Thursday, 12th December 2024

ಭಿಕ್ಷಾಪಾತ್ರೆ ಹೊತ್ತು ತಿರುಗಿದ ಇಮ್ರಾನ್ ಬಗೆಗಿಷ್ಟು ಜೋಕುಗಳು

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

vbhat@me.com

ಮಂತ್ರಿ ಮಾಡಿ, ಮುಖ್ಯಮಂತ್ರಿ ಮಾಡಿ ಅಥವಾ ಇನ್ನೇನೋ ಮಾಡಿ ಎಂಬ ಬೇಡಿಕೆ ಹೊತ್ತು ದಿಲ್ಲಿಗೆ ಬರುವವರಿಗೆ ಅವರಿಬ್ಬರೂ (ಮೋದಿ ಮತ್ತು ಅಮಿತ್ ಶಾ) ಸೊಪ್ಪು ಹಾಕುವುದಿಲ್ಲ. ಬೇರೆ ಯಾರನ್ನಾದರೂ ಭೇಟಿ ಮಾಡಿದರೆ ಅದು ಅವರವರ ಸಮಾಧಾನಕ್ಕೆ ಅಥವಾ ಬಂದ ಖರ್ಚು ಸರಿದೂಗಿಸಲು ಭೇಟಿ ಮಾಡಬಹುದೇ ಹೊರತು, ಅದರಿಂದ ಹೆಚ್ಚೇನೂ ಪ್ರಯೋಜನವಾಗುವುದಿಲ್ಲ. ಹೀಗಾಗಿ ಈಗ ಯಾರೂ ದಿಲ್ಲಿಗೆ ಹೋಗುತ್ತೇವೆ ಎಂದು ಹೇಳುವುದಿಲ್ಲ.

ಪಾಕ್ ಉರಿವ ದಾವಾನಲವಾಗಿರುವ ಈ ಹೊತ್ತಿನಲ್ಲಿ ನೆನಪಾದ ಪ್ರಸಂಗಗಳು ಪಾಕಿಸ್ತಾನದಲ್ಲಿ ರಾಜಕೀಯ ಅಸ್ಥಿರತೆ ತಲೆದೋರಿದೆ.
ಯಾವುದೇ ಹಂತದಲ್ಲಿ ಏನು ಬೇಕಾದರೂ ಆಗಬಹುದು. ಇಷ್ಟು ದಿನಗಳ ಕಾಲ ಭಾರತವನ್ನು ಕಂಡರೆ ದ್ವೇಷವನ್ನೇ ಕಕ್ಕುತ್ತಿದ್ದ ಪ್ರಧಾನಿ ಇಮ್ರಾನ್ ಖಾನ್ ಈಗ ಜ್ಞಾನೋದಯವಾದವರಂತೆ ಹೊಗಳುತ್ತಿದ್ದಾರೆ. ಭಾರತವು ಸೂಪರ್ ಪವರ್ ರಾಷ್ಟ್ರವಾಗಿದ್ದು, ಅಲ್ಲಿ ಯಾರಿಂದಲೂ ರಾಜಕೀಯ ಅಸ್ಥಿರತೆ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ.

ಸ್ವತಃ ಪಾಕ್ ಪ್ರಧಾನಿಯೇ ಕೈಚೆಲ್ಲಿ ಕುಳಿತಿದ್ದಾರೆ. ‘ನಮ್ಮ ದೇಶದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆ. ನಾವು ಈ ಜನ್ಮದಲ್ಲಿ ಉದ್ಧಾರ ವಾಗುವುದು ಕನಸಿನ ಮಾತು’ ಎಂದು ಇಮ್ರಾನ್ ಖಾನ್ ಹೇಳಿರುವುದು ಅವರ ಅಸಹಾಯಕತೆಯನ್ನು ಎತ್ತಿ ತೋರಿ ಸಿದೆ. ಈ ವಿಶ್ವದಲ್ಲಿ ಭಯೋತ್ಪಾದಕತೆ ಒಂದು ಉದ್ಯಮವಾಗಿದ್ದರೆ, ಆಗ ಪಾಕಿಸ್ತಾನ ನಂಬರ್ ಒನ್ ದೇಶವಾಗುತ್ತಿತ್ತು ಎಂದು ಕುಹಕದ ಮಾತು ಈಗ ನಿಜವಾಗುತ್ತಿದೆ. ತಾವು ಪಾಕ್ ಸೇನೆಯ ಸಾಂದರ್ಭಿಕ ಶಿಶು ಎಂಬುದನ್ನು ಇಮ್ರಾನ್ ನಿಜ ಮಾಡಿದ್ದಾರೆ. ‘ಇಮ್ರಾನ್ ಖಾನ್ ಹಿಟ್ ವಿಕೆಟ’, ‘ಖಾನ್ ರನೌಟ್’ ಎಂದೆಲ್ಲ ಕ್ರಿಕೆಟ್ ಪರಿಭಾಷೆಯಲ್ಲಿ ಮಾಧ್ಯಮಗಳು ಗೇಲಿ ಮಾಡುತ್ತಿವೆ.

ಅವರೊಬ್ಬ ವಿಫಲ ನಾಯಕ ಎಂಬುದನ್ನು ಖಾನ್ ಮಾತು ಕೇಳಿದರೆ ಯಾರಿಗಾದರೂ ಅನಿಸದೇ ಇರದು. ಇಮ್ರಾನ್ ಖಾನ್ ಅಧಿಕಾರಕ್ಕೆ ಬಂದಾಗ ಅರಳಿದ ಕನಸುಗಳೆಲ್ಲ ನುಚ್ಚುನೂರಾಗಿವೆ. ಆರ್ಥಿಕ ಸ್ಥಿತಿ ಹಿಂದೆಂದಿಗಿಂತಲೂ ಹದಗೆಟ್ಟಿದೆ. ಸರಕಾರಿ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ. ಇಮ್ರಾನ್ ಖಾನ್‌ಗಿಂತ ಮುನ್ನ ಅಧಿಕಾರದಲ್ಲಿದ್ದ ಪ್ರಧಾನಿಗಳು ವಿದೇಶಕ್ಕೆ ಹೋದರೆ, ಹಣವಿಡಲು ಹೋಗುತ್ತಿದ್ದಾರೆ ಎಂದು ಆಡಿಕೊಳ್ಳುತ್ತಿದ್ದರು. ಅದೇ ಇಮ್ರಾನ್ ಖಾನ್ ವಿದೇಶಗಳಿಗೆ ಹೊರಟರೆಂದರೆ, ಸಾಲ ಕೇಳಲು ಹೋಗುತ್ತಿದ್ದಾರೆ ಎಂದು ಜನ ಮಾತಾಡಿಕೊಳ್ಳುವಂತಾಗಿದೆ.

ಅದು ನಿಜವೂ ಹೌದು. ಅವರು ಯಾವುದೇ ದೇಶಕ್ಕೆ ಹೋದರೂ ಭಿಕ್ಷಾಪಾತ್ರೆ ಹಿಡಿದೇ ಹೋಗುತ್ತಿದ್ದಾರೆ. ಅಷ್ಟರ ಮಟ್ಟಿಗೆ ಆ ದೇಶದ ಆರ್ಥಿಕತೆ ಖರಾಬ್ ಆಗಿದೆ. ತಮ್ಮ ಅಧಿಕಾರವನ್ನು ಉಳಿಸಲು ದೇಶದ ಜನ ಬೀದಿಗಿಳಿದು ಹೋರಾಡಬೇಕು ಎಂದು ಪ್ರಧಾನಿ ಕರೆ ಕೊಡುವ ಹಂತಕ್ಕೆ ಹೋಗಿದ್ದಾರೆಂದರೆ ಅವರ ಅಸಹಾಯಕತೆಯೇನು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಅವರು ಅಧಿಕಾರಕ್ಕೆ ಬಂದಂದಿನಿಂದ ಒಂದು ದಿನವೂ ಭಾರತದ ಜತೆ ಉತ್ತಮ ಸಂಬಂಧ ಹೊಂದುವ ಇರಾದೆ ಪ್ರದರ್ಶಿಸಲಿಲ್ಲ. ತಾವೊಬ್ಬ ಸಂಕುಚಿತ ಮಟ್ಟದ ರಾಜಕಾರಣಿ ಎಂಬುದನ್ನು ಹೆಜ್ಜೆಹೆಜ್ಜೆಗೆ ಅವರು ಸಾಬೀತು ಮಾಡಿದರು. ದೇಶದ ಜನ ಅವರ ಮೇಲಿಟ್ಟ ಭರವಸೆಯನ್ನು ಮಣ್ಣುಪಾಲು
ಮಾಡಿದರು.

ಪಾಕಿಸ್ತಾನದ ಬಗ್ಗೆ ಮೊದಲಿನಿಂದಲೂ ಭಾರತೀಯರಿಗೆ ಕ್ರಿಕೆಟ್ ಹೊರತುಪಡಿಸಿದರೆ, ಬೇರೆ ಯಾವ ಆಸಕ್ತಿಯೂ ಇಲ್ಲ. ಅದು ಶಾಪಗ್ರಸ್ಥ ದೇಶ. ಅದು ಯಾವತ್ತಿದ್ದರೂ ಮಗ್ಗುಲ ಮುಳ್ಳೇ. ಈ ಹೊತ್ತಿನಲ್ಲಿ ಪಾಕಿಸ್ತಾನ ಉರಿವ ದಾವಾನಲವಾಗಿರುವಾಗ, ಆ ದೇಶ ಭರವಸೆಯ ಬೆಳಕನ್ನು ನೀಡುವ ಶಕ್ತಿಯನ್ನೇ ಕಳೆದುಕೊಂಡುಬಿಟ್ಟಿದೆ. ಈ ಸಂದರ್ಭದಲ್ಲಿ ಆ ದೇಶದ ಬಗ್ಗೆ ಕೇಳಿದ ಕೆಲವು ತಮಾಷೆಯ ಪ್ರಸಂಗಗಳನ್ನು ಕೇಳಿ ಮನಸ್ಸನ್ನು ಹಗುರ ಮಾಡಿಕೊಳ್ಳಬೇಕಷ್ಟೆ.

ಪಾಕಿಸ್ತಾನದ ಬಗ್ಗೆ ಖುಷವಂತ ಸಿಂಗ್ ಹೇಳಿದಷ್ಟು ಜೋಕುಗಳನ್ನು ನಾನು ಬೇರೆ ಯಾರಿಂದಲೂ ಕೇಳಿಲ್ಲ. ಅವರ ಬಳಿ ಆ ದೇಶ ಮತ್ತು ಜನರ ಬಗ್ಗೆ ಒರಿಜಿನಲ್ ಆದ ಅನೇಕ ತಮಾಷೆಯ ಪ್ರಸಂಗಗಳಿದ್ದವು. ಅವನ್ನು ಆಗಾಗ ಅವರು ತಮ್ಮ ಅಂಕಣಗಳಲ್ಲಿ ಪ್ರಸ್ತಾಪಿಸುತ್ತಿದ್ದರು.
ಒಮ್ಮೆ ಪಾಕಿಸ್ತಾನದಲ್ಲಿ ತೀವ್ರ ಬರಗಾಲ ಬಂದಿತು. ಇದರಿಂದ ಬೆಳೆದ ಪೈರು ಒಣಗಿ ನಷ್ಟವಾಯಿತು. ಉಲೇಮಾಗಳ ನಿಯೋಗ
ದೇವರನ್ನು ಭೇಟಿಯಾಗಿ ತಮ್ಮ ದುಃಖವನ್ನು ತೋಡಿಕೊಂಡರು. ಆಗ ದೇವರು, ‘ನಿಮ್ಮ ಕಷ್ಟ ಅರ್ಥವಾಗುತ್ತದೆ. ಆದರೆ ನಾನು ಏನು ಮಾಡಲಿ, ನಮ್ಮಲ್ಲಿ ಮೋಡಗಳ ದಾಸ್ತಾನು ಕರಗಿ ಹೋಗಿದೆ. ಬೇಕಾದರೆ ನೀವು ನಮ್ಮ ಗುದಾಮುಗಳಿಗೆ ಹೋಗಿ ಪರೀಕ್ಷಿಸಬಹುದು’ ಎಂದ.

ಉಲೇಮಾಗಳು ಫಜೀತಿಗೆ ಬಿದ್ದರು. ದೇವರೇ ಹೀಗೆ ಹೇಳಿದ ಮೇಲೆ ನಂಬಬೇಕು ತಾನೇ? ಆದರೂ ಹೇಗೋ ಬಂದಿದ್ದೇವೆ, ಒಂದು ಸಲ ಗುದಾಮುಗಳಿಗೆ ಭೇಟಿ ಕೊಡೋಣ ಎಂದು ನಿರ್ಧರಿಸಿದರು. ಎಲ್ಲ ಗುದಾಮುಗಳನ್ನು ನೋಡಿದ ಬಳಿಕ ಅವರಿಗೆ ಎಲ್ಲಿಯೂ ಮೋಡಗಳ ದಾಸ್ತಾನು ಇರುವುದು ಕಂಡು ಬರಲಿಲ್ಲ.

ಇನ್ನೇನು ವಾಪಸು ಹೋರಾಡಬೇಕು ಎನ್ನುವಾಗ, ಒಬ್ಬ ಉಲೇಮಾಗೆ ಒಂದು ಕಪ್ಪು, ದಟ್ಟ ಮೋಡವಿರುವುದು ಕಾಣಿಸಿತು. ಅವರೆಲ್ಲ ಸಂತಸದಿಂದ ದೇವರ ಬಳಿ ಬಂದು , ತಮ್ಮ ಶೋಧದ ಬಗ್ಗೆ ಹೇಳಿದರು. ಆಗ ದೇವರು ಹೇಳಿದ – ‘ಆ ಕಪ್ಪು ಮೋಡವಾ? ಅದನ್ನು ನಾನೇ ಕಾದಿಟ್ಟಿದ್ದೇನೆ, ನಿಮ್ಮ ದೇಶದಲ್ಲಿ ಪ್ರವಾಹವನ್ನುಂಟು ಮಾಡುವುದಕ್ಕಾಗಿ.’

ಎರಡನೆಯ ತಮಾಷೆ ಪ್ರಸಂಗ: ಪಾಕಿಸ್ತಾನದ ಸೈನ್ಯದ ಕಮಾಂಡರನ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಮಿಲಿಟರಿ ಕೋರ್ಟಿನ ಮುಂದೆ ಮೂವರು ನಾಗರಿಕರನ್ನು ಬಂಧಿಸಿ, ನ್ಯಾಯಾಧೀಶರ ಮುಂದೆ ನಿಲ್ಲಿಸಲಾಯಿತು. ಸೈನ್ಯದ ಅಧಿಕಾರಿ ಮೇಲೆ ಯಾಕೆ ಹಲ್ಲೆ  ಮಾಡಿದ್ದೀರಿ, ಕಾರಣ ಕೊಡಿ ಎಂದು ಅವರನ್ನು ಕೇಳಿದಾಗ, ಮೊದಲನೆಯವ ಹೇಳಿದ – ‘ಸರ್, ಆ ಸೈನ್ಯಾಧಿಕಾರಿ ನನ್ನ ಸಹೋದರಿಗೆ ಕಣ್ಣು ಹೊಡೆದ. ನನ್ನ ಸಹೋದರಿಯ ಮಾನ, ಮರ್ಯಾದೆ ಮತ್ತು ಘನತೆ ಕಾಪಾಡಲು ನಾನು ಆತನಿಗೆ ಹೊಡೆದೆ.’

ಎರಡನೆಯವ ಹೇಳಿದ – ‘ಸರ್, ನಮ್ಮ ಊರಿನಲ್ಲಿರುವ ಎಲ್ಲ ಹೆಂಗಸರೂ ನನ್ನ ಸಹೋದರಿಯರಿದ್ದಂತೆ. ಆ ಸೈನ್ಯಾಧಿಕಾರಿ ನನ್ನ
ಸ್ನೇಹಿತನ ಸಹೋದರಿಗೆ ಕಣ್ಣು ಹೊಡೆದಿದ್ದನ್ನು ನೋಡಿ ನಾನು ಸುಮ್ಮನಿರುವುದು ಸಾಧ್ಯವೇ? ಹೀಗಾಗಿ ನನ್ನ ಸ್ನೇಹಿತನಿಗೆ ನಾನೂ
ಕೈಜೋಡಿಸಿದೆ. ಆತನ ಮೇಲೆ ಹಲ್ಲೆ ಮಾಡಿದೆ.’ ಮೂರನೆಯ ಆ ಊರಿನವನಲ್ಲ. ಆತ ತಾನೇಕೆ ಹಲ್ಲೆ ಮಾಡಿದೆ ಎಂಬುದನ್ನು ವಿವರಿಸಿದ – ‘ಸರ್, ಸಮವಸದಲ್ಲಿದ್ದ ಅಧಿಕಾರಿ ಮೇಲೆ ಈ ಇಬ್ಬರು ಏಕಾಏಕಿ ಹ ಮಾಡಿದ್ದನ್ನು ನೋಡಿದಾಗ, ಪಾಕಿಸ್ತಾನದಲ್ಲಿ ಮಿಲಿಟರಿ ಆಡಳಿತ ಕೊನೆಗೊಂಡಿದೆ ಎಂದು ನನಗೆ ಖಚಿತವಾಯಿತು. ನನ್ನ ದೇಶಕ್ಕಾಗಿ ಏನಾದರೂ ಸೇವೆ ಮಾಡಬೇಕೆಂದು ನಾನೂ ಸೈನ್ಯಾಧಿಕಾರಿಗೆ ಎರಡು ಬಾರಿಸಿದೆ.’

ಮೂರನೆಯ ಪ್ರಸಂಗ: ಪಾಕಿಸ್ತಾನದಲ್ಲಿ ತಮ್ಮ ಎರಡು ವರ್ಷಗಳ ಅಧಿಕಾರ ಅವಧಿ ಪೂರ್ಣಗೊಳಿಸಿದ ಸಂದರ್ಭದಲ್ಲಿ, ಅಧ್ಯಕ್ಷ ಜಿಯಾ-ಉಲ್ -ಹಕ್ ತಮ್ಮ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದರು. ಅದಕ್ಕಾಗಿ ದೇಶದ ಖ್ಯಾತನಾಮ ಕಲಾವಿದರನ್ನು
ನಿಯೋಜಿಸಲಾಯಿತು. ಇದಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ, ಕೋಟ್ಯಂತರ ಅಂಚೆ ಚೀಟಿಗಳನ್ನು ಮುದ್ರಿಸಿ ಬಿಡುಗಡೆ ಗೊಳಿಸಲಾಯಿತು.

ಎರಡು ವಾರಗಳ ನಂತರ, ಅಧ್ಯಕ್ಷ ಜಿಯಾಗೆ ಅಂಚೆ ಚೀಟಿಗಳ ಮಾರಾಟದ ಬಗ್ಗೆ ಜನರ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು
ತಿಳಿದುಕೊಳ್ಳ ಬೇಕೆನಿಸಿತು. ತಕ್ಷಣ ಪೋಸ್ಟ್ ಮಾಸ್ಟರ್ ಜನರಲ್‌ಗೆ ಬರುವಂತೆ ಹೇಳಿದರು. ‘ಮಾನ್ಯ ಅಧ್ಯಕ್ಷರೇ, ಒಂದು ಸಂಗತಿಯನ್ನು ವಿಷಾದದಿಂದ ತಿಳಿಸುತ್ತಿದ್ದೇನೆ, ಅದೇನೆಂದರೆ… ಅಂಚೆ ಚೀಟಿ ಬಗ್ಗೆ ಜನರ ಪ್ರತಿಕ್ರಿಯೆ ನೀರಸವಾಗಿದೆ’ ಎಂದು ತುಸು ಹಿಂಜರಿಕೆಯಿಂದ
ಪೋಸ್ಟ್ ಮಾಸ್ಟರ್ ಜನರಲ್ ಹೇಳಿದ. ‘ಹೌದಾ? ಕಾರಣವೇನು?’ ಎಂದು ಕೇಳಿದರು ಅಧ್ಯಕ್ಷ ಜಿಯಾ.

‘ಕಾರಣ ಅಂಚೆ ಚೀಟಿ ಸರಿಯಾಗಿ ಅಂಟುತ್ತಿಲ್ಲ ಎಂದು ಎಲ್ಲರೂ ದೂರುತ್ತಿದ್ದಾರೆ’ ಪೋಸ್ಟ್ ಮಾಸ್ಟರ್ ಜನರಲ್ ಹೇಳಿದ. ‘ಹೌದಾ? ಹಾಗಾ ದರೆ ಅಂಟು ಪೂರೈಸಿದವನನ್ನು ತಕ್ಷಣ ಅರೆಸ್ಟ್ ಮಾಡಿ. ಅವನನ್ನು ನಾನು ಸಾರ್ವಜನಿಕವಾಗಿ ನೇಣಿಗೆ ಹಾಕ್ತೇನೆ’ ಅಧ್ಯಕ್ಷ ಜಿಯಾ ಅಬ್ಬರಿಸಿದರು. ಅದಕ್ಕೆ ಪೋಸ್ಟ್ ಮಾಸ್ಟರ್ ಜನರಲ್ ಮೃದು ಮಾತಿನಲ್ಲಿ ವಿವರಿಸಿದ – ‘ಅಧ್ಯಕ್ಷರೇ, ಇದರಲ್ಲಿ ಅಂಟು ವಿತರಕನ ತಪ್ಪೇನೂ
ಇಲ್ಲ. ಆತ ಉತ್ತಮ ಗುಣಮಟ್ಟದ ಅಂಟನ್ನೇ ಕೊಟ್ಟಿದ್ದಾನೆ. ಆದರೆ ಜನ ಎಂಜಲನ್ನು ರಾಂಗ್ ಸೈಡಿಗೆ ಉಗುಳಿ ಹಚ್ಚುತ್ತಿದ್ದಾರೆ.’

ನಾಲ್ಕನೇ ಮಹಾಯುದ್ಧ ನಡೆಯುತ್ತಾ?

ಒಮ್ಮೆ ಯೋಗಿ ದುರ್ಲಭಜೀ ಅವರಿಗೆ ಯಾರೋ ಕೇಳಿದರಂತೆ – ‘ಮೂರನೇ ಮಹಾಯುದ್ಧದ ಬಗ್ಗೆ ನೀವೇನಾದರೂ ಹೇಳುತ್ತೀರಾ?’ ಅದಕ್ಕೆ ಯೋಗಿಯವರು, ‘ಮೂರನೇ ಮಹಾಯುದ್ಧದ ಬಗ್ಗೆ ನಾನು ಈಗಲೇ ಏನನ್ನೂ ಹೇಳಲಾರೆ. ಆದರೆ ನಾಲ್ಕನೇ ಮಹಾಯುದ್ಧದ ಬಗ್ಗೆ ತಿಳಿದುಕೊಳ್ಳಲು ನಿಮಗೆ ಆಸಕ್ತಿ ಇದ್ದರೆ, ನಾನು ಆ ವಿಷಯದ ಬಗ್ಗೆ ಹೇಳುತ್ತೇನೆ’ ಎಂದರಂತೆ. ಆ ಪ್ರಶ್ನೆ ಕೇಳಿದ ವ್ಯಕ್ತಿ, ಯೋಗಿಯವರ ಉತ್ತರ ಕೇಳಿ ಗೊಂದಲಕ್ಕೀಡಾದನಂತೆ.

ಮೂರನೇ ಮಹಾಯುದ್ಧದ ಬಗ್ಗೆ ಏನನ್ನೂ ಹೇಳದ ವ್ಯಕ್ತಿ ನಾಲ್ಕನೆಯದರ ಬಗ್ಗೆ ಏನು ಹೇಳಿಯಾನು ಎಂದು ಅವನಿಗೆ ಅನಿಸಿರಬೇಕು.
ಆದರೂ ತನ್ನ ಗೊಂದಲವನ್ನು ಪರಿಹರಿಸಿಕೊಳ್ಳಲು, ‘ಸರಿ, ನಾಲ್ಕನೇ ಮಹಾಯುದ್ಧದ ಬಗ್ಗೆ ಹೇಳುತ್ತೇನೆ ಎಂದು ಹೇಳಿದಿರಲ್ಲ, ಆಯ್ತು, ಅದರ ಬಗ್ಗೆಯೇ ಹೇಳಿ’ ಎಂದು ಹೇಳಿದನಂತೆ.

ಅದಕ್ಕೆ ಯೋಗಿ ದುರ್ಲಭಜೀ ಖಚಿತ ನುಡಿಗಳಲ್ಲಿ ಹೇಳಿದರಂತೆ – ‘ನಾಲ್ಕನೇ ಮಹಾಯುದ್ಧ ನಡೆಯುವುದು ಸಾಧ್ಯವೇ ಇಲ್ಲ ಎಂದು ಸ್ಪಷ್ಟ ವಾಗಿ ಹೇಳುತ್ತೇನೆ. ಮೂರನೆಯದರ ಬಗ್ಗೆ ಮಾತ್ರ ಏನನೂ ಹೇಳಲಾರೆ.’ ಮೂರನೇ ಮಹಾಯುದ್ಧದಲ್ಲಿ ಈ ಭೂಮಿ ಉಳಿದರೆ ತಾನೇ ನಾಲ್ಕನೆಯದು ನಡೆಯುವುದು?

ದಿಲ್ಲಿ ಯಾತ್ರೆ ಅಸಲೀಯತ್ತು
ಬೆಂಗಳೂರಿನಲ್ಲಿರುವ ಪತ್ರಕರ್ತರು ಆಗಾಗ ದಿಲ್ಲಿಗೆ ಹೋಗಿ ಬರಬೇಕು. ಮೂರ್ನಾಲ್ಕು ದಿನಗಳಿದ್ದರೆ, ಹೊಟ್ಟೆ ತುಂಬಾ ರಸವತ್ತಾದ ಗಾಸಿಪ್ ಸುದ್ದಿ ಸಿಗುತ್ತವೆ. ಅದರಲ್ಲೂ ಕೆಲವು ದಿಲ್ಲಿಯ ಪತ್ರಕರ್ತರನ್ನು ಮತ್ತು ರಾಜಕಾರಣಿಗಳನ್ನು ಭೇಟಿ ಮಾಡಿದರೆ ರಂಜನೀಯ ಸ್ಟೋರಿಗಳು ಹರಿದು ಬರುತ್ತವೆ. ಮೋದಿ ಅಧಿಕಾರಕ್ಕೆ ಬಂದಂದಿನಿಂದ, ಕರ್ನಾಟಕದ ಬಿಜೆಪಿ ನಾಯಕರು ಪವರ್ ಕಾರಿಡಾರುಗಳಲ್ಲಿ ಫಾಲ್ತು ಅಲೆದಾಡುವುದು ಕಮ್ಮಿಯಾಗಿದೆ.

ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಅಣತಿಯಿಲ್ಲದೇ ಬಿಜೆಪಿಯಲ್ಲಿ ಹುಲ್ಲುಕಡ್ಡಿಯೂ ಅಡುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅವರಿಬ್ಬರನ್ನು ಭೇಟಿ ಮಾಡುವುದು ಸುಲಭ ಸಾಧ್ಯವಿಲ್ಲದ ಮಾತು. ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪನವರು ಎರಡು ಸಲ ದಿಲ್ಲಿಗೆ ಹೋಗಿದ್ದರೂ ನಂಬರ್ ಒನ್ ಮತ್ತು ನಂಬರ್ ಟೂ (ಮೋದಿ ಮತ್ತು ಅಮಿತ್ ಶಾ) ಅವರನ್ನು ಭೇಟಿ ಮಾಡಲು ಸಾಧ್ಯ ವಾಗಿರಲಿಲ್ಲ.

ಯಾರನ್ನಾದರೂ ಭೇಟಿ ಮಾಡಬೇಕು ಎಂದು ಅನಿಸಿದರೆ, ನಂಬರ್ ಒನ್ ಮತ್ತು ನಂಬರ್ ಟೂ ಅವರೇ ಕರೆಯಿಸಿಕೊಳ್ಳುತ್ತಾರೆ. ತಮ್ಮನ್ನು ಭೇಟಿ ಮಾಡಬಯಸುವವರ ಉದ್ದೇಶ ಮತ್ತು ವಿಷಯ ಮಹತ್ವವನ್ನು ಪರಾಂಬರಿಸಿ ಭೇಟಿಗೆ ಕಾಲಾವಕಾಶ ನೀಡುತ್ತಾರೆ. ಮಂತ್ರಿ ಮಾಡಿ, ಮುಖ್ಯಮಂತ್ರಿ ಮಾಡಿ ಅಥವಾ ಇನ್ನೇನೋ ಮಾಡಿ ಎಂಬ ಬೇಡಿಕೆ ಹೊತ್ತು ದಿಲ್ಲಿಗೆ ಬರುವವರಿಗೆ ಅವರಿಬ್ಬರೂ ಸೊಪ್ಪು ಹಾಕುವುದಿಲ್ಲ. ಬೇರೆ ಯಾರನ್ನಾದರೂ ಭೇಟಿ ಮಾಡಿದರೆ ಅದು ಅವರವರ ಸಮಾಧಾನಕ್ಕೆ ಅಥವಾ ಬಂದ ಖರ್ಚು ಸರಿದೂಗಿಸಲು ಭೇಟಿ ಮಾಡಬಹುದೇ ಹೊರತು, ಅದರಿಂದ ಹೆಚ್ಚೇನೂ ಪ್ರಯೋಜನವಾಗುವುದಿಲ್ಲ.

ಇನ್ನು ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿದರೂ, ಅವರು ಸಂದೇಶ ವಾಹಕರೇ ಹೊರತು, ಸ್ವತಂತ್ರ ನಿರ್ಣಯ ತೆಗೆದುಕೊಳ್ಳುವವರಲ್ಲ ಎಂಬುದು ಗೊತ್ತಿರುವ ವಿಚಾರವೇ. ಹೀಗಾಗಿ ದಿಲ್ಲಿಗೆ ಚಾಡಿ ಹೇಳಲು ಹೋಗುವವರ ಸಂಖ್ಯೆ ಗಣನೀಯವಾಗಿ ಕಮ್ಮಿಯಾಗಿದೆ. ಹಾಗಂತ ಚಾಡಿ ಕೇಳುವವರು ಅಲ್ಲಿ ಇಲ್ಲವೆಂದಲ್ಲ, ಇzರೆ. ಆದರೆ ಅದರಿಂದ ಬಾಯಿಚಪಲ ತೀರಿಸಿಕೊಳ್ಳಬಹುದಷ್ಟೆ. ಮೊದಲಾಗಿದ್ದರೆ, ಕರ್ನಾಟಕದ ಶಾಸಕರು ತಾವು ದಿಲ್ಲಿಗೆ ಹೋಗುತ್ತೇವೆ ಅಂದರೆ ಇಲ್ಲಿ ಏನೋ ಸಣ್ಣ ಸಂಚಲನವಾಗುತ್ತಿತ್ತು. ಈಗ ಹಾಗೆ ಹೇಳಿದರೆ, ದಿಲ್ಲಿಯಲ್ಲಿ ಯಾರನ್ನೂ ಭೇಟಿ ಮಾಡಲು ಆಗದಿದ್ದರೆ, ಮರ್ಯಾದೆ ಹೋಗುತ್ತದೆ.

ಮೊದಲಾಗಿದ್ದರೆ ಬಿಜೆಪಿಯಲ್ಲಿ ಅಧಿಕಾರದ ಹಲವು ಕೇಂದ್ರಗಳಿದ್ದವು. ಕರ್ನಾಟಕದಿಂದ ಹೋದವರು ಆಡ್ವಾಣಿ, ವೆಂಕಯ್ಯ ನಾಯ್ಡು, ಅರುಣ್ ಜೈಟ್ಲಿ, ಸುಷ್ಮಾ ಸ್ವರಾಜ, ಅನಂತಕುಮಾರ್, ಗಡ್ಕರಿ, ರಾಜನಾಥ ಸಿಂಗ್ ಅವರನ್ನು ಭೇಟಿ ಮಾಡಿ ಬರುತ್ತಿದ್ದರು. ಕೆಲವರಂತೂ ಈ ನಾಯಕರ ಪೈಕಿ ತಮ್ಮ ಹಿತ ಕಾಯುವವರು ಯಾರು ಎಂಬುದನ್ನು ಆಯ್ಕೆ ಮಾಡಿಕೊಂಡು ಅವರಿಗೆ ಹೆಚ್ಚು ನಿಷ್ಠರಾಗಿದ್ದರು. ಆಗಾಗ ದಿಲ್ಲಿಯಲ್ಲಿ ಅವರಿಗೆ ಎಡತಾಕುತ್ತಿದ್ದರು. ಆದರೆ ಮೋದಿಯವರು ಅಽಕಾರಕ್ಕೆ ಬಂದ ನಂತರ ಲಾಬಿ ರಾಜಕಾರಣಕ್ಕೆ ಕಡಿವಾಣ ಬಿದ್ದಿದೆ.

ನಾನು ಮೊನ್ನೆ ದಿಲ್ಲಿಗೆ ಹೋದಾಗ, ಕರ್ನಾಟಕದ ನಾಯಕರೊಬ್ಬರು ಭೇಟಿಯಾಗಿದ್ದರು. ಅವರು ಮೂರು ದಿನಗಳಿಂದ ದಿಲ್ಲಿಯಲ್ಲಿ ಬೀಡು ಬಿಟ್ಟಿzಗಿ ತಿಳಿಸಿದರು. ಕೊನೆಗೆ ಅವರಿಗೆ ನಂಬರ್ ಟೂ ಭೇಟಿ ಸಾಧ್ಯವಾಯಿತು. ಇಬ್ಬರ ನಡುವೆ ಮಾತುಕತೆ ಸಾಧ್ಯವಾಗಿದ್ದು ಕೇವಲ ಮೂರು ನಿಮಿಷ ಮತ್ತು ಆ ಸಂದರ್ಭದಲ್ಲಿ ನಾಲ್ಕೈದು ಜನರಿದ್ದರು. ಅಂಥ ಸನ್ನಿವೇಶದಲ್ಲಿ ಕರ್ನಾಟಕದ ನಾಯಕರು ಹೇಗೆ ಮನಬಿಚ್ಚಿ ಮಾತಾಡಿರಬಹುದು ಅಥವಾ ಇವರ ಮನದ ಇಂಗಿತ ನಂಬರ್ ಟೂ ಗೆ ಹೇಗೆ ತಿಳಿದಿರಬಹುದು, ಊಹಿಸಿ. ಹಾಗೆ ಭೇಟಿಯಾದ ಫೋಟೋವನ್ನು ಅವರು ಕರ್ನಾಟಕದ ಪತ್ರಿಕೆಗಳಿಗೆ ಬಿಡುಗಡೆ ಮಾಡಿ, ಒಂದಷ್ಟು ಊಹಾಪೋಹಗಳಿಗೆ ಕುಮ್ಮಕ್ಕು ನೀಡಬಹುದೇ
ಹೊರತು ಅದರಿಂದ ಹೆಚ್ಚಿನದೇನನ್ನೂ ಸಾಧಿಸಲು ಸಾಧ್ಯವಿಲ್ಲ. ಹೀಗಾಗಿ ಈಗ ಯಾರೂ ದಿಲ್ಲಿಗೆ ಹೋಗುತ್ತೇವೆ ಎಂದು ಹೇಳುವುದಿಲ್ಲ. ಒಮ್ಮೆ ಹಾಗೆ ಹೇಳಿ ದಿಲ್ಲಿಗೆ ಹೋಗಿ, ಅಲ್ಲಿ ಯಾರನ್ನೂ ಭೇಟಿ ಮಾಡದೇ ಬರಿಗೈಲಿ ವಾಪಸ್ ಬಂದರೆ ಬಣ್ಣಗೇಡು!

ಮರೆತುಹೋದ ಸಂಪಾದಕ
ಡಾ.ಹನ್ನನ್ ಎಝೆಕಿಲ್ ಎಂಬ ವ್ಯಕ್ತಿಯ ಹೆಸರನ್ನು ಕೇಳಿದ್ದೀರಾ ಎಂದು ಇಂದಿನ ಪತ್ರಕರ್ತರಿಗೆ ಕೇಳಿದರೆ, ಗೊತ್ತು ಎಂದು ಹೇಳುವವರು ಎಷ್ಟು ಜನ ಸಿಗಬಹುದೋ ಗೊತ್ತಿಲ್ಲ. ಡಾ.ಎಝೆಕಿಲ್ ಅವರು ಕೆಲಸ ಮಾಡಿದ್ದ ಪತ್ರಿಕೆಯಲ್ಲಿ ಈಗ ಕೆಲಸ ಮಾಡುತ್ತಿರುವ ಪತ್ರಕರ್ತ ಮಿತ್ರರೊಬ್ಬರನ್ನು ಕೇಳಿದಾಗ, ತಾವು ಆ ಹೆಸರನ್ನು ಕೇಳಿಲ್ಲ ಎಂದು ಪ್ರಾಮಾಣಿಕವಾಗಿ ಹೇಳಿದರು.

‘ಡಾ.ಎಝೆಕಿಲ್ ಅವರು ನಿಮ್ಮ ಪತ್ರಿಕೆಯ ಸಂಪಾದಕರಾಗಿದ್ದರು ಗೊತ್ತಾ?’ ಎಂದು ಹೇಳಿದಾಗ, ಅವರಿಗೆ ತುಸು ಸಂಕೋಚವಾಯಿತು. ‘ನಾನು ಕೆಲಸ ಮಾಡುತ್ತಿರುವ ಪತ್ರಿಕೆಯ ಸಂಪಾದಕರಾಗಿದ್ದವರ ಹೆಸರು ನನಗೆ ಗೊತ್ತಿಲ್ಲವಲ್ಲ… ಕ್ಷಮಿಸಿ…’ ಎಂದು ವಿನೀತರಾಗಿ ಹೇಳಿದರು. ಎಲ್ಲ ಪತ್ರಕರ್ತರ ಹೆಸರು ನಮಗೆ ಗೊತ್ತಿರಬೇಕು ಎಂದೇನೂ ಇಲ್ಲ. ಆದರೆ ನಾವು ಯಾವ ಪತ್ರಿಕೆಯಲ್ಲಿದ್ದೇವೋ, ಆ ಪತ್ರಿಕೆಗೆ ಆಗಿ ಹೋದ ಸಂಪಾದಕರೆಲ್ಲರ ಕನಿಷ್ಠ ಹೆಸರುಗಳಾದರೂ ಗೊತ್ತಿರಬೇಕು.

ಡಾ.ಹನ್ನನ್‌ ಎಝೆಕಿಲ್ ಅವರು ‘ಎಕನಾಮಿಕ್ಸ್ ಟೈಮ್ಸ್’ ಪತ್ರಿಕೆಯ ಸಂಪಾದಕರಾಗಿದ್ದರು. ಅವರು ಬದುಕಿದ್ದಿದ್ದರೆ ಅವರಿಗೆ ತೊಂಬತ್ತೈದು
ವರ್ಷ ವಯಸ್ಸಾಗಿರುತ್ತಿತ್ತು. ಆದರೆ ಅವರು ತಮ್ಮ ೮೬ ನೇ ವಯಸ್ಸಿ (೨೦೧೩ ರಲ್ಲಿ) ನಲ್ಲಿ ನಿಧನರಾದರು. ಇಸ್ರೇಲಿ ಮೂಲದವರಾದ ಅವರು, ಡಾಕ್ಟರ್ ಆಗಬೇಕೆಂದು ಬಯಸಿದ್ದರು. ಆದರೆ ಬಹಳ ಇಷ್ಟಪಟ್ಟು ಪತ್ರಿಕಾ ವೃತ್ತಿಗೆ ಬಂದವರು.

ಉತ್ತಮ ವಾಗ್ಮಿಯಾಗಿದ್ದ ಡಾ.ಎಝೆಕಿಲ್, ಹಣಕಾಸು, ಬ್ಯಾಂಕಿಂಗ್ ವಿಷಯಗಳ ಬಗ್ಗೆ ಅಧಿಕಾರವಾಣಿಯಿಂದ ಮಾತಾಡುತ್ತಿದ್ದರು. ೧೯೬೧ರಲ್ಲಿ ‘ಎಕನಾಮಿಕ್ ಟೈಮ್ಸ್’ ಪತ್ರಿಕೆಯನ್ನು ಆರಂಭಿಸಿದಾಗ, ಅವರು ಸಹಾಯಕ ಸಂಪಾದಕರಾಗಿ ಆ ಪತ್ರಿಕೆಯನ್ನು ಸೇರಿದರು. ನಂತರ ಅವರು ಆ ಪತ್ರಿಕೆಯ ಸಂಪಾದಕರಾಗುವ ತನಕ ಬೆಳೆದಿದ್ದು ಗಮನಾರ್ಹ.

ಒಂದು ಕಾಲಕ್ಕೆ ಟ್ರೇಡ್ ಯೂನಿಯನ್ ನಾಯಕರಾಗುವುದು ಪ್ರತಿಷ್ಠೆಯಾಗಿತ್ತು. ಅದು ಪ್ರಭಾವಿ ಹುದ್ದೆಯೂ ಆಗಿತ್ತು. ಡಾ.ಎಝೆಕಿಲ್ ಅವರು ಒಂದು ದಶಕ ಕಾಲ ಟ್ರೇಡ್ ಯೂನಿಯನ್ ನಲ್ಲಿ ಸಕ್ರಿಯರಾಗಿದ್ದರು. ತಾವು ಯಹೂದಿಯಾದರೂ, ಹೆಮ್ಮೆಯ ಮುಂಬೈಕರ್ ಎಂದು ಹೇಳಿಕೊಳ್ಳುತ್ತಿದ್ದರು. ಆ ದಿನಗಳಲ್ಲಿ ಎಕನಾಮಿಕ್ ಟೈಮ್ಸನಲ್ಲಿ ಕೆಲಸ ಮಾಡಲು ಬಿಜಿನೆಸ್ ಅಥವಾ ಎಕನಾಮಿಕ್ಸ್ ಹಿನ್ನೆಲೆ ಬೇಕಿರಲಿಲ್ಲ. ಆದರೆ ಯಾವ ವಿಷಯದ ಹಿನ್ನೆಲೆಯಿಂದ ಬಂದರೂ, ಅವರಿಗೆ ಡಾ.ಎಝೆಕಿಲ್ ಒಳ್ಳೆಯ ತರಬೇತಿ ಕೊಟ್ಟು ಪಳಗಿಸುತ್ತಿದ್ದರು. ಅವರೊಂದಿಗೆ ಕೆಲಸ ಮಾಡಿದ ಅನೇಕರು ಮುಂದಿನ ಅರ್ಧ ಶತಮಾನ ಮುಂಬೈ ಪತ್ರಿಕೋದ್ಯಮದಲ್ಲಿ ಮಹತ್ವದ ಸ್ಥಾನಗಳನ್ನು ಅಲಂಕರಿಸಿದ್ದು ಬೇರೆ ಮಾತು.

ಆ ದಿನಗಳಲ್ಲಿ ಬಿಜಿನೆಸ್ ಪತ್ರಿಕೋದ್ಯಮ ಅಷ್ಟೊಂದು ಹುಲುಸಾಗಿ ಬೆಳೆದಿರಲಿಲ್ಲ. ಎಕನಾಮಿಕ್ಸ್ ಟೈಮ್ಸ ಸಂಪಾದಕರಾದವರು ಸಾಯಂಕಾಲ ಆರು ಗಂಟೆಗೆ ಮನೆಗೆ ಮರಳುವ ಕಾಲವದು. ಅಂಥ ಕಾಲದಲ್ಲಿ ಡಾ.ಎಝೆಕಿಲ್ ‘ಎಕನಾಮಿಕ್ಸ್ ಟೈಮ್ಸ್’ ಪತ್ರಿಕೆಯನ್ನು ಕರ್ಮಯೋಗಿಯಂತೆ ಕಟ್ಟಿದರು.