Tuesday, 10th December 2024

ನಮ್ಮ ಮನೆಯ ಬೆಳಕನ್ನು ನಾವೇ ಆರಿಸಿದರೆ ಹೇಗೆ ?

ವಿರಾಜಯಾನ 

ವಿರಾಜ್ ಕೆ.ಅಣಜಿ

virajvishwavani@gmail.com

ಬಾಲ್ಯದಲ್ಲಿಯೇ ನನ್ನ ತಾಯಿಯನ್ನು ಕಳೆದುಕೊಂಡೆ, ನನ್ನಪ್ಪ ಪ್ರತಿದಿನ ಕುಡಿದು ಬಂದು ಹೊಡಿದು, ಬಡಿದು ಮಾಡುತ್ತಿದ್ದ. ಅಪ್ಪನೇ ಹಾಗಿದ್ದ ಮೇಲೆ ನನ್ನ ಬಂಧುಗಳು ಎನಿಸಿಕೊಂಡವರೆಲ್ಲ ನನ್ನನ್ನು ಹಿಂಸೆ ಮಾಡದೇ ಬಿಡುತ್ತಿರಲಿಲ್ಲ. ಒಂದು ದಿನವೂ ಅಳದೇ ನಾನು ಮಲಗಲೇ ಇಲ್ಲ. ಸಂತೋಷ, ಸುಖ, ವಾತ್ಸಲ್ಯ ವೆಂದರೆ ಏನೆಂಬುದು ನನಗೆ ಗೊತ್ತಾಗಲೇ ಇಲ್ಲ.

ಈ ನಡುವೆ 16ನೇ ವಯಸ್ಸಿಗೇ ನನಗೆ ಮದುವೆ ಮಾಡಿದರು. ನನ್ನ ಗಂಡನಿಗೆ ಮಕ್ಕಳು ಬೇಕಿದ್ದವು. ಇಬ್ಬರು ಮಕ್ಕಳನ್ನು ಹೆತ್ತು ಕೊಟ್ಟೆ. ಅವರಿಬ್ಬರನ್ನು
ಬಿಟ್ಟರೆ ನನ್ನ ಜನ್ಮ ಸಾರ್ಥಕ ಎನಿಸಿದ ಕ್ಷಣವೇ ಇಲ್ಲ. ಗಂಡನ ಮನೆಯೂ ಕೂಡ ಹಿಂದೆ ನಾನಿದ್ದ ಮನೆಗಿಂತ ಏನೂ ಕಡಿಮೆ ಇರಲಿಲ್ಲ. ಗಂಡನ ದೃಷ್ಟಿಯಲ್ಲಿ ನಾನು
ಮನೆ ಕೆಲಸದ ವಸ್ತು, ರಾತ್ರಿ ಅವರನ್ನು ತಣಿಸುವ ದೇಹವಷ್ಟೇ ಆಗಿದ್ದೆ. ಅದನ್ನು ಹೊರತು ಪಡಿಸಿ ಯಾವುದೇ ಭಾವನಾತ್ಮಕ ಬಂಧನಗಳು ನಮ್ಮ ನಡುವೆ
ಮೂಡಿರಲೇ ಇಲ್ಲ. ನನ್ನ ದೌರ್ಭಾಗ್ಯವೋ ಏನೋ ಗೊತ್ತಿಲ್ಲ. ನಮ್ಮ ಜತೆಯೇ ಮನೆಯಲ್ಲಿದ್ದ ಇಬ್ಬರು ಮೈದುನರು ನನಗೆ ಹಿಂಸೆ ಕೊಡುತ್ತಿದ್ದರು. ನನ್ನ
ಮಕ್ಕಳಿಗಾಗಿ, ಗಂಡನ ಮತ್ತು ಕುಟುಂಬದ ಗೌರವಕ್ಕಾಗಿ ಎಲ್ಲವನ್ನೂ ನುಂಗಿ ಸುಮ್ಮನಿದ್ದೆ.

ಆದರೆ, ಇನ್ನು ನನಗೆ ತಡೆದುಕೊಳ್ಳಲು ಅಸಾಧ್ಯ ಎನಿಸುತ್ತಿದೆ. ಬದುಕಿಗೆ ವಿದಾಯ ಹೇಳಬೇಕು ಎಂದು ನಿರ್ಧರಿಸಿದ್ದೇನೆ. ನೀವು ದೇಶದ ಪ್ರಧಾನ ಮಂತ್ರಿಗಳು,
ನಮ್ಮ ದೇಶದಲ್ಲಿ ನನ್ನ ರೀತಿ ಮನೆಯಲ್ಲೇ ಕಣ್ಣೀರಾಗುತ್ತಿರುವ ಹೆಣ್ಣುಮಕ್ಕಳಿಗೆ ಈ ರೀತಿ ಹಿಂಸೆ ಆಗದಂತೆ ಏನಾದರೂ ಮಾಡಿ. ಇಷ್ಟೆಲ್ಲವನ್ನು ಬರೆದಿಟ್ಟ ಮೂವತ್ತು ವರ್ಷದ ಮೋನಾ ದ್ವಿವೇದಿ ಎಂಬ ಹೆಣ್ಣು ಮಗಳೊಬ್ಬಳು ತನ್ನ ಎದೆಗೆ ತಾನೇ ನಾಡಬಂದೂಕಿನಿಂದ ಗುಂಡು ಹೊಡೆದುಕೊಂಡಿದ್ದರು. ಗುಂಡಿನ ಶಬ್ದ ಕೇಳಿ
ಬಂದ ಅಕ್ಕಪಕ್ಕದವರ ಮನೆಯವರು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೋನಾರನ್ನು ಆಸ್ಪತ್ರೆಗೆ ಎತ್ತೊಯ್ದಿದ್ದರು. ವೈದ್ಯರು ಬ್ರಾಟ್ ಡೆಡ್ ಎಂದು ಹೇಳಿ, ಶವವನ್ನು ಪ್ಯಾಕ್ ಮಾಡಿಕೊಟ್ಟಿದ್ದಾರೆ.

ಅಂತಿಮವಾಗಿ ಮೋನಾ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ಕಳೆದ ಶುಕ್ರವಾರ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದ ಘಟನೆಯಿದು. ಸುದ್ದಿ ಓದುತ್ತ ಹೋದಂತೆ,
ಕಣ್ಣು ತುಂಬಿಕೊಂಡದ್ದು ಅರಿವಾಗಲೇ ಇಲ್ಲ. ಕೆಲವು ವಿಚಾರಗಳೇ ಹೀಗೆ, ಅವು ನಮ್ಮದಾಗಿರದಿದ್ದರೂ ಹೀಗಾಗಿ ಬಿಡುತ್ತದೆ. ಮಹಿಳೆಗೆ ಪೂಜ್ಯನೀಯ ಸ್ಥಾನ
ನೀಡಿರುವ ಭಾರತದಂಥ ದೇಶದಲ್ಲಿ ಇಂಥ ವರದಿಗಳು ಬಂದು ಹೋಗುತ್ತಲೇ ಇರುತ್ತವೆ. ದೇಶವನ್ನು ಭಾರತಾಂಬೆ ಎಂದು ಫೋಟೋ ಇಟ್ಟು ಪೂಜಿಸುವ
ನಾವೇ, ಎಷ್ಟೋ ಹೆಣ್ಣುಮಕ್ಕಳು ಫೋಟೋಗಳಲ್ಲಿಯೂ ಇರದಂತೆ ಅಳಿಸಿ ಹಾಕುತ್ತಿದ್ದೇವೆ. ಇಂತಹದ್ದೇ ಎಲ್ಲ ವಿಚಾರಗಳ ಬಗ್ಗೆ ಹಿಂದೆಯೂ ಲಕ್ಷಾಂತರ ಜನರು ಬರೆದಿದ್ದಾರೆ, ಮಾತನಾಡಿದ್ದಾರೆ, ಹೋರಾಟ ಮಾಡಿದ್ದಾರೆ, ಜಾಗೃತಿ ಮೂಡಿಸಿದ್ದಾರೆ. ಆದರೂ ಇಂಥ ಘಟನೆಗಳು ನಡೆಯುತ್ತಲೇ ಇವೆ, ಮುಂದೆಯೂ ನಡೆಯಲೂ ಬಹುದು. ಕೊನೆ ಎಂದು ಎಂಬುದನ್ನು ಸ್ಪಷ್ಟ ವಾಗಿ ಹೇಳುವುದು ತುಸು ಕಷ್ಟ ವೇ ಎನ್ನಬಹುದು.

ಇದಕ್ಕೆ ಪೂರಕವಾಗಿ, ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸರ್ವೆ ರಿಪೋರ್ಟ್‌ನತ್ತ ಕಣ್ಣಾಡಿಸುತ್ತ ಹೋದಾಗ ಮತ್ತಷ್ಟು ದಿಗಿಲಾಯಿತು. ಕಳೆದ ಒಂದೂವರೆ ವರ್ಷದಿಂದ ಜೀವರಾಶಿಗಳನ್ನು ಕಾಡುತ್ತಿರುವ ಕರೋನಾ ಎಂಬ ಪೀಡೆ, ಜಗತ್ತಿಗೆ ಬೀಗ ಹಾಕಿಸಿ ಎಲ್ಲರೂ ಮನೆಯಲ್ಲೇ ಇರುವಂತೆ ಮಾಡಿತು. ಈ ವೇಳೆ ಮನೆಯಲ್ಲಿ ಹೆಣ್ಣುಮಕ್ಕಳ ಮೇಲೆ ನಡೆದ ದೌರ್ಜನ್ಯಗಳು ಹೆಚ್ಚಾಗಿವೆಯಂತೆ. ಕಳೆದ ಹತ್ತು ವರ್ಷಗಳಲ್ಲೇ ಇಲ್ಲದಷ್ಟು ಕೌಟುಂಬಿಕ ದೌರ್ಜನ್ಯದ ದೂರಿನ ಪ್ರಕರಣ ಗಳು, ಕರೋನಾ ಮೊದಲ ಅಲೆಯ ವೇಳೆ ದಾಖಲಾಗಿವೆ.

ನಿಮಗೊಂದು ಸಂಗತಿ ಗೊತ್ತಿರಲಿ. ಭಾರತದಲ್ಲಿ ಶೇಕಡ 86ರಷ್ಟು ಹೆಣ್ಣುಮಕ್ಕಳು ತಮ್ಮ ವಿರುದ್ಧ ಆಗುತ್ತಿರುವ ದೌರ್ಜನ್ಯದ ವಿರುದ್ಧ ಸಣ್ಣ ಸಹಾಯವನ್ನೂ ಬೇಡುವುದಿಲ್ಲ. ಶೇಕಡ 77ರಷ್ಟು  ಮಹಿಳೆಯರು ತಮಗೆ ಮನೆಯಲ್ಲೇ ಆಗುತ್ತಿರುವ ಹಿಂಸೆಯ ಬಗ್ಗೆ ಇನ್ನೊಬ್ಬರ ಬಳಿ ಹೇಳಿಕೊಳ್ಳುವುದೂ ಇಲ್ಲ. ಇಷ್ಟೆಲ್ಲಾ ಇದ್ದೂ, 2020ರ ಮಾರ್ಚ್ 25ರಿಂದ ಮೇ 31ರ ವೇಳೆಯಲ್ಲಿ ದಾಖಲಾದ ಪ್ರಕರಣ ಸಂಖ್ಯೆ ಎಷ್ಟು ಗೊತ್ತೇ? ಬರೋಬ್ಬರಿ 1477! ಬರೀ 68  ದಿನದಲ್ಲಿ, ಹಿಂದಿನ ಹತ್ತು ವರ್ಷಗಳ ಪ್ರಕರಣಗಳ ದಾಖಲೆ ಪುಡಿಪುಡಿಯಾಗಿದೆ. ತಲೆ ತಗ್ಗಿಸಲೇ ಬೇಕಾದ ವಿಚಾರವಿದು.

ವರದಕ್ಷಿಣೆ ಕಿರುಕುಳ, ಮರ್ಯಾದಾ ಹತ್ಯೆಯಂಥ ಪ್ರಕರಣಗಳು ಸುದ್ದಿಯಾದಾಗ ಮಾಧ್ಯಮಗಳಲ್ಲಿ ಕೌಟುಂಬಿಕ ದೌರ್ಜನ್ಯ ಎಂಬ ಪದ ಕಣ್ಣಿಗೆ ರಾಚುತ್ತದೆ.
ಒಂದೆರಡು ದಿನ ಎಲ್ಲೆಲ್ಲೂ ಪ್ರತಿಭಟನೆ, ಚರ್ಚೆಗಳು ನಡೆಯುತ್ತವೆ. ನಂತರ ಕ್ರಮೇಣ ನಾವೇ ಅದನ್ನೆಲ್ಲ ಮರೆತು ಬಿಡುತ್ತೇವೆ. ಇದೇ ರೀತಿ ಮುಂದುವರಿದರೆ
ಕೌಟುಂಬಿಕ ವ್ಯವಸ್ಥೆಯ ಬಗೆಗಿನ ವಿಶ್ವಾಸಾರ್ಹತೆ ಯನ್ನೇ ಇಂಥ ದೌರ್ಜನ್ಯಗಳು ಅಳಿಸಿ ಹಾಕುತ್ತವೆ ಎಂಬುದನ್ನು ಮನಗಂಡ ವಿಶ್ವಸಂಸ್ಥೆ ನವೆಂಬರ್ 25
ಅನ್ನು ಅಂತಾರಾಷ್ಟ್ರೀಯ ಕೌಟುಂಬಿಕ ದೌರ್ಜನ್ಯ ತಡೆ ದಿನವನ್ನಾಗಿ ಆಚರಿಸಲು ನಿರ್ಧರಿಸಿತು.

ವಿಶ್ವದಾದ್ಯಂತ ಇರುವ ಮಹಿಳೆಯರು ಎದುರಿಸುತ್ತಿರುವ ಅತ್ಯಾಚಾರ, ಕೌಟುಂಬಿಕ ದೌರ್ಜನ್ಯ, ಮತ್ತಿತರ ಹಿಂಸೆಯ ತಡೆಯ ಅರಿವು ಮೂಡಿಸಲು ಇಂಥದ್ದೊಂದು ದಿನಾಚರಣೆ ಅಸ್ತಿತ್ವಕ್ಕೆ ಬಂತು. ಒಬ್ಬ ವ್ಯಕ್ತಿಯ ಮೇಲೆ ದೈಹಿಕ, ಮಾತಿನ ಮೂಲಕ, ಭಾವನಾತ್ಮಕವಾಗಿ, ಆರ್ಥಿಕ, ಧಾರ್ಮಿಕ, ಲೈಂಗಿಕವಾಗಿ ನಡೆವ ಹಿಂಸೆ ಯನ್ನು ಕೌಟುಂಬಿಕ ದೌರ್ಜನ್ಯ ಎಂದು ಹೇಳಲಾಗುತ್ತದೆ. ಭಾರತವೂ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕೌಟುಂಬಿಕ ದೌರ್ಜನ್ಯದಿಂದ ಅತಿ ಹೆಚ್ಚು ಪರಿತಪಿಸುತ್ತಿರುವವರಲ್ಲಿ ಮಹಿಳೆಯರೇ ಹೆಚ್ಚಿದ್ದಾರೆ. ಲಿಂಗ ಸಮಾನತೆ ಕಡಿಮೆಯಿರುವ ದೇಶಗಳಲ್ಲಿಯೇ ಕೌಟುಂಬಿಕ ದೌರ್ಜನ್ಯಗಳು ಹೆಚ್ಚಾಗಿವೆ ಎಂಬುದೂ ಕೂಡ ಎಲ್ಲರೂ ಗಮನಿಸಬೇಕಾದ ಪ್ರಮುಖ ಅಂಶ.

ದೇಶದಲ್ಲಿ ಕೌಟುಂಬಿಕ ದೌರ್ಜನ್ಯಗಳು
ಹೆಚ್ಚುತ್ತಿರುವ ಬಗ್ಗೆ ಭಾರತ ಸರಕಾರವೂ ಕೂಡ 2005ರಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆಯನ್ನು ಜಾರಿಗೆ ತಂದಿತು. ಇದರ ಮೂಲಕ ಪ್ರಮುಖವಾಗಿ ಮಹಿಳೆಯರು, ಮಕ್ಕಳಿಗಾಗಿ ಹೆಚ್ಚಿನ ಬಲ ನೀಡುವ ಪ್ರಯತ್ನವನ್ನು ಸ್ವಾತಂತ್ರ್ಯ ಬಂದ ಎಷ್ಟೋ ವರ್ಷಗಳ ನಂತರ ಮಾಡಲಾಯಿತು. ಗಂಡನ ಮನೆಯಿಂದ ಹೊರಬರದೇ, ಅಲ್ಲಿಯೇ ಉಳಿಯಲೂ ಕೂಡ ಅವಕಾಶ ನೀಡಿದ್ದು ಈ ಮಸೂದೆ ಪ್ರಮುಖಾಂಶಗಳಲ್ಲಿ ಒಂದು. ಮನೆಯಲ್ಲೇ ಇದ್ದ ಮಹಿಳೆಯ ಮೇಲೆ ಮತ್ತೊಮ್ಮೆ ದೌರ್ಜನ್ಯ ನಡೆಸದಂತೆ ಎಚ್ಚರಿಕೆ ನೀಡಬಹುದು.

ಒಂದು ವೇಳೆ ದೌರ್ಜನ್ಯಕ್ಕೊಳಗಾದ ಮಹಿಳೆಗೆ ಗಂಡನ ಆಸ್ತಿಯಲ್ಲಿ ಪಾಲಿಲ್ಲದಿದ್ದರೂ ಮನೆಯ ಒಂದು ಭಾಗವನ್ನು ಆಕೆಗೆ ನೀಡುವ ಅವಕಾಶವನ್ನೂ ನೀಡಲಾಯಿತು. ಮಹಿಳೆ ಯನ್ನು ಮನೆಯಿಂದ ಹೊರಹಾಕದಂತೆ ರಕ್ಷಣೆ ನೀಡುವ ಜತೆಗೆ ಉದ್ಯೋಗ ಸ್ಥಳದಲ್ಲೂ ತೊಂದರೆ ನೀಡದಂತೆ ರಕ್ಷಣೆ ನೀಡಲಾಯಿತು.
ದೌರ್ಜನ್ಯದಿಂದ ಮಾನಸಿಕವಾಗಿ ಮತ್ತು ಭಾವನಾತ್ಮಕ ಒತ್ತಡ ಉಂಟಾಗಿದ್ದರೆ ಪರಿಹಾರ ಕೇಳುವಂಥ ಸಾಧ್ಯತೆಗಳನ್ನೂ ನೀಡಲಾಯಿತು. ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಗೆ ದೂರವಾಣಿ ಕರೆ, ಮೌಖಿಕವಾಗಿ, ಲಿಖಿತವಾಗಿ ಅಥವಾ ಇನ್ಯಾವುದೇ ರೀತಿಯಾಗಿ ಸಂದೇಶ ಕಳಿಸುವುದನ್ನೂ ಕೂಡ ನಿಷೇಽಸಲಾಯಿತು. ಇದರ ಜತೆಗೆ ಮಹಿಳೆಯರು ಸ್ವತಂತ್ರವಾಗಿ ಜೀವಿಸಲು ಎಲ್ಲ ಅವಕಾಶಗಳನ್ನು ನೀಡಿದರೂ ಕೂಡ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ಆಗಾಗ ಕೇಳಿ ಬರುತ್ತಿರುವುದು ವಿಪರ್ಯಾಸ.

ಕಳೆದ ಎರಡು ದಶಕದಲ್ಲಿ ಭಾರತದ ಮಹಿಳೆಯರಲ್ಲಿ ಕಂಡು ಬಂದ ಮಾನಸಿಕ ಸ್ಥೈರ್ಯವೂ ಕೂಡ ಮೆಚ್ಚುವಂತದ್ದೇ. ಏಕೆಂದರೆ, 2006ರಲ್ಲಿ ರಾಷ್ಟ್ರೀಯ
ಕುಟುಂಬ ಆರೋಗ್ಯ ಇಲಾಖೆಯು ಸಮೀಕ್ಷೆಯನ್ನು ನಡೆಸಿತ್ತು. ಭಾರತದಲ್ಲಿ ಒಟ್ಟು 83703 ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗಿದ್ದರು. ಇದರಲ್ಲಿ 67426 ಹಿಂದು ಮಹಿಳೆಯರು, 11,396 ಮುಸ್ಲಿಂ ಮಹಿಳೆಯರು, 2039 ಕ್ರೈಸ್ತ ಮಹಿಳೆಯರು, 1492 ಸಿಕ್ ಮಹಿಳೆಯರಿದ್ದರು. ಅಂದರೆ ಧರ್ಮ, ಜಾತಿ, ಭಾಷೆ, ರಾಜ್ಯಗಳ ಪರಿದೆಯನ್ನೂ ಮೀರಿ ದೌರ್ಜನ್ಯಗಳು ನಡೆಯುತ್ತಿವೆ. ಇವು ಇಷ್ಟು ದೊಡ್ಡ ಸಂಖ್ಯೆಯಾಗಿ ಕಂಡರೂ ಕೂಡ, ಭಾರತದಲ್ಲಿ ನಡೆಯುವ ಕೌಟುಂಬಿಕ ಹಿಂಸೆಗಳಲ್ಲಿ ಶೇ.1ರಷ್ಟು ಮಹಿಳೆಯರು ಮಾತ್ರವೇ ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತಾರೆ ಎಂದು ಸಮೀಕ್ಷೆ ತನ್ನ ವರದಿಯಲ್ಲಿ ತಿಳಿಸಿತ್ತು.

ಉಳಿದ ಎಲ್ಲರೂ ಭಾರತದ ಸಂಪ್ರದಾಯದಂತೆ ಗಂಡನ ಮೇಲಿನ ಗೌರವ, ಕುಟುಂಬದ ಮಾನ, ಮರ್ಯಾದೆ ಎಂಬ ಅಂಶಗಳಿಗೆ ಹೆದರಿ ತಮ್ಮಲ್ಲೇ ಮೌನ ನುಂಗಿಬಿಡುತ್ತಾರೆ ಅಥವಾ ಆತ್ಮಹತ್ಯೆಯಂತಹ ಪ್ರಯತ್ನಗಳಿಗೆ ಕೈಹಾಕಿಬಿಡುತ್ತಾರೆ. ಇದು ಬರೀ ಭಾರತದ ಕತೆಯಲ್ಲ, ಆರ್ಥಿಕವಾಗಿ ಮುಂದುವರಿದ ದೇಶ ವೆಂದು ಖ್ಯಾತವಾದ ಅಮೆರಿಕದಲ್ಲಿಯೂ ಪ್ರತಿದಿನವೂ ಪುರುಷನಿಂದ ಕೌಟುಂಬಿಕ ದೌರ್ಜನ್ಯದಂತಹ ಕಾರಣದಿಂದ ಕನಿಷ್ಠ ಮೂರು ಮಹಿಳೆಯರು ಮೃತ ಪಡುತ್ತಾರೆ.

ಜಗತ್ತಿನಲ್ಲಿರುವ ಪ್ರತಿ ನಾಲ್ಕು ಮಹಿಳೆಯರಲ್ಲಿ ಒಬ್ಬ ಮಹಿಳೆ ಕೌಟುಂಬಿಕ ದೌರ್ಜನ್ಯದ ಸಂತ್ರಸ್ತೆ ಎಂಬುದು ನಿಜಕ್ಕೂ ಭಯ ಹುಟ್ಟಿಸುವ ಸಂಗತಿ. ಕೌಟುಂಬಿಕ
ದೌರ್ಜನ್ಯ ಕೇವಲ ಮಹಿಳೆಯರ ಮೇಲಷ್ಟೇ ಆಗುತ್ತಿವೆ ಎಂದು ಹೇಳಲಾಗದು. ಪುರುಷರೂ ಕೂಡ ಈ ಆಪತ್ತಿಗೆ ಒಳಗಾದವರೇ ಆಗಿದ್ದಾರೆ. ಆದರೆ, ಅವರಿಗೆ
ದೌರ್ಜನ್ಯದಿಂದ ಪಾರಾಗುವ ಅವಕಾಶಗಳು ಹೆಚ್ಚು ಎನ್ನಬಹುದಷ್ಟೇ.

ಕುಟುಂಬ ಮತ್ತು ಸಂಬಂಧಗಳು ಎಂದಿಗೂ ನಮ್ಮ ಆಂತರಿಕ ವಿಚಾರ. ಇದರಲ್ಲಿ ಕಾನೂನು ಅಥವಾ ಇನ್ನೊಬ್ಬರ ಮಧ್ಯಸ್ಥಿಕೆ ಎಂದೂ ಸಮಂಜಸವಲ್ಲ.
ನಮ್ಮವರ ಜತೆ ಹೊಂದಿಕೊಂಡು ಬಾಳುವುದೇ ಬದುಕಿನ ಗೆಲುವಿಗೆ ಮೊದಲ ಕಾರಣ. ನಮ್ಮವರನ್ನು ನಾವೇ ದೌರ್ಜನ್ಯಕ್ಕೆ ತಳ್ಳಿದರೆ, ನಮ್ಮಿಂದ ಸಮಾಜಕ್ಕೆ
ಸಿಗಬಹುದಾದ ಕೊಡುಗೆಯಾದರೂ ಏನು ಎಂಬುದನ್ನು ಯೋಚಿಸಿದರೆ ನಮ್ಮಲ್ಲಿಯೇ ಸಕಾರಾತ್ಮಕ ವಿಚಾರ ಮೂಡಬಹುದು.

ಹಿಂದೊಮ್ಮೆ ಓದಿದ ಕತೆ ನೆನಪಾಗುತ್ತಿದೆ, ಬಹುಶಃ ಸೂಕ್ತವಾಗಬಹುದು. ಅಂಜಲಿ ಮನೆಯಲ್ಲಿ ಮುದ್ದಾಗಿ ಬೆಳೆದಿದ್ದ ಹೆಣ್ಣುಮಗಳು. ಯಾವುದಕ್ಕೂ ಕಡಿಮೆ
ಇರದಂತೆ ಆಕೆಯ ತಂದೆ-ತಾಯಿ ಬೆಳೆಸಿದ್ದರು. ತನ್ನ ಇಷ್ಟದಂತೆಯೇ ತಾನು ಪ್ರೀತಿಸದ ಹುಡುಗನೊಂದಿಗೆ ಮದುವೆಯಾದಳು. ಗಂಡನದ್ದು ಸುಂದರ ಕೂಡು
ಕುಟುಂಬ. ಅಂಜಲಿಗೆ ಇದೆಲ್ಲವೂ ಹೊಸತು. ಆಕೆಗೆ ಹೊಂದಾಣಿಕೆ ಮಾಡಿಕೊಳ್ಳುವುದೇ ಕಷ್ಟವಾಗುತ್ತಿತ್ತು. ಅತ್ತೆಯೊಂದಿಗೆ ದಿನವೂ ಜಗಳ, ಗಂಡನಿಗೆ ಹೇಳಿದರೂ
ಆತನೂ ನಿರುಪಾಯನಾಗಿದ್ದ. ಮಾತಿನ ಮತ್ತು ಮಾನಸಿಕ ಯುದ್ಧಗಳಿಂದ ಕೊನೆಗೊಮ್ಮೆ ರೋಸಿ ಹೋದಳು. ತನ್ನ ಅಪ್ಪನ ಮನಗೆ ಬಂದ ಆಕೆ, ತನ್ನೆಲ್ಲ ನೋವು
ಹೇಳಿಕೊಂಡು ಅತ್ತಳು. ಈಗೇನು ಮಾಡಬೇಕು ಎಂದು ಕೊಂಡಿದ್ದೀಯ ಎಂದು ತಂದೆ ಕೇಳಿದ್ದರು. ಅಪ್ಪಾ, ನೀವು ಹೇಗಿದ್ದರೂ ಕೆಮಿಸ್ಟ್ ಇದ್ದೀರಿ, ನನಗೊಂದಷ್ಟು ವಿಷ ಕೊಡಿ, ಅದನ್ನು ಅತ್ತೆಗೆ ಊಟದಲ್ಲಿ ಹಾಕಿಕೊಟ್ಟು ಸಾಯಿಸಿ ಬಿಡುತ್ತೇನೆ, ಆಗಲೇ ನಾನು ನೆಮ್ಮದಿಯಿಂದ ಇರಲು ಸಾಧ್ಯ ಎಂದಾಗ ಅಂಜಲಿಯ ತಂದೆ ನಡುಗಿ
ಹೋಗಿದ್ದರು.

ಮಗಳೇ ನೀನು ಹೇಳಿದಂತೆ ವಿಷವನ್ನು ನಾನೇದರೂ ಕೊಟ್ಟರೆ, ನಾವಿಬ್ಬರೂ ಜೈಲಿಗೆ ಹೋಗುವುದು ಖಂಡಿತ. ಒಂದು ಕೆಲಸ ಮಾಡು, ನಿನಗೆ ನಾನು ನೀಡುವ
ವಿಷವನ್ನು ನಿನ್ನ ಅತ್ತೆಯ ಊಟದಲ್ಲಿ ಸ್ವಲ್ಪ ಸ್ವಲ್ಪವೇ ಹಾಕಿಕೊಡು, ಅದನ್ನು ತಿನ್ನುತ್ತಾ ತಿನ್ನುತ್ತಾ ಕ್ರಮೇಣವಾಗಿ ಆಕೆಗೆ ಸಾವು ಸಮೀಪಿಸುತ್ತದೆ. ನೀನು ನಿನ್ನ ಅತ್ತೆ
ಯೊಂದಿಗೆ ಖುಷಿಯಿಂದ, ಪ್ರೀತಿಯಿಂದ ಇರುವಂತೆ ವರ್ತಿಸು, ಆಗ ನಿನ್ನ ಬಗ್ಗೆ ಯಾರಿಗೂ ಅನುಮಾನ ಬರುವುದಿಲ್ಲ. ಮೂರ‍್ನಾಲ್ಕು ತಿಂಗಳಲ್ಲಿ ನಿನ್ನ ಅತ್ತೆ ಸತ್ತು
ಹೋಗುತ್ತಾಳೆ ಎಂದಾಗ ಅಂಜಲಿ ಖುಷಿಯಲ್ಲಿ ಕುಣಿದಾಡಿದ್ದಳು.

ತನ್ನ ತಂದೆ ಹೇಳಿದಂತೆಯೇ ಅಂಜಲಿ ಮಾಡತೊಡಗಿದಳು. ಸೊಸೆಯಲ್ಲಿ ಆದ ಬದಲಾವಣೆ ಕಂಡು ಕ್ರಮೇಣ ಅತ್ತೆಯೂ ಕೂಡ ಬದಲಾಗತೊಡಗಿದರು. ಇದೆಲ್ಲ ಆಗಿ ಮೂರ‍್ನಾಲ್ಕು ತಿಂಗಳಾಗಿತ್ತು. ಮತ್ತೆ ತನ್ನ ತಂದೆ ಮನೆಗೆ ಬಂದ ಅಂಜಲಿ, ಅತ್ತೆ ನನ್ನ ಅಮ್ಮನಂತಯೇ ಆಗಿದ್ದಾರೆ, ನನ್ನನ್ನು ತುಂಬಾ ಪ್ರೀತಿಸುತ್ತಾರೆ. ನನಗೆ ಅವರೆಂದರೆ ಅಚ್ಚುಮೆಚ್ಚು. ಅವರಿಗೆ ನೀಡುತಿದ್ದ ವಿಷ ಅವರನ್ನು ಬಾಧಿಸದಂತೆ ಮಾಡಿ, ಅತ್ತೆಯನ್ನು ಕಾಪಾಡುವಂಥ ಔಷಧ ಕೊಡಿ ಎಂದು ಅಂಗಲಾಚಿದ್ದಳು.
ಮಗಳನ್ನು ಮಡಿಲಲ್ಲಿ ಮಲಗಿಸಿಕೊಂಡಿದ್ದ ಅಪ್ಪ, ನಾನು ನಿನಗೆ ಕೊಟ್ಟಿದ್ದು ಸಕ್ಕರೆ ಪುಡಿಯನ್ನಷ್ಟೇ. ಮೊದಲು ನಿನ್ನ ವರ್ತನೆಯಲ್ಲಿ ವಿಷವಿತ್ತಷ್ಟೇ. ಈಗ ನಿನ್ನ ಆಲೋಚನೆ ಗಳಲ್ಲಿ, ಮಾತುಗಳಲ್ಲಿ ಸಕ್ಕರೆ ತುಂಬಿಕೊಂಡಿದೆ.

ಆದ್ದರಿಂದಲೇ ನಿನ್ನ ಅತ್ತೆಯ ಬಗ್ಗೆ ನಿನ್ನಲ್ಲಿ ಈ ಬದಲಾವಣೆ ಕಂಡಿದೆ. ಪ್ರೀತಿಯನ್ನು ಹಂಚಿದರೆ, ತಿರುಗಿ ಪ್ರೀತಿಯನ್ನೇ ಪಡೆಯುತ್ತೇವೆ. ಅದನ್ನೆಂದಿಗೂ ಹಂಚುತ್ತಲೇ ಇರು ಎಂದು ಮಗಳಿಗೆ ಜೀವನಪಾಠ ಹೇಳಿದ್ದರು ತಂದೆ. ನಮಗೂ ಈ ಪಾಠ ಅನ್ವಯವಾಗುತ್ತದೆ ಅಲ್ಲವೇ?