Sunday, 15th December 2024

ಹೆಚ್ಚುತ್ತಲೇ ಇದೆ ಚುನಾವಣಾ ಅಕ್ರಮ

ವರ್ತಮಾನ

maapala@gmail.com
ಚುನಾವಣೆ ವೇಳೆಯ ಅಕ್ರಮ ತಡೆಗಟ್ಟಲು ಚುನಾವಣಾ ಆಯೋಗ ಎಷ್ಟೇ ಕಸರತ್ತು ಮಾಡಿದರೂ ಅದು ಹೆಚ್ಚಾಗು ತ್ತಲೇ ಸಾಗುತ್ತಿದೆ. ಮೊದಲೆಲ್ಲಾ ಪಕ್ಷಗಳು, ಅಭ್ಯರ್ಥಿಗಳು ಮತದಾರರಿಗೆ ಆಮಿಷ ಒಡ್ಡುತ್ತಿದ್ದರೆ, ಇತ್ತೀಚಿನ ವರ್ಷ ಗಳಲ್ಲಿ ಮತದಾರರೇ ಬೇಡಿಕೆ ಇಟ್ಟು ಅಭ್ಯರ್ಥಿಗಳ ಕಡೆಯಿಂದ ವಸೂಲಿ ಮಾಡುವ ಮಟ್ಟಕ್ಕೆ ಬಂದು ನಿಂತಿದೆ.

ಏಪ್ರಿಲ್ ೧೫ರಂದು ಚುನಾವಣಾ ಅಕ್ರಮಗಳ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದ ಕೇಂದ್ರ ಚುನಾವಣಾ ಆಯೋಗ ಈ ಬಾರಿಯ ಲೋಕಸಭೆ ಚುನಾವಣೆ ವೇಳಾಪಟ್ಟಿ ಪ್ರಕಟವಾಗಿ ನೀತಿ ಸಂಹಿತೆ ಜಾರಿಗೊಳಿಸಿದ ಮೇಲೆ ೪,೬೫೦ ಕೋಟಿ ರು. ಮೌಲ್ಯದ ವಸ್ತುಗಳು ಹಾಗೂ ನಗದು ವಶಪಡಿಸಿಕೊಂಡಿರುವುದಾಗಿ ಹೇಳಿತ್ತು. ಈ ಅಂಕಿ ಅಂಶಗಳು ಮಾಹಿತಿ ನೀಡಿದ್ದ ಎರಡು ದಿನಗಳ ಹಿಂದಿನವರೆಗಿನದ್ದಾಗಿತ್ತು.

ಅಂದರೆ, ಏ. ೧೩ರವರೆಗೆ ವಶಪಡಿಸಿಕೊಂಡ ವಸ್ತುಗಳ ಮೌಲ್ಯವಾಗಿತ್ತು. ಇದು ಲೋಕಸಭಾ ಚುನಾವಣೆ ಇತಿಹಾಸದಲ್ಲೇ ಅಂದರೆ
ಭಾರತ ಸ್ವಾತಂತ್ರ್ಯವಾದ ಬಳಿಕ ಈವರೆಗಿನ ಅತಿ ಹೆಚ್ಚು ಮೊತ್ತದ ಚುನಾವಣಾ ಅಕ್ರಮಗಳ ಪತ್ತೆ ಎಂಬ ಬೇಡವಾದ ದಾಖಲೆ ನಿರ್ಮಿಸಿತ್ತು. ೨೦೧೯ರ ಲೋಕಸಭೆ ಚುನಾವಣೆ ವೇಳೆ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿ ಪ್ರಕ್ರಿಯೆ ಮುಗಿಯುವವರೆಗೆ ೩,೪೭೫ ಕೋಟಿ ರು. ಮೌಲ್ಯದ ನಗದು, ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ, ಈ ಬಾರಿ ಚುನಾವಣೆ ಪೂರ್ಣಗೊಳ್ಳಲು ಇನ್ನೂ ಒಂದೂವರೆ ತಿಂಗಳು ಬಾಕಿ ಇರುವಾಗಲೇ ೪,೬೫೦ ಕೋಟಿ ರು.ನ ಅಕ್ರಮಗಳು ಬೆಳಕಿಗೆ ಬಂದಿವೆ.

ಚುನಾವಣಾ ಆಯೋಗ ಇನ್ನಷ್ಟು ಪರಿಣಾಮಕಾರಿಯಾಗಿ ಅಕ್ರಮ ಪತ್ತೆಹಚ್ಚುವ ಕೆಲಸ ಮಾಡಿದರೆ ಚುನಾವಣೆ ಮುಗಿಯುವ ವೇಳೆಗೆ ಇದು ದುಪ್ಪಟ್ಟಾದರೂ ಅಚ್ಚರಿ ಇಲ್ಲ. ಏಕೆಂದರೆ, ಅಕ್ರಮಗಳು ಮತದಾನದ ದಿನಾಂಕ ಸಮೀಪಿಸುತ್ತಿರುವಾಗಲೇ ಹೆಚ್ಚಾಗುವುದು. ಇದೀಗ ಮೊದಲ ಹಂತದ ಮತದಾನ ಮಾತ್ರ ಮುಗಿದಿದ್ದು, ಇನ್ನೂ ಆರು ಹಂತದ ಮತದಾನ ನಡೆಯಬೇಕಿದೆ. ಇನ್ನು ರಾಜ್ಯದ ವಿಚಾರಕ್ಕೆ ಬರುವುದಾದರೆ ಈವರೆಗೆ ಪತ್ತೆಯಾದ ನಗದು, ಮದ್ಯ, ಚಿನ್ನಾಭರಣ, ಉಡುಗೊರೆಗಳ ಮೌಲ್ಯ ೪೦೦ ಕೋಟಿ ರು. ದಾಟಿದೆ. ಈ ಪೈಕಿ ೭೪.೬೪ ರು. ನಗದು ಇದ್ದರೆ, ೧೭೫.೮೮ ಕೋಟಿ ರು. ಮೌಲ್ಯದ ಮದ್ಯ, ೫೭.೫೬ ಕೋಟಿ ರು. ಮೌಲ್ಯದ ಚಿನ್ನ ಇದೆ.

ಒಟ್ಟು ೨೭,೭೮೭ ಪ್ರಕರಣಗಳನ್ನು ದಾಖಲಿಸಲಾಗಿದೆ. ಸಿವಿಜಿಲ್ ಆಪ್ ಮೂಲಕ ಅಕ್ರಮಗಳಿಗೆ ಸಂಬಂಧಿಸಿದಂತೆ ೨೪,೮೬೯ ದೂರುಗಳನ್ನು ಸ್ವೀಕರಿಸಲಾಗಿದೆ. ಇದು ಚುನಾವಣಾ ಅಕ್ರಮಗಳ ಸ್ಯಾಂಪಲ್ ಅಷ್ಟೆ. ಚುನಾವಣಾ ಆಯೋಗ ವಿವಿಧ ಇಲಾಖೆಗಳ
ಸಹಕಾರದೊಂದಿಗೆ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟು ಕಾರ್ಯಾಚರಣೆ ನಡೆಸಿದ ಪರಿಣಾಮ ಇಷ್ಟು ಪ್ರಮಾಣದ ಅಕ್ರಮಗಳು ಪತ್ತೆಯಾಗಿವೆ. ಈ ನಿಟ್ಟಿನಲ್ಲಿ ಆಯೋಗದ ಕ್ರಮ ಮೆಚ್ಚುಗೆಗೆ ವ್ಯಕ್ತವಾಗುತ್ತದೆಯಾದರೂ ಇದರಿಂದ ಅಕ್ರಮಗಳಿಗೆ ಕಡಿವಾಣ ಬಿದ್ದಿದೆ.

ಯಾವುದೇ ಅಕ್ರಮಗಳು ನಡೆಯುವುದಿಲ್ಲ ಎಂದು ಅರ್ಥವಲ್ಲ. ಚುನಾವಣಾ ಆಯೋಗ ೪,೬೫೦ ಕೋಟಿ ರು.ನ ಅಕ್ರಮ ಪತ್ತೆ ಹಚ್ಚಿರುವುದರಿಂದ ಈ ಬಾರಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಅಷ್ಟು ಮೊತ್ತದ ಹೆಚ್ಚುವರಿ ಹೊರೆ ಬಿದ್ದಿದೆ ಎಂದು ಹೇಳಬಹುದು. ಏಕೆಂದರೆ, ಚುನಾವಣಾ ಆಯೋಗ ಚಾಪೆ ಕೆಳಗೆ ನುಗ್ಗಿದ್ರೆ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು
ರಂಗೋಲಿ ಕೆಳಗೆ ತೂರುತ್ತಾರೆ. ಅಕ್ರಮಗಳಿಗೆ ಹೊಸ ದಾರಿ ಕಂಡುಕೊಳ್ಳುತ್ತಾರೆ. ಏಕೆಂದರೆ, ೨೦೨೪ರ ಲೋಕಸಭೆ ಚುನಾವಣೆಗೆ ಪ್ರತಿ ಅಭ್ಯರ್ಥಿಗೆ ಚುನಾವಣಾ ಆಯೋಗ ನಿಗದಿಪಡಿಸಿರುವ ವೆಚ್ಚದ ಮಿತಿ ೯೫ ಲಕ್ಷ ರು. ಮಾತ್ರ.

ಆದರೆ, ಸುಮಾರು ೭ರಿಂದ ೮ ವಿಧಾನಸಭಾ ಕ್ಷೇತ್ರಗಳಿರುವ ಲೋಕಸಭಾ ಕ್ಷೇತ್ರದಲ್ಲಿ ಇಷ್ಟೊಂದು ಕಡಿಮೆ ವೆಚ್ಚದಲ್ಲಿ ಈಗಿನ
ಪರಿಸ್ಥಿತಿಯಲ್ಲಿ ಚುನಾವಣೆ ನಡೆಸುವುದು ಅಭ್ಯರ್ಥಿಗೆ ಕಷ್ಟಸಾಧ್ಯ. ಅದರಲ್ಲೂ ಈಗ ಎಲ್ಲವನ್ನೂ ಹಣ, ಹೆಂಡದಲ್ಲೇ ಅಳೆಯು ವಾಗ ಪ್ರತಿ ಓಕಸಭಾ ಕ್ಷೇತ್ರದ ಚುನಾವಣೆಗೆ ಕೋಟ್ಯಂತರ ರು. ವೆಚ್ಚ ಮಾಡಲೇ ಬೇಕು. ಹೀಗಾಗಿ ಪ್ರತಿ ಚುನಾವಣೆಗಳಲ್ಲಿ ಅಭ್ಯರ್ಥಿ ಗಳು ಮತ್ತು ರಾಜಕೀಯ ಪಕ್ಷಗಳು ರಾಮನ ಲೆಕ್ಕ, ಕೃಷ್ಣನ ಲೆಕ್ಕ ಎಂಬ ಎರಡು ವೆಚ್ಚಗಳನ್ನು ಮಾಡುತ್ತಾರೆ.

ಇದರಲ್ಲಿ ರಾಮನ ಲೆಕ್ಕವನ್ನು ಚುನಾವಣಾ ಆಯೋಗಕ್ಕೆ ನೀಡಿದರೆ ಕೃಷ್ಣನ ಲೆಕ್ಕಕ್ಕೆ ಮಿತಿಯೇ ಇರುವುದಿಲ್ಲ. ಅದು ಆಯಾ ಅಭ್ಯರ್ಥಿಯ ವೆಚ್ಚ ಭರಿಸುವ ಸಾಮರ್ಥ್ಯ, ಆ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಗಳ ನಡುವಿನ ಪೈಪೋಟಿ, ಪಕ್ಷದ ಕಾರ್ಯಕರ್ತರು ಮತ್ತು ಮತದಾರರ ‘ಬೇಡಿಕೆ’ಗಳನ್ನು ಆಧರಿಸಿರುತ್ತದೆ. ಪ್ರಮುಖ ಅಭ್ಯರ್ಥಿಗಳು ಕನಿಷ್ಠ ೨೫ ಕೋಟಿ ರು. ಆದರೂ ಖರ್ಚು ಮಾಡಲೇ ಬೇಕು. ಆದರೆ, ಇದಕ್ಕೆ ಯಾವುದೇ ಅಧಿಕೃತ ಲೆಕ್ಕಾಚಾರಗಳು ಇರುವುದಿಲ್ಲ. ಬೇಡಿಕೆಗೆ ಅನುಗುಣವಾಗಿ ಹಣ ಪೂರೈಕೆ ಮಾಡಬೇಕು. ಈ ಲೆಕ್ಕ ಅಭ್ಯರ್ಥಿ ಮತ್ತು ಅವರ ಆಪ್ತರಿಗಷ್ಟೇ ಗೊತ್ತಿರುತ್ತದೆಯೇ ಹೊರತು ಬೇರೆಯವರಿಗೆ ಸಿಗುವುದಿಲ್ಲ.

ಇನ್ನು ಅಭ್ಯರ್ಥಿಗಳ ಕೆಲವು ಬೆಂಬಲಿಗರು ತಮ್ಮ ವ್ಯಾಪ್ತಿಯಲ್ಲಿ ರಾಜಕೀಯವಾಗಿ ಬೆಳೆಯುವ ಉದ್ದೇಶದಿಂದ ತಾವೂ ಒಂದಷ್ಟು
ದುಡ್ಡು ಹಾಕಿ ಕೆಲಸ ಮಾಡುತ್ತಾರೆ. ಇದೆಲ್ಲವೂ ಲೆಕ್ಕಕ್ಕಿಲ್ಲದ ಖರ್ಚುಗಳು. ಇದೆಲ್ಲದರ ಪರಿಣಾಮ ವರ್ಷ ಕಳೆದಂತೆ ಚುನಾವಣಾ ವೆಚ್ಚ ಏರುತ್ತಲೇ ಸಾಗುತ್ತಿದೆ. ಆರ್ಥಿಕವಾಗಿ ಪ್ರಬಲನಾಗಿದ್ದರೆ ಮತ್ತು ಮಾಡಿದ ವೆಚ್ಚವನ್ನು ಮುಂದೆ ವಸೂಲಿ ಮಾಡುವ
ಸಾಮರ್ಥ್ಯವಿದ್ದರೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುವ ಪರಿಸ್ಥಿತಿ ಬಂದಿದೆ.

ಎರಡು-ಮೂರು ದಶಕಗಳ ಹಿಂದೆ ಅಕ್ರಮಗಳು ಇಷ್ಟೊಂದು ಪ್ರಮಾಣದಲ್ಲಿ ನಡೆಯುತ್ತಿರಲಿಲ್ಲ. ಚುನಾವಣಾ ಪ್ರಚಾರ ಶುರು ವಾದ ಮೇಲೆ ರಾಜಕೀಯ ಪಕ್ಷಗಳ ಕಾರ್ಯಕರ್ತರು ಒಂದಷ್ಟು ಪ್ಯಾಂಪ್ಲೆಟ್, ಮತದಾರರ ಚೀಟಿ ಇಟ್ಟುಕೊಂಡು ಬೆಳಗ್ಗೆದ್ದು
ಮನೆ ಮನೆ ಭೇಟಿ ಆರಂಭಿಸುತ್ತಿದ್ದರು. ಬೆಳಗ್ಗಿನ ತಿಂಡಿ ವೇಳೆ ಆಯಾ ಪಕ್ಷದ ಪರವಾಗಿರುವ ಒಬ್ಬರ ಮನೆಗೆ ಹೋಗುತ್ತಿದ್ದರು. ಅಲ್ಲಿ ಅವರಿಗೆ ತಿಂಡಿಯ ವ್ಯವಸ್ಥೆಯಾಗುತ್ತಿತ್ತು. ಅದೇ ರೀತಿ ಮಧ್ಯಾಹ್ನದ ಊಟಕ್ಕೂ ಯಾವುದಾದರೂ ಒಂದು ಮನೆಯಲ್ಲಿ
ವ್ಯವಸ್ಥೆಯಾಗುತ್ತಿತ್ತು. ಹೋಗುವ ಹಲವು ಮನೆಗಳಲ್ಲಿ ಕಾಫಿ-ಚಹಾ, ತಿಂಡಿ ಸಿಗುತ್ತಿತ್ತು.

ಹೀಗಾಗಿ ಕಾರ್ಯಕರ್ತರಿಗೂ ಹೆಚ್ಚಿನ ಖರ್ಚು ಇರಲಿಲ್ಲ. ಅಭ್ಯರ್ಥಿಗಳೂ ಅಷ್ಟೆ, ಯಾವುದಾದರೂ ಒಂದು ಊರಿಗೆ ಪ್ರಚಾರಕ್ಕೆ ತೆರಳಿದರೆ ಪಕ್ಷದ ಕಾರ್ಯಕರ್ತರೊಬ್ಬರ ಮನೆಯಲ್ಲಿ ಊಟ-ತಿಂಡಿ ಮಾಡುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ. ಪಕ್ಷದ ಕಾರ್ಯಕರ್ತರು ಪ್ರಚಾರಕ್ಕೆ ಹೋಗ ಬೇಕಾದರೆ ದಿನಕ್ಕೆ ಕನಿಷ್ಟ ೧ ಸಾವಿರ ರು. ಕೊಡಬೇಕು. ಅದರೊಂದಿಗೆ ಊಟ-ತಿಂಡಿಗೆ ಪ್ರತ್ಯೇಕ. ಮದ್ಯ ಸೇವಿಸುವವನಾದರೆ ಅದಕ್ಕೂ ಇಂತಿಷ್ಟು ಪಾವತಿಸಬೇಕು. ಅಂದರೆ ಒಬ್ಬ ಕಾರ್ಯಕರ್ತನಿಗೆ ಏನಿಲ್ಲವೆಂದರೂ ೧,೫೦೦ ರು. ವೆಚ್ಚ ಮಾಡಬೇಕು.

ಇನ್ನು ಅಭ್ಯರ್ಥಿಗಳೂ ಅಷ್ಟೆ, ಊರುಗಳಿಗೆ ಹೋದಾಗ ಅಭ್ಯರ್ಥಿ, ಆತನ ಬೆಂಬಲಿಗರು, ಹಿಂಬಾಲಕರಿಗೆ ಭೂರಿ ಭೋಜನದ ವ್ಯವಸ್ಥೆ ಆಗಬೇಕು. ಆಯಾ ಊರುಗಳಲ್ಲಿ ಚುನಾವಣಾ ನೇತೃತ್ವವನ್ನು ಯಾರಿಗೆ ವಹಿಸಲಾಗುತ್ತದೆಯೋ ಆತನ ಮನೆಯಲ್ಲೇ ಈ ಎಲ್ಲಾ ವ್ಯವಸ್ಥೆಯಾಗುತ್ತದೆ. ಏಕೆಂದರೆ, ಆ ಊರಿನ ಚುನಾವಣಾ ವೆಚ್ಚವಾಗಿ ಮೊದಲೇ ಅಭ್ಯರ್ಥಿ ಅಥವಾ ಆತನ ಕಡೆಯವರು
ಇಂತಿಷ್ಟು ಮೊತ್ತವನ್ನು ಆ ಯಜಮಾನನಿಗೆ ನೀಡಿರುತ್ತಾರೆ. ಅದರಲ್ಲೇ ಒಂದು ಭಾಗವನ್ನು ಆತ ಇದಕತ್ಕೆ ವೆಚ್ಚ ಮಾಡುತ್ತಾನೆ.

ಇನ್ನು ಮತದಾರರಿಗೆ ಆಮಿಷ ವಿಚಾರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಎಲ್ಲರಿಗೂ ಅಲ್ಲದೇ ಇದ್ದರೂ ಅರ್ಧದಷ್ಟು ಮಂದಿಗೆ ಹಣ ಹಂಚಲೇ ಬೇಕು. ಅದರಲ್ಲೂ ಇತ್ತೀಚೆಗೆ ಪೈಪೋಟಿ ಹೆಚ್ಚಾಗುತ್ತಿರುವುದರಿಂದ ಮೊತ್ತವೂ ಏರಿಕೆಯಾಗುತ್ತಲೇ ಇದೆ. ಕೆಲವು ಕ್ಷೇತ್ರಗಳಲ್ಲಿ ಒಂದು ಮತಕ್ಕೆ ಕನಿಷ್ಟ ೧ ಸಾವಿರ ರು.ನಿಂದ ೧೦ ಸಾವಿರ ರು. ನೀಡಬೇಕಾಗುತ್ತದೆ. ಅಷ್ಟೇ ಅಲ್ಲ, ಅದರ ಜತೆಗೆ ಮನೆಗೆ ಒಂದಷ್ಟು ಉಡುಗೊರೆ, ನಾಲ್ಕೈದು ಮಂದಿ ಇದ್ದರೆ ಚಿನ್ನದ ಉಡುಗೊರೆ, ಹೆಣ್ಣು ಮಕ್ಕಳಿಗೆ ಸೀರೆ, ಕುಕ್ಕರ್, ಮಿಕ್ಸಿ… ಹೀಗೆ ಹತ್ತಾರು ಮಾದರಿಯ ಉಡುಗೊರೆಗಳನ್ನು ನೀಡಬೇಕಾಗುತ್ತದೆ.

ಹಣವನ್ನು ಹೇಗೋ, ಯಾರ ಮೂಲಕವೋ ನೀಡಬಹುದು. ಆದರೆ, ಉಡುಗೊರೆಗಳನ್ನು ಮತದಾರರಿಗೆ ತಲುಪಿಸುವುದೇ ದೊಡ್ಡ ಸವಾಲು. ಚುನಾವಣಾ ಆಯೋಗ ಅಲ್ಲಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಕಿ ತಪಾಸಣೆ ಮಾಡುತ್ತಿರುವುದರಿಂದ ನೇರವಾಗಿ ಪಕ್ಷ ಅಥವಾ ಅಭ್ಯರ್ಥಿಗಳು ಅದನ್ನು ಒದಗಿಸಲು ಕಷ್ಟಸಾಧ್ಯ. ಹೀಗಾಗಿ ಟೋಕನ್ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ರಾಜಕೀಯ ಪಕ್ಷಗಳ ಅಭ್ಯರ್ಥಿ ಮತ್ತು ಆತನ ಕಡೆಯವರು ನೀಡಿದ ಟೋಕನ್ ಜತೆಗೆ ಅವರು ಸೂಚಿಸಿದ ಅಂಗಡಿಗೆ ತೆರಳಿದರೆ ಅಲ್ಲಿ ಟೋಕನ್ ನೀಡಿ ಉಡುಗೊರೆ ಪಡೆಯಬಹುದು.

ಇಂತಹ ಅಕ್ರಮಗಳು ಬೆಳಕಿಗೆ ಬಂದರೂ ಅದನ್ನು ಸಾಬೀತು ಪಡಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ, ಅದರಲ್ಲಿ ಅಭ್ಯರ್ಥಿ ಅಥವಾ ಪಕ್ಷದ ಪ್ರಸ್ತಾಪವೇ ಇರುವುದಿಲ್ಲ. ಯಾವುದಾದರೂ ಕೋಡ್‌ವರ್ಡ್ ಇಲ್ಲವೇ ನಿರ್ದಿಷ್ಟ ಮಾಹಿತಿ ಮಾತ್ರ ಇರುತ್ತದೆ. ಯಾರು ಕೊಟ್ಟರು? ಎಲ್ಲಿಂದ ತೆಗೆದುಕೊಳ್ಳಬೇಕು ಎಂಬುದು ಕೊಟ್ಟವರು ಮತ್ತು ತೆಗೆದುಕೊಳ್ಳುವವರಿಗೆ ಮಾತ್ರ ಗೊತ್ತಿರುತ್ತದೆ. ಒಂದೊಮ್ಮೆ ಅದು ಇತರರಿಗೆ ಗೊತ್ತಾದರೂ ಅದನ್ನು ಸಾಬೀತುಪಡಿಸಲು ಬೇಕಾದ ಸಾಕ್ಷ್ಯಗಳು ಸಿಗುವುದಿಲ್ಲ. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ಈ ರೀತಿಯ ವ್ಯವಹಾರಗಳಿಗೆ ಒತ್ತು ನೀಡಲಾಗುತ್ತದೆ. ಹೀಗಾಗಿ ಅವುಗಳಲ್ಲಿ ಬಹುತೇಕ ಚುನಾವಣಾ ಆಯೋಗದ
ಗಮನಕ್ಕೂ ಬರುವುದಿಲ್ಲ. ಅಂಗಡಿಗಳವರೂ ಅಷ್ಟೆ, ಚುನಾವಣೆ ಘೋಷಣೆಯಾಗುವ ಮೊದಲೇ ಅಂತಹ ವಸ್ತುಗಳನ್ನು ತಂದು ಗೋದಾಮುಗಳಲ್ಲಿ ಶೇಖರಿಸಿಟ್ಟುಕೊಳ್ಳುತ್ತಾರೆ.

ಕೆಲವೊಮ್ಮೆ ಅಭ್ಯರ್ಥಿಗಳು ಮೊದಲೇ ಹಣ ಕೊಟ್ಟರೆ, ಇನ್ನು ಕೆಲವೊಮ್ಮೆ ಚುನಾವಣೆ ಮುಗಿದ ಬಳಿಕ ಹಣ ನೀಡಲಾಗುತ್ತದೆ.
ಚುನಾವಣೆ ವೇಳೆ ಟೋಕನ್ ಕೊಟ್ಟವರ ಹೆಸರಿನಲ್ಲಿ ಬಿಲ್ ಮಾಡಿದರೆ ಅಂಗಡಿಯವರಿಗೂ ಯಾವುದೇ ಸಮಸ್ಯೆ ಆಗುವುದಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಚುನಾವಣಾ ಆಯೋಗ ಏನೇ ಕಸರತ್ತು ಮಾಡಿದರೂ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಸಾಧ್ಯವಾಗುತ್ತಲೇ ಇಲ್ಲ. ವಿವಿಧ ಇಲಾಖೆಗಳ ಸಹಕಾರದೊಂದಿಗೆ ಸಾಕಷ್ಟು ಅಕ್ರಮಗಳನ್ನು ಪತ್ತೆಹಚ್ಚಿದರೂ ಅಭ್ಯರ್ಥಿಗಳು, ಪಕ್ಷಗಳು ಹೊಸ ದಾರಿಗಳನ್ನು ಕಂಡುಕೊಳ್ಳುತ್ತಾರೆ.

ಹಾಗೆಂದು ಇದಕ್ಕೆ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳನ್ನು ಮಾತ್ರ ಹೊಣೆ ಮಾಡಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಎಂದು ಹೇಳಿಕೊಳ್ಳುವ ಮತದಾರರದ್ದೂ ಅದಕ್ಕಿಂತ ದೊಡ್ಡ ಹೊಣೆಗಾರಿಕೆ ಇದೆ. ಆರಂಭದಲ್ಲಿ ರಾಜಕೀಯ ಪಕ್ಷಗಳು
ಮತ್ತು ಅಭ್ಯರ್ಥಿಗಳು ಆಮಿಷವೊಡ್ಡಿ ಮತದಾರರನ್ನು ಸೆಳೆಯುತ್ತಿದ್ದರು. ಆದರೆ, ಈಗ ಮತದಾರರೇ ಬೇಡಿಕೆ ಇಟ್ಟು ಅಭ್ಯರ್ಥಿ ಗಳಿಂದ ತಮಗೆ ಬೇಕಾದ್ದನ್ನು ವಸೂಲಿ ಮಾಡುವ ಮಟ್ಟಕ್ಕೆ ಚುನಾವಣಾ ವ್ಯವಸ್ಥೆ ಬಂದು ನಿಂತಿದೆ. ಯಾರು ಹೆಚ್ಚು ಹಣ ಕೊಡುತ್ತಾರೋ ಅವರಿಗೆ ಮತ ಹಾಕುತ್ತೇವೆ ಎಂದು ಅಭ್ಯರ್ಥಿಗಳ ಬೆಂಬಲಿಗರ ಮುಂದೆ ಬಹಿರಂಗವಾಗಿಯೇ ಹೇಳಿಕೊಳ್ಳುತ್ತಾರೆ. ಒಬ್ಬರು ಸಾವಿರ ರು. ಕೊಟ್ಟರೂ ೨ ಸಾವಿರ ರು. ಕೊಟ್ಟರು ಎಂದು ಹೇಳಿ ಇನ್ನೊಬ್ಬ ಅಭ್ಯರ್ಥಿ ಕಡೆಯಿಂದ ೩ ಸಾವಿರ ರು. ವಸೂಲಿ ಮಾಡುತ್ತಾರೆ.

ಹೀಗಾಗಿ ಪ್ರತಿ ಚುನಾವಣೆಯಲ್ಲಿ ಈ ರೀತಿಯ ಮತದ ‘ಬೆಲೆ’ ಹೆಚ್ಚಾಗುತ್ತಲೇ ಇದೆ. ಇನ್ನು ರಾಜಕೀಯ ನಾಯಕರು ಕೂಡ ಅಷ್ಟೆ, ಒಬ್ಬ ೧೦ ಕೋಟಿ ರು. ಖರ್ಚು ಮಾಡುತ್ತಾನೆ ಎಂದಾದರೆ, ಇನ್ನೊಬ್ಬ ೧೫ ಕೋಟಿ ರು. ಖರ್ಚು ಮಾಡಲು ಸಿದ್ಧವಿರುತ್ತಾನೆ. ಈ ರೀತಿ ಮಾಡುವ ವೆಚ್ಚ ಕಷ್ಟ ಪಟ್ಟು ಸಂಪಾದನೆ ಮಾಡಿದ್ದಂತೂ ಅಲ್ಲ ಎನ್ನುವ ಮತದಾರರು ಅವಕಾಶ ಸಿಕ್ಕಿದಾಗ ಸಾಧ್ಯವಾದಷ್ಟು
ಬಾಚಿಕೊಳ್ಳೋಣ ಎಂದು ಹೊರಡುತ್ತಾರೆ. ಚುನಾವಣಾ ಆಯೋಗದ ಹದ್ದಿನ ಕಣ್ಣಿನ ನಡುವೆಯೂ ಚುನಾವಣಾ ಅಕ್ರಮ ಹೆಚ್ಚಾಗುತ್ತಲೇ ಇದೆ.

ಲಾಸ್ಟ್ ಸಿಪ್: ಸಾಮಾನ್ಯವಾಗಿ ಕೊಟ್ಟು ತೆಗೆದುಕೊಳ್ಳುವ ಪದ್ಧತಿ ಇದ್ದರೆ ಚುನಾವಣೆಯಲ್ಲಿ ಮಾತ್ರ ತೆಗೆದುಕೊಂಡು ಬಳಿಕ ಕೊಡುವ ಪ್ರವೃತ್ತಿ ಬೆಳೆಯುತ್ತಿದೆ.