Sunday, 15th December 2024

I.N.D.I.A ಮುಂದಿವೆ ಸಾಲು ಸಾಲು ಸವಾಲು !

ವಿಶ್ಲೇಷಣೆ

ಮಾರುತೀಶ್ ಅಗ್ರಾರ

ಮೈತ್ರಿಕೂಟದ ಭಾಗವಾಗಿರುವ ಅನೇಕ ನಾಯಕರುಗಳ ಐಡಿಯಾಲಜಿಗಳಲ್ಲಿ ತಲೆಬುಡವೇ ಕಾಣಿಸುತ್ತಿಲ್ಲ! ಇವರದ್ದೇ ನಿದ್ದರೂ ‘ಮೋದಿಯನ್ನು ಸೋಲಿಸಬೇಕು’ ಎನ್ನುವ ಅಜೆಂಡಾ ಅಷ್ಟೇ. ಅಂದರೆ, ಇವರೆಲ್ಲ ತಮ್ಮ ವೈಯಕ್ತಿಕ ಅಸ್ತಿತ್ವದ ಉಳಿವಿಗಾಗಿ ಮಾತ್ರ ಒಗ್ಗಟ್ಟಾಗಿರುವುದು ಎಂಬುದು ಎಂಥ ದಡ್ಡನಿಗೂ ಅರ್ಥವಾಗುತ್ತದೆ.

೨೦೨೪ರ ಲೋಕಸಭಾ ಚುನಾವಣೆಗೆ ಇನ್ನೂ ೯ ತಿಂಗಳು ಇರುವಾಗಲೇ ರಾಜಕೀಯ ಪಕ್ಷಗಳ ಚಟುವಟಿಕೆ ಹಾಗೂ ತಂತ್ರಗಾರಿಕೆ ಗಳು ಗರಿಗೆದರಿವೆ. ಮುಂದಿನ ಚುನಾವಣೆ ಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಶತಾಯಗತಾಯ ಹಣಿಯಲೇಬೇಕು, ಇಲ್ಲದಿದ್ದರೆ ತಮ್ಮ ಅಸ್ತಿತ್ವವೇ ಅಲುಗಾಡಲಿದೆ ಎಂದು ಭಾವಿಸಿರುವ ವಿಪಕ್ಷ ನಾಯಕರು ಗಳು ಇತ್ತ ಬೆಂಗಳೂರಿನಲ್ಲಿ ತಮ್ಮ ಮಹಾಮೈತ್ರಿಕೂಟದ ಎರಡನೇ ಸಭೆ ನಡೆಸಿದರೆ, ಅತ್ತ ದೆಹಲಿಯಲ್ಲಿ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ತನ್ನ ಮಿತ್ರಪಕ್ಷ ಗಳನ್ನೆಲ್ಲ ಒಟ್ಟು ಗೂಡಿಸಿ ಮುಂದಿನ ಆಗುಹೋಗುಗಳ ಚರ್ಚೆ ನಡೆಸಿದೆ.

೨೦೨೪ರ ಸಾರ್ವತ್ರಿಕ ಚುನಾವಣೆ ಎಷ್ಟು ಮಹತ್ವದ್ದು ಎಂಬುದನ್ನು ಈ ಬೆಳವಣಿಗೆಗಳು ಸಾರಿವೆ. ಈ ಪೈಕಿ ಹೆಚ್ಚು ಕುತೂಹಲ ಮೂಡಿಸಿದ್ದು ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಸಭೆ. ಏಕೆಂದರೆ, ಸೈದ್ಧಾಂತಿಕವಾಗಿ ವಿಭಿನ್ನ ಮನಸ್ಥಿತಿಯುಳ್ಳ ನಾಯಕ ರೆಲ್ಲರೂ ಇಂಥ ಮೈತ್ರಿಕೂಟದ ಭಾಗವಾಗಿದು ಗಟ್ಟಿನಿಲುವಿಗೆ ಬರುತ್ತಾರಾ ಎನ್ನುವ ಅನುಮಾನವಿತ್ತು.

ಸದ್ಯ ಅದಕ್ಕೆ ತೆರೆಬಿದ್ದಿದೆ. ಅಂದಹಾಗೆ, ಜೂನ್ ೨೩ರಂದು ಬಿಹಾರದ ಪಟನಾದಲ್ಲಿ ನಡೆದ ವಿಪಕ್ಷಗಳ ಸಭೆಯಲ್ಲಿ ಭಾಗಿಯಾಗಿದ್ದ ಬಹುತೇಕರು ಬೆಂಗಳೂರಿನ ಸಭೆಗೂ ಬರುವ ಮೂಲಕ ತಮ್ಮ ಸೈದ್ಧಾಂತಿಕ ಭಿನ್ನಾ ಭಿಪ್ರಾಯಗಳನ್ನು ಮರೆತು, ಮೋದಿ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟು ಮುಂದುವರಿಸಿರುವುದುಸದ್ಯದ ಮಟ್ಟಿಗೆ ವಿಪಕ್ಷ ನಾಯಕರುಗಳಲ್ಲಿ ವಿಶ್ವಾಸ ಮೂಡಿಸಿದೆ.

ಪಟನಾದಲ್ಲಿ ನಡೆದ ಸಭೆ ಕೇವಲ ಕೆಲ ನಾಯಕರ ಮಾತುಕತೆ, ಊಟ-ಉಪಚಾರಕ್ಕಷ್ಟೇ ಸೀಮಿತವಾಗಿದ್ದು ಗಂಭೀರ ಚರ್ಚೆ ಗಳೇನೂ ನಡೆಯದ ಕಾರಣ ಅಷ್ಟೊಂದು ಮಹತ್ವ ಪಡೆದುಕೊಂಡಿರಲಿಲ್ಲ. ಆದರೆ ಶಿಮ್ಲಾದಲ್ಲಿ ನಡೆಯಬೇಕಿದ್ದ ಎರಡನೇ ಸುತ್ತಿನ ಸಭೆ ಬೆಂಗಳೂರಿಗೆ ಶಿಫ್ಟ್ ಆದ ನಂತರದಲ್ಲಿ, ದೇಶದ ಬಹುತೇಕ ರಾಜಕೀಯ ನಾಯಕರ ಕಣ್ಣು ಈ ಸಭೆಯ ಮೇಲೇ
ಕೇಂದ್ರೀಕೃತವಾಗಿತ್ತು. ಏಕೆಂದರೆ, ಕಾಂಗ್ರೆಸ್, ಟಿಎಂಸಿ, ಎಸ್‌ಪಿ ಸೇರಿದಂತೆ ವಿವಿಧ ಪಕ್ಷಗಳ, ಅದರಲ್ಲೂ ಮೋದಿಯವರ ಕಟ್ಟರ್ ವಿರೋಽಗಳೆಲ್ಲ ಸೇರಿ ಒಮ್ಮತದ ನಿರ್ಣಯಗಳನ್ನು ತೆಗೆದುಕೊಳ್ಳಬಹುದು ಎಂಬ ನಿರೀಕ್ಷೆಯಿತ್ತು.

ಅದರಂತೆ ಈಗ ೨೫ಕ್ಕೂ ಹೆಚ್ಚು ವಿಪಕ್ಷಗಳು ಕಲೆತು ‘ದೇಶದ ರಕ್ಷಣೆಗಾಗಿ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವಿಗಾಗಿ ಎನ್‌ಡಿಎ ವಿರುದ್ಧ ಒಗ್ಗಟ್ಟಾಗಿದ್ದೇವೆ’ ಎನ್ನುವ ಮೂಲಕ ಮೋದಿ ವಿರುದ್ಧ ರಣಕಹಳೆ ಮೊಳಗಿಸಿವೆ. ಜತೆಗೆ, ಯುಪಿಎ ಮೈತ್ರಿ ಕೂಟದ ಹೆಸರಿಗೆ ಎಳ್ಳು-ನೀರು ಬಿಟ್ಟು, I.N.D.I.A (Indian National Developmental Inclusive Alliance) ಎಂಬ ನೂತನ ಹೆಸರಿನ ಮೈತ್ರಿಕೂಟವನ್ನೂ ಅವು ಇದೇ ವೇಳೆ ರಚಿಸಿರುವುದು ಗಮನಾರ್ಹ. ಇದೊಂಥರ ಹಳೆಯ ಬೆದರುಬೊಂಬೆಗೆ ಹೊಸ ಬಟ್ಟೆ ಹೊಲಿಸಿದಂತೆ ಆಗಿದೆ, ಅಷ್ಟೇ!

ಅತ್ತ ದೆಹಲಿಯಲ್ಲಿ ನಿಂತು ಐ.ಘೆ.ಈ.ಐ.ಅ ಮೈತ್ರಿಕೂಟದ ವಿರುದ್ಧ ಗುಡುಗಿರುವ ಪ್ರಧಾನಿ ಮೋದಿ, ‘ಬೆಂಗಳೂರಿನಲ್ಲಿ ಭ್ರಷ್ಟಾ ಚಾರಿಗಳ ಸಮ್ಮೇಳನವೇ ನಡೆಯುತ್ತಿದೆ. ಅಲ್ಲಿ ಸೇರಿರುವ ಬಹುತೇಕರು ಭ್ರಷ್ಟಾಚಾರದ ಆರೋಪದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರಿಗೆ ದೇಶವನ್ನು ಲೂಟಿಮಾಡೋದು ಬಿಟ್ಟರೆ ಬೇರೇನೂ ಗೊತ್ತಿಲ್ಲ’ ಎಂದು ಮಹಾಮೈತ್ರಿಕೂಟದ ಕೆಲ
ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.

ಇರಲಿ, ರಾಜಕೀಯ ನಾಯಕರೆಂದ ಮೇಲೆ ಟೀಕೆ, ಆರೋಪ-ಪ್ರತ್ಯಾರೋಪ ಇದ್ದದ್ದೇ. ಆದರೆ ಮುಂದಿನ ಲೋಕಸಭಾ ಚುನಾವಣೆ ಯಲ್ಲಿ ಮೋದಿಯವರ ಹೆಡೆಮುರಿ ಕಟ್ಟಲೇಬೇಕೆಂದು ಪಣತೊಟ್ಟಿರುವ ವಿಪಕ್ಷಗಳು, ತಾವಂದುಕೊಂಡಷ್ಟು ಸುಲಭವಾಗಿ ಗುರಿ ಮುಟ್ಟಲು ಸಾಧ್ಯವಿದೆಯಾ? ಜತೆಗೆ ಈಗ ಆತುರಾತುರವಾಗಿ ಒಂದಾಗಿರುವ ನಾಯಕರುಗಳು ಪ್ರಾದೇಶಿಕ ಮಟ್ಟದಲ್ಲಿ ತಮ್ಮ ತಮ್ಮ
ಪಕ್ಷಗಳನ್ನು ಇದೇ ರೀತಿ ಮೈತ್ರಿ ಅಡಿಯಲ್ಲಿ ನೋಡಲು ಸಾಧ್ಯವೇ? ಏಕೆಂದರೆ ಪಂಜಾಬಿನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಪ್ರಬಲ ಎದುರಾಳಿ ಕಾಂಗ್ರೆಸ್! ಈಗ ಆಮ್ ಆದ್ಮಿ ಐ.ಘೆ.ಈ.ಐ.ಅ ಮೈತ್ರಿಕೂಟದ ಸದಸ್ಯಪಕ್ಷ.

ಹಾಗಾದರೆ ಪಂಜಾಬಿನ ರಾಜಕೀಯ ವಿಚಾರದಲ್ಲಿ ಆಮ್ ಆದ್ಮಿಯ ನಿರ್ಧಾರವೇನು? ಇದೇ ರೀತಿ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷವು ಕಾಂಗ್ರೆಸ್ ಮತ್ತು ಸಿಪಿಎಂ ಜತೆ ರಾಜಕೀಯ ವೈರತ್ವ ಹೊಂದಿದೆ. ಮಮತಾ ಬ್ಯಾನರ್ಜಿ ಸದ್ಯಕ್ಕೆ ಮೈತ್ರಿಕೂಟ ಸೇರಿರ ಬಹುದು, ಆದರೆ ತಳಮಟ್ಟದ ಟಿಎಂಸಿ ಕಾರ್ಯಕರ್ತರು ಇದನ್ನು ಹೇಗೆ ಸ್ವೀಕರಿಸುತ್ತಾರೋ ಬಲ್ಲವರಾರು? ಇನ್ನೊಂದು ಮಗ್ಗುಲಲ್ಲಿ ನೋಡುವುದಾದರೆ, ಈಗ ಮೈತ್ರಿಕೂಟದ ಭಾಗವಾಗಿರುವ ಅನೇಕರು ‘ಹಿಂದುತ್ವದ ವಿರೋಧಿ’ ಎಂಬ ಹಣೆಪಟ್ಟಿ
ಅಂಟಿಸಿಕೊಂಡಿದ್ದಾರೆ.

ಅಂಥವರ ಜತೆ, ಪ್ರಬಲ ಹಿಂದುತ್ವವಾದಿ ಎಂದು ಕರೆಸಿಕೊಂಡಿರುವ ಉದ್ಧವ್ ಠಾಕ್ರೆಯವರ ಶಿವಸೇನೆ ಸೇರಿಕೊಂಡಿದೆ. ಮುಂದಿನ
ದಿನಗಳಲ್ಲಿ ಕಾಂಗ್ರೆಸ್ಸೋ ಅಥವಾ ಮೈತ್ರಿಕೂಟದ ಮತ್ಯಾವುದೋ ಪಕ್ಷವೋ ಸಾವರ್ಕರ್ ಅವರ ವಿರುದ್ಧ ಪುಂಖಾನುಪುಂಖವಾಗಿ ಟೀಕಿಸಿದರೆ ಉದ್ಧವ್‌ರ ಶಿವಸೇನೆ ಏನು ನಿರ್ಧಾರ ತೆಗೆದುಕೊಳ್ಳುತ್ತದೆ? ಕೇಂದ್ರ ಸರಕಾರ ಜಾರಿಮಾಡಲು ಹೊರಟಿರುವ ಏಕರೂಪದ ನಾಗರಿಕ ಸಂಹಿತೆಗೆ ಉದ್ಧವ್ ಠಾಕ್ರೆ ಬಣ ಈಗಾಗಲೇ ಬೆಂಬಲ ವ್ಯಕ್ತಪಡಿಸಿದೆ. ಇದೇ ವಿಚಾರದಲ್ಲಿ ಶರದ್ ಪವಾರ್ ಅವರ ನಿಲುವು ಕೂಡ ಕುತೂಹಲ ಮೂಡಿಸಿದೆ. ಹೀಗೆ ತಮ್ಮ ತಮ್ಮ ಸಿದ್ಧಾಂತ, ಹೋರಾಟಗಳಲ್ಲೇ ಸಾಕಷ್ಟು ವೈರುಧ್ಯಗಳನ್ನು
ಹೊಂದಿರುವ ಇವರೆಲ್ಲ, ತಮ್ಮ ಅಭಿಪ್ರಾಯಭೇದಗಳನ್ನು ಅಷ್ಟು ಸುಲಭವಾಗಿ ನಿವಾರಿಸಿಕೊಂಡು ಲೋಕಸಭಾ ಚುನಾವಣೆ ವರೆಗೂಮೋದಿ ವಿರುದ್ಧ ಇದೇ ಒಗ್ಗಟ್ಟನ್ನು ಕಾಪಿಟ್ಟುಕೊಳ್ಳಲು ಸಾಧ್ಯವೇ? ಮೈತ್ರಿಕೂಟದ ಭಾಗವಾಗಿರುವ ಅನೇಕ ನಾಯಕರು ಗಳ ಐಡಿಯಾಲಜಿಗಳಲ್ಲಿ ತಲೆಬುಡವೇ ಕಾಣಿಸುತ್ತಿಲ್ಲ!

ಇವರದ್ದೇನಿದ್ದರೂ ‘ಮೋದಿಯನ್ನು ಸೋಲಿಸಬೇಕು’ ಎನ್ನುವ ಅಜೆಂಡಾ, ಅಷ್ಟೇ. ಅಂದರೆ ಇವರೆಲ್ಲ ತಮ್ಮ ವೈಯಕ್ತಿಕ ಅಸ್ತಿತ್ವದ ಉಳಿವಿಗಾಗಿ ಮಾತ್ರ ಒಗ್ಗಟ್ಟಾಗಿರುವುದು ಎಂಬುದು ಎಂಥ ದಡ್ಡನಿಗೂ ಅರ್ಥವಾಗುವಂಥದ್ದು. ಇಲ್ಲದಿದ್ದರೆ, ಭ್ರಷ್ಟಾಚಾರ-ವಿರೋಽ ಹೋರಾಟದಿಂದ ರಾಜಕೀಯಕ್ಕೆ ಬಂದ ಅರವಿಂದ ಕೇಜ್ರಿವಾಲ್, ಸಾಲು ಸಾಲು ಹಗರಣದ ಆರೋಪ ಎದುರಿಸುತ್ತಿರುವ
ಕಾಂಗ್ರೆಸ್ ನಾಯಕರ ಸಹವಾಸ ಮಾಡುತ್ತಿದ್ದರೇ? ಭ್ರಷ್ಟಾಚಾರದ ಆರೋಪ ಹೊತ್ತು ಜೈಲಿಗೆ ಹೋಗಿಬಂದಿರುವ ಲಾಲು ಪ್ರಸಾದ್ ಯಾದವ್  ಅವರ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದರೇ? ಇದೇ ವಿಪರ್ಯಾಸ.

ಹೋಗಲಿ, ತಮ್ಮ ಪಕ್ಷದ ಹಿತದೃಷ್ಟಿಯಿಂದಲಾದರೂ ಕೇಜ್ರಿವಾಲ್ ಈ ಮೈತ್ರಿಕೂಟದಿಂದ ಹೊರಗುಳಿಯಬೇಕಾಗಿತ್ತು. ಏಕೆಂದರೆ, ದೆಹಲಿ, ಪಂಜಾಬ್, ಗೋವಾದಂಥ ಕಡೆಗಳಲ್ಲಿ ಕಾಂಗ್ರೆಸ್‌ಗೆ ಮನೆದಾರಿ ತೋರಿಸಿರುವುದೇ ಆಮ್ ಆದ್ಮಿ! ಹಾಗಿದ್ದರೂ, ಕಾಂಗ್ರೆಸ್ ಒಳಗೊಂಡ ಮೈತ್ರಿಕೂಟಕ್ಕೆ ಆಮ್ ಆದ್ಮಿ ಈಗ ಸೇರಿರುವುದಕ್ಕೆ ಕಾರಣ? ದೆಹಲಿ ಆಡಳಿತ ವಿಚಾರದಲ್ಲಿ ಬಿಜೆಪಿ ತಂದಿರುವ ಸುಗ್ರೀವಾಜ್ಞೆ ವಿರುದ್ಧ ಹೋರಾಡುತ್ತಿರುವ ಆಮ್ ಆದ್ಮಿಗೆ ಕಾಂಗ್ರೆಸ್ ಬೆಂಬಲ ಘೋಷಿಸಿರುವುದೇ ಇದಕ್ಕೆ ಕಾರಣ! ಈ ಸೂಕ್ಷ್ಮ ವನ್ನು ದೇಶದ ಜನ ಗಮನಿಸಬೇಕು. ಒಂದೊಮ್ಮೆ ದೆಹಲಿ ಆಡಳಿತದ ವಿಚಾರದಲ್ಲಿ ಆಮ್ ಆದ್ಮಿಯನ್ನು ಕಾಂಗ್ರೆಸ್ ಬೆಂಬಲಿಸ ದಿದ್ದರೆ, ತಾವು ಈ ಮೈತ್ರಿಕೂಟದ ಭಾಗವಾಗುತ್ತಿರಲಿಲ್ಲ ಎಂಬುದನ್ನು ಸ್ವತಃ ಕೇಜ್ರಿವಾಲರೇ ಹೇಳಿದ್ದರು. ಅಂದರೆ, ಅನುಕೂಲ ಸಿಂಧು ರಾಜಕಾರಣಕ್ಕಾಗಿ ಆಮ್ ಆದ್ಮಿ ಯಾವ ಮಟ್ಟಕ್ಕಾದರೂ ಇಳಿಯಬಹುದು ಎಂದಾಯಿತು.

ಇನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಮೈತ್ರಿಕೂಟದ ‘ಪವರ್ ಫುಲ್ ಲೀಡರ್’ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಬಂಗಾಳದಲ್ಲಿ ಇತ್ತೀಚೆಗೆ ನಡೆದ ಪಂಚಾಯತ್ ಚುನಾವಣೆಯ ವೇಳೆ ನಡೆದ ಕಾಂಗ್ರೆಸ್-ಕಮ್ಯುನಿಸ್ಟ್
ಕಾರ್ಯಕರ್ತರ ಕೊಲೆಗೆ, ಅನೇಕರ ಮೇಲಿನ ಹಲ್ಲೆಗೆ ಮಮತಾ ಪಕ್ಷದ ಕಾರ್ಯಕರ್ತರೇ ಕಾರಣವೆಂದು ಸ್ಥಳೀಯ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ. ಆದರೀಗ, ಕಾಂಗ್ರೆಸ್ ಮತ್ತು ಸಿಪಿಐಎಂ ಇರುವ ಮೈತ್ರಿಕೂಟಕ್ಕೆ
ಮಮತಾ ಬ್ಯಾನರ್ಜಿ ಸೇರಿಕೊಂಡಿದ್ದಾರೆ! ಇವರದು ಅದ್ಯಾವ ಸೀಮೆಯ ತತ್ತ್ವ-ಸಿದ್ಧಾಂತ?! ಮಹಾರಾಷ್ಟ್ರದಲ್ಲಿ ಎನ್‌ಸಿಪಿ ವರಿಷ್ಠ ಶರದ್ ಪವಾರ್‌ಗೆ ಶಾಕ್ ಕೊಟ್ಟಿರುವ ಅಜಿತ್ ಪವಾರ್ ಎನ್ ಡಿಎ ಭಾಗವಾಗಿದ್ದರೆ, ಎನ್‌ಸಿಪಿ ತಮ್ಮಿಂದ ಕೈತಪ್ಪುವ ಆತಂಕದಲ್ಲಿ ರುವ ಶರದ್ ಪವಾರ್ ಐ.ಘೆ.ಈ.ಐ.ಅ ಮೈತ್ರಿಕೂಟದ ಜತೆಗಿದ್ದಾರೆ.

ಒಂದು ವೇಳೆ, ಶರದ್ ಪವಾರ್ ಬಣದ ಶಾಸಕರು ಲೋಕಸಭಾ ಚುನಾವಣೆ ವೇಳೆಗೆ ಅಜಿತ್ ಪವಾರ್ ಬಣ ಸೇರಿದರೆ, ಆಗ ಎನ್
ಸಿಪಿ ಕೀಲಿಕೈ ಅಜಿತ್ ಜೇಬು ಸೇರುತ್ತದೆ. ಹೀಗಾದಲ್ಲಿ ಶರದ್ ಪವಾರ್ ತಮ್ಮ ಹಿಡಿತವಿರುವ ಕ್ಷೇತ್ರವೆಲ್ಲವನ್ನೂ ಮೈತ್ರಿಕೂಟದ ಪಾಲಿಗೆ ಬಿಡುತ್ತಾರೆಯೇ? ಇನ್ನು, ೮೦ ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಪ್ರಬಲ ಎದುರಾಳಿ ಎಸ್‌ಪಿ. ಅಲ್ಲಿ ಕಾಂಗ್ರೆಸ್ ನಾಮಾವಶೇಷವಾಗಿ ವರ್ಷಗಳೇ ಕಳೆದಿವೆ.

ಹೀಗಿರುವಾಗ, ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಕ್ಷೇತ್ರಗಳನ್ನು ಬಿಟ್ಟುಕೊಡಲು ಎಸ್‌ಪಿ ಒಪ್ಪುತ್ತದೆಯೇ? ಇದೇ ರೀತಿ, ಜಮ್ಮು-ಕಾಶ್ಮೀರ ದಲ್ಲಿ ಒಮರ್ ಅಬ್ದುಲ್ಲಾ ಹಾಗೂ ಮೆಹಬೂಬ ಮುಫ್ತಿ ಪಕ್ಷಗಳು ಹಾವು-ಮುಂಗುಸಿ ಇದ್ದಂತೆ. ಇವರ ಮಧ್ಯೆ ಪ್ರಾದೇಶಿಕ ಹಂತದಲ್ಲಿ ಹೊಂದಾಣಿಕೆ ತರಲು ಸಾಧ್ಯವಿದೆಯೇ? ಹೀಗೇ ಹೇಳುತ್ತಾ ಹೋದರೆ ಐ.ಘೆ.ಈ.ಐ.ಅ ಮೈತ್ರಿಕೂಟದ ಒಬ್ಬೊಬ್ಬರದ್ದು ಒಂದೊಂದು ದುರಂತ ಕಥೆಯಿದೆ.

ವಿಪರ್ಯಾಸವೆಂದರೆ, ದೇಶದ ಮೂಲೆಮೂಲೆಯಲ್ಲೂ ತನ್ನದೇ ಆದ ಕಾರ್ಯಕರ್ತರನ್ನು ಹೊಂದಿರುವ ಕಾಂಗ್ರೆಸ್, ತನ್ನ ಅಸ್ಮಿತೆಯನ್ನು ಪಕ್ಕಕ್ಕಿಟ್ಟು ಮೈತ್ರಿಕೂಟದ ಭಾಗವಾಗಿ ಚುನಾವಣೆ ಎದುರಿಸಲು ಮುಂದಾಗಿರುವುದು! ಆದಾಗ್ಯೂ ಮುಂದೆ ಬರುವ ಕ್ಷೇತ್ರವಾರು ಸೀಟುಹಂಚಿಕೆ, ನಾಯಕತ್ವದ ವಿಷಯ ಇವೆಲ್ಲವನ್ನೂ ಐ.ಘೆ.ಈ.ಐ.ಅ ಮೈತ್ರಿಕೂಟ ಹೇಗೆ ನಿಭಾಯಿಸುತ್ತದೆ ಎಂಬುದರ ಮೇಲೆ ಅದರ ಅಸ್ತಿತ್ವ ಉಳಿದಿದೆ. ಇಷ್ಟೆಲ್ಲದರ ನಡುವೆಯೂ ಕಟ್ಟಕಡೆಯದಾಗಿ ಉಳಿಯುವ ಪ್ರಶ್ನೆ: ಮೋದಿ ವಿರುದ್ಧ ಮೈತ್ರಿಕೂಟದ ನಾಯಕ ಯಾರು? ಎಂಬುದು. ಇದೇ ಈ ಮಹಾಮೈತ್ರಿಕೂಟದ ಬಹುದೊಡ್ಡ ದೌರ್ಬಲ್ಯ!

ಏಕೆಂದರೆ, ನಾಯಕತ್ವದ ಆಯ್ಕೆಯಾದಾಗ ಯಾರ‍್ಯಾರು ಮುಖ ಸಿಂಡರಿಸಿಕೊಂಡು ತಟಸ್ಥರಾಗುತ್ತಾರೋ, ಯಾರಿಗೆ ಗೊತ್ತು?!  ಕಾರಣ, ಮೈತ್ರಿಕೂಟದ ಸದಸ್ಯರ ಪೈಕಿ ಬಹುತೇಕರು ಪ್ರಧಾನಿ ಹುದ್ದೆಯ ಆಕಾಂಕ್ಷಿಗಳಲ್ಲವೇ? ಹಾಗಾಗಿ.