Saturday, 14th December 2024

ಅವರು ಮನೆ ಬಿಟ್ಟು ಓಡಿಹೋದರೇನಂತೆ…?

ವಿದೇಶವಾಸಿ

dhyapaa@gmail.com

ಓಡಿ ಹೋಗುವುದು ಆತನಿಗೆ ಇಷ್ಟವಿರಲಿಲ್ಲ, ಆದರೆ ಮನೆಯ ಪರಿಸ್ಥಿತಿ ಹಾಗಿತ್ತು. ಹೊಟ್ಟೆಯಲ್ಲಿ ಹಸಿವು, ಕಣ್ಣಿನಲ್ಲಿ ಕನಸು ಸಾಕಷ್ಟು ತುಂಬಿಕೊಂಡಿ ರುವಾಗ ಯಾರಾದರೂ ಎಷ್ಟು ಸಮಯ ಒಂದೇ ಕಡೆ ಕುಳಿತುಕೊಳ್ಳಬಲ್ಲರು? ಆತ ಪುಂಡನೂ ಅಲ್ಲ, ಪೋಕರಿಯೂ ಅಲ್ಲ. ಮನೆ ಬಿಟ್ಟು ಓಡಿ ಹೋಗುವಂತಹ ಉಡಾಳತನ ಮಾಡಿದ ವನೂ ಅಲ್ಲ.

ಆದರೆ ಮನೆಯ ಪರಿಸ್ಥಿತಿ!? ಮುಂದೊಂದು ದಿನ ತಾನು ಶಾಲೆಯ ಶಿಕ್ಷಕನಾಗಬೇಕು, ಒಂದಿಷ್ಟು ಮಕ್ಕಳಿಗೆ ಪಾಠ ಹೇಳಬೇಕು, ಎಂಬುದು ಅವನ ಕನಸಾಗಿತ್ತು. ಆದರೆ ಮನೆಯ ಪರಿಸ್ಥಿತಿ ಹೇಗಿತ್ತು ಎಂದರೆ, ಶಿಕ್ಷಕನಾಗುವುದು ಇರಲಿ, ಸ್ವತಃ ತಾನು ಶಾಲೆಗೆ ಹೋಗಲೂ ಹಣ ಇರಲಿಲ್ಲ. ರಾತ್ರಿ-ಹಗಲು ಹೊಲದಲ್ಲಿ ದುಡಿಯುತ್ತಿದ್ದ. ಅವನೊಬ್ಬನೇ ಅಲ್ಲ, ಅವನ ಒಡ ಹುಟ್ಟಿದ ಉಳಿದ ಆರು ಮಂದಿಯೂ ಅಪ್ಪ-ಅಮ್ಮನೊಂದಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಎಷ್ಟೇ ದುಡಿದರು ಕೆಲವೊಮ್ಮೆ ಹಸಿದೇ ಮಲಗಬೇಕಿತ್ತು.

ಹೊಟ್ಟೆಗೆ ಹಿಟ್ಟೂ ಇಲ್ಲ, ತೊಡಲು ಒಳ್ಳೆಯ ಬಟ್ಟೆಯೂ ಇಲ್ಲದ ಆತ ಎಷ್ಟೋ ಸಲ ಹೊಲದ ಕೆಲಸ ಮುಗಿಸಿ, ಹಳ್ಳಿಯಿಂದ ಕಟ್ಟಿಗೆ ಕೊಂಡುಹೋಗಿ ಪಟ್ಟಣದಲ್ಲಿ ಮಾರಿ ಬರುತ್ತಿದ್ದ. ಪಟ್ಟಣಕ್ಕೆ ಹೋದಾಗ, ಅಲ್ಲಿಯ ಜನರನ್ನು ಆತ ನೋಡುತ್ತಿದ್ದ. ಅವರೆಲ್ಲ ಒಳ್ಳೆಯ ಬಟ್ಟೆ ತೊಡುತ್ತಿದ್ದರು. ಅವರಲ್ಲಿ ಯಾರು ತನ್ನಷ್ಟು ಹಸಿದವರಂತೆ ಕಾಣುತ್ತಿರಲಿಲ್ಲ. ಆಗೆಲ್ಲ ಆತನಿಗೆ ಹಳ್ಳಿಯ ಹೊಲದ ಕೆಲಸ ಸಾಕು ಅನಿಸುತ್ತಿತ್ತು. ತಾನು ಆ ಪರಿಸರದಿಂದ ಹೊರಬರ ಬೇಕು, ತನ್ನದೇ ಆದ ಒಂದು ಬದುಕನ್ನು ಕಟ್ಟಿಕೊಳ್ಳಬೇಕು, ಕೊನೆಯ ಪಕ್ಷ ಹೊಟ್ಟೆ ತುಂಬಿಸಿಕೊಂಡು ಕಣ್ಣು ತುಂಬಾ ನಿ್ದೆ ಮಾಡಬೇಕು ಎಂದು ಎಷ್ಟೋ ಬಾರಿ ಆತ ಯೋಚಿಸಿದ್ದ.

ಹೀಗಿರುವಾಗ, ‘ಕಟ್ಟಡ ನಿರ್ಮಾಣಕ್ಕೆ ಕೆಲಸಗಾರರು ಬೇಕಾಗಿದ್ದಾರೆ’ ಎಂಬ ದಿನಪತ್ರಿಕೆಯ ಜಾಹೀರಾತೊಂದು ಆತನ ಕಣ್ಣಿಗೆ ಬಿದ್ದಿತ್ತು. ಆಗ ಆತ ಮೊದಲ ನೆಯ ಬಾರಿ ಮನೆ ಬಿಟ್ಟು ಓಡಿ ಹೋಗುವ ನಿರ್ಧಾರ ಮಾಡಿದ್ದ. ಆಗ ಆತನಿಗೆ ಇನ್ನೂ ಹದಿನಾರು ವರ್ಷ. ಅದಕ್ಕೆ ತಕ್ಕಂತೆ ಅವನೊಟ್ಟಿಗೆ ಊರು ಬಿಟ್ಟು ಹೋಗಲು ಒಬ್ಬ ಸ್ನೇಹಿತನೂ ಸಿಕ್ಕಿದ್ದ. ಇಬ್ಬರೂ ಸೇರಿ ಹದಿನಾರು ಕಿಲೋ ಮೀಟರ್ ದೂರದಲ್ಲಿರುವ ಒಂದು ಪಟ್ಟಣಕ್ಕೆ ಹೊರಟೇ ಬಿಟ್ಟರು. ಪಟ್ಟಣ ದಲ್ಲಿ ಕೆಲಸವೂ ಸಿಕ್ಕಿತು. ಕಟ್ಟಡ ನಿರ್ಮಾಣ ಕಷ್ಟದ ಕೆಲಸ, ಸಂಬಳವೂ ಕಮ್ಮಿ.

ಆದರೂ ಆತ ಖುಷಿಯಾಗಿದ್ದ. ಕಾರಣ, ಹಳ್ಳಿಯಲ್ಲಿ ದಿನಕ್ಕೆ ಹದಿನಾರು ತಾಸು ಕೆಲಸ ಮಾಡಿದರೂ ಖರ್ಚಿಗೆ ಹಣವೂ ಇರುತ್ತಿರಲಿಲ್ಲ, ಹೊಟ್ಟೆ ತುಂಬ ಊಟವೂ ಸಿಗುತ್ತಿರಲಿಲ್ಲ. ಅದ್ದರಿಂದ ಮನೆ ಬಿಟ್ಟು ಪಟ್ಟಣ ಸೇರುವುದು ಅನಿವಾರ್ಯವಾಗಿತ್ತು. ಪಟ್ಟಣದ ಕೆಲಸದ ಖುಷಿ ಎರಡು ತಿಂಗಳಿಗಿಂತ ಹೆಚ್ಚು
ಉಳಿಯಲಿಲ್ಲ. ಮಗನನ್ನು ಹುಡುಕಿಕೊಂಡು ಬಂದ ಅಪ್ಪ, ಬೈದು ಮಗನನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಆದರೆ ಆತನಿಗೆ ಆ ಜೀವನ ಬೇಡ ವಾಗಿತ್ತು.

ಮತ್ತದೇ ಹೊಲದ ಕೆಲಸ, ಮತ್ತದೇ ಹಸಿವು, ಮತ್ತದೇ ಕನಸು. ಆತನಿಗೆ ಹಳ್ಳಿಯಿಂದ ಬಿಡುಗಡೆ ಬೇಕಾಗಿತ್ತು. ಆದರೆ ಈ ಬಾರಿ ಎರಡು ತಿಂಗಳು ಪಟ್ಟಣ ದಲ್ಲಿ ಕೆಲಸ ಮಾಡಿದ ಅನುಭವವಿತ್ತು. ಹೊಲ-ಗದ್ದೆಯ ಕೆಲಸ ಕ್ಕಿಂತಲೂ ಪಟ್ಟಣದ ಕೆಲಸವೇ ಆತನಿಗೆ ಹೆಚ್ಚು ಪ್ರಿಯವಾಗಿತ್ತು. ಅಲ್ಲದೆ, ಹಳ್ಳಿಯಲ್ಲಿ ಎಷ್ಟೇ ದುಡಿದರೂ ಹಣ ಗಳಿಸಲು ಸಾಧ್ಯವಿಲ್ಲ ಎಂದು ಮನವರಿಕೆಯಾಗಿತ್ತು. ಸುಮಾರು ಒಂದು ವರ್ಷದ ನಂತರ ಮತ್ತೊಮ್ಮೆ ಓಡಿ ಹೋಗುವ ಪ್ರಯತ್ನವನ್ನು ಮಾಡಿದ್ದ.

ಈ ಬಾರಿ ಇಬ್ಬರು ಸ್ನೇಹಿತರು ಆತನ ಜತೆಗೆ ಸೇರಿಕೊಂಡರು. ಈ ಬಾರಿ ಆತ ತನ್ನ ಊರನ್ನು ಬಿಟ್ಟು ದಕ್ಷಿಣದ ಕಡೆಗೆ ಹೊರಟಿದ್ದ. ಆದರೆ ಈ ಬಾರಿಯೂ
ಆತನ ಪ್ರಯತ್ನ ವಿ-ಲವಾಯಿತು. ಒಬ್ಬ ಸ್ನೇಹಿತನನ್ನು ಅವನ ಸಹೋದರ ಪತ್ತೆ ಹಚ್ಚಿ ಕರೆದುಕೊಂಡು ಹೋದ. ಈತ ಮತ್ತು ಇನ್ನೊಬ್ಬ ಸ್ನೇಹಿತ ವಂಚನೆಗೆ ಒಳಗಾಗಿದ್ದರು. ಇಬ್ಬರಿಗೂ ನೌಕರಿ ಕೊಡಿಸುತ್ತೇನೆಂದು ಆಮಿಷ ಹುಟ್ಟಿದ ಒಬ್ಬ ಇವರಲ್ಲಿದ್ದ ಹಣವನ್ನೆಲ್ಲ ಪಡೆದು ಇವರನ್ನು ವಂಚಿಸಿ ಓಡಿಹೋಗಿದ್ದ. ಹಣವನ್ನು ಕಳೆದುಕೊಂಡ ಆ ಯುವಕನಿಗೆ ದಿಕ್ಕು ತೋಚದಂತಾಗಿತ್ತು ಆತ ಅದೇ ಊರಿನಲ್ಲಿ ಇದ್ದ ತನ್ನ ಅಜ್ಜನ ಮನೆಯ ಪಕ್ಕದಲ್ಲಿ ಯೇ ಉಳಿದುಕೊಂಡ. ಮಗನ ಇರುವಿಕೆಯನ್ನು ತಿಳಿದು ಅಲ್ಲಿಗೆ ಬಂದ ತಂದೆ, ಆತನನ್ನು ಪುನಃ ಮನೆಗೆ ಕರೆದು ಕೊಂಡು ಹೋದರು.

ಆತನಿಗೆ ಹದಿನೆಂಟು ವರ್ಷ ತುಂಬಿತ್ತು. ಆಗ ಮತ್ತೊಮ್ಮೆ ಮನೆ ಬಿಟ್ಟು ಇನ್ನೂ ದೂರ ಹೋಗಲು ನಿರ್ಧರಿಸಿದ ಹದಿನೆಂಟರ ಯುವಕ, ಎಪ್ಪತ್ತು ವೊನ್
(ಕೋರಿಯಾ ದೇಶದ ಹಣ) ಕೊಟ್ಟು ರೈಲ್ವೆ ಟಿಕೆಟ್ ಪಡೆದಿದ್ದ. ಆ ಹಣಕ್ಕಾಗಿ ತನ್ನ ಮನೆಯದ್ದೇ ಒಂದು ಹಸುವನ್ನು ತಂದೆಗೆ ತಿಳಿಯದಂತೆ ಮಾರಾಟ ಮಾಡಿದ್ದ. ದಕ್ಷಿಣ ಕೋರಿಯಾದಲ್ಲಿರುವ ಒಂದು ಪಟ್ಟಣವನ್ನು ತಲುಪಿದ ಆತ, ಒಂದು ಶಾಲೆಯಲ್ಲಿ ಅಕೌಂಟೆಂಟ್ ಆಗಿ ಕೆಲಸಕ್ಕೆ ಸೇರಿಕೊಂಡ. ಈಗಲೂ ಅಷ್ಟೇ, ಎರಡು ತಿಂಗಳಾಗುತ್ತಿದ್ದಂತೆ ಮತ್ತೆ ಮಗನನ್ನು ಹುಡುಕಿಕೊಂಡ ಬಂದ ತಂದೆಯ ಕೈಗೆ ಸಿಕ್ಕಿ ಬಿದ್ದಿದ್ದ.

ನಾಲ್ಕನೇ ಬಾರಿ ಪುನಃ ಓಡಿ ಹೋದ ಅದೇ ಯುವಕ, ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್ ಸಮೀಪದ ಒಂದು ಪಟ್ಟಣವನ್ನು ತಲುಪಿದ. ಮೊದಲು ಬಂದರಿನಲ್ಲಿ ಕೂಲಿಯಾಗಿ ಸೇರಿಕೊಂಡ. ಕೆಲ ದಿನ ಕೂಲಿ ಕೆಲಸ ಮಾಡಿದ ನಂತರ ಕಟ್ಟಡ ನಿರ್ಮಾಣದ ಕೆಲಸಗಾರನಾಗಿ, ಸಿರಪ್ ತಯಾರಿ ಸುವ ಕಾರ್ಖಾನೆಯಲ್ಲಿ ಸಹಾಯಕನಾಗಿ ಒಂದು ವರ್ಷ ಕೆಲಸ ಮಾಡಿದ. ನಂತರ ಒಂದು ಅಕ್ಕಿ ಅಂಗಡಿಯಲ್ಲಿ ಡೆಲಿವರಿ ಬಾಯ್ ಆಗಿ ಸೇರಿಕೊಂಡ.
ಅಂಗಡಿಯ ಕೆಲಸ ಆರಂಭಿಸಿದ ಆರು ತಿಂಗಳ ಆತ ಅಂಗಡಿ ಮಾಲೀಕನ ಮೆಚ್ಚುಗೆ ಗಳಿಸಿದ್ದ.

ಯುವಕನ ಕೆಲಸ ಮಾಡುವ ರೀತಿಯನ್ನು ಕಂಡ ಗ್ರಾಹಕರೇ ಖುಷಿಯಾಗಿರುವಾಗ ಮಾಲೀಕ ಖುಷಿಯಾಗದೇ ಇರಲು ಸಾಧ್ಯವೇ? ಮಾಲೀಕ ಆತನನ್ನು ಲೆಕ್ಕಪತ್ರ ನೋಡಿಕೊಳ್ಳಲು ಹೇಳಿದ. ಕ್ರಮೇಣ ಅಂಗಡಿಯ ಉಸ್ತುವಾರಿಯ ಜವಾಬ್ದಾರಿಯನ್ನೂ ವಹಿಸಿಕೊಟ್ಟ. ಕೆಲವು ದಿನಗಳ ನಂತರ ಅಂಗಡಿಯ ಮಾಲೀಕ ತೀವ್ರ ಅಸ್ವಸ್ಥನಾಗಿ ಹಾಸಿಗೆ ಹಿಡಿದು ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದ್ದ. ಆದರೆ ಅಂಗಡಿಯ ಜವಾಬ್ದಾರಿಯನ್ನು ಈ ಯುವಕನಿಗೆ ವಹಿಸಿಕೊಡುವ ನಿರ್ಣಯವನ್ನು ಆತ ಮಾಡಿದ್ದ. ಅಂಗಡಿ ವಹಿಸಿಕೊಂಡ ಮುಂದಿನ ಕೆಲವು ದಿನಗಳಲ್ಲಿ ತನ್ನ ಪರಿಶ್ರಮದಿಂದ ಜನರ ನಂಬುಗೆಯನ್ನು
ಗಳಿಸಿಕೊಂಡಿದ್ದ ಆ ಯುವಕ. ಮುಂದಿನ ಎರಡು ವರ್ಷ ವ್ಯಾಪಾರ ಚೆನ್ನಾಗಿಯೇ ನಡೆಯಿತು. ಆದರೆ ಆ ಸಂದರ್ಭದಲ್ಲಿ ಎರಡನೆಯ ವಿಶ್ವಯುದ್ಧ ನಡೆಯುತ್ತಿದ್ದ ಪರಿಣಾಮವಾಗಿ ಜಪಾನ್ ದೇಶದ ಸೇನೆಗೆ ಮತ್ತು ಅಲ್ಲಿಯ ಜನರಿಗೆ ಅಕ್ಕಿ ಸರಬರಾಜನ್ನು ಪೂರೈಸುವುದಕ್ಕೋಸ್ಕರ ಜಪಾನ್ ಕೋರಿಯಾದ ಅಕ್ಕಿ ವ್ಯಾಪಾರದ ಮೇಲೆ ನಿರ್ಬಂಧವನ್ನು ಹೇರಿತು.

ಇದರಿಂದಾಗಿ ಅಕ್ಕಿ ಅಂಗಡಿಯನ್ನು ಮುಚ್ಚಿ ಆ ಯುವಕ ತಾನಾಗಿಯೇ ಮೊದಲ ಬಾರಿ ಮನೆಗೆ ಹಿಂದಿರುಗುವಂತಾಯಿತು. ಎಷ್ಟು ದಿನ ಮನೆಯಲ್ಲಿ ಖಾಲಿ ಕುಳಿತುಕೊಳ್ಳಲು ಸಾಧ್ಯ? ಕೂಡಿಟ್ಟ ಹಣ ಕರಗಿತ್ತು. ಆತ ಮೂರು ಸಾವಿರ ವೊನ್ ಸಾಲ ಪಡೆದು ಕಾರು ರಿಪೇರಿ ಮಾಡುವ ಗ್ಯಾರೇಜ್ ಆರಂಭಿಸಿದ. ಆತನ ದುರಾದೃಷ್ಟಕ್ಕೆ ಒಂದೇ ತಿಂಗಳಿನಲ್ಲಿ ಗ್ಯಾರೇಜಿಗೆ ಬೆಂಕಿ ಬಿದ್ದು, ವಾಹನಗಳೆಲ್ಲ ಭಸ್ಮವಾದವು. ಒಂದು ಕಡೆ ಯುದ್ಧ, ಇನ್ನೊಂದು ಕಡೆ ಗ್ರಾಹಕರಿಗೆ ನಷ್ಟ ಭರಿಸಿ ಕೊಡಬೇಕಾದ ಸಂಕಷ್ಟ. ಆತ ಮತ್ತೊಮ್ಮೆ ಮೂರುವರೆ ಸಾವಿರ ವೊನ್ ಸಾಲ ಪಡೆದು ಗ್ಯಾರೇಜ್ ಪುನಃ ಆರಂಭಿಸಿದ.

ಉಳಿದ ಗ್ಯಾರೇಜಿನವರು ಒಂದು ಕಾರು ದುರಸ್ತಿ ಮಾಡಲು ಎರಡರಿಂದ ಮೂರು ವಾರ ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ ಆತ ಐದರಿಂದ ಆರು ದಿನದ ಒಳಗೇ ರಿಪೇರಿ ಮಾಡಿ ಕೊಡುತ್ತಿದ್ದ. ಅದಕ್ಕಾಗಿ ಅವನ ಜನಪ್ರಿಯತೆ ಹೆಚ್ಚಿ, ಹೆಚ್ಚು ಹೆಚ್ಚು ಗ್ರಾಹಕರು ಅವನಲ್ಲಿಗೆ ಬರಲಾರಂಭಿಸಿದರು. ಗ್ಯಾರೇಜ್
ಆರಂಭಿಸಿ ಮೂರು ವರ್ಷವಾಗುವುದರ ಒಳಗೆ ಎಂಬತ್ತು ಜನರನ್ನು ಆತ ಕೆಲಸಕ್ಕೆ ಇಟ್ಟುಕೊಂಡಿದ್ದ. ಹಳೆಯ ಸಾಲವನ್ನೆಲ್ಲ ತೀರಿಸಿ ಇನ್ನೇನು ಜೀವನ
ಸುಗಮವಾಗುತ್ತಿದೆ ಎನ್ನುವಾಗ ಯುದ್ಧದ ಯಂತ್ರೋಪಕರಣ ತಯಾರಿಸುವ ಸಲುವಾಗಿ ಜಪಾನ್ ಆತನ ಗ್ಯಾರೇಜನ್ನು ವಶಪಡಿಸಿಕೊಂಡು ಸ್ಟೀಲ್
ತಯಾರಿಸುವ ಕಾರ್ಖಾನೆಗೆ ನೀಡಿತು.

ಆತ ಪುನಃ ಸಂಸಾರ ಸಮೇತ ಊರಿಗೆ ಹೋಗಬೇಕಾಯಿತು. ಆದರೆ ಈ ಬಾರಿ ಅವನ ಬಳಿ ಐವತ್ತು ಸಾವಿರ ವೊನ್ ಇತ್ತು. ಜತೆಗೆ, ಈ ಸಲ ಆತ ಹೆಚ್ಚು ಕಾಯಬೇಕಾಗಿರಲಿಲ್ಲ. ಯುದ್ಧ ಮುಗಿದಿತ್ತು, ಕೋರಿಯಾದ ರಾಜಧಾನಿ ಸಿಯೋಲ್‌ಗೆ ಹಿಂತಿರುಗಿ ಬಂದ ಆತ ಗ್ಯಾರೇಜ್ ಪುನಃ ಆರಂಭಿಸಿದ. ಅದಕ್ಕೆ ‘ಹ್ಯುಂಡೈ ಆಟೋ ಸರ್ವೀಸ್’ ಎಂದು ಹೆಸರಿಟ್ಟ. ಹ್ಯುಂಡೈ ಎಂದರೆ, ‘ಆಧುನಿಕ’ ‘ಹೊಸತು’, ‘ನೂತನ’ ಎಂದು ಅರ್ಥ. ಅಷ್ಟಕ್ಕೇ ನಿಲ್ಲದೆ, ತನ್ನ ಪ್ರೀತಿಯ ಕಟ್ಟಡ ನಿರ್ಮಾಣದ ಕೆಲಸವನ್ನು ಮಾಡುವುದಕ್ಕಾಗಿ ‘ಹ್ಯುಂಡೈ ಸಿವಿಲ್ ವರ್ಕ್ಸ’ ಎಂಬ ಹೆಸರಿನಲ್ಲಿ ಕಂಪನಿ ಆರಂಭಿಸಿದ.

ಯಾರು ಆತ? ಆತ್ಮವಿಶ್ವಾಸದ ಮೇರು ಪರ್ವತ, ಇಂದು ನಾವು ನೀವೆಲ್ಲ ನೋಡುತ್ತಿರುವ, ಕೇಳುತ್ತಿರುವ ‘ಹ್ಯುಂಡೈ’ ಕಂಪನಿಯ ಸ್ಥಾಪಕ, ‘ಚುಂಗ್
ಜು-ಯುಂಗ್’. ಬಾಲ್ಯದಲ್ಲಿ ಸಾಕಷ್ಟು ಕಷ್ಟ ಎದುರಿಸಿದ್ದರೂ ಸ್ವಂತ ಕಂಪನಿ ನಿರ್ಮಿಸುವ ಹಂತಕ್ಕೆ ಬೆಳೆದು ನಿಂತಿದ್ದರು ಜು-ಯುಂಗ್. ಸರಿ, ಅಲ್ಲಿಗೆ ಮುಗಿಯಿತೇ? ನಂತರ ಅವರಿಗೆ ಯಾವ ಕಷ್ಟವೂ ಬರಲಿಕ್ಕಿಲ್ಲ, ಅವರ ಜೀವನ ಸುಗಮವಾಗಿರಬಹುದು ಎಂದರೆ ಅದು ಸುಳ್ಳು. ಮೊದಲಿಗಿಂತಲೂ ಸಾಕಷ್ಟು ದೊಡ್ಡವರಾಗಿದ್ದರು ಜು-ಯುಂಗ್. ಹಾಗೆಯೇ ಸಮಸ್ಯೆಗಳೂ ದೊಡ್ಡದಾಗಿದ್ದವು. ಸಮಸ್ಯೆಗಳೇ ಹಾಗೆ, ಸಣ್ಣವರಿಗೆ ಸಣ್ಣ ಸಮಸ್ಯೆ, ದೊಡ್ಡವರಿಗೆ ದೊಡ್ಡ ದೊಡ್ದ ಸಮಸ್ಯೆ!

ಅವರ ಕಂಪನಿ ಚೆನ್ನಾಗಿ ನಡೆಯುತ್ತಿತ್ತಾದರೂ ಮತ್ತೊಮ್ಮೆ ದುರಾದೃಷ್ಟ ಎದುರಾಯಿತು. ಎರಡನೆಯ ಮಹಾಯುದ್ಧ ಮುಗಿದಿತ್ತಾದರೂ, ೧೯೫೦ ರಲ್ಲಿ ಉತ್ತರ ಕೋರಿಯಾ ಮತ್ತು ದಕ್ಷಿಣ ಕೋರಿಯಾ ನಡುವೆ ಯುದ್ಧ ಆರಂಭವಾಯಿತು. ಉತ್ತರದ ಸೇನೆ ದಕ್ಷಿಣಕೋರಿಯಾದ ರಾಜಧಾನಿ ಸಿಯೋಲ್ ನಗರವನ್ನು ವಶಪಡಿಸಿಕ್ಕೊಳ್ಳುವ ಹಂತ ತಲುಪಿತ್ತು. ಭಯಭೀತರಾದ ಜನ ಉತ್ತರದ ಸೇನೆಯಿಂದ ತಪ್ಪಿಸಿಕೊಳ್ಳಲು ಸಿಯೋಲ್ ಬಿಟ್ಟು ಓಡಿ ಹೋಗು ತ್ತಿದ್ದರು.

ಅದಕ್ಕೆ ಜು-ಯುಂಗ್ ಹೊರತಾಗಿರಲಿಲ್ಲ. ಆದರೆ ಅಮೆರಿಕದ ಸಹಾಯದಿಂದ ದಕ್ಷಿಣ ಕೋರಿಯಾ ತನ್ನ ದೇಶವನ್ನು ಉಳಿಸಿಕೊಳ್ಳುವಲ್ಲಿ ಸಫಲವಾ ಯಿತು. ಈ ನಡುವೆ ಯುದ್ಧದ ಸಂದರ್ಭದಲ್ಲಿ ಸೇನೆಗೆ ಬೇಕಾಗುವ ಟೆಂಟ್, ದಾಸ್ತಾನು ಮಳಿಗೆ, ಕಚೇರಿಗಳಲ್ಲಿ ವ್ಯಾಪಾರಕ್ಕೆ ಸಾಕಷ್ಟು ಅವಕಾಶವಿದೆ ಎಂಬುದನ್ನು ಅರಿತುಕೊಂಡ ಜು-ಯುಂಗ್, ಅಮೆರಿಕದ ಸೇನೆ ಯೊಡನೆ ವ್ಯಾಪಾರದ ಒಪ್ಪಂದ ಮಾಡಿಕೊಂಡರು. ಹಾಗೆಯೇ ತಮ್ಮ ಮೊದಲಿನ ಕೆಲಸವನ್ನು ಪುನಃ ಮುಂದುವರಿಸಿದರು. ಯುದ್ಧದಿಂದ ಹಾನಿಗೊಳಗಾಗಿದ್ದ ರಸ್ತೆ, ಕಟ್ಟಡಗಳು ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಿ ಕೊಡುವಲ್ಲಿ ಹ್ಯುಂಡೈ ಕಂಪನಿ ಮಹತ್ವದ ಪಾತ್ರ ವಹಿಸಿತ್ತು.

ಕೆಲವು ವರ್ಷದ ನಂತರ ದಕ್ಷಿಣ ಕೊರಿಯಾ ಒಂದು ಹೊಸ ಕಾನೂನ ತಂದಿತ್ತು. ಅದರ ಪ್ರಕಾರ ಯಾವುದೇ ವಿದೇಶಿ ಕಾರು ತಯಾರಿಸುವ ಕಂಪನಿ ಸ್ಥಳೀಯ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿ ಕೊಳ್ಳಬೇಕಿತ್ತು ಅಥವಾ ತಂತ್ರಜ್ಞಾನವನ್ನು ಕೊಡಬೇಕಿತ್ತು. ಈ ಅವಕಾಶವನ್ನು ಉಪಯೋಗಿಸಿಕೊಂಡ ಜು- ಯುಂಗ್, ಅಮೆರಿಕದ ಫೋರ್ಡ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡರು. ಅಲ್ಲಿಯವರೆಗೂ ಕಾರು ರಿಪೇರಿ ಮಾಡುತ್ತಿದ್ದ ಹುಂಡೈ ಕಂಪನಿ ಮೊದಲ ಬಾರಿಗೆ ಕಾರು ತಯಾರಿಸುವ ಸಂಸ್ಥೆಯಾಗಿ ಬೆಳೆದು ನಿಂತಿತು. ದೇಶದ ಉಲ್ಸನ್ ನಗರದಲ್ಲಿ ಕಾರು ತಯಾರಿಸುವ ದೊಡ್ಡ ಕಾರ್ಖಾನೆಯನ್ನು ನಿರ್ಮಿಸಿತು. ಇಂದು ಆ ಕಾರ್ಖಾನೆ ಪ್ರತಿ ವರ್ಷ ಹದಿನಾರು ಲಕ್ಷ ಕಾರು ತಯಾರಿಸುತ್ತದೆ.

ಅದೊಂದೇ ಕಾರ್ಖಾನೆಯಲ್ಲಿ ಸುಮಾರು ಎಪ್ಪತ್ತೈದು ಸಾವಿರ ಜನ ಕೆಲಸ ಮಾಡುತ್ತಾರೆ. ಆದರೆ ದಕ್ಷಿಣ ಕೊರಿಯಾದಲ್ಲಿ ತಯಾರಿಸಿದ ಮೊದಲ ಕಾರುಗಳು ಯಶಸ್ವಿಯಾಗಲಿಲ್ಲ ಅದಕ್ಕೆ ಸರಿಯಾಗಿ ಅತಿವೃಷ್ಟಿಯಿಂದ ಉಲ್ಸನ್ ನಗರದಲ್ಲಿ ಪ್ರವಾಹ ಉಂಟಾಗಿ, ಕಾರ್ಖಾನೆ ಭಾರಿ ನಷ್ಟಕ್ಕೆ ಒಳಗಾ ಯಿತು. ಅಲ್ಲಿಯೂ ಸೋಲು ಒಪ್ಪಿಕೊಳ್ಳದ ಜು-ಯುಂಗ್, ಪ್ರವಾಹದ ನಂತರ ಅದೇ ಕಾರ್ಖಾನೆಯನ್ನು ಪುನಃ ಆರಂಭಿಸಿದರು. ಮೊದಲಿನ ತಪ್ಪುಗಳನ್ನು ಸರಿಪಡಿಸಿ ಕೊಂಡು ಕಾರು ತಯಾರಿಸಿದ್ದರಿಂದ ಈ ಬಾರಿ ಯಶಸ್ವಿಯಾದರು. ಆದರೆ ಕೆಲವೇ ವರ್ಷದಲ್ಲಿ ಹುಂಡೈ ಮತ್ತು ಫೋರ್ಡ್ ನಡುವೆ ಮನಃಸ್ತಾಪ ಉಂಟಾಗಿ, ಎರಡೂ ಕಂಪನಿಗಳು ಬೇರೆ ಬೇರೆಯಾದವು. ಆದರೆ, ಹ್ಯುಂಡೈಗೆ ಸ್ವಂತ ಬಲದ ಮೇಲೆ ಕಾರು ತಯಾರಿಸುವ ತಂತ್ರಜ್ಞಾನ ಗೊತ್ತಿರಲಿಲ್ಲ.

ಆದ್ದರಿಂದ ಜು-ಯುಂಗ್ ಮತ್ತೆ ಆತಂಕಕ್ಕೆ ಒಳಗಾದರು. ಭಾಗೀದಾರರಾಗಲು ಹೊಸ ಕಂಪನಿಯ ಹುಡುಕಾಟದಲ್ಲಿ ತೊಡಗಿದರು. ವೋಕ್ಸ್‌ವಾಗನ್,
ಜನರಲ್ ಮೋಟರ್ಸ್ ಜು-ಯುಂಗ್ ಆಮಂತ್ರಣವನ್ನು ತಿರಸ್ಕರಿಸಿದವು. ಕೊನೆಗೆ ಹುಂಡೈಯೊಂದಿಗೆ ಬಾಗಿದಾರರಾಗಲು ಜಪಾನಿನ ಮಿಟ್ಸುಬಿಶಿ ಕಂಪನಿ
ಒಪ್ಪಿಕೊಂಡಿತ್ತು. ಮಿಟ್ಸುಬಿಶಿ ಕಾರು ತಯಾರಿಸುವ ತಂತ್ರಜ್ಞಾನವನ್ನು ಹ್ಯುಂಡೈಗೆ ಒದಗಿಸಿತು. ೧೯೭೫ರಲ್ಲಿ ಹ್ಯುಂಡೈ ಪೂರ್ಣ ಪ್ರಮಾಣದ ದೇಶೀ ಕಾರನ್ನು ತಯಾರಿಸಿತು. ಅದು ಎಷ್ಟು ಸಫಲವಾಯಿತು ಎಂದರೆ, ಕೋರಿಯಾದ ಕಾರು ಮಾರುಕಟ್ಟೆಯ ಶೇಕಡಾ ಅರವತ್ತರಷ್ಟನ್ನು ಆವರಿಸಿಕೊಂಡಿತು.

ಈ ಹಂತ ತಲುಪುವಾಗ ಜು-ಯುಂಗ್‌ಗೆ ಅರವತ್ತು ವರ್ಷ ವಯಸ್ಸಾಗಿತ್ತು! ಉತ್ತರ ಕೋರಿಯಾದ ಟಾಂಗ್ ಚಾನ್ ಹಳ್ಳಿಯಲ್ಲಿ ಜನಿಸಿ, ದಕ್ಷಿಣ ಕೋರಿ ಯಾದಲ್ಲಿ ವ್ಯಾಪಾರ ಆರಂಭಿಸಿ, ಆ ಕಾಲದಲ್ಲಿ ದಕ್ಷಿಣ ಕೋರಿಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾದವರು ಚುಂಗ್ ಜು-ಯುಂಗ್. ಹದಿನಾರನೆಯ ವಯಸ್ಸಿನವರೆಗೂ ಬಡತನ, ಅದರ ನಂತರದ ಇಪ್ಪತ್ತು ವರ್ಷ ಸತತ ಸೋಲು, ಅಲ್ಲಿಗೆ ಜೀವನದ ಅರ್ಧಕ್ಕಿಂತ ಹೆಚ್ಚು ಆಯುಷ್ಯವೇ ಮುಗಿದು ಹೋಯಿತು. ಬೇರೆ ಯಾರದರೂ ಆಗಿದ್ದರೆ ಅದೆಷ್ಟು ಬಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೋ ಏನೋ? ಸೋಲನ್ನೇ ಗುಲಾಮನನ್ನಾಗಿಸಿ, ತನ್ನ ದೇಶವನ್ನಷ್ಟೇ ಅಲ್ಲ, ವಿಶ್ವವನ್ನೇ ಆಳಿದ ವರು ಚುಂಗ್ ಜು-ಯುಂಗ್. ಅನೇಕರಿಗೆ ಹ್ಯುಂಡೈ ಎಂದರೆ ಕೇವಲ ಕಾರು ತಯಾರಿಸುವ ಕಂಪನಿ.

ಹುಂಡೈ ಇಂದು ವಿಶ್ವದ ಕಾರು ತಯಾರಿಸುವ ಕಂಪನಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆದರೆ ಅಷ್ಟಕ್ಕೇ ಸೀಮಿತವಾಗಿಲ್ಲ, ವಿಶ್ವದ ಅತಿ ದೊಡ್ಡ ಹಡಗು ಕಟ್ಟುವ ಕಂಪನಿಯಾಗಿ ಬೆಳೆದಿದೆ. ವಿಶ್ವದ ಭಾರಿ ಯಂತ್ರೋಪಕರಣಗಳನ್ನು ತಯಾರಿಸುವ ಕಂಪನಿಗಳಲ್ಲಿ ಹುಂಡೈ ಕೂಡ ಒಂದು. ದಕ್ಷಿಣ ಕೋರಿಯಾದಲ್ಲಿ ಪ್ರಮುಖ ರಾಷ್ಟ್ರೀಯ ಹೆzರಿ, ಅಣುಸ್ಥಾವರ. ಅಣೆಕಟ್ಟು, ಇವುಗಳನ್ನೆಲ್ಲ ನಿರ್ಮಿಸಿದ ಕೀರ್ತಿ ಹ್ಯುಂಡೈ ಸಿವಿಲ್ ವರ್ಕ್ಸ್ ಕಂಪನಿಗೆ ಸಲ್ಲುತ್ತದೆ. ಇಂದು ಹುಂಡೈ ಕಂಪನಿಯ ಒಟ್ಟು ಮೌಲ್ಯ ಹದಿನಾರು ಟ್ರಿಲಿಯನ್ ವೊನ್ (ಒಂದು ಲಕ್ಷ ಕೋಟಿ ರುಪಾಯಿ). ಹ್ಯುಂಡೈ ಇಂದು ಸಮುದ್ರ
ದಲ್ಲಿ ಬಳಸುವ ವಿವಿಧ ಯಂತ್ರೋಪಕರಣ, ಹಡಗು, ಜಲಂತರ್ಗಾಮಿ ನೌಕೆ, ವಿದ್ಯುತ್ ಸ್ಥಾವರ, ಪೆಟ್ರೋಲಿಯಂ ಉತ್ಪನ್ನಕ್ಕೆ ಬಳಸುವ ಯಂತ್ರ, ಅದನ್ನು
ಶೇಖರಿಸಿ ಇಡಲು ಬೇಕಾದ ಟ್ಯಾಂಕರ್, ಸಾಗಿಸಲು ಬೇಕಾದ ಟ್ಯಾಂಕರ್, ಹೀಗೆ ಅನೇಕ ಉದ್ಯಮದಲ್ಲಿ ತೊಡಗಿಸಿಕೊಂಡಿದೆ.

ವಿಶ್ವದಾದ್ಯಂತ ಎಲ್ಲ ದೇಶದಲ್ಲೂ ಒಂದಲ್ಲ ಒಂದು ಕ್ಷೇತ್ರದಲ್ಲಿ ಹ್ಯುಂಡೈ ಹೆಸರು ಕಾಣುತ್ತದೆ. ಇನ್ನು ಕಾರಿನ ವಿಷಯಕ್ಕೆ ಬಂದರೆ, ಕಳೆದ ವರ್ಷ ಹ್ಯುಂಡೈ ವಿಶ್ವದಾದ್ಯಂತ ಅರವತ್ತೆಂಟು ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ, ಅದರಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಭಾರತ ದಲ್ಲಿಯೇ ಮಾರಾಟವಾಗಿವೆ. ಜು-ಯುಂಗ್ ಸಾಕಷ್ಟು ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿದ್ದಾರೆ. ವಿದ್ಯಾರ್ಥಿಗಳಿಗೆ, ಬಡವರಿಗೆ ದಾನವನ್ನೂ ಮಾಡಿದ್ದಾರೆ, ಪ್ರೋತ್ಸಾಹ ಧನ ನೀಡಿದ್ದಾರೆ.

ದಕ್ಷಿಣ ಕೋರಿಯಾ ಕಟ್ಟುವುದರಲ್ಲಿ ಅವರ ಪಾತ್ರ ದೊಡ್ದದು. ೧೯೮೮ ರಲ್ಲಿ ಸಿಯೋಲ್ ನಲ್ಲಿ ಒಲಿಂಪಿಕ್ಸ್ ನಡೆದದ್ದೇ ಅವರಿಂದ ಎಂದರೆ ತಪ್ಪಲ್ಲ. ದಕ್ಷಿಣ ಮತ್ತು ಉತ್ತರ ಕೊರಿಯಾ ನಡುವಿನ ಸಂಬಂಧ ಸುಧಾರಿಸುವಲ್ಲಿಯೂ ಅವರು ಮಹತ್ವದ ಪಾತ್ರವನ್ನು ವಹಿಸಿದ್ದರು. ಇಷ್ಟೆಲ್ಲ ಆಗಿಯೂ ಎಂಬತ್ತಾರು ವರ್ಷ ಬದುಕಿದ್ದ ಜು- ಯುಂಗ್, ತಮ್ಮ ಎಪ್ಪತ್ತಾರನೆಯ ವರ್ಷದಲ್ಲಿಯೂ ಸೋಲನ್ನು ಕಂಡಿದ್ದರು, ದಕ್ಷಿಣ ಕೋರಿಯಾದ ಅಧ್ಯಕ್ಷ ಚುನಾವಣೆಗೆ ನಿಂತು ಸೋತಿದ್ದರು. ಅದೆಲ್ಲ ಸರಿ, ತನ್ನ ಮನೆಯ ಆಕಳನ್ನೇ ಕದ್ದು ಮಾರಿದ್ದು ತಪ್ಪಲ್ಲವೇ? ಅದಕ್ಕೆ ಪ್ರಾಯಶ್ಚಿತ್ತವಾಗಿ ಅವರು ಒಂದು ಸಾವಿರ ಆಕಳನ್ನು ದಾನ ಮಾಡಿದ್ದರು.