ಅವಲೋಕನ
ಗಣೇಶ್ ಭಟ್ ವಾರಣಾಸಿ
ಕರೋನಾ ಎನ್ನುವ ಮಹಾಮಾರಿ ಹುಟ್ಟಿದ್ದು ಚೀನಾದಲ್ಲಿ ಯಾದರೂ ಇಡೀ ಜಗತ್ತು ಅದರಿಂದ ಬಹಳ ತೊಂದರೆಗೊಳಗಾಯಿತು.
ಹಿಂದೆಂದೂ ಕಂಡರಿಯದ ಸಾವು ನೋವುಗಳು ಹಾಗೂ ಆರ್ಥಿಕ ಸಂಕಷ್ಟ ಎಲ್ಲಾ ದೇಶಗಳನ್ನು ಬಾಧಿಸಿದವು. ಕೇಂದ್ರ
ಸರಕಾರವು ೨೦೨೦ರ ಮಾರ್ಚ್ ೨೪ರಿಂದ ಮುಂದಿನ ೨೧ ದಿವಸಗಳವರೆಗೆ ಲಾಕ್ಡೌನ್ ಘೋಷಿಸಿತು. ಅಂಗಡಿ ಮುಂಗಟ್ಟು, ವ್ಯಾಪಾರ ವಹಿವಾಟು, ವಿಮಾನ, ರೈಲು, ಬಸ್ ಸೇವೆಗಳು, ಶಾಲೆ ಕಾಲೇಜು, ಆಫೀಸು ಹೀಗೆ ಎಲ್ಲವನ್ನೂ ಮುಚ್ಚಲಾಯಿತು. ರೋಗ ಹರಡುವುದನ್ನು ತಡೆಗಟ್ಟುವ ದೃಷ್ಟಿಯಲ್ಲಿ ಎಲ್ಲರೂ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಯಿತು.
ಸಾಮಾಜಿಕ ಅಂತರವನ್ನು ಕಾಪಾಡುವೆಡೆಗೆ ಮಹತ್ವವನ್ನು ಕೊಡಲಾಯಿತು. ಭಾರತದಲ್ಲಿ ಲಾಕ್ಡೌನ್ ಘೋಷಣೆ ಮಾಡಿದಾಗ ಭಾರತದಲ್ಲಿ ಸಕ್ರಿಯವಾಗಿದ್ದ ಕರೋನಾ ಕೇಸ್ಗಳ ಸಂಖ್ಯೆ ಕೇವಲ ೫೦೦. ದೇಶದಲ್ಲಿ ಕರೋನಾ ವಿಪರೀತವಾಗಿ ಹರಡುವುದನ್ನು
ಗಮನಿಸಿದ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ಲಾಕ್ಡೌನ್ ಮತ್ತೂ ಮುಂದುವರಿಸಿದವು. ಇದರ ಪರಿಣಾಮವಾಗಿ ಉದ್ಯಮಗಳು ನೆಲಕಚ್ಚಿದವು. ಕೈಗಾರಿಕೆಗಳು ನಿಂತು ಹೋದವು. ಕೋಟ್ಯಂತರ ಜನರು ಉದ್ಯೋಗಗಳನ್ನು ಕಳೆದುಕೊಂಡರು. ಮಹಾ ನಗರಗಳಲ್ಲಿ ಸಿಲುಕಿ ಕೊಂಡಿದ್ದ ಲಕ್ಷಾಂತರ ವಲಸೆ ಕಾರ್ಮಿಕರು ಅನ್ನಾಹಾರವಿಲ್ಲದೆ ಪರಿತಪಿಸುವಂತಾಯಿತು.
ಪರಿಣಾಮವಾಗಿ ಮಹಾನಗರಗಳಲ್ಲಿದ್ದ ವಲಸೆ ಕಾರ್ಮಿಕರು ತಮ್ಮ ಹುಟ್ಟೂರನ್ನು ಸೇರಲು ಕಾಲ್ನಡಿಗೆಯಲ್ಲಿ ಹೊರಟರು. ಕೇಂದ್ರ ಹಾಗೂ ರಾಜ್ಯಸರಕಾರಗಳು ಸಮನ್ವಯವನ್ನು ಸಾಧಿಸಿ ಶ್ರಮಿಕ್ ಸ್ಪೆಷಲ್ ಟ್ರೈನ್ಗಳ ಮೂಲಕ ಈ ಕಾರ್ಮಿಕರನ್ನು
ಅವರವರ ಊರುಗಳಿಗೆ ಸೇರಿಸುವಲ್ಲಿ ಯಶಸ್ವಿಯಾದವು. ಆರಂಭದ ದಿವಸಗಳಲ್ಲಿ ಭಾರತದಲ್ಲಿ ಕರೋನಾ ಟೆಸ್ಟಿಂಗ್ ಕಿಟ್ಗಳು
ಇರಲಿಲ್ಲ, ಪಿಪಿಇ ಕಿಟ್ಗಳು ಇರಲಿಲ್ಲ, ಕರೋನಾದಿಂದಾಗಿ ತೀವ್ರವಾಗಿ ಅನಾರೋಗ್ಯಕ್ಕೆ ಈಡಾದ ರೋಗಿಗಳ ಆರೈಕೆಗೆ ಆಸ್ಪತ್ರೆ ಗಳಲ್ಲಿ ಸಾಕಷ್ಟು ವೆಂಟಿಲೇಟರ್ಗಳು ಇರಲಿಲ್ಲ.
ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್, ಇಕೋಮಿಕ್ಸ್ ಆಂಡ್ ಪಾಲಿಸಿ ಇದರ ನಿರ್ದೇಶಕರಾದ ರಮಣನ್ ಲಕ್ಷ್ಮೀ ನಾರಾಯಣನ್ ಅವರು ಭಾರತದಲ್ಲಿ ೩೦ ಕೋಟಿ ಮಂದಿಗೆ ಕರೋನಾ ತಗುಲಬಹುದೆಂದೂ, ಕನಿಷ್ಠ ೧೦ ಲಕ್ಷದಿಂದ ೨೫ ಲಕ್ಷದವರೆಗೆ ಜನರು
ಕರೋನಾದಿಂದಾಗಿ ಪ್ರಾಣ ಕಳೆದುಕೊಳ್ಳಬಹುದು ಎಂದೂ ಹೇಳಿದ್ದರು!
ಬಿಬಿಸಿ, ವಾಲ್ ಸ್ಟ್ರೀಟ್ ಜರ್ನಲ್, ನ್ಯೂಯಾರ್ಕ್ ಟೈಂಸ್ನಂಥ ಅಂತಾರಾಷ್ಟ್ರೀಯ ಪತ್ರಿಕೆಗಳು ಭಾರತದಲ್ಲಿನ ಕರೋನಾ ಪರಿಸ್ಥಿತಿ ಯ ಬಗ್ಗೆ ನಕಾರಾತ್ಮಕ ವರದಿಗಳನ್ನು ಪ್ರಕಟಿಸಿದವು. ಕರೋನಾ ವನ್ನು ಭಾರತಕ್ಕಿಂತ ಚೆನ್ನಾಗಿ ಚೀನಾ ನಿಭಾಯಿಸಿದೆ ಎಂಬುದಾಗಿ ಚೀನಾದ ಬಗ್ಗೆ ಪ್ರಶಂಸೆಗಳ ಮಳೆಯನ್ನು ಸುರಿಸಿಯೂ ಆಯಿತು. ಕರೋನಾ ನಿರ್ವಹಣೆಯಲ್ಲಿ ದಕ್ಷಿಣ
ಕೋರಿಯಾ ಮಾಡೆಲ, ಜಪಾನ್ ಮಾಡೆಲ್ ಹಾಗೂ ಸಿಂಗಾಪುರ ಮಾಡೆಲ್ ಗಳ ಬಗ್ಗೆ ಬಹಳ ಚರ್ಚೆಗಳು ಭಾರತದಲ್ಲಿ ನಡೆದವು.
ದಿನ ನಿತ್ಯ ಹೊಸ ಕರೋನಾ ಕೇಸ್ಗಳ ಸಂಖ್ಯೆ ಏರುತ್ತಾ ಹೋಯಿತು.
ಸೆಪ್ಟಂಬರ್ ೧೧, ೨೦೨೦ರಂದು ಭಾರತದಲ್ಲಿ ೯೭,೮೯೪ ಹೊಸ ಕರೋನಾ ಕೇಸ್ಗಳು ದಾಖಲಾದವು. ಭಾರತದಲ್ಲಿ ದಿನವೊಂದ ರಲ್ಲಿ ಅತೀ ಹೆಚ್ಚು ಕರೋನಾ ಕೇಸ್ಗಳು ದಾಖಲಾದ ದಿನ ಅದು. ಆ ದಿನಗಳಲ್ಲಿ ದಿನ ವೊಂದರ ಹೊಸ ಕರೋನಾ ಸೋಂಕಿತರ ಸಂಖ್ಯೆ ಒಂದು ಲಕ್ಷವನ್ನು ಮೀರಬಹುದು ಎಂಬ ಭಯವೂ ದೇಶವನ್ನಾವರಿಸಿತ್ತು. ಅದೇ ತಿಂಗಳ ೧೦ರಂದು ಕರೋನಾ ಸಂಬಂಧಿತ ಕಾಯಿಲೆಗಳಿಗೆ ೧,೧೬೯ ಮಂದಿ ಪ್ರಾಣ ಕಳೆದುಕೊಂಡರು. ಅದು ದೇಶದ ದಿನವೊಂದರಲ್ಲಿ ಅತೀ ಹೆಚ್ಚು ಮಂದಿ ಕರೋನಾಗೆ ಪ್ರಾಣ ಕಳೆದುಕೊಂಡ ದಿನ.
೨೦೨೦ರ ಸೆಪ್ಟಂಬರ್ ನಲ್ಲಿ ೧೦ ಲಕ್ಷಕ್ಕೂ ಹೆಚ್ಚು ಸಕ್ರಿಯ ಕರೋನಾ ಕೇಸ್ಗಳು ದೇಶದಲ್ಲಿದ್ದವು. ಕರೋನಾ ಕಾರಣದಿಂದ ಜಾಗತಿಕ ಆರ್ಥಿಕತೆ ಕುಸಿಯಿತು. ಆಯಾತ ನಿರ್ಯಾತಗಳೂ ಕುಸಿದವು. ಭಾರತದಲ್ಲಿ ಲಾಕ್ಡೌನ್ ಘೋಷಣೆ ಮಾಡಿದುದಂತೂ ಗಾಯದ ಮೇಲೆ ಬರೆ ಎಳೆದಂತೆ ಆಯಿತು. ದೇಶದ ಆರ್ಥಿಕತೆ, ಜಿಡಿಪಿ, ಜನರ ಆದಾಯ ಕುಸಿದವು. ಲಾಕ್ಡೌನ್ ನಿರ್ಣಯ ಮಾಡುವಾಗ ಇದು ನಿರೀಕ್ಷಿತವೇ ಆಗಿತ್ತು. ದೇಶದ ಆರ್ಥಿಕತೆಗಿಂತ ಜನರ ಪ್ರಾಣರಕ್ಷಣೆಗೇ ಸರಕಾರ ಹೆಚ್ಚು ಮಹತ್ವವನ್ನು ಕೊಟ್ಟು
ಲಾಕ್ಡೌನ್ ಜಾರಿಗೊಳಿಸಿತು.
ಸೆನ್ಸೆಕ್ಸ್, ಜಿಡಿಪಿ ಎಲ್ಲವೂ ಪಾತಾಳ ಮಟ್ಟಕ್ಕೆ ಇಳಿದವು. ೨೦೨೦ರ ಫೆಬ್ರವರಿಯಲ್ಲಿ ೪೧,೦೦೦ದ ಆಸುಪಾಸಿನಲ್ಲಿದ್ದ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಸೆನ್ಸೆಕ್ಸ್ ೨೦೨೦ರ ಮಾರ್ಚ್ ೨೩ರಂದು ೨೬೬೭೮.೦೩ಕ್ಕೆ ಕುಸಿಯಿತು. ಸೂಚ್ಯಂಕದಲ್ಲಿ ಕುಸಿತ ಕಂಡ ನಿಫ್ಟಿ ೭೭೪೩ಕ್ಕೆ ಕುಸಿಯಿತು. ೨೦೨೦ರ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಮೈನಸ್ ಶೇ.೨೩.೯ಕ್ಕೆ ಕುಸಿಯಿತು. ೨೦೨೦ರ ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳುಗಳ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡರೂ ಮೈನಸ್ ಶೇ.೭.೭ ಏರಲು ಮಾತ್ರ ಸಾಧ್ಯವಾಯಿತು.
ಭಾರತದ ಕುಸಿದು ಹೋದ ಅರ್ಥಿಕತೆಯನ್ನು ಸರಿಪಡಿಸುವ ಉದ್ದೇಶದಿಂದ ಕೇಂದ್ರ ಸರಕಾರವು ಮೂರು ಹಂತಗಳಲ್ಲಿ ಶೇ.೨೯.೮೭ ಲಕ್ಷ ಕೋಟಿ ರುಪಾಯಿಗಳ ಆರ್ಥಿಕ ಪ್ಯಾಕೇಜ್ ಘೋಷಿಸಿತು. ೨೦೨೦ರ ಮೇ ೧೨ರಂದು ೨೦ ಲಕ್ಷ ರುಪಾಯಿಗಳ ಆರ್ಥಿಕ ಪ್ಯಾಕೇಜ್ ಅನ್ನು ಘೋಷಿಸಿತು. ಈ ಆರ್ಥಿಕ ಪ್ಯಾಕೇಜ್ನ ಅಡಿಯಲ್ಲಿ ಸಣ್ಣ ಹಾಗೂ ಅತೀ ಸಣ್ಣ ಉದ್ಯಮಿಗಳಿಗೆ ೩.೭ ಲಕ್ಷ ಕೋಟಿ ರುಪಾಯಿಗಳ ತುರ್ತು ಸಾಲ, ಇಫಿಎಫ್ ಭರಿಸುವಿಕೆ, ವಿವಿಧ ವಿದ್ಯುತ್ ಮಂಡಳಿಗಳಿಗೆ ಆರ್ಥಿಕ ಸಹಕಾರ, ವಲಸೆ ಕಾರ್ಮಿಕರಿಗೆ ೨ ತಿಂಗಳುಗಳ ಕಾಲ ಉಚಿತ ಆಹಾರ ಧಾನ್ಯ ಪೂರೈಕೆ, ಬಡ ಮಹಿಳೆಯರ ಜನಧನ್ ಬ್ಯಾಂಕ್ ಖಾತೆಗೆ ೬
ತಿಂಗಳುಗಳ ಕಾಲ ತಲಾ ೫೦೦ ರುಪಾಯಿಗಳನ್ನು ಕಳುಹಿಸುವ ಗರೀಬ್ ಕಲ್ಯಾಣ್ ಯೋಜನೆಗೆ ೧.೯೩ ಲಕ್ಷ ಕೋಟಿ ರುಪಾಯಿ ಗಳು, ಮುದ್ರಾ ಶಿಶು ಸಾಲ, ರೈತರಿಗೆ ಸಾಲ ಕೊಡುವ ಕಿಸಾನ್ ಕ್ರೆಡಿಟ್ ಯೋಜನೆಗೆ ಹೆಚ್ಚುವರಿ ೩ ಲಕ್ಷ ಕೋಟಿಗಳ ಪೂರೈಕೆ, ಕೃಷಿ ಮೂಲಭೂತ ಸೌಲಭ್ಯ ವಿಸ್ತರಣೆಗೆ ೧ ಲಕ್ಷ ಕೋಟಿ ರುಪಾಯಿಗಳ ಕೊಡುಗೆ, ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಹೆಚ್ಚುವರಿಯಾಗಿ ೪೦,೦೦೦ ಕೋಟಿ ರುಪಾಯಿಗಳ ಪೂರೈಕೆ ಹೀಗೆ ಒಟ್ಟು ೨೦ ಲಕ್ಷ ಕೋಟಿ ರುಪಾಯಿಗಳ ಆರ್ಥಿಕ ನೆರವನ್ನು ಸರಕಾರವು ಘೋಷಿಸಿತು.
ಅಕ್ಟೋಬರ್ ೧೨ರಂದು ೨ನೇ ಹಂತದ ಆರ್ಥಿಕ ಪ್ಯಾಕೇಜ್ನ ಅಡಿಯಲ್ಲಿ ಆತ್ಮ ನಿರ್ಭರ ಭಾರತ್ ೨.೦ ಯೋಜನೆ ಎಂಬ ಹೆಸರಿನಲ್ಲಿ ೭೫ ಸಾವಿರ ಕೋಟಿ ರುಪಾಯಿಗಳ ಬಿಡುಗಡೆಯನ್ನು ಘೋಷಿಸಲಾಯಿತು. ಇದರಲ್ಲಿ ಸರಕಾರಿ ಉದ್ಯೋಗಿಗಳಿಗೆ ಹಬ್ಬದ ಸಂದರ್ಭದಲ್ಲಿ ಖರೀದಿಯನ್ನು ಮಾಡಲು ೧೨೦೦೦ ಕೋಟಿ ರುಪಾಯಿಗಳ ಬಡ್ಡಿ ರಹಿತ ಸಾಲ, ರಾಜ್ಯಗಳಿಗೆ ೫೦ ವರ್ಷಗಳ ಅವಧಿಯ ೧೨ ಸಾವಿರ ಕೋಟಿ ರುಪಾಯಿಗಳ ಬಡ್ಡಿ ರಹಿತ ಸಾಲಗಳನ್ನು ಕೊಡಲಾಯಿತು. ೨.೬೫ ಲಕ್ಷ ಕೋಟಿ
ರುಪಾಯಿಗಳ ಆರ್ಥಿಕ ಪ್ಯಾಕೇಜ್ನ ಆತ್ಮನಿರ್ಭರ ಭಾರತ್ ೩.೦ವನ್ನು ೨೦೨೦ನೇ ಇಸವಿಯ ನವೆಂಬರ್ ತಿಂಗಳ ೧೨ರಂದು ಘೋಷಿಸಲಾಯಿತು.
ಇದರಡಿಯಲ್ಲಿ ಮೇಕ್ ಇನ್ ಇಂಡಿಯಾದ ಅಡಿಯಲ್ಲಿ ದೇಶೀಯವಾಗಿ ಉತ್ಪಾದನೆಯನ್ನು ಮಾಡುವ ಸಂಸ್ಥೆಗಳನ್ನು ಪ್ರೋತ್ಸಾಹಿಸಲು ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಉತ್ಪಾದನಾಧಾರಿತ ಪ್ರೋತ್ಸಾಹಕ) ಅನ್ನು ಕೊಡಲು ೧.೪೫ ಲಕ್ಷ ಕೋಟಿ ರುಪಾಯಿಗಳನ್ನು ಮೀಸಲಿಡಲಾಯಿತು. ೧೦,೦೦೦ ಕೋಟಿ ರುಪಾಯಿಗಳನ್ನು ಗರೀಬ್ ಕಲ್ಯಾಣ್ ರೋಜ್ಗಾರ್ ಯೋಜನೆಗೆ ಮೀಸಲಿಡಲಾಯಿತು. ಈ ಪ್ಯಾಕೇಜ್ನ ಆಡಿಯಲ್ಲಿ ಪ್ರಧಾನ ಮಂತ್ರಿ ಆವಾಜ್ ಯೋಜನೆಗೆ ೧೮,೦೦೦ ಕೋಟಿ ರುಪಾಯಿ ಗಳನ್ನು ಮೀಸಲಿಡಲಾಯಿತು.
ಹೀಗೆ ಆತ್ಮ ನಿರ್ಭರ ಭಾರತ್ ಯೋಜನೆ ಯಡಿಯಲ್ಲಿ ಮೂರು ಕಂತುಗಳಲ್ಲಿ ಒಟ್ಟು ೨೯,೮೭,೬೪೧ ಕೋಟಿ ರುಪಾಯಿಗಳ
ಆರ್ಥಿಕ ಸಹಾಯವನ್ನು ಕೊಡಲಾಯಿತು. ಮೇಲೆ ಹೇಳಿದ ಆರ್ಥಿಕ ಪ್ರೋತ್ಸಾಹಕಗಳ ಕಾರಣದಿಂದಾಗಿ ಭಾರತದ ಉದ್ಯಮಗಳು ಪುನಃ ತಲೆ ಎತ್ತಿ ನಿಲ್ಲುವಂತಾಯಿತು. ಏಪ್ರಿಲ್ ೨೦೨೦ರಲ್ಲಿ ಸಂಗ್ರಹಿತವಾಗಿದ್ದ ಜಿಎಸ್ಟಿ ಕೇವಲ ೩೨,೨೯೪ ಕೋಟಿ. ಆದರೆ ೨೦೨೦ರ ಜೂನ್ ತಿಂಗಳ ನಂತರ ಜಿಎಸ್ಟಿ ಸಂಗ್ರಹದಲ್ಲಿ ಬಹಳ ಸುಧಾರಣೆ ಆಯಿತು. ಜೂನ್ ತಿಂಗಳಲ್ಲಿ ೯೦,೯೧೭ ಕೋಟಿ ರುಪಾಯಿಗಳ ಜಿಎಸ್ಟಿ ಸಂಗ್ರಹವಾಗಿತ್ತು.
ಅಕ್ಟೋಬರ್ ೨೦೨೦ರಲ್ಲಿ ಸಂಗ್ರಹಿತವಾದ ಜಿಎಸ್ಟಿ ೧,೦೫,೧೫೫ ಕೋಟಿ ರು. ನವೆಂಬರ್ನಲ್ಲಿ ೧.೪ ಲಕ್ಷ ಕೋಟಿ ರು. ಡಿಸೆಂಬರ್ ನಲ್ಲಿ ೧,೧೫ ಲಕ್ಷ ಕೋಟಿ ರು. ಸಂಗ್ರಹ ವಾಗಿದ್ದರೆ, ಜನವರಿ ೨೦೨೧ರಲ್ಲಿ ೧.೨೦ ಲಕ್ಷ ಕೋಟಿಗಳ ಜಿಎಸ್ಟಿ ಸಂಗ್ರಹವಾಗಿ ದಾಖಲೆ ಸೃಷ್ಟಿಯಾಗಿದೆ. ಅದೇ ರೀತಿ ಬಿಎಸ್ಇ ಸೆನ್ಸೆಕ್ಸ್ ಕೂಡಾ ಭಾರೀ ಏರಿಕೆ ಯನ್ನು ಕಂಡಿದ್ದು ಸೂಚ್ಯಂಕವು ೫೧,೦೦೦ ವನ್ನು ದಾಟಿದೆ.
ನಿಫ್ಟಿಯೂ ಕೂಡಾ ಬಹಳ ಏರಿಕೆ ಕಂಡಿದೆ. ಇದೀಗ ಭಾರತದ ವಿದೇಶೀ ವಿನಿಮಯ ಸಂಗ್ರಹವು ೫೯೦ ಶತಕೋಟಿ ಡಾಲರ್ಗಳಿಗೇರಿದೆ. ನೇರ ವಿದೇಶಿ ಹೂಡಿಕೆಯೂ ದಾಖಲೆ ಪ್ರಮಾಣದಗಿದ್ದು ಏಪ್ರಿಲ್ ೨೦೨೦ರಿಂದ ಡಿಸೆಂಬರ್ ಜನವರಿ ೨೦೨೧ರ ನಡುವಿನ ೧೦ ತಿಂಗಳುಗಳ ಅವಧಿಯಲ್ಲಿ ೫೭ ಶತ ಕೋಟಿ ಡಾಲರ್ಗಳ ಎಫ್ಡಿಐ ಭಾರತಕ್ಕೆ ಹರಿದುಬಂದಿದೆ. ಇದು ಕಳೆದ ವರ್ಷಕ್ಕಿಂತ ಶೇ.೧೩ರಷ್ಟು ಹೆಚ್ಚು.
ಭಾರತದ ಉದ್ಯೋಗ ಮಾರುಕಟ್ಟೆ ಯಲ್ಲಿ ಕೂಡಾ ಭಾರೀ ಸುಧಾರಣೆ ಯಾಗುತ್ತಿದೆ. ದೇಶದ ವಿದ್ಯುತ್ ಬೇಡಿಕೆಯಲ್ಲೂ ಭಾರೀ ಏರಿಕೆ ಕಂಡು ಬಂದಿದ್ದು ಫೆಬ್ರವರಿ ೩ರಂದು ೧೮೮ ಗಿಗಾವ್ಯಾಟ್ಗಳ ವಿದ್ಯುತ್ ಖರ್ಚಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಖರ್ಚಾದ ವಿದ್ಯುತ್ ೧೭೬ ಗಿಗಾವ್ಯಾಟ್. ೨೦೨೦ರ ಡಿಸೆಂಬರ್ ತಿಂಗಳ ಇಂಧನ ಬೇಡಿಕೆಯೂ ಕಳೆದ ೧೧ ತಿಂಗಳ ಅತೀ ಹೆಚ್ಚು. ಈ ಎಲ್ಲಾ ಅಂಶಗಳು ಭಾರತದ ಆರ್ಥಿಕತೆ ಮತ್ತೆ ಹಳಿಗೆ ಬರುತ್ತಿರುವುದನ್ನು ಸೂಚಿಸುತ್ತಿವೆ. ೨೦೨೧-೨೨ರಲ್ಲಿ ಭಾರತದ ಜಿಡಿಪಿ ಶೇ.೧೧.೫ಕ್ಕೆ ಏರಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯು(ಐಎಂಎಫ್) ಭವಿಷ್ಯ ನುಡಿದಿರುವುದು ಭಾರತದ ಆರ್ಥಿಕತೆಯು ಬಹಳ ಸದೃಢ ವಾಗುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಸರಕಾರದ ಉತ್ಪಾದನಾಧಾರಿತ ಪ್ರೋತ್ಸಾಹಕ ಗಳ ಪರಿಣಾಮ ವಾಗ ಭಾರತೀಯ ಕಂಪನಿಗಳು ಹೊಸ ಹುರುಪಿನೊಂದಿಗೆ
ಚೀನಾ ಉತ್ಪಾದಿತ ವಸ್ತುಗಳೊಡನೆ ಮಾರುಕಟ್ಟೆಯಲ್ಲಿ ಸ್ಪರ್ಧೆಗೆ ಇಳಿದವು. ಭಾರತೀಯ ಮೊಬೈಲ್ ಫೋನ್ ಕಂಪನಿಯಾದ ಮೈಕ್ರೋಮ್ಯಾಕ್ಸ್ ಪಿಎಲಐ ಯೋಜನೆಯ ಬೆಂಬಲದೊಂದಿಗೆ ಹೊಸ ಮೊಬೈಲ್ ಫೋನ್ ಗಳನ್ನು ಮಾರುಕಟ್ಟೆಗೆ ತಂದು ಯಶಸ್ವಿಯೂ ಆಗಿದೆ.
ಆಟೋಮೊಬೈಲ್ ಕ್ಷೇತ್ರದಲ್ಲಿ ಬೇಡಿಕೆ ಹೆಚ್ಚಾಗಿದ್ದು ಇದೀಗ ಸುಮಾರು ೫ ಲಕ್ಷಗಳಷ್ಟು ಗ್ರಾಹಕರು ಕಾರು ಹಾಗೂ ಸೋರ್ಟ್ಸ್ ಯುಟಿಲಿಟಿ ಕಾರುಗಳನ್ನು ಕಾಯ್ದಿರಿಸಿ ಡೆಲಿವರಿಗೋಸ್ಕರ ಕಾಯುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಭಾರತದಲ್ಲಿ ಕರೋನಾ ಸಂಖ್ಯೆಯು ಬಹಳ ವೇಗವಾಗಿ ಇಳಿಮುಖವಾಗುತ್ತಿದೆ. ೨೦೨೦ರ ಸೆಪ್ಟಂಬರ್ ತಿಂಗಳಲ್ಲಿ ದಿನವೊಂದಕ್ಕೆ ೯೭ ಸಾವಿರಷ್ಟು ಕರೋನಾ ಕೇಸ್ಗಳು ದಾಖಲಾಗುತ್ತಿದ್ದರೆ, ಈಗ ಆ ಸಂಖ್ಯೆ ೧೦ ಸಾವಿರದ ಆಸುಪಾಸಿಗೆ ಇಳಿದಿದೆ.
೧೦ ಲಕ್ಷದಷ್ಟು ಸಕ್ರಿಯವಾಗಿದ್ದ ಕೇಸ್ಗಳ ಸಂಖ್ಯೆ ಈಗ ೧.೪ ಲಕ್ಷದ ಆಸುಪಾಸಿಗೆ ಇಳಿದಿದೆ. ಕೇರಳ ಮತ್ತು ಮಹಾರಾಷ್ಟ್ರ
ರಾಜ್ಯಗಳನ್ನು ಹೊರತುಪಡಿಸಿ ದೇಶದ ಉಳಿದ ಎಲ್ಲಾ ರಾಜ್ಯಗಳಲ್ಲೂ ಕರೋನಾ ತಹಬದಿಗೆ ಬಂದಿದೆ. ಕೇರಳದಲ್ಲಿ ಈಗಲೂ ದಿನವೊಂದಕ್ಕೆ ೬೦೦೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಕರೋನಾ ಕೇಸ್ಗಳು ದಾಖಲಾಗುತ್ತಿವೆ. ಕೇರಳದಲ್ಲಿ ಇನ್ನೂ ಸುಮಾರು ೬೭,೯೦೦ ಕರೋನಾ ಕೇಸ್ಗಳು ಸಕ್ರಿಯವಾಗಿವೆ. ಉಳಿದ ಯಾವ ರಾಜ್ಯಗಳಲ್ಲೂ ದಿನ ವೊಂದಕ್ಕೆ ೫೦೦ಕ್ಕಿಂತ ಹೆಚ್ಚು ಹೊಸ ಕೇಸ್ಗಳು ದಾಖಲಾಗುತ್ತಿಲ್ಲ.
ಅಮೆರಿಕಾ, ಬ್ರೆಜಿಲ್, ಫ್ರಾನ್ಸ್, ಇಂಗ್ಲೆಂಡ್, ರಷ್ಯಾ, ಸ್ಪೆ ನ್, ಇಟಲಿ, ಮೆಕ್ಸಿಕೋ, ಜರ್ಮನಿಗಳಲ್ಲಿ ಕರೋನಾ ಎರಡನೆಯ ಅಲೆಯು ವ್ಯಾಪಕ ವಾಗಿದ್ದು ಅಲ್ಲಿನ ಪರಿಸ್ಥಿತಿ ಇನ್ನೂ ಗಂಭೀರವಾಗಿ ಉಳಿದಿದೆ. ಆದರೆ ಭಾರತವು ಎರಡನೆಯ ಅಲೆಯನ್ನು ಯಶಸ್ವಿಯಾಗಿ ತಡೆಗಟ್ಟಿ ಕರೋನಾ ವನ್ನು ನಿಯಂತ್ರಿಸಿದೆ. ಭಾರತವಿಂದು ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಹೆಸರಿನ ಎರಡು ಕರೋನಾ ಲಸಿಕೆಗಳನ್ನು ತಯಾರು ಮಾಡಿದ್ದು, ವೈದ್ಯರು, ದಾದಿಯರು ಮೊದಲಾದ ೩ ಕೋಟಿ ಫ್ರಂಟ್ ಲೈನ್ ವಾರಿಯರ್ಸ್ಗಳಿಗೆ ಉಚಿತ ವ್ಯಾಕ್ಸಿನೇಷನ್ ಆರಂಭಿಸಿದ್ದು ಈಗಾಗಲೇ ೬೦ ಲಕ್ಷ ಮಂದಿಗೆ ಲಸಿಕೆಯನ್ನು ಹಾಕಿಯಾಗಿದೆ.
ಅಮೆರಿಕಾ ಹಾಗೂ ಇಂಗ್ಲೆಂಡ್ಗಳನ್ನು ಹೊರತುಪಡಿಸಿದರೆ ಅತೀ ಹೆಚ್ಚು ಲಸಿಕೆ ನೀಡಿರುವುದು ಭಾರತದ. ಶ್ರೀಲಂಕಾ, ನೇಪಾಳ, ಭೂತಾನ್, ಮಾಲ್ಡೀವ್ಸ್, ಮ್ಯಾನ್ಮಾರ್, ಶ್ರೀಲಂಕಾ, ಯುಎಇ, ಬಹ್ರೈನ್, ಓಮನ್, ಈಜಿಪ್ಟ್, ದಕ್ಷಿಣ ಆಫ್ರಿಕಾ ಸೇರಿದಂತೆ ೧೭ ದೇಶಗಳಿಗೆ ಭಾರತವಿಂದು ೫೦ ಲಕ್ಷ ಕರೋನಾ ಲಸಿಕೆಗಳನ್ನು ಉಚಿತವಾಗಿ ಕೊಟ್ಟಿದ್ದು, ಇನ್ನೂ ೨೫ ರಾಷ್ಟ್ರಗಳು ಭಾರತದಿಂದ ಲಸಿಕೆಯನ್ನು ಪಡೆಯಲು ಬೇಡಿಕೆ ಸಲ್ಲಿಸಿವೆ.
ಭಾರತವಿಂದು ಕರೋನಾ ಸಂಬಂಧಿತ ಆರೋಗ್ಯ ಹಾಗೂ ಆರ್ಥಿಕ ಸಂಕಷ್ಟದಿಂದ ತಾನು ಯಶಸ್ವಿಯಾಗಿ ಹೊರಬರುತ್ತಿರುವುದು
ಮಾತ್ರವಲ್ಲದೆ ಕರೋನಾ ಮಹಾಮಾರಿಯಿಂದ ಜಗತ್ತನ್ನು ರಕ್ಷಿಸಲು ತನ್ನ ಕೈಲಾದ ಪ್ರಯತ್ನವನ್ನು ಮಾಡುತ್ತಿದೆ.