Sunday, 15th December 2024

ಚೀನಾದಿಂದ ಕರೋನಾ ಇಂಪೋರ್ಟ್ ಬ್ಯಾನ್ ಮಾಡಿ !

ತುಂಟರಗಾಳಿ

ಸಿನಿಗನ್ನಡ

ಯಾಕೋ ಕನ್ನಡದ ಕೆಲವು ಹಳೆಯ ಕಾಲದ ನಿರ್ದೇಶಕರ ಟೈಮೇ ಸರಿ ಇಲ್ಲ ಅನ್ಸುತ್ತೆ. ಅವರು ಕೈ ಹಾಕಿದ ಯಾವ ಪ್ರಾಜೆಕ್ಟ್ ಗಳೂ ಅವರ ಕೈ ಹಿಡಿಯು ತ್ತಿಲ್ಲ. ಬದಲಾಗಿ ಕೈ ಜಾರಿ ಹೋಗುತ್ತಿವೆ. ಕಳೆದ ವರ್ಷ ಮುತ್ತಪ್ಪ ರೈ ಅವರ ಬಗ್ಗೆ ಸಿನಿಮಾ ಮಾಡಬೇಕು ಅಂತ ಒಬ್ಬ ಹಳೆಯ ನಿರ್ದೇಶಕರು ಹೊರಟಿದ್ದರು. ಅದಕ್ಕೆ ಅದ್ದೂರಿ ಚಾಲನೆಯನ್ನೂ ಕೊಟ್ಟಿದ್ದರು.

ಆದರೆ ಅಷ್ಟರಲ್ಲಿ ಮುತ್ತಪ್ಪ ರೈ ಸಿನಿಮಾ ಹಕ್ಕುಗಳು ನಮ್ಮ ಬಳಿ ಇವೆ ಅಂತ ಇನ್ನೊಬ್ಬ ನಿರ್ಮಾಪಕರು ತಕರಾರು ಮಾಡಿದ್ದ ರಿಂದ ಇವರ ಎಂಆರ್ ಚಿತ್ರ ನಿಂತುಹೋಗಿತ್ತು. ಆದರೆ ಅಷ್ಟಕ್ಕೇ ಸುಮ್ಮನಾಗದ ಅವರು ಬಿದ್ದರು ಮೀಸೆ ಮಣ್ಣಾಗಿಲ್ಲ ಎಂಬಂತೆ ಡಿಆರ್ ಎಂಬ ಹೆಸರಿಟ್ಟುಕೊಂಡು ಅದೇ ಟೈಟಲ್ ಡಿಸೈನ್ ಇಟ್ಟುಕೊಂಡು ಹೊಸ ಸಿನಿಮಾ ಘೋಷಣೆ ಮಾಡಿದ್ದರು. ಆ ಮೂಲಕ ಎಂಆರ್ ಬಿಟ್ಟು ಡಿಆರ್ ಮೂಲಕ ಡಾಕ್ಟರ್ ಆಗಲು ಹೊರಟಿದ್ದ ಅವರಿಗೆ ಮತ್ತೊಮ್ಮೆ ಸಂಕಷ್ಟ ಒದಗಿಬಂದು ಆ ಸಿನಿಮಾ ಕೂಡಾ ನಿಂತುಹೋಯಿತು.

ಹಾಗಾಗಿ ಅದ್ದೂರಿಯಾಗಿ ತಮ್ಮ ಚಿತ್ರವನ್ನು ಬಿಡುಗಡೆ ಮಾಡಬೇಕೆಂದು ಹೊರಟಿದ್ದವರಿಗೆ ಪಾಪ ತಮ್ಮ ಚಿತ್ರಗಳ ನಿಲುಗಡೆ ಮತ್ತು ಮುಳುಗಡೆ ಸಮಸ್ಯೆ ಕಾಡುತ್ತಿದೆ. ಆದರೆ ಹಾಗಂತ ಈ ಬಗ್ಗೆ ಅವರನ್ನು ಯಾರಾದ್ರೂ ಕೇಳಿದ್ರೆ ಅಷ್ಟೇ, ನಿರಾಸೆ ಯಲ್ಲಿರುವ ಅವರಿಗೆ ಎಲ್ಲರೂ ತಮ್ಮ ವಿರುದ್ಧ ಮಸಲತ್ತು ಮಾಡುತ್ತಿzರೆ, ನನ್ನ ಸಿನಿಮಾ ನಿಂತು ಹೋಗಿದ್ದನ್ನು ನೋಡಿ ಖುಷಿ ಪಡುತ್ತಿzರೆ ಎಂಬ ಅನಿಸಿಕೆ ಮೂಡಿದೆ.

ಇದನ್ನು ತಲೆಗೇರಿಸಿಕೊಂಡಿರುವ ಅವರು ಈ ಬಗ್ಗೆ ಕೇಳಿದವರ ಮೇಲೆ ಹರಿಹಾಯುತ್ತಿದ್ದಾರೆ. ಅಂಡರ್ ವರ್ಲ್ಡ್ ಸಿನಿಮಾಗಳನ್ನು ಮಾಡಿ ಅಂಥ ಚಿತ್ರಗಳ ಮೂಲಕವೇ ಹೆಸರು ಮಾಡಬೇಕು ಎಂದುಕೊಂಡಿದ್ದವರು ಇವರು. ಆದರೆ, ಪಾಪ ಇಂದಿಗೂ ಅದ್ಯಾವುದೋ ಅನೈತಿಕ ಸಾಂಸಾರಿಕ ಚಿತ್ರದ ನಿರ್ದೇಶಕ ಅಂತಲೇ ಕರೆಸಿಕೊಳ್ಳುತ್ತಿರುವ ಅವರಿಗೆ ಯಶಸ್ಸು ಸಿಕ್ಕಿದ್ದು ಅಪರೂಪ. ಈಗ ನೋಡಿದರೆ ಸಿನಿಮಾ ನಿಂತುಹೋಗಿರುವ ಕೋಪವನ್ನು ಅವರು ಎಲ್ಲರ ಮೇಲೂ ಹೊರಹಾಕುತ್ತಿzರೆ. ಈ ಸಮಸ್ಯೆಯಿಂದ ಹೊರಬಂದು ಆದಷ್ಟು ಬೇಗ ಅವರು ಹುಷಾರಾಗಿ ಮತ್ತೆ ಸಿನಿಮಾ ಮಾಡುವಂತಾಗಲಿ.

ಲೂಸ್ ಟಾಕ್
ಪೊಲಿಟಿಕಲ್ ಲೀಡರ್ (ಕಾಲ್ಪನಿಕ ಸಂದರ್ಶನ)
ಚೀನಾದಲ್ಲಿ ಹೆಚ್ಚಾಗಿರೋ ಕರೋನಾ ಮತ್ತೆ ಭಾರತಕ್ಕೂ ಬರುತ್ತಂತೆ, ಏನ್ ಮಾಡ್ತೀರಾ ಸರ್
-ಏನಿಲ್ಲ, ಸಿಂಪಲ. ಚೀನಾದಿಂದ ಕರೋನಾ ಇಂಪೋರ್ಟ್ ಮಾಡೋದನ್ನ ಬ್ಯಾನ್ ಮಾಡ್ಬೇಕು ಅಷ್ಟೇ.

ಸರಿ ಹೋಯ್ತು, ಇರ್ಲಿ, ಮತ್ತೆ ಕರೋನಾ ಬರ್ತಿದೆ. ಮಾ ಹಾಕ್ಕೊಳಿ. ಜಾಸ್ತಿ ಹೊರಗೆ ಹೋಗ್ಬೇಡಿ, ಗುಂಪು ಸೇರ್ಬೇಡಿ ಅಂತೀರಾ, ನೀವೇ ನಿಮ್ಮ ಕಾರ್ಯಕ್ರಮಗಳಿಗೆ ಲಕ್ಷಾಂತರ ಜನ ಸೇರಿಸ್ತೀರಲ್ಲ?
-ಏನ್ ಮಾಡೋದು, ಚುನಾವಣೆ ಹತ್ರ ಬಂತಲ್ಲ. ಪ್ರಚಾರದ ವಿಷ್ಯಕ್ಕೆ ಬಂದ್ರೆ ನಮ್ಮದು ಆಚಾರವಿಲ್ಲದನಾಲಿಗೆ

ನಿಮ್ಮ ಎಲೆಕ್ಷನ್ ಗೋಸ್ಕರ ಜನರಿಗೆ ತೊಂದ್ರೆ ಆದ್ರೂ ಪರವಾಗಿಲ್ಲ ಅಂತನಾ?
-ನೋಡ್ರೀ, ಸದ್ಯದ ನಾವು ನಾವ್ ಎಲೆಕ್ಷನ್ನಿಗೆ ನಿಂತ್ಕೊತೀವಿ, ಅದಕ್ಕೆ ಈಗ ಜನರನ್ನ ಓಡಾಡ್ಕೊಂಡ್ ಇರೋಕೆ ಬಿಟ್ಟಿದೀವಿ, ಆಮೇಲೆ ಮತ್ತೆ ಮನೇಲೇ ಕೂತ್ಕೊಳ್ಳೋ ಥರ ಮಾಡ್ತೀವಿ.

ಅಂದ್ರೆ, ಎಲೆಕ್ಷನ್ ಮುಗಿದ ಮೇಲೆ ಮತ್ತೆ ಲಾಕ್ ಡೌನ್ ಮಾಡೋ ಪ್ಲ್ಯಾನ್ ಇದೆ ಅಂತ ಆಯ್ತು. ಹಿಂಗಾದ್ರೆ ಜನ ಸಾಮಾನ್ಯರ ಜೀವನದ ಗತಿ ಏನು? 
-ಅಯ್ಯೋ, ಎರಡೂ ನೀವೇ ಹೇಳ್ತೀರಲ್ರೀ, ಲಾಕ್ ಡೌನ್ ಮಾಡಿದ್ರೆ ಖುಷಿ ಪಡ್ರೀ, ಜನನ್ನ ಕೂತ್ಕೊಂಡ್ ತಿನ್ನೋ ಥರ  ಮಾಡಿದ್ದೀವಿ ಅಂತ

ಜಾತ್ರೆ, ಉತ್ಸವ, ಕ್ರಿಸ್‌ಮಸ್, ರಂಜಾನ್ ಅಂತ ಸಾವಿರಾರು ಜನ ಸೇರ್ತಾರೆ, ಅದರ ಬಗ್ಗೆ ನಿಮ್ಮ ಅಭಿಪ್ರಾಯ?
-ನೋಡ್ರೀ ನಮ್ಮ ದೇಶದ ಜನರಿಗೆ ದೇವರ ಹತ್ರ ಹೋಗೋಕೆ ತುಂಬಾ ಆಸೆ ಇದೆ. ಅದಕ್ಕೇ ಹೋಗ್ತಾರೆ. ಅದನ್ನ ತಡೆಯೋಕೆ ನಾವ್ಯಾರು ?

ನೆಟ್ ಪಿಕ್ಸ್
ನ್ಯೂ ಇಯರ್ ಹಿಂದಿನ ದಿನ ಆಫೀಸಿನಿಂದ ಬಂದವನೇ, ನಾಳೆಯಿಂದ ಮೂರು ದಿನ ಆಫೀಸ್ ಬ್ಯುಸಿನೆಸ್ ಟ್ರಿಪ್ ಇದೆ ಅಂತ ಖೇಮು ಹೆಂಡತಿ ಖೇಮುಶ್ರೀಗೆ ಹೇಳಿದ. ಬೆಳಿಗ್ಗೆ ಬೇಗನೇ ಹೋಗಬೇಕು ನನ್ನ ಎಲ್ಲಾ ಲಗೇಜ್ ಅನ್ನು ಈಗ್ಲೇ ಪ್ಯಾಕ್ ಮಾಡು. ಬೆಳಗ್ಗೆ ಲೇಟ್ ಆಗುತ್ತೆ ಅಂತ ಹೇಳಿದ. ಆಫೀಸ್ ಬ್ರೀಫ್ ಕೇಸ್‌ನಲ್ಲಿ ಈ ಎಲ್ಲಾ ಫೈಲ್‌ಗಳನ್ನೂ, ಡಾಕ್ಯುಮೆಂಟ್ ಅನ್ನು ಇಡು. ನನ್ನ ಪರ್ಸನಲ್ ಸಾಮಾನುಗಳನ್ನು ಇನ್ನೊಂದು ಸೂಟ್ ಕೇಸ್‌ನಲ್ಲಿ ಇಡು.

ಅಂದಹಾಗೆ ನನ್ನ ಆ ಬ್ಲೂ ಕಲರ್ ಸಿಲ್ಕ ಪೈಜಾಮ ಇಡೋದನ್ನು ಮರೀಬೇಡ ಅಂತ ಹೆಂಡತಿಗೆ ಹೇಳಿ ಬಾತ್ ರೂಮ್‌ಗೆ ಹೋದ ಖೇಮು. ಡಿಸೆಂಬರ್ ೩೧ರ ರಾತ್ರಿ ಗಂಡ ಬ್ಯುಸಿನೆಸ್ ಟ್ರಿಪ್ ಅಂತ ಹೇಳ್ತಾ ಇರೋದು ನೋಡಿ ಖೇಮುಶ್ರೀಗೆ ಅನುಮಾನ ಬಂತು. ಆದರೂ ಏನೂ ಮಾತಾಡದೇ, ಸರಿ ಖೇಮುಶ್ರೀ ಎಲ್ಲವನ್ನೂ ಪ್ಯಾಕ್ ಮಾಡಿದಳು. ಬೆಳಗ್ಗೆ ಬೇಗ ಎದ್ದವನೇ ಖೇಮು ಟೂರ್‌ಗೆ ಹೊರಟ. ಆ ಮೂರು ದಿನದಲ್ಲಿ ಖೇಮುಶ್ರೀ ಖೇಮುಗೆ ಹಲವಾರು ಬಾರಿ ಕಾಲ್ ಮಾಡಿದಳು. ಆದರೆ ಖೇಮು ಕಾಲ್ ರಿಸೀವ್ ಮಾಡಲಿಲ್ಲ ನಾನು ಮೀಟಿಂಗ್‌ನಲ್ಲಿ ಇದ್ದೇನೆ. ಬ್ಯುಸಿ ಅಂತ ಮೆಸೇಜ್ ಮಾಡುತ್ತಿದ್ದ. ಸರಿ ಮೂರು ದಿನ ಕಳೆಯಿತು. ಖೇಮು ವಾಪಸ್ ಬಂದ. ಏನು ಬ್ಯುಸಿನೆಸ್ ಟ್ರಿಪ್‌ನಲ್ಲಿ ತುಂಬಾ ಬ್ಯುಸಿಯಾಗಿದ್ರಿ ಅನ್ಸುತ್ತೆ. ಕಾಲ್ ಕೂಡಾ ರಿಸೀವ್ ಮಾಡಲಿಲ್ಲ, ತುಂಬಾ ಸುಸ್ತಾಗಿದ್ದೀರ ಅಂದಳು ಖೇಮುಶ್ರೀ. ಅಯ್ಯೋ, ಅದ್ಯಾಕ್ ಕೇಳ್ತೀಯ ಸಿಕ್ಕಾಪಟ್ಟೆ
ಕೆಲಸ ಅಂದ ಖೇಮು, ಅದ್ಸರಿ ನನ್ನ ಬ್ಲೂ ಕಲರ್ ಸಿಲ್ಕ ಪೈಜಾಮ ಪ್ಯಾಕ್ ಮಾಡು ಅಂತ ಹೇಳಿದ್ದೇ ಅಲ್ವಾ, ಅದನ್ನ ನೀನು ಮರೆತೇಬಿಟ್ಟಿದ್ದೀಯ ಅಂದ. ಅದಕ್ಕೆ ಖೇಮು ಹೇಳಿದಳು, ಮರೆತಿರಲಿಲ್ಲ, ಇಟ್ಟಿದ್ದೆ, ಅದು ನಿಮ್ಮ ಆಫೀಸ್ ಬ್ರೀಫ್ ಕೇಸ್‌ನಲ್ಲಿದೆ.

ಲೈನ್ ಮ್ಯಾನ್

ನ್ಯೂ ಇಯರ್‌ಗೆ ಕೆಲವರ ಪ್ಲ್ಯಾನ್

-ಸಂಜೆವರೆಗೂ ಕಾಯ್ತೀನಿ, ಯಾರೂ ಪಾರ್ಟಿಗೆ ಕರೀಲಿಲ್ಲ ಅಂದ್ರೆ, ನಮ್ ಹೊಸ ವರ್ಷ ಯುಗಾದಿಗೆ ಅಂತ ಬಿಲ್ಡ್ ಅಪ್ ಕೊಟ್ಕಂಡ್ ಪೋ ಹಾಕಿ ಮಲ್ಕೊತೀನಿ

ಪ್ರಪಂಚದ ಮೊದಲ ಮತ್ತು ಅಕ್ಷರಶಃ ಸ್ಪ್ಲಿಟ್ ಪರ್ಸನಾಲಿಟಿ ಅಂದ್ರೆ

-ಭೀಮನಿಂದ ಎರಡು ತುಂಡಾಗಿ ಸತ್ತು ಹೋದ ಜರಾಸಂಧ

ಕರೋನಾ ಭಯದಲ್ಲಿ ಮಾ ವ್ಯಾಪಾರ ಮತ್ತೆ ಜೋರಾಗಿದೆ. ಆನ್‌ಲೈನ್ ನಲ್ಲಿ ೭ ಸಾವಿರ ಬೆಲೆಯ ಮಾ ಅನ್ನು ನೋಡಿದಾಗ ಅನ್ನಿಸಿದ್ದು

-ಇದನ್ನ ಹಾಕ್ಕೊಂಡ್ರೆ ಕರೋನಾ ಅಲ್ಲ, ಬಹುಶಃ ಸಾವೇ ಬರಲ್ಲ ಅನ್ಸುತ್ತೆ

ಕೆಲವು ಸಿನಿಮಾ ಹೀರೋಗಳಿಗೆ ಅವರನ್ನ ಟೀಕೆ ಮಾಡೋರನ್ನ ಕಂಡ್ರೆ ಸಿಟ್ಟು
-ಯಾಕಂದ್ರೆ ಅವರಿಗೆ ಟಿ.ಕೆ ಜಾಸ್ತಿ

ಆತ್ಮೀಯ ಸ್ನೇಹಿತನನ್ನು ಕೊಲೆ ಮಾಡಿದವನು
-ಕ್ಲೋಸ್ ಫ್ರೆಂಡ್

ತಮ್ಮ ಸಿಡಿ ಬಿಡುಗಡೆ ಮಾಡಿದವರ ಮೇಲಿನ ಕೋಪ
-ಅಸಿಡಿಟಿ
ದುಃಖದ ಸೀನ್‌ನಲ್ಲಿ ಹಾಡುವ ದೇವರ ಹಾಡು
-ಶ್ಲೋಕ ಗೀತೆ
ಧರ್ಮದ ಬಗ್ಗೆ ಅವಹೇಳನ ಮಾಡಿದಾಗ ಬರೋ ಪ್ರತಿಕ್ರಿಯೆ
ಹಿಂದೂ – ಅವರು ಬಹಿರಂಗವಾಗಿ ಚರ್ಚೆಗೆ ಬರಲಿ
ಕ್ರಿಶ್ಚಿಯನ್- ಅವರು ಬಹಿರಂಗವಾಗಿ ಚರ್ಚಿಗೆ ಬರಲಿ
ಜಿಮ್ ಬಾಡಿ ಇರೋ ಮನುಷ್ಯ
-ಜಿಮ್ ಆಫ್ ಎ ಪರ್ಸನ್
ಡಯಾಬಿಟೀಸ್ ಇರೋ ಮನುಷ್ಯ
-ಸಚ್ ಎ ಸ್ವೀಟ್ ಪರ್ಸನ್
ಹೌದು, ಜನ ಜಿಮ್‌ಗೆ ಯಾಕ್ ಹೋಗ್ತಾರೆ
-ಪಾಪ, ಹೊಟ್ಟೆಪಾಡು
ಪೋರ್ನ್ ಸ್ಟಾರ್ ಒಬ್ಬರು ಸುಳ್ಳು ಹೇಳಿದ್ದು ಪ್ರೂವ್ ಆದರೆ ಅವರ ಬಗ್ಗೆ
ಏನಂತಾರೆ?
-ಅವರು ಸಿಕ್ಕಾಕ್ಕೊಂಡು ಸಮಾಜದ ಮುಂದೆ ಬೆತ್ತಲಾದರು