ ಸೇರಿಸಿಕೊಳ್ಳುತ್ತ ಹೋಗುತ್ತದೆ. ಹೀಗಾಗಿ ಕೈರೋ ಬಗ್ಗೆ ಕೇಳುವ ಕಥೆಗಳೆಲ್ಲ ನಮ್ಮಲ್ಲಿ ವಿಷಾದವನ್ನು ಮೂಡಿಸುತ್ತ, ಮಹೋನ್ನತಿಯ ಸಾಕ್ಷಾತ್ಕಾರವನ್ನೂ ಮಾಡಿಸುತ್ತದೆ.

ಪ್ರಾಚೀನ ಮತ್ತು ಆಧುನಿಕ ಇವೆರಡೂ ಬೆಸೆದುಕೊಂಡಿರುವ ಆಯಾಮ ಮತ್ತು ತಲ್ಲಣಗಳನ್ನೂ ಕೈರೋದಲ್ಲಿ ಗಮನಿಸಬಹುದು. ಹೀಗಾಗಿ ಈ ನಗರ ಸುಲಭವಾಗಿ ತೆಕ್ಕೆಗೆ ಸಿಗುವುದಿಲ್ಲ. ಆ ನಗರದಲ್ಲಿ ಅನೇಕ ವರ್ಷಗಳಿಂದ ವಾಸಿಸುವವರಿಗೂ, ಅದು ನಿಗೂಢವೇ. ಮನುಷ್ಯ ದೇಹಕ್ಕೆ ಅಮರತ್ವವನ್ನು ಕರುಣಿಸುವ ಈಜಿಪ್ಟಿನ ಸಂಸ್ಕೃತಿ ಮತ್ತು ನಂಬಿಕೆ, ವಾಸ್ತವ ಮತ್ತು ಭ್ರಮೆ ಯನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಿ ನೋಡಿದ ಅನುಭವವನ್ನೂ ಕಟ್ಟಿಕೊಡುತ್ತದೆ.

ಅಮರತ್ವದ ಕಲ್ಪನೆ ಭಾರತೀಯರಿಗೆ ಹೊಸದೇನೂ ಅಲ್ಲ. ಆದರೆ ಶವಗಳು ಕೆಡದಂತೆ ಸಾವಿರಾರು ವರ್ಷಗಳವರೆಗೆ ಇಡುವುದು ಮತ್ತು ಅವರಿನ್ನೂ ಬದುಕಿದ್ದಾರೆಂದು ಭಾವಿಸುವುದನ್ನು ಅರಗಿಸಿಕೊಳ್ಳುವುದು ಕಷ್ಟ. ಆದರೆ ಈಜಿಪ್ಟಿನ ಸಂಸ್ಕೃತಿ ಈ ನಂಬಿಕೆಯ ತಳಹದಿಯ ನಿರ್ಮಾಣವಾಗಿದೆ ಎಂಬುದನ್ನು ಮನ್ನಿಸಲೇಬೇಕು.