Sunday, 15th December 2024

ನಾಯಕರ ಆಮದು ಪ್ರಕ್ರಿಯೆ, ಬಿಜೆಪಿಗೆ ಹೊರೆ

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ranjith.hoskere@gmail.com

ಮುಂದಿನ ವರ್ಷ ಕರ್ನಾಟಕದಲ್ಲಿ  ವಿಧಾನಸಭಾ ಚುನಾವಣಾ ಇದ್ದರೂ, ಅದರ ಕಾವಂತೂ ಈಗಲೇ ಶುರುವಾಗಿದೆ. ಪಕ್ಷಾಂತರ ಪರ್ವ, ಟಿಕೆಟ್ ಲಾಭಿ, ರಾಜಕೀಯ-ಜಾತಿ ಲೆಕ್ಕಾಚಾರದಲ್ಲಿ ನಾಯಕರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಾರುತ್ತಿದ್ದಾರೆ.

ಅದರಲ್ಲೂ ದೇಶದಲ್ಲಿ ಕಳೆದೊಂದು ದಶಕದಿಂದ ಭಾರಿ ಬಲಿಷ್ಠವಾಗಿರುವ ಬಿಜೆಪಿಗೆ ಸೇರಲು ಬಹುದೊಡ್ಡ ದಂಡೇ ನಿಂತಿದೆ. ಆದರೀಗ ಹೆಚ್ಚೆಚ್ಚು ನಾಯಕರು ಬಿಜೆಪಿ ಬರುತ್ತಿರುವುದೂ, ಮೂಲ ಬಿಜೆಪಿಗರಿಗೆ ಇರಸು-ಮುರಸು ಉಂಟಾಗಲು ಶುರುವಾಗಿದೆ. ಹೌದು, ಪಕ್ಷ ಸದೃಢವಾಗಿದ್ದು, ಇತರ ಪಕ್ಷದ ನಾಯಕರೂ ಪಕ್ಷಕ್ಕೆ ಬರುತ್ತಿದ್ದರೆ ಅದರಲ್ಲಿ ಆಗುವ ಸಮಸ್ಯೆಯೇನು ಎಂದು ಯಾರಾದರೂ ಕೇಳಿದರೆ ಅದಕ್ಕೆ ಬಿಜೆಪಿ ಕಾರ್ಯ ಕರ್ತರು, ಪಕ್ಷದ ಮೂಲ ನಾಯಕರು ಹೇಳುವ ಮಾತೇ ಬೇರೆ.

ಅಸಮಾಧಾನಗಳ ನಡುವೆಯೇ, ಹಲವು ನಾಯಕರು ಪಕ್ಷದೊಳಗೆ ಸೇರಿದ್ದಾರೆ. ಆದರೆ ಈ ರೀತಿ ನಾಯಕರನ್ನು ತುಂಬಿಕೊಳ್ಳುತ್ತಾ ಹೋದರೆ, ಮುಂದೆ ಪಕ್ಷದ ಮೂಲ ಆಶಯಕ್ಕೆ ಡ್ಯಾಮೇಜ್ ಆಗುವುದು ನಿಶ್ಚಿತ ಎನ್ನುವುದು ಸ್ಪಷ್ಟ. ನಾಯಕರು ಬರುವು ದರಿಂದ ಆಗುವ ಸಮಸ್ಯೆಯೇನು ಎಂದು ಸಹಜವಾಗಿಯೇ ಪ್ರಶ್ನೆ ಮೂಡುತ್ತದೆ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿ ವಿಭಿನ್ನವಾಗಿ ನಿಲ್ಲುತ್ತದೆ. ಬಿಜೆಪಿಯಲ್ಲಿ ಅಽಕಾರಕ್ಕಿಂತ ಹೆಚ್ಚಾಗಿ, ತಾವು ನಂಬಿರುವ ಸಿದ್ಧಾಂತಕ್ಕೆ ಹೆಚ್ಚು ಗೌರವ, ಬೆಲೆ ಕೊಡುತ್ತಾರೆ.

ಸ್ಥಾನಮಾನಕ್ಕಿಂತ ಹೆಚ್ಚಾಗಿ, ಶಿಸ್ತಿಗೆ ಇಲ್ಲಿ ಬೆಲೆ ಜಾಸ್ತಿ. ಆದ್ದರಿಂದ ಹೊರಗಿನಿಂದ ಬಂದವರಿಗೆ ಬಿಜೆಪಿಯ ರೀತು ರಿವಾಜುಗಳಿಗೆ ಒಗ್ಗಿ ಕೊಳ್ಳುವುದು ಸುಲಭವಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಅದಕ್ಕಿಂತ ಮುಖ್ಯವಾಗಿ, ಪಕ್ಷಕ್ಕೆ ಬರುವ ನಾಯಕ ಇಲ್ಲಿಗೆ ಒಗ್ಗಿಕೊಳ್ಳುವುದಕ್ಕಿಂತ ಹೆಚ್ಚಾಗಿ, ತನಗೆ ಬೇಕಾದಂತೆ ಸ್ಥಳೀಯ ಮಟ್ಟದಲ್ಲಿ ಪಕ್ಷವನ್ನು ಮಾರ್ಪಾಡು ಮಾಡಲು ಪ್ರಯತ್ನಿಸುತ್ತಾರೆ ಎನ್ನುವುದು ಪಕ್ಷದ ಕಟ್ಟಾರ್ ಕಾರ್ಯಕರ್ತರ ಆರೋಪ.

ಈ ರೀತಿ ಪಕ್ಷದ ಸಿದ್ಧಾಂತಕ್ಕೆ ಧಕ್ಕೆಯಾಗುತ್ತದೆ ಎನ್ನುವ ಅಸಮಾಧಾನವನ್ನು ಹೊತ್ತಿರುವ ಕಾರ್ಯಕರ್ತರಿಗಿಂತ ಹೆಚ್ಚಾಗಿ, ಹೊರಗಿನ ವರನ್ನೇ ತುಂಬಿಕೊಂಡರೆ, ಮೊದಲಿನಿಂದ ಪಕ್ಷಕ್ಕಾಗಿ ದುಡಿದ ನಾವೇನು ಮಾಡಬೇಕು? ಪಕ್ಷ ಸಂಘಟಿಸಲು, ಪಕ್ಷವನ್ನು ಬಲಪಡಿಸಲು ಮೂಲ ಕಾರ್ಯಕರ್ತರನ್ನು ಬಳಸಿಕೊಂಡು, ಅಧಿಕಾರವನ್ನು ಮಾತ್ರ ವಲಸಿಗರಿಗೆ ನೀಡಿದರೆ ಪಕ್ಷದ ಕಾರ್ಯಕರ್ತರಿಗೆ ಯಾವ ರೀತಿಯ ಗೌರವ ನೀಡಿದಂತಾಗುತ್ತದೆ ಎನ್ನುವ ವಾದವನ್ನು ಬಹು ಕಾರ್ಯಕರ್ತರು ಮಾಡುತ್ತಿದ್ದಾರೆ.

ಪಕ್ಷದ ನಾಯಕರು, ‘ಪಕ್ಷದ ಕೆಲಸ ಮಾಡಿದವರಿಗೆ ಖಚಿತವಾಗಿಯೂ ಸೂಕ್ತ ಸ್ಥಾನಮಾನ ನೀಡುತ್ತೇವೆ’ ಎನ್ನುವ ಭರವಸೆಯನ್ನು ನೀಡಿದರೂ, ಅದು ಕೇವಲ ಭರವಸೆಯಾಗಿಯೇ ಉಳಿಯಲಿದೆ ಎನ್ನುವುದು ಅನೇಕ ಬೇಸರ. ಹಾಗೇ ನೋಡಿದರೆ, ರಾಜ್ಯದಲ್ಲಿ ಈ ರೀತಿ ಮೂಲ ಬಿಜೆಪಿಗರಿಗೆ ಅನ್ಯಾಯವಾಗಿರುವುದು ಸುಳ್ಳಲ್ಲ. ೨೦೦೮ರಲ್ಲಿ ಬಹುಮತದ ಗಡಿ ತಲುಪುವುದಕ್ಕೆ ಏಳು ಜನ ಕಡಿಮೆಯಾದರೂ ಎನ್ನುವ ಕಾರಣಕ್ಕೆ ಆಪರೇಷನ್ ಕಮಲ, ಪಕ್ಷೇತರರನ್ನು ಪಕ್ಷದೊಳಗೆ ತಂದರು. ಬಳಿಕ ಬಂದವರಿಗೆಲ್ಲ ಸಚಿವ ಸ್ಥಾನ, ಆಯಕಟ್ಟಿನ ನಿಗಮ ಮಂಡಳಿಗಳ ಸ್ಥಾನಮಾನ ನೀಡಲಾಯಿತು. ಆದರೆ ಪಕ್ಷಕ್ಕೆ ನಿಷ್ಠರಾಗಿದ್ದ ಕಾರ್ಯಕರ್ತರಿಗೆ, ಶಾಸಕರಿಗೆ ಈ ಲಾಭ ಸಿಗಲಿಲ್ಲ. ‘ನಮ್ಮ ಸರಕಾರ ಅಧಿಕಾರದಲ್ಲಿದೆ’ ಎನ್ನುವ ಸಮಾಧಾನದಲ್ಲಿಯೇ ಅನೇಕ ಕಾರ್ಯಕರ್ತರು ದಿನ ಕಳೆದದ್ದೂ ಬಿಟ್ಟರೆ ಅವರಿಗೆ ‘ವಿಶೇಷ
ಲಾಭ ವೇನು’ ಆಗಲಿಲ್ಲ.

2019ರಲ್ಲಿಯೂ ಇದೇ ಪರಿಸ್ಥಿತಿಯಾಯಿತು. ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರಕಾರವನ್ನು ಕೆಡವಿ ಬಿಜೆಪಿ ಅಧಿಕಾರಕ್ಕೆ ತರಲು ನಡೆಸಿದ ಆಪರೇಷನ್ ಕಮಲದಲ್ಲಿ ಬಿಜೆಪಿಯೊಳಗೆ ಸೇರಿಕೊಂಡ ಎಲ್ಲರಿಗೂ ಸಚಿವ ಸ್ಥಾನದ ಭರವಸೆ ನೀಡಲಾಗಿತ್ತು. ಕೊನೆಗೆ ೧೪ ವಲಸಿಗರಿಗೆ ಸಚಿವ ಸ್ಥಾನ, ಸೋತ ವಿಶ್ವನಾಥ್‌ಗೆ ಎಂಎಲ್‌ಸಿ ಸ್ಥಾನ, ಎಚ್. ನಾಗೇಶ್‌ಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಹೀಗೆ, ಹೊರಗಿನಿಂದ ಬಂದವರನ್ನು ಸಂತೈಸುವಲ್ಲಿಯೇ, ಬಿಜೆಪಿ ನಾಯಕರು ದಿನ ಕಳೆದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದಂತೆ, ‘ಅಧಿಕಾರದ ಗದ್ದುಗೆ ಹಿಡಿಯಲು ಆಪರೇಷನ್ ಕಮಲ ಅನಿವಾರ್ಯ’ ವಾಗಿತ್ತು. ವಿಧಾನಸೌಧದ ಮೂರನೇ ಮಹಡಿಯಲ್ಲಿ ಬಿಜೆಪಿ ನಾಯಕರು ಕೂರುವುದಕ್ಕೆ ಸಹಾಯ ಮಾಡಿದವರ ಋಣ ತೀರಿಸುವುದಕ್ಕಾಗಿ ಅವರಿಗೆಲ್ಲ ಸಚಿವ ಸ್ಥಾನ ನೀಡಲೇಬೇಕಾಗಿತ್ತು. ಈ ರೀತಿ ಸ್ಥಾನ ಹಂಚಿಕೆ ಮಾಡಿದ್ದರಿಂದ, ಪಕ್ಷದಲ್ಲಿ ಬಾವುಟ ಕಟ್ಟುವುದಕ್ಕೂ ಜನರಿಲ್ಲದ
ಕಾಲದಿಂದ ಜತೆಗಿದ್ದವರಿಗೆ ‘ಮುಂದಿನ ಬಾರಿ ಅವಕಾಶ ಡಲಾಗುವುದು’ ಎನ್ನುವ ಸಬೂಬು ನೀಡುವ ಮೂಲಕ ಸಂತೈಸುವ ಪ್ರಯತ್ನ ವನ್ನು ಬಿಜೆಪಿ ಮಾಡಿತ್ತು.

ಆದರೆ ಪ್ರತಿ ಬಾರಿ ಅಧಿಕಾರಕ್ಕೆ ಬಂದಾಗಲೆಲ್ಲ ಒಂದಲ್ಲ ಒಂದು ಕಾರಣಕ್ಕೆ ಹೊರಗಿನಿಂದ ಬಂದವರಿಗೆ ಅವಕಾಶ ಸಿಗುತ್ತಿದೆ ಹೊರತು,
ಇಲ್ಲಿರುವವರು ಚಾತಕ ಪಕ್ಷಿಯಂತೆ ಕಾಯುವಂತಾಗಿದೆ. ಅಧಿಕಾರಕ್ಕೆ ಬರುವುದಕ್ಕಾಗಿ ಆಪರೇಷನ್ ಕಮಲ ಮಾಡಿದ್ದು ಒಂದು ಭಾಗ ವಾದರೆ, ಪಕ್ಷ ಸದೃಢವಾಗಿರುವ ಭಾಗದಲ್ಲಿಯೂ ಬೇರೆ ಪಕ್ಷದವರನ್ನು ಆಮದು ಮಾಡಿಕೊಳ್ಳುವ ನಿರ್ಧಾರದಿಂದ ಪಕ್ಷದ ಸಂಘಟನೆಗೆ ಬೇರು ಮಟ್ಟದಲ್ಲಿಯೇ ಹೊಡೆತ ಬೀಳುತ್ತಿದೆ ಎನ್ನುವ ಆರೋಪವೂ ಬಿಜೆಪಿಯ ಮೇಲಿದೆ.

ಉದಾಹರಣೆಗೆ ಇತ್ತೀಚಿಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರಿದರು. ಉಡುಪಿ ಮೂಲದ ಪ್ರಮೋದ್ ಅವರು ಪಕ್ಷಕ್ಕೆ ಬರುವ ಮೂಲಕ, ಸ್ಥಳೀಯ ಮಟ್ಟದಲ್ಲಿ ಒಂದು ಸಣ್ಣ ಅಲ್ಲೋಲ್ಲ ಕಲ್ಲೋಲವಂತೂ ಸೃಷ್ಟಿಯಾಗಿದೆ. ಮೂಲಗಳ ಪ್ರಕಾರ ಪ್ರಮೋದ್ ಅವರನ್ನು ಜೂನ್‌ನಲ್ಲಿ ವಿಧಾನಪರಿಷತ್ ಗೆ ಆಯ್ಕೆ ಮಾಡಲಾಗುತ್ತದೆಯಂತೆ. ಆದರೆ ಇಲ್ಲಿ ಪ್ರಶ್ನೆಯೆಂದರೆ, ಉಡುಪಿಯಲ್ಲಿ ಈಗಾಗಲೇ ಬಿಜೆಪಿ ಸಂಘಟನೆ ಉತ್ತಮ ಸ್ಥಿತಿಯಲ್ಲಿದ್ದು, ಅಲ್ಲಿ ನಾಯಕತ್ವದ ಕೊರತೆಗೇನು ಕಡಿಮೆಯಿರಲಿಲ್ಲ. ಉಡುಪಿ ಜಿಲ್ಲೆಯಲ್ಲಿರುವ
ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಐದಕ್ಕೆ ಐದು ಸ್ಥಾನವನ್ನು ಬಿಜೆಪಿಗರೇ ಗೆದ್ದುಕೊಂಡಿದ್ದಾರೆ.

ಇನ್ನು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿಯೇ ಗೆಲವು ಸಾಧಿಸಿದ್ದಾರೆ. ಆದ್ದರಿಂದ ಚುನಾವಣಾ ರಾಜಕೀಯದ ದೃಷ್ಠಿಯಿಂದ ನೋಡುವುದಾದರೆ, ಉಡುಪಿ ಜಿಲ್ಲೆಗೆ ಇನ್ನೊಬ್ಬ ಪ್ರಭಾವಿ ನಾಯಕನ ಅಗತ್ಯ ಸದ್ಯಕ್ಕೆ ಬಿಜೆಪಿಗೆ ಇರಲಿಲ್ಲ.
ಪ್ರಮೋದ್ ಮಧ್ವರಾಜ್ ಉಡುಪಿ ಸೇರಿದಂತೆ ಕರಾವಳಿ ಬಿಟ್ಟರೆ ಹೊರ ಜಿಲ್ಲೆಗಳಿಂದ ಮತಗಳನ್ನು ತರುವಂತ ಮಾಸ್ ನಾಯಕತ್ವವೂ ಇರಲಿಲ್ಲ. ಹೀಗಿರುವಾಗ, ಈಗಾಗಲೇ ಭರ್ತಿಯಾಗಿರುವ ಬಸ್‌ಗೆ ಹೆಚ್ಚುವರಿ ಜನರನ್ನು ಸೇರಿಸಿಕೊಂಡು ಅನಗತ್ಯ ಗೊಂದಲವನ್ನು ಸೃಷ್ಟಿಸಿದ್ದು ಏಕೆ ಎನ್ನುವುದೇ ಅನೇಕ ಕಾರ್ಯಕರ್ತರ ಪ್ರಶ್ನೆಯಾಗಿದೆ.

ಇನ್ನು ಪ್ರಮೋದ್ ಮಧ್ವರಾಜ್ ಅವರೊಂದಿಗೆ ಪಕ್ಷಕ್ಕೆ ಸೇರಿಕೊಂಡ ವರ್ತೂರು ಪ್ರಕಾಶ್ ಅವರಿಂದ ಪಕ್ಷದಲ್ಲಾಗಿರುವ ರದ್ಧಾಂತದ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಇದೀಗ ಪುನಃ ಅವರನ್ನೇ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಮುಂದಿನ ದಿನದಲ್ಲಿ ಅವರಿಗೆ
ಆದರಾತಿಥ್ಯವನ್ನು ನೀಡಲಾಗುತ್ತದೆ ಎಂದರೆ ಪಕ್ಷದ ಸಿದ್ಧಾಂತವನ್ನೇ ನಂಬಿಕೊಂಡಿರುವ ಹಲವು ಕಾರ್ಯಕರ್ತರಿಗೆ ಏನನಿಸಬೇಡ ಎನ್ನುವುದು ಹಲವರ ಪ್ರಶ್ನೆ.

ಪಕ್ಷದಿಂದ ಬರುವ ನಾಯಕರು ಬರುವುದರಿಂದ ಇರುವ ಬಹುದೊಡ್ಡ ಸಮಸ್ಯೆಯೆಂದರೆ, ಆ ನಾಯಕರಿಗೆ ಇಲ್ಲಿನ ರೀತಿ ರಿವಾಜುಗಳು ಗೊತ್ತಿರುವುದಿಲ್ಲ. ಎಲ್ಲವನ್ನೂ ಕಲಿತುಕೊಳ್ಳುವ ಸಾವಧಾನವೂ ಅವರಿಗೆ ಇರುವುದಿಲ್ಲ. ತಮಗೆ ಬೇಕಾದಂತೆ ಅವರು ಹೋಗುವುದರಿಂದ, ಶಿಸ್ತಿನ ಪಕ್ಷದಲ್ಲಿ ಮೆಲ್ಲಗೆ ಅಶಿಸ್ತು ಶುರುವಾಗುತ್ತದೆ. ಇದಕ್ಕೊಂದು ಉದಾಹರಣೆ ನೀಡುವುದಾದರೆ, ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿರುವ ಸಚಿವರೊಬ್ಬರು, ಕಳೆದ ವಾರ ನಡೆದ ಬಿಜೆಪಿ ಬೈಟಕ್‌ಗೆ ಹೋಗಿದ್ದಂತೆ.

ಆಹ್ವಾನಿತರಿಗೆ ಮಾತ್ರ ಪ್ರವೇಶವೆಂದು ಸ್ಪಷ್ಟವಾಗಿ ಹೇಳಿದ್ದರೂ, ಅವರು ಅವರೊಂದಿಗೆ ಬಂದಿದ್ದ ಹಿಂಡನ್ನು ಒಳಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಹೋದಾಗ, ಬಿಜೆಪಿಯ ಜೀವಾಳವಾಗಿರುವ ಪೇಜ್ ಪ್ರಮುಖ್, ಬೂತ್ ಕಮಿಟಿಯ ಗಂಧಗಾಳಿಯೂ ಗೊತ್ತಿಲ್ಲದಿದ್ದರೂ, ಆ ಎಲ್ಲವಕ್ಕೂ ತಮ್ಮ ಜತೆಗಾರರನ್ನೇ ನೇಮಿಸಬೇಕು ಎಂದು ಹಠಕ್ಕೆ ಬಿದ್ದಿದ್ದರಂತೆ. ಇದು ಅಲ್ಲಿದ್ದ ಸಂಘ ಪರಿವಾರದವರಿಗೆ ಇರಸು ಮುರಸು ಉಂಟು ಮಾಡಿದೆ. ಇತ್ತೀಚಿನ ದಿನದಲ್ಲಿ ಈ ರೀತಿಯ ಪ್ರಮಾದಗಳು ಹೊರಗಿನಿಂದ ಬಂದ ಹಲವು ನಾಯಕರಿಂದ ಪದೇಪದೆ ನಡೆಯುತ್ತಲೇ ಇವೆಯಂತೆ.

ದೇಶದಲ್ಲಿಯೇ ಅತಿಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಬಿಜೆಪಿಗೆ, ಕರ್ನಾಟಕದಲ್ಲಿಯೂ ದೊಡ್ಡ ಪಡೆಯೇ ಇದೆ. ಆದರೆ ಈ ಪಡೆಯನ್ನು ಸಮರ್ಥವಾಗಿ ನಡೆಸುವ ಬದಲಿಗೆ, ಬೇರೆ ಪಕ್ಷಗಳಿಂದ ನಾಯಕರನ್ನು ಆಮದು ಮಾಡಿಕೊಳ್ಳುವ ಮೂಲಕ ಪಕ್ಷದ ಮೂಲ ಸಿದ್ಧಾಂತಕ್ಕೆ
ಸಮಸ್ಯೆಯನ್ನು ತಂದುಕೊಳ್ಳುತ್ತಿರುವುದರಲ್ಲಿ ಅನುಮಾನವಿಲ್ಲ. ಹೊರಗಿನಿಂದ ಬಂದವರಿಗೆ ಸ್ಥಾನಮಾನ, ಟಿಕೆಟ್ ಕೊಡುತ್ತಾ ಹೋದರೆ, ಹೊರ ನಾಯಕರಿಗೆ ಭವ್ಯ ಸ್ವಾಗತ ಕೋರಿ ಅವರು ನಿಲ್ಲುವ ಚುನಾವಣೆಗಳಿಗೆ ಪಕ್ಷದ ಬಾವುಟ ಹಿಡಿದು ಪ್ರಚಾರ ನಡೆಸುವುದಷ್ಟೇ ಪಕ್ಷ ನಿಷ್ಠಾವಂತ ಕಾರ್ಯಕರ್ತರ ಕರ್ತವ್ಯವಾಗಲಿದೆ.

ಇದು ಭವಿಷ್ಯದ ಸಂಘಟನೆಗೆ ನಕಾರಾತ್ಮಕವೇ ಹೊರತು, ಲಾಭವೇನಲ್ಲ. ಪಕ್ಷದ ವರಿಷ್ಠರೂ ಈಗಲಾದರೂ, ಬಿಜೆಪಿಯ ಬಲವಾಗಿರುವ ಕಾರ್ಯಕರ್ತರ ಪಡೆಯನ್ನು ಗಟ್ಟಿಯಾಗಿಸುವ ನಿಟ್ಟಿನಲಿ ಯೋಚಿಸಬೇಕಿದೆ.