Sunday, 15th December 2024

ಅವರವರು ಕಂಡಂತೆ

ಸುಧಕ್ಕನ ಕಥೆಗಳು

ಸುಧಾಮೂರ್ತಿ

ಚಿತ್ರಾಪುರ ಅನೋದು ಒಂದು ಊರು ಇತ್ತಂತೆ’ ಅಜ್ಜಿ ಹಪ್ಪಳ ಲಟ್ಟಿಸುತ್ತ ಅಜ್ಜನಿಗೆ ಹೇಳಿದಳು.

‘ಹೌದು ನನ್ನ ಅಜ್ಜಿಯ ಊರು’ ಎಂದರು ಅಜ್ಜ. ಅಷ್ಟರಲ್ಲಿ ಮಕ್ಕಳೆಲ್ಲಾ ಓಡಿಬಂದು ‘ಅಜ್ಜಾ, ಅಜ್ಜಿ ಬೇಗ ಬನ್ನಿ ಹೊರಗೆ ಬಂದು ನೋಡಿ’ ಎಂದು ಒತ್ತಾಯಿಸಿದರು. ಈಗ ತಾನೇ ಮಳೆ ನಿಂತಿದೆ. ಭೂಮಿಯೆಲ್ಲ ಕೆಸರಾಗಿದೆ. ಏನಿರಬಹುದು ಎನ್ನುತ್ತ ಅಜ್ಜ –
ಅಜ್ಜಿಯರು ಹೊರಗೆ ಬಂದರು.

ಆಕಾಶದಲ್ಲಿ ಸುಂದರವಾದ ಕಾಮನಬಿಲ್ಲು ಮೂಡಿತ್ತು. ಪಟ್ಟಣದಲ್ಲಿ ಇದ್ದ ಮಕ್ಕಳಿಗೆ ಕಾಮನಬಿಲ್ಲನ್ನು ಇಷ್ಟು ಸುಂದರವಾಗಿ ನೋಡಲು ಹೇಗೆ ಸಾಧ್ಯ. ‘ಇದಕ್ಕೆ ಸಂಸ್ಕೃತದಲ್ಲಿ ಇಂಧ್ರಧನಸ್ ಅಂತಾರೆ’ ಎಂದರು ಅಜ್ಜಿ. ನಮ್ಮ ಅಜ್ಜಿ ಈ ತರಹ ಕಾಮನಬಿಲ್ಲು ಆಕಾಶದಲ್ಲಿ ಮೂಡಿದಾಗ ‘ನರಿಗೆ ಲಗ್ನವಾಗುವ ಹೊತ್ತು’ ಅಂತಾ ಹೇಳ್ತಿದ್ದಳು’ ಎಂದರು ಅಜ್ಜ.

‘ನಾವು ಕೋಣನಿಗೆ ಮದುವೆ ಅನ್ನುತ್ತಿದ್ದೆವು’ ಎಂದಳು ಅಜ್ಜಿ. ನಮ್ಮ ತಾಯಿ ದೇವಲೋಕಕ್ಕೆ ಹೋಗುವ ಮೆಟ್ಟಿಲು ಅನ್ನುತ್ತಾಳೆ ಎಂದಳು ಅನುಷ್ಕ. ಹೀಗೆ ತಲೆಗೆ ಒಂದೊಂದು ಮಾತು ಕೇಳಿದರು ಮಕ್ಕಳು. ‘ಅದೆಲ್ಲ ಅವರವರು ನೋಡಿದ ಹಾಗೆ. ಅವರವರು
ಅಂದುಕೊಂಡ ಹಾಗೆ’ ಎಂದಳು. ಅಜ್ಜಿ ‘ಅದರ ಮೇಲೆ ಚಿತ್ತಾಪುರದ ಅಜ್ಜಿ ಹೇಳಿದ ಕಥೆ  ಹೇಳ್ತೀನಿ’ ಎಂದು ಅಜ್ಜಿ ಹೊಸ ಕಥೆ ಆರಂಭಿಸಿದಳು.

ಚಿತ್ತಾಪುರ ನದಿಯ ತೀರದಲ್ಲಿಯ ಒಂದು ದೊಡ್ಡ ಪಟ್ಟಣ. ಒಂದು ದಿನ ಭಾರೀ ಮಳೆಯಾಗಿ ನಿಂತಿತು. ಜನ ಮನೆಯಿಂದ ಹೊರಬರಲಿಲ್ಲ. ಬೇರೆ ಊರಿಂದ ರಾಮು ಬರುತ್ತಿದ್ದ. ನದಿಯನ್ನು ದಾಟಿ ಬರುವಾಗ ನದಿಯ ದಡದ ಅಂಚಿನಲ್ಲಿ ಕರಿಯ
ದೊಡ್ಡ ಕಲ್ಲೊಂದು ನೋಡಿದ. ಇದಕ್ಕೂ ಮೊದಲು ಅನೇಕ ಬಾರಿ ಆ ದಾರಿಯಲ್ಲಿ ಸಾಗಿದರೂ ಇಂಥ ಕಲ್ಲನ್ನು ನೋಡಿರಲೇ ಇಲ್ಲ.

ಹತ್ತಿರ ಬಂದು ಮತ್ತೆ ಆ ಕಲ್ಲನ್ನು ನೋಡಿದ.ನುಣುಪಾದ ಸುಂದರ ಕಲ್ಲು. ಕೈಯಾಡಿಸಿದ. ‘ಆಹಾ! ಎಂಥ ಸುಂದರವಾದ ಕಲ್ಲು. ಇದರಿಂದ ಬೇಕಾದ ಶಿಲ್ಪವನ್ನು ಮಾಡಬಹುದು. ನಾನು ಊರಿಗೆ ಹೋಗಿ ನನ್ನ ಶಿಷ್ಯರನ್ನು ಕೆರದುಕೊಂಡು ಬಂದು ಈ
ಕಲ್ಲನ್ನುಒಯ್ಯುತ್ತೇನೆ’ ಎಂದು ಚಿತ್ತಾಪುರಕ್ಕೆ ಓಡಿಹೋದ.

ಸ್ವಲ್ಪ ಹೊತ್ತಿನ ಬಳಿಕ ಗಣೇಶ ಆ ನದಿಯಲ್ಲಿ ಸ್ನಾನಮಾಡಲು ಬಂದ. ಈ ಕರಿಯ ಶಿಲೆಯನ್ನು ಕಂಡು ನೋಡಿಯೇ ನೋಡಿದ.
‘ಅಯ್ಯೋ ಸ್ವಾಮಿ ಗಣೇಶ ನೀನು ನನಗೆ ಈಗ ದರ್ಶನ ಕೊಟ್ಟೆ. ನಾನು ಧನ್ಯನಾದೆ’ ಎಂದು ಅಡ್ಡಬಿದ್ದ. ಅವನಿಗೆ ಆ ಕಲ್ಲಿನಲ್ಲಿಯ ವಕ್ರತೆ ಆನೆಯ ಸೊಂಡಿಲಿನಂತೆ ಕಂಡಿತು. ಅವನಿಗೆ ಈ ಕಲ್ಲಿನಲ್ಲಿ ಗಣೇಶ ಒಡಮೂಡಿದಂತೆ ಕಂಡಿತು.

ಕೂಡಲೆ ಗಡಿಬಿಡಿಯಿಂದ ಸ್ನಾನಮಾಡಿ ಊರಿಗೆ ಭಕ್ತವೃಂದವನ್ನು ಕರೆದುಕೊಂಡು ಬರಲು ಓಡಿಹೋದ. ಸ್ವಲ್ಪ ಹೊತ್ತಿನ ನಂತರ ರಾಘವ ಶೆಟ್ಟಿ ಬಂದರು. ಈ ಹೊಸಕಲ್ಲನ್ನು ನೋಡಿ ಮುಟ್ಟಿ ‘ಎಷ್ಟು ನುಣುಪು ಆಗಿದೆ! ಎಷ್ಟು ಸ್ವಚ್ಛ ಕಲ್ಲು ! ಇದನ್ನು
ಮೇಲೆ ಇಟ್ಟು ಒಂದು ಮಂಟಪ ಕಟ್ಟಿಸಿದರೆ, ದಾರಿಹೋಕರಿಗೆ ಆರಾಮವಾಗಿ ಕುಳಿತುಕೊಳ್ಳಲು ಸ್ಥಳ ಆಗುತ್ತದೆ’. ಎಂದು ಕೊಂಡ್ರ. ಆಳುಗಳನ್ನು ಕರೆದುತರಲು ಚಿತ್ತಾಪುರಕ್ಕೆ ಹೊರಟುಹೋದರು.

ಸ್ವಲ್ಪ ವೇಳೆಗೆ ರಣಧೀರ ಆ ದಾರಿಯಲ್ಲಿ ಬಂದ. ರಣಧೀರ ಮಹಾಯೋಧ. ದಾರಿಯಲ್ಲಿ ಈ ಕಲ್ಲನ್ನು ಕಂಡು’ ಅಕಸ್ಮಾತ್ ಯುದ್ಧ ವಾದರೆ, ಕುದುರೆ, ಕಾಲಾಳು ಇವರಿಗೆ ತುಂಬಾ ತೊಂದರೆಯಾಗುವುದು. ಇದು ಮಾರ್ಗದ ಮಧ್ಯದಲ್ಲಿ ಇದೆ. ಮೊದಲು ಇದನ್ನು
ತೆಗೆಯಬೇಕು’ ಎಂದುಕೊಂಡು ತಾನು ಕುಳಿತ ಕುದುರೆಯನ್ನು ಊರಕಡೆಗೆ ಓಡಿಸಿದ. ಆಮೇಲೆ ಜನಬರತೊಡಗಿದರು.

ಸ್ವಲ್ಪಹೊತ್ತಿನಲ್ಲಿ ರಾಮುವಿನ ಜನ, ಗಣೇಶ ಅರ್ಚಕರ ಭಕ್ತರು, ರಾಘವ ಶೆಟ್ಟಿಯ ಆಳುಗಳು, ರಣಧೀರನ ಯೋಧರು ಎಲ್ಲರೂ
ಸೇರಿದರು. ಒಬ್ಬರಿಗೊಬ್ಬರು ಜಗಳಕ್ಕೆ ಇಳಿದರು. ಪ್ರತಿಯೊಬ್ಬರೂ ತಾವು ಹೇಳಿದ್ದೇ ಸರಿ ಎಂದು ವಾದಿಸತೊಡಗಿದರು. ಒಬ್ಬರಿ ಗೊಬ್ಬರು ಕೈಹತ್ತಿತು. ಅಷ್ಟರಲ್ಲಿ ಮಲ್ಲಪ್ಪ ಬಂದ. ಅವನು ಅಗಸ. ಈ ಕಲ್ಲನ್ನು ನೋಡಿ ಅಯ್ಯೋ ಇದು ನನ್ನ ಕಲ್ಲು. ದಿನಾಲೂ
ಇದರ ಮೇಲೆ ಬಟ್ಟೆ ಒಗೆಯುತ್ತಿದ್ದೆ.

ಮಳೆ ಬಂದಾಗ ಇದರ ಕೆಳಗಿನ ಮಣ್ಣು ಕುಸಿದು ಕಲ್ಲು ಮೇಲೆ ಬಂದಿದೆ. ಅನೇಕ ವರ್ಷ ಬಟ್ಟೆ ಒಗೆದು ನುಣುಪಾಗಿದೆ. ಇದು
ನಿಮ್ಮ ದೇವರೂ ಅಲ್ಲ, ಶಿಲ್ಪದ ಕಲ್ಲಲ್ಲ, ದಾರಿಗೆ ಅಡ್ಡವಾಗಿರುವ ಕಲ್ಲಲ್ಲ. ವಿಶ್ರಾಂತಿಗೂ ಅಲ್ಲ. ಇದು ನನ್ನ ಕಲ್ಲು. ಬಟ್ಟೆಯನ್ನು ಒಗೆಯುವ ಬಂಡೆ. ನೀವೆಲ್ಲರೂ ನಿಮಗೆ ಕಂಡಂತೆ, ನಿಮ್ಮ ಕೆಲಸದ ಮೇಲೆ ಇರುವ ಆದರದಿಂದ ಹಾಗೆ ಕಂಡಿರಿ. ನಡೀರಿ. ನನಗೆ ತುಂಬಾ ಕೆಲಸವಿದೆ’ ಎಂದು ಅವರನ್ನು ಸರಿಸಿ ತನ್ನ ಬಟ್ಟೆಯ ಗಂಟನ್ನು ಬಿಚ್ಚಿ ನೀರಿನಲ್ಲಿ ನೆನಸತೊಡಗಿದ. ಎಲ್ಲರೂ ನಿರಾಶ ರಾಗಿ ಮನೆಗೆ ಹೋದರು.

ಅಜ್ಜಿ ಕೆಲಸ ಮುಗಿಸುತ್ತ ಈ ಕಥೆ ಹೇಳಿದಳು. ‘ಅಜ್ಜಿ ಚಿತ್ತಾಪುರಕ್ಕೆ ಹೋದರೆ ಈ ಕಲ್ಲನ್ನು ನಾವು ನೋಡಬಹುದೇ?’ ಎಂದು ಮಕ್ಕಳು ಕುತೂಹಲದಿಂದ ಕೇಳಿದರು. ‘ಈಗ ಆಕಲ್ಲು ಇನ್ನೂ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಕಥೆ ಮಾತ್ರ ಎಲ್ಲರೂ ಹೇಳ್ತಾರೆ’ ಎಂದು ಅಜ್ಜಿ ನಗುತ್ತ ಹೇಳಿದಳು.