Thursday, 12th December 2024

ಸುಖ ಅನುಭವಿಸುವುದರಲ್ಲಿಲ್ಲ… ಬಿಟ್ಟು ಬಿಡುವುದರಲ್ಲಿದೆ !

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್‌

ಲೋಕಾಯುಕ್ತರು ದಾಳಿ ಮಾಡಿದಂತೆಲ್ಲ ಸಿಕ್ಕಿ ಬೀಳುವ ಗಣ್ಯರ ಮನೆಯ ರಾಶಿ ರಾಶಿ ನೋಟಿನ ಕಟ್ಟುಗಳು, ಚಿನ್ನದ ಗಟ್ಟಿಗಳು, ಅವರ ವೈಭವೋಪೇತ ಮನೆಗಳು, ಕಾರುಗಳು, ಕಂಡ ಕಂಡ ಊರುಗಳಲ್ಲಿನ ಅವರ ಸೈಟುಗಳು, ಅಬ್ಬಾ!

ತಾವು ಬದುಕುವ ಅರವತ್ತು, ಎಪ್ಪತ್ತು ವರ್ಷಕ್ಕೆ ಅದೆಷ್ಟು ಸಂಗ್ರಹಿಸಿರುತ್ತಾರೆ ಅಲ್ಲವೇ? ದಿನಕ್ಕೆ ನೂರು, ಇನ್ನೂರು ಗಳಿಸುವ ಬಡವನ ಆರೋಗ್ಯ, ನಿದ್ದೆ ಮಾತ್ರ ಈ ಗಣ್ಯರಿಗೆ ಗಗನ ಕುಸುಮ. ಅಧ್ಯಾತ್ಮ ಹೇಳುವ ಕಾವಿ ಗುರುಗಳು, ಮಠಾಧೀಶರು ಕೂಡಾ ಕೋಟಿ ಕೋಟಿಗಳ ಆಸ್ತಿ, ಲಕ್ಷಾನುಗಟ್ಟಲೆ ಬೆಲೆಬಾಳುವ ವಾಹನ. ಕಾಗೆಗಳು ಕೊಕ್ಕಿನಲ್ಲಿ ತಂದ ಮಾಂಸದ ಚೂರು ತಿನ್ನಲು ಇವರ ಮಠದ ಬಂಗಾರದ ಗೋಪುರವನ್ನೆ ಆಯ್ದುಕೊಂಡಿರುತ್ತದೆ. ಆದರೆ ಆ ಕಾಗೆಗೆ ತಾನು ಕೂತಿರುವ ಸ್ಥಳ ಬಂಗಾರದ ಗೋಪುರವೆಂಬುದು ತಿಳಿಯದೇ ಅದರ ಕೊಕ್ಕಿನಲ್ಲಿರುವ ನಾಯಿ ಮಾಂಸದ ತುಂಡೇ
ಪ್ರಧಾನ ವಾಗಿರುತ್ತದೆ. ಅದಕ್ಕೆ ಮಂಕುತಿಮ್ಮನ ಕಗ್ಗದಲ್ಲಿ ಡಿ.ವಿ.ಜಿಯವರು ಎಷ್ಟು ನೀನುಂಡರೇಂ ಮುಷ್ಟಿಪಿಷ್ಟವುತಾನೆ ಮೈಗಾಗುವುದು ಎಂದಿದ್ದಾರೆ. ಕಲಿಯುಗದ ಮನುಷ್ಯನ ಆಯುಷ್ಯದ ಗತಿಯೇ ಸ್ವಲ್ಪ, ಆದರೂ ಗಳಿಸಿಡುತ್ತೇವೆ.

ಹಿಂದೆ ಬಾಳಿ ಬದುಕಿದ ನಹುಷ, ಯಯಾತಿಗಳ ಕಥೆಗಳು ನಮಗೆ ಕಣ್ಣು ತೆರೆಸುತ್ತವೆ. ನಾವು ಕೇವಲ ಅರವತ್ತು ಎಪ್ಪತ್ತು. ಬೇಡ, ಕೃತಕ ಹೃದಯ, ಕೃತಕ ಕಿಡ್ನಿ ಹೋಗಲಿ, ಕೃತಕ ಉಸಿರಾಟದಿಂದ ಬದುಕಿದರೂ ಎಂಭತ್ತರ ಮೇಲೆ ಬದುಕುವುದಿಲ್ಲ. ಆದರೂ ಸುಖ ಸಾಕೆನಿಸುವುದಿಲ್ಲ ಅಲ್ಲವೇ? ಆದರೆ ಯಯಾತಿ ಮಹಾರಾಜ ತನ್ನ ಎಂಟುನೂರು ವರ್ಷಗಳ ಆಯುಷ್ಯ ಮುಗಿದ ಮೇಲೂ ಮತ್ತೆ ಮಕ್ಕಳ ಆಯುಷ್ಯ, ಯೌವ್ವನ ಪಡೆದು ಸುಖಿಸಿದ,
ಊಹೂ.. ತೃಪ್ತಿ ಎನ್ನುವುದೇ ಸಿಗಲಿಲ್ಲ. ಕಡೆಗೆ ಸುಖದಿಂದಲೇ ಸಾಕಾಗಿ, ಸಾಕಾಗಿ ಕೊನೆಗೆ ಕೆಲವು ಅಣಿಮುತ್ತುಗಳನ್ನು ಲೋಕದ ಲೋಭಿಗಳಿಗೆ ನೀಡಿ, ನಿರ್ಜನವಾದ ಅರಣ್ಯಕ್ಕೆ ತೆರಳಿದ.

ಯಾವದೀ ಕಥೆ? ಯಾವ ಅಣಿಮುತ್ತುಗಳಿವು? ಎಂಬುದಕ್ಕೆ ವಿಷ್ಣು ಪುರಾಣ ದಲ್ಲಿ ವಿವರವಾದ ಸಂಗ್ರಹವಿದೆ. ಏಕೆಂದರೆ, ಹಾದಿಹೋಕರೋ,
ಸಾಮಾನ್ಯನೋ, ಮಾಮೂಲ ವ್ಯಕ್ತಿಯೋ, ತತ್ತ್ವಜ್ಞಾನ, ವೈರಾಗ್ಯ, ದಾನ, ಧರ್ಮದ ಬಗ್ಗೆ ಹೇಳಿದರೆ ನಾವು ನಂಬುವುದಿಲ್ಲ. ಏಕೆಂದರೆ, ‘ಹಾಲೊಲ್ಲ, ಜೇನೊಲ್ಲ, ಎಣ್ಣೆ ಬೆಣ್ಣೆಗಳನೊಲ್ಲ, ಯಾಕೊಲ್ಲ ಏಕೆಂದರೆ ಇಲ್ಲದುದಕ್ಕೆ ಒಲ್ಲ’ ಎಂದು ಪರಿಹಾಸ್ಯ ಮಾಡುತ್ತಾರೆ.

ಅದೇ ಟಾಟಾ ಬಿರ್ಲಾ, ವಿಜಯ್ ಮಲ್ಯ ಹೇಳಿದರೆ ನಾವು ಒಪ್ಪುತ್ತೇವೆ ಅಲ್ಲವೇ? ಅದಕ್ಕೆ ಯಯಾತಿ ಮಹಾರಾಜ ಎಲ್ಲ ಸದು, ಸಾಕಾಗಿ ತಲೆಕೆಟ್ಟು ಈ ವೈರಾಗ್ಯ ಭೋದಿಸಿದ್ದಾನೆ. ನಹುಷ ಮಹಾರಾಜನಿಗೆ ಯತಿ, ಯಯಾತಿ, ಸಂಯಾತಿ, ಆಯಾತಿ, ಯಾತಿ, ಕೃತಿ ಎಂದು ಆರುಜನ ಮಕ್ಕಳಿದ್ದರು.
ಅವರೆಲ್ಲರೂ ವೀರರು, ಎಲ್ಲರೂ ಧೀರರು. ಅವರಲ್ಲಿ ಹಿರಿಯನಾದ ಯತಿಯು ಹೆಸರಿಗೆ ತಕ್ಕಂತೆ ನಿಜವಾಗಿಯೂ ಯತಿಯಂತೆ ರಕ್ತನಾದ. ರಾಜ್ಯ, ಐಶ್ವರ್ಯ ಯಾವುದನ್ನೂ ಬಯಸಲಿಲ್ಲ.

ಯಯಾತಿಯು ಭೂಲೋಕ ಸಾರ್ವಭೌಮ ನಾದ. ಶುಕ್ರಾಚಾರ್ಯರ ಮಗಳಾದ ದೇವಯಾನಿಯನ್ನೂ, ವೃಷಪರ್ವನ ಮಗಳಾದ ಶರ್ಮಿಷ್ಠೆಯನ್ನೂ ಮದುವೆ ಯಾದ. ದೇವಯಾನಿಯಿಂದ ಅವನಿಗೆ ಯದು, ತುರ್ವಸು ಎಂಬ ಇಬ್ಬರು ಮಕ್ಕಳು ಜನಿಸಿದರು. ಶರ್ಮಿಷ್ಠೆಯಿಂದ ದ್ರುಹ್ಯು, ಅನು, ಪೂರು
ಎಂದು ಮೂವರು ಮಕ್ಕಳಾದರು. ಶುಕ್ರಾಚಾರ್ಯರ ಶಾಪದಿಂದ ಯಯಾತಿಗೆ ನಡುಹರೆಯ ದಲ್ಲಿಯೇ ಮುಪ್ಪು ಬಂದಿತು. ಪ್ರಸನ್ನರಾದ ಶುಕ್ರರು ನಿನ್ನ ಮುಪ್ಪನ್ನು ಯಾರದಾದರೂ ಯೌವ್ವನ ದೊಂದಿಗೆ ಅದಲು ಬದಲು ಮಾಡಬಹುದು ಎಂದು ಸೂಚಿಸಿದರು.

ಆಗ ಯಯಾತಿಯು ತನ್ನ ಹಿರಿಯ ಮಗನಾದ ಯದುವಿನ ಬಳಿಗೆ ಬಂದು ಕೇಳಿದನು. ವತ್ಸ! ನಿನ್ನ ಅಜ್ಜನ ಶಾಪದಿಂದ ನನಗೆ ಅಕಾಲದಲ್ಲಿ ಈ ಮುಪ್ಪು ಅಡರಿದೆ. ಅದನ್ನು ಈಗ ನೀನು ತೆಗೆದುಕೊಂಡು ನಿನ್ನ ತಾರುಣ್ಯವನ್ನು ನನಗೆ ಕೊಡು. ಶುಕ್ರಾಚಾರ್ಯರ ಅನುಗ್ರಹದಿಂದ ನಿನ್ನ ಯೌವ್ವನವನ್ನು ನನಗೆ ಸುಲಭವಾಗಿ ವರ್ಗಾಯಿಸಬಹುದು. ನನಗಿನ್ನೂ ವಿಷಯಗಳ ಆಶೆಯು ತಣಿದಿಲ್ಲ. ಆದ್ದರಿಂದ ನಿನ್ನ ಪ್ರಾಯವನ್ನು ಪಡೆದು
ಒಂದು ಸಾವಿರ ವರ್ಷ ವಿಷಯಗಳನ್ನು ತಿಳಿಯಲೆಂದು ಆಶಿಸಿದ್ದೇನೆ. ಇದಕ್ಕೆ ನೀನು ‘ಇಲ್ಲ’ ಎನ್ನಕೂಡದು ಎಂದು.

ತಂದೆಯ ಈ ಬೇಡಿಕೆಗೆ ಯದುಕುಮಾರನು ಒಪ್ಪಲಿಲ್ಲ. ಯೌವ್ವನವನ್ನು ಕೊಡಲಿಲ್ಲ. ಆಗ ತಂದೆ ಶಪಿಸಿದನು. ನಿನ್ನ ಸಂತತಿಗೆ ಮುಂದೆ ರಾಜ್ಯದ ಹಕ್ಕು ಇಲ್ಲದಂತಾಗಲಿ ಎಂದು. (ಈ ಶಾಪದಿಂದಲೇ ಶ್ರೀಕೃಷ್ಣ ಪರಮಾತ್ಮ ಗೋವುಗಳನ್ನು ಕಾಯುವವನಾಗಿ ಅವತಾರ ಮಾಡಿ, ತನ್ನ ಕೃಪೆಯಿಂದ
ಪಾಂಡವರು ಭೂಮಂಡಲವನ್ನು ಗೆದ್ದರೂ ಧರ್ಮರಾಯನನ್ನೇ ರಾಜನನ್ನಾಗಿಸಿದ ತಾನು ಮಾತ್ರ ಅವರ ಸೇವೆಗೆ ನಿಂತ. ಇದು ಯದು ವಂಶಕ್ಕೆ ಯಯಾತಿಯ ಶಾಪ) ಅನಂತರ ಯಯಾತಿ ಮಹಾರಾಜನು ತನ್ನ ಉಳಿದ ಮಕ್ಕಳಾದ ತುರ್ವಸು, ದ್ರುಹ್ಯ, ಅನು ಮೂವರನ್ನೂ ತನ್ನ ಮುಪ್ಪನ್ನು ಸ್ವೀಕರಿಸಿ ಅವರ ತಾರುಣ್ಯವನ್ನು ತನಗೆ ಅರ್ಪಿಸಲು ಕೇಳಿಕೊಂಡನು. ಅವರಾರೂ ಒಪ್ಪದಿದ್ದಾಗ ಎಲ್ಲರ ಉಡಿಯಲ್ಲಿಯೂ ಹಿಡಿ ಶಾಪ ಹಾಕಿದನು.

ಅನಂತರ ಶರ್ಮಿಷ್ಠೆಯ ಹೊಟ್ಟೆಯಲ್ಲಿ ಹುಟ್ಟಿದ ಕೊನೆಯ ಮಗು ಪೂರುರವನನ್ನು ಕೇಳಿದನು. ಪಿತೃ ಭಕ್ತನಾದ ಆ ಪೂರುವು ಭಕ್ತಿಯಿಂದ ಬಾಗಿ ಇದೊಂದು ಹಿರಿಯರು ನನ್ನ ಮೇಲೆ ಮಾಡಿದ ದೊಡ್ಡ ಅನುಗ್ರಹ ಎಂದು ವಂದಿಸಿ ತನ್ನ ತಾರುಣ್ಯವನ್ನು ತಂದೆಗೆ ಇತ್ತನು. ಅವನು ಮುಪ್ಪನ್ನು ತಾನು ಅಪ್ಪಿ ನಿಂತನು. ತಂದೆಯ ಭೋಗ, ಮಗನ ತ್ಯಾಗ. ಯಯಾತಿ ಮಹಾರಾಜನು ಮತ್ತೆ ಯುವಕನಾಗಿ ಧರ್ಮಕ್ಕೆ ವಿರೋಧವಾಗದಂತೆ ಯಥೇಚ್ಛವಾಗಿ ವಿಷಯ ಗಳನ್ನು ಭೋಗ ಮಾಡಿದನು. ಅವನ ಉತ್ಸಾಹ ಇಮ್ಮಡಿಸಿತ್ತು. ಶಕ್ತಿ ಮುಮ್ಮಡಿಸಿತ್ತು.

ವಿಷಯ ವಾಸನೆ ನೂರ್ಮಡಿಯಾಗಿ ನವೋನವ ಲಾಸಗಳ ರುಚಿ ನೋಡುತ್ತಿತ್ತು. ಪ್ರಜೆಗಳನ್ನೆಲ್ಲ ಚೆನ್ನಾಗಿ ಪಾಲನೆ ಮಾಡಿ ಅವರಿಗೆ ಎಲ್ಲ ತರಹದ ಸುಖ ಸಮೃದ್ಧಿಗಳನ್ನು ಒದಗಿಸಿದನು. ಯಯಾತಿಗೇನೋ ಮಗನ ಪುಣ್ಯದಿಂದ ಯೌವ್ವನವು ಮರುಕಳಿಸಿತ್ತು. ಆದರೆ ಅವನ ಹೊಸ ಹರೆಯದ ಸಂಭ್ರಮಕ್ಕೆ ದೇವಯಾನಿಯಿಂದ ತೃಪ್ತಿಯೆನಿಸಲಿಲ್ಲ. ಅವಳಿಗೆ ಯಾರೂ ಯೌವ್ವನ ದಾನ ಮಾಡಿರಲಿಲ್ಲ. ಅದರಿಂದ ಅವಳು ಕೆಲವೇ ದಿನಗಳಲ್ಲಿ ಮುದುಕಿಯಾದಳು. ಆಗ ಹೊಸ ಹೊಸ ಹರೆಯದ ಹೊಂಗನಸುಗಳನ್ನು ಹೃದಯದಲ್ಲಿ ಹೆಣೆದು, ಕೂಡಲೇ ಕೃತಿಯಲ್ಲಿ ಇಳಿಸಿ ತೃಪ್ತಿಪಡುವ ಯಯಾತಿಯು ‘ಶ್ವಾಚಿ’ ಎಂಬ ಅಪ್ಸರೆಯ ಸಹವಾಸವನ್ನು ಮಾಡಿದನು. ಆ ಗಂಧರ್ವ ಸುಂದರಿಯೊಂದಿಗೆ ಅನುದಿನವೂ ಹೊಸ ಹೊಸ ರಸಕೇಳಿಗಾಗಿ ಅವನ ಹೃದಯವು ತುಡಿಯುತ್ತಿತ್ತು.

ದಿನದಿನವೂ ಭೋಗಮಾಡಿದಂತೆ ವಿಷಯ ಗಳೆಲ್ಲವೂ ರಾಗರಮಣೀಯ ವಾಗಿಯೇ ಅವನಿಗೆ ತೋರತೊಡಗಿದವು. ಕೊನೆಗೆ ಒಂದು ದಿನ ಅವನಿಗೆ ವೈರಾಗ್ಯವು ಹುಟ್ಟಿತು. ಅವನ ಬಾಯಿಂದ ತಾನಾಗಿಯೇ ಈ ಉದ್ಗಾರವು ಹೊರಬಿದ್ದಿತು. ಇದು ಯಯಾತಿಯ ಅನುಭವದ ಉದ್ಗಾರ. ವಿಷಯ ಗಳನ್ನು ಎಷ್ಟು ಭೋಗ ಮಾಡಿದರೂ ತೃಪ್ತಿಯು ಆಗುವುದಿಲ್ಲ. ತುಪ್ಪ ಸುರಿದ ಬೆಂಕಿಯಂತೆ, ಭೋಗಿಸಿದಂತೆ ಭೋಗದ ಆಸೆಯು ಬೆಳೆಯುತ್ತಲೇ ಹೋಗುತ್ತದೆ. ಭೂ ಮಂಡಲದಲ್ಲಿರುವ ಅನ್ನ, ಹೊನ್ನು, ಹೆಣ್ಣು, ಮಣ್ಣು, ಹಸು ಎಲ್ಲವನ್ನೂ ಒಬ್ಬನಿಗೆ ಕೊಟ್ಟರೂ ಸಾಕು ಎನ್ನುವುದಿಲ್ಲ ಮಾನವನ
ಮನಸ್ಸು.

ಆದುದರಿಂದ ವಿಷಯ ವಾಸನೆಯನ್ನು ಪೂರ್ಣವಾಗಿಯೇ ಬಿಟ್ಟು ಬಿಡಬೇಕು. ಯಾವ ಜೀವಿಗೂ ದ್ರೋಹ ಬಗೆಯದೇ ಎಲ್ಲವನ್ನೂ ಸಮದ್ಧ ದೃಷ್ಟಿ ಯಿಂದ ಕಾಣುವುದೇ ಸುಖದ ಗುಟ್ಟು. ಸರ್ವರಲ್ಲಿರುವ ದೇವರನ್ನು ಅರಿತು ಭಜಿಸುವವನಿಗಂತೂ ಎಲ್ಲ ದಿಕ್ಕುಗಳೂ ಸುಖಮಯವೇ. ಆದರೆ ಈ ವಿಷಯದ ಆಸೆಯನ್ನು ಮತಿಗೆಟ್ಟವರೆಂದಿಗೂ ಬಿಡಲಾರರು. ಮನುಷ್ಯನು ಮುದುಕನಾದರೂ ಅವನ ವಿಷಯ ಸುಖದ ಹಸಿವು ಮಾತ್ರ ಹರೆಯದ ಒಗರೇರಿ ಹೊಸ ಹೊಸ ಭೋಗಗಳಿಗೆ ಹಾತೊರೆಯುತ್ತದೆ. ಆದರೆ ಒಮ್ಮೆ ವಿವೇಕಿಯಾದ ಮನುಷ್ಯ ಆ ಭೋಗದ ಹಂಬಲವನ್ನು ಬಿಟ್ಟು ಬಿಟ್ಟರೆ ಅವನಲ್ಲಿ ಸತತವೂ ಸುಖ ತುಳುಕಾಡುತ್ತದೆ.

ಮಾನವನು ಮುದುಕ ನಾದಂತೆ ಕೂದಲು ಬೆಳ್ಳಗಾಗಿ ಉದುರತೊಡಗುತ್ತವೆ. ಹಲ್ಲು ಹಳತು ಹುಳುಕು ಬಿದ್ದು ಹೋಗುತ್ತವೆ. ಆದರೆ ಮನುಷ್ಯನಿಗೆ ಎಷ್ಟು ಮುದುಕನಾದರೂ ದುಡ್ಡಿನ ಆಶೆ ಕಡಿಮೆ ಯಾಗುವುದಿಲ್ಲ. ಬದುಕುವ ಆಶೆ ಅಳಿಯವುದಿಲ್ಲ. ವಿಷಯಗಳಲ್ಲಿ ಆಸಕ್ತನಾಗಿ ರಾಗ ಭೋಗಗಳನ್ನು ನಾನೀಗ ಸಾವಿರ ವರ್ಷಗಳಿಂದ ಅನುಭವಿಸುತ್ತಲಿದ್ದೇನೆ. ಇಷ್ಟಾದರೂ ವಿಷಯ ಭೋಗದ ನನ್ನ ಆಸೆ ಕುಗ್ಗದೇ ತಗ್ಗದೆ ದಿನದಿನವೂ ಬೆಳೆಯುತ್ತಲೇ ಇದೆ. ಆದ್ದರಿಂದ ಇನ್ನು ಈ ಭೋಗದ ಆಸೆಯನ್ನು ಬಿಟ್ಟು ಮಮತೆಯನ್ನು ತೊರೆದು ದ್ವಂದ್ವಾತೀತ ನಾಗಿ ದೇವರಲ್ಲಿ ಮನಸ್ಸನ್ನು ಇಟ್ಟು ಧ್ಯಾನ
ಮಾಡುವೆ.

ಅರಣ್ಯಕ್ಕೆ ಹೋಗಿ ಚಿಗರೆಗಳ ಜತೆಗೆ ಮನಿವೃತ್ತಿಯಿಂದ ಇದ್ದು ತಪಂಗೈದು ಭಗವದಾರಾಧನೆ ಯನ್ನು ಮಾಡುವೆ ಎಂದು ನಿರ್ಧರಿಸಿದನು.
ಅದರಂತೆ ತನ್ನ ನೆಚ್ಚಿನ ಮಗನಾದ ಪೂರುವನ್ನು ಕರೆದು ಅವನ ತಾರುಣ್ಯವನ್ನು ಅವನಿಗಿತ್ತು ತನ್ನ ಮುಪ್ಪನ್ನು ತಾನು ತೆಗೆದುಕೊಂಡನು ಮತ್ತು ಅವನನ್ನೇ ತನ್ನ ಅನಂತರ ಸಿಂಹಾಸನದಲ್ಲಿ ಕೂಡಿಸಿ ತಾನು ತಪಸ್ಸಿಗಾಗಿ ಅರಣ್ಯಕ್ಕೆ ನಡೆದನು. ಉಳಿದ ಮಕ್ಕಳನ್ನೆಲ್ಲ ಮಾಂಡಲಿಕ ರಾಜರನ್ನಾಗಿ ಮಾಡಿದನು. ಆಗ್ನೇಯ ದಿಕ್ಕಿನ ನಾಡಿಗೆಲ್ಲ ತುರ್ವಸುವನ್ನು, ಪಡುವಲ ನಾಡಿಗೆ ದ್ರುಹ್ಯುವನ್ನು, ದಕ್ಷಿಣ ದಿಕ್ಕಿನ ರಾಜ್ಯಕ್ಕೆ ಯದುವನ್ನು, ಉತ್ತರಾ ಪಥಕ್ಕೆ ಅನುವನ್ನು ಅಧಿಪತಿಗಳನ್ನಾಗಿ ನೇಮಿಸಿದನು.

ಎಲ್ಲರ ಮೇಲೆ ಸರ್ವಸಾಮ್ರಾಜ್ಯದ ಸಾರ್ವಭೌಮನನ್ನಾಗಿ ಪೂರುಗೆ ಪಟ್ಟಾಭಿಷೇಕ ಮಾಡಿ ತಪೋನುಷ್ಠಾನಕ್ಕಾಗಿ ಕಾಡಿಗೆ ತೆರಳಿದನು. ಎಲ್ಲವನ್ನು ಬಿಟ್ಟಮೇಲೆ ಅವನು ನಿಜವಾದ ಸುಖವನ್ನು ಕಂಡುಕೊಂಡನು. ನಮ್ಮ ಮುದಿರಾಜಕಾರಣಿಗಳಿಗೆ ಇಂತಹ ಕಥೆಯನ್ನು ಹೇಳುವವರಾರು? ಧರ್ಮ ನಿಷ್ಠ ಯುವ ಉತ್ಸಾಹವಿರುವ ಯುವಕರನ್ನು ದೇಶದ ಸೇವೆಗೆ ಕರೆಯದೇ ತಾವೇ ಎಲ್ಲವನ್ನೂ ಮಾಡಬೇಕೆಂದುಕೊಂಡು ಎಲ್ಲ ಅಧಿಕಾರ
ವನ್ನೂ ಬಯಸುವ ಇವರು ಏನನ್ನೂ ಸಾಧಿಸುತ್ತಾರೋ ಎಂಬುದು ತಿಳಿಯದು.

ಅವರ ಮಕ್ಕಳೂ ಕೂಡ ತಂದೆಯ ಹಾದಿಯಲ್ಲೇ ಅಧಿಕಾರ, ಸುಖಲೋಲುಪರಾಗಿದ್ದಾರೇ ಹೊರತು ಬೇರಾವ ಸೇವಾ ಮನೋಭಾವನೆಗಳು ಅವರ ಲ್ಲಿಲ್ಲ. ಜನರ ಶೋಷಣೆ, ಅನಧಿಕೃತ ಸಂಪತ್ತಿನ ಲೂಟಿಯಲ್ಲೇ ಮುಳಿಗೇಳುತ್ತಿರುವ ಇವರನ್ನು ರಕ್ಷಿಸುವುದು ಯಾರಿಂದಲೂ ಸಾಧ್ಯವಿಲ್ಲ. ಕಾಲ ಮಾತ್ರ ಇವರಿಗೆ ಪಾಠ ಕಲಿಸಲಿದೆ.