Sunday, 15th December 2024

ನಿಯಮಗಳು ಸಡಿಲವಾದರೂ ನಿಯತ್ತು ತೋರದ ಅಧಿಕಾರಿಗಳು !

ಗಂಟಾಘೋಷ

ಗುರುರಾಜ್ ಗಂಟಿಹೊಳೆ

ಕಡಲತಡಿಯ ಮಕ್ಕಳ ಜೀವ ಹಿಂಡುತ್ತಿದ್ದ ಸಿಆರ್‌ಜಡ್ ನಿಯಮ ಬದಲಾದರೂ, ಸಂಬಂಽತ ಇಲಾಖೆ ಮತ್ತು ಅಧಿಕಾರಿಗಳು ಜನರ ಜೀವ ಮತ್ತು ಜೀವನ ಹಿಂಡುವುದನ್ನು ಮಾತ್ರ ಬಿಟ್ಟಿಲ್ಲ.

ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ದೇಶ ೩೦ಕ್ಕೂ ಹೆಚ್ಚು ರಾಜ್ಯಗಳು, ನೂರಾರು ಭಾಷೆಗಳು ಮತ್ತು ಸಾವಿರಾರು ಸಂಸ್ಕೃತಿಗಳ ಸಂಗಮ ವಾಗಿರುವುದು ಕೂಡ ಒಂದು ಹೆಮ್ಮೆಯ ವಿಚಾರ. ಇಂಥ ದೇಶ ಒಟ್ಟು ೭೫೧೬.೬ ಕಿ.ಮೀ. ಕರಾವಳಿಯನ್ನು ಹೊಂದಿದ್ದು, ಪಶ್ಚಿಮಕ್ಕೆ ಅರಬ್ಬಿ ಸಮುದ್ರ, ಹಿಂದೂ ಮಹಾಸಾಗರ ಮತ್ತು ಪೂರ್ವಕ್ಕೆ ಬಂಗಾಳ ಕೊಲ್ಲಿ ಗಡಿಯ ಮೂಲಕ ಒಂಬತ್ತು ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿ ವ್ಯಾಪಿಸಿದೆ.

ಮತ್ತೆ ಇಲ್ಲಿ ಕರಾವಳಿ ರಾಜ್ಯಗಳನ್ನು ಯಾಕೆ ಪ್ರಸ್ತಾಪಿಸಬೇಕಾಯಿತೆಂದರೆ, ಕರಾವಳಿ ಗಡಿ ಹೊಂದಿರುವ ರಾಜ್ಯಗಳು, ಅಲ್ಲಿನ ಜನರು ಸಿಆರ್‌ಜಡ್ ಎಂಬ ಶಬ್ದ ಕೇಳಿದರೂ ಸಾಕು, ಅದು ಬೆಚ್ಚಿಬೀಳುವಂತೆ ಮಾಡುತ್ತದೆ. ಅಧಿಕಾರಕ್ಕೆ ಬರುವ ಎಲ್ಲ ಸರಕಾರಗಳು ಅಭಿವೃದ್ಧಿ ಕುರಿತು ಮಾತಾಡುತ್ತವೆ. ಆದರೆ, ಈ
ಸಿಆರ್‌ಜಡ್ ಕಾನೂನುಗಳು ಅದೆಷ್ಟು ಕಂಟಕಪ್ರಾಯವಾಗಿ ಕಾಡುತ್ತಿವೆ ಎಂದರೆ, ಕರಾವಳಿ ಭಾಗದ ಜನರು ಈ ಕುಣಿಕೆ ಹಗ್ಗದಂಥ ನಿಯಮದ ಹೆಸರು ಕೇಳಿದರೂ ಸಾಕು ‘ಅಯ್ಯೋ ದರಿದ್ರವೇ’ ಎಂದು ಶಪಿಸುತ್ತಾರೆ.

ಹೌದು, ಕಾನೂನು ನಿಯಮ ಗಳು ಜನರ ಪರವಾಗಿ ರೂಪಿತವಾದರೆ ಜನಹಿತವಾಗಿ ಕೆಲಸ ಮಾಡುತ್ತವೆ. ಇಲ್ಲವಾದರೆ ಅವು ಜನಸಾಮಾನ್ಯರನ್ನೇ ಕಾಡುತ್ತವೆ ಎಂಬುದಕ್ಕೆ ಈ ಸಿಆರ್‌ಜಡ್ ನಿಯಮಗಳೇ ಸಾಕ್ಷಿ. ಕಡಲತಡಿಯ ಮಕ್ಕಳು ಒಂದು ಪುಟ್ಟ ಮನೆ ಕಟ್ಟಬೇಕಾದರೂ, ಈ ಸಿಆರ್‌ಜಡ್ ಪರವಾನಗಿ ಪಡೆಯಬೇಕು. ಪಾಪದ ಮುಗ್ಧ ಜನರು ಕೈಬರಹದ ಪತ್ರ ಹಿಡಿದು, ಪಂಚಾಯ್ತಿ ಮುಂದೆ ನಿಲ್ತಾರೆ. ಕೆಲಸ ಆಗದ್ದನ್ನು ಕಂಡು ಶಾಸಕರ ಕಚೇರಿಗೆ ಸಾಗುತ್ತಾರೆ. ಅವರಿಗೇನು ಗೊತ್ತು, ಸಿಆರ್‌ಜಡ್ ಕಚೇರಿಗೆ ಹೋಗಿ ವರ್ಷಗಟ್ಟಲೇ ಧೂಳು ತಿನ್ನುತ್ತ ಕುಳಿತುಬಿಡುವ ಕತೆ. ಇವುಗಳನ್ನು ಮಾಡಿರುವ ಉದ್ದೇಶ ಒಳಿತಾದರೂ ಸ್ಥಳೀಯವಾಗಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳಿಗೆ ಬಹುದೊಡ್ಡ ತಡೆಗೋಡೆಯಂತೆ ಈ ಕಾನೂನುಗಳು
ಅಡ್ಡ ನಿಂತುಬಿಡುತ್ತವೆ.

ವಿಶ್ವದ ಬಹುತೇಕ ಸಮೃದ್ಧ ರಾಷ್ಟ್ರಗಳು ತಮ್ಮ ಕಡಲತಡಿಯನ್ನು ಅಗಾಧ ಲಾಭದಾಯಕ ಮತ್ತು ಜನಪ್ರಿಯ ಪ್ರವಾಸಿ ತಾಣಗಳನ್ನಾಗಿ ಮಾಡಿವೆ. ನಾವು ಈ ವಿಚಾರವಾಗಿ ಏನಾದರೊಂದು ಕೆಲಸಗಳನ್ನು ಮಾಡಬೇಕೆಂದರೂ ಈ ಸಿಆರ್‌ಜಡ್ ಕಟ್ಟಳೆಯ ಮುಂದೆ ಕೈಕಟ್ಟಿ ವರ್ಷಗಟ್ಟಲೇ ಕಾಯುತ್ತ ಕುಳಿತು ಕೊಳ್ಳಬೇಕು. ಅಷ್ಟಕ್ಕೂ ಈ ಸಿಆರ್ ಜಡ್ (ಕೋಸ್ಟಲ್ ರೆಗ್ಯುಲೇಷನ್ ಝೋನ್) ಅಂದರೇನು ಮತ್ತು ಅಭಿವೃದ್ಧಿ ಕೆಲಸಕ್ಕೆ ಯಾಕೆ ತಡವಾಗುತ್ತಿದೆ ಎಂಬು ದನ್ನು ಗಮನಿಸೋಣ. ೭೦೦೦ ಕಿಲೋಮೀಟರ್‌ಗಿಂತಲೂ ಹೆಚ್ಚು ಕರಾವಳಿಯನ್ನು ಹೊಂದಿರುವ ಭಾರತವು ಅತಿ ಉದ್ದದ ಕರಾವಳಿ ಹೊಂದಿರುವ ವಿಶ್ವದ ದೇಶಗಳಲ್ಲಿ ೨೦ನೇ ಸ್ಥಾನದಲ್ಲಿದೆ. ಕರಾವಳಿ ಪರಿಸರ ಮತ್ತು ಪರಿಸರ ವಿಜ್ಞಾನವನ್ನು ಸಂರಕ್ಷಿಸಲು, ಭಾರತ ಸರಕಾರ ೧೯೯೧ರಲ್ಲಿ ಕರಾವಳಿ ನಿಯಂತ್ರಣ ವಲಯವನ್ನು (ಸಿಆರ್‌ಜಡ್) ಪ್ರಾರಂಭಿಸಿತು. ಇದನ್ನು ಪರಿಸರ ಮತ್ತು ಅರಣ್ಯ ಸಚಿವಾಲಯ (MoEF) ನಿರ್ವಹಿಸುತ್ತದೆ.

ಅಧಿಸೂಚನೆಯ ಪ್ರಕಾರ, ಹೈ ಟೈಡ್ ಲೈನ್ (HTL)ನಿಂದ ೫೦೦ ಮೀ.ವರೆಗಿನ ಕರಾವಳಿ ಭೂಮಿ ಮತ್ತು ಉಬ್ಬರವಿಳಿತದ ಏರಿಳಿತಗಳಿಗೆ ಒಳಪಟ್ಟಿರುವ ತೊರೆಗಳು, ನದಿಮುಖಗಳ ಹಿನ್ನೀರು ಮತ್ತು ನದಿಗಳ ದಡದಲ್ಲಿ ೧೦೦ ಮೀಟರ್‌ನ ಹಂತವನ್ನು ಕರಾವಳಿ ನಿಯಂತ್ರಣ ವಲಯ (ಸಿಆರ್‌ಜಡ್) ಎಂದು ಕರೆಯಲಾಗುತ್ತದೆ.

ಕರಾವಳಿ ನಿಯಂತ್ರಣ ವಲಯದ ವರ್ಗೀಕರಣ: ೧೯೯೧ರ ಸಿಆರ್‌ಜಡ್ ಅಧಿಸೂಚನೆ ಪ್ರಕಾರ ೨೦೦೩ರವರೆಗೆ ದೇಶದಾದ್ಯಂತ ಕರಾವಳಿ ನಿಯಂತ್ರಣ ವಲಯವನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಅವೆಂದರೆ- ೧. ಸಿಆರ್‌ಜಡ್-೧: ಪರಿಸರ ಸೂಕ್ಷ್ಮ ಮತ್ತು ಕರಾವಳಿಯಲ್ಲಿ ಪರಿಸರ ವ್ಯವಸ್ಥೆ ಯನ್ನು ನಿರ್ವಹಿಸಲು ಅಗತ್ಯವಾದ ಪ್ರದೇಶಗಳು. (ನೈಸರ್ಗಿಕ ಅನಿಲದ ಪರಿಶೋಧನೆ, ಉಪ್ಪಿನ ಹೊರತೆಗೆಯುವಿಕೆಗೆ ಮಾತ್ರ ಅನುಮತಿ.)

೨. ಸಿಆರ್‌ಜಡ್-೨: ಕರಾವಳಿ ತೀರದವರೆಗೆ ಅಭಿವೃದ್ಧಿ ಹೊಂದಿದ ಪ್ರದೇಶಗಳು. (ಅನುಮತಿ: ಮಾರ್ಗಸೂಚಿಗಳ ಪ್ರಕಾರ ಮಾತ್ರ ನಿರ್ಮಾಣ. ಅಸ್ತಿತ್ವದಲ್ಲಿರುವ ಅಧಿಕೃತ ಕಟ್ಟಡಗಳ ಪುನರ್ನಿರ್ಮಾಣ).

೩. ಸಿಆರ್‌ಜಡ್-೩: (ಸಿಆರ್‌ಜಡ್-೧ ಮತ್ತು ಸಿಆರ್‌ಜಡ್-೨ ಅಡಿಯಲ್ಲಿ ಬರದ) ನಗರ ಮತ್ತು ಗ್ರಾಮೀಣ ಪ್ರದೇಶಗಳು ಸಿಆರ್ ಜಡ್-೩ ಅಡಿಯಲ್ಲಿ ಬರುತ್ತವೆ. ಪುರಸಭೆಗೆ ಹಂಚಿಕೆಯಾದ ಪ್ರದೇಶಗಳಾಗಿವೆ. (ಅನುಮತಿ: ಕೃಷಿ, ತೋಟಗಾರಿಕೆ, ಹುಲ್ಲುಗಾವಲು, ಉದ್ಯಾನಗಳು, ಆಟದ ಮೈದಾನಗಳು, ಅರಣ್ಯ ಮತ್ತು ಸಮುದ್ರದ ನೀರಿನಿಂದ ಉಪ್ಪು ತಯಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳು ಮಾತ್ರ. ಅಸ್ತಿತ್ವದಲ್ಲಿರುವ ಅಧಿಕೃತ ರಚನೆಗಳ ದುರಸ್ತಿ ಹೊರತುಪಡಿಸಿ ಈ ವಲಯದಲ್ಲಿ ಯಾವುದೇ ಹೊಸ ನಿರ್ಮಾಣವನ್ನು ಅನುಮತಿಸಲಾಗುವುದಿಲ್ಲ ಮತ್ತು ಸಾರ್ವಜನಿಕ ಸೌಲಭ್ಯಗಳ ನಿರ್ಮಾಣ ಮಾತ್ರ).

೪. ಸಿಆರ್‌ಜಡ್-೪: (ಸಿಆರ್‌ಜಡ್-೧, ಸಿಆರ್‌ಜಡ್-೨ ಮತ್ತು ಸಿಆರ್‌ಜಡ್-೩ ಎಂದು ಗೊತ್ತುಪಡಿಸಿದನ್ನು ಹೊರತುಪಡಿಸಿ) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ ಮತ್ತು ಸಣ್ಣ ದ್ವೀಪಗಳಲ್ಲಿ ಕರಾವಳಿ ವ್ಯಾಪಿಸಿದೆ. (ಅನುಮತಿ: ಕಡಲ ತೀರಗಳು ಮತ್ತು ಕರಾವಳಿ ನೀರಿನಿಂದ ಹವಳಗಳು ಮತ್ತು ಮರಳನ್ನು ನಿರ್ಮಾಣ ಮತ್ತು ಉದ್ದೇಶಗಳಿಗಾಗಿ ಬಳಸುವಂತಿಲ್ಲ.

ಹವಳದ ರಚನೆಗಳಲ್ಲಿ ಮತ್ತು ಅದರ ಸುತ್ತಲೂ ಡ್ರೆಡ್ಜಿಂಗ್ ಮಾಡುವ ಮತ್ತು ನೀರೊಳಗಿನ ಬ್ಲಾಸ್ಟಿಂಗ್‌ಗೆ ಅನುಮತಿಸಲಾಗಿಲ್ಲ). ಹೀಗೆ ಹತ್ತು ಹಲವು ಮಾನದಂಡಗಳನ್ನು, ನೀತಿ ನಿಯಮಗಳನ್ನು ಹೇರುವ ಮೂಲಕ ಪರಿಸರ, ಕಡಲು ರಕ್ಷಣೆಗೆ ಮುಂದಾಗಿದ್ದಾರೆ ಎಂದುಕೊಂಡರೂ ಸ್ಥಳೀಯರಿಗೆ ಉದ್ಯೋಗ, ಪ್ರವಾಸೋದ್ಯಮ ಬೆಳೆಸಲು ಅವಕಾಶ ಮತ್ತು ಅಗತ್ಯಕ್ಕೆ ತಕ್ಕಂತೆ ಮಾಡಬೇಕಾದ ಕಟ್ಟಡ ಹಾಗೂ ಇತರೆ ಪ್ರಗತಿ ಕಾರ್ಯಗಳಿಗೆ ಈ ಮೇಲಿನ ನಿಯಮಗಳು ಅದ್ಯಾವ ಪರಿ ಕಾಡುತ್ತವೆಯೆಂದರೆ, ಸ್ಥಳೀಯವಾಗಿ ಎಷ್ಟೋ ಬಾರಿ ಈ ಕುರಿತಂತೆ ಹೋರಾಟ, ಪ್ರತಿಭಟನೆಗಳಾಗಿವೆ.

ಆಳುವ ಸರಕಾರಗಳು ಕೂಡ ತಮ್ಮ ತಾರತಮ್ಯನೀತಿ ಮನದಲ್ಲಿ ಟ್ಟುಕೊಂಡು ಈ ವಿಷಯಗಳನ್ನು ನೋಡುತ್ತಿರುವುದರಿಂದ ಕರಾವಳಿ ಮಕ್ಕಳಿಗೆ ಸಕಾಲದಲ್ಲಿ ಸಹಾಯ ಮಾಡುವುದಂತೂ ದೂರವೇ ಉಳಿಯಿತು. ಕರ್ನಾಟಕದಲ್ಲಿ ಈ ಕತೆಯಾದರೆ ಉಳಿದ ಕರಾವಳಿ ರಾಜ್ಯಗಳಲ್ಲೇನೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಆದರೆ, ಅಲ್ಲಿನ ಜನೋಪಯೋಗಿ, ಜನಪರ ಸರಕಾರಗಳು, ಸ್ಥಳೀಯ ಅಧಿಕಾರಿಗಳು ಒಗ್ಗಟ್ಟಾಗಿ ಈ ಸಿಆರ್‌ಜಡ್ ನಿಯಮಗಳನ್ನು ತಮಗೆ ಅನುಕೂಲ ವಾಗುವಂತೆ ಸತತ ಪ್ರಯತ್ನದ ಮೂಲಕ ಬದಲಾಯಿಸಿಕೊಂಡರು.

ಈ ಸಾಲಿನಲ್ಲಿ ಗೋವಾ ಮತ್ತು ಕೇರಳ ರಾಜ್ಯಗಳು ವಿಭಿನ್ನವಾಗಿ ನಿಲ್ಲುತ್ತವೆ. ಈ ವಿಷಯದಲ್ಲಿ ಸ್ಥಳೀಯ ಜನಪ್ರತಿನಿಧಿತ್ವದಲ್ಲಿ ಸತತ ಪ್ರಯತ್ನ ಮತ್ತು ಸಂಘರ್ಷ ಇದ್ದೇ ಇತ್ತು ಮತ್ತು ಈಗಲೂ ಇದೆ. ಈ ಹಿಂದೆ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವಿದ್ದಾಗ, ಈ ಸಿಆರ್‌ಜಡ್ ವಿಚಾರವನ್ನು ಗಂಭೀರ ವಾಗಿ ಪರಿಗಣಿಸಿ, ನೀತಿ ನಿಯಮಗಳನ್ನು ಗೋವಾ-ಕೇರಳ ಮಾದರಿಯಂತೆ ಸಡಿಲಿಕೆ ಮಾಡುವಲ್ಲಿ ಹೆಚ್ಚೇ ಪ್ರಯತ್ನಪಟ್ಟಿತ್ತು. ವಿವಿಧ ಯೋಜನೆಗಳ ಉದ್ಘಾಟನೆಗಾಗಿ ಮಂಗಳೂರಿಗೆ ಆಗಮಿಸಿದ್ದ ಅಂದಿನ ಮುಖ್ಯಮಂತ್ರಿ ಬೊಮ್ಮಾಯಿ ಅವರು, ೨೦೨೨ ಜುಲೈ ೨೬ರಂದು ಮಾತನಾಡುತ್ತ, ’ನಮ್ಮ ಸರಕಾರ ಸಲ್ಲಿಸಿದ State’s revised draft Coastal Regulatory Zone (CRZ) Master Plan ಅನ್ನು ಕೇಂದ್ರ ಸರಕಾರವು ಒಪ್ಪಿ, ಅನುಮತಿ ನೀಡಿದೆ. ಇದು ನಿರೀಕ್ಷೆ ಯಂತೆ ಜಾರಿಯಾದಲ್ಲಿ ಮೀನುಗಾರಿಕೆ, ಬೀಚ್‌ನಲ್ಲಿ ಆರ್ಥಿಕ ಚಟುವಟಿಕೆಗಳ ಜತೆಗೆ ಪ್ರವಾಸ ಮತ್ತು ಹೋಟೆಲ್ ಉದ್ಯಮಗಳಿಗೂ ಹೊಸ ಚೈತನ್ಯ ನೀಡಿದಂತಾಗುತ್ತದೆ’ ಎಂದರು.

ಬಳಿಕ ಸಿಆರ್‌ಜಡ್ ಕುರಿತು ಆರು ಸದಸ್ಯರ ಸಮಿತಿಯನ್ನು ಜೂನ್ ೨೦೧೪ರಲ್ಲಿ ರಚಿಸಲಾಯಿತು. ಶೈಲೇಶ್ ನಾಯಕ್ ಸಮಿತಿಯು ರಾಜ್ಯ ಸರಕಾರಗಳು ಮತ್ತು ಇತರೆ ಮಧ್ಯಸ್ಥಗಾರರೊಂದಿಗೆ ವ್ಯಾಪಕ ಸಮಾಲೋಚನೆಗಳನ್ನು ನಡೆಸಿ, ಜನವರಿ ೨೦೧೫ರಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾ ವಣೆ ಸಚಿವಾಲಯಕ್ಕೆ (MOEF & CC) ವರದಿಯನ್ನು ಸಲ್ಲಿಸಿತ್ತು. ವರದಿಯ ಪ್ರಕಾರ, ಇದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಸರಕಾರಗಳಿಗೆ ಅಧಿಕಾರಗಳ ವಿಕೇಂದ್ರೀಕರಣವನ್ನು ಪ್ರಸ್ತಾಪಿಸುತ್ತದೆ. ಶೈಲೇಶ್ ನಾಯಕ್ ಸಮಿತಿ ವರದಿಯು ಕರಾವಳಿ ಪ್ರದೇಶ ಗಳಲ್ಲಿನ ವಿಸ್ತರಣೆಯ ಮೇಲಿನ ಪ್ರಸಕ್ತ ನಿರ್ಬಂಧಗಳನ್ನು ಸಡಿಲಿಸುವ ಮಾರ್ಗವಾಗಿ ಕರಾವಳಿ ನಿಯಂತ್ರಣ ವಲಯಗಳಲ್ಲಿ ವಸತಿ, ಮೂಲ ಸೌಕರ್ಯ ಮತ್ತು ಕೊಳೆಗೇರಿ ಪುನರಾಭಿವೃದ್ಧಿ ಚಟುವಟಿಕೆಗಳು, ಪ್ರವಾಸೋದ್ಯಮ, ಬಂದರುಗಳು ಮತ್ತು ಮೀನುಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಅನುಮತಿ ನೀಡಲು ಸಲಹೆ ನೀಡಿದೆ.

ಸಮಿತಿಯ ಶಿಫಾರಸುಗಳನ್ನು ಆಧರಿಸಿ, ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸಲಹೆಗಳನ್ನು ಪಡೆದು ಕೊಂಡು ಸಿಆರ್‌ಜಡ್ ೨೦೧೮ ಅಧಿಸೂಚನೆಗಳನ್ನು ಹೊರಡಿಸುವ ಮೂಲಕ, ಕೇಂದ್ರ ಸಚಿವ ಸಂಪುಟವು ಆ ಕರಡು ಅಧಿಸೂಚನೆಗೆ ಅನುಮೋದನೆ ನೀಡಿತು. ಆನಂತರವೇ MOEF & CC ಜನವರಿ ೨೦೧೯ರಲ್ಲಿ ಹೊಸ ಸಿಆರ್‌ಜಡ್ ಮಾನದಂಡಗಳನ್ನು ಸೂಚಿಸಿತು. ಇದಾಗಿ, ಹೊಸ ರಾಜ್ಯ ಸರಕಾರ ಬಂದರೂ ಮತ್ತದೇ ತಗಾದೆ ಗಳು, ತಕರಾರುಗಳನ್ನು ಹೊದ್ದು ಮಲಗಿದ ಸ್ಥಳೀಯ ಆಡಳಿತ ವ್ಯವಸ್ಥೆಯಿಂದಾಗಿ, ರಾಜ್ಯದಲ್ಲಿಯೇ ವಿಶಿಷ್ಟವಾದ ಕರಾವಳಿ ಭಾಗ ಹೊಂದಿರುವ ಒಂದು ಭಾಗದ ಅಭಿವೃದ್ಧಿಯು ತಿರುಕನ ಕನಸೇನೋ ಎಂಬಂತೆ ಜನರು ಶಪಿಸುತ್ತ ಕಾಲ ತಳ್ಳುತ್ತಿದ್ದಾರೆ.

ಜನರು ಪ್ರಶ್ನಿಸಿದಾಗ, ಮತ್ತದೇ ಸಿಆರ್‌ಜಡ್ ಕುಂಟುನೆಪಗಳನ್ನು ಹೇಳುತ್ತ ಹೊದ್ದು ಮಲಗುವ ಸ್ಥಳೀಯ ಆಡಳಿತ ಯಂತ್ರಕ್ಕೆ ಚಾಟಿ ಬೀಸುವ ಕೆಲಸ ತುರ್ತಾಗಿ ಆಗಬೇಕಿದೆ. ಈ ಮೂಲಕ, ಈ ಕೆಳಗಿನ ವಿಚಾರಗಳು ಜಾರಿಯಾದಲ್ಲಿ ದೇಶದಲ್ಲೇ ವಿಭಿನ್ನ ಕರಾವಳಿ ಹೊಂದಿರುವ ನಮ್ಮ ರಾಜ್ಯಕ್ಕೆ ಈ ಭಾಗವು ಮುಕುಟಪ್ರಾಯವಾಗುವ ಸುಸಂದರ್ಭ ಒದಗಿಬರುತ್ತದೆ. ಅ) ಚೆನೈನಲ್ಲಿರುವ ಪ್ರಾದೇಶಿಕ ಕಚೇರಿಯಿಂದ ತ್ವರಿತವಾಗಿ ಬದಲಾವಣೆಯ ನೋಟಿಫಿಕೇಷನ್ ಜಾರಿಗೊಳಿಸಬೇಕು. ಆ) ೫ ತಾಲೂಕುಗಳಲ್ಲಿರುವ ಸುಮಾರು ೯೬ಕ್ಕೂ ಹೆಚ್ಚು ಗ್ರಾಮಗಳನ್ನು ಏಕರೂಪ ನಿಯಂತ್ರಣ ವಲಯ(ಸಿಆರ್‌ಜಡ್)ಕ್ಕೆ ಸೇರಿಸಿ ಅಭಿವೃದ್ಧಿ, ಮೀನುಗಾರರ ಬದುಕಿಗೆ ಸಹಾಯವಾಗುವಂಥ ನಿಬಂಧನೆಗಳನ್ನು ರೂಪಿಸಬೇಕು.

ಇ) ಮೀನುಗಾರರು, ಸ್ಥಳೀಯರ ಮನೆಗಳ ನವೀಕರಣ/ಹೊಸ ಕಟ್ಟಡಕ್ಕೆ ನೀಡಬೇಕಾದ ಪರವಾನಗಿ ಇತ್ಯಾದಿಗಳಿಗಾಗಿ ಮತ್ತು ಪ್ರವಾಸೋದ್ಯಮದ ಉತ್ತೇಜನಕ್ಕೆ ತ್ವರಿತವಾಗಿ ಸ್ಪಂದಿಸಲು ರಾಜ್ಯ ಮಟ್ಟದ ಪ್ರಾದೇಶಿಕ ಕಚೇರಿ ತೆರೆದು, ಚೆನ್ನೈ ನಿಯಂತ್ರಣದಿಂದ ಹೊರಬರಬೇಕು.
ಈ) ೫೦೦ ಮೀ. HTL ನಿರ್ಬಂಧವನ್ನು ಈಗ ೨೦೦ ಮೀ.ಗೆ (ಕೆಲವೊಂದು ಕಡೆ ೫೦ ಮೀ. ಇಳಿಸಲಾಗಿದೆ) ಸಡಿಲಗೊಳಿಸಿರುವುದನ್ನು ಸಮರ್ಪಕವಾಗಿ ಜಾರಿಗೆ ತರಬೇಕು.

ಉ) ಎಲ್ಲಕ್ಕಿಂತ ಮೇಲಾಗಿ, ಎಂದೋ ಮಾಡಿದ ನಿಯಮಗಳು ಇಂದಿನ ಜನಸಂಖ್ಯೆಗೆ ಮತ್ತು ಸ್ಥಳೀಯ ಮೀನುಗಾರರ ಬದುಕಿಗೆ ವ್ಯತಿರಿಕ್ತವಾಗಿದ್ದು, ಇದನ್ನು ತುರ್ತಾಗಿ ಸರಿಪಡಿಸುವ ಕೆಲಸವಾಗಬೇಕು.

ಊ) ಜಿಲ್ಲಾಧಿಕಾರಿಗಳ ಅಧಿಕಾರ ವ್ಯಾಪ್ತಿಗೆ ಈ ಎಲ್ಲ ಕಾರ್ಯಗಳು ಬರುವುದರಿಂದ ಜನರ ಬದುಕಿಗೆ ಪೂರಕವಾಗಿ ಕಾರ್ಯನಿರ್ವಹಿಸಲು ಅವರ ಆದ್ಯತೆಗಳು ಜಾರಿಯಾಗಬೇಕು. ಯಾವೊಂದೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದಂಥ ಸಿಆರ್‌ಜಡ್-೩ಕ್ಕೆ ನಮ್ಮ ಕರ್ನಾಟಕ ಕರಾವಳಿಯನ್ನು ಸೇರಿಸುವ ಮೂಲಕ ಜನತೆಯ ಬದುಕಿಗೆ ಅನ್ಯಾಯವೆಸಗಿದ್ದಾರೆ. ನಮ್ಮ ರಾಜ್ಯಕ್ಕಿಂತಲೂ ಹೆಚ್ಚು HTL ಇರುವ ಗೋವಾ ಕರಾವಳಿಯನ್ನು ಸಿಆರ್‌ಜಡ್-೧ ಅಡಿಯಲ್ಲಿ ಪರಿಗಣಿಸಲಾಗಿದೆ. ಇನ್ನು ಕೇರಳ ರಾಜ್ಯವು ತನ್ನದೇ ಕೆಲ ಉಪನಿಯಮಗಳನ್ನು ಈ ಕಾನೂನಿಗೆ ಸೇರಿಸುವ ಮೂಲಕ, ತನಗೆ ಸಹಾಯ ವಾಗುವ ರೀತಿಯಲ್ಲಿ ಸದುಪಯೋಗ ಮಾಡಿಕೊಳ್ಳುತ್ತಿದೆ.

ಆದರೆ, ನಮ್ಮ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ, ಇದಕ್ಕೆ ತಿದ್ದುಪಡಿ ತಂದು, ಕೇಂದ್ರ ಮಟ್ಟದಲ್ಲಿ ಅನುಮತಿ ಪಡೆದರೂ ಸ್ಥಳಿಯ ಅಧಿಕಾರಿ ವರ್ಗ,
ಸಂಬಂಧಿಸಿದ ಇಲಾಖೆ ಕೆಲ ತಾಂತ್ರಿಕ ತೊಡಕುಗಳ ಕುಂಟುನೆಪ ಹೇಳುತ್ತಿವೆ. ಸಾಮಾನ್ಯ ಜನತೆಯ ಪರವಾಗಿ ಸೇವೆ ಸಲ್ಲಿಸಬೇಕಾದವರೇ ಅವರ ತೆರಿಗೆ ಯಲ್ಲಿ ಸಂಬಳ ಪಡೆಯುತ್ತ ಅದೇ ಜನರಿಗೆ ದ್ರೋಹವೆಸಗುತ್ತಿದ್ದಾರೆ. ಸಿಆರ್‌ಜಡ್‌ಗೆ ಸಂಬಂಧಿಸಿದ ಕ್ರಮಗಳನ್ನು ಸರಕಾರ ಇನ್ನಾದರೂ ಸೂಕ್ತವಾಗಿ ಜಾರಿಗೆ ತರದಿದ್ದರೆ, ಜನರೇ ಉಗ್ರವಾಗಿ ಪ್ರತಿಭಟಿಸುವ ಸಿದ್ಧತೆಯಲ್ಲಿದ್ದಾರೆ ಎಂಬುದನ್ನು ಈ ಮೂಲಕ ತಿಳಿಸಲಿಚ್ಛಿಸುತ್ತೇನೆ.