Sunday, 19th May 2024

ಅಭ್ಯಾಸಗಳು ಪದ್ಧತಿಯಾಗಿ ಬದಲಾದರೆ…

ವಿಶ್ವರಂಗ

ರಂಗಸ್ವಾಮಿ ಮೂಕನಹಳ್ಳಿ

ಧಾರ್ಮಿಕತೆಯನ್ನು ಹೆಚ್ಚಾಗಿ ನಂಬದ, ಆದರೆ ತಮ್ಮ ಟ್ರಡಿಷನ್‌ನಲ್ಲಿ ನಂಬಿಕೆ ಇಟ್ಟಿರುವ ಇನ್ನಷ್ಟು ಸ್ಥಳೀಯರ ಪ್ರಕಾರ, ಇತ್ತೀಚಿನ ಕೊರೋನಾ ಹೋಲುವ ಪಾಂಡೆಮಿಕ್ ೧೮ನೇ ಶತಮಾನದಲ್ಲಿ ಬಂದಿತ್ತಂತೆ. ಆದರೆ ಅದು ಮನುಷ್ಯರಿಗೆ ಬಾರದೆ ಕೇವಲ ಕುದುರೆಗಳಿಗೆ ಬಂದಿತ್ತಂತೆ.

ಇವತ್ತಿನ ಬರಹವನ್ನು ಒಂದು ಕಥೆಯ ಮೂಲಕ ಶುರುಮಾಡುತ್ತೇನೆ. ಈ ಕಥೆ ನಾನು ಕೇಳಿದ್ದು; ನೀವು ಕೂಡ ಇದೇ ಕಥೆಯನ್ನು ಅಥವಾ ಇದಕ್ಕೆ ಆಜುಬಾಜಿನ ಕಥೆಯನ್ನು ಖಂಡಿತ ಕೇಳಿರುತ್ತೀರಿ. ಈ ಕಥೆ ಹೇಳಲು ಕಾರಣವೇನು ಎನ್ನುವುದನ್ನು ಕೊನೆಗೆ ನಿಮಗೆ ಹೇಳುತ್ತೇನೆ. ಇನ್ ಫ್ಯಾಕ್ಟ್, ಬುದ್ಧಿವಂತ ಓದುಗರಾದ ನಿಮಗೆ ಕಾರಣ ಹೇಳುವ ಅವಶ್ಯಕತೆ ಕೂಡ ನನಗೆ ಬರುವುದಿಲ್ಲ. ಏಕೆಂದರೆ, ಈ ಕಥೆಯ ನಂತರ ಹೇಳುವ ವಿಷಯವನ್ನು ಓದಿದ ನಂತರ, ನೀವೇ ಅದಕ್ಕೆ ಲಿಂಕ್ ಮಾಡಿಕೊಂಡು ಬಿಡುತ್ತೀರಿ ಎನ್ನುವ ನಂಬಿಕೆ ನನ್ನದು, ಇರಲಿ.

ಒಂದೂರಿನಲ್ಲಿ ಒಬ್ಬ ಸ್ಥಿತಿವಂತ ವರ್ತಕನಿದ್ದನಂತೆ. ಅವನ ಬಳಿ ಹೇರಳವಾಗಿ ಹಣವಿದ್ದ ಕಾರಣವಲ್ಲದೆ ಸಭ್ಯನೂ, ದಯಾಳುವೂ ಆಗಿದ್ದ ಕಾರಣ, ಬಹಳಷ್ಟು ಜನ ತಾವೂ ಆತನಂತೆ ಆಗಬೇಕು ಎನ್ನುತ್ತಿದ್ದರಂತೆ. ಆತ ಮಾಡಿದ್ದನ್ನು ತಮ್ಮ ಶಕ್ತ್ಯಾನುಸಾರ ಇಮಿಟೇಟ್ ಮಾಡುತ್ತಿದ್ದರಂತೆ. ಸಮಾಜ ನೋಡಿ ಅಂದಿಗೂ ಇಂದಿಗೂ ಬದಲಾಗಲೇ ಇಲ್ಲ. ವರ್ತಕ ಒಂದು ಬೆಕ್ಕನ್ನು ತಂದು ಸಾಕುತ್ತಾನೆ. ಆತನಿಗೆ ಬೆಕ್ಕಿನ ಮೇಲೆ ಎಲ್ಲಿಲ್ಲದ ಮಮಕಾರ. ಅದರ ಲಾಲನೆ-ಪಾಲನೆಗೆ ಕೂಡ ಇತರರ ಕೈಗೆ ಕೊಡದೆ ಸ್ವತಃ ತಾನೇ ಮಾಡುತ್ತಿದ್ದನಂತೆ.

ಹೀಗಿರುವಾಗ ವರ್ತಕನ ತಂದೆಯ ವಾರ್ಷಿಕ ಶ್ರಾದ್ಧ ಮಾಡುವ ದಿನ ಬರುತ್ತದೆ. ತಿಂಗಳಾನುಗಟ್ಟಲೆ ವರ್ತಕನನ್ನು ಬಿಟ್ಟು ಇತರರ ಬಳಿ ಹೋಗದ ಬೆಕ್ಕು ಆತನನ್ನು ಬಿಡಲು ಒಪ್ಪಲಿಲ್ಲ. ಜತೆಗೆ ವರ್ತಕನಿಗೂ ತನ್ನೆಲ್ಲಾ ಬಿಸಿನೆಸ್ ಡೀಲ್‌ಗಳಿಗೆ ಅದನ್ನು ಕರೆದೊಯ್ದು ಅಭ್ಯಾಸವಾಗಿತ್ತು. ಅದು ತನಗೆ ಇನ್ನಷ್ಟು ಅದೃಷ್ಟ ತಂದುಕೊಟ್ಟಿದೆ ಎನ್ನುವುದು ಆತನ ನಂಬಿಕೆಯಾಗಿತ್ತು. ಹೀಗಾಗಿ ತನ್ನ ತಂದೆಯ ಶ್ರಾದ್ಧ ಮಾಡುವಾಗಲು ಕೂಡ ಬೆಕ್ಕನ್ನು ಪಕ್ಕದಲ್ಲಿ
ಕೂರಿಸಿಕೊಳ್ಳುತ್ತಾನೆ.

ಹೀಗೆಯೇ ವರ್ಷಗಳು ಉರುಳುತ್ತವೆ, ಆ ಬೆಕ್ಕು ಸಾಯುತ್ತದೆ. ಆ ಬೆಕ್ಕಿನ ಜಾಗಕ್ಕೆ ಹೊಸ ಬೆಕ್ಕು ಬರುತ್ತದೆ, ಆದರೆ ಎಲ್ಲವೂ ಮೊದಲಿನಂತೆ ಚಾಚೂತಪ್ಪದೆ ನಡೆಯುತ್ತಿರುತ್ತದೆ. ಹೀಗೇ ವರ್ಷಗಳು ಕಳೆಯುತ್ತವೆ. ವರ್ತಕ ಕೂಡ ಇಹಲೋಕದ ವ್ಯಾಪಾರ ಮುಗಿಸಿ ಹೊರಡುತ್ತಾನೆ. ಅವನ ಮಗ ವರ್ತಕನ ಶ್ರಾದ್ಧ ಮಾಡಲು ಕುಳಿತುಕೊಳ್ಳುತ್ತಾನೆ. ಎಲ್ಲವೂ ಸರಿ ಇದೆ, ಏನೋ ಮಿಸ್ಸಿಂಗ್ ಎನ್ನುವ ಭಾವನೆ ಬರುತ್ತದೆ. ಓಹ್, ಮರೆತುಹೋಗಿತ್ತು, ಬೆಕ್ಕು! ಬೆಕ್ಕೇ ಇಲ್ಲದೆ ಎಂಥ ಶ್ರಾದ್ಧ!! ತಕ್ಷಣ ತನ್ನ ಸಹಾಯಕರಿಗೆ ಹೇಳಿ ಬೆಕ್ಕನ್ನು ತರಿಸಿ ಪಕ್ಕದಲ್ಲಿ ಇರಿಸಿಕೊಂಡು ಶ್ರಾದ್ಧಮಾಡಿ ಮುಗಿಸುತ್ತಾನೆ.

ಇದು ಪ್ರಾಕ್ಟೀಸ್ ಆಗುತ್ತದೆ. ವರ್ಷಗಳು ಕಳೆದಂತೆ ಅದು ಪದ್ಧತಿಯಾಗಿ ಬದಲಾಗಿಬಿಡುತ್ತದೆ. ಅವನ ವಂಶಸ್ಥರು, ‘ಬೆಕ್ಕಿಲ್ಲದೆ ಶ್ರಾದ್ಧ ಮಾಡುವುದಿಲ್ಲ’ ಎಂದು ಹೇಳುವ ಮಟ್ಟಕ್ಕೆ ಅದು ಕಸ್ಟಮ್, ಪದ್ಧತಿಯಾಗಿ ಬದಲಾಗಿಬಿಡುತ್ತದೆ. ಇವರ ಅನುಯಾಯಿಗಳ ಮನೆಯಲ್ಲೂ ಅದೇ ಕಥೆ! ಸ್ನೇನ್ ದೇಶವು ಒಂದಲ್ಲ, ನೀವು ಕೇಳಿರದ ಹಲವಾರು ಹಬ್ಬಗಳ ತವರು. ಇವತ್ತು ಅಂಥ ಒಂದು ಹಬ್ಬದ ಬಗ್ಗೆ ನಿಮಗೆ ತಿಳಿಸುವ ಹಂಬಲ ನನ್ನದು. ಪ್ರತಿವರ್ಷ ಜನವರಿ ೧೬ರಂದು ಸ್ಯಾನ್ ಬಾರ್ತಲೋಮೆ ದೆ ಪಿನಾರೆಸ್ ಎನ್ನುವ ಹಳ್ಳಿಯಲ್ಲಿ ಲಾಸ್ ಲ್ಯೂಮಿನಾರಿಯಸ್ (ಔZo ಔಞಜ್ಞಿZಜಿZo) ಎನ್ನುವ ಹಬ್ಬವನ್ನು
ಆಚರಿಸಲಾಗುತ್ತದೆ. ಈ ಹಳ್ಳಿ ಸ್ಪೇನ್ ದೇಶದ ರಾಜಧಾನಿ ಮ್ಯಾಡ್ರಿಡ್‌ನಿಂದ ಪಶ್ಚಿಮಕ್ಕೆ ಸುಮಾರು ೧೦೦ ಕಿ.ಮೀ. ದೂರದಲ್ಲಿದೆ. ಈ ಹಬ್ಬವನ್ನು ಸ್ಪೇನ್ ಮಾತ್ರವಲ್ಲದೆ ಮೆಕ್ಸಿಕೋ ದೇಶದಲ್ಲಿ ಕೂಡ ಆಚರಣೆ ಮಾಡುತ್ತಾರೆ. ಹೆಸರು ಮಾತ್ರ ಸೇಮ್; ಆದರೆ ಆಚರಣೆ, ಸಂಪ್ರದಾಯ ಮಾತ್ರ ಬೇರೆ.

ರಸ್ತೆಯಲ್ಲಿ ಹುಲ್ಲು, ಕಡ್ಡಿಗಳು ಇತ್ಯಾದಿಗಳನ್ನು ಹಾಕಿ ಅದಕ್ಕೆ ಬೆಂಕಿಯನ್ನು ಹಚ್ಚಲಾಗುತ್ತದೆ. ಹೀಗೆ ಬೆಂಕಿ ಮುಗಿಲೆತ್ತರಕ್ಕೆ ಏರುತ್ತಿದೆಯೇನೋ ಎಂದು
ಭಾಸವಾಗುವ ಮಟ್ಟಕ್ಕೆ ಬೆಂಕಿಯನ್ನು ಉಗ್ರವಾಗಿ ಹಾಕಲಾಗುತ್ತದೆ. ನೂರಾರು ಜನ ಸ್ಥಳೀಯರು ತಮ್ಮ ಕುದುರೆಯ ಮೇಲೆ ಕುಳಿತು ಒಂದು ಬದಿ
ಯಿಂದ ರಸ್ತೆಯ ಇನ್ನೊಂದು ಬದಿಗೆ ಈ ಬೆಂಕಿಯ ಮೇಲೆ ವೇಗವಾಗಿ ಸಾಗಿಹೋಗುತ್ತಾರೆ. ಹಲವಾರು ಜನರು ಹೀಗೆ ಒಂದು ಗಂಟೆಯ ಕಾಲ ಈ ರೀತಿಯ ಕೆಲಸದಲ್ಲಿ ತೊಡಗುತ್ತಾರೆ. ಇದು ಮುಗಿದ ಮೇಲೆ ನಿಮಗೆಲ್ಲಾ ಗೊತ್ತೇ ಇರುತ್ತದೆ- ಸ್ಪ್ಯಾನಿಷ್ ಜನರು ಎಂದ ಮೇಲೆ ಕುಡಿತ ಮತ್ತು ಕುಣಿತ ಇರಲೇಬೇಕು.

ಜನ ಚೆನ್ನಾಗಿ ಕುಡಿದು ಕುಣಿಯುತ್ತಾರೆ. ಈ ಪದ್ಧತಿಯಲ್ಲಿ ಪಾಲ್ಗೊಳ್ಳಲು ಸ್ಥಳೀಯರು ಇದ್ದರೆ, ಇದನ್ನು ನೋಡಲು ಮಾತ್ರ ಸ್ಪೇನ್‌ನ ಇತರ ಭಾಗ, ಯುರೋಪಿನ ಬೇರೆ ದೇಶಗಳಿಂದ ಜನ ಬರುತ್ತಾರೆ. ತಿನ್ನುವುದು ಮತ್ತು ಕುಣಿಯವುದರಲ್ಲಿ ಅವರು ಜತೆಯಾಗುತ್ತಾರೆ. ಪುಟಾಣಿ ಜಾಗದ ಆರ್ಥಿಕತೆ
ಕೆಲವು ದಿನಗಳ ಕಾಲ ರಾಕೆಟ್ ವೇಗವನ್ನು ಪಡೆದುಕೊಳ್ಳುತ್ತದೆ. ‘ಯುರೋಪು ಇಂದಿಗೂ ತನ್ನತನವನ್ನು ಬಿಟ್ಟುಕೊಡದ ಒಂದು ಪುಟಾಣಿ ಹಳ್ಳಿ’
ಎಂಬುದಾಗಿ ನಾನು ಸದಾ ಬರೆಯುತ್ತಲೇ ಇರುತ್ತೇನೆ. ಅದು ಈ ಹಬ್ಬದ ವಿಷಯದಲ್ಲಿ ಕೂಡ ಸತ್ಯ.

ನಮ್ಮಲ್ಲಿ ಪ್ರತಿಯೊಂದಕ್ಕೂ ಒಬ್ಬ ದೇವತೆಯನ್ನು ಅಽಪತಿ ಎಂದು ನಂಬುತ್ತೇವೆ; ಥೇಟ್ ಹಾಗೆಯೇ ಇಲ್ಲಿ ಕೂಡ ಪ್ರತಿಯೊಂದು ಕಾರ್ಯ, ಪ್ರಾಣಿ, ಪಕ್ಷಿ ಎಲ್ಲಕ್ಕೂ ಒಬ್ಬ ಸಂತನನ್ನು ಮೇಲ್ವಿಚಾರಕ ಎಂದು ಪರಿಗಣಿಸುತ್ತಾರೆ ಅಥವಾ ಅವು ಆತನ ಅಡಿಯಲ್ಲಿ ಬರುತ್ತವೆ ಎಂದು ನಂಬುತ್ತಾರೆ. ಸ್ಯಾನ್ ಅಂಥೋನಿಯೋ ಅಬಾದ್ ಎನ್ನುವ ವ್ಯಕ್ತಿಯೊಬ್ಬರು ‘ಸಂತ ಅಂಥೋನಿ’ ಎನ್ನುವ ಹೆಸರಿನಿಂದ ಜನರ ಮನದಲ್ಲಿ ನೆಲೆಸಿದ್ದಾರೆ. ಇವರು ಸಂತ ಪದವಿಯನ್ನು ಪಡೆದುಕೊಂಡ ಧಾರ್ಮಿಕ ಬೋಧಕರು. ಪಶುಗಳ ಮೇಲ್ವಿಚಾರಕರು, ಅರ್ಥಾತ್ ಅವುಗಳನ್ನು ಕಾಯುವ, ರಕ್ಷಣೆ ಮಾಡುವ
ಹೊಣೆ ಸಂತ ಅಂಥೋನಿ ಅವರದು ಎನ್ನುವುದು ಇಲ್ಲಿನ ಸ್ಥಳೀಯರ ನಂಬಿಕೆ.

ಹೀಗಾಗಿ ಸಂತರ ಹೆಸರಿನಲ್ಲಿ, ಅವರ ನೆನಪಿಗಾಗಿ ಪ್ರತಿವರ್ಷ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಕಳೆದ ಐನೂರು ವರ್ಷದಿಂದ ನಡೆದುಕೊಂಡು
ಬರುತ್ತಿದೆ. ಧಾರ್ಮಿಕತೆಯನ್ನು ಹೆಚ್ಚಾಗಿ ನಂಬದ, ಆದರೆ ತಮ್ಮ ಟ್ರಡಿಷನ್‌ನಲ್ಲಿ ನಂಬಿಕೆ ಇಟ್ಟಿರುವ ಇನ್ನಷ್ಟು ಸ್ಥಳೀಯರ ಪ್ರಕಾರ, ಇತ್ತೀಚಿನ ಕೊರೋನಾ ಹೋಲುವ ಪಾಂಡೆಮಿಕ್ ೧೮ನೇ ಶತಮಾನದಲ್ಲಿ ಬಂದಿತ್ತಂತೆ. ಆದರೆ ಅದು ಮನುಷ್ಯರಿಗೆ ಬಾರದೆ ಕೇವಲ ಕುದುರೆಗಳಿಗೆ ಬಂದಿತ್ತಂತೆ. ಸಾಲದಕ್ಕೆ ಸಾವಿರಾರು ಕುದುರೆಗಳನ್ನು ಅದು ಬಲಿ ಪಡೆದಿತ್ತಂತೆ!

ಭಯಗೊಂಡ ಅಂದಿನ ಸ್ಥಳೀಯರು ಬೆಂಕಿಯಲ್ಲಿ ಕುದುರೆಗಳನ್ನು ಓಡಿಸುವುದರಿಂದ ಅವು ಪರಿಶುದ್ಧವಾಗುತ್ತವೆ ಎಂದು ನಂಬಿದ್ದರಂತೆ. ಅದೇನು ಕಾಕತಾಳೀಯವೋ, ಹಾಗೆ ಮಾಡಿದ್ದಕ್ಕೆ ಆ ಕುದುರೆಗಳ ರೋಗ ಮಾಯವಾಯಿತಂತೆ!! ಅಂದಿನಿಂದ ಸ್ಥಳೀಯರಲ್ಲಿ ಭಕ್ತಿ, ನಂಬಿಕೆ ಇನ್ನಷ್ಟು ಹೆಚ್ಚಾಗುತ್ತ
ಬಂದಿದೆ. ಹೀಗಾಗಿ ರಸ್ತೆಯಲ್ಲಿ ಬೆಂಕಿ ಹಾಕಿ ಕುದುರೆಗಳನ್ನು ಓಡಿಸುತ್ತಾರೆ. ಐನೂರು ವರ್ಷಗಳ ನಂತರವೂ ಈ ಹಬ್ಬ ಇಂದಿಗೂ ಜೀವಂತವಾಗಿದೆ. ಗಮನಿಸಿ ನೋಡಿ- ಅಂದಿಗೆ ಸ್ಪ್ಯಾನಿಷ್ ಜನತೆಯಲ್ಲಿ ಕೂಡ ಬೆಂಕಿ ಎಂದರೆ ‘ಪ್ಯೂರಿಟಿ’ ಎನ್ನುವ ನಂಬಿಕೆಯಿತ್ತು. ಅದು ಎಲ್ಲವನ್ನೂ ಪರಿಶುದ್ಧ ಗೊಳಿಸುತ್ತದೆ ಎನ್ನುವ ಅಗಾಧ ನಂಬಿಕೆ.

ಇವತ್ತು ಜಗತ್ತು ಛಿದ್ರವಾದ ಮನೆ. ಒಬ್ಬರು ಹೇಳಿದ್ದು ಇನ್ನೊಬ್ಬರಿಗೆ ರುಚಿಸುವುದಿಲ್ಲ, ಎಲ್ಲಕ್ಕೂ ವಿತಂಡವಾದ ಇದ್ದೇ ಇರುತ್ತದೆ. ಎರಡು ವರ್ಷ ಕೋವಿಡ್ ಇದ್ದ ಕಾರಣ ಈ ಹಬ್ಬವನ್ನು ನಡೆಸಿರಲಿಲ್ಲ. ೨೦೨೨ರ ಜನವರಿ ೧೬ರಂದು ಇದನ್ನು ಮತ್ತೆ ಹಳೆಯ ಜೋಶ್‌ನಲ್ಲಿ ನಡೆಸಲಾಯಿತು. ಪ್ರಾಣಿ ದಯಾ ಸಂಘದವರು ಮಾಮೂಲಿನಂತೆ ಇದನ್ನು ಖಂಡಿಸಿ, ‘ಕುದುರೆಗಳಿಗೆ ಹಿಂಸೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದರು. ಮುಂದಿನ ವರ್ಷಗಳಲ್ಲಿ ಇದನ್ನು ಮಾಡಬಾರದು ಎನ್ನುವ ತಗಾದೆ ಇವರದು. ಸ್ಥಳೀಯರು ‘ಐನೂರು ವರ್ಷದಿಂದ ನಡೆಸಿಕೊಂಡು ಬರುತ್ತಿರುವ ಸಂಪ್ರದಾಯ ವನ್ನು ನಿಲ್ಲಿಸುವ ಮಾತೇ ಇಲ್ಲ’ ಎನ್ನುತ್ತಾರೆ.

ಮುಂದುವರಿದು ಸ್ಥಳೀಯನೊಬ್ಬ ಲೈಟರ್ ಹೊತ್ತಿಸಿ ಅದರ ಜ್ವಾಲೆಯ ಮೇಲೆ ವೇಗವಾಗಿ ಕೈ ಆಡಿಸಿ, ‘ನೋಡಿ, ಇದು ನನ್ನ ಸುಟ್ಟಿತೆ?’ ಎಂದು
ಪ್ರಶ್ನಿಸುತ್ತಾನೆ. ‘ಕುದುರೆ ಓಟವು ಕೂಡ ಅಷ್ಟೇ, ವೇಗವಾಗಿ ಸಾಗಿಹೋಗುವುದರಿಂದ ಕುದುರೆಗೆ ಮತ್ತು ಅದರ ಸವಾರನಿಗೆ ಇಬ್ಬರಿಗೂ ಬೆಂಕಿಯಿಂದ ಯಾವುದೇ ಅಪಾಯವಿಲ್ಲ’ ಎನ್ನುತ್ತಾರೆ ಇಲ್ಲಿನವರು. ನಾನು ಸದಾ ಧ್ಯಾನಿಸುವುದು ಒಂದೇ ಮಂತ್ರ! ನಾವೆಲ್ಲಾ ಮೂಲದಲ್ಲಿ ಒಂದೇ ಎನ್ನುವುದೇ ಆ
ಮಂತ್ರ!! ಸ್ಪೇನ್ ಒಂದೇ ಅಂತಲ್ಲ, ಇಟಲಿ, ಫ್ರಾನ್ಸ್, ಪೋರ್ಚುಗಲ್ ಹೀಗೆ ಬಹಳಷ್ಟು ದೇಶಗಳು ಇಂದಿಗೂ ಒಂದಲ್ಲ ಇಂಥ ಹತ್ತಾರು ನಂಬಿಕೆಗಳನ್ನು ಜತನದಿಂದ ಕಾಪಿಟ್ಟುಕೊಂಡು ಬಂದಿವೆ.

ನೂರಾರು ವರ್ಷಗಳಷ್ಟು ಹಿಂದಕ್ಕೆ ಹೋಗಿ ನೋಡಿದರೆ, ನಮ್ಮ ಹಿರಿಯರು ಮತ್ತು ಜಗತ್ತಿನ ಇತರ ಹಿರಿಯರು ಬದುಕಿದ್ದ ರೀತಿಯಲ್ಲಿ ಇದ್ದ ಸಾಮ್ಯತೆ ಅಚ್ಚರಿ ಹುಟ್ಟಿಸುತ್ತದೆ. ಎಲ್ಲಿಯವರೆಗೆ ಹಣವು ಬದುಕನ್ನು ಓವರ್‌ಟೇಕ್ ಮಾಡಿರಲಿಲ್ಲವೋ, ಅಲ್ಲಿಯವರೆಗೆ ಎಲ್ಲವೂ ವ್ಯವಸ್ಥಿತವಾಗಿತ್ತು. ಸಂಗ್ರಹಣೆ ಮತ್ತು ವಸ್ತುವಿಗೆ ಮೌಲ್ಯಕಟ್ಟುವಿಕೆಯಂಥ ಮನುಷ್ಯನ ಕೆಟ್ಟ ಗುಣಗಳು ಸಮಾಜದ ಬದಲಾವಣೆಗೆ ನಾಂದಿಹಾಡಿದವು. ಆದರೂ ಯುರೋಪು
ಇಂದಿಗೂ ತನ್ನ ಹಳೆಯ ಬೇರುಗಳನ್ನು ಬಿಡದ, ಹೊಸತನವನ್ನು ಕೂಡ ಅಪ್ಪಿಕೊಂಡ ಊರು. ಸ್ಪೇನ್, ಇಟಲಿಗಳಲ್ಲಿ ಇಂಗ್ಲಿಷ್ ಕ್ಯಾಲೆಂಡರ್‌ನ ಜತೆಜತೆಗೆ ತಮ್ಮದೇ ಆದ ಕ್ಯಾಲೆಂಡರ್ ಅನ್ನು ಕೂಡ ಉಪಯೋಗಿಸುತ್ತಾರೆ. ನಾವು ತಿಂಗಳುಗಳಿಗೆ ಮಾಘಮಾಸ, ಕಾರ್ತೀಕ, ಪುಷ್ಯ ಎಂದು ಹೇಳು ವಂತೆಯೇ ಇವರು ಕೂಡ ಪ್ರತಿ ತಿಂಗಳಿಗೂ ತಮ್ಮದೇ ಆದ ಹೆಸರನ್ನು ಹೊಂದಿದ್ದಾರೆ.

ಇತ್ತೀಚೆಗೆ ಇಂಥ ಕ್ಯಾಲೆಂಡರ್ ಅಚ್ಚು ಹಾಕಿಸಿ ಹಂಚುವ ಕೆಲಸಗಳು ಕೂಡ ನಡೆಯುತ್ತಿವೆ. ಒಂದು ಜನರೇಷನ್‌ನಿಂದ ನನೆಗುದಿಗೆ ಬಿದ್ದಿದ್ದ ಹಳೆಯ ಸಂಪ್ರದಾಯಗಳು ಹೊಸತನವನ್ನು ಹೊದ್ದು ಮತ್ತೆ ಯುವಜನತೆಯ ಮನಸ್ಸನ್ನು ಆವರಿಸಿಕೊಳ್ಳುತ್ತಿವೆ. ನಾನಿದ್ದದ್ದು ಬಾರ್ಸಿಲೋನಾ ನಗರದಲ್ಲಿ, ಮ್ಯಾಡ್ರಿಡ್ ನಗರಕ್ಕೆ ಐನೂರು ಕಿ.ಮಿ. ದೂರದಲ್ಲಿ. ಬಾರ್ತಲೋಮೆ ದೆ ಪಿನಾರೆಸ್‌ಗೆ ಬರೋಬ್ಬರಿ ೬೦೦ ಕಿಲೋಮೀಟರ್! ಲೆಕ್ಕವಿಲ್ಲದಷ್ಟು ಬಾರಿ
ಮ್ಯಾಡ್ರಿಡ್‌ಗೆ ಬುಲೆಟ್ ಟ್ರೈನ್‌ನಲ್ಲಿ ಪ್ರಯಾಣಿಸಿದ್ದೇನೆ. ಎರಡು ತಾಸಿನಲ್ಲಿ ಪ್ರಯಾಣ ಖತಂ!

ದೂರವೆಂಬುದು ನನಗೆ ಎಂದಿಗೂ ಮಾಪನವಾಗಿಲ್ಲ; ಹೋಗಬೇಕು, ನೋಡಬೇಕು ಎಂದರೆ ‘ಜೈ’ ಎಂದು ಹೊರಟುಬಿಡುವುದು ನನ್ನ ಗುಣ. ಲಾಸ್ ಲ್ಯೂಮಿನಾರಿಯಸ್ ಕಣ್ಣಾರೆ ಕಂಡು ನೂರಾರು ವರ್ಷದ ಪರಂಪರೆಗೆ ಸಾಕ್ಷಿಯಾಗಿದ್ದೇನೆ. ಈಗ ಮರಳಿ ಮೊದಲ ಸಾಲುಗಳನ್ನು ಓದಿ. ನಮ್ಮ ನಂಬಿಕೆ ಇತರರಿಗೆ ಮೂಢನಂಬಿಕೆ ಎನಿಸಬಹುದು, ಅವರ ನಂಬಿಕೆ ನಮಗೆ ಬಾಲಿಶ ಎನಿಸಬಹುದು. ಜಗತ್ತು ಸುತ್ತುತ್ತ ನೂರಾರು ನಂಬಿಕೆ ಕಂಡ ಮೇಲೆ ಅನ್ನಿಸಿದ್ದು- ಒಬ್ಬರ ಭಾವನೆಯನ್ನು ಇನ್ನೊಬ್ಬರು ಗೌರವಿಸುವುದು ಕಲಿತಾಗ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಅಂತ. ಇನ್ನು ಕಾದಾಡಬೇಕು ಎಂದು ಮನಸ್ಸು ಮಾಡಿಕೊಂಡರೆ ಕಾರಣಕ್ಕೇನು ಕೊರತೆ ಅಲ್ಲವೇ? ಒಬ್ಬರನ್ನೊಬ್ಬರು ಗೌರವಿಸುವುದನ್ನು ಕಲಿಯುವುದು ಇಂದಿನ ತುರ್ತು ಅಗತ್ಯಗಳಲ್ಲಿ
ಮೊದಲನೆಯದು.

Leave a Reply

Your email address will not be published. Required fields are marked *

error: Content is protected !!