Saturday, 14th December 2024

ಅವರು ತಬ್ಬಿಕೊಂಡರೆ ಇವರಿಗೇಕೆ ಅಷ್ಟೊಂದು ಚಿಂತೆ ?

ಸಂಗತ

ಡಾ.ವಿಜಯ್ ದರಡಾ

ಇತ್ತೀಚೆಗೆ ಪ್ರಧಾನಿ ಮೋದಿ ರಷ್ಯಾಕ್ಕೆ ಹೋದಾಗ ಅಲ್ಲಿನ ಅಧ್ಯಕ್ಷ ಪುಟಿನ್‌ಗೆ ಬೆಚ್ಚಗಿನ ಸ್ನೇಹಶೀಲ ಅಪ್ಪುಗೆ ನೀಡಿದ್ದರು. ಅದು ಪಾಶ್ಚಾತ್ಯ ದೇಶಗಳನ್ನು ಸಿಟ್ಟಿಗೇಳಿಸಿದೆ. ಚೀನಾ ಕೂಡ ಈ ಅಪ್ಪುಗೆಯಿಂದ ಚಿಂತೆಗೆ ಬಿದ್ದಿದೆ. ಮೋದಿ ತಪ್ಪು ಮಾಡಿದರಾ? ಅಥವಾ ಪಾಶ್ಚಾತ್ಯ ದೇಶಗಳು ಈ ಸ್ನೇಹವನ್ನು ಪೂರ್ವಗ್ರಹ ದಿಂದ ನೋಡುತ್ತಿವೆಯಾ?

ಅದೊಂದು ಅಪ್ಪುಗೆ ಜಗತ್ತಿನೆಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಅಮೆರಿಕ ಒಂದು ರೀತಿ, ಯುರೋಪಿಯನ್ ದೇಶಗಳು ಇನ್ನೊಂದು ರೀತಿ, ಚೀನಾ ಮತ್ತೊಂದು ರೀತಿ ಹಾಗೂ ಉಕ್ರೇನ್ ಮಗದೊಂದು ರೀತಿಯಲ್ಲಿ ಇದನ್ನು ವ್ಯಾಖ್ಯಾನಿಸುತ್ತಿವೆ. ಇಷ್ಟಕ್ಕೂ ಪ್ರಧಾನಿ ನರೇಂದ್ರ ಮೋದಿ ರಷ್ಯಾಕ್ಕೆ ಹೋದಾಗ ಅಲ್ಲಿನ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರನ್ನು ಸ್ನೇಹದಿಂದ ತಬ್ಬಿಕೊಂಡಿದ್ದು ಜಗತ್ತಿನಾದ್ಯಂತ ಇಷ್ಟೊಂದು ಸುದ್ದಿಯಾಗುತ್ತಿರುವುದೇಕೆ? ಏಕೆ ಪಾಶ್ಚಾತ್ಯ ದೇಶ ಗಳೆಲ್ಲ ಗದ್ದಲ ಆರಂಭಿಸಿವೆ? ಉಕ್ರೇನ್ ಅಧ್ಯಕ್ಷ ವೋಲೋದಿಮಿರ್ ಜೆಲೆನ್‌ಸ್ಕಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ಈ ಬೆಳವಣಿಗೆ ನೋಡಿ ನನಗೆ ಬಹಳ ಬೇಸರವಾಗಿದೆ.

ಇದು ಶಾಂತಿ ಸ್ಥಾಪನೆಯ ಯತ್ನಕ್ಕೆ ನೀಡಿದ ದೊಡ್ಡ ಹೊಡೆತ. ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶದ ಮುಖ್ಯಸ್ಥರು ಜಗತ್ತಿನ ಅತ್ಯಂತ ದೊಡ್ಡ ಕ್ರಿಮಿನಲ್‌ನನ್ನು ಮಾಸ್ಕೋದಲ್ಲಿ ಹೀಗೆ ತಬ್ಬಿಕೊಂಡಿದ್ದು ನೋಡಿ ನಾನು ತಬ್ಬಿಬ್ಬಾಗಿದ್ದೇನೆ. ಅದೂ, ಉಕ್ರೇನ್‌ನ ಆಸ್ಪತ್ರೆಯಲ್ಲಿ ಮಕ್ಕಳ ಮೇಲೆ ರಷ್ಯಾ ಬಹಳ ದೊಡ್ಡ ದಾಳಿ ನಡೆಸಿದ ದಿನವೇ ಈ ಬೆಳವಣಿಗೆ ನಡೆದಿರುವುದು ಆಘಾತ ಉಂಟುಮಾಡಿದೆ ಎಂದು ಹೇಳಿದ್ದಾರೆ.

ಇನ್ನಿತರ ಪಾಶ್ಚಾತ್ಯ ದೇಶಗಳು ಕೂಡ ನರೇಂದ್ರ ಮೋದಿ ಯಾವುದೇ ಕಾರಣಕ್ಕೂ ರಷ್ಯಾ ಭೇಟಿ ವೇಳೆ ಪುಟಿನ್‌ರನ್ನು ತಬ್ಬಿಕೊಳ್ಳುವುದಿಲ್ಲ ಎಂದೇ ನಿರೀಕ್ಷಿಸಿದ್ದವು. ಪಶ್ಚಿಮ ಬುದ್ಧಿಜೀವಿಗಳು ಇದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಬರೆದಿದ್ದರು. ಆದರೆ, ಮೋದಿಯವರ ಕೆಲಸದ ಶೈಲಿಯನ್ನು ತಿಳಿದವರಿಗೆ ಅವರು ಯಾವಾಗ ಬೇಕಾದರೂ ರಾಜತಾಂತ್ರಿಕ ವಿಚಾರಗಳಲ್ಲಿ ಅಚ್ಚರಿಗಳನ್ನು ನೀಡಬಲ್ಲರು ಎಂಬುದು ಗೊತ್ತಿದೆ. ಈ ಬಾರಿಯೂ ಅವರು ಅದನ್ನೇ ಮಾಡಿದ್ದಾರೆ. ಇದರಿಂದ ರಷ್ಯಾಕ್ಕೆ ಖುಷಿಯಾಗಿದ್ದರೆ, ಅಮೆರಿಕದಿಂದ ಹಿಡಿದು ಯುರೋಪ್‌ನ ಅನೇಕ ದೇಶಗಳಿಗೆ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.

ಆದರೆ ಚೀನಾ ಸದ್ಯಕ್ಕೆ ಏನನ್ನೂ ಬಹಿರಂಗವಾಗಿ ಹೇಳುವ ಸ್ಥಿತಿಯಲ್ಲಿಲ್ಲ. ಏಕೆಂದರೆ ಅದಕ್ಕೆ ರಷ್ಯಾದ ಸ್ನೇಹ ಬೇಕು. ಪಾಶ್ಚಾತ್ಯ ದೇಶಗಳ ನಾಯಕರೆಲ್ಲ ಅಮೆರಿಕ ದಲ್ಲಿ ನ್ಯಾಟೋ ಬ್ಯಾನರ್ ಅಡಿ ಸಭೆ ನಡೆಸಿ ರಷ್ಯಾವನ್ನು ಹೇಗೆ ಮಟ್ಟಹಾಕಬೇಕು ಎಂದು ಚರ್ಚಿಸುತ್ತಿದ್ದಾಗಲೇ ಪ್ರಧಾನಿ ಮೋದಿ ರಷ್ಯಾಕ್ಕೆ ಭೇಟಿ ನೀಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ಸಾಕಷ್ಟು ಸುಧಾರಣೆಯಾಗಿರುವುದರಿಂದ ಭಾರತವು ರಷ್ಯಾವನ್ನು ಬೆಂಬಲಿಸುವ ಹಂತಕ್ಕೆ ಹೋಗಲಾರದು ಎಂದೇ ಪಾಶ್ಚಾತ್ಯ ದೇಶಗಳು ಭಾವಿಸಿದ್ದವು. ಯುದ್ಧ ಶುರುವಾದ ಮೇಲೆ ರಷ್ಯಾವನ್ನು ಭಾರತ ಬಹಿರಂಗವಾಗಿ ಟೀಕಿಸಿಲ್ಲವಾದರೂ, ಅದು ಬೆಂಬಲವನ್ನಂತೂ ನೀಡುವುದಿಲ್ಲ ಎಂಬುದು ಅವರ ಲೆಕ್ಕಾಚಾರವಾಗಿತ್ತು. ಹೀಗಾಗಿ ಕೊನೆಯ ಪಕ್ಷ ಮೋದಿಯವರು ಪುಟಿನ್‌ರನ್ನು ತಬ್ಬಿಕೊಳ್ಳದೆ ಒಂದು ಸೂಕ್ಷ್ಮ ಸಂದೇಶ ವನ್ನು ನೀಡುತ್ತಾರೆ ಎಂದು ಅವರೆಲ್ಲಾ ನಿರೀಕ್ಷಿಸುತ್ತಿದ್ದರು. ಆದರೆ ಆಗಿದ್ದೇ ಬೇರೆ. ಮೋದಿ ನೀಡಿದ್ದು ಬೇರೆಯದೇ ಸಂದೇಶ.

ಮೋದಿ ರಷ್ಯಾಕ್ಕೆ ತೆರಳಿದ್ದಾಗ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ತಮ್ಮ ನಿವಾಸಕ್ಕೆ ಖಾಸಗಿ ಔತಣಕ್ಕಾಗಿ ಇವರನ್ನು ಆಹ್ವಾನಿಸಿದ್ದರು. ಅಲ್ಲಿ ರಷ್ಯಾದ ಅತ್ಯುಚ್ಚ ನಾಗರಿಕ ಗೌರವವನ್ನು ಕೂಡ ಮೋದಿಗೆ ಪ್ರದಾನ ಮಾಡಿದರು. ಅವರು ತೋರಿದ ಈ ಗೌರವಕ್ಕೆ ಮೋದಿ ಬೆಚ್ಚನೆಯ ಬಿಗಿ ಅಪ್ಪುಗೆ ನೀಡಿ ಪುಟಿನ್‌ಗೆ ಕೃತಜ್ಞತೆ ಹೇಳಿದರು. ತಕ್ಷಣ ಅದರ ಫೋಟೋ ಹಾಗೂ ವಿಡಿಯೊಗಳು ಮಾಧ್ಯಮಗಳಲ್ಲಿ ವೈರಲ್ ಆದವು. ಪಾಶ್ಚಾತ್ಯ ದೇಶಗಳಲ್ಲಿ ಸಂಚಲನ ಉಂಟಾಯಿತು. ಅವು ಮೋದಿಯವರ ನಡೆಯನ್ನು ಟೀಕಿಸಲು ಆರಂಭಿಸಿದವು. ಅಚ್ಚರಿಯೆಂಬಂತೆ, ಪುಟಿನ್ ಜೊತೆಗಿನ ಭೇಟಿಯಲ್ಲಿ ಮೋದಿ ಯವರು ‘ಯಾವುದೇ ಭಿನ್ನಾಭಿಪ್ರಾಯ ವನ್ನು ಯುದ್ಧಭೂಮಿಯಲ್ಲಿ ಬಗೆಹರಿಸಿ ಕೊಳ್ಳಲು ಸಾಧ್ಯವಿಲ್ಲ’ ಎಂದು ನೇರವಾಗಿ ಹೇಳಿದ್ದನ್ನು ಪಾಶ್ಚಾತ್ಯ ದೇಶಗಳು ಮರೆತೇಬಿಟ್ಟಿದ್ದವು.

‘ಯುದ್ಧದಲ್ಲಿ ಮಕ್ಕಳು ಸಾಯು ವುದನ್ನು ನೋಡಿದರೆ ನನ್ನ ಕರುಳು ಹಿಂಡಿದಂತಾಗುತ್ತದೆ’ ಎಂದೂ ಪುಟಿನ್‌ಗೆ ನೇರವಾಗಿಯೇ ಮೋದಿ ಹೇಳಿದ್ದರು. ತನ್ಮೂಲಕ ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ನರಮೇಧಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆಗ ಪಾಶ್ಚಾತ್ಯ ದೇಶಗಳು ಈ ಹೇಳಿಕೆಗಳನ್ನು ಸ್ವಾಗತಿಸಿದ್ದವು. ಆದರೆ, ಪುಟಿನ್‌ರನ್ನು ತಬ್ಬಿಕೊಂಡಾಕ್ಷಣ ಅವುಗಳ ನಿಲುವೇ ಬದಲಾಗಿಬಿಟ್ಟಿತು. ಅದಕ್ಕೇನು ಕಾರಣ? ನನಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ಹೇಳಿಕೆ ಸರಿಯಾಗಿದೆ ಅನ್ನಿಸುತ್ತದೆ. ಅವರು ಪಾಶ್ಚಾತ್ಯ ದೇಶಗಳು ಎಲ್ಲ ವನ್ನೂ ‘ಒಂದೇ ಬದಿಯಿಂದ ಗಮನಿಸುತ್ತವೆ’ ಎಂದು ಹೇಳಿದ್ದಾರೆ.

ತಮ್ಮ ಸಮಸ್ಯೆಗಳು ಇಡೀ ಜಗತ್ತಿನ ಸಮಸ್ಯೆಯೆಂಬಂತೆ ಜಗತ್ತು ಭಾವಿಸಬೇಕೆಂದು ಬಯಸುವ ಆ ದೇಶಗಳು, ಜಗತ್ತಿನ ಸಮಸ್ಯೆಗಳನ್ನು ಕೊನೆಯ ಪಕ್ಷ ಸಮಸ್ಯೆ ಎಂದು ಗುರುತಿಸು ವುದಕ್ಕೂ ಮುಂದಾಗುವುದಿಲ್ಲ ಎಂದು ಜೈಶಂಕರ್ ಹೇಳಿದ್ದಾರೆ. ತುಂಬಾ ಸರಿಯಾದ ಮಾತಿದು. ಮೋದಿ ಮತ್ತು ಪುಟಿನ್‌ರ ಬಿಗಿಯಪ್ಪುಗೆ ಯನ್ನು ಟೀಕಿಸುವವರು ಒಂದು ಸಂಗತಿಯನ್ನು ಅರ್ಥ ಮಾಡಿಕೊಳ್ಳಬೇಕು. ಭಾರತ ಮತ್ತು ರಷ್ಯಾ ನಡುವಿನ ಸ್ನೇಹ ಇಂದು-ನಿನ್ನೆಯ ದಲ್ಲ. ಪಂ.ಜವಾಹರಲಾಲ್ ನೆಹರು ಕಾಲದಿಂದಲೂ ನಮಗೆ ರಷ್ಯಾ ಜೊತೆ ಆಪ್ತವಾದ ಸಂಬಂಧವಿದೆ. ಈ ಎರಡು ದೇಶಗಳ ಭಾಷೆಗಳು ಬೇರೆಯಾಗಿ ದ್ದರೂ ನಾವು ಸದಾ ಒಂದೇ ಧ್ವನಿಯಲ್ಲಿ ಮಾತನಾಡಿದ್ದೇವೆ. ಬಾಲಿವುಡ್ ಸೂಪರ್‌ಸ್ಟಾರ್ ರಾಜ್‌ಕಪೂರ್ ಭಾರತದಲ್ಲಿ ಎಷ್ಟು ಪ್ರಸಿದ್ಧರಾಗಿದ್ದರೋ ರಷ್ಯಾದಲ್ಲೂ ಅಷ್ಟೇ ಜನಪ್ರಿಯರಾಗಿದ್ದರು. ಭಾರತದ ದೃಷ್ಟಿಕೋನದಲ್ಲಿ ಈಗಿನ ಬೆಳವಣಿಗೆಗಳನ್ನು ನೋಡುವುದಕ್ಕೆ ಪಾಶ್ಚಾತ್ಯ ದೇಶಗಳಿಗೆ ಸಾಧ್ಯವಾದರೆ ವಾಸ್ತವ ಏನೆಂಬುದು ಅವುಗಳಿಗೆ ಅರ್ಥವಾಗುತ್ತದೆ.

ರಷ್ಯಾ ಕುರಿತಾದ ಭಾರತದ ನಿಲುವು ಪಶ್ಚಿಮದ ದೇಶಗಳಿಗೆ ವಿರುದ್ಧವಾದ ನಿಲುವಲ್ಲ. ಬದಲಿಗೆ, ನಮ್ಮ ಅಗತ್ಯಗಳಿಗೆ ತಕ್ಕಂತೆ ನಾವು ರಷ್ಯಾದೊಂದಿಗೆ ಸ್ನೇಹಶೀಲ ಸಂಬಂಧ ಕಾಯ್ದುಕೊಳ್ಳುತ್ತಿದ್ದೇವೆ. ಇಂದು ಅಮೆರಿಕ, ಫ್ರಾನ್ಸ್ ಹಾಗೂ ಇನ್ನಿತರ ಪಾಶ್ಚಾತ್ಯ ದೇಶಗಳು ಭಾರತಕ್ಕೆ ನಾನಾ ರೀತಿಯ ಯುದ್ಧ
ಸಾಮಗ್ರಿಗಳನ್ನು ಪೂರೈಸುತ್ತವೆಯಾದರೂ, ಹಿಂದೊಂದು ದಿನ ಅಮೆರಿಕವು ಬಹಿರಂಗವಾಗಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದ್ದನ್ನು ಭಾರತ ಹೇಗೆ ಮರೆಯಲು ಸಾಧ್ಯ? ಆಗ ಭಾರತಕ್ಕೆ ವ್ಯೂಹಾತ್ಮಕ ಬೆಂಬಲ ನೀಡಿದ್ದು ಇದೇ ರಷ್ಯಾ. ನಮ್ಮ ದೇಶಕ್ಕೆ ರಷ್ಯಾ ಯಾವತ್ತೂ ವಿಶ್ವಾಸಾರ್ಹ ಸ್ನೇಹಿತನಾಗಿದೆ. ಇಂದು ಬದಲಾದ ಪರಿಸ್ಥಿತಿಯಲ್ಲಿ ಚೀನಾ ಜತೆಗೂ ರಷ್ಯಾ ಸ್ನೇಹವನ್ನು ಬಯಸುತ್ತಿದೆ.

ಪಾಶ್ಚಾತ್ಯ ದೇಶಗಳು ರಷ್ಯಾ ಮೇಲೆ ಸಾಕಷ್ಟು ಆರ್ಥಿಕ ನಿರ್ಬಂಧಗಳನ್ನು ಹೇರಿರುವುದರಿಂದ ಚೀನಾದ ಗೆಳೆತನ ಮಾಡುವುದು ರಷ್ಯಾಕ್ಕೆ ಅನಿವಾರ್ಯ ವಾಗಿದೆ. ಹಾಗೆಯೇ, ಈ ಸಂದರ್ಭದಲ್ಲಿ, ರಷ್ಯಾ ಜತೆಗಿನ ನಮ್ಮ ಸ್ನೇಹವನ್ನು ಇನ್ನಷ್ಟು ಬಲಗೊಳಿಸಿಕೊಳ್ಳುವುದು ಭಾರತಕ್ಕೂ ಅಗತ್ಯವಿದೆ. ಆದರೆ, ಪಶ್ಚಿಮದ ತಜ್ಞರು ಒಂದು ವೇಳೆ ಭಾರತದ ಗಡಿಯಲ್ಲಿ ಚೀನಾ ಏನಾದರೂ ದುಸ್ಸಾಹಸಕ್ಕೆ ಕೈಹಾಕಿದರೆ ಆಗ ಭಾರತವನ್ನು ರಷ್ಯಾ ನೇರವಾಗಿ ಬೆಂಬಲಿಸು ವುದಿಲ್ಲ ಎಂದು ಎಚ್ಚರಿಕೆ ನೀಡುತ್ತಿದ್ದಾರೆ. ಮೇಲ್ನೋಟಕ್ಕೆ ಈ ಲೆಕ್ಕಾಚಾರ ಸರಿಯಾಗಿದೆ ಎಂದೇ ಅನ್ನಿಸಬಹುದು. ವಾಸ್ತವ ಏನೆಂದರೆ, ಈಗಿನ ಪರಿಸ್ಥಿತಿಯಲ್ಲಿ, ಚೀನಾದ ಮನವೊಲಿಸುವ ಶಕ್ತಿಯಿರುವುದು ಕೂಡ ರಷ್ಯಾಕ್ಕೆ ಮಾತ್ರ. ಅಂದರೆ ಭಾರತವನ್ನು ಕೆಣಕದಂತೆ ಚೀನಾಗೆ ತಿಳಿ ಹೇಳುವ ಸಾಮರ್ಥ್ಯ ರಷ್ಯಾಕ್ಕಿದೆ. ರಷ್ಯಾದ ನೆರವು ಇಲ್ಲದೆ ಭಾರತದ ವಿರುದ್ಧ ತಾನು ಮುಂದುವರೆಯಲು ಸಾಧ್ಯವಿಲ್ಲ ಎಂಬುದು ಚೀನಾಕ್ಕೂ ಗೊತ್ತಿದೆ.

ಇನ್ನು ಅಮೆರಿಕದ ಕೆಲ ರಕ್ಷಣಾ ತಜ್ಞರು ಭಾರತದಲ್ಲಿ ರಷ್ಯಾದವರು ಯುದ್ಧ ಸಲಕರಣೆಗಳನ್ನು ಉತ್ಪಾದನೆ ಮಾಡಲು ಒಪ್ಪಂದ ಮಾಡಿಕೊಂಡಿರುವುದು ಕಳವಳಕಾರಿ ಬೆಳವಣಿಗೆ ಎಂದಿದ್ದಾರೆ. ಇದು ಮೂರ್ಖತನದ ಹೇಳಿಕೆ. ನೀವು ಎಲ್ಲಿ ಬೇಕಾದರೂ ಯುದ್ಧ ಸಾಮಗ್ರಿಗಳನ್ನು ಉತ್ಪಾದನೆ ಮಾಡಿ ಜಗತ್ತಿನ ಯಾವ ದೇಶಕ್ಕೆ ಬೇಕಾದರೂ ಮಾರಾಟ ಮಾಡುವ ಮೂಲಕ ಸಂಘರ್ಷಕ್ಕೆ ಪ್ರಚೋದನೆ ನೀಡಬಹುದು. ಆದರೆ ನಾವು ನಮ್ಮ ರಕ್ಷಣೆಗಾಗಿ ಯುದ್ಧ ಸಾಮಗ್ರಿಗಳನ್ನು ಉತ್ಪಾದನೆ ಮಾಡುವುದು ನಿಮಗೆ ಕಳವಳ ಉಂಟುಮಾಡುತ್ತದೆ! ಇದೆಂತಹ ಆಷಾಢಭೂತಿತನ! ನನ್ನ ಪ್ರಕಾರ, ಅಮೆರಿಕದಲ್ಲಿ ಪಾಶ್ಚಾತ್ಯ ದೇಶಗಳ ನ್ಯಾಟೋ ಸಭೆ ನಡೆಯುವುದಕ್ಕೂ ಮೊದಲು ರಷ್ಯಾ ದಲ್ಲಿ ಪುಟಿನ್‌ರನ್ನು ಮೋದಿ ತಬ್ಬಿಕೊಂಡಿದ್ದು ‘ಭಾರತವು ವ್ಯೂಹಾತ್ಮಕ ವಿಷಯಗಳಲ್ಲಿ ಯಾರ ಮಾತನ್ನೂ ಕೇಳುವುದಿಲ್ಲ ಎಂಬ ಸಂದೇಶವನ್ನು ಜಗತ್ತಿಗೇ ರವಾನಿಸುವ ಬಹಳ ಮಹತ್ವದ ಹಾಗೂ ಲೆಕ್ಕಾಚಾರದ ನಡೆ.

ಭಾರತ ಕೇವಲ ಜಾಗತಿಕ ಶಾಂತಿ ಗಾಗಿ ಎಲ್ಲರ ಜೊತೆಗೆ ಕೈಜೋಡಿಸಿ ಕೆಲಸ ಮಾಡುತ್ತದೆ. ಪುಟಿನ್ ರನ್ನು ತಬ್ಬಿಕೊಂಡ ನಂತರ ಮೋದಿ ಆಸ್ಟ್ರಿಯಾಕ್ಕೆ ಭೇಟಿ ನೀಡಿದ್ದು ಕೂಡ ಬಹಳ ಮಹತ್ವದ ಬೆಳವಣಿಗೆ. ಅದೂ ಕೂಡ ತನ್ನದೇ ಆದ ಸಂದೇಶವನ್ನು ಜಗತ್ತಿಗೆ ನೀಡಿದೆ. ಇಷ್ಟಕ್ಕೂ, ಭಾರತದ ಪ್ರಧಾನಿಯೊಬ್ಬರು ಆಸ್ಟ್ರಿಯಾಕ್ಕೆ ೪೧ ವರ್ಷಗಳ ಬಳಿಕ ಭೇಟಿ ನೀಡಿದ್ದಾರೆ.

ಹಿರಿಯರ ಯುದ್ಧದಲ್ಲಿ ವಯಸ್ಸಿನ ತಾಕಲಾಟ!: ನಾನಿದನ್ನು ಬರೆಯುತ್ತಿರುವ ಹೊತ್ತಿಗೆ ಅತ್ತ ಅಮೆರಿಕದಿಂದ ಡೊನಾಲ್ಡ್ ಟ್ರಂಪ್ ಹತ್ಯೆಗೆ ಯತ್ನ ನಡೆದ ಸುದ್ದಿ ಬರುತ್ತಿದೆ. ಈ ಘಟನೆಯು ಮುಂದಿನ ಚುನಾವಣೆಯಲ್ಲಿ ಟ್ರಂಪ್ ಗೆಲ್ಲುವ ಸಾಧ್ಯತೆಯನ್ನು ಇನ್ನಷ್ಟು ಗಟ್ಟಿಗೊಳಿಸಬಹುದು. ಆದರೆ, ವಿಚಿತ್ರ ಎಂಬಂತೆ ಅಮೆರಿಕದಲ್ಲಿ ಈ ಬಾರಿ ಯಾರೇ ಗೆದ್ದರೂ ಅದರ ಇತಿಹಾಸದಲ್ಲೇ ಅತ್ಯಂತ ಹೆಚ್ಚು ವಯಸ್ಸಾದ ಅಧ್ಯಕ್ಷರೊಬ್ಬರು ಅಧಿಕಾರಕ್ಕೆ ಬರುತ್ತಾರೆ. ಈ ಹಿಂದಿನ ದಾಖಲೆ ರೊನಾಲ್ಡ್ ರೇಗನ್ ಹೆಸರಿ ನಲ್ಲಿದೆ. ಅವರು ಎರಡನೇ ಅವಽಗೆ ಅಧ್ಯಕ್ಷರಾಗಿ ನಿವೃತ್ತಿ ಹೊಂದಿದಾಗ ೭೭ ವರ್ಷ ವಯಸ್ಸಾಗಿತ್ತು. ಜೋ ಬೈಡನ್‌ಗೆ ಈಗ ೮೧ ವರ್ಷ. ಡೊನಾಲ್ಡ್ ಟ್ರಂಪ್‌ಗೆ ೭೮ ವರ್ಷ. ಅಮೆರಿಕದ ಸಾರ್ವಜನಿಕ ಜೀವನದಲ್ಲಿ ವಯೋವೃದ್ಧರು ಯುವಕರಿಗೆ ಸರಿಸಮನಾದ ಉತ್ಸಾಹದೊಂದಿಗೆ ಕೆಲಸ ಮಾಡುವುದು ಹೊಸತೇನಲ್ಲ.

ಬೇರೆ ಬೇರೆ ಕ್ಷೇತ್ರಗಳಲ್ಲೂ ಅಮೆರಿಕದಲ್ಲಿ ಇಂದು ೭೫ ವರ್ಷ ಮೇಲ್ಪಟ್ಟ ೨೦ ಲಕ್ಷಕ್ಕೂ ಹೆಚ್ಚು ಜನರು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕೃತ ಅಂಕಿಅಂಶಗಳು ಹೇಳುತ್ತವೆ. ಮುಂದಿನ ದಶಕದಲ್ಲಿ ಈ ಸಂಖ್ಯೆ ೩೦ ಲಕ್ಷವನ್ನು ದಾಟುವ ನಿರೀಕ್ಷೆಯಿದೆ. ಹಾಗಾಗಿ ಬೈಡೆನ್ ಮತ್ತು ಟ್ರಂಪ್ ಏಕೆ ಮತ್ತೊಮ್ಮೆ ಈ ಇಳಿವಯಸ್ಸಿನಲ್ಲೂ ಅಧ್ಯಕ್ಷರಾಗಲು ಬಯಸುತ್ತಿದ್ದಾರೆ ಎಂದು ಯಾರೂ ಕಟಕಿಯಾಡುವಂತಿಲ್ಲ. ಆದರೆ, ಬೈಡೆನ್‌ಗೆ ಮರೆಗುಳಿತನ ಕಾಡುತ್ತಿದೆ. ಅದರ ಬಗ್ಗೆ ಎಲ್ಲರೂ ತಕರಾರು ಎತ್ತುತ್ತಿದ್ದಾರೆ. ಜನಸಾಮಾನ್ಯರಿಗಿಂತ ಹೆಚ್ಚಾಗಿ ಶ್ವೇತಭವನದ ಅಧಿಕಾರಿಗಳು ಹಾಗೂ ಸಿಐಎ ಗುಪ್ತಚರ ದಳದ ಅಧಿಕಾರಿಗಳು ಅಧ್ಯಕ್ಷರ ವೃದ್ಧಾಪ್ಯದ ಬಗ್ಗೆ ಚಿಂತೆಗೀಡಾಗಿದ್ದಾರೆ.

ಅವರು ಕೇಳುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ: ‘ಇಷ್ಟೊಂದು ವಯಸ್ಸಾಗಿರುವ ಅಧ್ಯಕ್ಷರೊಂದಿಗೆ ಅತ್ಯಂತ ಮಹತ್ವದ ಗುಪ್ತಚರ ವಿಚಾರಗಳನ್ನು
ಹಂಚಿಕೊಳ್ಳಬಹುದೇ? ಆದರೆ ಅವರ ಮುಂದೆ ಬೇರೆ ಆಯ್ಕೆಯಾದರೂ ಎಲ್ಲಿದೆ?

(ಲೇಖಕರು : ಹಿರಿಯ ಹಿರಿಯ ಪತ್ರಿಕೋದ್ಯಮಿ ಹಾಗೂ ರಾಜ್ಯಸಭಾ ಮಾಜಿ ಸದಸ್ಯ)