Sunday, 8th September 2024

ಮಣ್ಣಿನ ಮಹತ್ವವನ್ನು ಅರಿಯೋಣ

ಕೃಷಿ ಲೋಕ

ಬಸವರಾಜ ಶಿವಪ್ಪ ಗಿರಗಾಂವಿ

ಅನಿರೀಕ್ಷಿತ ಹವಾಮಾನ ಬದಲಾವಣೆ ಹಾಗೂ ಮಾನವನ ಅವೈಜ್ಞಾನಿಕ ಚಟುವಟಿಕೆಗಳಿಂದಾಗಿ ಮಣ್ಣಿನ ಗುಣಮಟ್ಟವು ಕ್ಷೀಣಿಸುತ್ತದೆ. ಮಣ್ಣಿನ ಗುಣಮಟ್ಟದ ಬದಲಾವಣೆಯಿಂದಾಗಿ ಜಲಸಂಪನ್ಮೂಲಗಳ ಮೇಲೆ ಅತಿಯಾದ ಒತ್ತಡವಾಗುತ್ತದೆ ಹಾಗೂ ಮಣ್ಣಿನ ಸವಕಳಿಯು ಹೆಚ್ಚಾಗಿ ನೈಸರ್ಗಿಕ ಅಸಮತೋಲನ ಸೃಷ್ಟಿಯಾಗುತ್ತದೆ.

‘ಮಣ್ಣಿಂದಲೇ ಎಲ್ಲಾ’ ಎಂಬುದಾಗಿ ದಾಸವ ರೇಣ್ಯರು ಶತಮಾನಗಳ ಹಿಂದೆಯೇ ಹೇಳಿದ್ದಾರೆ. ಪ್ರಪಂಚದ ಅಳಿವು- ಉಳಿವು, ಜೀವಿಗಳ ಹುಟ್ಟು-ಸಾವು, ನೋವು-ನಲಿವು ಎಲ್ಲವೂ ಮಣ್ಣಿನ ಮೇಲೆಯೇ ನಿಂತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಆದ್ದರಿಂದ, ಮಣ್ಣೆಂಬುದು ಚಿನ್ನಕ್ಕಿಂತಲೂ ಶ್ರೇಷ್ಠವಾಗಿದೆ.

ಸುಮಾರು ಶೇ.೯೫ರಷ್ಟು ಆಹಾರ ಪದಾರ್ಥಗಳು ಸೃಷ್ಟಿಯಾಗುವುದಕ್ಕೆ ಮಣ್ಣೇ ಮೂಲಾಧಾರ. ಆದರೆ ಇದನ್ನರಿಯದ ಕೆಲ ಮನುಜರು ತಮ್ಮ ಸ್ವಾರ್ಥ ಕ್ಕಾಗಿ ದಿನನಿತ್ಯವೂ ಮಣ್ಣಿನ ಮಾರಣಹೋಮ ಮಾಡುತ್ತಿದ್ದಾರೆ. ಇದು ನಿಜಕ್ಕೂ ಅತ್ಯಂತ ಕಳವಳಕಾರಿಯಾದ ವಿಷಯವಾಗಿದೆ. ಕಾರಣ, ಸತ್ವಯುತ ವಾದ ಮಣ್ಣು ಮಾಯವಾದರೆ, ಮನುಕುಲ ಸೇರಿದಂತೆ ಜಗತ್ತಿನ ಸಮಗ್ರ ಜೀವಸಂಕುಲವೇ ಅಂತ್ಯವಾಗುತ್ತದೆ. ಇದರಲ್ಲಿ ಅನುಮಾನವೇ ಬೇಡ.
ಥೈಲ್ಯಾಂಡ್‌ನ ರಾಜ ಬೋಲ್ ಅದುಲ್ಯತೇಜ್ ಮಣ್ಣಿನ ಪ್ರೇಮಿಯಾಗಿದ್ದವರು ಹಾಗೂ ಮಣ್ಣಿನ ಸಂರಕ್ಷಣೆಗಾಗಿ ಹಲವು ಉತ್ತೇಜನಕಾರಿ ಕ್ರಮಗಳನ್ನು ಕೈಗೊಂಡಿದ್ದವರು.

ಅವರ ಜನ್ಮದಿನವಾದ ಡಿಸೆಂಬರ್ ೫ನ್ನು ಪ್ರತಿವರ್ಷ, ಅಂದರೆ ೨೦೧೩ರಿಂದ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ಅಧಿಕೃತವಾಗಿ ‘ವಿಶ್ವ ಮಣ್ಣು ದಿನ’ವಾಗಿ ಆಚರಿಸುತ್ತ ಬಂದಿದೆ. ವಿಶ್ವದಾದ್ಯಂತ ಹದಗೆಡುತ್ತಿರುವ ಮಣ್ಣಿನ ಕುರಿತು ಜಾಗೃತಿ ಮೂಡಿಸಿ ನಾಗರಿಕರನ್ನು ಸಶಕ್ತಗೊಳಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತಿದೆ. ‘ಮಣ್ಣು ಮತ್ತು ನೀರು ಜೀವನದ ಮೂಲ’ ಎಂಬುದು ಈ ವರ್ಷದ ಮಹತ್ವದ ಥೀಮ್ ಆಗಿದೆ.
ಸಮತೋಲಿತ ಪರಿಸರ ನಿರ್ಮಿಸುವಲ್ಲಿ ಆರೋಗ್ಯಕರವಾದ ಮಣ್ಣು ಬಹಳ ಅವಶ್ಯವಿದೆ. ಪರಿಸರದ ಸಮತೋಲನ ತಪ್ಪಿದಲ್ಲಿ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತವೆ.

ಮಣ್ಣು ಫಲವತ್ತಾಗಿದ್ದಾಗ ಮಾತ್ರವೇ ಸಕಲ ಜೀವಸಂಕುಲವು ಆರೋಗ್ಯದಿಂದ ನಳನಳಿಸುತ್ತಿರುತ್ತದೆ. ಸಸ್ಯಗಳು ನೈಸರ್ಗಿಕವಾಗಿ ಮತ್ತು ಆರೋಗ್ಯಕರ ವಾಗಿ ಬೆಳವಣಿಗೆ ಹೊಂದಲು ೧೮ ರಾಸಾಯನಿಕ ಅಂಶಗಳು ಅವಶ್ಯವಿವೆ. ಇವುಗಳಲ್ಲಿ ೧೫ ಅಂಶಗಳು ಮಣ್ಣಿನಿಂದ ಸಸ್ಯಗಳಿಗೆ ಪೂರೈಕೆಯಾದರೆ, ೩
ಅಂಶಗಳನ್ನು ಎಲೆಯೊಳಗೆ ನಡೆಯುವ ದ್ಯುತಿಸಂಶ್ಲೇಷಣೆ ಕ್ರಿಯೆಯ ಮೂಲಕ ಸಸ್ಯಗಳು ಹೀರಿಕೊಳ್ಳುತ್ತವೆ. ಹೀಗೆ ನೈಸರ್ಗಿಕವಾಗಿ ನಡೆಯುವ ಚಟುವಟಿಕೆಗಳ ಕೃಪೆಯಿಂದ ನಮ್ಮ ಪೂರ್ವಜರು ಅತ್ಯಂತ ಆರೋಗ್ಯಕರ ಬದುಕನ್ನು ಕಟ್ಟಿಕೊಂಡಿದ್ದರಲ್ಲದೆ, ಇನ್ನಿತರ ಜೀವರಾಶಿಗಳಿಗೂ ತೊಂದರೆ
ಯಾಗದಂತೆ ಬದುಕಿದ್ದರು. ಆದರೆ ಮಾನವನು ಇಂದು ತನ್ನ ದಿನನಿತ್ಯದ ಅವೈಜ್ಞಾನಿಕ ಕಾರ್ಯಚಟುವಟಿಕೆಗಳಿಂದಾಗಿ ಮಣ್ಣಿನಲ್ಲಿ ಹಲವು ನಮೂನೆಯ ಕಲ್ಮಶಗಳನ್ನು ಹುದುಗಿಸಿ ಮಣ್ಣಿನ ಮೂಲಸ್ವರೂಪವನ್ನೇ ಬದಲಾಯಿಸುತ್ತಿದ್ದಾನೆ.

ಇದರಿಂದ ಮನುಕುಲದ ಆರೋಗ್ಯ ಮಾತ್ರವಲ್ಲದೆ ವಿಶ್ವದಲ್ಲಿನ ಒಟ್ಟಾರೆ ಜೀವಸಂಕುಲದ ಆರೋಗ್ಯವು ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಇಂದು ಮಣ್ಣಿನಲ್ಲಿ ಅತಿಯಾದ ರಾಸಾಯನಿಕಗಳನ್ನು ಬಳಸುತ್ತಿರುವ ಪರಿಣಾಮ ಮಣ್ಣಿನ ಸಹಜ ಗುಣಮಟ್ಟವು ಹದಗೆಡುತ್ತಿದೆ. ಇಂಥ ಹದಗೆಟ್ಟ ಮಣ್ಣಿನಲ್ಲಿ
ಉತ್ಪಾದನೆಯಾಗುವ ಆಹಾರ ಪದಾರ್ಥಗಳ ಸೇವನೆಯಿಂದ ವಿಶ್ವದ ಜನಸಂಖ್ಯೆಯ ಮೂರನೇ ಎರಡು ಭಾಗದಷ್ಟು ಜನರು ಸಮಗ್ರ ಪೋಷಕಾಂಶಗಳ ಕೊರತೆಯನ್ನು ಎದುರಿಸು ತ್ತಿದ್ದು, ಸದ್ಯ ಪರಿಸ್ಥಿತಿ ಅತ್ಯಂತ ಅಪಾಯಕಾರಿ ಹಂತದಲ್ಲಿದೆ. ಪ್ರಕೃತಿಯಲ್ಲಿ ಸಕಲ ಜೀವಸಂಕುಲವು ನೆಲೆಯೂರಲು
ಇರುವುದು ಒಂದೇ ಗ್ರಹ, ಅದುವೇ ನಮ್ಮ ಭೂಮಿಯಾಗಿದೆ.

ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳು ಸಾಕಷ್ಟು ಮುಂದುವರಿದಿದ್ದರೂ, ಜೀವಿಗಳ ವಾಸಸ್ಥಾನಕ್ಕಾಗಿ ಮತ್ತೊಂದು ಸ್ಥಳವನ್ನು ಸೃಷ್ಟಿ ಮಾಡಲಾಗಿಲ್ಲ. ಆದ್ದರಿಂದ, ನಾವು ಎಷ್ಟೇ ಸಾಧನೆ ಮಾಡಿದ್ದರೂ ನಿಸರ್ಗಕ್ಕಿಂತ ದೊಡ್ಡವರಲ್ಲ. ಮಣ್ಣು ಮತ್ತು ನೀರಿನ ಬಳಕೆಯ ನಡುವಿನ ಅಮೂಲ್ಯ
ನಂಟನ್ನು ಭೂಮಿಯ ಅಳಿವು-ಉಳಿವು ಅವಲಂಬಿಸಿರುತ್ತದೆ. ಹೀಗೆ ಇವುಗಳಲ್ಲಿರುವ ಶಿಸ್ತಿನ ಸಹಜೀವನದ ಸಂಬಂಧವು ನಮ್ಮ ಮಾದರಿ ಕೃಷಿ ವ್ಯವಸ್ಥೆಗಳಿಗೆ ಪ್ರಮುಖ ಅಡಿಪಾಯ ವಾಗಿದೆ.

ಅನಿರೀಕ್ಷಿತವಾಗಿ ಕಾಣಬರುವ ಹವಾಮಾನ ಬದಲಾವಣೆ ಹಾಗೂ ಮಾನವನ ಅವೈಜ್ಞಾನಿಕ ಚಟುವಟಿಕೆಗಳಿಂದಾಗಿ ಮಣ್ಣಿನ ಗುಣಮಟ್ಟವು ಕ್ಷೀಣಿಸು ತ್ತದೆ. ಮಣ್ಣಿನ ಗುಣಮಟ್ಟದ ಬದಲಾವಣೆಯಿಂದಾಗಿ ಜಲಸಂಪನ್ಮೂಲಗಳ ಮೇಲೆ ಅತಿಯಾದ ಒತ್ತಡವಾಗುತ್ತದೆ ಹಾಗೂ ಮಣ್ಣಿನ ಸವಕಳಿಯು
ಹೆಚ್ಚಾಗಿ ನೈಸರ್ಗಿಕ ಅಸಮತೋಲನ ಸೃಷ್ಟಿಯಾಗುತ್ತದೆ. ಇದರಿಂದ ಮಣ್ಣಿನಲ್ಲಿ ನೀರಿನ ಇಂಗುವಿಕೆಯು ತೀವ್ರವಾಗಿ ಕಡಿಮೆಯಾಗಿ ನಿರೀಕ್ಷಿತ ಕೃಷಿ ಇಳುವರಿ ದೊರೆಯುವುದಿಲ್ಲ. ಇಂಥ ಸಂದರ್ಭದಲ್ಲಿ ಮಾಗಿ ಉಳುಮೆ, ಅಲ್ಪಾವಧಿ ಬೆಳೆ ನಾಟಿ, ಕಾಲ್ಗೈ ಪದ್ಧತಿ, ಸಾವಯವ ಪದಾರ್ಥಗಳ ಸೇರ್ಪಡೆ
ಮತ್ತು ಮಿಶ್ರ ಬೇಸಾಯ ಕ್ರಮಗಳಿಂದ ಮಣ್ಣಿನ ಫಲವತ್ತತೆಯನ್ನು ಮರಳಿ ಹೆಚ್ಚಿಸಿಕೊಳ್ಳಬಹುದು. ಇವು ಸುಸ್ಥಿರ ಕೃಷಿಗೆ ಅವಶ್ಯವಿರುವ ಸೂಕ್ತ ಕ್ರಮಗಳಾಗಿವೆಯಲ್ಲದೆ ಮಣ್ಣಿನ ಆರೋಗ್ಯದ ಸುಧಾರಣೆಗೂ ಪೂರಕವಾಗಿವೆ.

ಇವುಗಳ ಅಳವಡಿಕೆಯಿಂದ ಮಣ್ಣಿನ ಸವಕಳಿ ಹಾಗೂ ಮಾಲಿನ್ಯವನ್ನು ಕಡಿಮೆ ಮಾಡಿ, ಮಣ್ಣಿನಲ್ಲಿ ನೀರಿನ ಇಂಗುವಿಕೆ ಮತ್ತು ಹಿಡಿದಿಟ್ಟು ಕೊಳ್ಳು ವಿಕೆಯನ್ನು ಹೆಚ್ಚಿಸಿಕೊಳ್ಳಬಹುದು. ಈ ಕ್ರಮಗಳಿಂದಾಗಿ ಮಣ್ಣಿನಲ್ಲಿರುವ ಜೀವವೈವಿಧ್ಯತೆಯ ಸಂರಕ್ಷಣೆಯಾಗಿ ತನ್ಮೂಲಕ ಅದರ ಫಲವತ್ತತೆಯು ಹೆಚ್ಚಾಗಿ ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣವು ಅಪೇಕ್ಷಿತ ಮಟ್ಟವನ್ನು ತಲುಪುತ್ತದೆ. ಕೊನೆಯದಾಗಿ, ಹವಾಮಾನ ಬದಲಾವಣೆಯ ಸಂದರ್ಭದಲ್ಲಿ ಕೃಷಿಕಾರ್ಯವು ಹಾಳಾಗ ದಂತಾಗುವಲ್ಲಿ ಮಣ್ಣು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

ಆದ್ದರಿಂದ, ಮಣ್ಣಿನ ಸಂರಕ್ಷಣೆಗಾಗಿ ಕಠಿಣ ಕಾನೂನುಗಳು ಜಾರಿಯಾಗಬೇಕು. ಮಣ್ಣು ಪರೀಕ್ಷೆಯ ಆಧಾರದ ಮೇಲೆ ತಜ್ಞರ ಶಿಫಾರಸಿನಂತೆ ರಾಸಾ ಯನಿಕಗಳ ಬಳಕೆಯಾಗಬೇಕು. ನೀರಿನ ಬೇಕಾಬಿಟ್ಟಿ ಬಳಕೆಗೆ ಕಡಿವಾಣ ಬೀಳಬೇಕು. ಸಾವಯವ ಪದಾರ್ಥಗಳ ಬಳಕೆ ಹೆಚ್ಚಾಗಬೇಕು. ವಿಶ್ವದಲ್ಲಿಯೇ ಅತ್ಯಂತ ಶುದ್ಧವಾದ ನೀರು ಎಂದರೆ ಮಳೆನೀರು ಆಗಿದೆ. ಆದ್ದರಿಂದ ಮಳೆನೀರು ಕೊಯ್ಲಿನ ತಾಂತ್ರಿಕತೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಸದ್ಯ ಬಳಕೆಯಲ್ಲಿರುವ ಅವೈಜ್ಞಾನಿಕ ಕೃಷಿ ಪದ್ಧತಿಗಳಿಂದ ಮಣ್ಣು ಗಟ್ಟಿಯಾಗಿ ತನ್ನ ಫಲವತ್ತತೆಯನ್ನು ಕಳೆದುಕೊಂಡು ಬರಡಾಗುವುದಲ್ಲದೆ ನೀರು ಕೂಡ ಮಲಿನಗೊಳ್ಳುತ್ತದೆ.

ಇದರಿಂದ ಮನುಕುಲ ಸೇರಿದಂತೆ ಒಟ್ಟಾರೆ ಜೀವಸಂಕುಲಕ್ಕೆ ಶುದ್ಧವಾದ ಆಹಾರ ಮತ್ತು ನೀರಿನ ಕೊರತೆಯಾಗಿ ಆರೋಗ್ಯವು ಹಾಳಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಇಂದಿನಿಂದಲೇ ಮಣ್ಣಿನ ಸಂರಕ್ಷಣೆಯ ವಿಷಯದಲ್ಲಿ ಆಂದೋಲನಕ್ಕೆ ಮುಂದಾಗ ಬೇಕು, ಅಗತ್ಯ ದಿಟ್ಟಕ್ರಮಗಳನ್ನು ಕೈಗೊಳ್ಳಬೇಕು. ತಪ್ಪಿದಲ್ಲಿ ಮುಂದಿನ ಪೀಳಿಗೆಯು ಬದುಕುವ ಹಕ್ಕನ್ನು ಕಳೆದುಕೊಳ್ಳುವ ಅಪಾಯದಲ್ಲಿದೆ.

(ಲೇಖಕರು ಕೃಷಿತಜ್ಞರು ಹಾಗೂ
ಸಹಾಯಕ ಮಹಾಪ್ರಬಂಧಕರು)

Leave a Reply

Your email address will not be published. Required fields are marked *

error: Content is protected !!