Sunday, 15th December 2024

ಕೂಡಿ ಹಾಕುವ ಕಾರಾಗೃಹ ವ್ಯವಸ್ಥೆ ಎಷ್ಟು ಹಳೆಯದು ?

ಶಿಶಿರಕಾಲ

ಶಿಶಿರ್‌ ಹೆಗಡೆ, ನ್ಯೂಜೆರ್ಸಿ

ಅತ್ಯಂತ ಕ್ರೌರ್ಯದ ಅಥವಾ ಅಮಾನವೀಯ ಮಾನವ ವರ್ತನೆಗಳ ಸುದ್ದಿಗಳನ್ನು ಆಗೀಗ ಓದುತ್ತಲೇ ಇರುತ್ತೇವೆ. ಇಂಥ ಕ್ರೈಂ ಸುದ್ದಿಗಳನ್ನು ತಿಳಿದಾಗ ನೊಂದವರ, ಬಲಿಯಾದವರ ಜತೆ ನೇರ ಸಂಬಂಧವಿಲ್ಲದಿದ್ದರೂ ಕಣ್ಣು ಆರ್ದ್ರವಾಗುತ್ತದೆ.

ಛೇ, ಇದೆಂಥ ಸಮಾಜವನ್ನು ನಿರ್ಮಿಸಿಕೊಂಡುಬಿಟ್ಟಿದ್ದೇವೆ ಎಂದೆನಿಸಿಬಿಡುತ್ತದೆ. ಯಾವುದೇ ದಿನದ, ಯಾವುದೇ ಪತ್ರಿಕೆಯ ಬುಡದಿಂದ ತುದಿಯವರೆಗೆ ಓದಿದರೆ ಒಂದಾದರೂ ಅಸಾಮಾನ್ಯವೆನ್ನಿಸುವ ಕ್ರೈಂ ಸುದ್ದಿ ಇದ್ದೇ ಇರುತ್ತದೆ. ಇತ್ತೀಚಿಗೆ ವರದಿಗಳ, ಅದರಲ್ಲಿಯೂ ಭೀಕರವೆನಿಸುವ ಚಿತ್ರಗಳನ್ನು ಪತ್ರಿಕೆಯವರು, ವಾಹಿನಿಗಳು ಪ್ರಕಟಿಸದೇ ಇದ್ದರೂ ಅವು ಮೊಬೈಲ್ ಮೂಲಕ ಕೆಲವೇ ಘಂಟೆಗಳಲ್ಲಿ ಜನರಲ್ಲಿ ಹರಡಿಬಿಡುತ್ತದೆ. ಕೆಲವಂತೂ ಮನಸ್ಸನ್ನು ಅದೆಷ್ಟು ಕದಡುತ್ತದೆಯೆಂದರೆ ಅಂಥ ಚಿತ್ರಗಳನ್ನು ಮೊಬೈಲ್‌ನಲ್ಲಿ ಇಟ್ಟುಕೊಳ್ಳಲೂ ಮನಸಾಗುವುದಿಲ್ಲ. ತಕ್ಷಣ ಡಿಲೀಟ್ ಮಾಡುತ್ತೇವೆ.
ಕೆಲವೊಮ್ಮೆ ಜೈಲಿಗೆ ಹೋಗಿ ಶಿಕ್ಷೆ ಅನುಭವಿಸಿ ಸಮಾಜಕ್ಕೆ

ವಾಪಸ್ಸಾದ ವ್ಯಕ್ತಿಯೇ ಹಿಂದಿಗಿಂತ ಹೆಚ್ಚಿನ ಕ್ರೌರ್ಯದ ಕೆಲಸ ಮಾಡಿರುತ್ತಾನೆ/ಳೆ. ಹಾಗಾದಾಗಲೆಲ್ಲ ಜೈಲ್ ಎನ್ನುವ ನಾವು
ಕಟ್ಟಿಕೊಂಡ ವ್ಯವಸ್ಥೆಯ ಮೇಲೆ ಪ್ರಶ್ನೆಗಳು ಮೂಡುತ್ತವೆ. ಈ ರೀತಿ ರಿಪೀಟ್ ಕ್ರೈಂ ನಡೆದಾಗಲೆಲ್ಲ ಶಿಕ್ಷೆ ಆ ವ್ಯಕ್ತಿಗೆ ಕಮ್ಮಿ ಯಾಯಿತೇನೋ ಎಂದೆನಿಸುವುದಿದೆ. ಇಂಥ ಕ್ರಿಮಿನಲ್‌ಗಳನ್ನೂ ಯಾಕಾದರು ಹೊರಕ್ಕೆ ಬಿಡುತ್ತಾರೆಯೋ ಎಂದು ಪ್ರಶ್ನಿಸುತ್ತೇವೆ. ಇದೆಲ್ಲ ಅನಿಸಿಕೆ ಸಮಾಜದಲ್ಲಿ ಕ್ರಮೇಣ ಹೆಚ್ಚುತ್ತ ಹೋದ ಹಾಗೆ ಶಿಕ್ಷೆಯ ಪ್ರಮಾಣ ಕೂಡ ಹೆಚ್ಚುತ್ತದೆ.

ನ್ಯಾಯಾಲಯ ಮತ್ತು ನ್ಯಾಯಪೀಠ ಕೆಲಸಮಾಡುವುದು ಕೂಡ ಜನರ – ಸಾರ್ವಜನಿಕ ಸೆಂಟಿಮೆಂಟಿನ ಮೇಲೆಯೇ. ಇದನ್ನು ಸಾಮಾನ್ಯವಾಗಿ ನ್ಯಾಯವಾದಿಗಳು ಒಪ್ಪುವುದಿಲ್ಲ. ಆದರೆ ನ್ಯಾಯಾಲಯ ಕೂಡ ಸಾರ್ವಜನಿಕ ವ್ಯವಸ್ಥೆಯೇ ಆಗಿರುವುದರಿಂದ ಮತ್ತು ಅಲ್ಲಿರುವವರೂ ಮನುಷ್ಯರೇ ಆಗಿರುವುದರಿಂದ ಸಮಾಜದ ಅಭಿಪ್ರಾಯ ಅವರ ಮೇಲೆ ಪರಿಣಾಮ ಬೀರಿಯೇ ಬೀರುತ್ತದೆ. ಅದು ಸರಿ ಕೂಡ. ಈಗೀಗ, ಅದರಲ್ಲಿಯೂ ಆಧುನಿಕ ತಂತ್ರಜ್ಞಾನ ಮತ್ತು ಸೋಷಿಯಲ್ ಮೀಡಿಯಾ ಕಾರಣದಿಂದ ಸಮಾಜಕ್ಕೆ,
ಉಳಿದವರಿಗೆ ನಮ್ಮ ಅಭಿಪ್ರಾಯ ತಿಳಿಸುವ ಸಾಧ್ಯತೆ ಸುಲಭವಾಗಿದೆ.

ಹೀಗೆ ಹುಟ್ಟಿಕೊಂಡ ವಯಕ್ತಿಕ ಅಭಿಪ್ರಾಯಗಳು ಕ್ಷಣವೊಂದರಲ್ಲಿ ಯಾರ‍್ಯಾರನ್ನೋ ಎಲ್ಲಾ ಬೇರೆ ಬೇರೆ ರೀತಿ ಪ್ರಚೋದಿಸುತ್ತದೆ ಮತ್ತು ಹರಡಿ ಶಕ್ತಿ ಪಡೆದುಕೊಳ್ಳುತ್ತವೆ. ನಿರ್ಭಯಾ ಕೇಸ್ ಒಂದು ಕ್ಲಾಸಿಕ್ ಉದಾಹರಣೆ. ಒಂದು ವೇಳೆ ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾ ಇಲ್ಲದಿರುತ್ತಿದ್ದರೆ ಆ ಇಡೀ ಕೇಸ್ ಈ ರೀತಿಯ ಒಂದು ಅಂತ್ಯ ಕಾಣುತ್ತಿರಲಿಲ್ಲವೇನೋ. ‘ರೇರೆಸ್ಟ್ ಆಫ್ ರೇರ್’ ಕೇಸ್‌ಗಳಲ್ಲಿ ಮರಣದಂಡನೆ ಎಂದಿದೆ ನಮ್ಮ ನ್ಯಾಯವ್ಯವಸ್ಥೆಯಲ್ಲಿ.

ಆದರೆ ಈ ರೀತಿ ಹುಟ್ಟಿ ಬೆಳೆಯುವ ಸಾರ್ವಜನಿಕ ಅಭಿಪ್ರಾಯಗಳು ಅಪರಾಧವನ್ನು ತೀರಾ ಅಸಾಮಾನ್ಯ ಎಂದು ಗುರುತಿಸು ವಂತೆ ನ್ಯಾಯ ವ್ಯವಸ್ಥೆಯ ಮೇಲೆ ಪ್ರಭಾವ ಉಂಟುಮಾಡುತ್ತದೆ. ಇಂಥ ಅಪರಾಧವನ್ನು ನ್ಯಾಯಾಲಯ ಅದೆಷ್ಟೇ ಪ್ರತ್ಯೇಕವಾಗಿ ಗ್ರಹಿಸಿ ಪರಿಗಣಿಸುತ್ತದೆ ಎಂದರೂ ಈ ನ್ಯಾಯ ವ್ಯವಸ್ಥೆ ಖಂಡಿತವಾಗಿ ಸಮಾಜದ ಪ್ರತಿಕ್ರಿಯೆಗೆ ಅಪ್ರತ್ಯಕ್ಷವಾಗಿ ಸ್ಪಂದಿಸಿ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ನ್ಯಾಯ ಪೀಠ ಸಾರ್ವಜನಿಕ ಅಭಿಪ್ರಾಯಕ್ಕೆ ಒಳಗಾಗದೇ ನ್ಯಾಯ ನೀಡಬೇಕು ಎನ್ನುವುದು ಆದರ್ಶವೇನೋ ನಿಜ.

ಆದರೆ ಹಾಗಾಗಬೇಕೆಂದಾದರೆ ಎಲ್ಲ ಜಡ್ಜ್ ಗಳನ್ನು ಮೊಬೈಲ, ಟಿವಿ, ಪತ್ರಿಕೆಯನ್ನು ಸಿಗದಂತೆ ಗುಹೆಯಲ್ಲಿರಿಸಬೇಕು, ಇಲ್ಲವೇ ನ್ಯಾಯ ಪೀಠಕ್ಕೆ ಕೂರಿಸಲೆಂದೇ ಹೊಸತೊಂದು ಮನುಷ್ಯ ತಳಿಯನ್ನು ಬೆಳಸಬೇಕು. ಇನ್ನು ಕಾನೂನನ್ನು ರೂಪಿಸುವುದು ಕೊಡ ಜನರೇ. ಪ್ರಜಾಪ್ರಭುತ್ವದಲ್ಲಿ ಈ ಕೆಲಸವನ್ನು ಮಾಡುವವರು ಜನರಿಂದ ಆಯ್ಕೆಯಾದವರೇ ಅಲ್ಲವೇ. ಹಾಗಾಗಿ ಇವರು ಕೂಡ ಸಮಾಜದ ಪ್ರತಿಕ್ರಿಯೆಗೆ ತಕ್ಕ ಹಾಗೆ ಕಾನೂನನ್ನು ರೂಪಿಸುತ್ತ ಹೋಗುತ್ತಾರೆ.

ಹೀಗೆ ಜೈಲ್ ಮತ್ತು ಶಿಕ್ಷೆ ನೀಡುವ ವ್ಯವಸ್ಥೆ ಖಂಡಿತವಾಗಿಯೂ ಸಮಾಜ ಹೇಗೆ ಪ್ರತಿಕ್ರಿಯಿಸುತ್ತದೆಯೋ ಅದಕ್ಕೆ ಅನುಗುಣವಾಗಿ
ಕಾಲಕ್ರಮೇಣ ಬದಲಾಗುತ್ತ ಹೋಗುತ್ತದೆ. ಅದು ಹಾಗೆಯೇ ಆಗಬೇಕು, ಅದೇ ಸರಿ. ನ್ಯಾಯ ವ್ಯವಸ್ಥೆಯ ವಿವೇಚನೆ ಸಮಾಜದ
ವಿವೇಚನೆಯೇ ಆಗಿರಬೇಕು. ಯಾವಾಗ ನ್ಯಾಯ ವ್ಯವಸ್ಥೆ ಸಮಾಜದಿಂದ ಸಂಬಂಧ ಕಳೆದುಕೊಂಡಿದೆ ಎಂಬ ಭಾವನೆ ಜನರಲ್ಲಿ
ಮೂಡುತ್ತದೆಯೋ ಆಗ ದಂಗೆಯಾಗುತ್ತದೆ.

ಬಹಳಷ್ಟು ದೇಶಗಳಲ್ಲಿ ಈ ವ್ಯವಸ್ಥೆ ಮತ್ತು ಅವಕಾಶವಿದೆ. ಕೆಲವು ಕಾನೂನುಗಳನ್ನು ಜಾರಿಗೆ ತರುವಾಗ ಜನಪ್ರತಿನಿಧಿಗಳಿಗೆ
ಸ್ಪಷ್ಟತೆಯಿಲ್ಲದಾಗ ಅಥವಾ ಒಮ್ಮತಕ್ಕೆ ಬರುವುದಕ್ಕೆ ಕಷ್ಟವಾದಾಗ ಅದನ್ನು ಅಲ್ಲಿನ ಸರಕಾರ ವೋಟ್ ಹಾಕಲು ಜನರ
ಮುಂದಿರಿಸುತ್ತದೆ. ಅಮೆರಿಕಾದಲ್ಲಿ ಸಾಮಾನ್ಯ ಸ್ಥಳೀಯ ಚುನಾವಣೆ ಅಥವಾ ಅಧ್ಯಕ್ಷೀಯ ಚುನಾವಣೆಯ ಜತೆ ಜತೆ ಈ
ರೀತಿಯ ಕಾನೂನಿಗೆ ಸಂಬಂಧಿಸಿದ ಪ್ರಶ್ನೆಯನ್ನು ಜನರ ಮುಂದೆ ಇಡುವ ಪದ್ಧತಿಯಿದೆ.

ಉದಾಹರಣೆಗೆ ಗಾಂಜಾ ಬಳಕೆ ಕಾನೂನು  ರೀತ್ಯಾ ಅನುಷ್ಠಾನ ಗೊಳಿಸಬೇಕೇ ಎನ್ನುವ ಪ್ರಶ್ನೆಗೆ ಅಮೆರಿಕಾದ ನ್ಯೂಜೆರ್ಸಿ ರಾಜ್ಯದ ಸರಕಾರ ಒಮ್ಮತಕ್ಕೆ ಬರಲಾಗಲಿಲ್ಲ. ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಪ್ರಶ್ನೆಯನ್ನು ಇಲ್ಲಿನ ನಾಗರಿಕರ ಮುಂದೆ ಇಡಲಾಯಿತು. ಜನರೇ ಅದನ್ನು ನಿರ್ಧರಿಸಿದರು ಮತ್ತು ಓಕೆ ಎಂದರು. ಸಮಾಜಕ್ಕೆ ಏನು ಬೇಕು, ಯಾವ ರೀತಿಯ ಕಾನೂನು ಬೇಕು ಎಂದು ಜನರೇ ನಿರ್ಧರಿಸುವುದು. ನನಗೆ ಬಹಳ ಇಷ್ಟವಾದ ವ್ಯವಸ್ಥೆ ಇದು.

ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ನಾವು ಹಲವು ಬಾರಿ ಅವರು ಜಾರಿಗೆ ತರುವ ಕಾನೂನನ್ನು ಒಪ್ಪದಿದ್ದರೂ ಒಪ್ಪಲೇ
ಬೇಕಾದ ಪೀಕಲಾಟಕ್ಕೆ ಒಳಗಾಗುತ್ತೇವೆ. ಒಮ್ಮತಕ್ಕೆ ಬರದಾದಾಗ ಈ ರೀತಿ ಜನರಿಗೆ ನಿರ್ಧಾರಬಿಡುವುದು ಸಮಂಜಸವೆನಿಸುತ್ತದೆ.
ನಿರ್ಭಯಾ ಕೇಸ್‌ನ ರೀತಿಯ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಒಂದು ಚಿಕ್ಕ ಹುಡುಗಿಯನ್ನು ಅಪಹರಿಸಿ ಕೊಲೆಯಾದ ಘಟನೆಯಾಗಿತ್ತು. ಇದು ನಡೆದದ್ದು 1993ರಲ್ಲಿ.

ಆಕೆಯನ್ನು ಅಪರಾಧಿ ಮನೆಯ ಕಿಟಕಿ ಒಡೆದು ಒಳನುಗ್ಗಿ ನಂತರ ಅಪಹರಿಸಿ ಮೃಗೀಯ ರೀತಿಯಲ್ಲಿ ಕೊಂದಿದ್ದ. ಆತ ರಿಪೀಟ್
ಆ-ಂಡರ್. ಹಿಂದೆ ಕೂಡ ಇನ್ನೊಂದು ಅಪರಾಧವನ್ನು ಮಾಡಿ ಜೈಲು ವಾಸ ಅನುಭವಿಸಿ ಸಮಾಜಕ್ಕೆ ವಾಪಸ್ಸಾದವನು. ಇದು
ರಾಷ್ಟ್ರವ್ಯಾಪಿ ಸುದ್ದಿಯಾಯಿತು. ದೇಶದ ಉದ್ದಗಲದಲ್ಲ ಜನರು ಈ ಅಮಾನವೀಯ ಘಟನೆಗೆ ಕಂಬನಿಮಿಡಿದರು. ಅಯ್ಯೋ
ಆತನನ್ನು ಬಿಟ್ಟದ್ದು ಬೇಗವಾಯಿತು, ಆತ ಇನ್ನೂ ಜೈಲಿನಲ್ಲಿದ್ದಿದ್ದರೆ ಈ ಘಟನೆಯೇ ನಡೆಯುತ್ತಿರಲಿಲ್ಲ.’ ಎನ್ನುವ ಮಾತುಗಳು
ಕೇಳಿಬಂದವು. ಒಬ್ಬ ಅಪರಾಧಿಗೆ ಜೈಲು ಶಿಕ್ಷೆಯೇನೋ ನೀಡಲಾಗುತ್ತದೆ. ಆದರೆ ಆತನನ್ನು ಹೊರಜಗತ್ತಿಗೆ ಬಿಡುವ
ಮಾನದಂಡವೇನು? ಆತ ಪುನಃ ಈ ಸಮಾಜದಲ್ಲಿ ಬಂದು ಉಳಿದವರ ಜತೆ ಬದುಕಲು ಯೋಗ್ಯ ಎಂದು ಹೇಗೆ ನಿರ್ಧರಿಸ ಲಾಗುತ್ತದೆ ಎನ್ನುವ ಪ್ರಶ್ನೆಗಳು ಎದ್ದವು.

ಪ್ರತೀ ವ್ಯಕ್ತಿಯೂ ಬೇರೆ ಬೇರೆ. ಅಪರಾಧ ನಡೆಯುವ ಹಿನ್ನೆಲೆ, ಉದ್ದೇಶಗಳು ಬೇರೆ ಬೇರೆ. ಸಾಮಾನ್ಯವಾಗಿ ಇದೆಲ್ಲವನ್ನು
ಪರಿಗಣಿಸಿಯೇ ಶಿಕ್ಷೆ ನೀಡಲಾಗುತ್ತದೆಯೇ ಆದರೂ ಈ ಶಿಕ್ಷೆಯ ಲೆಕ್ಕಾಚಾರ ಮಾಡುವುದು ನ್ಯಾಯಪೀಠದಲ್ಲಿ ಕೂರುವ ಇನ್ನೂಬ್ಬ ಮನುಷ್ಯನೇ. ಆತನಿಗೆ ಅದನ್ನು ಲೆಕ್ಕ ಹಾಕುವುದೇ ಕೆಲಸ. ಈ ಲೆಕ್ಕ ಹಾಕುವುದಕ್ಕೆ ಬಳಸುವ ಮಾನದಂಡ ಒಂದೇ ಆಗಿರುತ್ತದೆ. ಕೆಲವು ಜಡ್ಜ್ ಜಾಸ್ತಿ ಶಿಕ್ಷೆ ಕೊಡುತ್ತಾರೆ, ಕೆಲವರು ಕಮ್ಮಿ. ಹಿಂದೆ ನಡೆದ ತೀರ್ಪುಗಳನ್ನು ಪರಿಗಣಿಸಲಾಗುತ್ತದೆ ಯಾದರು ಅಲ್ಲಿ ನ್ಯಾಯವಾದಿಯ ವಿವೇಚನೆ ಕೂಡ ಕೆಲಸಮಾಡುತ್ತಿರುತ್ತದೆಯಲ್ಲ.

ಆದರೆ ಪ್ರತಿಯೊಬ್ಬ ಅಪರಾಧಿ ಒಂದೇ ವ್ಯಕ್ತಿತ್ವ ಹೊಂದಿದವನಾಗಿರುವುದಿಲ್ಲವಲ್ಲ. ಖಂಡಿತವಾಗಿ ಈ ಶಿಕ್ಷೆಯ – ಜೈಲು ಶಿಕ್ಷೆಯ ವರ್ಷಗಳನ್ನು ಲೆಕ್ಕ ಹಾಕುವ ಕೆಲಸ ಪರಿಪೂರ್ಣವಂತೂ ಅಲ್ಲವೇ ಅಲ್ಲ. ಅದೊಂದು ಅಂದಾಜು ಅಜಮಾಸು ಲೆಕ್ಕ. ಈ ಘಟನೆಯಾದ ಸಮಯದಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚಿಸಬೇಕೇ ಬೇಡವೇ – ಈ ನಿಟ್ಟಿನಲ್ಲಿ ಕ್ಯಾಲಿಫೋರ್ನಿಯಾದ ಪ್ರಜಾಪ್ರತಿನಿಧಿ ಗಳಲ್ಲಿ ಚರ್ಚೆಗಳು ನಡೆದವು. ಅಲ್ಲಿ ಕೂಡ ಒಮ್ಮತಕ್ಕೆ ಬರಲಾಗದೆ ಇದನ್ನು ಜನರ ಮುಂದೆ ಇಡಲಾಯಿತು. ಜನರು ಶಿಕ್ಷೆ ಹೆಚ್ಚಿಸುವುದಕ್ಕೆ ಮತ ಹಾಕಿದರು.

ಈ ಒಂದು ಘಟನೆಯಿಂದಾಗಿ ಕ್ಯಾಲಿಫೋರ್ನಿಯಾದಲ್ಲಿ ದೇಶದ ಉಳಿದ ರಾಜ್ಯಗಳಿಗಿಂತ ಹೆಚ್ಚಿನ ಜೈಲು ಶಿಕ್ಷೆಯ ಕಾನೂನು ಜಾರಿಗೆ ಬಂತು. ಒಮ್ಮೆ ಅಪರಾಧವೆಸಗಿದ ವ್ಯಕ್ತಿ ಇನ್ನೊಮ್ಮೆ ಅಪರಾಧವೆಸಗಿದರೆ ಆತನಿಗೆ 25 ಜೈಲು ಶಿಕ್ಷೆ ಎನ್ನುವ ಹೊಸ ಕಾನೂನು ಸ್ಥಾಪಿತವಾಯಿತು. ಸಮಾಜಕ್ಕೂ ಗೊತ್ತಿಲ್ಲ – ಈ ಶಿಕ್ಷೆ ಹೆಚ್ಚಿಸುವುದರಿಂದ ಅಪರಾಧ ಕಡಿಮೆಯಾಗಬಹುದೇ? ಇದರ ಅಡ್ಡ ಪರಿಣಾಮ ಏನು? ಕೆಲವು ವ್ಯಕ್ತಿಗಳು ಜೈಲ್ ವಾಸದಿಂದಾಗಿ ಬೇಗ ಬದಲಾಗಬಹುದು.

ಅಂಥ ವ್ಯಕ್ತಿಗಳಿಗೆ ಇದು ಒಂದು ರೀತಿಯಲ್ಲಿ ಅನ್ಯಾಯ ಎನ್ನುವ ವಾದ ಪ್ರತಿವಾದಗಳು ನಡೆದವು. ಇದೆಲ್ಲ ಸಮಾಜ ತನ್ನ ಮೇಲೆಯೇ ತಾನು ಪ್ರಯೋಗ ಮಾಡಿಕೊಳ್ಳುವ ಕೆಲಸ. ಜೈಲು ಎನ್ನುವುದು ಅಪರಾಧಕ್ಕೆ ನಮ್ಮ ವ್ಯವಸ್ಥೆ ಕೊಡುವ ಉತ್ತರ. ಆದರೆ ಈ ಉತ್ತರ ಹೇಗೆ ಮತ್ತು ಎಷ್ಟು ಸಮಂಜಸ ಎನ್ನುವ ಪ್ರಶ್ನೆ ಆಗೀಗ ಸಮಾಜದ ಎದುರಿಗೆ ಬಂದು ನಿಲ್ಲುತ್ತಲೇ ಇರುತ್ತದೆ.

ಇಂದು ಜೈಲ್ ಇಲ್ಲದ ದೇಶವಿಲ್ಲ. ಜೈಲ್ ಇಲ್ಲದೇ ಸಮಾಜ ಅಪೂರ್ಣ ಎಂದಾಗಿಬಿಟ್ಟಿದೆ. ಜನರನ್ನು ಜೈಲಿಗೆ ಕಳುಹಿಸುವ ಪದ್ಧತಿ
ನಮಗೆಲ್ಲ ತೀರಾ ಸಾಮಾನ್ಯ ವಿಚಾರ ಎನ್ನುವಂತಾಗಿಬಿಟ್ಟಿದೆ ಅಲ್ಲವೇ? ಅದರನು ಹೊಸತಿದೆ? ಯಾವತ್ತೂ ಜೈಲ್ ಎನ್ನುವ ವ್ಯವಸ್ಥೆ ಇತ್ತು ಎನ್ನುವ ಭಾವನೆಯೇ ನಮ್ಮಲ್ಲಿ ಬೆಳೆದುಬಿಟ್ಟಿದೆ. ನಾವು ಭಾರತೀಯರಿಗಂತೂ ಕೇಳಿದರೆ ನಮ್ಮ ಒಬ್ಬ ದೇವರು
ಹುಟ್ಟಿದ್ದೇ ಜೈಲಿನಲ್ಲಿ ಎನ್ನುತ್ತೇವೆ. ಅಲ್ಲಿ ಕೂಡ ನಾವೇ ಮೊದಲು ಎನ್ನುವ ರೀತಿ. ಆದರೆ ಇಂದಿರುವ ಜೈಲು ವ್ಯವಸ್ಥೆ ಅಷ್ಟೆಲ್ಲ
ಹಳೆಯದಲ್ಲ.

ಇಂದಿನ ಜೈಲು ವ್ಯವಸ್ಥೆ ಹುಟ್ಟಿದ್ದು ಕೇವಲ 230 ವರ್ಷದ ಹಿಂದೆ, ಮೊದಲು ಹುಟ್ಟಿದ್ದು ಅಮೆರಿಕಾದಲ್ಲಿ. ಇದನ್ನು ಮೊದಲು
ತಿಳಿದಾಗ ನನಗೂ ಆಶ್ಚರ್ಯವಾಯಿತು. ಜೈಲು ಎನ್ನುವುದು ಸಾವಿರಗಟ್ಟಲೆ ವರ್ಷದಿಂದ ನಡೆದುಕೊಂಡು ಬಂದದ್ದು ಎನ್ನುವುದೇ ನನ್ನ ಭಾವನೆಯಾಗಿತ್ತು. ದ್ವಾಪರ ಯುಗದ ಅಂತ್ಯ ಮತ್ತು ಕಲಿಯುಗದ ಆರಂಭವನ್ನು ಲೆಕ್ಕ ಹಾಕಿದಾಗ
ಮಹಾಭಾರತದ ಕಾಲಘಟ್ಟ ಕ್ರಿಸ್ತ ಪೂರ್ವ 3000 ಎನ್ನುವುದು ಒಂದು ಲೆಕ್ಕಾಚಾರ.

ಕೃಷ್ಣ ಹುಟ್ಟಿದ್ದು ಜೈಲಿನ ಅಲ್ಲವೇ? ಅದರರ್ಥ ಸುಮಾರು ಐದುಸಾವಿರ ವರ್ಷದ ಹಿಂದೆಯೇ ನಮ್ಮಲ್ಲಿ ಜೈಲು ವ್ಯವಸ್ಥೆ ಇತ್ತೇ? ಇಲ್ಲ, ಅದು ಸರಿಯಾದ ಗ್ರಹಿಕೆಯಲ್ಲ. ಕೃಷ್ಣ ಹುಟ್ಟುವಾಗ ದೇವಕಿ ವಾಸುದೇವ ಬಂಧಿಯಾಗಿದ್ದರೇ ವಿನಃ ಅವರು ಇಂದಿನ ಪರಪ್ಪನ ಅಗ್ರಹಾರದ ರೀತಿಯ ಜೈಲಿನಲ್ಲಿರಲಿಲ್ಲ. ಮನುಷ್ಯರನ್ನು ಬಂಧಿಯಾಗಿಸುವ ಕೆಲಸ ಹಳೆಯದಿರಬಹುದು ಆದರೆ ಇಂದಿರುವ ಆಧುನಿಕ ಜೈಲು ವ್ಯವಸ್ಥೆ ಅಷ್ಟೆಲ್ಲ ಹಿಂದಿನದಲ್ಲ. ನಾನು ಇಲ್ಲಿ ಜೈಲು ಎಂದು ಕರೆಯುತ್ತಿರುವುದು ನಮ್ಮಲ್ಲಿ
ಪ್ರಸ್ತುತ ಅಪರಾಧ ಸಾಬೀತಾದವರನ್ನು ದೀರ್ಘ ಕಾಲ ಕೂಡಿಹಾಕುವ ಮೂಲಕ ಶಿಕ್ಷಿಸುವ ವ್ಯವಸ್ಥೆಯನ್ನು. ಜೈಲ್‌ಗೂ ಮತ್ತು ಕಾರಾಗೃಹಕ್ಕೂ ವ್ಯತ್ಯಾಸವಿದೆ. ಆದರೆ ನಾವಿಂದು ಎರಡೂ ಒಂದೇ ಎನ್ನುವ ರೀತಿ ಬಳಸುತ್ತೇವೆ.

ನಾನು ಕೂಡ ಈ ಲೇಖನದಲ್ಲಿ ಇಲ್ಲಿಯವರೆಗೆ ಕಾರಾಗೃಹವನ್ನು ಜೈಲ್ ಎಂದೇ ಬಳಸಿದ್ದು. ಜೈಲ್ ಎನ್ನುವ ಶಬ್ದದ ಮೂಲ ಫ್ರೆಂಚ್ ಭಾಷೆಯ  Jaiole.. ಇದರರ್ಥ ಪಂಜರ. ಬಂಧಿಖಾನೆ ಬೇರೆ ಕಾರಾಗೃಹ ಬೇರೆ. ಬಂಧೀಖಾನೆ ಎಂದರೆ ಒಬ್ಬ ವ್ಯಕ್ತಿಯನ್ನು ಒಂದಿಷ್ಟು ನಿಗದಿತ ಮತ್ತು ಅಲ್ಪಕಾಲ ಬಂಧನದಲ್ಲಿಡುವ ವ್ಯವಸ್ಥೆ. ಈ ಪದ್ಧತಿ ತೀರಾ ಹಳೆಯದು, ಇದಕ್ಕೆ ಇತಿಹಾಸವಿದೆ. ಶಿಕ್ಷಿಸುವುದಕ್ಕಿಂತ ಮೊದಲು ಅಪರಾಧಿ ಇನ್ನೊಂದು ಅಪರಾಧವನ್ನೆಸಗದಿರಲಿ ಎಂದು ಅಥವಾ ರಾಜ ಮಹಾರಾಜರಿಗೆ
ಶಿಕ್ಷೆ ವಿಧಿಸಲು ಸಮಯವಿಲ್ಲದಾದಾಗ ಅಲ್ಲಿಯವರೆಗೆ ಬಂಧನದಲ್ಲಿಡುವ ಒಂದು ವ್ಯವಸ್ಥೆ.

ಹದಿನೇಳನೇ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಜೈಲುಗಳಿದ್ದವು (ಕಾರಾಗೃಹ ಅಲ್ಲ). ಅವನ್ನು ಹೆಚ್ಚಾಗಿ ಬಳಸುತ್ತಿದ್ದುದು ಕೂಡ ಆರೋಪಿಗಳನ್ನು ತಾತ್ಕಾಲಿಕವಾಗಿ ಇಡಲು. ಆಗಿನ ಕಾಲದಲ್ಲಿ ಇಂಗ್ಲೆಂಡಿನಲ್ಲಿ ವರ್ಷಕ್ಕೆ ನಾಲ್ಕು ಬಾರಿಯಷ್ಟೇ ಕೋರ್ಟ್ ಸೆಷನ್ಸ್ ಇರುತ್ತಿತ್ತು. ಹಾಗಾಗಿ ಆರೋಪಿಗಳನ್ನು ಹೆಚ್ಚೆಂದರೆ ಮೂರು ತಿಂಗಳು ಇಲ್ಲಿ ಇಡಲಾಗುತ್ತಿತ್ತು. ಅಲ್ಲದೇ ಕೆಲವೊಮ್ಮೆ ಸಾಕ್ಷಿಗಳನ್ನು ಕೂಡ ಈ ರೀತಿಯೇ ಜೈಲಿನಲ್ಲಿ ರಕ್ಷಣೆಗೋಸ್ಕರ ಇಡಲಾಗುತ್ತಿತ್ತು.

ಅಪರಾಧಿಗಳನ್ನೂ ಕೂಡ ಶಿಕ್ಷೆ ಕೊಡುವುದಕ್ಕಿಂತ ಮೊದಲು ಇದೇ ರೀತಿ ಬಂಧನದಲ್ಲಿಡಲಾಗುತ್ತಿತ್ತು. ಆ ಸಮಯದಲ್ಲಿ ಯಾರೂ
ಬಂಧನವನ್ನೇ ಶಿಕ್ಷೆ ಎಂದು ಪರಿಗಣಿಸುತ್ತಿರಲಿಲ್ಲ. ಆಗ ಬಂಧನ ಶಿಕ್ಷೆಯಾಗಿರಲಿಲ್ಲ. ಶಿಕ್ಷೆ ಬೇರೆಯದೇ ಇರುತ್ತಿತ್ತು. ಅಂದಿನ ಕಾಲದಲ್ಲಿ ಶಿಕ್ಷೆ ಎಂದರೆ ಅದು ತೆರೆ ಮರೆಯಲ್ಲಿ, ನಾಲ್ಕು ಗೋಡೆಯ ಹಿಂದೆ ನಡೆಯುವ ಕೆಲಸವಾಗಿರಲಿಲ್ಲ. ಶಿಕ್ಷೆ ಎಂದರೆ
ಸಮಾಜದ ಎದುರು ನಡೆಯಬೇಕು. ಇದರಿಂದ ಸಮಾಜದಲ್ಲಿ ಎಚ್ಚರ ಮೂಡಬೇಕು ಎನ್ನುವ ಹಿನ್ನೆಲೆ.

ನಮ್ಮದೇ ಇತಿಹಾಸ ತೆಗೆದುಕೊಂಡರೆ ಶಿಕ್ಷೆಯೆಂದರೆ ಮೊದಲೆಲ್ಲ ನೂರು ಛಡಿಯೇಟು, ಗಡಿಪಾರು ಮಾಡಿ ಅರಣ್ಯಕ್ಕೆ ಅಟ್ಟುವುದು ಇವೆಲ್ಲ. ಮೂರು ಶತಮಾನಕ್ಕಿಂತ ಹಿಂದೆ ಜೈಲಿಗೆ ಹಾಕಿ ಬಂಧನದಲ್ಲಿಡುವ ಮೂಲಕ ಶಿಕ್ಷೆ ನೀಡುವ ಪದ್ಧತಿ ಇರಲೇ ಇಲ್ಲ. ಅಪರಾಧ ತೀರಾ ದೊಡ್ಡದಿದ್ದರೆ ಸಾರ್ವಜನಿಕವಾಗಿ ಕಲ್ಲು ಹೊಡೆದು, ಗಲ್ಲಿಗೇರಿಸಿ, ನೀರಿನಲ್ಲಿ ಮುಳುಗಿಸಿ, ಬೆಂಕಿ ಹಚ್ಚಿ ಹೀಗೆ ಕೊಲ್ಲುವುದು ಇವೇ ಮೊದಲಾದವುಗಳು.

ಸಾವು ಅಷ್ಟೇ ಶಿಕ್ಷೆಯಾಗಿರಲಿಲ್ಲ – ಅದು ಹಿಂಸೆ ಯಿಂದ ಕೂಡಿರುತ್ತಿತ್ತು. ಅಪರಾಧಿ ನೋವು ಅನುಭವಿಸಿಯೇ ಸಾಯಬೇಕಿತ್ತು. ಸುಲಭದಲ್ಲಿ(!) – ನೋವೇ ತಿಳಿಯದಂತೆ ಸಾಯಿಸುವ ಮೂಲಕ ಶಿಕ್ಷೆ ನೀಡುವುದು ಕೂಡ ಹೊಸತೇ. ಸಾವಲ್ಲದೇ ಉಳಿದ ದೈಹಿಕ ಶಿಕ್ಷೆಗಳು ಕೂಡ ನೋವಿನಿಂದಲೇ ಕೂಡಿರುತ್ತಿತ್ತು. ಅಲ್ಲದೇ ಕೆಲವು ಶಿಕ್ಷೆಗಳು ಅವಮಾನ ಕೇಂದ್ರಿತವಾಗಿರುತ್ತಿತ್ತು. ದಿನವಿಡೀ ಊರ ಮಧ್ಯೆ ಕಂಬಕ್ಕೆ ಕಟ್ಟಿ ಹಾಕುವುದು ಇತ್ಯಾದಿ.

ಇದೆಲ್ಲವನ್ನು ಹಳೆಯ – ಐತಿಹಾಸಿಕ ಸಿನೆಮಾಗಳಲ್ಲಿ ನೋಡಿರುತ್ತೀರಿ. ಆದರೆ ಅದೆಲ್ಲಿಯೂ ಕಾರಾಗೃಹದಲ್ಲಿ, ಇಂದಿನ ರೀತಿ ದೊಡ್ಡ ದೊಡ್ಡ ಬಿಲ್ಡಿಂಗುಗಳಲ್ಲಿ ಇಡುವುದು, ಆ ಮೂಲಕ ಬಂಧನವೇ ಶಿಕ್ಷೆಯಾಗಿಸುವುದು ಮೊದಲಿರಲಿಲ್ಲ. ಇಲ್ಲಿ ನಾನು ಹೊಸತು ಎಂದು ಹೇಳುತ್ತಿರುವುದು ಇಂದಿನ ಕಾರಾಗೃಹ ವ್ಯವಸ್ಥೆಯ ಬಗ್ಗೆ. ಕಾರಾಗೃಹ ಎಂದಾಗ ಅದು ಬಂಧನದಲ್ಲಿಡುವುದೇ ಶಿಕ್ಷೆಯಾಗುವ ವ್ಯವಸ್ಥೆ. ಇದು ಶುರುವಾಗಿದ್ದು ಮೊದಲು ಅಮೆರಿಕಾದಲ್ಲಿ. ಅಮೆರಿಕಾದ ಕ್ರಾಂತಿಯ ಸಂದರ್ಭದಲ್ಲಿ, ನಂತರದಲ್ಲಿ ಇಂಗ್ಲೆಂಡ್, ಯುರೋಪಿಯನ್ ರಾಷ್ಟ್ರಗಳಲ್ಲಿ, ಕೆನಡಾ ಮೊದಲಾದ ದೇಶಗಳಲ್ಲಿ ಸಾರ್ವಜನಿಕವಾಗಿ ಶಿಕ್ಷಿಸುವುದು ಒಳ್ಳೆಯ ಲಕ್ಷಣಗಳಲ್ಲ ಎನ್ನುವ ವಿಚಾರ ಕ್ರಮೇಣ ಬೆಳೆಯಿತು.

ಸಾರ್ವಜನಿಕ ಹಿಂಸಾ ಶಿಕ್ಷೆಗಳು, ಅವಮಾನಗಳು ಸಭ್ಯ ಸಮಾಜದ ಲಕ್ಷಣಗಳಲ್ಲ ಎನ್ನುವ ಭಾವನೆಗಳು ಹುಟ್ಟಿಕೊಂಡವು. ಆಗ ಹುಟ್ಟಿಕೊಂಡದ್ದೇ ಇಂದಿನ ಕಾರಾಗೃಹ ವ್ಯವಸ್ಥೆ. ಮೊದಲು ಕಾರಾಗೃಹ ವ್ಯವಸ್ಥೆ ಅಮೆರಿಕಾದಲ್ಲಿ ಶುರುವಾಗುವಾಗ ಯಾರಿಗೂ ಈ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎನ್ನುವ ಅರಿವಿರಲಿಲ್ಲ. ಮೊದಲು ಇಂಥ ವ್ಯವಸ್ಥೆಯ ಅನುಮೋದನೆ ಯಾದಾಗ ಕೆಲವರು ಶಿಕ್ಷೆ ಎನ್ನುವುದು ಸಾರ್ವಜನಿಕವಾಗಿಲ್ಲದಿದ್ದರೆ ಅದು ಸಮಾಜದಲ್ಲಿ ಅರಿವು ಮೂಡುವುದರಲ್ಲಿ ಸಾಫಲ್ಯ ಕಾಣುವುದಿಲ್ಲ ಎನ್ನುವ ವಾದ ಮುಂದಿಟ್ಟರು.

ಈ ಅಪರಾಧಿಗಳ ವೆಚ್ಚವನ್ನು ಸಮಾಜವೇಕೆ ಹೊರಬೇಕು. ಸಮಾಜದಲ್ಲಿ ಬದುಕಲು ಅಯೋಗ್ಯವಾದ ವ್ಯಕ್ತಿಗಳ ಹೊಟ್ಟೆ ಉಳಿದವರೇಕೆ ಹೊರಬೇಕು ಎನ್ನುವ ಪ್ರಶ್ನೆಗಳೆದ್ದವು. ಇಂದಿಗೂ ಕಾರಾಗೃಹ ಎನ್ನುವುದು ಎಲ್ಲ ದೇಶಗಳಲ್ಲಿ ಸರಕಾರಕ್ಕೆ ಮತ್ತು ಸಾರ್ವಜನಿಕರಿಗೆ ದೊಡ್ಡ ಹೊರೆಯೇ. ಅಮೆರಿಕಾ ಪ್ರತೀ ವರ್ಷ ಕಾರಾಗೃಹಕ್ಕೆ ವ್ಯಯಿಸುವ ಮೊತ್ತ ಬರೋಬ್ಬರಿ ೮೦ ಬಿಲಿಯನ್ ಡಾಲರ್. ರುಪಾಯಿಯಲ್ಲಿ ಹೇಳುವುದಾದರೆ 600 ಕೋಟಿ. ಜಗತ್ತಿನ ಅತಿ ಕೆಟ್ಟ ಮತ್ತು ಅಮಾನವೀಯ ಕಾರಾಗೃಹ  ವ್ಯವಸ್ಥೆ ಯುಳ್ಳ ದೇಶಗಳಲ್ಲಿ ನಮ್ಮ ಭಾರತ ಕೂಡ ಒಂದು. ಪ್ರತೀ ವರ್ಷ ನಾವು ಈ ವ್ಯವಸ್ಥೆಗೆ ವ್ಯಯಿಸುವ ಸಾರ್ವಜನಿಕ ಹಣದ ಮೊತ್ತ ಕೂಡ ದೊಡ್ಡದೇ.

ಮೊದಲು ಕಾರಾಗೃಹ ವ್ಯವಸ್ಥೆ ಅಮೆರಿಕಾದಲ್ಲಿ ಜಾರಿಗೆ ತರುವಾಗ ಕಾರಾಗೃಹದಲ್ಲಿರುವ ಅಪರಾಧಿಗಳೇ ಅಲ್ಲಿನ ವ್ಯವಸ್ಥೆಯ ಖರ್ಚುವೆಚ್ಚವನ್ನು ದುಡಿಯುವುದರ ಮೂಲಕ ನೋಡಿಕೊಳ್ಳುವ ರೀತಿಯಲ್ಲಿ ರೂಪುರೇಷೆ ಹಾಕಿಕೊಳ್ಳಲಾಗಿತ್ತು. ಕಾರಾಗೃಹ ಯಾವತ್ತೂ ಸಮಾಜಕ್ಕೆ ಹೊರೆಯಾಗಬಾರದು ಎನ್ನುವುದೇ ಅಂದಿನ ಉದ್ದೇಶವಾಗಿತ್ತು. ಆದರೆ ಅಪರಾಧಿಗಳನ್ನೆಲ್ಲ
ಕಾರಾಗೃಹಕ್ಕೆ ಅಟ್ಟುತ್ತ ಹೋದಂತೆ ಅಲ್ಲಿನ ಮೂಲ ಯೋಜನೆ ಬುಡಮೇಲಾಯಿತು.

ಕ್ರಮೇಣ ಸರಕಾರ ಈ ವೆಚ್ಚವನ್ನು ಭರಿಸಬೇಕಾದ ಸ್ಥಿತಿ ನಿರ್ಮಾಣವಾಯಿತು. ಆತ್ಮನಿರ್ಭರ ಕಾರಾಗೃಹ ವ್ಯವಸ್ಥೆಯನ್ನು ನಿರ್ಮಿಸಲು ಮುಂದಾದ ಕೆಲವೇ ವರ್ಷದಲ್ಲಿ ಸ್ಥಿತಿ ಬದಲಾದವು. ಕಾರಾಗೃಹದ ಅಪರಾಧಗಳು ಹೆಚ್ಚಿದವು. ಈ ಕಾರಣಕ್ಕೆ ಅಪರಾಧಿಗಳನ್ನು ಪ್ರತ್ಯೇಕವಾಗಿ ಇಡಬೇಕಾಯಿತು. ಪ್ರತಿಯೊಬ್ಬರಿಗೂ ಅಥವಾ ಚಿಕ್ಕ ಗುಂಪಿನಲ್ಲಿ ಕ್ರಿಮಿನಲ್ ಗಳನ್ನು ಇಡುವುದರಿಂದ ಅಲ್ಲಿ ಅಪರಾಧ ಕಡಿಮೆ ಮಾಡುವ ಮಾರ್ಗ ಅನುಸರಿಸಬೇಕಾಯಿತು. ಇದೆಲ್ಲ ಕಾರಣದಿಂದ ಕಾರಾಗೃಹ ಇನ್ನಷ್ಟು ಸಾರ್ವಜನಿಕ ಹೊರೆಯಾಗುತ್ತ ಹೋಯಿತು.

ನಂತರದಲ್ಲಿ ಕಾರಾಗೃಹ ಕಂಪನಿಗಳಿಗೆ ಒಂದು ದಂಧೆಯಾಯಿತು. ಇಂದು ಅಮೆರಿಕಾದಲ್ಲಿ ಕಾರಾಗೃಹ ಎನ್ನವುದೇ ಒಂದು ದೊಡ್ಡ ವ್ಯವಹಾರ. ಸುಮಾರು ನಾಲ್ಕು ಸಾವಿರ ಕಂಪನಿಗಳು ಕಾರಾಗೃಹವನ್ನೇ ನೆಚ್ಚಿ ಬದುಕುತ್ತಿವೆ. ಈ ಎಲ್ಲ ಕಂಪನಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾರಾಗೃಹದಲ್ಲಿದ್ದರೆ ಮಾತ್ರ ವ್ಯಾಪಾರ. ಅವು ಕಾನೂನನ್ನು ಸಡಿಲಿಸದಂತೆ ಸದಾ ವಶೀಲಿ ಕೆಲಸ ಮಾಡುತ್ತಿರುತ್ತವೆ.

ಹೊಸ ಕಾರಾಗೃಹ ವ್ಯವಸ್ಥೆ ಮೊದಮೊದಲು ಹತ್ತಾರು ಸವಾಲುಗಳನ್ನು ಎದುರಿಸಬೇಕಾಯಿತು. ದಂಗೆಗಳಾದವು, ಜೈಲುಗಳ ಗುಂಪುಗಳಾಗಿ ಹೊಡೆದಾಟ, ಕೊಲೆಗಳು ನಡೆದವು. ಇಂದಿಗೂ ಜೈಲೆಂದರೆ ಅಲ್ಲಿ ಬದುಕುವುದೇ ಒಂದು ಸವಾಲು. ಜೈಲಿನ ಮೂಲ ಸ್ವರೂಪ ಮತ್ತು ನ್ಯಾಯಾಲಯದಲ್ಲಿ ಬಂಧನವೇ ಶಿಕ್ಷೆಯಾದರೂ ಜೈಲಿನಲ್ಲಿರುವುದು ಎಂದರೆ ಕೇವಲ ಬಂಧನದ ಬದುಕಲ್ಲ. ಅದು ಹೋರಾಟದ ಬದುಕು. ಅಲ್ಲಿ ಬದುಕಬೇಕೆಂದರೆ ಹೊಡೆದಾಟದ, ಬಡಿದಾಟಗಳು ಸಾಮಾನ್ಯ.

Survival of fittest ನೇರವಾಗಿ ಲಾಗುವಾಗುವುದು ಜಾಲಿನಲ್ಲಿ. ಇದಕ್ಕೆ ಯಾವುದೇ ದೇಶದ ಕಾರಾಗೃಹ ಹೊರತಲ್ಲ. ಅದೆಷ್ಟೋ ಅಪರಾಧಿಗಳು ಯಾವ ಅಪರಾಧಕ್ಕೆ ಕಾರಾಗೃಹ ಶಿಕ್ಷೆಯಾಗಿದೆಯೋ ಅದಕ್ಕಿಂತ ದೊಡ್ಡ ಅಪರಾಧ ಎಸಗುವುದೇ ಕಾರಾಗೃಹ ದಲ್ಲಿ. ಯಾವುದೇ ಸಂಬಂಧ, ಅನುಬಂಧ, ರಾಗ, ಪ್ರೇಮವಿಲ್ಲದ – ಅಪರಾಧಿ ಹಿನ್ನೆಲೆಯಿರುವ , ಮೊದಲೇ ಮಾಡಿದ ಅಪರಾಧಕ್ಕೆ ಗಿಲ್ಟ ಇರುವ, ಸಮಾಜದಿಂದ – ಪ್ರೀತಿ ಪಾತ್ರರಿಂದ, ಕುಟುಂಬದಿಂದ ದೂರ ಹೊಸತೊಂದು ಬಂಧನದಲ್ಲಿ ಮನುಷ್ಯನನ್ನು ಗುಂಪು ಹಾಕಿ ಇಡುವ ವ್ಯವಸ್ಥೆ ಯಾವುದೇ ರೀತಿಯ ಮನುಷ್ಯ ನಡವಳಿಕೆಗಳಿಗೆ ಹೊಂದಿಕೆಯಾಗುವ ವ್ಯವಸ್ಥೆಯೇ ಅಲ್ಲ. ಹಾಗಂತ ಇದಕ್ಕೆ ಇನ್ನೊಂದು ಪರಿಹಾರ ಸದ್ಯ ನಮ್ಮಲ್ಲಿಲ್ಲ.

ಸಮಾಜವನ್ನು ಒಪ್ಪಿ ನಡೆಯಬೇಕು ಇಲ್ಲದಿದ್ದರೆ ಪ್ರತ್ಯೇಕವಾಗಿ ಇಂಥ ಸ್ಥಿತಿಯಲ್ಲಿ ಬದುಕಬೇಕು. ಇದು ನಾವೇ ನಿರ್ಮಿಸಿಕೊಂಡ ಆದರೆ ಕೇವಲ ಮೂರು ಶತಮಾನದಷ್ಟು ಹಳೆಯ ವ್ಯವಸ್ಥೆ. ಇಂದು ಕಾರಾಗೃಹಗಳು ಇರಬೇಕೆ ಬೇಡವೇ ಎನ್ನುವುದು ಪ್ರಶ್ನೆಯೇ ಆಗಿ ಉಳಿದಿಲ್ಲ. ಎಲ್ಲರೂ ಮಾತನಾಡುವುದು ಕಾರಾಗೃಹ ವ್ಯವಸ್ಥೆಯನ್ನು ಮತ್ತು ಅಲ್ಲಿನ ಸ್ಥಿತಿಯನ್ನು ಹೇಗೆ ಸುಧಾರಿಸಬಹುದು ಎಂದು. ಸಮಾಜದಲ್ಲಿ ಅಪರಾಧ ತಗ್ಗಿಸುವ ಬಗ್ಗೆ, ಮಾನವೀಯ ಮೌಲ್ಯಗಳ ಜತೆ ಮುಂದಿನ ತಲೆಮಾರನ್ನು ಬೆಳೆಸುವ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಳ್ಳದ ಕಾಲಘಟ್ಟದಲ್ಲಿ ಇಂದು ನಾವಿದ್ದೇವೆ.